Homeಕರ್ನಾಟಕಕರ್ನಾಟಕದ ಕೆಸರುಗದ್ದೆ ರಾಜಕಾರಣದಲ್ಲಿ ಉದಯಿಸುವುದೇ ಹೊಸ ಪಕ್ಷ?

ಕರ್ನಾಟಕದ ಕೆಸರುಗದ್ದೆ ರಾಜಕಾರಣದಲ್ಲಿ ಉದಯಿಸುವುದೇ ಹೊಸ ಪಕ್ಷ?

- Advertisement -
- Advertisement -

ಸಿದ್ರಾಮಯ್ಯ ಹೊಸ ಪ್ರಾದೇಶಿಕ ಪಕ್ಷ ಕಟ್ತಾರಂತೆ! ಯಡ್ಯೂರಪ್ಪನೂ ಜೊತೆಗೂಡ್ತಾರಂತೆ! ಕೆ.ಜೆ.ಜಾರ್ಜ್ ಒಡೆತನದ ಹಿಲ್‍ಟನ್ ಹೊಟೇಲ್‍ನಲ್ಲಿ ಅದಾಗಲೇ ಮೊದಲ ಸುತ್ತಿನ ಸಭೆ ಮುಗಿದುಹೋಗಿದೆಯಂತೆ! ಹೊಸ ಪಕ್ಷದ ಲಾಂಛನದಲ್ಲಿ ಬಸವಣ್ಣ, ಕುವೆಂಪು, ದೇವರಾಜ್ ಅರಸು, ಟಿಪ್ಪೂ ಸುಲ್ತಾನ್ ಫೋಟೊಗಳೂ ಫಿಕ್ಸ್ ಆಗಿವೆಯಂತೆ……. ಇವು ಸದ್ಯದ ಬ್ರೇಕಿಂಗ್ ನ್ಯೂಸ್‍ಗಳು!

ರಾಜಕೀಯ ವಿದ್ಯಮಾನಗಳಲ್ಲಿ ಹೇಗೆ ಎಲ್ಲವೂ ಸತ್ಯ ಎಂದು ನಂಬಲಿಕ್ಕಾಗುವುದಿಲ್ಲವೋ, ಹಾಗೆಯೇ ಎಲ್ಲವೂ ಸುಳ್ಳು ಎಂದು ತಳ್ಳಿಹಾಕಲಿಕ್ಕೂ ಬರುವುದಿಲ್ಲ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‍ನೊಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹೊಸ ಪಕ್ಷದ ಪ್ರಸವಕ್ಕೆ ಒಂದೀಟು ನರಳಾಟ ಶುರುವಾದರೂ ಅಚ್ಚರಿಯಿಲ್ಲ. ಯಾಕೆಂದರೆ ಈ ಮೂರೂ ಪಕ್ಷಗಳು ಈಗ ಅಕ್ಷರಶಃ ಮುರಿದ ಮನೆಯಂತಾಗಿವೆ. ಕಾಂಗ್ರೆಸ್‍ನೊಳಗೆ ಮುನಿಯಪ್ಪ, ಮೊಯ್ಲಿ, ಹರಿಪ್ರಸಾದ್ ತರಹದ ಹಳೇ ನಾಣ್ಯಗಳು ಸಿದ್ದು ವಿರುದ್ಧ ಗರಂ ಆಗಿದ್ದರೆ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಎಂಬ ಮುಖವಾಡದ ಹಿಂದೆ ಅವಿತು ಬಿ.ಎಲ್.ಸಂತೋಷ್ ಕೊಡುತ್ತಿರುವ ಕಾಟಕ್ಕೆ ಯಡ್ಯೂರಪ್ಪ ಫುಲ್ ಹೈರಾಣಾಗಿ ಹೋಗಿದ್ದಾರೆ. ಅತ್ತ ಒಕ್ಕಲಿಗರ ಜಾತಿರಾಜಕಾರಣವನ್ನೇ ಅವಲಂಬಿಸಿದ್ದ ಜೆಡಿಎಸ್‍ನ ಕುಮಾರಸ್ವಾಮಿ ಕುಲಗುರು ಆದಿಚುಂಚನಗಿರಿಯ ನಿರ್ಮಲಾನಂದರ ಫೋನಿಗೇ ಕಳ್ಳಗಿವಿಯಾನಿಸಿದ ಆರೋಪ ಹೊತ್ತು ಕೊಸರಾಡುತ್ತಿದ್ದಾರೆ. ಒಕ್ಕಲಿಗರೇ ನಿರ್ಣಾಯಕರಾದ ತುಮಕೂರು, ಮಂಡ್ಯ ಕ್ಷೇತ್ರಗಳಲ್ಲಿ ಅಜ್ಜ-ಮೊಮ್ಮಗ ಒಟ್ಟೊಟ್ಟಿಗೆ ಸೋತಾಗಲೆ ಜೆಡಿಎಸ್‍ನ ಜಾತಿ ಕೆಮಿಸ್ಟ್ರಿ ಸಣ್ಣಗೆ ಸೊರಗಿದ ಸುಳಿವು ಸಿಕ್ಕಿದ್ದವು. ಈಗ ಕುಮಾರಸ್ವಾಮಿ ಮೇಲೆ ಬಂದಿರುವ ಆರೋಪ ಪಕ್ಷವನ್ನು ಮತ್ತಷ್ಟು ಮೆತ್ತಗಾಗಿಸಿದರೆ ಅಚ್ಚರಿಯಿಲ್ಲ.

