Homeಮುಖಪುಟದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 4

ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 4

- Advertisement -
- Advertisement -

ಬ್ರಿಟಿಷರಿಗೆ ಸಾವರ್ಕರ್ ಬೆಂಬಲ

ದೇಶ ವಿಭಜನೆಯ ಕಥೆ ತಿರುವು ಪಡೆದುಕೊಳ್ಳುವುದು ಇಲ್ಲಿಯೇ. ಯುದ್ಧದಲ್ಲಿ ಬ್ರಿಟಿಷರಿಗೆ ಸಹಕಾರ ನೀಡುವುದಾಗಿ ಸಾವರ್ಕರ್ ಲಿನ್‌ಲಿತ್‌ಗೊ ಅವರಿಗೆ 1940ರ ಜುಲೈನಲ್ಲಿ ಪತ್ರ ಬರೆದು ವಾಗ್ದಾನ ನೀಡಿದ್ದುದರ ಬಗ್ಗೆ ವರದಿಗಳಿವೆ. ಮುಂದುವರಿದು, ಸಾವರ್ಕರ್ ಲಿನ್‌ಲಿತ್‌ಗೊರನ್ನು ಭೇಟಿಯಾಗಿ, “ಖಾವಂದರ ಸರ್ಕಾರವು ಈಗಲಾದರೂ ಹಿಂದೂಗಳತ್ತ ಚಿತ್ತ ಹರಿಸಿ ಅವರ ಸಹಕಾರದೊಂದಿಗೆ ಕೆಲಸ ಮಾಡಬೇಕು. ನಮ್ಮಿಬ್ಬರ ಆಸಕ್ತಿಗಳು ಎಷ್ಟು ನಿಕಟವಾಗಿ ಬೆಸೆದುಕೊಂಡಿವೆ ಎಂದರೆ ಹಿಂದೆ ನಮ್ಮಗಳ ನಡುವೆ ಇದ್ದ ವೈರತ್ವದ ಅಗತ್ಯವು ಈಗಿಲ್ಲ. ಹಿಂದೂಮತಸ್ಥರು ಮತ್ತು ಬ್ರಿಟನ್ ಅತ್ಯುತ್ತಮ ಸ್ನೇಹಿತರಾಗುವುದು ಈಗ ಬಹು ಮುಖ್ಯವಾಗಿದೆ” ಎಂದು ಬ್ರಿಟಿಷರಿಗೆ ಸಹಾಯಹಸ್ತ ಚಾಚಿದರು. ಜೊತೆಗೆ, “ಭಾರತಕ್ಕೆ ಪೂರ್ಣ ಸ್ವಾತಂತ್ರ್ಯದ ಅಗತ್ಯವಿಲ್ಲ” ಎಂದೂ ಘೋಷಿಸಿದರು. “ಮಹಾಯುದ್ಧ ಮುಗಿದ ಬಳಿಕ ನಿಮ್ಮ ಸಾಮ್ರಾಜ್ಯದಡಿ ನಮಗೆ ಕೇವಲ ಸ್ವಯಂ-ಆಡಳಿತದ ಸ್ಥಾನಮಾನವನ್ನು ದಯಪಾಲಿಸುವುದು” ಎಂಬುದಾಗಿ ಹಿಂದೂಮಹಾಸಭಾ ಮನವಿ ಸಲ್ಲಿಸಿತು.

1937ರಲ್ಲಿ ಒಟ್ಟು 1585 ಸ್ಥಾನಗಳಿಗೆ ನಡೆದ ರಾಷ್ಟ್ರವ್ಯಾಪಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ನೆಹರೂ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಟ್ಟು 797 ಸ್ಥಾನಗಳಲ್ಲೂ, ಮಹಮ್ಮದ್ ಆಲಿ ಜಿನ್ನಾ ನೇತೃತ್ವದ ಅಖಿಲ ಭಾರತ ಮುಸ್ಲಿಂಲೀಗ್ 109 ಸ್ಥಾನಗಳಲ್ಲೂ, ಸಿಖಂದರ್ ಹಯಾತ್‌ಖಾನ್ ನೇತೃತ್ವದ ಯೂನಿಯನಿಸ್ಟ್ ಪಾರ್ಟಿ (ಪಂಜಾಬ್) 101 ಸ್ಥಾನಗಳಲ್ಲೂ ಜಯಶೀಲವಾದವು. ಪ್ರಾಂತೀಯ ಸರ್ಕಾರಗಳಲ್ಲಿ ಚುನಾವಣೆಗಳು ನಡೆಯಲಿಲ್ಲ. ಆದರೆ ಸಿಂಧ್ ಭಾಗದಲ್ಲಿ ಯುನೈಟೆಡ್ ಪಾರ್ಟಿ ಸ್ಪರ್ಧಿಸಿತ್ತು. ಕಾಂಗ್ರೆಸ್ ಈ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಮುಸ್ಲಿಂ-ರಾಷ್ಟ್ರವಾದಿ ಜಿನ್ನಾ ಮತ್ತು ಹಿಂದೂ-ರಾಷ್ಟ್ರವಾದಿ ಸಾವರ್ಕರ್ ಜೊತೆಗೂಡಿ ಸಿಂಧ್, ಬಂಗಾಳ ಮತ್ತು ವಾಯವ್ಯ ಗಡಿಪ್ರಾಂತ್ಯಗಳಲ್ಲಿ ಹಲವು ಸಮ್ಮಿಶ್ರ ಸರ್ಕಾರಗಳನ್ನು ರಚಿಸಿದರು ಎಂದರೆ ನೀವು ನಂಬಲು ಸಿದ್ಧರಿದ್ದೀರಾ?

