Homeಕರ್ನಾಟಕರಾಜೇಶ್ವರಿ ತೇಜಸ್ವಿ ನೆನಪು; ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ

ರಾಜೇಶ್ವರಿ ತೇಜಸ್ವಿ ನೆನಪು; ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ

- Advertisement -
- Advertisement -

ಕೆಲವು ದಿನದ ಹಿಂದೆ ರಾಜೇಶ್ವರಿಯವರ ಜೀವನೋತ್ಸಾಹ ಕುರಿತು ಕಿರುಲೇಖನವೊಂದನ್ನು ಬರೆದಿದ್ದೆ. ಆದರೆ ಇಷ್ಟು ಬೇಗ ಅವರು ಆಗಲಿ ಹೋಗುತ್ತಾರೆ ಎಂದು ಭಾವಿಸಿರಲಿಲ್ಲ. ಸ್ವಲ್ಪ ದಿನದ ಹಿಂದೆ ಮಾತನಾಡಿದಾಗ ಹಿಮೋಗ್ಲೋಬಿನ್ ಕಡಿಮೆ ಆಗಿದೆ, ಸ್ವಲ್ಪ ಆಯಾಸ ಅನಿಸುತ್ತದೆ ಅಂದಿದ್ದರು. ನಾಡಿದ್ದು ಡಿಸೆಂಬರ್ ಹನ್ನೊಂದಕ್ಕೆ 84 ತುಂಬಿ 85ಕ್ಕೆ ಅಡಿಯಿಡುತ್ತೇನೆ, ಆಯಾಸ ಸಹಜ ಅಂತ ಅವರೇ ಹೇಳಿದರು. ತಮ್ಮ ಅಂತಸ್ತಿನ ಅಹಮಿಕೆ ಇಲ್ಲದೆ ತುಂಬಾ ಸರಳವಾಗಿ ಮಾತನಾಡುತ್ತಿದ್ದ ಅವರ ಜತೆ ಮಾತು ನನಗೆ ಯಾವಾಗಲೂ ಖುಷಿ ಕೊಡುತ್ತಿತ್ತು.

ಮೊನ್ನೆ ಜುಲೈ 23, ಎಂದೂ ಬಾರದ ದಾಖಲೆ ಮಳೆ ಒಂದೇ ದಿನ ಬಂತು, ಮರುದಿನವೂ ಮುಂದುವರೆಯಿತು. ತೋಟದ ಮನೆಯಲ್ಲಿ ಒಬ್ಬರೇ ಇರುವ ಅವರಿಗೆ ಯೋಗಕ್ಷೇಮ
ವಿಚಾರಿಸಲು ಕಾಲ್ ಮಾಡಿದೆ.. “ಹಲೋ ಏನ್ರೀ, ನಿಮ್ಮ ಕಡೆ ಭಾರಿ ಮಳೆ ನಾ?” ಅವರೆ ಮೊದಲು ವಿಚಾರಿಸಿದರು.

“ಹೌದು ನಾನು ಹುಟ್ಟಿದ ಮೇಲೆ ಇಂತಹ ಮಳೆ ಕಂಡಿರಲಿಲ್ಲ, ನೀವು ಹೇಗಿದೀರಿ” ನಾನು ಕೇಳಿದೆ. “ನನಗೇನು, ಆರಾಮಾಗಿ ಇದೀನಿ, ಮಗಳು ಬಂದಿದ್ದಾಳೆ”. “ಒಹೋ ಮೊಮ್ಮಕ್ಕಳ ಜತೆ ಮಜಾ”, ಅಂದೆ ನಾನು.

“ಈಗ ಮಳೆ ಕಾರಣ ಹೊರಗೆ ಅಂಗಳದಲ್ಲಿ ಗಿಡದ ಕೆಲಸ ಮಾಡುವಂತಿಲ್ಲ, ಮತ್ತೆ ಏನು ಚಟುವಟಿಕೆ ನಡೆಯುತ್ತಿದೆ” ಅಂತ ಕೇಳಿದೆ. “ಒಬ್ಬರು ಪ್ರಕಾಶಕರು ನನ್ನ ಬಿಡಿ ಲೇಖನಗಳನ್ನು ಪ್ರಕಟಿಸುತ್ತೇವೆ ಅಂತ ಹೇಳಿದ್ದಾರೆ. ಅದರ ಪ್ರೂಫ್ ನೋಡುತ್ತಿದ್ದೇನೆ” ಅಂದರು. “ಒಹೋ, ಮೂರನೆಯ ಪುಸ್ತಕ” ಅಂದೆ ನಾನು. (ಅಭಿನವ ಪ್ರಕಾಶನದಿಂದ ’ನನ್ನ ಡ್ರೈವಿಂಗ್ ಡೈರಿ’ ಎಂಬ ಹೆಸರಿನಲ್ಲಿ ಆ ಪುಸ್ತಕ ಪ್ರಕಟವಾಗುತ್ತಿದೆ.)