ಸಾಮಾನ್ಯವಾಗಿ ರಾಜಕಾರಣ ಹೀಗೆ ಹೋಲ್‍ಸೇಲಾಗಿ ಅಸ್ಥಿರತೆಗೆ ಸಿಲುಕಿದಾಗ ಹೊಸ ಪಕ್ಷದಂತಹ ಸುದ್ದಿಗಳು ಹುಟ್ಟೋದು ಸಹಜ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶ ನೋಡಿದರೆ ಇದು ಒಂದು `ಸುದ್ದಿ’ಯಾಗಿ ಕೆಲದಿನ ಸದ್ದು ಮಾಡಬಹುದೇ ವಿನಾಃ ದೀರ್ಘಕಾಲದ ‘ವಿದ್ಯಮಾನ’ವಾಗುವ ಸಾಧ್ಯತೆ ಬಲು ಕ್ಷೀಣ!
ಇಲ್ಲಿ ಯಡ್ಯೂರಪ್ಪ ಮತ್ತು ಸಿದ್ರಾಮಯ್ಯನವರ ಸೋಕಾಲ್ಡ್ `ಜಂಟಿಯಾನ’ಕ್ಕಿರುವ `ಲೋಕಲ್ ಸಿಂಪ್ಟಮ್’ಗಳಿಗೂ ಮುನ್ನ ಪ್ರಾದೇಶಿಕ ಪಕ್ಷಗಳ ಹುಟ್ಟು-ಅಸ್ತಿತ್ವಗಳ ಜಟಿಲತೆಯನ್ನೊಮ್ಮೆ ಗಮನಿಸೋಣ.

ಈಗ ಭಾರತದಲ್ಲಿ ನಾಲ್ಕು ಡಜನ್‍ಗು ಹೆಚ್ಚು ಪ್ರಾದೇಶಿಕ ಪಕ್ಷಗಳಿವೆ. ಬೇರೆಬೇರೆ ಕಾಲಘಟ್ಟದಲ್ಲಿ ರೂಪುತಳೆದ (ಶಿರೋಮಣಿ ಅಕಾಲಿದಳ ಮತ್ತು ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ನಂತವು ಸ್ವಾತಂತ್ರಪೂರ್ವದಲ್ಲೇ ಅಸ್ತಿತ್ವಕ್ಕೆ ಬಂದಂತವು) ಇವುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಪ್ರಾದೇಶಿಕ ಪಕ್ಷಗಳು ಹುಟ್ಟಲು ಮುಖ್ಯವಾಗಿ ನಾಲ್ಕು ಕಾರಣಗಳು ಅಥವಾ ಪ್ರಚೋದನೆಗಳನ್ನು ನಾವು ಗುರುತಿಸಬಹುದು. ಮೊದಲನೆಯದ್ದು, ತನ್ನ ರಾಜ್ಯಕ್ಕೆ ಅಥವಾ ಪ್ರದೇಶಕ್ಕೆ ಹೆಚ್ಚಿನ ಅಧಿಕಾರವನ್ನು ಬೇಡುವ `ಪ್ರಾದೇಶಿಕ ಸ್ವಾಯತ್ತತೆ’ (ಉದಾ: ಜಮ್ಮು-ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್). ಎರಡನೆಯದು, ಪ್ರತ್ಯೇಕ ರಾಜ್ಯದ ಕೂಗು (ಉದಾ: ತೆಲಂಗಾಣ ರಾಷ್ಟ್ರೀಯ ಸಮಿತಿ – ಟಿಆರ್‌ಎಸ್). ಮೂರನೆಯದು, ಪ್ರಾದೇಶಿಕ ಜನಾಂಗೀಯ ಅಸ್ಮಿತೆಯ ಸ್ವಾಭಿಮಾನ (ಉದಾ: ಮಹಾರಾಷ್ಟ್ರದ ಶಿವಸೇನೆ ಮತ್ತು ತಮಿಳುನಾಡಿನ ದ್ರಾವಿಡ ಪಕ್ಷಗಳು). ನಾಲ್ಕನೆಯದು, ಪ್ರಾದೇಶಿಕ ಪ್ರಬಲ (ಸಂಖ್ಯಾವಾರು) ಜಾತಿಗಳ ಧ್ರುವೀಕರಣ (ಉದಾ: ಸಮಾಜವಾದಿ ಪಕ್ಷ, ಆರ್‍ಜೆಡಿ).