ಬ್ರಿಟಿಷರಿಗೆ ಬೆಂಬಲ ಘೋಷಿಸಿದ ಜಿನ್ನಾ

ಅತ್ಯಾಶ್ಚರ್ಯಕರವೆಂದರೆ ಮುಸ್ಲಿಂ-ರಾಷ್ಟ್ರವಾದಿಯಾದ ಜಿನ್ನಾ ಲಿನ್‌ಲಿತ್‌ಗೊರನ್ನು ಭೇಟಿಯಾಗಿ ಮುಸ್ಲಿಂಲೀಗ್ ಸಹ ನಿಮ್ಮ ಬೆಂಬಲಕ್ಕೆ ನಿಂತುಕೊಳ್ಳುತ್ತದೆ ಎಂಬ ಆಶ್ವಾಸನೆ ನೀಡಿದರು. ಅಲ್ಲದೆ ಒಕ್ಕೂಟ ವ್ಯವಸ್ಥೆಗೆ ಬದಲು ಮುಸ್ಲಿಂಲೀಗ್ ದೇಶದ ವಿಭಜನೆಗೆ ಒತ್ತಾಯಿಸುತ್ತದೆ (’ನಮಗೆ ಈಗಲೇ ಭಾರತದ ವಿಭಜನೆಯಾಗಬೇಕು’) ಎಂಬ ವಿಚಾರವನ್ನೂ ಪ್ರಸ್ತಾಪಿಸುತ್ತಾರೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಭಾರತದ ವಾಯವ್ಯ ಮತ್ತು ಈಶಾನ್ಯ ಪ್ರದೇಶಗಳನ್ನು ಒಳಗೊಂಡಂತೆ ಸ್ವತಂತ್ರ ಪಾಕಿಸ್ತಾನ ರಾಷ್ಟ್ರ ರಚನೆಯ ತನ್ನ ಇಚ್ಛೆಯನ್ನು ಮುಸ್ಲಿಂಲೀಗ್ 1940ರ ಲಾಹೋರ್ ಅಧಿವೇಶನದಲ್ಲಿ ನಿರ್ಣಯವನ್ನಾಗಿ ಸ್ವೀಕರಿಸಿತು. ಅಖಿಲ ಭಾರತ ಸ್ವತಂತ್ರ ಮುಸ್ಲಿಂ ಸಮಾವೇಶವು ಮುಸ್ಲಿಂಲೀಗ್‌ನ ದೇಶ ವಿಭಜನೆಯ ನಿರ್ಣಯದ ವಿರುದ್ಧ ಪ್ರತಿಭಟನಾ ರ್‍ಯಾಲಿಗಳನ್ನು ನಡೆಸಿ “ಪಾಕಿಸ್ತಾನ್ ಮುರ್ದಾಬಾದ್” ಎಂಬ ಘೋಷಣೆ ಮೊಳಗಿಸಿತು. ಆದರೆ ಮುಸ್ಲಿಂಲೀಗ್ ಆ ದಿನವನ್ನು “ಪಾಕಿಸ್ತಾನ ದಿನ”ವನ್ನಾಗಿ ಆಚರಿಸಿ ಸಂಭ್ರಮಿಸಿತು.

ಮಹಮ್ಮದ್ ಆಲಿ ಜಿನ್ನಾ

ಸರ್ವಪಕ್ಷಗಳ ಐಕ್ಯತೆಯನ್ನು ಸಾಧಿಸುವ ಹಾಗೂ ಎರಡೂ ಧರ್ಮಗಳ ನಡುವೆ ಐಕ್ಯಮತವನ್ನು ಕಾಪಾಡುವ ಬಗ್ಗೆ ಇವರುಗಳಿಗೆ ಮನವರಿಕೆ ಮಾಡಿಕೊಡುವ ಆಶಾಭಾವನೆಯಿಂದ ಸಾವರ್ಕರ್ ಮತ್ತು ಜಿನ್ನಾರನ್ನು 1940ರಲ್ಲಿ ಸುಭಾಷ್‌ಚಂದ್ರ ಬೋಸ್ ಭೇಟಿಯಾದರು. ಆದರೆ ಇಬ್ಬರೂ ಬೋಸ್‌ರಿಗೆ ಯಾವುದೇ ರೀತಿಯ ಸಹಕಾರ ಕೊಡಲು ನಿರಾಕರಿಸಿದರು. ಕ್ವಿಟ್ ಇಂಡಿಯಾ ನಿರ್ಣಯವನ್ನು ಅನುಮೋದಿಸಲು ಕರೆಯಲಾಗಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನೇತಾರರು ಮುಂಬೈನಲ್ಲಿ
ಸೇರಿದ್ದರು. ಈ ಚಳವಳಿ ಸ್ವಯಂಸ್ಫೂರ್ತಿಯಿಂದ ಸಮಾವೇಶಗೊಂಡಿದ್ದ ಸಾಮೂಹಿಕ ಸ್ವರೂಪದ ವಿಪ್ಲವವಾಗಿತ್ತು. ಜನಸಮೂಹದ ಆಕ್ರೋಶವು ಮುಗಿಲಿಗೇರಿದಂತೆಯೇ ಸರ್ಕಾರದ ಆಕ್ರೋಶವೂ ನಿರ್ದಯವಾಗಿ ಭುಗಿಲೆದ್ದಿತ್ತು.

