Homeಮುಖಪುಟನಿರುತ್ತರದಿಂದ ನಿರ್ಗಮಿಸಿದ ಅಕ್ಕ

ನಿರುತ್ತರದಿಂದ ನಿರ್ಗಮಿಸಿದ ಅಕ್ಕ

- Advertisement -
- Advertisement -

ರಾಜೇಶ್ವರಿಯಕ್ಕ ನಿರುತ್ತರದಿಂದ ನಿರ್ಗಮಿಸಿದ್ದಾರೆ. ಹಾಗೆ ನೋಡಿದರೆ, ತೇಜಸ್ವಿಯವರು ತೀರಿಕೊಂಡ ಮೇಲೆ ಅವರೊಬ್ಬರೇ ಹೇಗಿರುತ್ತಾರೆ ಎಂದೆನಿಸಿದ್ದುಂಟು. ಹಾಗೆ ಒಮ್ಮೆ ಕೇಳಿದಾಗ ಆರಾಮಾಗಿದ್ದಿನಿ ಎಂದಿದ್ದರು. ಪುಸ್ತಕ ಪ್ರಕಾಶನದ ಜವಾಬ್ದಾರಿಯನ್ನು ತಮ್ಮನೊಡನೆ ತಾವೇ ನಿರ್ವಹಿಸಿದ್ದರು. ಆ ವ್ಯವಹಾರ ಕುಶಲತೆಯನ್ನ ತೇಜಸ್ವಿ ಕಲಿಸಿ ಹೋಗಿದ್ದರು. ಅದಕ್ಕಿಂತ ಮುಖ್ಯವಾಗಿ ತೇಜಸ್ವಿಯವರು ಮುಂಜಾನೆ ಎದ್ದು, ಕಾಡು ಬರಹೇಳಿ ಕಳುಹಿಸಿದೆ ಎಂಬಂತೆ ತಮ್ಮ ಹತಾರಗಳೊಂದಿಗೆ ಕಾಡಿಗೆ ಹೋದವರು ಸಂಜೆ ಬರುತ್ತಿದ್ದರು. ಹಾಗಾಗಿ ಅವರ ನಿರ್ಗಮನ, ಕಾಡಿಗೆ ಹೋಗಿದ್ದಾರೆ ಇನ್ನೇನು ಬರುತ್ತಾರೆ ಎಂಬಂತಾಗಿತ್ತು ರಾಜೇಶ್ವರಿಯವರಿಗೆ.

ಕುವೆಂಪು ತಮ್ಮ ಅವಧಿಯಲ್ಲಿ ಮೈಸೂರು ಯೂನಿವರ್ಸಿಟಿಯನ್ನು ಬೆಳೆಸಿದ ಸಮಯ ಒಂದು ಮರೆಯಲಾಗದ ಯುಗ ಎನ್ನಬಹುದು. ಸಾಹಿತಿಗಳು ಬರೆದಂತೆ ಬದುಕುತ್ತಿದ್ದ ಕಾಲ ಅದು. ’ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂಬ ಕುವೆಂಪು ಕರೆ ಅವರ ಮಗನನ್ನೆ ತೀವ್ರವಾಗಿ ತಾಕಿತ್ತು. ಅದರಂತೆ ತಾವು ಇಷ್ಟಪಟ್ಟ ರಾಜೇಶ್ವರಿಯವರನ್ನ ಮದುವೆಯಾಗುವ ಪ್ರಸ್ತಾಪವನ್ನ ಕುವೆಂಪು ಮುಂದಿಟ್ಟಾಗ ಸಂತೋಷದಿಂದ ಮಂತ್ರ ಮಾಂಗಲ್ಯ ಸಂಹಿತೆಯನ್ನು ತಾವೇ ಬೋಧಿಸಿ, ಮದುವೆ ಮಾಡಿದ್ದರು. ಅದೂ ಅಂತರ್ಜಾತಿ ವಿವಾಹ! ಈ ಪ್ರಸಂಗ ಅಂದು ಎಷ್ಟು ವಿದ್ಯಾರ್ಥಿಗಳನ್ನ ಪ್ರಭಾವಿಸಿತ್ತೆಂದರೆ ತೇಜಸ್ವಿರ ತಲೆಮಾರಿನ ಒಂದು ದೊಡ್ಡ ವರ್ಗ ಮಂತ್ರ ಮಾಂಗಲ್ಯದ ಮದುವೆ ಮಾಡಿಕೊಂಡರು. ಈ ಪೈಕಿ ಕಡಿದಾಳು ಶಾಮಣ್ಣನವರದೊಂದು ದೊಡ್ಡ ಕತೆ. ಮಂತ್ರಮಾಂಗಲ್ಯ ಮದುವೆಗಾಗಿ ಎಲ್ಲ
ಸೇರಿದ್ದರೆ ಶಾಮಣ್ಣ ಇಸ್ತ್ರಿಗೆ ಕೊಟ್ಟಿದ್ದ ಜುಬ್ಬಾ ತರಲು ಹೋಗಿದ್ದರು. ದೋಟಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಅಂತೂ ಹಳೆ ಜುಬ್ಬದಲ್ಲೇ ಮದುವೆಯಾಗಬೇಕೆಂಬ ಶಾಮಣ್ಣನವರ ಹಠ ಗೆದ್ದಿತು. ತೇಜಸ್ವಿ ರಾಜೇಶ್ವರಿ ಜೋಡಿಯಂತೆ ಶಾಮಣ್ಣ ಶ್ರೀದೇವಕ್ಕನವರದೂ ಒಂದು ಅಪರೂಪದ ಜೋಡಿ.

ಅಂದು ಮೈಸೂರು ಯೂನಿವರ್ಸಿಟಿಯಲ್ಲಿ ಎಂ.ಎ ಮುಗಿಸಿದ್ದ ತೇಜಸ್ವಿ ಮತ್ತು ರಾಜೇಶ್ವರಿಯವರಿಗೆ ಕೆಲಸ ಸಿಗುವುದು ಕಷ್ಟವೇನಾಗಿರಲಿಲ್ಲ. ಆದರೆ ಆ ಜೋಡಿಹಕ್ಕಿ ಯೂನಿವರ್ಸಿಟಿ ವ್ಯಾಪ್ತಿಯಲ್ಲದೆ ನಗರ ಜೀವನಕ್ಕೆ ವಿದಾಯ ಹೇಳಿ ಚಿತ್ರಕೂಟದ ಕಗ್ಗಾಡಿನ ಅಂಚಿಗೆ ಬಂದು ನೆಲೆಸಿದರು. ಅಲ್ಲಿಗೆ ಆ ಡಿಗ್ರಿ ಸರ್ಟಿಫಿಕೇಟ್ ಏನಾದವೊ ಏನೋ, ಆಗಿನ ಅವರ ತೀರ್ಮಾನ ಈಗ ನೆನಸಿಕೊಂಡರೆ ಭಯವಾಗುತ್ತದೆ. ಏಕೆಂದರೆ ಬದುಕಲು ಒಂದು ನೆಲೆ ಮಾಡಿಕೊಳ್ಳಬೇಕಿತ್ತು. ಜೀವಿಸಲು ಬೇಸಾಯ ಮಾಡಬೇಕಿತ್ತು. ಇಬ್ಬರೂ ನಿರಂತರವಾಗಿ ದುಡಿದು ಚಿತ್ರಕೂಟದಲ್ಲಿ ನೆಲೆಗೊಂಡರು. ತೇಜಸ್ವಿ ನೆಲ ಅಗೆದು ಗದ್ದೆ ಮಾಡಿ ಬದ ಸವರಿ ಅಚ್ಚುಗಟ್ಟು ಮಾಡಿ ಭತ್ತ ಬೆಳೆದರು. ಅದನ್ನು ಕುಯ್ದು ಬಡಿದು, ತೂರಿ, ಕೇರಿ ಸಕಲೇಶಪುರದವರೆಗೂ ಹೋಗಿ ಮಾರಿ ಬಂದರು. ಆಗ ಭತ್ತ ಬೆಳೆದ ರೈತ ಯಾಕೆ ಇನ್ನ ಉದ್ಧಾರವಾಗಿಲ್ಲ ಎಂಬುದು ಅರಿವಿಗೆ ಬಂತು.