ಆದರೆ ಆಮ್ ಆದ್ಮಿ ಪಕ್ಷ ಈ ನಾಲ್ಕು ಕಾರಣಗಳಿಗೆ ಅಪವಾದದಂತೆ ಹುಟ್ಟಿತು. ವಾಸ್ತವದಲ್ಲಿ ಸಾರ್ವತ್ರಿಕ ಸಾಮಾಜಿಕ ಜಾಗೃತಿಯ ಭಾಗವಾಗಿ ಜನ್ಮತಳೆದ ಆಮ್ ಆದ್ಮಿ ಪಾರ್ಟಿ ದಿಲ್ಲಿ ಅಥವಾ ಹರಿಯಾಣಕ್ಕಷ್ಟೆ ಸೀಮಿತವಾದಂತಹ ಒಂದು ಪ್ರಾದೇಶಿಕ ಪಕ್ಷವಾಗಿರಲಿಲ್ಲ. ಸಮರ್ಥ ಪರ್ಯಾಯ ರಾಷ್ಟ್ರೀಯ ಪಕ್ಷವಾಗುವ ಸಾಧ್ಯತೆ ಅದಕ್ಕಿತ್ತು. ಆದರೆ ಅರವಿಂದ್ ಕೇಜ್ರಿವಾಲರು ದಿಲ್ಲಿಗಷ್ಟೇ ಸೀಮಿತಗೊಳಿಸಿ ಪ್ರಾದೇಶಿಕ ಪಕ್ಷಕ್ಕೆ ಸಂಕುಚಿತಗೊಳಿಸಿದರು.

ಸದ್ಯದ ಕರ್ನಾಟಕ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆ ಗಮನಿಸಿದರೆ ಈ ನಾಲ್ಕರಲ್ಲಿ ಯಾವ ಪ್ರಚೋದನೆಯೂ ಮತ್ತೊಂದು ಪಕ್ಷವನ್ನು ಹುಟ್ಟುಹಾಕುವಷ್ಟು ಫಲವತ್ತತೆ ಪಡೆದಿಲ್ಲ. ಇದ್ದರೆ, ನಾಲ್ಕನೆಯ ಪ್ರಚೋದನೆ ಮಾತ್ರ ಸಣ್ಣ ಸಾಧ್ಯತೆ ತೆರೆದಿಡಬಹುದು. ಆದರೆ 2013ರಲ್ಲೇ ಈ ಪ್ರಯತ್ನಕ್ಕೆ ಮುಂದಾಗಿದ್ದ ಯಡ್ಯೂರಪ್ಪನವರು ಲಿಂಗಾಯತರ ಜಾತಿ ಧ್ರುವೀಕರಣವನ್ನು ಆಧರಿಸಿ ಕಟ್ಟಿದ ಕೆಜೆಪಿ ಹೀನಾಯ ಹಿನ್ನಡೆ ಕಂಡಿತ್ತು. ಬಿಜೆಪಿಯನ್ನು ಮಕಾಡೆ ಮಲಗಿಸಿದ್ದಷ್ಟೇ ಅದರ ಸಾಧನೆ.

