Homeಕರ್ನಾಟಕಅಂಬೇಡ್ಕರ್‍‌ಗೆ ಅವಮಾನ: ಜೈನ್ ವಿವಿ ಮಾನ್ಯತೆ ರದ್ದುಪಡಿಸಲು ವಿಪಕ್ಷಗಳ ಆಗ್ರಹ

ಅಂಬೇಡ್ಕರ್‍‌ಗೆ ಅವಮಾನ: ಜೈನ್ ವಿವಿ ಮಾನ್ಯತೆ ರದ್ದುಪಡಿಸಲು ವಿಪಕ್ಷಗಳ ಆಗ್ರಹ

- Advertisement -
- Advertisement -

ಬುಧವಾರ ವಿಧಾನಸಭೆ ಶೂನ್ಯ ವೇಳೆಯಲ್ಲಿ ಡಾ.ಅಂಬೇಡ್ಕರ್‍‌ಗೆ ಜೈನ್ ವಿಶ್ವ ವಿದ್ಯಾನಿಲಯದಲ್ಲಿ ಅಪಮಾನ ಮಾಡಿರುವ ಘಟನೆ ಪ್ರತಿಧ್ವನಿಸಿತು. ವಿಶ್ವವಿದ್ಯಾಲಯದ ಮಾನ್ಯತೆ ರದ್ದು ಮಾಡಬೇಕು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಜೆಡಿಎಸ್‌ ಸದಸ್ಯ ಕೆ.ಅನ್ನದಾನಿ ವಿಷಯ ಪ್ರಸ್ತಾಪಿಸಿ, ”ಜೈನ್, ವಿಶ್ವವಿದ್ಯಾಲಯವು ಸ್ವಾಯತ್ತ (ಡೀಮ್ಸ್‌) ವಿವಿಯಾಗಿದ್ದು, ಆಡಳಿತ ಮಂಡಳಿ ಗಮನಕ್ಕೆ ಬಾರದೇ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ. ಉದ್ದೇಶಪೂರ್ವಕವಾಗಿಯೇ ಅವಮಾನ ಮಾಡಲಾಗಿದೆ” ಎಂದು ದೂರಿದರು.

”ಪ್ರಾಧ್ಯಾಪಕರು, ಡೀನ್‍ಗಳು ನೋಡಿದ ನಂತರವೇ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುತ್ತದೆ. ಜೈನ್ ವಿಶ್ವವಿದ್ಯಾಲಯವನ್ನು ಮುಚ್ಚಬೇಕು’’ ಎಂದು ಪಟ್ಟು ಹಿಡಿದರು. ಅಲ್ಲದೆ, ಈಗಲೇ ಈ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಎದುರು ಧರಣಿಗೆ ಮುಂದಾದರು.

”ಕೋಳಿ ಗೂಡಿನಂತಿರುವ ಜೈನ್ ವಿವಿಗೆ ಸ್ಥಾಯತ್ತ ಸ್ಥಾನ ನೀಡಿದ್ದು ಯಾರು? ಸರಿಯಾಗಿ ಶಿಕ್ಷಣ ನೀಡುವ ಯೋಗ್ಯತೆ ಇಲ್ಲದ ಇಂತಹವರು, ಸಂವಿಧಾನ ಶಿಲ್ಪಿ, ವಿಶ್ವ ನಾಯಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವುದು ಅಕ್ಷಮ್ಯ ಈ ವಿಶ್ವ ವಿದ್ಯಾನಿಲಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಅನ್ನದಾನಿ ಏರು ಧ್ವನಿಯಲ್ಲಿ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಯು.ಟಿ. ಖಾದರ್, ”ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಜೈನ್ ವಿಶ್ವವಿದ್ಯಾಲಯದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಆಡಳಿತ ಮಂಡಳಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ” ಎಂದು ಆರೋಪಿಸಿದರು.

ಇದನ್ನೂ ಓದಿ: ಜೈನ್‌ ವಿವಿ ವಿವಾದ ಉದ್ದೇಶಪೂರ್ವಕ ಕೃತ್ಯ; ಬೆಂಗಳೂರು ವಿವಿ ವಿದ್ಯಾರ್ಥಿಗಳ ಆಕ್ರೋಶ

”ಜೈನ್‌ ವಿಶ್ವವಿದ್ಯಾಲಯದಲ್ಲಿ ಕಿರುನಾಟಕ ಅಭಿನಯದ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ, ಇದು ಖಂಡನೀಯ. ವಿಶ್ವವಿದ್ಯಾಲಯದ ಡೀಮ್ಡ್ ಮಾನ್ಯತೆ ರದ್ದು ಮಾಡಬೇಕು’’ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ”ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಈ ಪ್ರಕರಣ ಸಂಬಂಧ ಕೆಲವರನ್ನು ಬಂಧಿಸಿದ್ದು, ಜೈನ್ ವಿವಿ ಮಾನ್ಯತೆ ರದ್ದುಪಡಿಸುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು” ಎ೦ದು ಭರವಸೆ ನೀಡಿದ್ದಾರೆ.

ಘಟನೆ ಬಗ್ಗೆ:

ಬೆಂಗಳೂರಿನ ಜೈನ್‌‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರ ನಾಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ, ಮೀಸಲಾತಿ ಕುರಿತು ಕ್ಷುಲ್ಲಕವಾಗಿ ಚಿತ್ರಿಸಿ ಸ್ಕಿಟ್‌ ಪ್ರದರ್ಶಿಸಿದ್ದರು. ಜೈನ್‌‌ ವಿಶ್ವವಿದ್ಯಾನಿಲಯದ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸ್ಕಿಟ್‌ನಲ್ಲಿ ವಿದ್ಯಾರ್ಥಿಗಳು ”ಬಿ.ಆರ್.ಅಂಬೇಡ್ಕರ್ ಅಲ್ಲ, ಅದು ಬಿಯರ್ ಅಂಬೇಡ್ಕರ್” ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಮತ್ತು ಅದರಲ್ಲಿಯ ಪಾತ್ರದಾರಿ ದಲಿತ ಎನ್ನುವ ಕಾರಣಕ್ಕೆ ‘ಡೋಂಟ್‌ ಟಚ್ ಮಿ ಟಚ್ ಮಿ…’ ಎನ್ನುವ ಹಾಡನ್ನು ಹಾಕಿ ದಲಿತರನ್ನು ಅವಮಾನಿಸಿದ್ದಾರೆ. ಅದೇ ರೀತಿ ಕೆಲವು ಅವಹೇಳನಕಾರಿ ಭಾಷೆ ಬಳಸಿ ವಿವಾದ ಹುಟ್ಟುಹಾಕಿದ್ದಾರೆ. ಈ ಸ್ಕಿಟ್‌ನ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಬ್ಯಾನ್ ಜೈನ್‌ ಯೂನಿವರ್ಸಿಟಿ (ಜೈನ್ ವಿಶ್ವವಿದ್ಯಾನಿಲಯ ರದ್ದುಗೊಳಿಸಿ) ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿರುವ ಪೋಸ್ಟರ್‌ ವೈರಲ್ ಆಗುತ್ತಿದೆ. ಇದೀಗ ವಿಧಾನಸೌಧದಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಕಸ್ಟಡಿ ಅವಧಿ ಮೇ 31ರವರೆಗೆ ವಿಸ್ತರಿಸಿದ...

0
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 31 ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಫೆಬ್ರವರಿ 26,...