“ಹೂಗಿಡಗಳು ಹೇಗಿವೆ?”, “ಎಲ್ಲ ಫಸ್ಟ್ ಕ್ಲಾಸ್ ಆಗಿವೆ. ಮೊನ್ನೆ ಕಿತ್ತಳೆ ಬಣ್ಣದ ದೆಂದ್ರೋಬಿಯಂ ಆರ್ಕಿಡ್ ಅರಳಿತ್ತು. ನಿಮ್ಮ ನೆನಪಾಯ್ತು. ಈಗ ಹತ್ತು ಪಾಟ್‌ಗಳಲ್ಲಿ ಡೋವ್ ಆರ್ಕಿಡ್ ಮೊಗ್ಗು ಬಿಟ್ಟಿದೆ” ಮಾತಿನಲ್ಲಿ ಉತ್ಸಾಹ ಸದಾ. “ನಾನು ಅಡಿಗೆ ಆಯ್ತಾ?” ಕೇಳಿದೆ, “ಇಲ್ಲ ಇನ್ನೂ ಆಗ್ತಾ ಇದೆ. ಮಕ್ಕಳು ಮನೆಯಲ್ಲಿ ಇದಾರಲ್ಲ, ಚಿಕನ್ ಫ್ರೈ ಮತ್ತು ಸಾರು, ಬೀನ್ಸ್ ಮತ್ತು ಕಾಳಿನಪಲ್ಯ ಅಂದರು”.”ನಾನು ಒಹೋ ಒಳ್ಳೇ ಗಮ್ಮತ್ತು” ಅಂದೆ.

ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಎಂದಿನ ಉತ್ಸಾಹವೇ ಇರುತ್ತದೆ. ಸಾಮಾನ್ಯವಾಗಿ ಅವರ ಮೆನುವಿನಲ್ಲಿ ಮೂರು ತರಕಾರಿ ಐಟಂಗಳಿರುತ್ತವೆ.. ಒಂದು ಪಲ್ಯ, ಚಟ್ನಿ, ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಕೆಸುವಿನ ದಂಟಿನ ಅಥವಾ ಸೊಪ್ಪಿನ ಪಲ್ಯಗಳು, ಪತ್ರೊಡೆ, ಪಕೋಡಗಳು ಹೀಗೆ.. ಮಲೆನಾಡಿನ ವಿಶೇಷಗಳು. ಎಂಭತ್ನಾಲ್ಕರ ಈ ಪ್ರಾಯದಲ್ಲಿಯು ತಮ್ಮ ಅಡಿಗೆಯನ್ನು ತಾವೇ ಮಾಡಿಕೊಳ್ಳಲು ಅವರಿಗೆ ಇಷ್ಟ ಮತ್ತು ಉತ್ಸಾಹ ಇರ್ತಾ ಇತ್ತು. ಮಳೆಗಾಲದಲ್ಲಿಯೂ ಮನೆಯ ಹಿಂಭಾಗದ ಜಗಲಿಯಲ್ಲಿ ಕುಳಿತು ಬಚ್ಚಲೊಲೆಯ ಬೆಂಕಿ ಉರಿಸಿ ನೀರು ಕಾಯಿಸುತ್ತಾರೆ. ತೋಟದಲ್ಲಿ ಅಷ್ಟೊಂದು ಕಟ್ಟಿಗೆ ಇರುತ್ತಲ್ಲ ಒಲೆ ಉರಿಸಿದರೆ ಹಂಡೆಯ ನೀರು ಇಡೀ ದಿನ ಬಿಸಿ ಇರುತ್ತಲ್ಲ ಅನ್ನುತ್ತಾರೆ. ಬಹುಶಃ ಒಲೆ ಉರಿಸಿ ನೀರು ಕಾಯಿಸುವ ಕೆಲಸ ಅವರಿಗೆ ಹಳೆಯ ಬೆಚ್ಚನೆ ನೆನಪು ತರುತ್ತಿರಬಹುದು. ಹಿಂಭಾಗದ ತೆರೆದ ಸಿಟೌಟ್‌ನ ಒಂದು ಬದಿಗೆ ಬಚ್ಚಲ ಒಲೆ ಇದೆ. ಹೊರಗಡೆ ಕಾಣುವ ಹೂ, ಹಕ್ಕಿ, ಹೊಳೆಯುವ ಕೆರೆ ನೀರನ್ನು ನೋಡುತ್ತಾ ಒಲೆ ಉರಿಸಿ ಚಳಿ ಕಾಯಿಸುತ್ತ ಹಳೆಯ ದಿನಗಳನ್ನು ಮೆಲಕು ಹಾಕಬಹುದು. ಇವೆಲ್ಲವೂ ಈಗ ನೆನಪಾಗುತ್ತಿದೆ.

ಅವರ ಊರಿನ ಸಮೀಪ ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ, ಅವರಿಗೆ ಬಿಡುವಿದ್ದರೆ ಹೋಗಿ ಮಾತಾಡಿಕೊಂಡು ಬರಬಹುದು ಅಂತ ಫೋನ್ ಮಾಡಿದ್ರೆ ಬನ್ನಿ ಮಾರಾಯರೇ ಅಂತ ಹೇಳಿ ನಾವು ಹೋಗುವುದರೊಳಗೆ ತಿಂಡಿ ಮಾಡಿ ಇಡುವುದು ಅವರ ರೀತಿ.

ಆಲೂ ಪಲ್ಯವನ್ನು ಬ್ರೆಡ್ ಸ್ಲೈಸ್ ಒಳಗೆ ಇಟ್ಟು ಎಣ್ಣೆಯಲ್ಲಿ ಕರಿದು ಮಾಡುವ ಬ್ರೆಡ್ ಬೋಂಡಾ ತುಂಬಾ ರುಚಿ. ಹಾಗೆ ಸರಳವಾಗಿ ಇಡೀ ಬೀನ್ಸ್ ಮಧ್ಯೆ ಸೀಳಿ ಮಾಡುವ ಫ್ರೆಂಚ್ ಫ್ರೈ ಕೂಡ. ಎಷ್ಟು ಬೇಕೋ ಅಷ್ಟೇ ಸಮಯ ಹುರಿದು, ಕರಿದು ಬೇಯಿಸಿ ಪದಾರ್ಥಗಳ ರುಚಿ ಹೆಚ್ಚಿಸುವುದೇ ಅಡಿಗೆ. ಅದು ಅವರಿಗೆ ಸಿದ್ಧಿಸಿತ್ತು. ತೋಟದ ಕೆಲಸ, ನಿರ್ವಹಣೆ, ಬರವಣಿಗೆ, ಎಲ್ಲದರಲ್ಲೂ ಅವರದೇ ವೈಶಿಷ್ಟ್ಯ ಇತ್ತು.

ತುಂಬಾ ಆತ್ಮವಿಶ್ವಾಸದ ನಡೆ, ನೇರ ನಿಷ್ಠುರ ನುಡಿಯ ಅವರು ಎಂದೂ ಬೇರೆಯವರ ಕುರಿತು ಟೀಕೆ ಟಿಪ್ಪಣಿ ಮಾಡುತ್ತಿರಲಿಲ್ಲ. ಯಾರಾದರೂ ಮನಸಿಗೆ ನೋವಾಗುವಂತೆ ನಡೆದುಕೊಂಡಿದ್ದು ಹೇಳಿದರೆ, “ಬಿಟ್‌ಹಾಕ್ರಿ, ಬುದ್ಧಿ ಇಲ್ಲದವರ ಮಾತಿಗೆ ಬೆಲೆ ಕೊಡಬಾರದು.. ನಮ್ಮ ಜೀವನ ನಮ್ಮದು” ಅನ್ನುವರು. ಪ್ರತಿ ವಿಷಯದ ಕುರಿತು ಅವರಿಗೆ ಖಚಿತ ಅಭಿಪ್ರಾಯವಿತ್ತು. ಸಮಕಾಲೀನ ಸಾಮಾಜಿಕ ರಾಜಕೀಯ ಆಗುಹೋಗುಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಪುಸ್ತಕ ಬಿಡುಗಡೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಅಹ್ವಾನಿಸಿದರೆ ಹೋಗುತ್ತಿದ್ದರು. ಆರು ದಶಕಗಳ ಹಿಂದೆ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿರುವುದರಿಂದ, ತತ್ವಶಾಸ್ತ್ರ ಓದಿನಲ್ಲಿ ಆಸಕ್ತಿಯನ್ನು ಹಾಗೆಯೇ ಉಳಿಸಿಕೊಂಡಿದ್ದರು. ಗಂಭೀರ ಸಾಹಿತ್ಯದ ಓದು ಅವರಿಗಿಷ್ಟವಾಗಿತ್ತು.