ಇತ್ತ ಸಿದ್ದರಾಮಯ್ಯನವರನ್ನು `ಅಹಿಂದ’ ನಾಯಕ ಎನ್ನಲಾಗುತ್ತದೆಯಾದರು `ಅಹಿಂದ’ ಎನ್ನುವುದು ಒಂದು ಸಮಾನ ಬೆಸುಗೆಯ ಸಾಮಾಜಿಕ ಸಂರಚನೆಯಲ್ಲ. ಹತ್ತುಹಲವು ತಳಸಮುದಾಯಗಳ, ಹಿಂದುಳಿದ ವರ್ಗಗಳ ಒಂದು ರಾಜಕೀಯ ಏಕೀಕರಣದ ದನಿಯಷ್ಟೆ. ಆಳವಾದ ಬೆಸುಗೆಯಿಲ್ಲದ ಈ ಸಮುದಾಯಗಳು ಪ್ರಬಲ ಜಾತಿಯೊಂದರಂತೆ ಸಾರ್ವತ್ರಿಕವಾಗಿ ಒಂದು ಪಕ್ಷದ ಮತಗಳಾಗಿ ರೂಪಾಂತರವಾಗುವುದು ಎಷ್ಟು ಕಷ್ಟವೋ, ಪ್ರಾದೇಶಿಕವಾಗಿ ಒಂದುಕಡೆ ಸಾಂದ್ರಿತವಾಗದೆ ಅಲ್ಲಲ್ಲಿ ಚದುರಿಹೋಗಿರುವುದೂ ನಮ್ಮ ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಈ ಅಹಿಂದ ಸಮುದಾಯಗಳಿಗಿರುವ ದೊಡ್ಡ ಹಿನ್ನಡೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ರಾಮಯ್ಯನವರ ಜನಪ್ರಿಯ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಪಕ್ಷ ಕಳೆದ ಸಾಲಿಗಿಂತ ಶೇ.1.4ನಷ್ಟು ಹೆಚ್ಚು ಮತಗಳಿಸಿದರೂ (ಒಟ್ಟು ಶೇ.38.14) ಕೇವಲ ಎಂಬತ್ತು ಎಂಎಲ್‍ಎಗಳನ್ನಷ್ಟೇ ಗೆಲ್ಲಿಸಿಕೊಳ್ಳಲು ಸಾಧ್ಯವಾಯ್ತು.
2013ರಲ್ಲಿ ಶೇ.36.74 ಮತ ಗಳಿಸಿದ್ದರೂ ಕಾಂಗ್ರೆಸ್ 122 ಸ್ಥಾನ ಗಳಿಸಿತ್ತು.

ಆ ಸಲ ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ಮತ್ತು ನಾಯಕ ಜನಾಂಗದ ಮತಗಳು ಯಡ್ಯೂರಪ್ಪ (ಕೆಜೆಪಿ) ಮತ್ತು ಶ್ರೀರಾಮುಲು (ಬಿಎಸ್‍ಆರ್ ಕಾಂಗ್ರೆಸ್) ಕಾರಣಕ್ಕೆ ಛಿದ್ರಗೊಂಡಿದ್ದರಿಂದ ಅಹಿಂದ ಮತಗಳ ಕ್ರೋಢೀಕರಣವು ಗೆಲುವಿನ ಸ್ಥಾನಗಳಾಗಿ ಪರಿವರ್ತನೆಗೊಂಡಿದ್ದವು. 2018ರಲ್ಲಿ ಮತಗಳಿಕೆ ಶೇ.1.4ರಷ್ಟು ಹೆಚ್ಚಾದರು (ಇವೂ ಅಹಿಂದ ಮತಗಳೆನ್ನುವುದರಲ್ಲಿ ಯಾವ ಸಂಶಯವಿಲ್ಲ್ಲ) ಕಾಂಗ್ರೆಸ್‍ಗೆ ಅವು ಸ್ಥಾನಗಳಾಗಿ ಪರಿವರ್ತನೆಯಾಗಿಲಿಲ್ಲ. ಯಾಕೆಂದರೆ ಆಯಾ ಕ್ಷೇತ್ರದಲ್ಲಿ ನಿರ್ಣಾಯಕವೆನಿಸುವಷ್ಟು ಸಾಂದ್ರಿತವಾದ ಪ್ರಭಾವಿ ಜಾತಿಮತಗಳು ಬಿಜೆಪಿ ಪರವಾಗಿ ಧ್ರುವೀಕರಣಗೊಂಡಿದ್ದವು. ಇದು ಅಹಿಂದ ಸಮುದಾಯಕ್ಕಿರುವ ದೊಡ್ಡ ಮಿತಿಯೂ ಹೌದು.

