Homeಮುಖಪುಟಕರ್ನಾಟಕಕ್ಕೆ ಅಕ್ಕಿ ಕೊಡಲು ನಿರಾಕರಿಸಿದ ನಂತರ FCI ಇ-ಹರಾಜಿನಲ್ಲಿ ಅಕ್ಕಿ ಕೊಳ್ಳುವವರೇ ಇಲ್ಲ!

ಕರ್ನಾಟಕಕ್ಕೆ ಅಕ್ಕಿ ಕೊಡಲು ನಿರಾಕರಿಸಿದ ನಂತರ FCI ಇ-ಹರಾಜಿನಲ್ಲಿ ಅಕ್ಕಿ ಕೊಳ್ಳುವವರೇ ಇಲ್ಲ!

ಜೂನ್ 12 ರಂದು ಎಫ್‌ಸಿಐ ಕರ್ನಾಟಕಕ್ಕೆ ಸುಮಾರು 2.22 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸಲು ಒಪ್ಪಿಕೊಂಡಿತ್ತು. ಆದರೆ ಒಂದೇ ದಿನದಲ್ಲಿ ಕೇಂದ್ರ ಸರ್ಕಾರದ ಸೂಚನೆಯನ್ವಯ ಉಲ್ಟಾ ಹೊಡೆದಿತ್ತು.

- Advertisement -
- Advertisement -

ಕರ್ನಾಟಕ ಸೇರಿದಂತೆ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಅಕ್ಕಿ ಕೊಳ್ಳಲು ಅವಕಾಶ ನಿರಾಕರಿಸಿದ ನಂತರ FCI ಇ-ಹರಾಜಿನಲ್ಲಿ ಅಕ್ಕಿ ಕೊಳ್ಳುಲು ಯಾರು ಮುಂದೆ ಬಂದಿಲ್ಲ ಎಂದು ವರದಿಯಾಗಿದೆ.

ರಾಜ್ಯಗಳಿಗೆ ಅಕ್ಕಿ ಮಾರಬಾರದೆಂದು ಆದೇಶಿಸಿದ್ದ ಕೇಂದ್ರ ಸರ್ಕಾರವು ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಅಕ್ಕಿ ಮತ್ತು ಗೋಧಿ ಧಾನ್ಯಗಳನ್ನು ಇ-ಹರಾಜು ಮಾಡಲು ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಸೂಚಿಸಿತ್ತು. ಆದರೆ ಕಳೆದ ವಾರ ಎಫ್‌ಸಿಐ 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹರಾಜಿಗಿಟ್ಟರೂ ಸಹ ಕೇವಲ 170 ಮೆಟ್ರಿಕ್ ಟನ್‌ಗಳಿಗೆ ಬಿಡ್‌ಗಳನ್ನು ಸ್ವೀಕರಿಸಿದೆ. ಅಂದರೆ ಹೆಚ್ಚಿನ ಖರೀದಿದಾರರು ಮುಂದಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರಗಳು ಈ ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ ಮತ್ತು ಖಾಸಗಿ ಉದ್ದಿಮೆದಾರರು ಮಾತ್ರ ಭಾಗವಹಿಸಬಹುದಾಗಿದ್ದರಿಂದ ಎಫ್‌ಸಿಐಗೆ ಈ ಸಂಕಷ್ಟ ಎದುರಾಗಿದೆ.

ಜುಲೈ 5 ರಂದು ನಡೆದ ಇ-ಹರಾಜಿನಲ್ಲಿ, ಎಫ್‌ಸಿಐ 19 ರಾಜ್ಯಗಳು ಮತ್ತು ಎನ್‌ಇಎಫ್ (ನಾರ್ತ್ ಈಸ್ಟ್ ಫ್ರಾಂಟಿಯರ್) ಪ್ರದೇಶದಲ್ಲಿ 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಮಾರಾಟ ಮಾಡಲು ಮುಂದಾಗಿತ್ತು. ಆದರೆ ಮಹಾರಾಷ್ಟ್ರ (70 ಮೆಟ್ರಿಕ್ ಟನ್), ಗುಜರಾತ್ (50 ಮೆಟ್ರಿಕ್ ಟನ್) ಮತ್ತು ಕರ್ನಾಟಕ (40 ಮೆಟ್ರಿಕ್ ಟನ್) – ಮತ್ತು NEF ಪ್ರದೇಶ (10 ಮೆಟ್ರಿಕ್ ಟನ್) ಮಾತ್ರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಿಡ್ ಮಾಡಿವೆ. ಉಳಿದ 16 ರಾಜ್ಯಗಳು ಬಿಡ್ ಸಹ ಸಲ್ಲಿಸಿಲ್ಲ.