ಸಂಗೀತದಲ್ಲಿ ಆಸಕ್ತಿ ಇದ್ದದ್ದರಿಂದ ಸಂಗೀತ ಕೇಳುವುದು, ಚಂದನ ವಾಹಿನಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ನೋಡುವುದು, ಇಷ್ಟವಾದ ಇಂಗ್ಲಿಷ್ ಮತ್ತು ಕನ್ನಡ ಪುಸ್ತಕ ಓದುವುದು, ಮನೆ ಕೆಲಸ, ಹೂಗಿಡಗಳ ಕೆಲಸ, ಕೋವಿಡ್ ಸಮಯದಲ್ಲಿಯೂ ಬರುತ್ತಿದ್ದ ವಿಸಿಟರ್‌ಗಳನ್ನ ದೂರದಿಂದಲೇ ಮಾತಾಡಿಸಿ ಕಳಿಸುವುದು ಇವುಗಳು ಅವರಿಗೆ ಅಚ್ಚುಮೆಚ್ಚು. “ಈ ಕೆಲಸಗಳ ಮಧ್ಯೆ ಯಾರನ್ನು ಮಾತಾಡಿಸಲು ಸಮಯವೇ ಇಲ್ಲ ಕಣ್ರ್ರಿ… ತೋಟದ ಕೆಲಸ, ಆಳುಗಳಿಗೆ ಬಟವಾಡೆ ಲೆಕ್ಕ ಬರೆಯುವುದು, ಪುರುಸೊತ್ತೇ ಇಲ್ಲ, ಯಾರಾದರೂ ಬಂದರೆ ಕೆಲಸ ಹಾಳು” ಎನ್ನುತ್ತಿದ್ದರು. ಎಂಭತ್ತನಾಲ್ಕನೇ ವಯಸ್ಸಿನಲ್ಲಿಯು ತಮ್ಮನ್ನು ಬ್ಯುಸಿ ಆಗಿ ದೈನಿಕಗಳಲ್ಲಿ ತೊಡಗಿಸಿಕೊಂಡ ಅವರ ಕುರಿತು ನನಗೆ ಅಪಾರ ಮೆಚ್ಚುಗೆ.

ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳಿಗೆ ತಾವೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ದರು. ಯಾರ ಸಹಾಯವನ್ನು ನಿರೀಕ್ಷಿಸದ ಅವರ ಸ್ವಾವಲಂಬಿ ಮನೋಭಾವ ನನಗೆ ಯಾವಾಗಲೂ ಇಷ್ಟವಾದದ್ದು. ಯಾವತ್ತೂ ಯಾರನ್ನೂ ನಿಂದಿಸದೆ, ಆಕ್ಷೇಪಿಸದೆ ತಮ್ಮಷ್ಟಕ್ಕೆ ತಾವು ಲವಲವಿಕೆಯ ಬದುಕು ರೂಪಿಸಿಕೊಂಡಿದ್ದ ರಾಜೇಶ್ವರಿ ತೇಜಸ್ವಿ ಅವರ ಜೊತೆಗೆ ಮಾತಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತಿತ್ತು.

