ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಸೋಮವಾರ (ಅಕ್ಟೋಬರ್ 12) ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರೊಂದಿಗೆ ಸುಪ್ರೀಂ ಕೋರ್ಟ್ವರೆಗೆ ಮೆರವಣಿಗೆ ನಡೆಸಿದರು. ಎಸ್ಐಆರ್ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಎತ್ತಿರುವ ಆಕ್ಷೇಪಗಳು ಇದೀಗ ನ್ಯಾಯಾಲಯದ ಕದ ತಟ್ಟಿವೆ.
ಎಸ್ಐಆರ್ ಪ್ರಕ್ರಿಯೆಯ ಕುರಿತು ತಮ್ಮ ಕಳವಳಗಳನ್ನು ವ್ಯಕ್ತಪಡಿಸಲು ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮನವಿ ಸಲ್ಲಿಸಲು ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗಲು ಸಮಯ ಕೋರಿದ್ದರು. ಆದರೆ, ಈ ಮನವಿಯನ್ನು ಸಿಜೆಐ ನಿರಾಕರಿಸಿದ ಒಂದು ದಿನದ ಬಳಿಕ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಚರ್ಚೆಗೆ ಉದ್ದೇಶಿಸಿರುವ ವಿಷಯಗಳು ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಪ್ರತ್ಯೇಕ ಭೇಟಿಯ ಅಗತ್ಯವಿಲ್ಲ ಎಂದು ಸಿಜೆಐ ತಿಳಿಸಿದ್ದರು. ಸರ್ಕಾರದ ಆಡಳಿತಾತ್ಮಕ ಕಾರ್ಯನಿರ್ವಹಣೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು. ಅದೇ ವೇಳೆ, ಸೂಕ್ತ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ವಿರೋಧ ಪಕ್ಷದ ನಾಯಕರು ಸ್ವತಂತ್ರರು ಎಂದು ತಿಳಿಸಿದ್ದರು.
ಎಸ್ಐಆರ್ಗೆ ಸಂಬಂಧಿಸಿದ ಇತರ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಗೆತ್ತಿಕೊಳ್ಳಲಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯನ್ನೂ ಬಾಕಿಯಿರುವ ಪ್ರಕರಣಗಳೊಂದಿಗೆ ಪರಿಗಣಿಸುವ ಸಾಧ್ಯತೆಯಿದೆ. ಸದ್ಯಕ್ಕೆ ರಿಟ್ ಅರ್ಜಿಯಲ್ಲಿ ಮಾಡಿರುವ ನಿರ್ದಿಷ್ಟ ಮನವಿಗಳು ಮತ್ತು ಅದಕ್ಕೆ ನೀಡಿರುವ ಆಧಾರಗಳ ಕುರಿತು ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ. ವಕೀಲ ಎಸ್. ಪ್ರಸನ್ನ ಅವರು ಅರ್ಜಿಯನ್ನು ಸಲ್ಲಿಸಿದ್ದು, ಪ್ರಕರಣವು ‘ರಾಹುಲ್ ಗಾಂಧಿ ವಿರುದ್ಧ ಭಾರತೀಯ ಚುನಾವಣಾ ಆಯೋಗ’ ಎಂಬ ಹೆಸರಿನಲ್ಲಿ ಡೈರಿ ಸಂಖ್ಯೆ 64196/2026ರ ಅಡಿಯಲ್ಲಿ ದಾಖಲಾಗಿದೆ.


