Homeಮುಖಪುಟನೆಲೆ ಇಲ್ಲದ ನಾಡ ಪ್ರಜೆ ಐಜಾಝ್ ಅಹ್ಮದ್ (1941-2022)

ನೆಲೆ ಇಲ್ಲದ ನಾಡ ಪ್ರಜೆ ಐಜಾಝ್ ಅಹ್ಮದ್ (1941-2022)

- Advertisement -
- Advertisement -

ಸಾಹಿತ್ಯ ತತ್ವ ಮೀಮಾಂಸಕ, ರಾಜಕೀಯ ವಿಶ್ಲೇಷಕರಾದ ಐಜಾಝ್ ಅಹ್ಮದ್, ಮಾರ್ಚ್ 9ರಂದು ತಮ್ಮ 81ನೇ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಈ ಸಾವಿನೊಂದಿಗೆ, ’ಮಾರ್ಕ್ಸ್‌ವಾದಿ’ ಸಂಸ್ಕೃತಿ ವಿಮರ್ಶೆ ಮತ್ತು ರಾಜಕೀಯ ವಿಶ್ಲೇಷಣೆಯ ಕ್ಷೇತ್ರವು ದಣಿವಿರದ ಅರಿವಿನ ಹಿರಿಯನನ್ನು ಕಳೆದುಕೊಂಡು ಅನಾಥವಾಗಿದೆ ಎಂದರೆ ಅದು ಖಂಡಿತಕ್ಕೂ ಅತಿಶಯೋಕ್ತಿಯಲ್ಲ.

1970ರ ದಶಕದ ನಂತರ ಸಾಂಸ್ಕೃತಿಕ ಮೀಮಾಂಸೆಯ ವಿದ್ವತ್ ವಲಯದಲ್ಲಿ ’ಆಧುನಿಕೋತ್ತರ ವಾದ’ವು ಬೆಡಗಿನ ಚಿಂತನಾ ಮಾರ್ಗವಾಗಿ ಆವರಿಸಿಕೊಳ್ಳುತ್ತಿದ್ದಾಗ ಐಜಾಝ್ ಅಹ್ಮದ್, ಶಾಸ್ತ್ರೀಯ ಮಾರ್ಕ್ಸ್‌ವಾದದ ನೆಲೆಯಲ್ಲಿ ಗಟ್ಟಿಯಾಗಿ ಕಾಲೂರಿಕೊಂಡು ಚಿಂತನಾಶೀಲ ಅರಿವಿನ ಭಂಡಾರ ಬೆಳೆಸಿದ ವಿರಳ ಜ್ಞಾನಿಯಾಗಿದ್ದರು. ಮಾರ್ಕ್ಸ್‌ವಾದಿ ಚಿಂತನಾ ಪರಂಪರೆಯ ಹರಿಕಾರರು, ತಮ್ಮ ಕಾಲದಲ್ಲಿ ನಡೆಯುವ ’ವಿದ್ವತ್ ವಿಚಾರಗಳ ಅರಿವು’ ಎಷ್ಟು ಮುಖ್ಯವೋ ಅಷ್ಟೇ ಎಡ ಚಳವಳಿಗಳ ಜೊತೆಗಿನ ಸಖ್ಯದಿಂದ ದೊರಕುವ ’ಆಚರಣೆಯ ಅರಿವು’ ಕೂಡ ಮುಖ್ಯವೆಂದು ಪರಿಗಣಿಸುವವರು; ಇಂಥ ಪರಂಪರೆಗೆ ಸೇರಿದ ಐಜಾಝ್, ಕೊನೆಯವರೆಗೂ ಅಧಿಕಾರ ವಿರೋಧಿ ಚಳವಳಿಗಳ ಜೊತೆ ಸಕ್ರಿಯ ಒಡನಾಟ ಇಟ್ಟುಕೊಂಡಿದ್ದರು; ಚಳವಳಿಗಳೊಂದಿಗೆ ಕಲೆತು-ತಮ್ಮ ವಿದ್ವತ್ ಸಂಚಯದಿಂದ ಚೂಪಾಗಿಸಿಕೊಂಡ ಸಾಮಾಜಿಕ-ರಾಜಕೀಯ ವಿಮರ್ಶೆಯ ಮೂಲಕ ಚಳವಳಿಗೆ ಚಿಂತನೆಯ ಸಾಂಗತ್ಯ ನೀಡಿದ ಅಪರೂಪದ ಬೌದ್ಧಿಕರಾಗಿದ್ದರು. ’ಆಧುನಿಕೋತ್ತರ ವಿದ್ವತ್’ ಗತ್ತಿನಲ್ಲಿ ಕಡೆಗಣಿತ ವರ್ಗಗಳ ಚಳವಳಿಗಳನ್ನು ಅಸಡ್ಡೆ ಮಾಡುತ್ತಾ, ಆ ಚಳವಳಿಗಳಿಗೆ ಅಗತ್ಯವಾದ ’ಆಳುವವರ ಆಟದ ಒಳನೋಟ’ಗಳನ್ನು ಕೊಡುವ ಉತ್ತರದಾಯಿತ್ವ ಮರೆತ ಸುಶಿಕ್ಷಿತ ವರ್ಗವು ಬೆಳೆಯುತ್ತಿರುವ ಕೇಡುಗಾಲದಲ್ಲಿ ನಾವು ಐಜಾಝ್ ಅಹ್ಮದರನ್ನು ಕಳೆದುಕೊಂಡಿದ್ದೇವೆ.

