Homeಚಳವಳಿಅಸಮಾನತೆಯ ಜೊತೆಗೆ ಗೆಲುವು-ಸೋಲಿನ ಸ್ಪರ್ಧೆಯ ನಂಟು; ’ತನ್ನಂತೆ ಪರರ ಬಗೆವ’ ದಾರಿಯಲ್ಲಿ ಸಮುದಾಯಗಳ ಒಳಿತು

ಅಸಮಾನತೆಯ ಜೊತೆಗೆ ಗೆಲುವು-ಸೋಲಿನ ಸ್ಪರ್ಧೆಯ ನಂಟು; ’ತನ್ನಂತೆ ಪರರ ಬಗೆವ’ ದಾರಿಯಲ್ಲಿ ಸಮುದಾಯಗಳ ಒಳಿತು

- Advertisement -
- Advertisement -

ತೀರಾ ಈಚೆಗೆ ಕೊರಿಯಾ ದೇಶದಲ್ಲಿ ತಯಾರಾದ ಸ್ಕ್ವಿಡ್‌ಗೇಮ್ ಎಂಬ ವೆಬ್ ಸೀರಿಸ್ ಜಾಗತಿಕವಾಗಿ ಬಹು ಜನಪ್ರಿಯವಾಯಿತು. ಅದರ ಮುಂದಿನ ಸರಣಿಗಾಗಿ ಜನ ಹಾತೊರೆಯುತ್ತಿದ್ದಾರೆಂಬ ಸುದ್ದಿಗಳನ್ನು ಹರಡಲಾಯಿತು. ಅದೇನೇ ಇರಲಿ. ಆ ಸರಣಿಯಲ್ಲಿ ಇದ್ದುದಾದರೂ ಏನು? ಕೆಲವು ಜನರು ದೊಡ್ಡ ಮೊತ್ತದ ಬಹುಮಾನವನ್ನು ಗೆಲ್ಲುವ ಗುರಿಯನ್ನಿರಿಸಿಕೊಂಡು ಒಂದು ಆಟದಲ್ಲಿ ಪಾಲ್ಗೊಳ್ಳುತ್ತಾರೆ. ಆಟದ ಶರತ್ತುಗಳು ಬಲು ಕಠಿಣವಾಗಿರುತ್ತವೆ. ಒಂದೊಂದು ಹಂತವನ್ನು ಗೆದ್ದವರು ಮುಂದಿನ ಹಂತಕ್ಕೆ ಸಾಗುತ್ತಾರೆ. ಸೋತವರು ಆಟದಲ್ಲೇ ಸಾಯುತ್ತಾರೆ. ಕೊನೆಗೇನಾಗುತ್ತದೆ ಎಂಬುದನ್ನು ಬದಿಗಿಡೋಣ. ಈ ಪೈಪೋಟಿ, ಸ್ಪರ್ಧೆ, ಮೇಲಾಟಗಳು ಇಂದಿನ ಬದುಕಿನಲ್ಲಿ ಎರಡು ಬಗೆಗಳಲ್ಲಿ ನೆಲೆಗೊಂಡಿವೆ. ಒಂದು: ಅಂತಹ ಮೇಲಾಟಕ್ಕೆ ಎಲ್ಲರೂ ಸಿದ್ಧರಾಗಿರುವುದು ಮತ್ತು ಎರಡು: ಅಂತಹ ಮೇಲಾಟಗಳು ಮತ್ತು ಸೋಲುಗೆಲುವುಗಳನ್ನು ಜನರು ತಮ್ಮ ದೈನಂದಿನ ಲಯದಲ್ಲಿ ಸಹಜವೆಂಬಂತೆ ಒಪ್ಪಿಕೊಂಡಿರುವುದು.

ನಮ್ಮ ಸುತ್ತಣ ಪರಿಸರವನ್ನು ನೋಡೋಣ. ಇಂತಹ ಪೈಪೋಟಿಗಳಿಲ್ಲದ ತಾಣವೇ ಕಾಣಸಿಗದು. ಶಾಲೆಗೆ ಹೋಗುವ ಮಕ್ಕಳು ಗೆಲ್ಲಲು ಹಾತೊರೆಯುವಂತೆ ಮಾಡಲಾಗುತ್ತದೆ. ಗೆಲ್ಲಲಾರದವರು ಹಿಂದಕ್ಕುಳಿಯುವರೆಂಬ ಗುಮ್ಮನನ್ನು ಎದುರಿಗಿಟ್ಟು ಎಲ್ಲರೂ ಗೆಲ್ಲಲು ಮುನ್ನುಗ್ಗುವಂತೆ ಮಾಡಲಾಗುತ್ತದೆ. ಆರ್ಥಿಕ ವಲಯದಲ್ಲಂತೂ ಈ ಪೈಪೋಟಿಗೆ ಎಂದೆಂದೂ ಸಾಟಿಯಿಲ್ಲದ ದಾರಿಗಳನ್ನು ಗುರಿಗಳನ್ನು ಕಟ್ಟಿಕೊಡಲಾಗಿದೆ. ಇಂತಹ ಹಲವು ವಲಯಗಳನ್ನು ಮುಂದೆ ಪರಿಶೀಲಿಸೋಣ.

ಮನುಷ್ಯರಲ್ಲಿ ಈ ಪೈಪೋಟಿ ಏಕಿದೆ? ಹಲವು ಮಂದಿ ನಂಬುವಂತೆ ಈ ಪೈಪೋಟಿಯ ಮನೋಭಾವ ಮನುಷ್ಯರಲ್ಲಿ ಸಹಜವಾಗಿ ಹುಟ್ಟಿನಿಂದಲೇ ನೆಲೆಗೊಂಡಿರುತ್ತದೆ. ತಮ್ಮ ಈ ನಿಲುವನ್ನು ಒಪ್ಪುವಂತೆ ಮಾಡಲು ಈ ಮಂದಿ ಒಂದು ’ವೈಜ್ಞಾನಿಕ ಪ್ರಮೇಯ’ವನ್ನು ಮುಂದಿಡುತ್ತಾರೆ. ತಮ್ಮೀ ನಿಲುವಿಗೆ ಡಾರ್ವಿನ್ ಪ್ರತಿಪಾದಿಸಿದ ವಿಕಾಸವಾದದಲ್ಲಿ ಪುರಾವೆಗಳಿವೆ ಎಂದು ಪ್ರತಿಪಾದಿಸುತ್ತಾರೆ. ಅವರು ನಂಬಿರುವಂತೆ, ’ಬಲಶಾಲಿಯಾದುದು ಬದುಕುಳಿಯುತ್ತದೆ’ ಎಂದು ಡಾರ್ವಿನ್ ಹೇಳಿದ್ದಾನೆ; ಅಂದರೆ ವಿಕಾಸದ ಪಥದಲ್ಲಿ ಯಾವುದು ಬಲಶಾಲಿಯಾಗಿರುತ್ತದೋ ಅದು ಮಾತ್ರ ಉಳಿದು ಶಕ್ತಿಹೀನವಾದುದೆಲ್ಲವೂ ವಿನಾಶಗೊಳ್ಳುತ್ತವೆ; ಅಂತಹ ಜೀವಿವರ್ಗಗಳು ವಿಕಾಸಪಥದಲ್ಲಿ ಹೇಳಹೆಸರಿಲ್ಲದಂತಾಗುತ್ತವೆ; ಹಾಗಾಗಿ ಬದುಕುಳಿಯಲು ಹೋರಾಟ, ಪೈಪೋಟಿಗಳು ಅಗತ್ಯ. ಆದ್ದರಿಂದ ಈ ಮನೋಭಾವ ಮಾನವರೂ ಒಳಗೊಂಡಂತೆ ಎಲ್ಲ ಜೀವಿಗಳಲ್ಲೂ ಇದ್ದೇ ಇರುತ್ತದೆ. ಆದ್ದರಿಂದ ಸ್ಫರ್ಧೆಯಲ್ಲಿ ಅಸಹಜವಾದುದೇನೂ ಇಲ್ಲ.