ನಂತರ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ಗೆ ಬಂದು ನೆಲೆಸಿದರು. ಒಂದು ಸಂಸಾರ ಎಷ್ಟು ಬೇಕೊ ಅಷ್ಟೇ ಭೂಮಿಯನ್ನ ಕೊಂಡು ತಮ್ಮ ಕನಸಿನ ಲೋಕ ನಿರ್ಮಿಸಿಕೊಂಡರು. ಅದಾಗಲೇ ’ನಿಗೂಢ ಮನುಷ್ಯರು’, ’ಯಮಳ ಪ್ರಶ್ನೆ’, ’ಅಬಚೂರಿನ ಪೋಸ್ಟಾಫೀಸು’ ಬರೆದಿದ್ದರು. ಅದರ ಮುನ್ನುಡಿಯಲ್ಲಿ ಹೇಳಿದಂತೆ ಕನ್ನಡ ಸಾಹಿತ್ಯದ ಅಂದಿನ ಸ್ಥಿತಿಯಿಂದ ಮುಂದೆ ಹೋಗಲು ಹೊಸದಿಗಂತದೆಡೆಗೆ ಅನಿವಾರ್ಯ ಎಂದು ಘೋಷಿಸಿ ಅದರಂತೆ ಬರೆದರು. ಅಷ್ಟರಲ್ಲಾಗಲೆ ಲಂಕೇಶ್ ಪತ್ರಿಕೆ ಹೊರಬಂದಿದ್ದರಿಂದ ಲಂಕೇಶ್ ಕೋರಿಕೆಯಂತೆ ತೇಜಸ್ವಿ ನಿರಂತರವಾಗಿ ಬರೆಯತೊಡಗಿದರು. ಆಗ ಲಂಕೇಶ್ ಪ್ರತಿವಾರ ಮೂಡಿಗೆರೆಗೆ ಹೊರಡುತ್ತಿದ್ದರು. ಆಗೊಮ್ಮೆ ನಾನು ಮೂಡಿಗೆರೆಗೆ ಬರುತ್ತೇನೆ ಎಂದೆ. ಆಯ್ತು ಬಾ ಎಂದರು. ಅಂದಿನಿಂದ ಹಲವು ಬಾರಿ ಮೂಡಿಗೆರೆಗೆ ಹೋಗಿ ಅಪರೂಪದ ಆ ಜೋಡಿ ಹಕ್ಕಿಗಳ ಬದುಕನ್ನ ಕಣ್ಣಾರೆ ಕಂಡಿದ್ದೇನೆ. ಬಂದವರೊಡನೆ ತೇಜಸ್ವಿ ಹರಟುತ್ತಿದ್ದರೆ ರಾಜೇಶ್ವರಿಯಕ್ಕ ಬಂದು ಕೂರುತ್ತಿದ್ದರು. ಅವರ ಆತಿಥ್ಯಕ್ಕೆ ಲಂಕೇಶ್ ಮಾರುಹೋಗಿದ್ದರು. ಮುಂದೊಮ್ಮೆ ತೇಜಸ್ವಿಯವರ ಸಂದರ್ಶನ ಮಾಡಲು ಕಳುಹಿಸಿದ್ದರು. ಆಗ ರಾಜೇಶ್ವರಿಯಕ್ಕ ನಮ್ಮ ಮಾತು ಕೇಳಿಸಿಕೊಳ್ಳುತ್ತಲೆ ಮೊಟ್ಟೆ ಸಾರಿನ ಅಡುಗೆ ಮಾಡಿ ಬಡಿಸಿದ್ದರು. ಆಗೊಮ್ಮೆ ಸಿರಿಮನೆ ನಾಗರಾಜ್ ದಂಪತಿಗಳೊಡನೆ ಹೋಗಿ ಅರ್ಧ ದಿನ ಮಾತನಾಡಿ ಶೃಂಗೇರಿಯಲ್ಲಿ ಅಂತರ್ಜಾತಿ ವಿವಾಹದ ಸಮ್ಮೇಳನ ಮಾಡುವ ತೀರ್ಮಾನ ಮಾಡಿ ಬಂದಿದ್ದೆವು.

ರಾಜೇಶ್ವರಿಯಕ್ಕನವರದ್ದು ಯಾವಾಗಲೂ ನಗುಮುಖ. ನಗುತ್ತಲೇ ಮಾತನಾಡುತ್ತಿದ್ದರು. ತೇಜಸ್ವಿಯವರೊಡನೆ ಮಾತನಾಡುತ್ತಿದ್ದರೆ, ನಾವು ಎಷ್ಟು ಕೆಟ್ಟದಾಗಿ ಬದುಕುತ್ತಿದ್ದೇವಲ್ಲ ಅನ್ನಿಸುತ್ತಿತ್ತು. ಮನುಷ್ಯ ಮತ್ತು ನಿಸರ್ಗವನ್ನ ಮುಖಾಮುಖಿಯಾಗಿ ನಿಲ್ಲಿಸಿ ನಮ್ಮ ಅವನತಿಯನ್ನು ತೋರಿಸುತ್ತಿದ್ದರು. ದೇವರ ಜಾಗಕ್ಕೆ ನಿಸರ್ಗವನ್ನ ತಂದು ಕೂರಿಸುವ ಅವರ ಬರವಣಿಗೆ ಹೊಸ ತಲೆಮಾರನ್ನ ಆಕರ್ಷಿಸಿದೆ. ರಾಜೇಶ್ವರಿಯಕ್ಕನ ಪ್ರತಿಭೆ ನಮ್ಮ ಅರಿವಿಗೆ ಬಂದಿದ್ದು ಅವರನ್ನು ಚಿಕ್ಕಮಗಳೂರಿಗೆ ಕರೆಸಿ ಮಾತನಾಡಿಸಿದಾಗ. ನಾವೊಂದಿಷ್ಟು ಗೆಳೆಯರು ಚಿಕ್ಕಮಗಳೂರಿನಲ್ಲಿ ತೇಜಸ್ವಿಯವರ ಸಾಹಿತ್ಯ ಕುರಿತ ಸೆಮಿನಾರ್ ಮಾಡಲು ಹೊರಟಾಗ ರಾಜೇಶ್ವರಿಯಕ್ಕನನ್ನ ಕರೆಯಲು ಹೋದೆವು. ಆಗವರು ನಾನು ಬರುತ್ತೇನೆ, ಆದ್ರೆ ಇನ್ವಿಟೇಶನ್‌ನಲ್ಲಿ ನನ್ನ ಹೆಸರು ಹಾಕಬೇಡಿ ಎಂದರು. ಅಲ್ಲಿಗೆ ಅವರು ಬರುವುದಿಲ್ಲವೆಂದು ಅನುಮಾನವಾಯ್ತು. ಆದರೆ ಕಾರ್ಯಕ್ರಮದ ಸಮಯಕ್ಕೆ ಸರಿಯಾಗಿ ಹಾಜರಾದರು. ಅದೇ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಅಗ್ರಹಾರ ಕೃಷ್ಣಮೂರ್ತಿಗೆ ತೇಜಸ್ವಿ ಹೆಸರಿನಲ್ಲಿ ಕೊಡುವ ಅನಿಕೇತನ ಪ್ರಶಸ್ತಿ ಬಂದಿತ್ತು. ಅದರಿಂದ ಸನ್ಮಾನಕ್ಕೆ ನಾವು ತಯಾರಿ ನಡೆಸುವಾಗ ರಾಜೇಶ್ವರಿಯವರು ಗಲಿಬಿಲಿಗೆ ತುತ್ತಾಗಿದ್ದರು. ಯಾಕೆಂದರೆ ಇಂತಹ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದನ್ನ ಎಲ್ಲಿ ತೇಜಸ್ವಿ ನೋಡುತ್ತಾರೋ ಎಂಬ ಅಳುಕಾಯ್ತಂತೆ. ತೇಜಸ್ವಿಯವರಿಗೆ ಸಭೆ ಸಮಾರಂಭಗಳಲ್ಲಿನ ಸ್ವಾಗತ, ಪರಿಚಯ ಭಾಷಣ, ಸನ್ಮಾನ ವಂದನಾರ್ಪಣೆಗಳೆಲ್ಲ ತುಂಬ ತಮಾಷೆಯ ಪ್ರಹಸನಗಳಾಗಿದ್ದವಂತೆ. ಸನ್ಮಾನಕ್ಕೆ ತುತ್ತಾದ ವ್ಯಕ್ತಿ ಕುರ್ಚಿಯ ಮೇಲೆ ಕುಳಿತು, ಶಾಲಿನಿಂದ ಮುಚ್ಚಿಸಿಕೊಂಡು ಜರಿಪೇಟ, ಗಂಧದ ಹಾರವೆಲ್ಲಾ ಮುಚ್ಚಿ ಕ್ಷಣಹೊತ್ತು ಸತ್ತಂತಾಗಿ ಪೋಟೋ ಕ್ಲಿಕ್ಕಿಸುವುದನ್ನು ನೋಡುತ್ತಿದ್ದಾಗ ತೇಜಸ್ವಿ ಇದೇನೆ ಇದು ಎಂದು ನಕ್ಕಿದ್ದರಂತೆ. ಕಾಡಿನ ಜೀವಿಗಳಾಗಿದ್ದ ಆ ದಂಪತಿಗಳಿಗೆ ಪಟ್ಟಣದಲ್ಲಿ ನಡೆಯುವ ಕಥೆಗಳು ಪ್ರಹಸನದಂತಾಗಿದ್ದವು, ಅಕಸ್ಮಾತ್ ತೇಜಸ್ವಿ ಯಾವುದಾದರೂ ಸಭೆಗೆ ಬಂದರೆ, ತೇಜಸ್ವಿಯವರಿಗೆ ಕಿರಿಕಿರಿಯಾಗದಂತೆ ಸಭೆ ನಡೆಯಬೇಕಿತ್ತು.

ತೇಜಸ್ವಿಯವರ ನೆನಪಿನ ಸಭೆಗೆ ಬಂದ ರಾಜೇಶ್ವರಿಯವರು, ತೇಜಸ್ವಿಯವರು ಕಡೆಯವರೆಗೂ ಸರಕಾರಕ್ಕೆ ಒತ್ತಾಯಿಸುತ್ತಿದ್ದ ಕನ್ನಡದ ತಂತ್ರಾಂಶದ ಬಗ್ಗೆ ಕಿಮ್ಮನೆ ರತ್ನಾಕರ್ ಅವರಿಗೆ ಪ್ರಸ್ತಾಪಿಸಿ, ಸಚಿವರಾದಿಯಾಗಿ ಯಾರೂ ಇದನ್ನು ಪ್ರಸ್ತಾಪಿಸದೇ ಇರುವುದಕ್ಕೆ ಬೇಸರಗೊಂಡರು. ಅಲ್ಲದೆ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಅವರ ಭಾಷೆಗಳು ಅಂತರ್ಜಾಲದಲ್ಲಿ ದೊರಕುತ್ತಿರುವಾಗ, ಕನ್ನಡದಲ್ಲಿ ಯಾಕೆ ಇನ್ನೂ ಸಾಧ್ಯವಾಗಿಲ್ಲ ಎಂದರು. ಅವಾಗಾಗಲೇ ರಾಜೇಶ್ವರಿಯವರು ಹೊಸ ಯುಗಕ್ಕೆ ಸಜ್ಜುಗೊಂಡಿರುವುದರ ಬಗ್ಗೆ ಅಚ್ಚರಿಯಾಯ್ತು. ಆವರೆಗೂ ತೇಜಸ್ವಿಯವರ ನೆರಳಿನಲ್ಲಿ ಗೃಹಿಣಿಯಂತೆ ಬದುಕಿದ್ದಂತೆ ಕಂಡಿದ್ದ
ರಾಜೇಶ್ವರಿಯವರು, ತೇಜಸ್ವಿಗೆ ತಕ್ಕ ಸಂಗಾತಿಯಂತೆ ಕಂಡರು.

ಅವರ ನಿರುತ್ತರದ ಅಂಗಳದಲ್ಲಿನ ಸಸ್ಯರಾಶಿ ನೋಡಿದರೆ ವಿಸ್ಮಯವಾಗುತ್ತಿತ್ತು. ಗೌರಿ ಒತ್ತಾಯದಿಂದ ಅವರು ಬರೆದ “ನನ್ನ ತೇಜಸ್ವಿ” ಓದಿದವರಿಗೆ ಅವರೊಬ್ಬ ಪರಿಪಕ್ವ ಅಪ್ರಕಟಿತ ಲೇಖಕಿ ಎಂಬುದು ಅರಿವಾಗುತ್ತದೆ. ತೇಜಸ್ವಿಯವರ ’ಕಿರಗೂರಿನ ಗಯ್ಯಾಳಿಗಳು’ ಕತೆಯನ್ನು ಸಿನಿಮಾ ಮಾಡಲು ತೀರ್ಮಾನಿಸಿದ ನಿರ್ದೇಶಕರು, ಆ ಕತೆಯ ಹಕ್ಕುಗಳನ್ನು ತೆಗೆದುಕೊಳ್ಳಲು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನನ್ನನ್ನು ಕರೆದುಕೊಂಡು ಹೋದರು. ರಾಜೇಶ್ವರಿಯಕ್ಕ ಇವುರನ್ನೆಲ್ಲಾ ಕರಕೊಂಡು ಬಂದ್ರೆ ನಾನು ರಾಯಲ್ಟಿ ಕಡಿಮೆ ಮಾಡ್ತಿನಾ ಎಂದು ನಗಾಡಿದರು. ನಾಗತಿಹಳ್ಳಿಗೆ, ನೀವು ಕರ್ವಾಲೋ ಸಿನಿಮಾ ಮಾಡ್ತಿನಿ ಅಂತ ಬರದ ಲೆಟ್ರು ಅದಕ್ಕೆ ತೇಜಸ್ವಿ ಕೊಟ್ಟ ಉತ್ತರ ಇಲ್ಲಿದೆ ನೋಡಿ, ಎಂದು ಫೈಲು ತಂದು ತೋರಿದರು. ಅವರ ಪತ್ರವ್ಯವಹಾರದ ಶಿಸ್ತಿಗೆ ದಂಗುಬಡಿದೆವು. ಆ ಪತ್ರದಲ್ಲಿ ತೇಜಸ್ವಿ, ’ಕತೆಗಾರನಿಗೆ ಅನ್ಯಾಯವಾಗಬಹುದೆಂದು ಯೋಚಿಸಬೇಡಿ, ನೀವು ಹಾಕಿದ ದುಡ್ಡು ಬರುವಂತೆ ಬದಲಾವಣೆ ಮಾಡಿಕೊಳ್ಳಿ’ ಎಂದು ಬರೆದಿದ್ದರು. ’ಕಿರಗೂರಿನ ಗಯ್ಯಾಳಿಗಳು’ ಕತೆಯನ್ನ ಕೇಳಿದಷ್ಟು ಬೆಲೆಗೆ ಖರೀದಿಸಲಾಯ್ತು. ಆದರೆ ಸಿನಿಮಾ ನಿರೀಕ್ಷಿತ ಗುಣಮಟ್ಟ ಕಾಯ್ದುಕೊಳ್ಳಲಿಲ್ಲ.