ಅಲ್ಲದೇ, ಅಹಿಂದ ಮತಗಳ ರಾಜಕಾರಣದ ಅಂತಃಸತ್ವ ಇರುವುದೇ ಪ್ರಬಲ ಜಾತಿಗಳ ವಿರುದ್ಧ ಸೆಣೆಸುವುದರಲ್ಲಿ. ಉತ್ತರದಲ್ಲಿ ಲಿಂಗಾಯತರು ಮತ್ತು ದಕ್ಷಿಣದಲ್ಲಿ ಒಕ್ಕಲಿಗರ ರಾಜಕಾರಣವನ್ನು ಪ್ರತಿರೋಧಿಸುವುದೇ ಅಹಿಂದ ರಾಜಕಾರಣದ ಅಡಿಪಾಯ. ಆ ಕಾರಣಕ್ಕೇ ಸಿದ್ರಾಮಯ್ಯರನ್ನು ಈ ಸಮುದಾಯಗಳು ತಮ್ಮ ನಾಯಕ ಎಂದು ಸ್ವೀಕರಿಸಿವೆ. ಒಂದೊಮ್ಮೆ ಸಿದ್ದು-ಯಡ್ಯೂರಪ್ಪ ಒಂದಾಗಿ ಹೊಸ ರಾಜಕಾರಣ ಶುರು ಮಾಡಿದರೆ ಆಗಲೂ ಈ ಅಹಿಂದ ಮತಗಳು ತಮ್ಮ ಪಾರಂಪಾರಿಕ ಸೆಣೆಸಾಟವನ್ನು ಬದಿಗಿರಿಸಿ ಸಿದ್ದು ಬೆನ್ನಿಗೆ ನಿಲ್ಲುತ್ತವಾ? ಎಂಬ ಪ್ರಶ್ನೆಯೂ ಉದ್ಭವಿಸುತ್ತೆ. ಯಾಕೆಂದರೆ ಜೆಡಿಎಸ್ (ಒಕ್ಕಲಿಗರು) ಜೊತೆ ಕಾಂಗ್ರೆಸ್ (ಅಹಿಂದ) ಮೈತ್ರಿ ಮಾಡಿಕೊಂಡು ನಡೆಸಿದ 2019ರ ಲೋಕಸಭಾ ಫಲಿತಾಂಶ ಇಲ್ಲಿ ಎಚ್ಚರಿಕೆಯ ಗಂಟೆಯಂತೆ ಕೆಲಸ ಮಾಡುತ್ತೆ.

ಇನ್ನು, ಅಷ್ಟೂ ಪ್ರಾದೇಶಿಕ ಪಕ್ಷಗಳ ಸಂರಚನೆಯನ್ನು ಗಮನಿಸಿದರೆ ಅರ್ಥವಾಗುವ ಮತ್ತೊಂದು ಪಾಠವೆಂದರೆ, ಅವು ಏಕವ್ಯಕ್ತಿ ಅಥವಾ ಒಂದು ಕುಟುಂಬದ ಆಸ್ತಿಯಂತೆ ತಮ್ಮ ಅಸ್ತಿತ್ವ ಉಳಿಸಿಕೊಂಡಿರೋದು. ಸಮಾಜವಾದಿ ಪಕ್ಷಕ್ಕೆ ಮುಲಾಯಂ ಯಾದವ್ ಕುಟುಂಬ, ಆರ್‍ಜೆಡಿಗೆ ಲಾಲು ಪ್ರಸಾದ್, ಬಿಜು ಜನತಾದಳ್‍ಗೆ ನವೀನ್ ಪಟ್ನಾಯಕ್, ತೃಣಮೂಲ ಕಾಂಗ್ರೆಸ್‍ಗೆ ಮಮತಾ ದೀದಿ, ಡಿಎಂಕೆಗೆ ಕರುಣಾನಿಧಿ ಫ್ಯಾಮಿಲಿ, ಟಿಆರ್‍ಎಸ್‍ಗೆ ಕೆ.ಚಂದ್ರಶೇಖರ್ ರಾವ್, ಶಿವಸೇನೆಗೆ ಠಾಕ್ರೆ ಕುಟುಂಬ, ವೈಎಸ್‍ಆರ್ ಕಾಂಗ್ರೆಸ್‍ಗೆ ಜಗನ್ ಕುಟುಂಬ, ರಾಷ್ಟ್ರೀಯ ಲೋಕದಳಕ್ಕೆ ಅಜಿತ್ ಸಿಂಗ್ ಕುಟುಂಬ, ಜೆಡಿಎಸ್‍ಗೆ ದೇವೇಗೌಡರ ಫ್ಯಾಮಿಲಿ… ಹೀಗೆ ಅವೆಲ್ಲವೂ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಪಾಳೆಗಾರಿಕೆಯಲ್ಲೆ ಬಾಳುತ್ತಿವೆ. ಎಷ್ಟು ಅಲ್ಲಗಳೆದರು ಇದು ವಾಸ್ತವ.