ಆಗಸ್ಟ್ 1942ರಲ್ಲಿ ಗಾಂಧಿ ’ಭಾರತ ಬಿಟ್ಟು ತೊಲಗಿ’ ಚಳವಳಿಯನ್ನು ಪ್ರಾರಂಭಿಸಿದರು. ಸಾವರ್ಕರ್ ಮತ್ತು ಜಿನ್ನಾ ಆಗಲೂ ಚಳವಳಿಯ ವಿರೋಧಿಗಳಾಗಿಯೇ ನಿಂತು ಅದನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಅಷ್ಟು ಮಾತ್ರವಲ್ಲದೆ ಬ್ರಿಟಿಷರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿ ಬ್ರಿಟಿಷ್ ಸೈನ್ಯಕ್ಕೆ ಭಾರತೀಯರ ಸಾಮೂಹಿಕ ನೇಮಕಾತಿಯನ್ನು ಪ್ರಾರಂಭಿಸಿದರು. ಸಾಲದೆಂಬಂತೆ ಬಂಗಾಳದ ಮುಸ್ಲಿಂಲೀಗ್ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಶ್ಯಾಮ್‌ಪ್ರಸಾದ್ ಮುಖರ್ಜಿ, ನಾವು ಬ್ರಿಟಿಷರಿಗೆ ಸಹಕಾರ ನೀಡಬೇಕು ಎಂಬ ಹಿಂದೂಮಹಾಸಭಾದ ನಿರ್ದೇಶನದ ಅನುಸಾರ, ಕಾಂಗ್ರೆಸನ್ನು ದೂಷಿಸಿ, ಬ್ರಿಟಿಷರಿಗೆ ಒಂದು ಪತ್ರವನ್ನು ಬರೆದರು (26 ಜುಲೈ 1942). ಈ ಚಳವಳಿಯನ್ನು ಭಂಗಗೊಳಿಸಲು ಸರ್ಕಾರಕ್ಕೆ ತಮ್ಮ ಸಹಕಾರವನ್ನು ನೀಡುವುದಾಗಿ ಘೋಷಿಸಿದರು.

ಸಾವರ್ಕರ್‌ಗಿಂತ ಹೆಚ್ಚು ಧೀರ ಹೋರಾಟಗಾರನೆನಿಸುವ ಬತುಕೇಶ್ವರ್ ಎಂಬ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್‌ಸಿಂಗ್‌ರ ಸಂಗಾತಿಯಾಗಿದ್ದರು. ಅವರು ವಿಧಾನಮಂಡಲದ ಕೇಂದ್ರ ಸಭಾಂಗಣದಲ್ಲಿ ಬಾಂಬ್ ದಾಳಿ ನಡೆಸಿದ್ದರ ಪರಿಣಾಮವಾಗಿ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿ 13 ವರ್ಷಗಳು ಸೆರೆಮನೆಯಲ್ಲಿ ಕಳೆದಿದ್ದರು. 13 ವರ್ಷಗಳ ಕಾರಾಗೃಹ ಶಿಕ್ಷೆಯಿಂದ ಬಿಡುಗಡೆ ಹೊಂದಿದ ಬಳಿಕ ಅವರು ಕ್ಷೀಣಿಸುತ್ತಿದ್ದ ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ’ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿ ತಮ್ಮ ಅದಮ್ಯ ವೀರೋಚಿತ ಹೋರಾಟವನ್ನು ಮುಂದುವರಿಸಿದರು. ಈ ಸಂಗತಿಯು ಏಕೆ ಬಹಳ ಮುಖ್ಯವಾದ್ದು ಎಂದರೆ ಅವರು ಸಾವರ್ಕರ್‌ರಂತೆ ಎದೆಗುಂದಿ ಕ್ಷಮಾದಾನ ಯಾಚಿಸಿ ಸರ್ಕಾರಕ್ಕೆ ಒಂದು ಪತ್ರವನ್ನೂ ಬರೆಯಲಿಲ್ಲ. ಬದಲಾಗಿ ಎದೆಗುಂದದೆ 13 ವರ್ಷಗಳ ದೀರ್ಘಕಾಲದ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿದರು.

ಮುಂದಿನ ವರ್ಷಗಳಲ್ಲಿ ಸುಭಾಷ್‌ಚಂದ್ರ ಬೋಸ್ ಜಪಾನ್ ದೇಶದ ಸಹಕಾರದೊಂದಿಗೆ ’ಆಜಾದ್ ಹಿಂದ್ ಫೌಜ್’ ಅನ್ನು ಪ್ರಾರಂಭಿಸಿ ಜುಲೈ 5, 1943ರಲ್ಲಿ ಅದರ ಸರ್ವೋಚ್ಚ ಕಮ್ಯಾಂಡರ್ ಆಗಿ ಅಧಿಕಾರ ವಹಿಸಿಕೊಂಡರು. “ನಿಮ್ಮ ನೆತ್ತರನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂಬ ಐತಿಹಾಸಿಕ ಕರೆಯನ್ನು ತಮ್ಮ ಬೆಂಬಲಿಗರಿಗೆ ನೀಡಿದರು. ತಮ್ಮ ಸೈನ್ಯದೊಂದಿಗೆ ಈಶಾನ್ಯ ಭಾಗದಿಂದ ಭಾರತ ಪ್ರವೇಶಿಸಿ ಬ್ರಿಟಿಷರ ಮೇಲೆ ದಾಳಿ ನಡೆಸಬೇಕೆಂಬ ನಿರ್ಧಾರವನ್ನು ಕೈಗೊಂಡರು.

