Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-8; "ಬೈಬಾರ್ದು ಕಲ; ಅವುಕೇನು ಬೈಸಿಗತ್ತವೆ; ತಿರಗ ಇತ್ತಗೆ ಬರದಂಗೆ ವಂಟೋಯ್ತವೆ"

ಹಿಂಗಿದ್ದ ನಮ್ಮ ರಾಮಣ್ಣ-8; “ಬೈಬಾರ್ದು ಕಲ; ಅವುಕೇನು ಬೈಸಿಗತ್ತವೆ; ತಿರಗ ಇತ್ತಗೆ ಬರದಂಗೆ ವಂಟೋಯ್ತವೆ”

- Advertisement -
- Advertisement -

ಮೈಸೂರಲ್ಲಿ ರಾಮಣ್ಣನ ಜೊತೆ ಇದ್ದ ಅವಧಿ ಗೋಲ್ಡನ್ ಡೇಸು. ಮಂಡ್ಯದ ಹುಡುಗರಾದ ರುದ್ರೇಶ ಅಲಗೂರು, ಬೆನವನಹಳ್ಳಿ ಪುಟ್ಟಸ್ವಾಮಿ ಇವುರ ಜೊತೆಲೆಲ್ಲ ಇರನು. ಇನ್ನ ಅವನ ಸಾಹಿತ್ಯ ಲೋಕದ ಗೆಳೆಯರೇ ಬ್ಯಾರೆ. ಆದಷ್ಟು ಜಾತ್ಯತೀತ ಜನಗಳ ಜೊತೆ ಇರಕ್ಕೆ ಇಷ್ಟ ಪಡೋನು. ಜನಾಂಗದಲ್ಯಾರಾದ್ರು ಉನ್ನತ ಹುದ್ದೆಗೋಗಿ ಅವುರ ಅಭಿನಂದನಾ ಸಭೆ ಏರ್ಪಾಟಾದ್ರೆ, ಅಲ್ಲಿಗೋಯ್ತಿರಲಿಲ್ಲ. ಗಣೇಶನ ಪೂಜೆಗೆ ಬತ್ತಿರಲಿಲ್ಲ. ಹಾಸ್ಟಲ್ ಮುಂದೆ ನಿಂತುಗ್ಯಂಡು ಹೋಗಿ ಬರೋರ ನೋಡನು. ಜನಗಳ ಕಡೆಗೆ ನೋಡ್ತ ಅವುರು ಶ್ರಮಜೀವಿಗಳೊ ಅಥವಾ ಇಲ್ಲಿ ತಿನ್ಕಂಡು ದಿಂಡಗಾಗಿ ತಿರುಗಾಡೋರೋ ಅಂತ ಅಳಿಯೋನು. ಶ್ರಮಜೀವಿ ಹೆಂಗಸರ ಕಂಡ್ರೆ “ನೋಡ್ಳ ಯಂಗವುರೆ. ಶ್ರಮಜೀವಿಗಳ ದೇಹನೆ ಕಂಡ್ಳ ಕಲಾಕೃತಿಯಂಗಾಗದು. ಅದು ನೋಡಿದ್ರೆ ನೀನು ತಿಳಕತಿ, ನೀನು ನೋಡದಿಲ್ಲ ನೋಡೊರ್ನು ಸಯಿಸದಿಲ್ಲ ಕಲ ನೀನು” ಅನ್ನೋನು. ಅವನ ಖಾಸಗಿ ವಿಷಯ ಏನಾರ ಇದ್ರೆ ನನ್ನತ್ರ ಹೇಳನು. ಇನ್ಯಾರತ್ರನೂ ಹೇಳ್ತಿರಲಿಲ್ಲ.

ಡಾಕ್ಟರ್ ಹನುಮಯ್ಯ ಸೀನಿಯರ್ ಸರ್ಜನ್ನು. ಅವುರು ಇವುನಿಗೆ ಎಗ್‌ಸಾಮಿನರ್. ಒಂದಿಷ್ಟು ಜಾತಿವಾದಿಯಾದ್ರು ರಾಮಣ್ಣ ಜಾತಿಯಿಂದ ಹೊರಗೇನೊ ಮಾಡ್ತನೆ ಅನ್ನಂಗೆ “ನೀನೇನೊ ಕತೆಪತೆ ಬರಿತಿಯಂತಲ್ಲೊ. ಬರಿ ಬರಿ ನಾನೇನು ಬ್ಯಾಡ ಅನ್ನದಿಲ್ಲ. ಅಂಗೆ ಸ್ವಲುಪ ಆಸುಪತ್ರಿ ಕಡಿಗೂ ನೋಡು” ಅಂತ ಹೇಳಿದ್ರಂತೆ. ಅದನ್ನ ತಂದು ನನಗೆ ಹೇಳಿದ್ದ. ಅವನ ಕೋರ್ಸು ಮುಗಿತು ಮೇಜರ್ ಸರ್ಜರಿ ಮೆಡಿಸನ್ ಒ.ಬಿ.ಜಿ ಇದನ್ನ ಉಳಿಸಿಗಂಡಿದ್ದ. ಕೋರ್ಸು ಅಟೆಂಡೆನ್ಸ್ ನಾಟ್ ಕಂಪಲ್ಸರಿ; ಆದರೆ ಪೇಷಂಟ್‌ನ ಎನ್‌ಕ್ವಯಿರಿ ಮಾಡ್ತಯಿರೊ ಜಾಗಕ್ಕೆ ಬರಬೇಕು. ವರಷಕ್ಕೆ ಎರಡೆ ಎಗ್ಸಾಂ ತಗಂಡು ಪಾಸು ಮಾಡಿಕಂಡ. ಅಂತೂ ಕಾಲೇಜು ಮತ್ತೆ ಹಾಸ್ಟೆಲಿಂದ ಬಿಡುಗಡೆ ಪಡೆದ. ಆದರೆ ವೈದ್ಯಕೀಯ ಕೋರ್ಸು ಬೇರೆ ಕೋರ್ಸು ತರ ಅಲ್ಲ. ವೃತ್ತಿಗೋದ ಕೂಡಲೆ ಜನಗಳ ಆರೋಗ್ಯದ ಸಮಸ್ಯೆ ಎದುರು ನಿಲ್ಲಬೇಕಾಯ್ತದೆ.

ಅಂತೂ ರಾಮಣ್ಣ ಡಾಕ್ಟರಾದ. ಡಿಗ್ರಿ ಮುಗಿಸಿ ಒಂದೊರ್ಷ ಹೌಸ್ ಸರ್ಜನ್ನಾಗಿ ಕೆಲಸ ಮಾಡಿದ ಮ್ಯಾಲೆ, ಅಧಿಕೃತ ಡಾಕ್ಟರಾಗಿ ಬಂದ. ಆಶ್ಚರ್ಯ ಅಂದ್ರೆ ನಮ್ಮ ತಾಲೂಕಿನ ಹರದನಳ್ಳಿಗೆ ಬಂದ. ಆ ಹರದನಳ್ಳಿಯು ಒಂಥರ ಕುಗ್ರಾಮ ಅಂತ್ಲೆ ಹೇಳಬಹುದು. ಒಂದಿನ್ನೂರೈವತ್ತರಿಂದ ಮುನ್ನೂರು ಮನೆ ಗ್ರಾಮ ಅದು. ಯಲ್ಲ ರೈತರು. ಬಡವರು ವಾಸ ಮಾಡೊ ಊರು. ಸರಕಾರಿ ಶಾಲೆ ಬುಟ್ರೆ ಇನ್ನ ಸರಕಾರದ್ದು ಅಂತ ಏನೂ ಇರಲಿಲ್ಲ. ಬಸ್ಸೂ ಹೋಯ್ತಿರಲಿಲ್ಲ. ಅಂಥ ಊರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಬತ್ತು. ಅದು ರಾಜಕಾರಣಿಗಳ ಕಿತ್ತಾಟದಿಂದ ನಡೆದದ್ದು. ಯಾವುದೊ ಊರಿಗೆ ಮಂಜೂರಾದದ್ದು ಆ ಊರಿಗೆ ಬತ್ತು. ಅಕ್ಚುವಲಿ ಏಕದಂ ಗ್ರಾಮಾಂತರ ಪ್ರದೇಶಕ್ಕೆ ಪ್ರೈಮರಿ ಹೆಲ್ತ್ ಸೆಂಟರ್ ಕೊಡಂಗಿಲ್ಲ. ಯಲ್ಲಾ ನಿಯಮನೂ ಗಾಳಿಗೆ ತೂರಿ ಕೊಟ್ಟಿದ್ರು. ತುಂಬಾ ಪ್ರಭಾವಿ ರಾಜಕಾರಣಿಗಳಾಗಿದ್ದ ಕಾಲ ಅದು. ಸಿಂಗಾರಿಗೌಡ್ರು, ಮಾದಪ್ಪಗೌಡ್ರು ಎದುರಾ ಬದುರಾ ಇದ್ರೂ ಸರಕಾರದ ಸವಲತ್ತು ತಾಲೂಕಿಗೆ ತರದ್ರಲ್ಲಿ ಜೊತೆಯಾಗಿದ್ರು. ಒಮ್ಮೆ ಸಿಂಗಾರಿಗೌಡರನ್ನ ನಿಜಲಿಂಗಪ್ಪನೋರು ಕರದು ಮಂತ್ರಿಯಾಗಿ ಗೌಡ್ರೆ ಅಂದಾಗ ನಮಿಗ್ಯಲ್ಲ ಯಾಕ್ ಸಾರ್, ಶಂಕರೇಗೌಡ್ರ ಮಾಡಿ ಅಂದು ಬಂದಿದ್ರು. ಇವತ್ತಿನ ದಿನದಲ್ಲಿ ತೋರತಿಯಾ ಅಂಥೋರ್‌ನಾ. ಅವುರೂ ಮಾದಪ್ಪಗೌಡರು ಯಲ್ಲ ಗಾಂಧಿವಾದಿಗಳಾಗಿದ್ರು. ಅವುರ ಭಾಷಣದಲ್ಲಿ ಗಾಂಧಿ ಮಹಾತ್ಮನ ವಿಷಯ ಬಂದೇ ಬರತಿದ್ದೊ. ಗಾಂಧೀಜಿ ಆದರ್ಶಗಳು ಇನ್ನು ಜೀವಂತವಾಗಿದ್ದ ಕಾಲ ಅದು. ಅದಕೊಂದು ವಳ್ಳೆ ಉದಾಹರಣೆ ಯಾವುದಪ್ಪ ಅಂದ್ರೇ, ಆಗೊಂದು ಚುನಾವಣೆಲಿ ಸಿಂಗಾರಿಗೌಡ ಮಾದಪ್ಪಗೌಡ ಎದುರಾ ಬದರಾ ನಿಂತಿದ್ರು. ಸಿಂಗಾರಿಗೌಡ್ರದು ಜೋಡೆತ್ತು; ಮಾದಪ್ಪಗೌಡ್ರುದು ತಕ್ಕಡಿ ಗುರುತು; ಆಗ ಮಂಡ್ಯದಲ್ಲೇ ಹೆಸರಾದ ಪಿ.ಎನ್ ಜವರಪ್ಪಗೌಡ ಅಂತ ಪತ್ರಕರ್ತರಿದ್ರು. ಪ್ರಭಾವಿ ಮನ್ಸ. ಗ್ರಾಮೀಣ ಭಾಗದ ಗಾದೆ ಮಾತ ಬಳಸಿ ಚೆನ್ನಾಗಿ ಭಾಷಣ ಮಾಡತಿದ್ರು. ಅವುರು ಸಿಂಗಾರಿಗೌಡನ ಪರವಾಗಿ ಕ್ಯಾನ್‌ವಾಸಿಗೋಗರು. ಒಂದಿನ ಮನಿಕಳಕ್ಕೆ ಎಲ್ಯೂ ಜಾಗ ಸಿಗದೆ ಮಾದಪ್ಪಗೌಡ್ರ ಮನಿಗೋಗಿ ಕದ ತಟ್ಯವುರೆ. ಬಾಗಲ ತಗದ ಮಾದಪ್ಪಗೌಡ ಜವರಪ್ಪಗೌಡನ್ನ ನೋಡಿ “ನಿನಿಗಿನ್ನೆಲ್ಲೂ ಜಾಗಿಲವೆ ಅಂದವುರೆ”. ಇನ್ನೆಲ್ಲಿಗೋಗ್ಲಿ ಅಂತ ವಳಿಕೆ ನುಗ್ಗಿ ಬಂದವುರೆ. ಮಾದಪ್ಪಗೌಡ್ರು “ಊಟ ಮಾಡಿದ” ಅಂತ ಕೇಳಿ ಮನಿಕಳ್ಕಕೆ ಏರ್ಪಾಡುಮಾಡ್ಯವುರೆ. ಇಂತದ ಎಲ್ಯಾರ ಕೇಳಿದ್ದೀಯಾ? ಸ್ನೇಹನೆ ಬ್ಯಾರೆ ಚುನಾವಣೆ ಆಟನೆ ಬ್ಯಾರೆ ಅಂತ ತಿಳಕಂಡಿದ್ದ ಕಾಲ ಅದು. ಅಲ್ಲಾ ಮನಿಕಳಕ್ಕೆ ಜಾಗಿಲ್ದಾಗ ಸಿಂಗಾರಿಗೌಡನೆದ್ರಿಗೆ ನಿಂತಿದ್ದ ಮಾದಪ್ಪಗೌಡನ ಮನಿಗೆ ಹೋಗಿ ಜಾಗ ಕೇಳಬೇಕಾದ್ರೆ ಮಾದಪ್ಪಗೌಡ ಯಂಗಿದ್ದ ಲ್ಯಕ್ಕಹಾಕು.

ಆಗ ನಾಗಮಂಗಲದಲ್ಲಿ ಯರಡೂ ಪಾರ್ಟಿಗೆ ಒಂದೇ ವೇದಿಕೆ ಇದ್ದಿದ್ದು. ಅಲ್ಲಿ ಬಂದು ನಿಂತಗಂಡು ಅವುರ ವಾಲಗ ಅವರೂದೋರು. ಇವುರ ವಾಲಗ ಇವುರೂದೋರು. ಚುನಾವಣೆ ದಿನ ಓಟಾಗದು. ಒಂದೇ ಒಂದು ಗಲಾಟಿ ನ್ಯಡಿತಿರಲಿಲ್ಲ. ಅದೇ ಇವತ್ತು ನೋಡು ಸೆಕ್ಷನ್ ಹಾಕ್ತರೆ, ದೊಂಬಿ ಕೇಸಾಕ್ತರೆ, ಗಡಿಪಾರು ಮಾಡ್ತರೆ. ಯಾಕಪ್ಪ ಬತ್ತವಪ್ಪ ಈ ಚುನಾವಣೆ ಅನ್ನಂಗಾಯ್ತದೆ. ಆಗ ಒಂದು ಚುನಾವಣೆ ನ್ಯಡಿತು. ಮಾದಪ್ಪಗೌಡ್ರು ನಮ್ಮಣ್ಣನು ಎದುರಾ ಬದರಾ ನಿಂತಿದ್ರು. ನಮ್ಮಣ್ಣ ಸೋತು ಸಪ್ಪಗಾಗಿ ಐಬಿಲಿ ಬಂದು ಕೂತಿದ್ದ. ಗೆದ್ದ ಮಾದಪ್ಪಗೌಡ್ರು ನೇರ ಬಂದು ನಮ್ಮಣ್ಣನ ಸಮಾಧಾನ ಮಾಡಿ ಹೋದ್ರು. ಪಾಪ ಕೆಲವೇ ತಿಂಗಳಲ್ಲಿ ತೀರೋದ್ರು. ಮರುಚುನಾವಣೆ ನ್ಯಡದು ನಮ್ಮಣ್ಣ ಗೆದ್ದ. ಅದೇ ಟೈಮಲ್ಲಿ ಹರದನಹಳ್ಳಿಗೆ ಪ್ರೈಮರಿ ಹೆಲ್ಟ್ ಯೂನಿಟ್ ಬಂದುಬುಡ್ತು. ರಾಮಣ್ಣ ಬಂದು ಜಾಯಿನಾದ.

ರಾಮಣ್ಣ ಆ ಊರಿನ್ನ ನೋಡಿದಮ್ಯಾಲಾದ್ರು ಅವತ್ತಿನ ಪ್ರಭಾವಿ ರಾಜಕಾರಣಿಗಳಾದ ಕೆ.ವಿ ಶಂಕರೇಗೌಡರಿಡುದು ಬೇರೆ ಕಡೆ ವರ್ಗ ಮಾಡಿಸಿಕೊಳ್ಳಬಹುದಿತ್ತು. ಆದ್ರೆ ಅಂಗೆ ಮಾಡದೆ ಸುಮ್ಮನೋಗಿ ಹರದನಳ್ಳಿ ಪ್ರೈಮರಿ ಹೆಲ್ತ್ ಸೆಂಟರಲ್ಲಿ ಕೂತಿದ್ದ. ನಾನು ರಾಜ್‌ದೂತ್ ಮೋಟರ್ ಸೈಕಲ್ ತಗಂಡು ಹರದನಳ್ಳಿಗೋಯ್ತಾ ಮೂರು ಸತಿ ಬಿದ್ದೆ. ಕೆಲವು ಜಾಗದಲ್ಲಂತೂ ಬೈಕ್ ತಳಿಕಂಡೇ ಹೋಗಬೇಕಾಗಿತ್ತು. ಅದೂ ಅಲ್ದೆ ಆಸುಪತ್ರೆ ಎಲ್ಯದೆ ಅಂತ ಕೇಳಿಕೊಂಡೋಗಬೇಕಿತ್ತು. ಅದು ಹಲಗೆ ಬಾಗಲ ಅಂಗಡಿ ಮನೆಲಿತ್ತು. ಹಲಗೆ ಜೋಡಿಸಿ ಮಧ್ಯದ ಹಲಗೆ ಬಾಗಲ ಚಂದ್ರಾಕಾರದ ತೂತು ಮಾಡಿದ್ರು. ಅದರೊಳಿಕೆ ಬೆಳ್ಳಾಕಿ ಹಿಡಿದೆತ್ತಿ ಕದತಗಿಬೇಕಾಗಿತ್ತು. ಅದರೊಳಗೆ ಆಫೀಸು ಆಸುಪತ್ರೆಯಲ್ಲಾ ಇದ್ದೊ. ನಾನು ಇಣುಕಿ ನೋಡಿದೆ. “ಅಂಗ್ಯಾಕೆ ನೋಡಿ ಬಾಲ ವಳಿಕೆ” ಅಂದ. ಹೋಗಿ ಕುತಗಂಡೆ ಸ್ವಲುಪ ಹೊತ್ತು. ಯಾರೂ ಮಾತಾಡಲಿಲ್ಲ. ಆ ಮೈಸೂರಿನ ವೈಭವದ ಕಾಲ ಏನು, ಅಲ್ಲಿ ನಮ್ಮ ರಾಮಣ್ಣ ಮ್ಯರದಿದ್ದೇನು! ಆ ಹಾಸ್ಟಲು ಕಾಲೇಜು ಅರಮನೆ ಗುರುಮನೆ ಸಾಹಿತಿಗಳ ಸಂಗದ ಆವರಣನ್ಯಲ್ಲ ಬುಟ್ಟು ಅಂಗಡಿಮನಿಗೆ ಬಂದು ಕೂತಿದ್ದ. ಇಂತದೊಂದು ಹಠಾತ್ ಬದಲಾವಣೆ ನನಿಗೆ ಬೇಜಾರಾದ್ರು ರಾಮಣ್ಣನಿಗೆ ಏನೂ ಅನ್ನಿಸದಂಗೆ ಕಾಣಲಿಲ್ಲ. ಅವುನು ಇಂತ ಸ್ಥಿತಿಯನ್ನ ಹೆದರಸಕ್ಕೆ ತಯಾರಾಗಿ ಬಂದೊನಂಗೆ ಕಂಡ. ಅಲ್ಲಿ ನೇರಳೆ ಹಣ್ಣಿನಂಗಿದ್ದ ಕಣ್ಣಿನ ನರ್ಸಿದ್ಲು. ಮದ್ದೂರತ್ರದಿಂದ ಬಂದಿದ್ದ ಫಾರ್ಮಸಿಸ್ಟ್ ಚನ್ನೇಗೌಡ ಇದ್ದ; ಇವುನು ರಾಮಣ್ಣನ ಅಭಿಮಾನಿ; ರಾಮಣ್ಣ ಅಂದ್ರೆ ಜೀವ ಬುಡೋನು. ಇವುರು ಬುಟ್ರೆ ನೀನೆಯಾ ಅಂತ ಕೇಳೋರು ಅಲ್ಯಾರು ಇರಲಿಲ್ಲ.

“ಇಲ್ಯಂಗಿದ್ದಿ” ಅಂದೆ.

“ನೀನೆ ನೋಡಿದಲ್ಲ ಈಗ. ಅಂಗಿದ್ದಿನಿ ಕಲ. ನಾನು ನೋಡಿ ಬಂದ ಆಸುಪತ್ರೆ ಯಿಂಗಿತ್ತು ಅಂತ ನಿಮ್ಮಣ್ಣನಿಗೇಳು” ಅಂದ. ಅದು ಜನಗಳು ಆರೋಗ್ಯವಾಗಿದ್ದ ಕಾಲ. ಆಸ್ಪತ್ರಿಗೆ ಕಡಿಮೆ ಪೇಷಂಟ್ ಬರೋರು. ಅಂಗಾಗಿ ರಾಮಣ್ಣ ತಾನು ಮೆಚ್ಚಿದ ಪುಸ್ತಕ ತಗಂಡೋಗಿ ಓದಿಕೊಂಡು ಬರೋನು. ಮಧ್ಯಾಹ್ನದೊತ್ತು ಊಟನೂ ಸಿಗತಿರಲಿಲ್ಲ. ಮೂರ್‌ನಾಕು ಕೋಳಿಮೊಟ್ಟೆ ತಿನ್ನಕಂಡು ಬರನು. ಯಾರಾದ್ರು ಪೇಷಂಟ್ ಬಂದ್ರೆ ಅವರ ಪುರಾಣನ್ಯಲ್ಲ ಜಾಲಾಡಿ ಕಳಿಸೋನು. ಅವುನಲ್ಲಿ ಗ್ರಾಮೀಣ ಭಾಷೆಯಿತ್ತು. ಮಂಡ್ಯದ ಕಡೆ ಕೊಡಿಯಾಲ, ಬೆಸಗರಳ್ಳಿ ಭಾಷೆಲಿ ಪೇಷಂಟ್ ಮಾತಾಡಿಸಿದ್ರೆ ರೋಗಿಗಳಿಗೆ ಡಾಕ್ಟ್ರು ನಮ್ಮವರು ಅನ್ಸದು. ಹರದನಳ್ಳಿಗೋಗಿ ಜಾಯಿನಾಗಿ ಬಂದ ಮ್ಯಾಲೆ ಒಂದು ತಿಂಗಳಾಕಡಿಕೆ ತಲೆ ಹಾಕಿರಲಿಲ್ಲ. ಇವುನೆಲ್ಲೊ ಪ್ರಭಾವಿಗಳ ಕಂಡು ವರ್ಗ ಮಾಡಿಸಿಗತ್ತಾಯಿರಬಹುದು ಅಂತ ನಾವು ತಿಳಕಂಡ್ರೆ, ಅವುನು ಸಂಸಾರ ತಂದು ನಾಗಮಂಗಲದಲ್ಲಿ ಮನೆ ಮಾಡಿ ಇರಿಸಿ ಹರದನಳ್ಳಿ ನಿಭಾಯ್ಸಕ್ಕೆ ತಯಾರಾಗಿ ಹೋಗಿದ್ದ. ನಾನು ಆಗಾಗ್ಗೆ ಹೋಯ್ತಿದ್ದೆ. ಒಂದುಸತಿ ಹೋದಾಗ ಒಬ್ಬ ರೋಗಿ ಸತ್ಯ ಹೇಳಿದ.

ಯಾರೊ ಒಬ್ಬ ಬಡರೋಗಿ ಬಂದನಂತೆ. “ಸಾ ನನ್ನ ಮಕ್ಕಳಿಗೆ ಉಸಾರಿಲ್ಲ, ಯಂತೆವಾರ ಮಾತ್ರೆ ಕೊಡಿ” ಅಂದನಂತೆ. ಯಂತೆವಾರ ಮಾತ್ರೆ ಆದ್ರಾತ್ಯು, ಅವುಕೆ ಕಾಯಿಲೆ ವಾಸಿ ಮಾಡೋ ಸಗತಿ ಇರತದೆ ಅಂತ ತಿಳಕಂಡ ಜನ ಇವುರು. “ಅಲ್ಲಯ್ಯಾ ಯಂತೆವಾರ ಮಾತ್ರೆ ಅಂತಿಯಲ್ಲಯ್ಯ, ಮಕ್ಕಳನೂ ಕರಕಂಡು ಬಂದಿಲ್ಲ, ಅವುದೇನಾಗ್ಯದೆ ಅದ್ನಾರ ಹೇಳು” ಅಂದಾಗ “ಜರ ಬಂದವೆ ಸಾ” ಅಂದನಂತೆ. ಸರಿ ಅಂತ ಮಾತ್ರೆ ಬರಕೊಟ್ಟನಂತೆ. ವತ್ತರಿಕೆ ತಿರಗಾ ಬಂದ ಆತನನ್ನು ಏನಾಯ್ತೋ ಏನೊ ಅಂತ ರಾಮಣ್ಣ “ಉಸಾರಾದವೇನಯ್ಯ ಮಕ್ಕಳು” ಅಂತ ಕೇಳಿದನಂತೆ.

“ಇಲ್ಲ ಸಾ.”

“ಯಾಕಯ್ಯ?”

“ನೀವು ಬರಕೊಟ್ಟ ಮಾತ್ರೆ ತರಕ್ಕಾಗಲಿಲ್ಲ ಸಾ.”

“ದುಡ್ಡಿರಲಿಲವೇನಯ್ಯ?”

“ಇತ್ತು ಸಾ, ಹಂದಿಮರಿಗೆ ಮೇವು ತಂದೆ.”

“ನಿನ್ನ ಮಕ್ಕಳಿಗಿಂತ್ಲೂ ಹಂದಿ ಮರಿನೆ ಮುಖ್ಯವಾದವೇನಯ್ಯ. ತಗೋ ಮೊದ್ಲೊಗಿ ಮಾತ್ರೆ ತಂದುಕೊಡು” ಅಂತ ದುಡ್ಡು ಕೊಟ್ನಂತೆ.

“ನೀವು ಬರಕೊಟ್ಟ ಅವುಸ್ತಿ ಚೀಟಿ ಕಳಕಂಡಿದ್ದಿನಿ ಸಾ” ಅಂದನಂತೆ. ಆಗ ಮಾತ್ರೆ ಚೀಟಿ ಜೊತೆಗೆ ದುