ಕಳೆದ ಒಂದು ವರ್ಷದಿಂದ ಶಾಂತಿಯುತವಾಗಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಅ.15 ರಂದು ಹೋರಾಟ ನಿರತ ಸಿಂಘು ಗಡಿಯಲ್ಲಿ ದಲಿತ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದು ಪ್ರತಿಭಟನೆಯನ್ನು ಹತ್ತಿಕ್ಕಲೂ ಸರ್ಕಾರ ನಡೆಸಿರುವ ಸಂಚು ಎಂದು ರೈತ ಮುಖಂಡರು ಆರೋಪಿಸಿದ್ದರು.
ರೈತ ಮುಖಂಡರ ಆರೋಪಕ್ಕೆ ನಿದರ್ಶನ ಎಂಬಂತೆ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳ ನಿಹಾಂಗ್ ಗುಂಪಿನ ಮುಖ್ಯಸ್ಥ ಬಾಬಾ ಅಮನ್ ಸಿಂಗ್ ಬಿಜೆಪಿ ಸಚಿವರನ್ನು ಭೇಟಿಯಾಗಿ ಸಭೆ ನಡೆಸಿರುವ ಚಿತ್ರಗಳು ದೊರಕಿದ್ದು, ಎಸ್‌ಕೆಎಂ ಟ್ವೀಟ್ ಮಾಡಿದೆ.
ನಿಹಾಂಗ್ ಪಂಥಗಳಲ್ಲಿ ಒಂದರ ಮುಖ್ಯಸ್ಥ, ಕೆನಡಾದ ಒಂಟಾರಿಯೊದಲ್ಲಿ ನೆಲೆಸಿರುವ ಸಿಖ್ ಗುಂಪಿಂನ ಬಾಬಾ ಅಮನ್ ಸಿಂಗ್, ರೈತರ ಪ್ರತಿಭಟನೆಯನ್ನು ಕೊನೆಗೊಳಿಸಲು ಸರ್ಕಾರದ ಪ್ರಯತ್ನಗಳಲ್ಲಿ ತೆರೆಮರೆಯ ಪಾತ್ರವನ್ನು ಹೊಂದಿರಬಹುದು ಎಂದು ಶಂಕಿಸಲಾಗಿದೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಇದನ್ನೂ ಓದಿ: ರೈತ ಹೋರಾಟ ನೆಲದಲ್ಲಿ ಕೊಲೆ: ನಿಹಾಂಗ್ ಬೆಂಬಲಿತ ವ್ಯಕ್ತಿ ಪೊಲೀಸರಿಗೆ ಶರಣು
ಮೂಲಗಳ ಪ್ರಕಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ, ವಜಾಗೊಂಡಿರುವ ಪೊಲೀಸ್ ಅಧಿಕಾರಿ ಗುರ್ಮೀತ್ ‘ಪಿಂಕಿ‘ ಮತ್ತು ಬಿಜೆಪಿ ಕಿಸಾನ್ ಮೋರ್ಚಾದ ಸುಖ್ಮೀಂದರ್ ಪಾಲ್ ಸಿಂಗ್ ಗ್ರೇವಾಲ್ ಈ ವರ್ಷದ ಜುಲೈ ಅಂತ್ಯದಲ್ಲಿ ನವದೆಹಲಿಯ ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಸಚಿವ ಕೈಲಾಶ್ ಚೌಧರಿಯ ಬಂಗಲೆಯಲ್ಲಿ ಭೇಟಿಯಾಗಿ ಸಭೆ ನಡೆಸಿದ್ದರು ಎಂದು ತಿಳಿದು ಬಂದಿದೆ.
Baba Aman Singh, Nihang chief, whose group members were arrested for barbaric killing of a man at Singhu border was spotted in meeting with BJP Ministers. pic.twitter.com/BO7kJqwbbw
— Kisan Ekta Morcha (@Kisanektamorcha) October 19, 2021
ದಿ ಟ್ರಿಬ್ಯೂನ್ ಈ ಬಗ್ಗೆ ವರದಿ ಮಾಡಿದ್ದು, ವರದಿಯ ತುಣುಕುಗಳನ್ನು ಸಂಯುಕ್ತ ಕಿಸಾನ್ ಮೋರ್ಚಾದ ಅಧಿಕೃತ ಟ್ವಿಟರ್ ಖಾತೆ ಕಿಸಾನ್ ಏಕ್ತಾ ಮೋರ್ಚಾ ಹಂಚಿಕೊಂಡಿದೆ. ಜೊತೆಗೆ ಯಾವ ನಿಹಾಂಗ್ ಗುಂಪಿನ ಸದಸ್ಯರು, ಸಿಂಘು ಗಡಿಯಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದಾರೋ ಅವರ ಗುಂಪಿನ ಮುಖ್ಯಸ್ಥ ಬಿಜೆಪಿ ಸಚಿವರನ್ನು ಭೇಟಿಯಾಗಿದ್ದಾರೆ ಎಂದು ಹೇಳಿದೆ.

“ಸಿಂಘು ಗಡಿ ಪ್ರಕರಣದಲ್ಲಿ ಹೊಸ ವಿಷಯಗಳು ಕಾಣಿಸಿಕೊಳ್ಳತೊಡಗಿದ್ದು, ಸರ್ಕಾರದಿಂದ ದೊಡ್ಡ ಪಿತೂರಿ ನಡೆದಿದೆ ಎಂದು ತೋರುತ್ತದೆ. ಇದು ಮೂರು ರೈತ ವಿರೋಧಿ ಕಾನೂನುಗಳು ಮತ್ತು ಎಂಎಸ್‌ಪಿ ಬೇಡಿಕೆಯಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ನಡೆಸುತ್ತಿರುವ ಪಿತೂರಿ. ಆದರೆ ನಾವು ನಮ್ಮ ಬೇಡಿಕೆಗಳಿಗೆ ಬದ್ಧರಾಗಿದ್ದೇವೆ. ಕೃಷಿ ಕಾನೂನನ್ನು ರದ್ದುಗೊಳಿಸಬೇಕು, ಎಂಎಸ್‌ಪಿ ಕಾನೂನನ್ನು ಜಾರಿ ಮಾಡಬೇಕು” ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಲಖ್ಬೀರ್ ಹತ್ಯೆ ಪ್ರಕರಣ: ಹರಿಂದರ್ ಸಿಂಗ್ ಬರಹ
ನಿಹಾಂಗ್ ಮುಖ್ಯಸ್ಥ ಬಾಬಾ ಅಮನ್ ಸಿಂಗ್ ಬಿಜೆಪಿ ಸಚಿವರ ಜೊತೆಗೆ ಸಭೆ ಮಾಡಿರುವ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಬಿಜೆಪಿ ಕಿಸಾನ್ ಮೋರ್ಚಾದ ಸುಖ್ಮೀಂದರ್ ಪಾಲ್ ಸಿಂಗ್ ಗ್ರೇವಾಲ್, “ಪಂಜಾಬ್‌ನಲ್ಲಿ ಕೃಷಿ ಚಳವಳಿಗೆ ಕೋಮು ಸೌಹಾರ್ದತೆಯನ್ನು ಹಾಳುಗೆಡವದಂತಹ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಸಭೆಗಳನ್ನು ನಡೆಸಿದ್ದೇವೆ. ಬಾಬಾ ಅಮನ್ ಸಿಂಗ್ ಅಂತಹ ಒಂದು ಸಭೆಯಲ್ಲಿ ಭಾಗವಹಿಸಿದ್ದರು. ಅವರು ಕೂಡ ಸಮಸ್ಯೆಯನ್ನು ಪರಿಹರಿಸಬೇಕೆಂದು ಬಯಸಿದ್ದರು. ಕೆನಡಾದ ಒಂಟಾರಿಯೊ ಸಿಖ್ಖರು ಮತ್ತು ಗುರುದ್ವಾರ ಕೌನ್ಸಿಲ್ ಈ ಪ್ರಯತ್ನದಲ್ಲಿ ನಮಗೆ ಸಹಾಯ ಮಾಡುತ್ತಿದೆ” ಎಂದಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.

ಇದೇ ಸಭೆಯಲ್ಲಿದ್ದ ವಜಾಗೊಂಡಿರುವ ಪೊಲೀಸ್ ಅಧಿಕಾರಿ ಗುರ್ಮೀತ್ ‘ಪಿಂಕಿ’, ನಿಹಾಂಗ್ ಮುಖ್ಯಸ್ಥ ಅಮನ್ ಸಿಂಗ್ ಬಾಬಾ ಪಟಿಯಾಲಾದ ಸೆಂಟ್ರಲ್ ಜೈಲಿನಲ್ಲಿರುವ ದಿನಗಳಿಂದಲೂ ಪರಿಚರವಿದ್ದರು ಎಂದು ಹೇಳಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಹಲವು ಪ್ರಯತ್ನಗಳು ಮಡುತ್ತಿದ್ದು, ಇದು ಕೂಡ ಸರ್ಕಾರದ ಪ್ರಯತ್ನವೇ ಆಗಿದೆ ಎಂದು ರೈತ ನಾಯಕರು ಆರೋಪಿಸಿದ್ದಾರೆ. ಘಟನೆಯ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಹತ್ಯಾಕಾಂಡ: ಅಜಯ್ ಮಿಶ್ರಾ ಬಂಧನ, ವಜಾಗೆ ಆಗ್ರಹಿಸಿ ರೈತರ ರೈಲ್ ರೋಕೋ ಚಳವಳಿ