ಈ ವಾದವನ್ನು ಮಂಡಿಸುವವರು ಮರೆಮಾಚುತ್ತಿರುವ ಇಲ್ಲವೆ ಗಮನಿಸದೇ ಇರುವ ಸಂಗತಿಗಳಲ್ಲಿ ಒಂದೆರಡನ್ನು ಇಲ್ಲಿ ಗಮನಿಸೋಣ. ಮೊದಲಿಗೆ ಬಲಶಾಲಿಯಾದುದು ಮಾತ್ರ ಬದುಕುಳಿಯುತ್ತದೆ ಎನ್ನುವುದಾದರೆ ವಿಕಾಸದ ಹಾದಿಯಲ್ಲಿ ವಿನಾಶಗೊಂಡ ಜೀವಿವರ್ಗಗಳು ದುರ್ಬಲವಾಗಿದ್ದವೆಂದೂ ಈಗ ಉಳಿದಿರುವ ಜೀವಿಗಳೆಲ್ಲ ಬಲಶಾಲಿಯಾಗಿರುವವೆಂದು ಒಪ್ಪಬೇಕಾಗುತ್ತದೆ. ಆದರೆ ದಿಟವಾಗಿ ಹಾಗಿಲ್ಲ. ಅತ್ಯಂತ ಬಲಶಾಲಿಯಾಗಿದ್ದ ಹಲವು ಜೀವಿವರ್ಗಗಳು ಈಗ ಇಲ್ಲವಾಗಿವೆ. ಡೈನೊಸಾರಸ್‌ಗಳು ಒಂದು ಉದಾಹರಣೆ. ಅಲ್ಲದೆ ಈಗಲೂ ಅತ್ಯಂತ ದುರ್ಬಲ ಎಂದು ಒಪ್ಪಬಹುದಾದ ನೂರಾರು ಬಗೆಯ ಕೀಟಜಗತ್ತಿನ ಜೀವಗಳು ಬಲು ಹಿಂದಿನಿಂದಲೂ ಬದುಕುಳಿದಿವೆ. ಹಾಗಾಗಿ ಪೈಪೋಟಿಯಿಂದ ಬದುಕುಳಿಯಲು ಸ್ಪರ್ಧೆಯೇ ನೆಲೆ ಎಂಬುದನ್ನು ಒಪ್ಪುವುದಕ್ಕೆ ಪುರಾವೆಗಳಿಲ್ಲ.

ಡಾರ್ವಿನ್ ವಾದವನ್ನು ಅಧ್ಯಯನ ಮಾಡಿರುವ ಯಾರೂ ಕೂಡ ’ಬಲಶಾಲಿಯಾದುದು ಮಾತ್ರ ಬದುಕುಳಿಯುತ್ತದೆ’ ಎಂಬುದು ಅವನ ನಿಲುವಾಗಿತ್ತು ಎಂದು ತಿಳಿಯುವುದಿಲ್ಲ. ಹಾಗೆ ನೋಡಿದರೆ ಈ ಉಕ್ತಿಗೆ ಕಾರಣನಾದವನು ಡಾರ್ವಿನ್ ಬಳಿಕ ತನ್ನ ವಾದಗಳನ್ನು ಮಂಡಿಸಿದ ಹರ್ಬಟ್ ಸ್ಪೆನ್ಸರ್ (1820-1903) ಎಂಬ ಬ್ರಿಟಿಷ್ ಚಿಂತಕ. ಈತ ಡಾರ್ವಿನ್‌ನ ಗ್ರಂಥವನ್ನು ಓದಿದ ಬಳಿಕ ತನ್ನ ’ಪ್ರಿನ್ಸಿಪಲ್ಸ್ ಆಫ್ ಬಯಾಲಜಿ’ ಎಂಬ ಗ್ರಂಥದಲ್ಲಿ ಈ ಉಕ್ತಿಯನ್ನು ಪ್ರಚುರಪಡಿಸಿದನು. ಡಾರ್ವಿನ್ ವಾದದ ಈ ತಿರುಚಿದ ನೆಲೆಯಿಂದಾಗಿ ಬಲಶಾಲಿಯಾದ ಜೀವಿಗಳು ಮಾತ್ರ ಉಳಿಯಬಲ್ಲವು ಎಂಬುದು ಬಲಶಾಲಿಯಾದ ಜೀವಿಗಳು ಮಾತ್ರ ಉಳಿಯಬೇಕು ಎಂದು ವಾದಿಸುವ ಕಡೆಗೆ ಚಿಂತನೆಗಳು ಸಾಗಿದವು. ಅಶಕ್ತ, ದುರ್ಬಲ ಜೀವಿಗಳಿಗೆ ಇರುವ ಅವಕಾಶಗಳನ್ನು ಕಡಿಮೆ ಮಾಡುವ ಕಾರ್ಯಕ್ರಮಗಳನ್ನು ರೂಪಿಸುವ ಕಡೆಗೆ ಸರಕಾರಗಳು ಮುನ್ನಡೆದವು. ಯೂಜಿನಿಕ್ಸ್‌ನಂತಹ ಕಾರ್ಯಯೋಜನೆಗಳಿಗೆ (ಅಪೇಕ್ಷಣೀಯ ಲಕ್ಷಣಗಳನ್ನು ಹೊಂದುವ ಸಲುವಾಗಿ ಮಾನವರಲ್ಲಿ ಸಂತಾನೋತ್ಪತ್ತಿಯನ್ನು ಒಂದು ಜನಾಂಗೀಯ ಶ್ರೇಷ್ಠತೆಯ ರೀತಿಯಲ್ಲಿ ಬದಲಿಸಿಕೊಂಡು ಉಳಿಸಿಕೊಳ್ಳುವ ಸಂಶೋಧನೆ) ಪ್ರೋತ್ಸಾಹ ನೀಡಬೇಕೆಂದು ವಿಜ್ಞಾನಿಗಳೇ ಅಮೆರಿಕದ ಅಧ್ಯಕ್ಷರ ಮೇಲೆ ಒತ್ತಾಯವನ್ನು ತಂದರು. ಇದು ಒಂದು ಹಂತ.

ಡಾರ್ವಿನ್

ಡಾರ್ವಿನ್‌ನ ವಾದದ ಇನ್ನೊಂದು ನಿಲುವೆಂದರೆ ವಿಕಾಸ ಪಥದಲ್ಲಿ ’ನೈಸರ್ಗಿಕ ಆಯ್ಕೆ’ ಎಂಬುದೊಂದು ಸಂಭವಿಸಿದೆ ಎನ್ನುವುದು. ಅಂದರೆ ಜೀವಿವರ್ಗಗಳಲ್ಲಿ ಯಾವುದು ಉಳಿಯಬೇಕು ಯಾವುದು ಅಳಿಯಬೇಕು ಎನ್ನುವುದು ನಿಸರ್ಗದಲ್ಲಿ ನಡೆದ ಒಂದು ಆಯ್ಕೆಯ ಪ್ರಕ್ರಿಯೆಯ ಮೂಲಕ ಸಂಭವಿಸಿದೆ ಎಂದು ತಿಳಿಯಲಾಯಿತು. ಅಂದರೆ ಈ ಉಳಿವು ಅಳಿವಿನ ಆಯ್ಕೆಯನ್ನು ನಿರ್ಧರಿಸುವ ಹೊರಗಿನ ವ್ಯವಸ್ಥೆಯೊಂದು ಇರಬೇಕು ಎಂಬ ವಾದಕ್ಕೆ ಅವಕಾಶ ಉಂಟಾಯಿತು. ದಿಟವಾಗಿ ಡಾರ್ವಿನ್ ಪ್ರತಿಪಾದಿಸಿದ್ದೇನು? ಜೀವಿವರ್ಗಗಳಲ್ಲಿ ಯಾವುವು ನಿಸರ್ಗವು ಎದುರಿಗಿಡುವ ಸವಾಲುಗಳಿಗೆ ತಕ್ಕಂತೆ ತಮ್ಮನ್ನು ಹೊಂದಾಣಿಕೆ ಮಾಡಿಕೊಂಡು ಬದುಕನ್ನು ನಡೆಸುತ್ತವೋ ಅವು ಉಳಿದು ಮುಂದುವರಿಯುತ್ತವೆ; ಯಾವ ಜೀವಿವರ್ಗಗಳು ಇಂತಹ ಹೊಂದಾಣಿಕೆಗಳಿಗೆ ತಮ್ಮನ್ನು ತಾವು ಸಿದ್ಧಮಾಡಿಕೊಳ್ಳಲಾರವೋ ಅವು ಅಳಿದುಹೋಗುತ್ತವೆ. ಅಂದರೆ ನೈಸರ್ಗಿಕ ಆಯ್ಕೆ ಎಂಬುದು ಹೊರಗಿನಿಂದ ನಿಯಂತ್ರಿಸುವ ನೆಲೆ ಅಲ್ಲ; ಅದು ಜೀವಿವರ್ಗಗಳಿಗೇ ಇರುವ ಆಯ್ಕೆಯ ಅವಕಾಶ. ಅದನ್ನು ತಕ್ಕಂತೆ ಬಳಸಿಕೊಳ್ಳುವ ಸಾಮರ್ಥ್ಯ ಮತ್ತು ಸಿದ್ಧತೆ ಇರುವ ಜೀವಿವರ್ಗಗಳು ಉಳಿದು ಬದುಕುತ್ತವೆ. ಹಾಗಿಲ್ಲದಿದ್ದಲ್ಲಿ ವಿಕಾಸ ಪಥದಲ್ಲಿ ನಿರ್ನಾಮ ಹೊಂದಿವೆ.