1920ರಲ್ಲೇ ಅಸ್ತಿತ್ವಕ್ಕೆ ಬಂದ ಶಿರೋಮನಿ ಅಕಾಲಿದಳ ಪಂಜಾಬಿಗರ ಅಸ್ಮಿತೆಯ ಸಾಮೂಹಿಕ ನಾಯಕತ್ವದ ಪಕ್ಷವಾಗಿ ಗುರುತಿಸಿಕೊಂಡಿತ್ತು. ಆದರೆ 1970ರನಂತರ, ಪ್ರಕಾಶ್ ಸಿಂಗ್ ಬಾದಲ್ ಅಕಾಲಿದಳದ ನಾಲ್ಕನೆಯ ಸಿಎಂ ಆದ ತರುವಾಯ ಅದು ಬಾದಲ್ ಫ್ಯಾಮಿಲಿಯ ಕೌಟುಂಬಿಕ ಆಸ್ತಿಯಾಗಿದೆ. ಹೀಗಿರುವಾಗ ಅಹಿಂದ ಮತಸಮೂಹದ ಲೀಡರಿಕೆ ಹೊಂದಿರುವ ಸಿದ್ರಾಮಯ್ಯ ಮತ್ತು ಲಿಂಗಾಯತ ಲೀಡರಿಕೆಯ ಯಡ್ಯೂರಪ್ಪ ಜೊತೆಗೂಡಿ ಪ್ರಾದೇಶಿಕ ಪಕ್ಷ ಹುಟ್ಟುಹಾಕಿದರೆ, ಅದು ಮತ್ತೊಂದು ರಾಜಕೀಯ ಹೊಯ್ದಾಟವಾಗುವುದೆ ವಿನಾಃ ಒಂದು ಪರ್ಯಾಯ ಪಕ್ಷವಾಗಿ ರೂಪುಗೊಳ್ಳುವ ಸಾಧ್ಯತೆಯೇ ಇಲ್ಲ. ಯಾಕೆಂದರೆ ಇವರಿಬ್ಬರ ಪ್ರತಿಷ್ಠೆಗಳೇ ಆ ಪ್ರಯತ್ನಕ್ಕೆ ಮುಳುವಾಗುತ್ತವೆ.