ಸುಭಾಷ್‌ಚಂದ್ರ ಬೋಸರನ್ನು ಹಿಂದಿನಿಂದ ಇರಿದ ಸಾವರ್ಕರ್

ಸುಭಾಷ್‌ಚಂದ್ರ ಬೋಸ್

ಸಾವರ್ಕರ್ ಬ್ರಿಟಿಷ್ ಸಾಮ್ರಾಜ್ಯಶಾಹಿಗಳನ್ನು ಬೆಂಬಲಿಸಿ ಸುಭಾಷ್‌ಚಂದ್ರ ಬೋಸರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದು ಈ ಸಂದರ್ಭದಲ್ಲಿಯೇ. “ಜಪಾನ್ ಮಹಾಯುದ್ಧವನ್ನು ಪ್ರವೇಶಿಸಿರುವುದರಿಂದ ಶತ್ರು ಸೈನ್ಯದ ಮೇಲೆ ತುರ್ತಾಗಿ ನೇರ ಆಕ್ರಮಣ ಮಾಡುವ ಗಂಡಾಂತರಕಾರಿ ಸನ್ನಿವೇಶದಲ್ಲಿ ದೇಶವು ನಿಂತಂತಾಗಿದೆ. ಹಿಂದೂಗಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ನಿಸ್ಸಂಕೋಚವಾಗಿ ಬ್ರಿಟಿಷರ ಕೈಬಲಪಡಿಸಬೇಕು. ಬ್ರಿಟಿಷರ ಶತ್ರುಗಳಾದ ಜಪಾನ್ ಮತ್ತು ಸುಭಾಷ್‌ಚಂದ್ರ ಬೋಸರ ಮೇಲೆ ನಾವು ದಾಳಿಮಾಡಬೇಕು. ಅವರು ಆಕ್ರಮಣ ಮಾಡುತ್ತಿರುವ ಈಶಾನ್ಯ ಭಾಗದಲ್ಲಿ, ಅದರಲ್ಲೂ ಬಂಗಾಳ ಮತ್ತು ಅಸ್ಸಾಂ ಪ್ರಾಂತ್ಯಗಳಲ್ಲಿ, ಅವರ ವಿರುದ್ಧ ಹಿಂದೂಗಳನ್ನು ಪ್ರೇರೇಪಿಸಿ ಬ್ರಿಟಿಷ್ ಸೈನ್ಯದ ಎಲ್ಲಾ ವಿಭಾಗಗಳಿಗೆ ಭರ್ತಿಮಾಡುವ ಕಾರ್ಯಕ್ರಮವನ್ನು ಹಿಂದೂಮಹಾಸಭಾ ಒಂದು ಕ್ಷಣವೂ ತಡಮಾಡದೆ ಹಮ್ಮಿಕೊಳ್ಳಬೇಕು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಐಕ್ಯರಂಗವು ಹೂಡಿರುವ ಹೋರಾಟವು ಛಿದ್ರವಾದರೂ ಚಿಂತೆಯಿಲ್ಲ” ಎಂಬ ಅವರ ನಿಲುವನ್ನು ಘೋಷಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷ್ ಸೇನೆಗೆ ಶೀಘ್ರವಾಗಿ ಭರ್ತಿಯಾಗುವಂತೆ ಹಿಂದೂಗಳನ್ನು ಸಾವರ್ಕರ್ ಅಕ್ಷರಶಃ ಪ್ರಚೋದಿಸಿದರು. ’ಭಾರತ ಬಿಟ್ಟು ತೊಲಗಿ’ ಚಳವಳಿಯನ್ನು ಮುರಿಯುವುದು ಅವರ ಉದ್ದೇಶವಾಗಿತ್ತು. ಅವರು ಅದನ್ನು ಛಿದ್ರಗೊಳಿಸಿದರು ಕೂಡಾ. ಈ ಕಾರಣಕ್ಕಾಗಿಯೇ ಬೋಸ್ 1942ರ ತಮ್ಮ ಆಕಾಶವಾಣಿ ಭಾಷಣದಲ್ಲಿ ಸಾವರ್ಕರ್ ಹಾಗೂ ಜಿನ್ನಾರನ್ನು ಖಂಡಿಸಿ ಹೀಗೆ ಮಾತನಾಡಿದರು: “ಬ್ರಿಟಿಷರೊಂದಿಗೆ ಇನ್ನೂ ರಾಜಿಸೂತ್ರಕ್ಕೆ ಅಂಟಿಕೊಂಡಿರುವ ಸಾವರ್ಕರ್, ಜಿನ್ನಾ ಹಾಗೂ ಇತರರೆಲ್ಲರೂ, ನಾಳಿನ ವಿಶ್ವದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯ ಎಂಬುದು ಮುರಿದು ಬೀಳುತ್ತದೆ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಿ ಎಂದು ನಾನು ವಿನಂತಿಸಿಕೊಳ್ಳುತ್ತೇನೆ”.

ಜಿನ್ನಾ ಮತ್ತು ಚರ್ಚಿಲ್

ಆಗಸ್ಟ್ 15, 1942ರವರೆಗೆ ಸಾವರ್ಕರ್ ಅಕ್ಷರಶಃ ಜಿನ್ನಾ ಅವರ ಬೇಡಿಕೆಯನ್ನು ಬೆಂಬಲಿಸುತ್ತಲೇ ಬಂದರು. ನಾಗಪುರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, “ಜಿನ್ನಾರ ದ್ವಿ-ರಾಷ್ಟ್ರ ಸಿದ್ಧಾಂತದ ವಿಷಯದಲ್ಲಿ ನನಗೆ ಯಾವ ತಗಾದೆಯೂ ಇಲ್ಲ. ಹಿಂದೂಗಳು ಮತ್ತು ಮುಸ್ಲಿಮರು ಎರಡು ರಾಷ್ಟ್ರಗಳು ಎಂಬ ಸಂಗತಿ ಐತಿಹಾಸಿಕವಾದ್ದು” ಎಂಬ ಸ್ಪಷ್ಟೀಕರಣ ನೀಡಿದ್ದರು. ಮತ್ತೊಂದೆಡೆ, 1940 ಮತ್ತು 1945ರ ಅವಧಿಯಲ್ಲಿ ಬ್ರಿಟನ್ನಿನ ಪ್ರಧಾನಮಂತ್ರಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ಭಾರತೀಯರನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅಂಥ ಮನುಷ್ಯನೊಂದಿಗೆ ಇದೇ ಅವಧಿಯಲ್ಲಿ ಜಿನ್ನಾ ನಿರಂತರವಾಗಿ ಮಾತುಕತೆಯಲ್ಲಿ ತೊಡಗಿರುತ್ತಿದ್ದರು.