ಡಾರ್ವಿನ್ ಪ್ರಣೀತ ವಿಕಾಸವಾದದ ನೆಲೆಯಿಂದ ಮಾನವರಲ್ಲಿ ಪೈಪೋಟಿ, ಸ್ಪರ್ಧೆಗಳನ್ನು ಸಮರ್ಥಿಸುವ ನೆಲೆಗಳಿಗೆ ಮೇಲೆ ಹೇಳಿದ ಕಾರಣಗಳಿಂದ ತಕ್ಕ ಪುರಾವೆಗಳಿಲ್ಲ. ಹಾಗಿದ್ದರೂ ಸ್ಪರ್ಧೆಗಳು 1. ವ್ಯಕ್ತಿಯ ಸಾಮರ್ಥ್ಯಗಳು ಮುಂಚೂಣಿಗೆ ಬರಲು ಅಗತ್ಯ 2. ಉನ್ನತವಾದ ಸಾಧನೆಗೆ ವ್ಯಕ್ತಿಗಳನ್ನು ಪ್ರೇರೇಪಿಸಲು ಮತ್ತು ಸಿದ್ಧಗೊಳಿಸಲು ಅಗತ್ಯ 3. ಮಾನವರಲ್ಲಿ ಚಿತ್ತದ ಏಕಾಗ್ರತೆಯನ್ನು ಬೆಳೆಸಲು ಅಗತ್ಯ ಎಂದು ವಾದಿಸುವುದುಂಟು. ಸ್ಪರ್ಧಾತ್ಮಕ ವಾತಾವರಣವನ್ನು ನಿರ್ಮಿಸುವ ಮೂಲಕ ಈ ಎಲ್ಲ ಗುರಿಗಳನ್ನು ಸಾಧಿಸಲು ಸಾಧ್ಯವೆಂಬ ವಾದವನ್ನು ಮುಂದಿಡಲಾಗಿದೆ. ಹೀಗೆ ವ್ಯಕ್ತಿಗಳನ್ನು ಸನ್ನದ್ಧಗೊಳಿಸಿದರೆ ಅದರಿಂದ ಇಡಿಯಾಗಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳನ್ನು ನಿರ್ವಹಿಸುವ ಪಡೆಯನ್ನು ಕಟ್ಟಬಹುದು ಎಂದು ತಿಳಿಯಹೇಳಲಾಗುತ್ತದೆ. ಈ ಎಲ್ಲ ಅಂಶಗಳನ್ನು ಮುಂದೆ ಮತ್ತೆ ಪರಿಶೀಲಿಸೋಣ.

ಇದನ್ನೂ ಓದಿ: ‘ISRO ದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿಲ್ಲ’: ಚೀನಾ ವಿಜ್ಞಾನಿ

ಈ ಸ್ಪರ್ಧಾ ಮನೋಭಾವದಿಂದ ಮತ್ತು ಅದನ್ನು ಬೆಂಬಲಿಸುತ್ತಿರುವುದರಿಂದ ಒಟ್ಟಾರೆ ಪರಿಣಾಮಗಳು ಏನಾಗಿವೆ ಎಂಬುದನ್ನು ಮೊದಲು ನೋಡಬೇಕಾಗಿದೆ. ನಮ್ಮ ಸಮಾಜದಲ್ಲಿ ಅಸಮಾನತೆ ಬೇರುಬಿಟ್ಟಿದೆ. ಈ ಅಸಮಾನತೆಯ ನೆಲೆಗಳು ಹಲವು. ಕೆಲವು ನೆಲೆಗಳು ಹುಟ್ಟಿನಿಂದಲೇ ಅಂಟಿಕೊಂಡಿರುತ್ತವೆ. ಜಾತಿ, ಲಿಂಗದ ನೆಲೆಗಳು ಇಂಥವು. ಮತ್ತೆ ಕೆಲವು ನೆಲೆಗಳು ಅಸಮಾನತೆಗೆ ಕಾರಣವಾಗಿವೆ ಎಂದು ನಂಬಿಸಲಾಗುತ್ತದೆ. ದೈಹಿಕ ಅಂದರೆ ಬಲಶಾಲಿ ಮತ್ತು ದುರ್ಬಲ ಎಂಬ ನೆಲೆ. ಬೌದ್ಧಿಕ ಅಂದರೆ ಬುದ್ಧಿಶಾಲಿ ಮತ್ತು ದಡ್ಡ ಎಂಬ ನೆಲೆ. ಮಾನಸಿಕ ಅಂದರೆ ಧೈರ್ಯಶಾಲಿ ಮತ್ತು ಪುಕ್ಕಲು ಎಂಬ ನೆಲೆ, ಚಾರಿತ್ರಿಕ ಅಂದರೆ ಚರಿತ್ರೆಯುಳ್ಳವರು ಮತ್ತು ಚರಿತ್ರೆ ಇಲ್ಲದವರು ಎಂಬ ನೆಲೆ ಹೀಗೆ ಹಲವು ರೀತಿಗಳಲ್ಲಿ ಅಸಮಾನತೆಯನ್ನು ರೂಪಿಸಲಾಗಿದೆ; ಪೋಷಿಸಲಾಗುತ್ತಿದೆ. ಆದರೆ ನಮ್ಮ ಸಂವಿಧಾನ ಮತ್ತು ಅದರಲ್ಲಿರುವ ನಮ್ಮ ನಿಷ್ಠೆಯು ಅಸಮಾನತೆಯನ್ನು ನಿವಾರಿಸುವತ್ತ ನಮ್ಮ ಕಾರ್ಯಯೋಜನೆಗಳು ಇರಬೇಕು ಮತ್ತು ಅಸಮಾನತೆಯನ್ನು ಕಾಯ್ದುಕೊಳ್ಳುವ ಯಾವುದೇ ಯತ್ನವನ್ನು ನಿವಾರಿಸಿಕೊಳ್ಳಬೇಕು ಎಂದು ನಂಬುತ್ತದೆ.