ಶಿವಮೊಗ್ಗದ ಗ್ರಂಥಾಲಯಾಧಿಕಾರಿ ಪ್ರೇಮಲತ ಅದೇ ಜಿಲ್ಲೆಯ ಹೊಸ ಕಾರಾಗೃಹದಲ್ಲಿ
ಗ್ರಂಥಾಲಯವನ್ನು ತೆರೆಯಲು ತೀರ್ಮಾನಿಸಿದರು. ಅದರ ಉದ್ಘಾಟನೆಗೆ ರಾಜೇಶ್ವರಿಯವರನ್ನು ಆಹ್ವಾನಿಸಲಾಗಿ ಅವರು ಬರಲೊಪ್ಪಿದ್ದು ನಮಗೆಲ್ಲಾ ಆಶ್ಚರ್ಯವಾಗಿತ್ತು. ನಿಗದಿಯಾದ ದಿನಕ್ಕೆ ರಾಜೇಶ್ವರಿಯವರೊಂದಿಗೆ ಚಿದಾನಂದಗೌಡರು ತಾರಿಣಿಯವರೊಂದಿಗೆ ಬಂದೇಬಿಟ್ಟರು. ಅದು ಹೊಸ ಜೈಲಾಗಿದ್ದರಿಂದ ವಿನೂತನವಾಗಿತ್ತು. ತುಮಕೂರು ಜೈಲಿನ ಮಹಿಳಾ ಕೈದಿಗಳನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಹೆಣ್ಣುಮಕ್ಕಳಿಗಾಗಿ ಕುಶಲ ಕೆಲಸಗಳ ಜೊತೆಗೆ ಒಳ್ಳೆಯ ಗ್ರಂಥಾಲಯವೂ ತೆರೆಯುವುದಿತ್ತು. ರಾಜೇಶ್ವರಿಯಕ್ಕನನ್ನು ನಾನು ಪರಿಚಯಿಸುತ್ತ “ಈ ಜಗತ್ತಿನ ಶ್ರೇಷ್ಠ ಲೇಖಕರಾದ ತೇಜಸ್ವಿಯವರ ಧರ್ಮ ಪತ್ನಿ ರಾಜೇಶ್ವರಿಯವರು ಬಂದಿದ್ದಾರೆ” ಎಂದೆ. “ಇದು ನನ್ನ ಮಾತಲ್ಲ ಲಂಕೇಶರು ಕರ್ನಾಟಕ ಸಂಘಕ್ಕೆ ಬಂದಿದ್ದಾಗ ತೇಜಸ್ವಿಯವರ ಎದುರೇ ಹೇಳಿದ ಮಾತು” ಎಂದೆ; ಇಂತಹ ಯಾವ ಮಾತಿಗೂ ತೇಜಸ್ವಿಯವರಾಗಲಿ ರಾಜೇಶ್ವರಿಯವರಾಗಲಿ ಉಬ್ಬುವವರಾಗಿರಲಿಲ್ಲ.