ಜಿನ್ನಾ-ಚರ್ಚಿಲ್ ಪತ್ರಗಳು ಎಂದು ಖ್ಯಾತಿಗಳಿಸಿರುವ ಪತ್ರವ್ಯವಹಾರಗಳಲ್ಲೂ ಚರ್ಚಿಲ್ ಜಿನ್ನಾರನ್ನು ಬೆಂಬಲಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಪಾಕಿಸ್ತಾನವು ಪಶ್ಚಿಮಕ್ಕೆ ದೊರಕಿದ ಒಬ್ಬ ವಿಧೇಯ ಸ್ನೇಹಿತ ಎಂಬುದನ್ನು ರುಜುವಾತು ಪಡಿಸಬಲ್ಲದು ಎಂಬ ವಿಶ್ವಾಸ ಅವರಿಗಿತ್ತು. ಸೋವಿಯತ್ ಯೂನಿಯನ್ ಮತ್ತು ಸಮಾಜವಾದಿ ಭಾರತಗಳ ನಡುವೆ ಭೌಗೋಳಿಕ-ರಾಜಕಾರಣದ ದೃಷ್ಟಿಯಿಂದ ಪಾಕಿಸ್ತಾನವು ಬ್ರಿಟನ್‌ಗೆ ಹೇಗೆ ಗೋಡೆಯಂತೆ ಮಿತ್ರದೇಶವಾಗಿರಬಲ್ಲದು ಎಂಬುದು ಚರ್ಚಿಲ್‌ರ ದೃಷ್ಟಿಕೋನವಾಗಿತ್ತು. ವೈಸರಾಯ್‌ರಾಗಿದ್ದ ಲಿನ್‌ಲಿತ್‌ಗೊ ಕೂಡ ಬಹಿರಂಗವಾಗಿಯೇ ಜಿನ್ನಾರೊಂದಿಗೆ ಮಾತುಕತೆ ನಡೆಸಿದ್ದರು. ಜಿನ್ನಾ ಮುಸ್ಲಿಂ ನಾಯಕರಾಗಿ ಪರಿಗಣಿತರಾಗಿದ್ದು ಆಶ್ಚರ್ಯ ಹುಟ್ಟಿಸುವ ಸಂಗತಿ. ಆದರೆ ವಾಸ್ತವದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆ ಇದ್ದಾಗಲೂ ಮುಸ್ಲಿಂಲೀಗ್ 1937ರ ಚುನಾವಣೆಯಲ್ಲಿ ಕೇವಲ 106 ಸ್ಥಾನಗಳನ್ನು ಮತ್ತು ಸಿಕಂದರ್ ಹಯಾತ್‌ಖಾನ್ ಮತ್ತು ದೀನಬಂಧು ಚೋಟುರಾಂ 101 ಸ್ಥಾನಗಳನ್ನು ಮಾತ್ರ ಗೆದ್ದುಕೊಳ್ಳಲು ಸಾಧ್ಯವಾಗಿತ್ತು. ಇದರ ಜೊತೆಗೆ, ಕಾಂಗ್ರೆಸ್‌ನಲ್ಲಿ ಮೌಲಾನಾ ಆಜಾದ್‌ರಂತಹ ಹಲವಾರು ಮುಸ್ಲಿಂ ನಾಯಕರುಗಳಿದ್ದರು. ಇದೆಲ್ಲದರ ಹೊರತಾಗಿಯೂ ಮುಸ್ಲಿಂಲೀಗ್ ಮತ್ತು ಜಿನ್ನಾರನ್ನು ಮುಸ್ಲಿಮರ ಪ್ರಾತಿನಿಧಿಕ ಧ್ವನಿ ಎಂದು ಬ್ರಿಟಿಷರು ಒಪ್ಪಿಕೊಂಡದ್ದಾದರೂ ಏಕೆ?

ಬ್ರಿಟಿಷರೂ ಕೂಡ ಈ ಸನ್ನಿವೇಶದಲ್ಲಿ ಒಡೆದ ಆಳುವ ನೀತಿಯಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡದ್ದೇ ಇದಕ್ಕಿದ್ದ ಏಕೈಕ ಕಾರಣ. ಸಾವರ್ಕರ್ ಮತ್ತು ಜಿನ್ನಾ ಬ್ರಿಟಿಷರ ಈ ಒಡೆದಾಳುವ ನೀತಿಗೆ ಸಂಪೂರ್ಣ ಹೊಂದಿಕೆಯಾಗುವ ಪಾತ್ರ ನಿರ್ವಹಿಸಿದರು. 1946ರ ಚುನಾವಣೆಗಳ ನಂತರ ಜಿನ್ನಾರ ಅಧಿಕೃತ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಯಿತು. “ಅವರನ್ನು ’ಖ್ವಾಯ್ದ್-ಎ-ಆಜಮ್’ (ಮಹಾನ್ ನಾಯಕ) ಎಂದೂ ಕರೆಯಲಾಯಿತು.