ಅಸಮಾನತೆಯು ಸಹಜ ಮತ್ತು ನಿವಾರಣೆಯಾಗುವಂಥದಲ್ಲ ಎಂದು ನಂಬುವವರೂ ಇದ್ದಾರೆ. ಈ ನಂಬಿಕೆಯು ದಿನಕಳೆದಂತೆ ಹೆಚ್ಚು ಅನುಯಾಯಿಗಳನ್ನೂ ಪಡೆದುಕೊಳ್ಳುತ್ತಿದೆ. ಪ್ರಕೃತಿಯಲ್ಲೇ ಸಮಾನತೆ ಎಂಬುದಿಲ್ಲ; ಒಂದಕ್ಕಿಂತ ಇನ್ನೊಂದು ಬೇರೆಯಾಗಿದೆ. ಹಾಗಾಗಿ ಎಲ್ಲವನ್ನೂ ಸಮಾನ ಎಂದು ಪರಿಗಣಿಸುವುದಾಗಲೀ ಆ ದಿಕ್ಕಿನತ್ತ ಹೆಜ್ಜೆ ಇಡುವುದಾಗಲೀ ಪ್ರಕೃತಿಗೆ ವಿರುದ್ಧವಾದುದು ಎಂದು ವಾದಿಸುವವರಿದ್ದಾರೆ. ದಿಟವಾಗಿ ಇವರು ವ್ಯತ್ಯಾಸಗಳನ್ನು ಇಲ್ಲವೇ ವೈವಿಧ್ಯಗಳನ್ನು ಕುರಿತು ಮಾತನಾಡುತ್ತಿರುತ್ತಾರೆ. ವ್ಯತ್ಯಾಸಗಳು ತಾರತಮ್ಯವನ್ನು ಸೂಚಿಸುವುದಿಲ್ಲ. ಮಾವಿನ ಎಲೆ ತೆಂಗಿನಗರಿಗಿಂತ ಬೇರೆಯಾಗಿದ್ದರೆ, ಹದ್ದು ಗುಬ್ಬಿಗಿಂತ ಬೇರೆಯಾಗಿದ್ದರೆ ಅದು ಭಿನ್ನತೆಯೇ ಹೊರತು ಪ್ರಕೃತಿಯು ಆ ಎರಡರ ನಡುವೆ ತಾರತಮ್ಯವನ್ನು ಸೃಷ್ಟಿಸಿದೆ ಎಂದು ವಾದಿಸಲು ಬರುವುದಿಲ್ಲ. ಹಾಗಾಗಿ ಅಸಮಾನತೆಯು ಸಹಜ ಎಂಬ ವಾದಕ್ಕೆ ಬುಡವಿಲ್ಲ. ಭಿನ್ನತೆಗಳನ್ನು ನಿವಾರಿಸಬೇಕೆಂದು ಯಾರೂ ವಾದಿಸುತ್ತಿಲ್ಲ. ಹಾಗೆ ನೋಡಿದರೆ ಏಕರೂಪತೆ ಎಂಬುದೇ ಅಸಹಜ, ಇದಕ್ಕೆ ಹತ್ತಾರು ಪುರಾವೆಗಳನ್ನು ಪ್ರಕೃತಿಯ ನೆಲೆಯಿಂದ ಒದಗಿಸಬಹುದು. ಅದು ಒತ್ತಟ್ಟಿಗಿರಲಿ. ತಪ್ಪು ನಿದರ್ಶನಗಳ ಮೂಲಕ ಅಸಮಾನತೆಯನ್ನು ಪ್ರಕೃತಿ ಸಹಜ ಎಂದು ವಾದಿಸುವುದನ್ನು ಬಿಡಬೇಕು. ಹಾಗಿದ್ದಲ್ಲಿ ನಮ್ಮ ಎಲ್ಲ ಪ್ರಯತ್ನಗಳು ಬಗೆಬಗೆಯ ಅಸಮಾನತೆಗಳನ್ನು ನಿವಾರಿಸುವ ಕಡೆಗೆ ಇರಬೇಕು. ಇದು ಸಾಧ್ಯವಾಗುವವರೆಗೆ ಅಸಮಾನತೆಯಿಂದಾಗಿ ಉಂಟಾಗುತ್ತಿರುವ ಏರುಪೇರುಗಳ ಪರಿಣಾಮಗಳನ್ನು ಕಡಿಮೆ ಮಾಡುವ ಕಡೆಗೆ ಆ ಪ್ರಯತ್ನಗಳು ಇರಬೇಕು.

ಇನ್ನೊಂದು ನೆಲೆಯಲ್ಲಿ ಈ ಸಂಗತಿಯನ್ನು ಗಮನಿಸಲು ಸಾಧ್ಯವಿದೆ. ವ್ಯತ್ಯಾಸಗಳು ಏಕಿವೆ ಎಂಬುದನ್ನು ಅಧ್ಯಯನ ಮಾಡುವ ತಿಳಿವಿನ ಶಾಖೆಗಳೂ ಬೆಳೆದುಬಂದಿವೆ. ಇವು ವ್ಯತ್ಯಾಸಗಳನ್ನು ಗುರುತಿಸುವ ಮತ್ತು ವಿವರಿಸುವ ಗುರಿಯನ್ನು ಹೊಂದಿವೆಯೇ ಹೊರತು ಆ ವ್ಯತ್ಯಾಸಗಳನ್ನು ಆಧರಿಸಿದ ತಾರತಮ್ಯಗಳನ್ನು ಮಂಡಿಸುವ ಇಲ್ಲವೇ ಸಮರ್ಥಿಸುವ ಗುರಿಯನ್ನು ಹೊಂದಿಲ್ಲ. ಆದರೆ ಇದನ್ನು ತಪ್ಪಾಗಿ ಗ್ರಹಿಸುವುದುಂಟು. ಮಾನವಶಾಸ್ತ್ರಜ್ಞರು ನಾಗರಿಕ ಸಮಾಜದಿಂದ ಹೋದವರು. ಅವರು ಅಲ್ಲಿಯವರೆಗೆ ಅಪರಿಚಿತವಾಗಿದ್ದ ಸಮುದಾಯಗಳನ್ನು ಕಂಡಾಗ ತಮಗೂ ಅವರಿಗೂ ಇದ್ದ ವ್ಯತ್ಯಾಸಗಳನ್ನು ಅಧ್ಯಯನ ಮಾಡಿದರು. ಆದರೆ ಅದನ್ನು ಆಧರಿಸಿಯೇ ಈ ಹೊಸ ಸಮುದಾಯವನ್ನು ’ಅನಾಗರಿಕ’ ಎಂದು, ಆದಿಮವಾದುದೆಲ್ಲ ನಾಗರಿಕತೆಯ ದಾರಿಯಲ್ಲಿ ಹಿಂದುಳಿದಿರುವಂತಹುದು ಎಂದು ತೀರ್ಮಾನಿಸಲು ಹೊರಟಾಗ ತಪ್ಪುಗಳು ಸಂಭವಿಸಿವೆ. ಒಂದೊಂದು ಸಮುದಾಯದ ಜೀವನವಿಧಾನವೂ ತನ್ನಪಾಡಿಗೆ ತಾನು ಸ್ವಯಂಪೂರ್ಣವಾಗಿರುತ್ತದೆ. ಅವುಗಳಲ್ಲಿ ವ್ಯತ್ಯಾಸಗಳಿದ್ದರೂ ಮೇಲುಕೀಳು ಎಂದು ಪರಿಗಣಿಸಲು ಬೇಕಾದ ಸಾಧ್ಯತೆಗಳಿರುವುದಿಲ್ಲ.

ಈ ನಿಟ್ಟಿನಲ್ಲಿ ಮಾನವರ ಗ್ರಹಿಕೆಯ ಮೂಲ ನೆಲೆ ಸಮಾನತೆಯನ್ನು ಕಂಡುಕೊಳ್ಳುವ ಕಡೆಗೆ ಇರುತ್ತದೆಯೇ ಹೊರತು ವ್ಯತ್ಯಾಸಗಳನ್ನು ಕಂಡುಕೊಳ್ಳುವ ಕಡೆಗೆ ಇರುವುದಿಲ್ಲ ಎಂಬುದನ್ನು ಈಚೆಗೆ ತಿಳಿದುಕೊಳ್ಳಲಾಗಿದೆ. ನಮ್ಮ ದಿನನಿತ್ಯದ ಉದಾಹರಣೆಯನ್ನೇ ನೋಡಿ. ಎದುರು ದಿಕ್ಕಿನಿಂದ ಯಾರೋ ಬರುತ್ತಿದ್ದಾರೆ ಎಂದುಕೊಳ್ಳಿ. ಅವರು ನಮಗೆ ಗೊತ್ತಿರುವವರೋ ಅಲ್ಲವೋ ತಿಳಿಯದು. ಆದರೂ ನಾವು ನಮಗೆ ಗೊತ್ತಿರುವವರ ಚಹರೆಗಳ ಜೊತೆಗೆ ಎದುರಿಗೆ ಬರುತ್ತಿರುವವರನ್ನು ಗ್ರಹಿಸಲು ಯತ್ನಿಸುತ್ತೇವೆ. ತೀರಾ ಹತ್ತಿರ ಬಂದಾಗ ವ್ಯತ್ಯಾಸಗಳನ್ನು ನೋಡುತ್ತೇವೆ. ಆದರೆ ನಮ್ಮ ಗ್ರಹಿಕೆ ಕೆಲಸ ಮಾಡುವುದೇ ಹೋಲಿಕೆಗಳನ್ನು, ಸಮಾನಾಂಶಗಳನ್ನು ಗ್ರಹಿಸುವ ಕಡೆಗೆ. ಇದು ಮನುಷ್ಯರ ಮೂಲಭೂತ ಗುಣಗಳಲ್ಲಿ ಒಂದಾಗಿದೆ. ಇದನ್ನು ಹತ್ತಿಕ್ಕಿ ತಾರತಮ್ಯಗಳನ್ನೇ ದಿಟವೆಂದು ನಂಬಿಸುವ ಯತ್ನಗಳು ಈಗ ಹೆಚ್ಚಾಗುತ್ತಿವೆ.