ಗ್ರಂಥಾಲಯ ಉದ್ಘಾಟಿಸಿದ ರಾಜೇಶ್ವರಿಯಕ್ಕ ಮಹಿಳಾ ಕೈದಿಗಳಿಗೆ ಇಲ್ಲಿನ ಗ್ರಂಥಾಲಯವನ್ನು
ಸದುಪಯೋಗಪಡಿಸಿಕೊಳ್ಳಲು ಹೇಳಿದ್ದಲ್ಲದೆ, ಕೈದಿಗಳ ಸನ್ನಡತೆಯ ಕಾರಣವಾಗಿ ನ್ಯಾಯಾಧೀಶರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಲು ಇರುವ ಕೋರಿಕೆಯ ವಿಷಯಗಳನ್ನು ವಿಸ್ತಾರವಾಗಿ ಹೇಳಿದರು. ಕೈದಿಯೊಬ್ಬರನ್ನು ಕುರಿತು ರಾಜೇಶ್ವರಿಯಕ್ಕ ’ನಿಮ್ಮ ಭಾಷೆ ವಿವರದ ಕ್ರಮ ಚೆನ್ನಾಗಿದೆ, ಇಲ್ಲಿನ ಗ್ರಂಥಾಲಯದಲ್ಲಿ ಓದಿ ಲೇಖಕಿಯಾಗಿ’ ಎನ್ನುತ್ತಾ ’ನೀವ್ಯಾಕೆ ಜೈಲಲಿದ್ದೀರಿ’ ಎಂದು ಪ್ರಶ್ನಿಸಿದರು. ಆ ಹೆಣ್ಣು ಮಗಳು ಗಂಡನ ಕೊಲೆ ಆರೋಪವಿದೆ ಎಂದಾಗ ರಾಜೇಶ್ವರಿಯಕ್ಕ ನಿರುತ್ತರದಾದರು.

ಅವರು ಶಿವಮೊಗ್ಗದಿಂದ ಹೊರಡುವಾಗ ಚಂದ್ರೇಗೌಡ್ರೆ ನೀವು ತಂದಿರೊ “ತೇಜಸ್ವಿ ನೆನಪಲ್ಲಿ” ಪುಸ್ತಕದಲ್ಲಿ ಕೆಲವು ತಪ್ಪು ಅಭಿಪ್ರಾಯಗಳಿವೆ, ಗುರುತು ಮಾಡಿದ್ದೀನಿ, ಮರುಮುದ್ರಣ ಮಾಡುವಾಗ ತೆಗೆದು ಹಾಕಿ ಎಂದರು. ’ಆಯ್ತು ಕಣಕ್ಕ’ ಎಂದೆ. ರಾಜೇಶ್ವರಿ ತುಂಬು ಧೈರ್ಯದ ಅಪರೂಪದ ಕಾಡಿನ ಜೀವ. ತೇಜಸ್ವಿ ತೀರಿಕೊಂಡ ಮೇಲೆಯೂ ಕಾಡಿನಿಂದ ಕದಲಲಿಲ್ಲ. ಆದರೂ ತಮ್ಮ ಶರೀರವನ್ನು ಮೆಡಿಕಲ್ ಕಾಲೇಜಿಗೆ ದಾನಮಾಡಿ ಅಶ್ಚರ್ಯ ಮೂಡಿಸಿದ್ದಾರೆ. ಕುವೆಂಪು ಮತ್ತು ತೇಜಸ್ವಿಯವರು ಕವಿಶೈಲದಲ್ಲಿ ನೆಲೆಗೊಂಡರೆ, ಮಣ್ಣಿಗಾಗಿ ನಿರುತ್ತರ ಅಥವಾ ಕವಿಶೈಲ ಕೈಬಿಡಲು ಅವರು ತೆಗೆದುಕೊಂಡ ತೀರ್ಮಾನ ಸಾಮಾನ್ಯದಲ್ಲ. ಇದೊಂದು ಉತ್ತುಂಗದ ನಡವಳಿಕೆ. ರಾಜೇಶ್ವರಿ ಅಕ್ಕನ ಬದುಕೇ ಅಂತಹದ್ದು. ಶ್ರೇಷ್ಠತೆಗೆ ಉದಾಹರಣೆಯಾಗಿ ನಿಲ್ಲುವಂತಾದ್ದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ರಾಜೇಶ್ವರಿ ತೇಜಸ್ವಿ ನೆನಪು; ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...