ರಾಜೇಶ್ವರಿಯವರನ್ನು ಮೊದಲು ನೋಡಿದ್ದು ನಾನು ಮೈಸೂರಿನಲ್ಲಿ ಎಂಎ ಓದುತ್ತಿದ್ದಾಗ. ಒಮ್ಮೆ ಮಾತ್ರ. ತೇಜಸ್ವಿಯವರ ಸೋದರ ಸಂಬಂಧಿ ಅನಲ, ಆಗ ಕುವೆಂಪು ಮನೆಯಿಂದ ಗಂಗೋತ್ರಿಗೆ ಬರುತ್ತಿದ್ದಳು. ನನ್ನ ಸಹಪಾಠಿ ಅವಳು. ಅವಳ ತಂದೆ ಕರ್ನಾಟಕ ಸರ್ಕಾರದ ಕಾನೂನು ಕಾರ್ಯದರ್ಶಿಯಾಗಿದ್ದರು. ಅವರು ತೀರ್ಥಹಳ್ಳಿಯ ನಂಬಲದವರು. ಅನಲ ನನ್ನ ಗೆಳತಿಯಾದುದರಿಂದ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದೆ. ಒಮ್ಮೆ ನಾವಿಬ್ಬರೂ ಸಿಟಿಗೆ ಹೊರಟಾಗ ಅವಳ ದೊಡ್ಡಮ್ಮ ಹೇಮಾವತಿಯವರು “ಕೆಆರ್ ಸರ್ಕಲ್‌ನಲ್ಲಿ ಶಂಕರ್ ಟೈಲರ್‍ಸ್ ಹತ್ತಿರ, ರಾಜೇಶ್ವರಿ ಬ್ಲೌಸ್ ಹೊಲಿಯಲು ಕೊಟ್ಟಿದ್ದಾಳೆ. ತನ್ನಿ” ಎಂದು ಒಂದು ವೈರ್ ಬುಟ್ಟಿ ತಂದುಕೊಟ್ಟರು. ಅನಲ ಅದನ್ನು ನೋಡಿ ನಗತೊಡಗಿದಳು. ಪಾಪ ಅವರು “ಯಾಕೆ ನಗುತ್ತಿದ್ದೀಯ” ಅಂದರು. ಅಲ್ಲಿಯೇ ಇದ್ದ ತಾರಿಣಿ “ಬ್ಯಾಗ್ ಅವರ ಸ್ಟೈಲ್‌ಗೆ ಕಡಿಮೆ” ಅಂತ ಅಂದರು. ನಾನು ಹಾಸ್ಟೆಲ್ ಹುಡುಗಿಯರು ಶಂಕರ್ ಟೈಲರ್‍ಸ್ ಹತ್ತಿರ ತಮ್ಮ ಡ್ರೆಸ್ ಹೊಲಿಸುವುದನ್ನು ನೋಡಿದ್ದೆ, ಬಹಳ ಚೆನ್ನಾಗಿ ಹೊಲಿಯುತ್ತಾರೆ ಎಂದು ನಾನೂ ಹೊಲಿಸಿದೆ. ಮೂಡಿಗೆರೆಯಲ್ಲಿದ್ದ ರಾಜೇಶ್ವರಿ ಮೈಸೂರಿನಲ್ಲಿ ಬ್ಲೌಸ್ ಹೊಲಿಸುವುದು ಕೇಳಿ ಬಹಳ ಸ್ಟೈಲ್, ಆಧುನಿಕರು ಅಂದುಕೊಂಡೆ.

ಆಮೇಲೆ ಅವರನ್ನು ನೋಡಿದ್ದು ಹದಿನೈದು ವರ್ಷಗಳ ನಂತರ ಕುಪ್ಪಳಿಯಲ್ಲಿ. ಕುವೆಂಪು ತೊಂಭತ್ತು ಕಾರ್ಯಕ್ರಮದಲ್ಲಿ. ಆಮೇಲೆ ಅವರು ಕುಪ್ಪಳಿಯ ಸಾಹಿತ್ಯ ಅಧ್ಯಯನ ಶಿಬಿರಗಳಿಗೆ, ಇನ್ನಿತರ ಬೇರೆ ಕಾರ್ಯಕ್ರಮಗಳಿಗೆ ತೇಜಸ್ವಿ ಜತೆಗೆ ಬರುತ್ತಿದ್ದರು. ಬಹಳ ಸದಭಿರುಚಿಯ ವೇಷ ಭೂಷಣ ಅವರದು.

ನಾವು ಕರೆದಾಗ ಇಲ್ಲ ಅನ್ನದೆ ತೀರ್ಥಹಳ್ಳಿಯಲ್ಲಿ ನಡೆದ ಮಹಿಳಾ ವೇದಿಕೆ ಕಾರ್ಯಕ್ರಮಕ್ಕೆ ತೇಜಸ್ವಿ ಜತೆ ಬಂದರು. ನಮ್ಮ ಕಾಲೇಜು ಕಾರ್ಯಕ್ರಮಕ್ಕೂ ಬಂದರು. ನಮ್ಮ ಮನೆಗೂ ಎರಡು ಸಲ ಬಂದರು. ಹಾಗೆ ಚಿಕ್ಕಮಗಳೂರಿನ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೋದಾಗ ನಾವೂ ಅವರ ಮನೆಗೆ ಹೋದೆವು. ತೇಜಸ್ವಿ ಇದ್ದಾಗ ಎರಡು ಸಲ ಹೋಗಿದ್ದೆವು. ಒಮ್ಮೆ ನನ್ನ ಕಸಿನ್ ಒಬ್ಬಳ ಮದುವೆ ಆದಾಗ ಅವರ ಮನೆಯಿಂದ ಅಲ್ಲಿಗೆ ಹೋಗಿದ್ದೆವು. ತೇಜಸ್ವಿ ತಮ್ಮನ್ನು ಕಾಫೀ ಪ್ಲಾಂಟರ್ ಅಂತ ಗುರುತಿಸಿಕೊಳ್ಳುತ್ತಿರಲಿಲ್ಲ ಎಂದು ಆಗಲೇ ನನಗೆ ತಿಳಿದಿದ್ದು. ಮತ್ತೊಮ್ಮೆ ಕುವೆಂಪು ಶತಮಾನೋತ್ಸವಕ್ಕೆ ಭಾಷಣ ಮಾಡಲು ಚಿಕ್ಕಮಗಳೂರಿಗೆ ಹೋದಾಗ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಮೋಹಿನಿ ಸಿದ್ಧೇಗೌಡರು ಸಂಜೆಯ ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ಉಳಿಯಲು ಅವರ ಮೂಡಿಗೆರೆಯ ಮುದ್ರೆಮನೆ ತೋಟಕ್ಕೆ ಕರೆದುಕೊಂಡು ಹೋದರು. ಮಾತಿನ ಮಧ್ಯೆ, “ಅಲ್ಲಿದ್ದ ಭಾಸೆಗೌಡ ಅನ್ನುವ ಪ್ಲಾಂಟರ್ ಆನೆ ಸಾಕಿದ್ದರು. ತೇಜಸ್ವಿಯವರ ’ಕೃಷ್ಣೆಗೌಡರ ಆನೆ ಕಥೆ’ಗೆ ಅದೇ ಸ್ಪೂರ್ತಿ” ಅಂದರು. ತೇಜಸ್ವಿ ಮನೆ ಇಲ್ಲೇ ಹತ್ತಿರ ಎಂದು ಬೆಳಿಗ್ಗೆ ತಿಂಡಿಯ ನಂತರ ತೇಜಸ್ವಿಯವರ ಮನೆಗೆ ಹೋದೆವು. ಮೋಹಿನಿ ಹೀಗೆ ಬರುತ್ತಿದ್ದೇವೆ ಎಂದು ಫೋನ್ ಮಾಡಿದ್ದರಿಂದ ರಾಜೇಶ್ವರಿ, ತೇಜಸ್ವಿ ಮೂಲಕ ಮೂಡಿಗೆರೆಯಿಂದ ಕೇಕ್ ಮತ್ತು ಸ್ವೀಟ್ಸ್ ತರಿಸಿದ್ದರು. ಅವರು ಮೂವರು ಬಹುಕಾಲದ ಪರಿಚಿತರು ಆತ್ಮೀಯವಾಗಿ ಮಾತನಾಡುತ್ತಾ ಕುಳಿತರು. ಮೋಹಿನಿಯವರು ಬಿಜೆಪಿ ಪಕ್ಷದ ರಾಜಕಾರಣಿ. ತೇಜಸ್ವಿ ಮೋಹಿನಿ ಅವರ ರಾಜಕಾರಣ ಒಪ್ಪದಿದ್ದರೂ ಸ್ನೇಹಕ್ಕೆ ಅದೇನೂ ಅಡ್ಡಿಯಾಗಿರಲಿಲ್ಲ. ಇವತ್ತು ಸಿದ್ಧಾಂತಗಳ ಹೆಸರಿನಲ್ಲಿ ಧ್ರುವೀಕರಣಕ್ಕೆ ಮುಂದಾಗುವವರು ಇದನ್ನು ಗಮನಿಸಬೇಕು.