ಈಗ ಮತ್ತೆ ಸ್ಪರ್ಧೆಯ ಮಾತಿಗೆ ಬರೋಣ. ಯಾವುದೇ ಬಗೆಯ ಪೈಪೋಟಿ ಅಂತಿಮವಾಗಿ ಕೆಲವರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿ ಹಲವರ ಅವಕಾಶಗಳನ್ನು ಕಿತ್ತುಕೊಳ್ಳುತ್ತದೆ. ನಮ್ಮ ಶಿಕ್ಷಣಕ್ರಮವನ್ನೇ ನೋಡಿದರೆ ಅದರಲ್ಲಿ ಆಯ್ಕೆ ಮತ್ತು ನಿರಾಕರಣೆಗಳು ಗಟ್ಟಿಯಾಗಿ ನೆಲೆಗೊಂಡಿವೆ. ಒಂದನೆಯ ತರಗತಿಯಲ್ಲಿ ನಮ್ಮೊಡನೆ ಇದ್ದ ಎಷ್ಟು ಜನರು ಹತ್ತನೆಯ ತರಗತಿಯವರೆಗೆ ಬಂದರು ಎನ್ನುವುದನ್ನು ಗಮನಿಸಿದರೆ ಈ ಶಿಕ್ಷಣಕ್ರಮವು ಹೇಗೆ ಕೆಲವರನ್ನು ಆಯ್ದುಕೊಳ್ಳುತ್ತದೆ ಮತ್ತು ಹಲವರನ್ನು ಹಿಂದಕ್ಕುಳಿಸುತ್ತದೆ ಎನ್ನುವುದು ಗೊತ್ತಾಗುತ್ತದೆ. ಹೀಗೆ ಮಾಡಲು ಪರೀಕ್ಷೆ ಎಂಬ ಸ್ಪರ್ಧೆಯನ್ನು ಏರ್ಪಡಿಸಿಕೊಂಡಿದೆ. ಕಲಿಕೆಯು ಪರಿಣಾಮಕಾರಿಯಾಗಿ ನಡೆದಿದೆಯೇ ಎಂದು ತಿಳಿಯುವುದು ಪರೀಕ್ಷೆಗಳ ಉದ್ದೇಶವೆಂದು ಹೇಳುತ್ತಾರೆ. ದಿಟ. ಆದರೆ ಇದರಲ್ಲಿ ಸಂಭವಿಸುವ ಸೋಲುಗೆಲುಗಳನ್ನು ವಿವರಿಸುವಾಗ ಮಂಡಿಸುವ ಕಾರಣಗಳು ಹೀಗಿರುತ್ತವೆ: ಬುದ್ಧಿವಂತರು ಗೆಲ್ಲುತ್ತಾರೆ, ದಡ್ಡರು ಸೋಲುತ್ತಾರೆ; ಏಕಾಗ್ರಚಿತ್ತತೆಯನ್ನು ಬೆಳೆಸಿಕೊಂಡವರು ಗೆಲ್ಲುತ್ತಾರೆ, ಗ್ರಹಿಕೆಯ ಕೊರತೆಯುಳ್ಳವರು ಸೋಲುತ್ತಾರೆ; ಸಾಧಿಸಬೇಕೆಂಬ ಗುರಿಯುಳ್ಳವರು ಗೆಲ್ಲುತ್ತಾರೆ, ಅಂತಹ ಛಲವಿಲ್ಲದವರು ಸೋಲುತ್ತಾರೆ. ಈ ಪಟ್ಟಿಯನ್ನು ಬೆಳೆಸಬಹುದು. ಆದರೆ ವಿಪರ್ಯಾಸವೆಂದರೆ ಈ ಎಲ್ಲ ಕಾರಣಗಳನ್ನೂ ನಾವು, ಅಂದರೆ ಸಮಾಜವು ದಿಟವೆಂದು ನಂಬುವಂತೆ ಮಾಡಲಾಗಿದೆ. ಯಾವುದು ಬುದ್ಧಿವಂತಿಕೆ, ಯಾವುದು ಏಕಾಗ್ರಚಿತ್ತತೆ, ಯಾವುದು ಉನ್ನತ ಗುರಿ ಎಂದು ಕರೆಯಲಾಗುತ್ತದೆಯೋ, ಇವೆಲ್ಲವೂ ಕಲಿಯುವವರ ಆಯ್ಕೆ ಎಂದು ತಿಳಿದಿದ್ದೇವೆ. ಆದರೆ ಈ ಸ್ಪರ್ಧೆಯಲ್ಲಿ ಗುರಿಯನ್ನು ನಿರ್ಧರಿಸುವವರು ಹೊರಗಿರುತ್ತಾರೆ. ಅವರು ರೂಪಿಸಿದ ಚೌಕಟ್ಟಿಗೆ ಹೊಂದಿಕೊಳ್ಳುವವರನ್ನು ಗೆದ್ದವರೆಂದು ಆಯ್ಕೆಮಾಡಿಕೊಂಡು ಉಳಿದವರನ್ನು ನಿರಾಕರಣೆ ಮಾಡುವ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ.