1941ರಲ್ಲಿ ಬ್ರಿಟಿಷ್ ಭಾರತದ ಅವಧ್‌ನಲ್ಲಿ (ಇಂದಿನ ಉತ್ತರ ಪ್ರದೇಶದ ಭಾಗ) ಹುಟ್ಟಿದ ಐಜಾಝ್, ಶ್ರೀಮಂತ ಜಮೀಂದಾರಿ ಕುಟುಂಬದವರು. ದೇಶ ವಿಭಜನೆಯ ನಂತರ ಅವರ ಕುಟುಂಬದ ಅನೇಕರು ಪಾಕಿಸ್ತಾನಕ್ಕೆ ವಲಸೆ ಹೋದರೂ, ನೆಹರು ಅವರ ನೇತೃತ್ವದಲ್ಲಿ ನಂಬಿಕೆ ಇಟ್ಟಿದ್ದ ಐಜಾಝರ ತಂದೆ ಭಾರತದಲ್ಲೇ ಉಳಿಯಬಯಸಿದ್ದರು. ಆದರೆ, 1950ರ ಹೊತ್ತಿಗೆ ಉತ್ತರ ಪ್ರದೇಶದಲ್ಲಿ ವಾತಾವರಣ ಕಾಂಗ್ರೆಸ್‌ನ ನೆಹರುವನ್ನೇ ಬೆಚ್ಚಿಸುವಷ್ಟು ಕೋಮುವಾದಿಯಾಗಿಬಿಟ್ಟಾಗ ಅವರ ಕುಟುಂಬವೂ ಪಾಕಿಸ್ತಾನಕ್ಕೆ ವಲಸೆಹೋಯಿತು. ತಮ್ಮ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಪೂರೈಸುವವರೆಗೂ, ಭಾರತದಲ್ಲಿ ಉಳಿದಿದ್ದ ಐಜಾಝ್, ಮುಂದಿನ ಶಿಕ್ಷಣವನ್ನು ಲಾಹೋರಿನಲ್ಲಿ ಮುಂದುವರೆಸಿದರು. ಆ ಹೊತ್ತು ಪಾಕಿಸ್ತಾನದಲ್ಲಿ ಕಮ್ಯುನಿಸ್ಟ್ ಚಳವಳಿಗಳು ಪ್ರಬಲವಾಗಿದ್ದವು; ಲಾಹೋರಿನ ಕಾಲೇಜುಗಳಲ್ಲಿ ಎಡಪಂಥದ ಪ್ರಭಾವವು ಆವರಿಸಿತ್ತು; ಯುವಕ ಐಜಾಝ್ ಎಡ ಚಳವಳಿಗಳಿಗೆ ತಮ್ಮನ್ನು ಅರ್ಪಿಸಿಕೊಂಡು ಮಾರ್ಕ್ಸ್‌ವಾದದ ಮೊದಲ ಪಾಠಗಳನ್ನು ಕಲಿಯತೊಡಗಿದರು. ಜೊತೆಗೆ ಅದು ಉರ್ದು ಸಾಹಿತ್ಯದ ಪ್ರಖರ ಕಾಲವೂ ಆಗಿತ್ತು-ಒಂದು ಕಡೆ ಆಧುನಿಕ ಪ್ರತಿರೋಧಿ ಚಿಂತನೆಯ ಸಾಹಿತ್ಯವು ಹರಡುತ್ತಿದ್ದರೆ, ಅದಕ್ಕೆ ಪೂರಕವೆಂಬಂತೆ ಶಾಸ್ತ್ರೀಯ ಉರ್ದು ಕಾವ್ಯವೂ ಪ್ರಭಾವಶಾಲಿಯಾಗಿತ್ತು (ಫೈಜ್ ಅಹ್ಮದ್ ಫೈಜ್ ಕವಿಯಾಗಿಯೂ, ಚಳವಳಿಗಾರನಾಗಿಯೂ ಪ್ರಖರನಾಗಿದ್ದ ಕಾಲವದು). ಈ ಹೊತ್ತಲ್ಲಿ ಐಜಾಝ್ ಅವರಲ್ಲಿ ಅರಿವಿನ ಬೀಜಗಳು ಊರಿಕೊಂಡದ್ದು, ಮುಂದಿನ ಅವರ ಅರಿವಿನ ದಾರಿಯನ್ನು ಕಟ್ಟಿದವು.