ಮತ್ತೆ ಹೋದಾಗ ತೇಜಸ್ವಿ ಇಲ್ಲದ ನಿರುತ್ತರ ಮೌನ ತಾಳಿತ್ತು. ಆದರೆ ರಾಜೇಶ್ವರಿಯವರ ಜೀವಂತಿಕೆ ಅವರಿಗೆ ಸುಮ್ಮನಿರಲು ಬಿಡಲಿಲ್ಲ. ತೇಜಸ್ವಿ ನೆನಪುಗಳನ್ನು ಬರೆದರು. ಹಸ್ತಪ್ರತಿಯಲ್ಲಿಯೇ ಓದಲು ಅವಕಾಶ ಕೊಟ್ಟರು. ಆಮೇಲೆ ನಿಮ್ಮ ಬಾಲ್ಯದ ಕುರಿತು ನೀವು ಏನೂ ಬರೆದಿಲ್ಲ ಅಂದಾಗ, “ನಮ್ಮ ಮನೆಗೂ ಬಂದರು ಗಾಂಧೀಜಿ” ಬರೆದರು. ಮುನ್ನುಡಿ ಬರೆದುಕೊಡಿ ಅಂದರು. ಹಿರಿಯರು ಯಾರಾದರೂ ಬರೆಯಲಿ ಅಂದೆ ನಾನು. ಇಲ್ಲ ನೀವೇ ಬರೆಯಿರಿ ಅಂತ ಬರೆಸಿಕೊಂಡರು. ಎರಡೂ ಪುಸ್ತಕಗಳು ಮರುಮುದ್ರಣ ಆದವು. ಬಹುಮಾನ ಪಡೆದವು. ಈಗ ಮೂರನೇ ಪುಸ್ತಕ ಹೊರ ಬರುತ್ತಿದೆ..

ಒಮ್ಮೆ ಕೊಲ್ಲಾಪುರದಿಂದ ಗೆಳತಿ ನಾಗರತ್ನ ಬಂದಾಗ ಚಿಕ್ಕಮಗಳೂರಿಗೆ ಹೋಗುವ ದಾರಿಯಲ್ಲಿ ಅವರ ಮನೆಗೆ ಹೋಗಿದ್ದೆವು. ಕಲ್ಕತ್ತದಿಂದ ಬಂದ ಅನಲ ಚಿಕ್ಕಮಗಳೂರಿನ ಶಾರದಾ ಮಠದಲ್ಲಿದ್ದಾರೆಂದು ತಿಳಿದು ನೋಡಲು ಹೋಗಿದ್ದೆ. ರಾಜೇಶ್ವರಿ ಅಕ್ಕನ ಮನೆ ಎಷ್ಟು ದೂರ ಅಂದಾಗ ಅರ್ಧ ಗಂಟೆ ಅಂದೆ. ಹಾಗಾದರೆ ಅವರನ್ನು ನೋಡಬಹುದಿತ್ತು ಅಂದಾಗ ಕರೆದುಕೊಂಡು ಹೋದೆ. ಒಬ್ಬರು ಸನ್ಯಾಸಿ, ಇನ್ನೊಬ್ಬರು ತೀವ್ರ ಜೀವನಾಸಕ್ತಿ ಉಳ್ಳವರು! ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವುದು ಆಸಕ್ತಿದಾಯಕವಾಗಿತ್ತು. ಅವರ ಜೀವನಾಸಕ್ತಿ ನೋಡಿದವರು ಯಾರೂ ಅವರಿಗೆ 84 ವರ್ಷ ಎಂದು ಹೇಳುವಂತಿರಲಿಲ್ಲ. ಒಂದು ಹಲ್ಲು ಸಹ ಬಿದ್ದಿರಲಿಲ್ಲ. ನಮ್ಮ ತಾಯಿ ನಮ್ಮನ್ನೆಲ್ಲಾ ಗಟ್ಟಿಯಾಗಿ ರೂಪಿಸಿ ಭೂಮಿಗೆ ತಂದಿದ್ದಾರೆ ಅನ್ನುತ್ತಿದ್ದರು. ವಯಸ್ಸಿನಲ್ಲಿ ರಾಜೇಶ್ವರಿ, ತೇಜಸ್ವಿಯವರಿಗಿಂತ ಒಂದು ವರ್ಷ ಹಿರಿಯರು. ಮೈಸೂರಿನಲ್ಲಿ ಓದುವಾಗ ತೇಜಸ್ವಿಯವರ ಪರಿಚಯ, ಪ್ರೀತಿ ಆಗಿ ಮದುವೆ ಆಗುವುದಾಗಿ ನಿರ್ಧರಿಸಿದಾಗ ತೇಜಸ್ವಿ ಇನ್ನೂ ಯಾವುದೇ ಉದ್ಯೋಗದಲ್ಲಿ ನೆಲೆ ನಿಂತಿರಲಿಲ್ಲ. ರಾಜೇಶ್ವರಿಯವರ ಅಣ್ಣ ಮೂಡಿಗೆರೆ ಸಮೀಪ ಭೂತನ ಕಾಡಿನಲ್ಲಿ ಕಾಫಿ ತೋಟ ಮಾಡುತ್ತಿದ್ದರು. ರಾಜೇಶ್ವರಿಯವರು ತಾಯಿ ಮತ್ತು ಅಣ್ಣನ ಜತೆ ಭೂತನ ಕಾಡಿನ ಮನೆಯಲ್ಲಿದ್ದರು. ತೇಜಸ್ವಿ ಸಮೀಪದ ಜನ್ನಾಪುರದ ಬಳಿ ಜಮೀನು ಕೊಂಡು ಮನೆ ಕಟ್ಟಿ ರಾಜೇಶ್ವರಿಯವರನ್ನು ಮದುವೆ ಆಗುವವರೆಗೆ ದೀರ್ಘ ಐದು ವರ್ಷಗಳು ಕಳೆದಿದ್ದವು. ಅದೊಂದು ತಪಸ್ಸಿನ ತರಹ ಇತ್ತು ಎಂದು ರಾಜೇಶ್ವರಿ ಹೇಳಿದ್ದರು.