ಒಂದು ಹಳೆಯ ನಿದರ್ಶನವನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ಇಂಗ್ಲೆಂಡಿನಲ್ಲಿ ಕೆಲವು ದಶಕಗಳ ಹಿಂದೆ ಶಾಲಾ ಶಿಕ್ಷಣದ ವ್ಯಾಪ್ತಿಗೆ ಬಂದ ಮಕ್ಕಳಲ್ಲಿ ಬಿಳಿಯ ಮಕ್ಕಳು ಸುಲಭವಾಗಿ ಗೆಲುವನ್ನು ಪಡೆಯುತ್ತಿದ್ದರು. ಆದರೆ ಕರಿಯ ಮಕ್ಕಳು ಸೋಲು ಕಾಣುತ್ತಿದ್ದರು. ಇದನ್ನು ಗಮನಿಸಿದ ಯಾರಿಗಾದರೂ ಬಿಳಿಯ ಮಕ್ಕಳು ಬುದ್ಧಿವಂತರೆಂದು ಕರಿಯ ಮಕ್ಕಳು ದಡ್ಡರೆಂದು ನಿರ್ಣಯಿಸಲು ಮನಸ್ಸಾಗುತ್ತದೆ. ಈ ಪರಿಸ್ಥಿತಿಯನ್ನು ನೋಡಿದ್ದ ಬೇಸಲ್ ಬರ್ನ್‌ಸ್ಟೀನ್ ಎಂಬ ಸಾಮಾಜಿಕ ನುಡಿಯರಿಗರು ಇದನ್ನು ಪರಿಶೀಲಿಸಲು ಮುಂದಾದರು. ಅವರು ಕಂಡುಕೊಂಡದ್ದೇನು? ಕರಿಯ ಮಕ್ಕಳು ಶಾಲೆಗೆ ಬರುವ ಹೊತ್ತಿಗೆ ಬಳಸುತ್ತಿದ್ದ ಇಂಗ್ಲಿಷ್ ನುಡಿಯ ಮಾದರಿ ಮತ್ತು ಅದೇ ವಯಸ್ಸಿನ ಬಿಳಿಯ ಮಕ್ಕಳು ಶಾಲೆಗೆ ಬರುವ ಹೊತ್ತಿಗೆ ಬಳಸುತ್ತಿದ್ದ ಇಂಗ್ಲಿಷ್ ನುಡಿಯ ಮಾದರಿಗಳು ಬೇರೆಬೇರೆಯಾಗಿದ್ದವು. ತರಗತಿಯಲ್ಲಿ ಪಾಠಮಾಡುತ್ತಿದ್ದ ಅಧ್ಯಾಪಕರು ಮಾತಾಡುತ್ತಿದ್ದ ಇಂಗ್ಲಿಷ್ ನುಡಿಯ ಮಾದರಿ ಬಿಳಿಯ ಮಕ್ಕಳ ಇಂಗ್ಲಿಷ್ ನುಡಿಗೆ ಹೊಂದುವಂತಿರುತ್ತಿತ್ತು. ಅಧ್ಯಾಪಕರು ಹೇಳುತ್ತಿದ್ದ ವಿಷಯಗಳನ್ನು ಆ ಮಕ್ಕಳು ಅರಿಯಲು ಸುಲಭವಾಗುತ್ತಿತ್ತು. ಆದರೆ ಕರಿಯ ಮಕ್ಕಳಿಗೆ ಅಧ್ಯಾಪಕರ ಇಂಗ್ಲಿಷ್ ನುಡಿಯ ಮಾದರಿಯನ್ನು ಗ್ರಹಿಸುವುದಕ್ಕೆ ಹೆಚ್ಚಿನ ಶ್ರಮ ಬೇಕಾಗುತ್ತಿತ್ತು, ಆಗ ಅವರಿಗೆ ಆ ಅಧ್ಯಾಪಕರು ಮಾಡುತ್ತಿದ್ದ ಪಾಠದ ವಿಷಯವನ್ನು ಗ್ರಹಿಸಲು ಇನ್ನಷ್ಟು ಕಷ್ಟವಾಗುತ್ತಿತ್ತು. ಇದರಿಂದಾಗಿಯೇ ಆ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವುದು ಅನಿವಾರ್ಯವಾಗುತ್ತಿತ್ತು. ಅಲ್ಲದೇ ಈ ಕರಿಯ ಮಕ್ಕಳಿಗೆ ಮನೆಯಲ್ಲೂ, ಬೆಳೆಯುತ್ತಿದ್ದ ಪರಿಸರದಲ್ಲೂ ಕೇಳಿಸುತ್ತಿದ್ದುದು ತಾವು ಬಲ್ಲ ಇಂಗ್ಲಿಷ್ ನುಡಿಯ ಮಾದರಿಯಾಗಿರುತ್ತಿತ್ತು. ಆದರೆ ಬಿಳಿಯ ಮಕ್ಕಳಿಗೆ ಅವರ ಮನೆಯಲ್ಲಿ ಮತ್ತು ಅವರ ಪರಿಸರದಲ್ಲಿ ಕೇಳುತ್ತಿದ್ದ ನುಡಿ ಮತ್ತು ತರಗತಿಯಲ್ಲಿ ಅಧ್ಯಾಪಕರು ನುಡಿಯುತ್ತಿದ್ದ ಇಂಗ್ಲಿಷ್ ಮಾದರಿ ಒಂದೇ ಆಗಿರುತ್ತಿತ್ತು. ಅಂದರೆ, ಈ ಸ್ಪರ್ಧೆಯು ಹೇಗೆ ಅಸಮಾನತೆಯನ್ನು ನಿವಾರಿಸುವ ಬದಲು ಅದನ್ನು ಕಾಯ್ದುಕೊಳ್ಳಲು ರೂಪುಗೊಂಡಿತ್ತು ಎಂಬುದು ಗೊತ್ತಾಗುತ್ತದೆ. ಬೇಸಲ್ ಬರ್ನ್‌ಸ್ಟೀನ್ ಅವರ ಈ ಅಧ್ಯಯನದ ಪರಿಣಾಮಗಳು ಮುಂದೆ ಏನಾದವು ಎಂಬುದು ಸದ್ಯ ನಮ್ಮ ಚರ್ಚೆಯ ವಿಷಯವಲ್ಲ. ತರಗತಿಗಳು ಹಲವು ಬಗೆಯ ಅಸಮಾನತೆಗಳ ಮೊತ್ತವಾಗಿರುತ್ತವೆ. ನಮ್ಮ ಕಲಿಕೆಯ ವಸ್ತುಗಳು; ಬೋಧನೆಯ ಬಗೆಗಳು ಮತ್ತು ಕಲಿಕೆಯನ್ನು ಮೌಲ್ಯಮಾಪನ ಮಾಡುವ ವಿಧಾನಗಳು- ಇವೆಲ್ಲವೂ ಈ ಅಸಮಾನತೆಯನ್ನು ಮತ್ತಷ್ಟು ಬಲಪಡಿಸುವ ನೆಲೆಯಲ್ಲೇ ಇರುತ್ತವೆ. ಒಂದುವೇಳೆ ಈ ಅಸಮಾನತೆಯ ಅರಿವಿದ್ದೂ, ಅದರ ನಿವಾರಣೆಗೆ ಯತ್ನಿಸುವಂತೆ ತೋರುತ್ತಿದ್ದರೂ ಅದರ ಪರಿಣಾಮಗಳು ಮಾತ್ರ ವಿರುದ್ಧ ದಿಕ್ಕಿನಲ್ಲೇ ಇರುತ್ತವೆ. ಸಾಮಾನ್ಯ ಕಲಿಕೆಯ ಅವಧಿಯಲ್ಲಿ (ಸಾಮಾನ್ಯವಾಗಿ ಹತ್ತು ವರುಷ) ಆಗುವ ’ವ್ಯರ್ಥವಾಗುವಿಕೆ ಮತ್ತು ಹಿಂದುಳಿಯುವಿಕೆ’ಗಳನ್ನು ಚರ್ಚಿಸುವವರು ಬಹುಮಟ್ಟಿಗೆ ಸಂಪನ್ಮೂಲಗಳ ಹೂಡುವಿಕೆಯ ನೆಲೆಯಲ್ಲೇ ಸಾಗುತ್ತಿರುತ್ತಾರೆ. ದಿಟವಾಗಿ ಅಸಮಾನತೆಯ ಪರಿಣಾಮಗಳನ್ನು ಗಮನಿಸಿದರೂ ಅದರ ಪರಿಹಾರಕ್ಕೆ ಯತ್ನಿಸುವ ಕಡೆಗೆ ಸಾಗುವುದು ಕಡಿಮೆ.

ಪೈಪೋಟಿಯನ್ನು ವ್ಯಕ್ತಿಗಳ ನೆಲೆಯಲ್ಲಿ ನೋಡುವಂತೆ ಸಮುದಾಯದ ನೆಲೆಯಲ್ಲೂ ನೋಡಬೇಕು, ವ್ಯಕ್ತಿಗಳ ನಡುವೆ ಏರ್ಪಡುವ ಪೈಪೋಟಿಯ ಚಹರೆ ಮತ್ತು ಪರಿಣಾಮಗಳು ಸಮುದಾಯದ ನೆಲೆಯಿಂದ ನೋಡಿದಾಗ ಬೇರೆಯೇ ಆಗಿರುತ್ತವೆ. ಒಂದುವೇಳೆ ಪೈಪೋಟಿ ಮಾಡುವುದು ಮನುಷ್ಯರ ವಿಕಾಸದ ಹಂತದ ಒಂದು ಪಳೆಯುಳಿಕೆ ಎಂದು ವಾದಿಸಿದರೂ ಅದನ್ನು ಪರಿಹರಿಸಿಕೊಳ್ಳುವ ದಾರಿಗಳನ್ನು ಸಮುದಾಯಗಳು ಕಂಡುಕೊಂಡಿರುತ್ತವೆ. ಆಟಗಳನ್ನು ನೋಡೋಣ. ಎಲ್ಲ ಬಗೆಯ ಆಟಗಳಲ್ಲೂ ಗೆಲುವು ಸೋಲುಗಳು ಇರುತ್ತವೆ. ದೈಹಿಕ ಶ್ರಮವನ್ನು ಬಯಸುವ ಆಟಗಳಿರಲಿ, ಮನಸ್ಸನ್ನು ಹೆಚ್ಚು ತೊಡಗಿಸಿಕೊಳ್ಳುವ ಆಟಗಳಿರಲಿ ಎಲ್ಲ ಕಡೆಯೂ ಸೋಲುಗೆಲುವುಗಳಿರುತ್ತವೆ. ಆದರೆ ಅದರ ಪರಿಣಾಮಗಳು ತಾತ್ಕಾಲಿಕ. ಈ ಆಟದಲ್ಲಿ ಗೆದ್ದವರು ನಾಳೆ ಅದೇ ಆಟದಲ್ಲಿ ಸೋಲಲೂಬಹುದು. ಎಲ್ಲ ಆಟಗಳಲ್ಲೂ ಒಬ್ಬರೇ ಯಾವಾಗಲೂ ಗೆಲ್ಲುವುದಿಲ್ಲ. ಆಟ ಮುಗಿದ ಮೇಲೆ ಪೈಪೋಟಿಯ ಗುರುತುಗಳೂ ಉಳಿದಿರುವುದಿಲ್ಲ. ಗೆದ್ದವರಿಗೆ ಕೋಡುಗಳು ಮೂಡುವುದಿಲ್ಲ; ಸೋತವರು ತಲೆಬಾಗಿಸುವುದೂ ಇಲ್ಲ. ಪೈಪೋಟಿಯೊಂದು ಮನುಷ್ಯರ ಸ್ವಭಾವ ಎಂದು ತಿಳಿದರೂ ಅದು ಯಾವ ಪ್ರಭಾವವನ್ನೂ ಬೀರದಂತೆ ಈಡೇರುವ ತಂತ್ರಗಳನ್ನು ಆಟಗಳು ಒದಗಿಸಿಕೊಡುತ್ತವೆ.

ಬೇಸಲ್ ಬರ್ನ್‌ಸ್ಟೀನ್

ನಮ್ಮ ಸಾಮಾಜಿಕ ವ್ಯವಸ್ಥೆಯು ಈ ಸಾಧ್ಯತೆಯನ್ನು ತೊರೆದುಬಿಟ್ಟಿದೆ. ಗೆಲುವು ಪಡೆದವರು ಸದಾ ಮುನ್ನುಗ್ಗಲು ಸೋತವರು ಯಾವಾಗಲೂ ಹಿಂದುಳಿಯಲು ಬೇಕಾದ ರೀತಿಯಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಮುನ್ನಡೆಯಲು ಬೇಕಾದ ಅವಕಾಶ ಮತ್ತು ಸಾಮರ್ಥ್ಯಗಳ ನೆಲೆಗಳನ್ನೇ ನೋಡೋಣ. ಇವೆರಡೂ ಸಮಪ್ರಮಾಣದಲ್ಲಿ ಎಲ್ಲರಿಗೂ ದೊರೆಯುವುದು ಅಗತ್ಯವಷ್ಟೇ. ಸಾಮರ್ಥ್ಯ ಮತ್ತು ಅವಕಾಶಗಳೆರಡನ್ನೂ ಕಸಿದುಕೊಳ್ಳುವುದು ಒಂದು ದಾರಿಯಾದರೆ ಇವೆರಡರಲ್ಲಿ ಒಂದು ದೊರೆಯುವಂತೆ ಮಾಡಿ ಇನ್ನೊಂದು ದೊರೆಯದಂತೆ ಮಾಡುವುದು ಇನ್ನೊಂದು ದಾರಿ. ಕಲಿಯುವ, ದುಡಿಯುವ, ಸಂಪಾದಿಸುವ ಅವಕಾಶ ಎಲ್ಲರಿಗೂ ಇದೆ ಎನ್ನುವುದು ನಮ್ಮ ನಂಬಿಕೆಯ ನೆಲೆ. ಆದರೆ ಅವಕಾಶಗಳು ಹೇಗೆ ಮೈದಳೆಯುತ್ತವೆ ಎನ್ನುವುದು ಮುಖ್ಯ. ಕಲಿಕೆಯಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವೆಂದು ಹೇಳಿದರೂ ಕಲಿಕೆಯ ಬಳಿಕ ದುಡಿಯಲು ಇರುವ ಅವಕಾಶಗಳನ್ನು ಸೀಮಿತಗೊಳಿಸುವ ಮೂಲಕ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಹೆಚ್ಚುಹೆಚ್ಚು ಕಲಿತವರೂ ದುಡಿಮೆಗೆ ಬೇಕಾದ ಅವಕಾಶಗಳನ್ನು ಪಡೆದುಕೊಳ್ಳಲು ಸೋಲುತ್ತಿರುವುದನ್ನು ನೋಡುತ್ತೇವೆ. ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ತಕ್ಕ ಸಂದರ್ಭವನ್ನು ರೂಪಿಸಿದ್ದರೂ ಆ ಸಾಮರ್ಥ್ಯಗಳು ವ್ಯಕ್ತಿಯ ಆಯ್ಕೆಯಾಗಿರುವುದಿಲ್ಲ. ವ್ಯವಸ್ಥೆಯು ತನಗೆ ಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಒತ್ತಾಯಿಸುತ್ತಿರುತ್ತದೆ. ಅಂದರೆ ಪೈಪೋಟಿಯ ಎಲ್ಲ ನಿಯಮಗಳೂ ಅಸಮಾನತೆಯನ್ನು ಕಾಯ್ದುಕೊಳ್ಳುವುದಕ್ಕಾಗಿಯೇ ಇವೆ.

ಈ ಸಂದರ್ಭವನ್ನು ಸಾಮಾಜಿಕ ಮುಂಚಲನೆಯ ಎಲ್ಲ ವಲಯಗಳಲ್ಲೂ ನೋಡುತ್ತೇವೆ. ಆರ್ಥಿಕ ವಲಯದ ಸ್ಪರ್ಧೆಗಳಂತೂ, ಸಾಮರ್ಥ್ಯ ಮತ್ತು ಅವಕಾಶಗಳೆರಡನ್ನೂ ಸಮುದಾಯದಿಂದ ಕಿತ್ತುಕೊಳ್ಳುವುದಕ್ಕಾಗಿಯೇ ರೂಪುಗೊಂಡಿರುತ್ತವೆ. ಜಾತಿಯ ನೆಲೆ, ಲಿಂಗದ ನೆಲೆ, ಸಾಮಾಜಿಕ ಬಂಡವಾಳದ ನೆಲೆ, ಸಾಂಸ್ಕೃತಿಕ ನೆನಪುಗಳ ನೆಲೆ (ಈ ಸಾಂಸ್ಕೃತಿಕ ನೆಲೆಯ ಅಸಮಾನತೆ ಎನ್ನುವುದನ್ನು ಕೊಂಚ ವಿವರಿಸಬೇಕಿದೆ. ಕೆಲವು ಸಮುದಾಯಗಳು ಸ್ಮೃತಿಗಳನ್ನು ದಾಖಲಿಸುವ ರವಾನಿಸುವ ವಿಧಾನಗಳನ್ನು ಕಂಡುಕೊಂಡಿರುತ್ತವೆ. ಆ ಸಮುದಾಯಗಳಿಗೆ ಸಾಂಸ್ಕೃತಿಕ ನೆನಪುಗಳಿವೆ ಎಂದು ಪರಿಗಣಿಸುತ್ತೇವೆ. ಆ ನೆನಪುಗಳು ಅಧಿಕೃತವೆಂದು ತಿಳಿಯುತ್ತೇವೆ. ಈ ದಾರಿಗಳಿಲ್ಲದ ಸಮುದಾಯಗಳಿಗೆ ಸಾಂಸ್ಕೃತಿಕ ನೆನಪುಗಳು ಇಲ್ಲವೆಂದೂ ಇದ್ದರೂ ಅದು ಅಧಿಕೃತವಲ್ಲವೆಂದೂ ಪರಿಗಣಿಸಿ ಆ ಸಮುದಾಯಗಳು ಕುಂಠಿತ ನೆಲೆಯಲ್ಲಿವೆ ಎಂದು ಹೇಳುತ್ತೇವೆ. ಇದು ಸರಿಯಲ್ಲ. ಇದೇ ದಾರಿಯನ್ನೂ ನುಡಿಯರಿಗರೂ ಹಿಡಿದಿದ್ದಾರೆ. ಲಿಖಿತ ವ್ಯವಸ್ಥೆ ಇರುವ ನುಡಿಗಳಿಗೆ ಚರಿತ್ರೆ ಇದೆಯೆಂದೂ ಕೇವಲ ಬಾಯ್ದೆರೆಯಲ್ಲಿರುವ ನುಡಿಗಳಿಗೆ ಚರಿತ್ರೆ ಇದ್ದರೂ ಅದನ್ನು ಕಟ್ಟಲಾಗದೆಂದು ತಿಳಿದರು.) ಹೀಗೆ ಹಲವು ಸ್ತರಗಳಲ್ಲಿ ತಾರತಮ್ಯಗಳನ್ನು ಕಾಯ್ದುಕೊಳ್ಳುವುದಕ್ಕಾಗಿಯೇ ಸ್ಪರ್ಧೆಗಳಿರುತ್ತವೆ. ಹಾಗಿದ್ದರೆ ಇದಕ್ಕೆ ಪರಿಹಾರಗಳೇ ಇಲ್ಲವೇ?