1960ರ ದಶಕದ ಮಧ್ಯ ಭಾಗದ ಹೊತ್ತಿಗೆ, ಯಾಹ್ಯಾಖಾನನ ಮಿಲಿಟರಿ ಸರ್ವಾಧಿಕಾರದ ದಬ್ಬಾಳಿಕೆ ಶುರುವಾದಾಗ, ಐಜಾಝರಿಗೆ ಲಾಹೋರ್ ಅರಿವಿನ ಸೆಲೆಯಾಗಿಯೂ ಬತ್ತುತ್ತಿತ್ತು. ಅವರ ರಾಜಕೀಯ ಸಖ್ಯದ ಕಾರಣ ಅಪಾಯಕಾರಿಯಾಗಿತ್ತು. ಆ ಕಾರಣವಾಗಿ ಅವರು ಉತ್ತರ ಅಮೆರಿಕೆಗೆ ಹೋಗಿ ವಿದ್ಯಾಭ್ಯಾಸ ಹಾಗು ಬೋಧನಾ ವೃತ್ತಿ ಪ್ರಾರಂಭಿಸಿದರು. ಝುಲ್ಫಿಕರ್ ಭುಟ್ಟೋ ಆಡಳಿತ ಕಾಲದಲ್ಲಿ ಪಾಕಿಸ್ತಾನಕ್ಕೆ ವಾಪಸಾಗಿ, ನೆಲೆಯೂರಲು ಯತ್ನಿಸಿದರೂ, ಅದು ಅಲ್ಪಾವಧಿಯುದಾಗಿತ್ತು. ಜನರಲ್ ಝಿಯಾನ ಮಿಲಿಟರಿ ಸರ್ವಾಧಿಕಾರ ಶುರುವಾಯಿತು. 1980ರ ದಶಕದಲ್ಲಿ ಅವರು ಉತ್ತರ ಅಮೆರಿಕೆಗೆ ವಾಪಸು ಹೋಗಬೇಕಾಯಿತು. ಭಾರತಕ್ಕೆ ವಾಪಸಾಗಿ ತಮ್ಮ ವಿದ್ವತ್ ಕಾಯಕವನ್ನು ಮುಂದುವರೆಸಲು ಬಯಸಿದರು. ಅವರ ಪಾಂಡಿತ್ಯಕ್ಕೆ ತಕ್ಕ ಶೈಕ್ಷಣಿಕ ಹುದ್ದೆಗಳೇನೋ ಭಾರತದಲ್ಲಿ ಅವರಿಗೆ ಸಿಕ್ಕವು-ನೆಹರು ಮೆಮೋರಿಯಲ್ ಲೈಬ್ರರಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಜಾಮೀಯ ಮಿಲಿಯ ವಿಶ್ವವಿದ್ಯಾಲಯಗಳಲ್ಲಿ ಅವರು ಪ್ರಾಧ್ಯಾಪಕ/ ಉನ್ನತ ಅಧ್ಯಯನಕಾರನಾಗಿ ತಮ್ಮ ಕಾಯಕ ಮುಂದುವರೆಸಿದರು.

