Homeಮುಖಪುಟಸ್ಟೆರ್ಲೈಟ್ ಗೋಲಿಬಾರ್‌: ಪೊಲೀಸ್ ದುಷ್ಕೃತ್ಯ ಎತ್ತಿಹಿಡಿದ ತನಿಖಾ ಆಯೋಗ

ಸ್ಟೆರ್ಲೈಟ್ ಗೋಲಿಬಾರ್‌: ಪೊಲೀಸ್ ದುಷ್ಕೃತ್ಯ ಎತ್ತಿಹಿಡಿದ ತನಿಖಾ ಆಯೋಗ

- Advertisement -
- Advertisement -

2018ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಸ್ಟೆರ್ಲೈಟ್ ತಾಮ್ರ ಘಟಕದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಕ್ಕೆ ಯಾವುದೇ ಪ್ರಚೋದನೆ ಕಾರಣವಾಗಿರಲಿಲ್ಲ. ಇದೊಂದು ವಿವೇಚನಾರಹಿತ ಕೃತ್ಯ ಎಂದು ಘಟನೆಯ ತನಿಖೆ ನಡೆಸುತ್ತಿರುವ ಆಯೋಗವು ತನ್ನ ಅಂತಿಮ ವರದಿಯಲ್ಲಿ ತಿಳಿಸಿದೆ.

2018ರ ಮೇ 22ರಂದು 13 ಪ್ರತಿಭಟನಾಕಾರರು ಪೋಲಿಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದರು ಇದು ದೇಶದ್ಯಾಂತ ಆಕ್ರೋಶಕ್ಕೆ ಕಾರಣವಾಯಿತು. ನಂತರ ಸ್ಥಾವರವನ್ನು ಮುಚ್ಚಲಾಯಿತು. ಸ್ಟೆರ್ಲೈಟ್ ತಾಮ್ರ ಸ್ಥಾವರವು ಸದರಿ ಪ್ರದೇಶದ ವಾಯು ಮತ್ತು ಜಲ ಸಂಪನ್ಮೂಲಗಳನ್ನು ಕಲುಷಿತಗೊಳಿಸಿದೆ ಎಂದು ಪ್ರತಿಭಟನಾಕಾರರು ಹೋರಾಟಕ್ಕಿಳಿದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ತಮ್ಮಿಂದ ದೂರದಲ್ಲಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ತಮ್ಮ ಅಡಗುತಾಣದಿಂದ ಗುಂಡು ಹಾರಿಸಿದ್ದಾರೆ” ಎಂದು ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ. “ಪ್ರತಿಭಟನಾಕಾರರ ನಡುವೆ ಇದ್ದ ತೀವ್ರವಾದಿಗಳ ಮೇಲೆ ಮಾತ್ರ ದಾಳಿ ಮಾಡಲಾಯಿತು ಎಂದು ಹೇಳಲು ಇಲ್ಲಿ ಯಾವುದೇ ದಾಖಲೆಗಳಿಲ್ಲ” ಎಂದು ತಿಳಿಸಿದೆ.

ಈ ಆಯೋಗದ ನೇತೃತ್ವವನ್ನು ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣಾ ಜಗದೀಶನ್ ವಹಿಸಿದ್ದರು. ಆಯೋಗದ ವರದಿಯ ಸಾರವನ್ನು ‘ಫ್ರಂಟ್‌ಲೈನ್’ ಪ್ರಕಟಿಸಿದೆ. ಮೇ ತಿಂಗಳಲ್ಲಿ ತನ್ನ ವರದಿಯನ್ನು ತಮಿಳುನಾಡು ಸರ್ಕಾರಕ್ಕೆ ಆಯೋಗ ಸಲ್ಲಿಸಿದೆ.

ಆಗಿನ ಪೊಲೀಸ್ ಮಹಾನಿರೀಕ್ಷಕ (ದಕ್ಷಿಣ ವಲಯ) ಶೈಲೇಶ್ ಕುಮಾರ್ ಯಾದವ್, ಉಪ ಪೊಲೀಸ್ ಮಹಾನಿರೀಕ್ಷಕ (ತಿರುನೆಲ್ವೇಲಿ ರೇಂಜ್) ಕಪಿಲ್ ಕುಮಾರ್ ಸಿ ಸರತ್ಕರ್, ಪೊಲೀಸ್ ಅಧೀಕ್ಷಕ (ತೂತುಕುಡಿ) ಪಿ.ಮಹೇಂದ್ರನ್ ಮತ್ತು ಉಪ ಅಧೀಕ್ಷಕ ಲಿಂಗತಿರುಮಾರನ್ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಆಯೋಗವು ತನ್ನ ವರದಿಯಲ್ಲಿ ಹೆಸರಿಸಿದೆ. ಇವರೇ ಫೈರಿಂಗ್‌ಗೆ ಹೊಣೆಗಾರರು ಎಂದಿದೆ.

“ಅಧಿಕಾರಿಗಳು ನಿಸ್ಸಂಶಯವಾಗಿ ಮಿತಿಯನ್ನು ಮೀರಿದ್ದಾರೆ” ಎಂಬ ಅಂಶವನ್ನು ಒತ್ತಿ ಹೇಳಿರುವ ಆಯೋಗವು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದೆ.

ಘಟನೆಯ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದು, ಶಾರ್ಪ್-ಶೂಟರ್‌ಗಳು ಶಾಮೀಲಾಗಿರುವುದನ್ನು ಆಯೋಗ ಗಮನಿಸಿರುವುದಾಗಿ ವರದಿಗಳಾಗಿವೆ.

ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರೂ, ಅವರು ನಿರಾಯುಧರಾಗಿದ್ದರು. ಅಧಿಕಾರಿಗಳಿಗೆ ಯಾವುದೇ ಬೆದರಿಕೆಯನ್ನು ಅವರು ಒಡ್ಡಿರಲಿಲ್ಲ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

“ತೀವ್ರ ಗಾಯಕ್ಕೆ ಒಳಗಾದ ಮಣಿಕಂದನ್ ಅವರನ್ನು ಹೊರತುಪಡಿಸಿ ಯಾವುದೇ ಪೋಲೀಸ್‌ಗೆ ಮಾರಣಾಂತಿಕ ಗಾಯಗಳಾಗಿಲ್ಲ” ಎಂದು ಆಯೋಗ ಹೇಳಿದೆ. “ಪೊಲೀಸರು ಗಾಯಗೊಂಡಿದ್ದಾರೆಂದು ಹೇಳಿಕೊಳ್ಳುವ ಎಲ್ಲಾ ಪ್ರಕರಣಗಳಲ್ಲಿ, ಗಾಯಗಳು ತುಂಬಾ ಚಿಕ್ಕದಾಗಿರುತ್ತವೆ” ಎಂದು ವರದಿ ಹೇಳಿದೆ.

“ಪೊಲೀಸರು ತತ್‌ಕ್ಷಣಕ್ಕೆ ಗುಂಡು ಹಾರಿಸುವ ಬದಲು ಜನಸಂದಣಿಯನ್ನು ನಿಯಂತ್ರಿಸಲು ಮಾರಕವಲ್ಲದ ಆಯುಧಗಳನ್ನು ಮತ್ತು ವಿಧಾನಗಳನ್ನು ಬಳಸಬೇಕಿತ್ತು” ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿರಿ: ಸಂತ ಸೇವಾಲಾಲ್‌ರ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್‌ ಶಿಬಿರ ಆಯೋಜನೆ: ಬಂಜಾರ ಮುಖಂಡರ ಆಕ್ರೋಶ

ತಜ್ಞರ ವರದಿಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಸಂಘಟನೆ ಪೀಪಲ್ಸ್ ವಾಚ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿ ಟಿಫಾಗ್ನೆ ಪ್ರತಿಕ್ರಿಯಿಸಿ, “ಗುಂಡಿನ ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವುದಾಗಿ ದ್ರಾವಿಡ ಮುನ್ನೇತ್ರ ಕಳಗಂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಯಾವುದೇ ಕ್ರಮ ಜರುಗಿಸಿಲ್ಲ” ಎಂದಿದ್ದಾರೆ.

“ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮೂರು ತಿಂಗಳಾಗಿದೆ. ಆದರೆ ಅದನ್ನು ಇದುವರೆಗೆ ಅಸೆಂಬ್ಲಿಯಲ್ಲಿ ಚರ್ಚೆಗೆ ಇರಿಸಿಲ್ಲ. ಇದು ನಿಜಕ್ಕೂ ಬೇಸರ ತರಿಸಿದೆ” ಎಂದಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಕೆ.ಬಾಲಕೃಷ್ಣನ್ ಪ್ರತಿಕ್ರಿಯಿಸಿ, “ತನಿಖಾ ವರದಿ ಹೊರಬಂದಿರುವುದು ಸಂತಸ ತಂದಿದೆ. ಆದರೆ ಆ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ತಿಳಿಯದೆ ಬೆರಳೆಣಿಕೆಯಷ್ಟು ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಮಾತ್ರ ಇಂತಹ ದೊಡ್ಡ ಗೋಲಿಬಾರ್‌ ನಡೆಸಿದ್ದಾರೆ ಎಂದು ನಂಬುವುದು ಕಷ್ಟ” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read