ಒಂದು ತಿಂಗಳ ಹಿಂದೆಯಷ್ಟೆ ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಎಫ್‌ಸಿಐನಿಂದ 2.28 ಲಕ್ಷ ಮೆಟ್ರಿಕ್ ಟನ್‌ಗಳನ್ನು ಕೋರಿತ್ತು. ಜೂನ್ 12 ರಂದು ಎರಡು ಪತ್ರಗಳಲ್ಲಿ ಎಫ್‌ಸಿಐ ಸುಮಾರು 2.22 ಲಕ್ಷ ಮೆಟ್ರಿಕ್ ಟನ್ ಪೂರೈಸಲು ಒಪ್ಪಿಕೊಂಡಿತ್ತು. ಆದರೆ ಒಂದು ದಿನದ ನಂತರ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಧಾನ್ಯಗಳನ್ನು ಮಾರಾಟ ಮಾಡುವುದರ ವಿರುದ್ಧ FCI ಗೆ ನಿರ್ದೇಶನ ನೀಡಿತು. ಜೂನ್ 14 ರಂದು, ಎಫ್‌ಸಿಐ ಕರ್ನಾಟಕಕ್ಕೆ ಅಕ್ಕಿ ಹಂಚಿಕೆ ಆದೇಶವನ್ನು ರದ್ದುಗೊಳಿಸಿತು.

ಅಲ್ಲದೇ ಕೇಂದ್ರ ಸರ್ಕಾರದ ಸೂಚನೆಗೆ ಅನುಗುಣವಾಗಿ FCI ಇ-ಹರಾಜಿನಲ್ಲಿ ಅಕ್ಕಿ ಮಾರಲು ನಿರ್ಧರಿಸಿತ್ತು. ಆದರೆ 3 ಲಕ್ಷದ 86 ಸಾವಿರ ಟನ್ ಅಕ್ಕಿ ಇದ್ದರೆ ಕೇವಲ 170 ಟನ್‌ಗೆ ಮಾತ್ರ ಬಿಡ್ ಸಲ್ಲಿಸಲಾಗಿದೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರವೆಂದರೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಅಕ್ಕಿ ಕೊಳ್ಳದಂತೆ ತಂದಿರುವ ಆದೇಶವನ್ನು ವಾಪಸ್ ಪಡೆದು ಅವಕಾಶ ನೀಡಬೇಕಿದೆ.

ಜೂನ್ 13 ರ ಮೊದಲು, ರಾಜ್ಯಗಳು ತಮ್ಮ ಸ್ವಂತ ಯೋಜನೆಗಳಿಗೆ ಕ್ವಿಂಟಾಲ್‌ಗೆ 3,400 ರೂ ದರದಲ್ಲಿ ಎಫ್‌ಸಿಐನಿಂದ ಅಕ್ಕಿ (ಬಲವರ್ಧಿತ ಅಕ್ಕಿ ಸೇರಿದಂತೆ) ಇ-ಹರಾಜಿನಲ್ಲಿ ಭಾಗವಹಿಸದೆ ಖರೀದಿಸುತ್ತಿದ್ದವು. 2023 ರಲ್ಲಿ ಮೇ 25 ರವರೆಗೆ 1.16 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯಗಳು ಖರೀದಿಸಿವೆ ಎಂದು FCI ವೆಬ್‌ಸೈಟ್‌ ಹೇಳುತ್ತದೆ. ಅದರಲ್ಲಿ 97 ಪ್ರತಿಶತ (1.12 ಮೆಟ್ರಿಕ್ ಟನ್) ಕರ್ನಾಟಕ ರಾಜ್ಯವೊಂದೇ ಖರೀದಿಸಿತ್ತು.

ಇದನ್ನೂ ಓದಿ: ಅಕ್ಕಿ ಬದಲಿಗೆ ಹಣ ನೀಡಿ ಎಂದವರು ಈಗ ಉಲ್ಟಾ ಹೊಡೆದಿದ್ದಾರೆ, ಇದು ಇಬ್ಬಗೆಯ ನೀತಿ: ಬಿಜೆಪಿ ವಿರುದ್ಧ ಡಿಕೆಶಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...