ಇಸ್ಲಾಂನ ಮತೀಯ ಪ್ರತಿಮೆಗಳು ಮತ್ತು ಸಂಕೇತಗಳನ್ನು ಬಳಸಿಕೊಂಡು ಮುಸ್ಲಿಂ ಸಮುದಾಯವನ್ನು ಪ್ರಚೋದಿಸಬಹುದೆಂದು ಜಿನ್ನಾ ಮತ್ತು ಮುಸ್ಲಿಂಲೀಗ್ ನಂಬಿದರು. “ಇಸ್ಲಾಂ ಅಪಾಯದಲ್ಲಿದೆ” ಎಂಬ ಕೂಗು ಮುಸ್ಲಿಮರನ್ನು ಒಗ್ಗೂಡಿಸುವ ಮಂತ್ರವಾಯಿತು. ಅವರು ದ್ವಿ-ರಾಷ್ಟ್ರ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿದರು. ಹಿಂದೊಮ್ಮೆ ಗಾಂಧಿಯವರ ಸಂಬಂಧವನ್ನು ಕಡಿದುಕೊಳ್ಳಲು ಕಾರಣವಾದ ಕೋಮು ಮತ್ತು ನಿರ್ದಿಷ್ಟ ಧರ್ಮಾಧಾರಿತ ರಾಜಕಾರಣದ ಕಡೆಗೆ ಅವರು ತಿರುಗಿದರು. 1946ರ ಚುನಾವಣೆಗಳಲ್ಲಿ ಹಿಂದೂಮಹಾಸಭಾದ ಸ್ಥಾನಗಳು 12ರಿಂದ ಶೂನ್ಯಕ್ಕೆ ಕುಸಿದು ಹೋದಾಗಲೂ ಮತ್ತು ಶ್ಯಾಮ್‌ಪ್ರಸಾದ್ ಮುಖರ್ಜಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕೇವಲ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದರೂ ಮುಸ್ಲಿಂಲೀಗ್‌ನ ಸ್ಥಾನಗಳು 106ರಿಂದ 425 ಸ್ಥಾನಗಳಿಗೆ ಏರಿತು.

ಒಟ್ಟು 11 ಪ್ರಾಂತ್ಯಗಳಲ್ಲಿ ಕೇವಲ ಎರಡು (ಬಂಗಾಳ ಮತ್ತು ಸಿಂಧ್) ಪ್ರಾಂತ್ಯಗಳಲ್ಲಿ ಮಾತ್ರ ಸಚಿವ ಸಂಪುಟವನ್ನು ಅವರು ರಚಿಸಿದರು. ಜಿನ್ನಾರನ್ನು ಮುಸ್ಲಿಮರ ಪ್ರತಿನಿಧಿಯೆಂಬಂತೆ ಪರಿಗಣಿಸಲು ಇದೂ ಒಂದು ಕಾರಣವಾಗಿತ್ತು.

ವಿನ್‌ಸ್ಟನ್ ಚರ್ಚಿಲ್

ಈ ಚುನಾವಣೆಗಳಲ್ಲಿ ಸ್ಥಿತಿವಂತರು ಮತ್ತು ಆಸ್ತಿವಂತರುಗಳು ಮಾತ್ರ ಮತದಾನದಲ್ಲಿ ಭಾಗವಹಿಸಬಹುದಿತ್ತು. ಅಂದರೆ ಬ್ರಿಟಿಷ್ ಇಂಡಿಯಾದಲ್ಲಿ ಪ್ರತಿಶತ 14ರಷ್ಟು ಮುಸ್ಲಿಂ ವಯಸ್ಕರು ಮಾತ್ರ ಮತದಾನದಲ್ಲಿ ಭಾಗವಹಿಸಿದರೇ ಹೊರತು ಉಳಿದ ಪ್ರತಿಶತ 86 ಮಂದಿಗೆ ಮತದಾನದ ಹಕ್ಕು ಕೂಡಾ ಇರಲಿಲ್ಲ ಎಂಬ ವಾಸ್ತವಾಂಶವನ್ನು ನಾವು ಮರೆಯಲಾಗದು.

