ಕಿಸಾನ್ ಆಂದೋಲನ, ರೈತ ಹೋರಾಟ, ಐತಿಹಾಸಿಕ ಹೋರಾಟ, ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ರೈತರ ಪರವಾಗಿದ್ದವರಿಂದ, ಕೇವಲ ಪಂಜಾಬ್, ಹರಿಯಾಣ ರೈತರ ಪ್ರತಿಭಟನೆ, ಖಲಿಸ್ತಾನಿಗಳ ಪ್ರತಿಭಟನೆ, ದಲ್ಲಾಳಿಗಳ ಹೋರಾಟ ಎಂದು ಪ್ರಭುತ್ವ ಪರಿವಾರದವರಿಂದ, ಹೀ॒ಗೆ ಒಂದೆರಡಲ್ಲ, ಹತ್ತು ಹಲವು ಹೆಸರುಗಳಿಂದ ಕರೆಸಿಕೊಂಡಿತ್ತು ದೆಹಲಿಯ ಗಡಿಗಳಲ್ಲಿ ಕಳೆದ 10 ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟ.

ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯಿದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ 2020 ಈ ಕಾಯ್ದೆಗಳನ್ನು ಒಕ್ಕೂಟ ಸರ್ಕಾರ ಜಾರಿಗೊಳಿಸಿದೆ. ಇವುಗಳ ರದ್ದತಿಗಾಗಿ ರೈತರು ತಿಂಗಳುಗಳಿಂದ ರಾಷ್ಟ್ರದಾದ್ಯಂತ ಹೋರಾಟ ನಡೆಸುತ್ತಿದ್ದಾರೆ.

ಐತಿಹಾಸಿಕ ರೈತ ಪ್ರತಿಭಟನೆಗೆ ಕಾರಣವಾದ ಈ ವಿವಾದಿತ ಕೃಷಿ ಕಾನೂನುಗಳನ್ನು ಜಾರಿಗೊಳಿಸಿ ಸೆಪ್ಟಂಬರ್‌ಗೆ ಒಂದು ವರ್ಷವಾಗುತ್ತಿದೆ. ರೈತರ ಪ್ರತಿಭಟನೆಗೆ ಬರೋಬ್ಬರಿ 10 ತಿಂಗಳು ತುಂಬುತ್ತಿದೆ. ಈ ನಡುವೆ ರೈತರ ಆಂದೋಲನ ಕೊನೆಗೊಳ್ಳುವ, ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಈ ನೆಪದಲ್ಲಿ ರೈತ ಪ್ರತಿಭಟನೆಯನ್ನು ಮತ್ತು ಅದು ಮುಂದುವರೆದಿರುವ ಬಗೆಯನ್ನು ಮತ್ತೆ ನೆನಪಿಸಿಕೊಳ್ಳುವುದಾದರೆ..

ಪಂಜಾಬ್, ಹರಿಯಾಣ, ಉತ್ತರಪ್ರದೇಶದ ರೈತರು ಹೆಚ್ಚಾಗಿರುವ ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್ ಗಡಿಗಳು ಮತ್ತು ರಾಜಸ್ತಾನದ ಶಹಜಾನ್ಪುರ್ ಗಡಿಗಳ ಜೊತೆಗೆ, ಪಂಜಾಬ್, ಹರಿಯಾಣದ ಪ್ರತಿ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ. ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಲಾಠಿಚಾರ್ಜ್ ಘಟನೆ ರೈತ ಆಂದೋಲನ ಹರಿಯಾಣದಲ್ಲಿ ತೀವ್ರಗೊಳ್ಳಲು ಮತ್ತೊಂದು ಕಾರಣವಾಗಿದೆ.

ಎಸ್‌ಡಿಎಂ ಅಧಿಕಾರಿ ಆಯುಶ್ ಸಿನ್ಹಾ ಅವರ ’ರೈತರ ತಲೆ ಒಡೆಯುವ ಆದೇಶ’ದ ವಿಡಿಯೋ ಕರ್ನಾಲ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಬಿಜೆಪಿ ಪಕ್ಷದ ಯಾವುದೇ ಕಾರ್ಯಕ್ರಮಗಳು ಹರಿಯಾಣದಲ್ಲಿ ನಡೆಯದಂತೆ ರೈತರು ತಡೆಹಿಡಿದಿದ್ದಾರೆ.