ತೇಜಸ್ವಿಯವರ ಜತೆಗಿನ ದಾಂಪತ್ಯ ಕುರಿತು ’ನನ್ನ ತೇಜಸ್ವಿ’ ಎಂಬ ಪುಸ್ತಕ ಬರೆದಿದ್ದಾರೆ. ತಮ್ಮ ಬಾಲ್ಯವನ್ನು ಕುರಿತು ’ನಮ್ಮ ಮನೆಗೂ ಗಾಂಧೀಜಿ ಬಂದರು’ ಎಂಬ ಪುಸ್ತಕ ಬರೆದಿದ್ದಾರೆ. ಈಗ ಮೂರನೆಯ ಪುಸ್ತಕ ’ನನ್ನ ಡ್ರೈವಿಂಗ್ ಡೈರಿ’ ಅಭಿನವ ಪ್ರಕಾಶನದಿಂದ ಪ್ರಕಟಣೆಯ ಹಂತದಲ್ಲಿದೆ. ಮಕ್ಕಳು ಮೊಮ್ಮಕ್ಕಳ ಜತೆಗಿನ ೮೪ ವರ್ಷಗಳ ತುಂಬು ಜೀವನದ ಬಳಿಕ ರಾಜೇಶ್ವರಿ ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಮಾದರಿ ವ್ಯಕ್ತಿತ್ವ, ಋಜು ಸ್ವಭಾವ ಮುಂದಿನ ಪೀಳಿಗೆಗೆ ಆದರ್ಶವಾಗಿದೆ.

ಅವರ ಆತ್ಮಕ್ಕೆ ಶಾಂತಿ ಕೋರುವೆ..

ಎಲ್ ಸಿ ಸುಮಿತ್ರಾ

ಎಲ್ ಸಿ ಸುಮಿತ್ರಾ
ಕವಿ, ವಿಮರ್ಶಕಿ, ಕಥೆಗಾರ್ತಿ ಸುಮಿತ್ರಾ ತೀರ್ಥಹಳ್ಳಿ ಮೂಲದವರು. ಬಕುಲದ ದಾರಿ (ಕಾವ್ಯ), ಗದ್ದೆಯಂಚಿನ ದಾರಿ (ಪ್ರಬಂಧಗಳು), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ (ಕಥೆಗಳು), ಅಂಗೈ ಅಗಲದ ಆಕಾಶ (ಸ್ಮೃತಿ ಚಿತ್ರಗಳು) ಅವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಕನ್ನಡಪರ ಹೋರಾಟಗಾರರನ್ನು ಬೆಂಬಲಿಸಿದ ಕನ್ನಡ ಚಿತ್ರರಂಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...