1945ರಲ್ಲಿ ನಡೆದ ಬ್ರಿಟನ್ ಚುನಾವಣೆಯಲ್ಲಿ ಚರ್ಚಿಲ್ ಸೋತು ಇಂಗ್ಲೆಂಡ್‌ನ ಎಡಪಂಥೀಯ ಕಾರ್ಮಿಕ-ಪಕ್ಷದ ಕ್ಲಿಮೆಂಟ್ ಅಟ್ಲಿ ಪ್ರಧಾನಿಯಾದರು. ಭಾರತದ ವಿಭಜನೆಯನ್ನು ವಿರೋಧಿಸುತ್ತಿದ್ದ ಅವರು ಈ ಪ್ರಯತ್ನದ ಮುಂದುವರಿಕೆಯಾಗಿ 1946ರಲ್ಲಿ ಭಾರತಕ್ಕೆ ತಮ್ಮ ಕ್ಯಾಬಿನೆಟ್ ಮಿಷನ್ ಸಮಿತಿಯನ್ನು ಕಳುಹಿಸಿದರು. ಆ ವೇಳೆಗಾಗಲೇ ಲಿನ್‌ಲಿತ್‌ಗೊ ಬದಲಿಗೆ (1943) ಭಾರತದ ವೈಸ್‌ರಾಯ್ ಆಗಿ ನೇಮಕವಾಗಿದ್ದ ವ್ಯಾವೆಲ್‌ರಿಗೂ ಈ ವಿಭಜನೆಯಲ್ಲಿ ಆಸಕ್ತಿ ಇರಲಿಲ್ಲ. ಕ್ಯಾಬಿನೆಟ್ ಮಿಷನ್ ಭಾರತವನ್ನು ಎ, ಬಿ, ಸಿ, ಹಾಗೂ ರಾಜಾಳ್ವಿಕೆಯ ಪ್ರಾಂತ್ಯಗಳು ಎಂಬ ನಾಲ್ಕು ಗುಂಪುಗಳಾಗಿ ಭಾರತವನ್ನು ವಿಭಜಿಸಬಹುದು ಎಂಬ ಎಡವಟ್ಟಿನ ಶಿಫಾರಸು ನೀಡಿತು. ಈ ಯೋಜನೆಯ ಪ್ರಕಾರ ಕೇಂದ್ರ ಸರ್ಕಾರಕ್ಕೆ ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಇಲಾಖೆಗಳ ಮೇಲೆ ಮಾತ್ರ ನಿಯಂತ್ರಣವಿತ್ತು. ಸಾಗರೋತ್ತರ ವಹಿವಾಟು, ನಾಣ್ಯ, ಸಾಲ ಮತ್ತು ತೆರಿಗೆಗಳನ್ನು ಕೇಂದ್ರ ಸರ್ಕಾರದ ನಿಯಂತ್ರಣದಿಂದ ಹೊರಗಿಡಲಾಗಿತ್ತು. ಈ ಶಿಫಾರಸ್ಸುಗಳಿಂದ ದೇಶದ ಬಡತನ ನಿರ್ಮೂಲನೆಯನ್ನಾಗಲೀ ದೇಶದ ಕೈಗಾರಿಕಾಕರಣವನ್ನಾಗಲೀ ಸಾಧಿಸಲು ಕೇಂದ್ರವು ಅಸಮರ್ಥವಾಗುತ್ತದೆ ಎಂದು ಜವಹರ್‌ಲಾಲ್ ನೆಹರೂ ಇದನ್ನು ವಿರೋಧಿಸಿದರು. ಈ ಯೋಜನೆಯನ್ನು ಅಳವಡಿಸಿಕೊಂಡದ್ದೇ ಆದಲ್ಲಿ ದೇಶವು ಮುಂದುವರಿಯುವುದಾದರೂ ಹೇಗೆ ಎನ್ನುವ ಪ್ರಶ್ನೆಯನ್ನು ಅವರು ಎತ್ತಿದರು.

ಕ್ಯಾಬಿನೆಟ್ ಮಿಷನ್ ಪರಾಜಯ

ಎ ಮತ್ತು ಬಿ ಗುಂಪುಗಳು ಪಾಕಿಸ್ತಾನಿ ಅಧೀನಕ್ಕೆ ಸೇರುತ್ತವೆ ಎಂಬ ಕಾರಣಕ್ಕಾಗಿ ಜಿನ್ನಾ ಈ ಯೋಜನೆಯನ್ನು ಬೆಂಬಲಿಸಿದರು. ಕ್ಯಾಬಿನೆಟ್ ಸಮಿತಿಯು ಒಂದಕ್ಕಿಂತ ಹೆಚ್ಚು ವಿಭಜನೆಗಳ ಯೋಜನೆಯ ಬಗ್ಗೆ ಮಾತನಾಡುತ್ತಿತ್ತು. ಇದಕ್ಕೆ ವಿರುದ್ಧವಾಗಿ ಸರ್ದಾರ್ ಪಟೇಲರು ಒಂದು ವಿಭಜನೆಗೆ ಮಾತ್ರ ಒತ್ತು ನೀಡಿ, “ದೇಶದ ಒಂದು ವಿಭಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕೇ ಅಥವಾ ಅನೇಕ ವಿಭಜನೆಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕೇ ಎಂಬ ಕಟು ವಾಸ್ತವವನ್ನು ಎದುರಿಸಬೇಕಾಗಿ ಬಂದಿದೆ. ಇದರಿಂದ ನನ್ನ ಹೃದಯವು ಭಾರವಾಗಿದೆ. ದೇಶದ ವಿಭಜನೆ ಯಾರಿಗೂ ಇಷ್ಟವಿಲ್ಲ. ಆದರೆ
ಅನೇಕ ವಿಭಜನೆಗಳಿಗಿಂತ ಒಂದು ವಿಭಜನೆಯೇ ಉತ್ತಮ” ಎನಿಸುವಂತಿದೆ ಎಂಬ ನಿರ್ಧಾರಕ್ಕೆ ಬಂದರು. ಇದು ಹತಾಶರಾಗಿ ವಿಭಜನೆಯನ್ನು ತಡೆಯುವ ಅವರ ಕಟ್ಟಕಡೆಯ ಪ್ರಯತ್ನವಾಗಿತ್ತು. ಎರಡು ತೀವ್ರವಾದಿಗಳ ಕಾರಣದಿಂದ ಜನರನ್ನು ಹತ್ಯಾಕಾಂಡಕ್ಕೆ ಪ್ರಚೋದಿಸಿ ಹುಚ್ಚೆಬ್ಬಿಸಿದ ಆನಂತರದ ಕಥೆ ನಮ್ಮೆಲ್ಲರಿಗೂ ತಿಳಿದದ್ದೇ.