ಪಂಜಾಬ್‌ನಲ್ಲಿ ರೈತ ಪ್ರತಿಭಟನೆಯಿಂದ ಆರ್ಥಿಕ ಪರಿಸ್ಥಿತಿ ಕುಂಠಿತವಾಗುತ್ತಿದೆ. ಒಕ್ಕೂಟ ಸರ್ಕಾರದ ಮೇಲೆ ಒತ್ತಡ ತರಲು ನೀವು ದೆಹಲಿಗೆ ಹೋಗಿ ಎಂದು ರೈತರ ಬಳಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ.

ಕಳೆದ ಅಕ್ಟೋಬರ್‌ನಿಂದ ಆರಂಭವಾಗಿರುವ ಈ ಆಂದೋಲನ ವರ್ಷವಾಗುತ್ತಾ ಬಂದರೂ ರೈತರ ಉತ್ಸಾಹ ಕಳೆಗುಂದಿಲ್ಲ. ತಮ್ಮ ನೋವುಗಳನ್ನು ಬದಿಗಿರಿಸಿಕೊಂಡು, ಮತ್ತೆ ಪ್ರತಿಭಟನೆಯನ್ನು ತೀವ್ರಗೊಳಿಸುವತ್ತ ಮುನ್ನುಗ್ಗುತ್ತಿದ್ದಾರೆ. ನಿಮಗೆ ತಿಳಿದಿರಲಿ ತೀವ್ರ ಚಳಿ, ಮಳೆ, ತೀವ್ರ ಬಿಸಿಗಾಳಿ, ಅನಾರೋಗ್ಯಕ್ಕೆ ಈ 10 ತಿಂಗಳ 292 ದಿನಗಳಲ್ಲಿ ಹುತಾತ್ಮರಾಗಿದ್ದು ಬರೋಬ್ಬರಿ 596 ಮಂದಿ ರೈತರು ಎನ್ನುತ್ತವೆ ಹಲವು ವರದಿಗಳು.

ಈ ಹೊತ್ತಿನಲ್ಲಿ ರೈತರ ಮುಂದಿನ ಕ್ರಮಗಳೇನು ಎಂಬ ಪ್ರಶ್ನೆ ಹಲವು ರೈತ ಬೆಂಬಲಿಗರಲ್ಲಿ ತಳೆದಿದೆ. ಹೌದು, ಕಳೆದ 10 ತಿಂಗಳುಗಳಿಂದ ಬದಲಾಗದ ಒಕ್ಕೂಟ ಸರ್ಕಾರದ ನಿರ್ಧಾರದಿಂದ ರೈತರ ಉತ್ಸಾಹ ಕುಗ್ಗಿಲ್ಲವೇ? ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎನ್ನುತ್ತಿರುವ ರೈತರ ಮುಂದಿನ ನಡೆಗಳೇನು ಎಂಬುದಕ್ಕೆ ರೈತ ನಾಯಕರು ಕೊಟ್ಟ ಉತ್ತರಗಳಿವು.

ನ್ಯಾಯಪಥ ಜೊತೆಗೆ ಮಾತನಾಡಿದ ರೈತ ಮುಖಂಡ ಯೋಗೇಂದ್ರ ಯಾದವ್, “ನಾವೀಗ ಈ ಪ್ರತಿಭಟನೆಯನ್ನು ರಾಷ್ಟ್ರಾದ್ಯಂತ ವಿಸ್ತರಿಸುವ ಹಂತಕ್ಕೆ ಬಂದಿದ್ದೇವೆ. ಒಂದು ಚಿಕ್ಕ ಭಾಗದಿಂದ ಇಡೀ ದೇಶಕ್ಕೆ ಹೋರಾಟ ವಿಸ್ತರಿಸುತ್ತಿದೆ. ಉತ್ತರ ಭಾರತದಲ್ಲಿ ಅದರಲ್ಲೂ ಪಂಜಾಬ್, ಹರಿಯಾಣ, ರಾಜಸ್ತಾನ, ಉತ್ತರಾಖಂಡ, ಉತ್ತರ ಪ್ರದೇಶಗಳಲ್ಲಿ ರೈತ ಪ್ರತಿಭಟನೆ ತಾನಾಗೇ ವಿಸ್ತರಿಸಿದೆ. ಈಗ ಈ ಪ್ರತಿಭಟನೆ ದೇಶಾದ್ಯಂತ ವಿಸ್ತರಿಸಬೇಕಿದೆ. ಅದರ ಭಾಗವಾಗಿ ಮಿಷನ್ ಉತ್ತರ ಪ್ರದೇಶ, ಮಿಷನ್ ಉತ್ತರಾಖಂಡವನ್ನು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ” ಎಂದಿದ್ದಾರೆ.

“ಇದರ ಜೊತೆಗೆ ಬೇರೆ ರಾಜ್ಯಗಳಲ್ಲೂ ಪ್ರತಿಭಟನೆಗಳು ತೀವ್ರಗೊಳಿಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಇದರ ಭಾಗವಾಗಿ ಉಳಿದ ರಾಜ್ಯಗಳಲ್ಲಿಯೂ ಸಭೆಗಳು ನಡೆಯುತ್ತಿವೆ. ಉದಾಹರಣೆಗೆ ಕರ್ನಾಟಕದಲ್ಲಿ ಸಂಯುಕ್ತ ಹೋರಾಟ ಈಗಾಗಲೇ ಸಭೆಗಳನ್ನು ನಡೆಸುತ್ತಿದೆ. ಇನ್ನೊಂದು ಭಾಗವಾಗಿ ಸೆಪ್ಟಂಬರ್ 27ರಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ” ಎಂದು ಹೇಳಿದ್ದಾರೆ.

ಮುಂದುವರೆದು, “ನವೆಂಬರ್ 26, 27ರಂದು ಈ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಇದರಲ್ಲಿ, ಈ ಪ್ರತಿಭಟನೆ ಬೇರೆ ಆಯಾಮಗಳನ್ನು ಪಡೆದುಕೊಂಡು ಬೆಳೆಯುತ್ತಿದೆ. ಸಮಾಜದಲ್ಲಿರುವ ಮುಖ್ಯ ಸಮಸ್ಯೆಗಳ ವಿರುದ್ಧ ಕೂಡ ಇದು ಹೋರಾಡುತ್ತಿದೆ. ಕೋಮುವಾದದ ವಿರುದ್ಧ ಹೋರಾಡುವ, ಒಗ್ಗಟ್ಟನ್ನು ತೋರಿಸುವ, ಪ್ರಜಾಪ್ರಭುತ್ವವನ್ನು ಉಳಿಸುವ ಪ್ರತಿಭಟನೆಯಾಗಿಯೂ ಇದು ರೂಪುಗೊಳ್ಳುತ್ತಿದೆ” ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಕರ್ನಾಟಕದ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, “ರೈತ ಹೋರಾಟ ವಿಸ್ತರಿಸದ ಕಡೆಗಳಲ್ಲಿ ಇದನ್ನು ವಿಸ್ತರಿಸುವುದು ಮುಂದಿನ ಕ್ರಮವಾಗಿದೆ. ಏಕೆಂದರೆ ಆಯಾ ಪ್ರದೇಶದ ರೈತರ ಸಮಸ್ಯೆಗಳು ಬೇರೆ ಬೇರೆ. ಪಂಜಾಬ್ ಮತ್ತು ಹರಿಯಾಣದ ರೈತರಿಗೆ ಎಂಎಸ್‌ಪಿ (ಬೆಂಬಲ ಬೆಲೆ) ಅರ್ಥವಾಗುವ ಹಾಗೆ ನಮ್ಮ ಭಾಗದ ರೈತರಿಗೆ ಅರ್ಥ ಆಗುವುದಿಲ್ಲ. ಏಕೆಂದರೆ ಎಂಎಸ್‌ಪಿಯ ಬಹುಪಾಲು ಫಲಾನುಭವಿಗಳು ಪಂಜಾಬ್ ಮತ್ತು
ಹರಿಯಾಣದವರು. ಹೀಗಾಗಿ ಹೋರಾಟವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ” ಎಂದರು.

“ಸದ್ಯ ತಮಿಳುನಾಡಿನ ತಿರುಚಿಯಲ್ಲಿ ರೈತ ಸಂಘಗಳ ಒಕ್ಕೂಟ ಅಕ್ಟೋಬರ್ 2 ರಂದು ಉಪವಾಸ ಸತ್ಯಾಗ್ರಹ ನಡೆಸಿ, ನವೆಂಬರ್ 26ಕ್ಕೆ ಕನಿಷ್ಠ 5000 ಜನರನ್ನು ದೆಹಲಿಗೆ ಹೊರಡಿಸುವ ನಿರ್ಣಯ ಕೈಗೊಂಡಿದ್ದಾರೆ. ಕೇರಳದಲ್ಲಿಯೂ ಅದಾನಿ ಪೋರ್ಟ್ ಬಳಿ ಅನಿರ್ದಿಷ್ಟಾವದಿಯ ಹೋರಾಟ ನಡೆಸುವ ಚರ್ಚೆ ನಡೆಯುತ್ತಿದೆ. ಜೊತೆಗೆ ಕರ್ನಾಟಕದಲ್ಲಿ ದೆಹಲಿಯ ಸಿಂಘು, ಟಿಕ್ರಿ ಗಡಿಗಳಲ್ಲಿರುವಂತೆಯೇ ಅನಿರ್ದಿಷ್ಟಾವದಿಯ ಧರಣಿ ನಡೆಸಲು ಚರ್ಚೆ ನಡೆಸಲಾಗುತ್ತಿದೆ” ಎಂದು ದಕ್ಷಿಣ ಭಾರತದಲ್ಲಿ ರೈತ ಹೋರಾಟ ವಿಸ್ತರಿಸುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಇನ್ನು, 10 ತಿಂಗಳ ಹೋರಾಟದ ಬಳಿಕವು ರೈತರಲ್ಲಿರುವ ಉತ್ಸಾಹದ ಬಗ್ಗೆ ಮಾತನಾಡಿದ ಚುಕ್ಕಿ ನಂಜುಂಡಸ್ವಾಮಿ, “ಉತ್ತರ ಭಾರತದ ರೈತರಲ್ಲಿ ಖಂಡಿತ ಇನ್ನೂ ಉತ್ಸಾಹ ಇದೆ. ನಿಜ ಹೇಳಬೇಕೆಂದರೆ ಅವರು ರೊಚ್ಚಿಗೆದ್ದಿದ್ದಾರೆ. ಏಕೆಂದರೆ ಈ ಕಾಯ್ದೆಗಳ ಸಮಸ್ಯೆಗಳ ಬಗ್ಗೆ ಅವರಿಗೆ ತುಂಬಾ ಚೆನ್ನಾಗಿ ಅರ್ಥ ಆಗಿದೆ. ಸಾಮಾನ್ಯ ರೈತರಿಗೂ ಕಾಯ್ದೆಗಳಲ್ಲಿರುವ ವಿಷಯಗಳು ಮನದಟ್ಟಾಗಿದೆ. ಪ್ರತಿಭಟನೆಯಲ್ಲಿರುವ ರೈತರು ಶಿಫ್ಟ್ ಪ್ರಕಾರ ಭಾಗವಹಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಮನೆಗಳನ್ನು ಬಿಟ್ಟು ದೂರ ಇರುವುದು ರೈತ ಮುಖಂಡರು” ಎಂದಿದ್ದಾರೆ.

ರಾಜ್ಯದಲ್ಲಿಯೂ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ನಿರ್ಧಾರಗಳಿಗೆ ಅನುಗುಣವಾಗಿ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲು ಮಿಷನ್ ಉತ್ತರ ಪ್ರದೇಶ ಮತ್ತು ಮಿಷನ್ ಉತ್ತರಾಖಂಡಕ್ಕೆ ಸಜ್ಜಾಗುತ್ತಿದೆ. ದೇಶಾದ್ಯಂತ ಸೆ.27ಕ್ಕೆ ಕರಾಳ ದಿನ ಆಚರಣೆ ನಡೆಸುವ ತೀರ್ಮಾನಗಳನ್ನು ಜಾರಿಗೆ ತರಲು ಸಂಯುಕ್ತ ಹೋರಾಟ ಕರ್ನಾಟಕ ನಿರ್ಧರಿಸಿದೆ.

“ಕರ್ನಾಟಕದ ಸುಮಾರು 40ಕ್ಕೂ ಹೆಚ್ಚು ರೈತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ ಮತ್ತು ಜನಪರ ಸಂಘಟನೆಗಳು ಸೆ.15ರಂದು ಫ್ರೀಡಂ ಪಾರ್ಕ್‌ನಲ್ಲಿ ಸಭೆ ನಡೆಸಲು ನಿರ್ಧರಿಸಿವೆ. ಕರ್ನಾಟಕ ಬಂದ್ ಮತ್ತು ಬೆಂಗಳೂರು ಬಂದ್ ಯಶಸ್ವಿಯಾಗಿ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ಬಳಿಕ
ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಸೇರಿ ಚಳವಳಿಯನ್ನು ಮುಂದುವರೆಸುವ ಬಗ್ಗೆ ಚರ್ಚಿಸುತ್ತವೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯಶವಂತ್ ತಿಳಿಸಿದ್ದಾರೆ.

ಇನ್ನು ರೈತರ ಪ್ರತಿಭಟನೆಯಿಂದ ವಾಣಿಜ್ಯ ಚಟುವಟಿಕೆಗಳು ಹಾಗೂ ಜನರ ಸಂಚಾರದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), ಕೇಂದ್ರ ಸರ್ಕಾರ, ದೆಹಲಿ, ರಾಜಸ್ತಾನ, ಹರಿಯಾಣ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ದೇಶದ ಅನ್ನದಾತರನ್ನು ಎದುರು ಹಾಕಿಕೊಂಡಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗಳಿಸಲು ಸಾಧ್ಯವಾಗದೆ ಸೋಲನುಭವಿಸಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ರೈತರು ನಡೆಸಿದ ಅಭಿಯಾನದ ಫಲವಾಗಿ ಮಮತಾ ಬ್ಯಾನರ್ಜಿ ಸರ್ಕಾರ ಭರ್ಜರಿ ಜಯಗಳಿಸಿದೆ. ಈಗ ಮಿಷನ್ ಉತ್ತರ ಪ್ರದೇಶ, ಮಿಷನ್ ಉತ್ತರಾಖಂಡಗಳ ಮೂಲಕ ಬಿಜೆಪಿ ಗೆಲುವಿಗೆ ಪ್ರತಿಭಟನಾನಿರತ ರೈತರು ಅಡ್ಡಿಯಾಗಲಿದ್ದಾರೆಯೇ ಎಂಬ ಚರ್ಚೆ ಮುಖ್ಯವೇದಿಕೆಗೆ ಬಂದಿದೆ.

ಒಟ್ಟಾರೆಯಾಗಿ, ಉತ್ಸಾಹ, ದಿಟ್ಟತನ, ತಾಳ್ಮೆ, ಬದ್ಧತೆಗಳಿಂದ ಕೂಡಿದ ಶಿಸ್ತಿನ ರೈತ ಹೋರಾಟ ಇನ್ನು ಇದೇ ರೀತಿಯಲ್ಲಿ ಮುಂದುವರೆಯುವುದು ಮಾತ್ರ ಖಚಿತ ಎಂಬುದು ರೈತ ಹೋರಾಟಗಾರರ ಒಕ್ಕೊರಲಿನ ಮಾತು. ಪ್ರಾಕೃತಿಕ ಸವಾಲುಗಳ ಜೊತೆಗೆ ಒಕ್ಕೂಟ ಸರ್ಕಾರ ನೀಡಿದ, ನೀಡುತ್ತಿರುವ ಪರೀಕ್ಷೆಗಳನ್ನು ಎದುರಿಸುತ್ತಾ ರೈತ ಪ್ರತಿಭಟನೆ 300 ದಿನಗಳತ್ತ ದಾಪುಗಾಲು ಹಾಕುತ್ತಿದೆ. ಈಗಲಾದರೂ ರೈತ ಪರ ಎಂದು ಹೇಳುವ ಒಕ್ಕೂಟ ಸರ್ಕಾರ ತನ್ನ ಹಠವನ್ನು ಬಿಟ್ಟು ರೈತರ ಬೇಡಿಕೆಗಳನ್ನು ಈಡೇರಿಸುತ್ತಾ ಎಂಬುದೇ ರೈತ ಬೆಂಬಲಿಗರ ಯಕ್ಷ ಪ್ರಶ್ನೆಯಾಗಿದೆ.


ಇದನ್ನೂ ಓದಿ: ಕೇಂದ್ರದ ಮೇಲೆ ಒತ್ತಡ ತರಲು ಪ್ರತಿಭಟನೆಯನ್ನು ದೆಹಲಿಗೆ ವರ್ಗಾಯಿಸಿ: ರೈತರಲ್ಲಿ ಅಮರಿಂದರ್ ಸಿಂಗ್ ಮನವಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here