ಮರಳಿ ಡಾರ್ವಿನ್ ಚಿಂತನೆಗಳನ್ನು ನೋಡೋಣ. ನೈಸರ್ಗಿಕ ಆಯ್ಕೆ ಎನ್ನುವುದು ಪ್ರತಿ ಜೀವಿವರ್ಗದ ಪ್ರತ್ಯೇಕ ಸದಸ್ಯ ಜೀವಿಗೆ ಅನ್ವಯಿಸುವ ಸಂಗತಿಯಾಗಿರಲಿಲ್ಲ. ಯಾವುದೋ ಒಂದು ಪ್ರಾಣಿ ಇಲ್ಲವೇ ಸಸ್ಯ ಹೋರಾಡಿ ಉಳಿದುಕೊಂಡಿತು ಎಂದು ತಿಳಿಯಲಾಗದು. ಆ ಹೊಂದಾಣಿಕೆ ಒಂದು ಜೀವಿವರ್ಗದ ಎಲ್ಲ ಸದಸ್ಯರಿಗೂ ಅನ್ವಯವಾಗುವಂತಿರುತ್ತದೆ. ಇದಕ್ಕಾಗಿ ಜೀವಿವರ್ಗಗಳು ಅನುಸರಿಸಿದ ದಾರಿಯೇ ಸಹಬಾಳ್ವೆ. ತಂತಮ್ಮಲ್ಲಿ ಸಹಕಾರ ಮನೋಭಾವವನ್ನು ಕಾಯ್ದುಕೊಳ್ಳುವ ಒಬ್ಬರಿಗೊಬ್ಬರು ನೆರವಾಗುವ ಮೂಲಕವೇ ಉಳಿವಿನ ದಾರಿಯನ್ನು ಕಂಡುಕೊಂಡಿವೆ. ಹೋರಾಡಿ ಬದುಕುಳಿದಿರುವ ದಾರಿಗಿಂತ ನಿಸರ್ಗವು ಎಸೆಯುವ ಸವಾಲುಗಳಿಗೆ ಜೀವಿವರ್ಗದ ಎಲ್ಲ ಸದಸ್ಯರೂ ಒಟ್ಟಾಗಿ ಹೊಂದಿಕೊಳ್ಳುವ ಮೂಲಕ ವಿಕಾಸಪಥದಲ್ಲಿ ಮುಂದುವರೆದಿವೆ. ಇದಕ್ಕೆ ಬೇಕಾದ ಹತ್ತಾರು ಪುರಾವೆಗಳನ್ನು ಮಾನವಶಾಸ್ತ್ರಜ್ಞರು, ಜೀವವಿಜ್ಞಾನಿಗಳು ಒದಗಿಸಿದ್ದಾರೆ. ಈ ಸಹಬಾಳ್ವೆಗೆ ಅಗತ್ಯವಾದುದು ಪರಾನುಭೂತಿ, ಇದು ಸಹಾನುಭೂತಿಗಿಂತ ಕೊಂಚ ಬೇರೆಯಾದುದು. ಸರ್ವಜ್ಞನು ತನ್ನ ಒಂದು ತ್ರಿಪದಿಯಲ್ಲಿ ’ತನ್ನಂತೆ ಪರರ ಬಗೆದರೆ ಕೈಲಾಸ ಬಿನ್ನಣವಕ್ಕು’ ಎಂದಿದ್ದಾನೆ. ಹಾಗಂದರೇನು? ಹೀಗೆ ತನ್ನಂತೆ ಪರರನ್ನು ಬಗೆಯುವುದು ಎರಡು ರೀತಿಯಲ್ಲಿ ಸಾಧ್ಯ. ಬೀದಿಯಲ್ಲಿ ಹೋಗುತ್ತಿರುವ ಹಸಿದ ಪ್ರಾಣಿಯೊಂದಕ್ಕೆ ನೆರವಾಗಿ, ಅದಕ್ಕೆ ಆಹಾರವನ್ನು ಒದಗಿಸಲು, ನಮ್ಮಲ್ಲಿ ಆ ಪ್ರಾಣಿಯ ಬಗೆಗೆ ಸಹಾನುಭೂತಿ ಅಗತ್ಯ. ಮಾನವರ ಬದುಕಿನಲ್ಲೂ, ಅದರಲ್ಲೂ ಸಾಮಾಜಿಕ ನೆಲೆಯ ಬದುಕಿನಲ್ಲಿ ಈ ಸಹಾನುಭೂತಿಯ ಅಗತ್ಯವನ್ನು ಒತ್ತಿಹೇಳಲಾಗುತ್ತದೆ. ಇದು ತಪ್ಪೇನೂ ಅಲ್ಲ. ಇದಲ್ಲದೆ ಇನ್ನೂ ಒಂದು ದಾರಿ ಇದೆ. ಅದಕ್ಕಾಗಿ ನಾವು ಕಳೆದುಕೊಳ್ಳಲೂ ಸಿದ್ಧರಿರಬೇಕಾಗುತ್ತದೆ. ಇದೇ ಪರಾನುಭೂತಿಯ ದಾರಿ. ಸಹಾನುಭೂತಿಯಲ್ಲಿ ನಾವು ಇದ್ದಲ್ಲೇ ಇರುತ್ತೇವೆ. ನಮ್ಮ ಸಾಮಾಜಿಕ ಸ್ಥಾನಮಾನಗಳಲ್ಲಿ ಬದಲಾವಣೆಗಳಾಗುವುದಿಲ್ಲ. ಆದರೆ ಪರಾನುಭೂತಿಯಲ್ಲಿ ಹೀಗಿರುವುದಿಲ್ಲ. ಇನ್ನೊಬ್ಬರಾಗಿ ನಮ್ಮನ್ನು ನಾವು ಬದಲಿಸಿಕೊಂಡು ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ನಮ್ಮ ಪರಿವೇಶವನ್ನು ಕಳಚಿಕೊಳ್ಳುವ ಅಗತ್ಯವಿರುತ್ತದೆ. ಸರ್ವಜ್ಞನ ಮಾತನ್ನು ಈ ನೆಲೆಯಲ್ಲಿ ಅರಿಯಬೇಕೆಂದು ನನಗೆ ತೋರುತ್ತದೆ.

ಪೈಪೋಟಿಯ ನೆಲೆಯು ಅಸಮಾನತೆಯನ್ನು ಬೆಳೆಸುವ, ಕಾಯ್ದುಕೊಳ್ಳುವ ದಿಕ್ಕಿನಲ್ಲಿ ಸಾಗಿದರೆ ಪರಾನುಭೂತಿಯ ನೆಲೆ ಎಲ್ಲರ ಒಳಿತನ್ನೂ ಬಯಸುವ ಸಾಧಿಸುವ ನೆಲೆಗೆ ನಮ್ಮನ್ನು ಒಯ್ಯಬಲ್ಲುದು. ಈ ಪರಾನುಭೂತಿಯನ್ನು ನಮ್ಮ ಬದುಕಿನ ನೆಲೆಯನ್ನಾಗಿ ಬೆಳೆಸುವ ಕಡೆಗೆ ಹೋಗುವುದು ಹೇಗೆ? ನಮ್ಮ ಸಂವಿಧಾನದಲ್ಲಿ ನೆಲೆಗೊಂಡಿರುವ ಸೋದರತ್ವದ ಮಾತನ್ನು ಈ ದಿಕ್ಕಿನಲ್ಲಿ ಅರಿಯಬೇಕಿದೆ. ವ್ಯವಸ್ಥೆಯು ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ಎದುರುಬದಿರಾಗಿಸಿ ನಿಲ್ಲಿಸಿದೆ. ಒಂದು ಇನ್ನೊಂದನ್ನು ಹತ್ತಿಕ್ಕುವುದರಲ್ಲಿ ನಿರತವಾಗಿವೆ. ಹೀಗಿರುವಾಗ ಉಳಿವಿನ ಮೂರನೆಯ ದಾರಿಯೆಂದರೆ ಪರಾನುಭೂತಿಯ ನೆಲೆ. ಈ ಪಾಠ ನಮಗೆ ಹೊಸದಲ್ಲ. ಇದು ಮರೆತಿರುವ ಪಾಠ. ಇದನ್ನು ಮರಳಿ ನಮ್ಮ ಸಾಂಸ್ಕೃತಿಕ ನೆನಪಿನಿಂದ ಹೊರತಂದು ನೆಲೆಗೊಳಿಸಿಕೊಳ್ಳಬೇಕಿದೆ. ಅದಕ್ಕೆ ಬೇಕಾದ ದಾರಿಗಳನ್ನು ಹುಡುಕಿಕೊಳ್ಳಬೇಕಿದೆ.

ಕೆ ವಿ ನಾರಾಯಣ

ಕೆ ವಿ ನಾರಾಯಣ
ಭಾಷಾಶಾಸ್ತ್ರಜ್ಞ, ವಿಮರ್ಶಕ. ’ತೊಂಡುಮೇವು’ ಕೆವಿಎನ್ ಅವರ ಬರಹಗಳನ್ನು ಸಂಕಲಿಸಿದ ಸಂಪುಟ ಸರಣಿ. ಇತ್ತೀಚಿಗೆ ಸಾರ್ತ್ರನ ’ಬುದ್ಧಿಜೀವಿಗಳ ಬಿಕ್ಕಟ್ಟು’ ಪುಸ್ತಕವನ್ನು ಕನ್ನಡದಲ್ಲಿ ನಿರೂಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಕಸ್ಟಡಿ ಅವಧಿ ಮೇ 31ರವರೆಗೆ ವಿಸ್ತರಿಸಿದ...

0
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 31 ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಫೆಬ್ರವರಿ 26,...