1946ರ ಆಗಸ್ಟ್ 15ರಂದು “ನೇರ ಕ್ರಮದ ದಿನ”ವನ್ನು ಆಚರಿಸಲು ಕರೆ ನೀಡಿದ ಜಿನ್ನಾ, “ಪಾಕಿಸ್ತಾನದ ಕನಸನ್ನು ನನಸಾಗಿಸಲು ನಾವು ಇನ್ನಷ್ಟು ತ್ಯಾಗ ಬಲಿದಾನಗಳಿಗೆ ಸಿದ್ಧರಾಗಬೇಕು” ಎಂದು ಘೋಷಿಸಿದರು. ಇದು ಮೂಲತಃ ಗಲಭೆಗಳಿಗೆ ನೀಡಿದ ಕರೆಯಾಗಿತ್ತು ಎಂದು ಪರಿಗಣಿಸಲಾಗಿದೆ. ಕೊಲ್ಕೊತ್ತಾದಲ್ಲಿ ನಡೆದ ಗಲಭೆಗಳಲ್ಲಿ ಹಲವಾರು ಹಿಂದೂಗಳ ಹತ್ಯೆಯಾಯಿತು. ಗಾಂಧಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಿಂದೂಗಳನ್ನು ರಕ್ಷಿಸಲು ಮುಂದಾದರು. ಇಂಗ್ಲೆಂಡಿನ ಹೊಸ ಪ್ರಧಾನಮಂತ್ರಿಗೆ ಭಾರತದ ವಿಭಜನೆಯಲ್ಲಿ ಆಸಕ್ತಿ ಇರಲಿಲ್ಲ. ಹೇಗಾದರೂ ಭಾರತ-ಪಾಕಿಸ್ತಾನ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಅಂತಿಮಗೊಳಿಸಲು ಅವರು ಬಯಸಿದ್ದರು. ಸಮಯ ನಾಗಾಲೋಟದಿಂದ ಓಡುತ್ತಿತ್ತು. ಕ್ಯಾಬಿನೆಟ್ ಮಿಷನ್ ಯೋಜನೆಗೆ ಯಾರ ಸಮ್ಮತಿಯೂ ಇರಲಿಲ್ಲ. ಈ ಕಾರಣಗಳಿಂದಾಗಿ 1947ರ ಜೂನ್ 3ರಂದು ಮೌಂಟ್‌ಬ್ಯಾಟನ್ ಯೋಜನೆಯು ಅಂಗೀಕೃತವಾಯಿತು.

ಮೌಂಟ್‌ಬ್ಯಾಟನ್‌ಗೆ ಜೂನ್ 1948ರವರೆಗೆ ಕಾಲಾವಕಾಶ ನೀಡಲಾಗಿದ್ದರೂ ಯಾವ ಕಾರಣಕ್ಕೆ
ಅವರು ಅದನ್ನು ಶೀಘ್ರಗತಿಯಲ್ಲಿ ಜಾರಿಗೆ ತಂದರು? ತುರ್ತು ನಿರ್ಗಮನಕ್ಕೆ ಬ್ರಿಟಿಷ್ ಸೇನೆ ಕೂಡ ತಯಾರಿರಲಿಲ್ಲ. ಸ್ವಾತಂತ್ರ್ಯಕ್ಕೆ ಕೆಲವು ತಿಂಗಳುಗಳ ಮುಂಚೆ ಗಲಭೆ ಮತ್ತು ರಕ್ತಪಾತಗಳು ವ್ಯಾಪಕವಾಗಿ ನಡೆದವು. ಆಗಸ್ಟ್ 14ರಂದು ಪಾಕಿಸ್ತಾನವು ಮುಸ್ಲಿಂರಾಷ್ಟ್ರವಾಗಿ ರಚನೆಗೊಂಡಿತು. ಭಾರತವು ಜಾತ್ಯತೀತ ರಾಷ್ಟ್ರವಾಗಿ ಉಳಿಯಿತು. ಅಂದೇ ಬ್ರಿಟಿಷ್ ಸಾಮ್ರಾಜ್ಯದ ಭವ್ಯ ಸಂಕೇತವಾದ ಧ್ವಜವು ಅಂತಿಮವಾಗಿ ಕೆಳಗಿಳಿದು ಭಾರತದ ಬಾವುಟವು ಮೇಲೇರಿತು. ವಿದೇಶೀಯರಿಂದ ಸ್ವಾತಂತ್ರ್ಯ ಪಡೆಯಲು ಹಿಂದೂಗಳು ಒಲ್ಲದ ಮನಸ್ಸಿನಿಂದ ವಿಭಜನೆಯನ್ನು ಸ್ವೀಕರಿಸಿದರು.

ಹಿಂದಿ ಮೂಲ: ಧ್ರುವ್ ರಾಥಿ (ಯುಟ್ಯೂಬ್)
(ಕನ್ನಡಕ್ಕೆ): ಪ್ರೊ. ಬಿ ಗಂಗಾಧರಮೂರ್ತಿ

ಧ್ರುವ್ ರಾಥಿ

ಧ್ರುವ್ ರಾಥಿ
ಭಾರತದ ಖ್ಯಾತ ಯುಟ್ಯೂಬರ್‌ಗಳಲ್ಲಿ ಒಬ್ಬರು. ಆರ್ಥಿಕತೆ, ಪರಿಸರ, ರಾಜಕೀಯ ವಿದ್ಯಮಾನಗಳು ಸೇರಿದಂತೆ ಹಲವು ವಿಷಯಗಳ ಮೇಲೆ ಇವರು ಮಾಡುವ ವಿಡಿಯೋಗಳು ಅಪಾರ ಜನಪ್ರಿಯತೆ ಗಳಿಸಿವೆ. ದೇಶವಿಭಜನೆಯ ಬಗ್ಗೆ ಇವರ ಹಿಂದಿ ವಿಡಿಯೋ ಪ್ರಸ್ತುತಿಗೆ ಪ್ರೊ. ಬಿ ಗಂಗಾಧರಮೂರ್ತಿ ಕನ್ನಡ ಬರಹ ರೂಪ ನೀಡಿದ್ದಾರೆ.


ಇದನ್ನೂ ಓದಿ: ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 3

ಇದನ್ನೂ ಓದಿ: ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ- 2

ಇದನ್ನೂ ಓದಿ: ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ-ಒಂದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...