Homeಕರ್ನಾಟಕಬೆಳಗಾವಿ: ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

ಬೆಳಗಾವಿ: ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

- Advertisement -
- Advertisement -

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.

ಈ ಕುರಿತು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಸಿಐಡಿ ಡಿಜಿಪಿಗೆ ಪತ್ರ ಬರೆದಿದ್ದಾರೆ. ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಾಗ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಅವರಿಗೆ ಪ್ರಕರಣದ ಕುರಿತು ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ನಿನ್ನೆ(ಡಿ.17) ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿಯಲ್ಲಿ ಮಹಿಳೆ ಮೇಲಾದ ದೌರ್ಜನ್ಯ ಪ್ರಕರಣವನ್ನು ಯಾವ ತನಿಖೆಗೆ ಬೇಕಾದರೂ ವಹಿಸಲು ಸಿದ್ದ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಮ್ಮ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ. ಹಾಗಾಗಿ, ಬೇರೆ ಪ್ರಶ್ನೆ ಉದ್ಬವಿಸದು ಎಂದಿದ್ದರು. ಆದರೆ. ಸಂಜೆಯ ವೇಳೆಗೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ ಎಂದು ತಿಳಿದು ಬಂದಿದೆ.

ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿದೆ. ಕರ್ನಾಟಕ ಹೈಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಹಾಗೂ ಬಿಜೆಪಿಯ ಸತ್ಯಶೋಧನಾ ತಂಡದ ಸದಸ್ಯರು ಶನಿವಾರ ವಂಟಮೂರಿ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಿಬ್ಬಂದಿ ಭಾನುವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಆಯೋಗದ ಅಧಿಕಾರಿಗಳು ಡಿ.18 ಅಥವಾ 19ರಂದು ಬೆಳಗಾವಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಬಿಜೆಪಿಯಿಂದ ಸತ್ಯಶೋಧನೆ:

ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ತಮ್ಮ ಪಕ್ಷದಿಂದ ಪ್ರಕರಣದ ಸತ್ಯಶೋಧನೆಗೆ ತಂಡ ರಚಿಸಿದ್ದರು. ಈ ತಂಡ ಶನಿವಾರ ವಂಟಮೂರಿ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಕಲೆ ಹಾಕಿದೆ.

ಸಂತ್ರಸ್ತ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಆಕೆಯ ಆರೋಗ್ಯ ವಿಚಾರಿಸಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತ್ಯಶೋಧನಾ ಸಮಿತಿ ಸದಸ್ಯೆ, ಬಿಜೆಪಿ ಸಂಸದೆ ಸುನಿತಾ ದುಗ್ಗಲ್, ಘಟನಾ ಸ್ಥಳಕ್ಕೆ ಭೇಟಿ ನೀಡದ, ಸಂಸತ್ರಸ್ತ ಮಹಿಳೆಗೆ ಸಾಂತ್ವನ ಹೇಳದ ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ನೊಂದ ಮಹಿಳೆಗೆ ಸರ್ಕಾರದ ದುಡ್ಡು ಬೇಡ, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಕೊಡಿಸಲಿ ಎಂದು ಹೇಳಿದ್ದರು.

ಘಟನೆಯನ್ನು ರಾಜ್ಯ ಸರ್ಕಾರದ ವಿರುದ್ದ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಕೆಲವೆಡೆ ಈಗಾಗಲೇ ಪ್ರತಿಭಟನೆಗಳು ನಡೆದಿವೆ.

ಕೋರ್ಟ್‌ ಆದೇಶ ಉಲ್ಲಂಘಿಸಿದ ಬಿಜೆಪಿ: ಸಿಎಂ ಸಿದ್ದರಾಮಯ್ಯ

ಸಂತ್ರಸ್ತ ಮಹಿಳೆಯನ್ನು ಭೇಟಿಯಾಗದಂತೆ ಹೈಕೋರ್ಟ್‌ ಆದೇಶವಿದ್ದರೂ, ಬಿಜೆಪಿಯವರು ಸತ್ಯಶೋಧನೆಯ ಹೆಸರಿನಲ್ಲಿ ಮಹಿಳೆಯನ್ನು ಭೇಟಿಯಾಗಿ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಮಹಿಳೆಯು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಂದರ್ಶಕರ ಭೇಟಿಯು ಆಕೆಯ ಆರೋಗ್ಯ ಹಾಗೂ ಚಿಕಿತ್ಸೆಯ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಮಹಿಳೆಯ ಹಿತದೃಷ್ಟಿಯಿಂದ ಸಂದರ್ಶಕರ ಭೇಟಿಯನ್ನು ನಿರ್ಬಂಧಿಸುವುದು ಅಗತ್ಯ ಎಂದು ತಾನು ಭಾವಿಸುವುದಾಗಿ ಹೈಕೋರ್ಟ್ ಹೇಳಿದೆ.

ಯಾವುದೇ ವ್ಯಕ್ತಿ, ಸಮೂಹ, ಗುಂಪು, ಸಂಘಟನೆ, ರಾಜಕೀಯ ಪಕ್ಷಗಳು ಹಾಗೂ ಇನ್ನಿತರರು ಮಹಿಳೆಯ ಚಿಕಿತ್ಸೆಯ ಹೊಣೆ ಹೊತ್ತಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರ ಪೂರ್ವ ಲಿಖಿತ ಅನುಮತಿ ಇಲ್ಲದೇ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು.

ಹೀಗಿದ್ದರೂ ಒಂದು‌ ಅಮಾನುಷ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸುವ ದುರ್ಬುದ್ಧಿ ತೋರಿರುವ ಬಿಜೆಪಿ ನಾಯಕರು ಸತ್ಯಶೋಧನೆಯ ಹೆಸರಿನಲ್ಲಿ ನ್ಯಾಯಾಲಯದ ಆದೇಶ, ನಿರ್ದೇಶನಗಳನ್ನು ಗಾಳಿಗೆ ತೂರಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾರೆ. ಸಂತ್ರಸ್ತೆಯ ಸೂಕ್ಷ್ಮ ಮಾನಸಿಕ ಸ್ಥಿತಿಯ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ಸಂವೇದನಾಶೂನ್ಯ ಬಿಜೆಪಿ ನಾಯಕರು ಹಾಗೂ ಅವರ ಬೆನ್ನಿಗೆ ನಿಂತು ಚಿತಾವಣೆ ನಡೆಸುತ್ತಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ನಡೆ-ನುಡಿಯನ್ನು ನಾಗರಿಕ‌ ಸಮಾಜ ಖಂಡಿಸಬೇಕಾಗಿದೆ ಎಂದಿದ್ದಾರೆ.

ಬಿಜೆಪಿಯ ಸತ್ಯಶೋಧನಾ ತಂಡ ಮಣಿಪುರಕ್ಕೆ ಯಾಕೆ ಹೋಗಿಲ್ಲ?

ಬೆಳಗಾವಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸತ್ಯಶೋಧನಾ ತಂಡ ರಚಿಸಿದ ಬೆನ್ನಲ್ಲೇ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಬೆಳಗಾವಿಯ ಮಹಿಳೆಯ ಬೆತ್ತಲೆ ಪ್ರಕರಣದಲ್ಲಿ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡಿದೆ. ಸಂತ್ರಸ್ತ ಮಹಿಳೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಸಂತ್ರಸ್ತೆಯ ರಕ್ಷಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಬದ್ದವಾಗಿದೆ. ಜೆಪಿ ನಡ್ಡಾ ಅವರೇ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದಾಗ ನಿಮ್ಮ ಸತ್ಯಶೋಧನೆ ತಂಡ ಹೋಗಲಿಲ್ಲವೇಕೆ? ಉತ್ತರ ಪ್ರದೇಶದ ದಲಿತರ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ ಸತ್ಯಶೋಧನೆ ಮಾಡಲಿಲ್ಲವೇಕೆ? ಮಧ್ಯಪ್ರದೇಶದಲ್ಲಿ ಬಾಲಕಿಯನ್ನು ಅತ್ಯಾಚಾರವೆಸಗಿ ಬೆತ್ತಲೆ ಮಾಡಿ ರಸ್ತೆಗೆ ಅಟ್ಟಿದಾಗ ಹೋಗಲಿಲ್ಲವೇಕೆ? ಹತ್ರಾಸ್ ನಲ್ಲಿ ಬಿಜೆಪಿ ಶಾಸಕನೇ ಅತ್ಯಾಚಾರ ಮಾಡಿದಾಗ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗ ನಿಮಗೆ ಮಹಿಳೆಯರ ಬಗ್ಗೆ ಕಾಳಜಿ ಹುಟ್ಟಲಿಲ್ಲ ಏಕೆ? ಅಲ್ಲೆಲ್ಲಾ ಇದ್ದಿದ್ದು ನಿಮ್ಮದೇ ಸರ್ಕಾರ ಎಂಬ ಕಾರಣಕ್ಕೆ, ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸತ್ಯಶೋಧನೆ ಮಾಡುವ ಮನಸಾಗಲಿಲ್ಲವೇ? ಸಂಸತ್ ದಾಳಿ ಪ್ರಕರಣದಿಂದ ಪ್ರತಾಪ್ ಸಿಂಹನನ್ನು ರಕ್ಷಿಸಲು ಈಗ ಸದಾರಮೆ ನಾಟಕ ಶುರು ಮಾಡಿದ ಬಿಜೆಪಿಗೆ ನೈತಿಕತೆ ಎಂಬ ಪದದ ಅರ್ಥವೇ ಗೊತ್ತಿಲ್ಲ ಎಂದು ಎಕ್ಸ್‌ನಲ್ಲಿ ಹೇಳಿತ್ತು.

ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು?

ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿದೆ

ಘಟನೆ ನಡೆದ ಮರು ದಿನವೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಹಿಳೆಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಗೆ ತೆರಳಿ ಸಂತ್ರಸ್ತೆಗೆ ಧೈರ್ಯ ತುಂಬಿದ್ದಾರೆ.

ಪ್ರಕರಣ ಸಂಬಂಧ ಕಾಕತಿ ಪೊಲೀಸರು ಶನಿವಾರದವರೆಗೆ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಬಂಧಿತರಾದ ಯುವತಿಯ ತಂದೆ, ತಾಯಿ, ಅಜ್ಜಿ ಮತ್ತು ಸಂಬಂಧಿಕರನ್ನು ಡಿ.21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದೌರ್ಜ್ಯಕ್ಕೊಳಗಾದ ಮಹಿಳೆಗೆ 2.03 ಎಕರೆ ಜಮೀನು ಮಂಜೂರು ಮಾಡಿ ರಾಜ್ಯ ಸರ್ಕಾರದ ಆದೇಶಿಸಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಜಮೀನು ಮಂಜೂರಾತಿ ಜೊತೆಗೆ ಮಹಿಳೆಗೆ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಬೆಳಗಾವಿ ಹೊರ ವಲಯದ ವಂಟಮೂರಿ ಗ್ರಾಮದ ನಾಯಕ್‌ ಸಮುದಾಯಕ್ಕೆ ಸೇರಿದ ದುಂಡಪ್ಪ (24) ಮತ್ತು ಪ್ರಿಯಾಂಕಾ (18)ಪರಸ್ಪರ ಪ್ರೀತಿಸುತಿದ್ದರು. ಡಿಸೆಂಬರ್ 11ರಂದು ಭಾನುವಾರ ರಾತ್ರಿ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದಾರೆ. ಇದರಿಂದ ಕೋಪಗೊಂಡ ಯುವತಿಯ ಸಂಬಂಧಿಕರು, ಯುವಕನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಯುವಕನ ತಾಯಿ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಶೌಚ ಗುಂಡಿಗೆ ಇಳಿಸಿದ ಪ್ರಕರಣ: ವಸತಿ ಶಾಲೆಯ ಪ್ರಾಂಶುಪಾಲರ ಸಹಿತ ಮೂವರು ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...