ಇನ್ನು ಯಡಿಯೂರಪ್ಪರನ್ನು ಪಕ್ಕಕ್ಕಿಟ್ಟು ಸಿದ್ದು ಏಕಾಂಗಿಯಾಗಿ ಪಕ್ಷ ಕಟ್ಟಲು ಹೊರಟರೆ, ಮೊದಲೇ ವಿವರಿಸಿದಂತೆ `ಅಹಿಂದ’ ಮತಗಳ ರಾಜಕೀಯ ಮಿತಿಗಳು ಅವರನ್ನು ಅತಂತ್ರಗೊಳಿಸಲಿವೆ.
ಅಷ್ಟಕ್ಕೂ ಸಿದ್ರಾಮಯ್ಯನವರಿಗೆ ಈ ಅನುಭವ ಹೊಸದೇನೂ ಅಲ್ಲ. 2005ರಲ್ಲಿ ದೇವೇಗೌಡರ ಜೊತೆ ಮುನಿಸಿಕೊಂಡು ಅಹಿಂದ ಸಂಘಟನೆಯ ಕಾರಣಕ್ಕೇ ಜೆಡಿಎಸ್‍ನಿಂದ ಹೊರಬಂದಾಗ ಕಾಂಗ್ರೆಸ್ ಸೇರುವ ಮುನ್ನ ಅಖಿಲ ಭಾರತೀಯ ಪ್ರಗತಿಪರ ಜನತಾದಳ (ಎಬಿಪಿಜೆಡಿ) ಅನ್ನೋ ಒಂದು ಪ್ರಯೋಗ ಮಾಡಿದ್ದರು. ಅಧಿಕೃತವಾಗಿ ಆ ಪಕ್ಷವನ್ನು ಹುಟ್ಟುಹಾಕದಿದ್ದರು, ಆಗ ಎದುರಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈಸೂರಿನಲ್ಲಿ ಎಬಿಪಿಜೆಡಿಯ ಹುರಿಯಾಳುಗಳನ್ನು ಕಣಕ್ಕಿಳಿಸಿದ್ದರು. ಒಟ್ಟು 46 ಸ್ಥಾನಗಳಲ್ಲಿ ಕಾಂಗ್ರೆಸ್ 17 ಸ್ಥಾನ ಗಳಿಸಿದರೆ, ಎಬಿಪಿಜೆಡಿ ಅದಕ್ಕಿಂತಲೂ ಎರಡು ಕಡಿಮೆ, ಅಂದರೆ 15 ಸ್ಥಾನಗಳಲ್ಲಷ್ಟೇ ಗೆದ್ದಿತ್ತು. ಒಂದೇ ನೆಮ್ಮದಿಯ ಸಂಗತಿಯೆಂದರೆ, ತಾವು ಹೊರಬಂದಿದ್ದ ಜೆಡಿಎಸ್ ಸಾಮಥ್ರ್ಯವನ್ನು ಕೇವಲ 11ಕ್ಕೆ ಸೀಮಿತಗೊಳಿಸಿದ್ದರು. ಆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜಿ.ಪಂ. ಚುಕ್ಕಾಣಿ ಹಿಡಿದಿದ್ದರೆ ಸಿದ್ರಾಮಯ್ಯನವರ ತೀರ್ಮಾನ ಏನಾಗುತ್ತಿತ್ತೋ ಗೊತ್ತಿಲ್ಲ, ಆದರೆ ಈ ಹಿಂದೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಹೈರಾಣಾದ ದಿಗ್ಗಜರುಗಳ ಪ್ರಯತ್ನಗಳನ್ನು ಆ ಫಲಿತಾಂಶ ಕಣ್ಮುಂದೆ ತಂದಿರಬಹುದು. ಅವರು ಸೋನಿಯಾ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಆಗಿನ್ನು, ತಾನು ಸಿಎಂ ಆಗಬೇಕೆಂಬ ಉತ್ಕಟ ಬಯಕೆ ಅವರ ಮನಸ್ಸಲ್ಲಿತ್ತು. ಆಗಲೇ ಅವರು ಹೊಸ ಪಕ್ಷ ಕಟ್ಟುವ ಉಸಾಬರಿಗೆ ಹೋಗದೆ ಕಾಂಗ್ರೆಸ್ ಸೇರಿದ್ದರು.