ಐಜಾಝರಿಗೆ ಪಾಕಿಸ್ತಾನಕ್ಕೆ ಹೋಗುವ ಇಚ್ಛೆಯಾಗಲೀ, ಉತ್ತರ ಅಮೆರಿಕೆಯ ತವಕವಾಗಲೀ ಇರಲಿಲ್ಲ; ಅವರಿಗಿದ್ದ ಒಂದೇ ಬಯಕೆ, ಭಾರತದ ಪ್ರಜೆಯಾಗುವುದು. ಆದರೆ, ಭಾರತದ ಪ್ರಭುತ್ವದ ನೋಟದಲ್ಲಿ ’ತನ್ನವರು ಯಾರು?’ ಎಂಬ ಚಹರೆಗಳು ಬದಲಾಗತೊಡಗಿದ್ದವು. ಭಾರತದಲ್ಲಿ ಹುಟ್ಟಿದರೂ, ಪಾಕಿಸ್ತಾನಕ್ಕೆ ವಲಸೆಹೋಗಿದ್ದರಿಂದ ಹುಟ್ಟಿನ ಆಧಾರದಲ್ಲಿ ಪ್ರಜೆಯಾಗುವ ನಿಯಮ ಅವರಿಗೆ ಖೈದಾಗಿತ್ತು. ಪಾಕಿಸ್ತಾನದ ಪಾಸ್‌ಪೋರ್ಟ್ ತ್ಯಜಿಸಿ, ಬ್ರಿಟನ್ ಅಥವ ಉತ್ತರ ಅಮೆರಿಕೆಯ ಪಾಸ್‌ಪೋರ್ಟ್ ಪಡೆದು, ಭಾರತದ ಪ್ರಜೆಯಾಗುವ ಸಲಹೆಗಳನ್ನು ಪಾಲಿಸಿದರೂ, ಅವರಿಗೆ ನಿಯಮಾನುಸಾರ ಭಾರತದಲ್ಲಿ ಪ್ರಜೆಯ ಸ್ಥಾನ ಸಿಗಲಿಲ್ಲ. ಐದೈದು ವರ್ಷಗಳ ಶೈಕ್ಷಣಿಕ ಉದ್ಯೋಗ ವೀಸಾದ ಮೇಲೆ ಐಜಾಝ್ ಇಪ್ಪತ್ತು ವರ್ಷಗಳಿಗೂ ಮಿಕ್ಕು ಭಾರತದಲ್ಲಿ ಉಳಿದು ತಮ್ಮ ಸಾಮಾಜಿಕ-ಭೌದ್ಧಿಕ ಕಾಯಕ ಮುಂದುವೆರಸಿದರು. 2014ರ ಹೊತ್ತಿಗೆ ಅವರಿಗೆ ಭಾರತವು ತನ್ನ ನೆಲವಾಗುವ ಯಾವ ಆಶಯವೂ ಉಳಿದಿರಲಿಲ್ಲ. ಅವರು ಮತ್ತೆ ಉದ್ಯೋಗ ವೀಸಾದ ಮೇಲೆ ಉತ್ತರ ಅಮೆರಿಕೆಗೆ ವಾಪಾಸು ಹೋದರು.

2006ರಲ್ಲಿ ಅವರು ಉಪನ್ಯಾಸದ ಸಲುವಾಗಿ ಮಣಿಪಾಲಕ್ಕೆ ಬಂದಿದ್ದಾಗ ನಾನು ಅವರ ಜೊತೆ ಆರೆಂಟು ತಾಸು ಕಳೆದಿದ್ದೆ. ಅವರ ಬರಹಗಳಿಂದ ಬಹಳವೇ ಪ್ರಭಾವಿತನಾಗಿದ್ದೆ. ತನ್ನ ವಿದ್ವತ್ತಿನ ಗುಲಗಂಜಿ ಗತ್ತನ್ನು ಮೈಮೇಲೆ ಹೊರದ ಆ ಮನುಷ್ಯನ ಮೇಲೆ ಮೂಡಿದ ವಿಶ್ವಾಸದ ಸಲುಗೆಯಲ್ಲಿ ನಾನು ’ನೀವೀಗ ಉತ್ತರ ಅಮೆರಿಕೆಯ ಪ್ರಜೆಯಾ?’ ಎಂದು ಕೇಳಿದೆ- ನನಗೆ ಅವರ ಜೀವನ ವೃತ್ತಾಂತ ಆಗ ತಿಳಿದಿರಲಿಲ್ಲ. ಅವರು, ಬಹಳ ಜೋರಾಗಿ ನಕ್ಕು ’ಉದ್ಯೋಗ ವೀಸಾಗಳ ಮೇಲೆ ದೇಶಾಂತರ ಅಲೆದಾಡುತ್ತಿರುವ ನೆಲೆಯಿಲ್ಲದ ನಾಡ ಪ್ರಜೆ ನಾನು ಕಣಯ್ಯ” ಎಂದರು. ಆ ಮಾತು ಕೇಳಿದ ದಿಗ್ಭ್ರಮೆ ಈಗಲೂ, ಅವರ ಸಾವಲ್ಲೂ ನನ್ನ ಎದೆಯೊಳಗೆ ನಾಟಿದೆ.

ನಾನು ಖಂಡಿತಕ್ಕೂ ’ಐಜಾಝ್ ಅಹ್ಮದ್ ಪಂಡಿತ’ನಲ್ಲ- ಅಂದರೆ, ಅವರ ಎಲ್ಲ ಬರಹಗಳನ್ನು ಓದಿದವನಲ್ಲ. ನಮ್ಮ ಕಾಲದ ಸಂಕಷ್ಟ ಅರಿಯಲು, ಐಜಾಝರ ಬರಹಗಳ ಓದಿನಿಂದ ನನಗೆ ದೊರಕಿರುವ ಕೆಲವು ಅರಿವುಗಳನ್ನು ಮುಂದಿಡುವೆ:

1) ಮಾರ್ಕ್ಸ್‌ವಾದದ ತತ್ವಶಾಸ್ತ್ರವು ’ಎಲ್ಲ ಮನುಷ್ಯರೂ ಸಮಾಜ ಜೀವಿಗಳು. ತಾವು ಬದುಕುವ ಸಮಾಜದ ಮಿತಿಯಲ್ಲಿ ಅರಿವು ಪಡೆದು ತತ್ವಾಚರಣೆಗಳಲ್ಲಿ ನಡೆದುಕೊಳ್ಳುವವರು’ ಎಂದು ಹೇಳುತ್ತದೆ ಮತ್ತೂ ಈ ನೆಲೆಯಿಂದ ’ಸಮಾಜವನ್ನು ಬದಲಾಯಿಸುವ ಆಚರಣೆಗಳಲ್ಲಿ ಹೇಗೆ ತೊಡಗುತ್ತಾರೆ?’ ಎಂದು ಹೇಳುತ್ತದೆ. ಐಜಾಝ್ ಈ ನೆಲೆಯಿಂದ ತಮ್ಮ ಬರಹಗಳನ್ನು ಬರೆದವರು. ಇದು ಮಾರ್ಗದರ್ಶಿ.

2) 1989-90ರ ರಥಯಾತ್ರೆ, 1992-93ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಂತರ ನಡೆದ ಅಲ್ಪಸಂಖ್ಯಾತರ ಮೇಲೆ ನಡೆದ ಹಿಂಸೆಗಳು, ನಂತರ 2002ರ ಗುಜರಾತಿನಲ್ಲಿ ನಡೆದ ಹಿಂಸೆಗಳ ಕ್ರೌರ್ಯವನ್ನು ಕಂಡು, ಇದು ಮನುಷ್ಯ ಮಾತ್ರರು ಊಹಿಸುವುದಕ್ಕೆ ಸಾಧ್ಯವೇ? ಎಂದು ಅಚ್ಚರಿ ಪಟ್ಟರೆ, ಇದು ನಮ್ಮ ಸಾಮಾಜಿಕ ಅರಿವಿನ ಕೊರತೆ. ಉಪಖಂಡದ ಜನಜೀವನದಲ್ಲಿ ದಲಿತರು ಹಾಗು ಮಹಿಳೆಯರ ಮೇಲೆ ’ನಮ್ಮ ಸಂಸ್ಕೃತಿಯ’ ನಂಬಿಕೆಯ ಭಾಗವಾಗಿ ಇಷ್ಟೇ ತೀವ್ರವಾದ ಕ್ರೌರ್ಯಗಳನ್ನು ನಡೆಸಲಾಗಿದೆ. ಉಪಖಂಡದಲ್ಲಿ ’ಕ್ರೌರ್ಯದ ಸಂಸ್ಕೃತಿ’ಯು ಸಹಮತ ಪಡೆದುಕೊಂಡುಬಿಟ್ಟಿದೆ. ಇದನ್ನು ಅರಿಯದೆ ಸಂಘಪರಿವಾರದ ಕ್ರೌರ್ಯಗಳನ್ನು ಎದುರಿಸಲಾಗದು.

3) ’ಫ್ಯಾಸಿಸಂ’ ಎಂಬುದು, ಸಮಾಜದ ನಿರ್ಗತಿಕ ವರ್ಗದ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವವರು, ಸಾಮಾಜಿಕ ಕ್ರಾಂತಿಗಳ ನಿರ್ವಾತದಲ್ಲಿ, ಅದೇ ಜನ ವರ್ಗದ ಹೆಸರಲ್ಲಿ, ಉಳ್ಳವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ನಡೆಸುವ ಕ್ರಾಂತಿಯಾಗಿದೆ. ಇದನ್ನು ಅರಿಯದೇ ’ಫ್ಯಾಸಿಸಂ’ಅನ್ನು ಎದುರಿಸಲಾಗದು

4) ಉಪಖಂಡದಲ್ಲಿ, ಜನರು ನಂಬುವ ಮತಾಚರಣೆ, ಆಡುವ ನುಡಿ, ನಡೆದುಕೊಳ್ಳುವ ಆಚರಣೆಗಳನ್ನು ಬ್ರಿಟಿಷ್ ಆಡಳಿತ ಕಾಲದಿಂದಲೂ ತಿರುಚಿ, ’ಬಹುಸಂಖ್ಯಾತ’ರ ರಾಜಕಾರಣವನ್ನು ರೂಢಿಸುವ ಪ್ರಭುತ್ವದ ಆಟಗಳ ಮೂಲಕ ಭಾಷೆಗಳನ್ನೂ, ವೈವಿಧ್ಯಮಯ ಸಹಬಾಳ್ವೆಯ ತತ್ವಗಳನ್ನೂ ನರಮೇಧ ಮಾಡಲಾಗಿದೆ. ಇದನ್ನರಿಯದೇ, ಉಪಖಂಡದ ’ಫ್ಯಾಸಿಸಂ’ನ ಸ್ವರೂಪ ಅರಿವಾಗದು.


ಇದನ್ನೂ ಓದಿ: ವಿದಾಯ ಶೇನ್ ವಾರ್ನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...