ದೇಶದ ಸದ್ಯದ ಪರಿಸ್ಥಿತಿ ಗಮನಿಸಿದರೆ, ಹೊಸ ಪಕ್ಷ ಹುಟ್ಟುವುದಿರಲಿ ಇರುವ ಪಕ್ಷಗಳೇ ತಮ್ಮ ಅಸ್ತಿತ್ವ ಉಳಿಸಿಕೊಂಡರೆ ಸಾಕೆನ್ನುವ ವಾತಾವರಣವಿದೆ. ಹೀಗೆ ಹೇಳಲು ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ನ ದುಸ್ಥಿತಿ ಖಂಡಿತ ಮಾನದಂಡವಲ್ಲ; ಯಾಕೆಂದರೆ ಅದು ಆ ಪಕ್ಷದ ಸ್ವಯಂಕೃತ ಅಪರಾಧ. ಆದರೆ ಪ್ರಜಾಪ್ರಭುತ್ವಕ್ಕೆ ಘಾತುಕವಾಗುವಂತೆ ಒಂದು ಪೊಲಿಟಿಕಲ್ ಪಾರ್ಟಿ ಏಕಪಕ್ಷೀಯವಾಗಿ ಬೆಳೆಯಬಹುದಾದ ಅಪಾಯಕಾರಿ ಮಟ್ಟವನ್ನೂ ಮೀರಿ ಬಿಜೆಪಿ ಉಲ್ಬಣಿಸಿರುವ ಕಾಲದಲ್ಲಿ ಅಧಿಕಾರ ದುರುಪಯೋಗ ಅನ್ನೋದು ದ್ವೇಷ ರಾಜಕಾರಣದ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಬಂಗಾಳದ ದೀದಿಯಂತಹ ದೀದಿಯೇ ಬಿಜೆಪಿಯ ಕುತಂತ್ರಗಳ ಮುಂದೆ ಹೈರಾಣಾಗುತ್ತಿದ್ದಾರೆ. ಚಿದಂಬರಂ, ಡೀಕೆ ಶಿವಕುಮಾರ್ ಥರದವರು ಜೈಲು ಪಾಲಾಗುತ್ತಿದ್ದಾರೆ. ಅಂತದ್ದರಲ್ಲಿ ಯಡ್ಯೂರಪ್ಪವರು ಮೋದಿ-ಶಾ ಜೋಡಿಯ ಇಡಿ, ಸಿಬಿಐ ಅಸ್ತ್ರಗಳ ಮುಂದೆ ಮಕ್ಕಳ ಭವಿಷ್ಯವನ್ನು ಬಲಿಕೊಟ್ಟು ಈ ಇಳಿವಯಸ್ಸಿನಲ್ಲಿ ಸೆಣೆಸುತ್ತಾರಾ?

ಹೆಚ್ಚೆಂದರೆ, ತಮ್ಮ ವಿರುದ್ಧ ತಿರುಗಿಬಿದ್ದಿರುವ ಸವಕಲು ಸೀನಿಯರ್‍ಗಳನ್ನು ತೆಪ್ಪಗಾಗಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ತರುವಷ್ಟರಮಟ್ಟಿಗೆ ಸಿದ್ದು `ಹೊಸಪಕ್ಷ’ ಎಂಬ ಅಸ್ತ್ರವನ್ನು ಬಳಸಬಹುದು. ಆದರೆ ಯಡಿಯೂರಪ್ಪನವರ ಮಟ್ಟಿಗೆ ಆ ಸಾಧ್ಯತೆಯೂ ಇಲ್ಲ. ಅವರಿಗೆ ಅನುಕೂಲವಾಗುವುದಕ್ಕಿಂತ ಅನಾನುಕೂಲ ಆಗುವುದೇ ಹೆಚ್ಚೆನ್ನಬಹುದು. ಯಾಕೆಂದ್ರೆ, ಸಿದ್ರಾಮಯ್ಯನವರ ಹೈಕಮಾಂಡ್ ಎಷ್ಟು ನಿತ್ರಾಣವಾಗಿದೆಯೋ ಯಡ್ಯೂರಪ್ಪನವರ ಹೈಕಮಾಂಡ್ ಅಷ್ಟೇ ಬಲಿಷ್ಠವಾಗಿದೆ. ಹಾಗಾಗಿ ಯಡ್ಯೂರಪ್ಪ `ಹೊಸಪಕ್ಷ’ ಆಪಾದನೆಯಿಂದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ, ಈಗಾಗಲೇ ಬಿ.ಎಲ್.ಸಂತೋಷ್ ಬೀಸಿ ಕೂತಿರುವ ಬಲೆಗೆ ಸುಲಭ ಬಲಿಪಶುವಾಗಿ ನರಳಾಡಬೇಕಾಗಬಹುದು. ಒಂದಂತೂ ಸತ್ಯ, ಕೆಸರುಗದ್ದೆಯಂತಾಗಿರುವ ಕರ್ನಾಟಕದ ರಾಜಕಾರಣದಲ್ಲಿ `ಹೊಸಪಕ್ಷದ ಉದಯ’ವೆಂಬ ಟಿಆರ್‍ಪಿ ಸರಕಿಗೆ ಕನ್ನಡದ ನ್ಯೂಸ್ ಚಾನೆಲ್‍ಗಳು ಕ್ಯಾಮೆರಾ ನೆಟ್ಟು ಕೂತಿರುವುದರ ಹಿಂದೆ ಸ್ಪಷ್ಟ ಲೆಕ್ಕಾಚಾರಗಳು ಇದ್ದಂತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಲೊಕೇಶನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ...

0
ಆರೋಪಿ ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ  ಹೇಳಿದೆ. ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಲು...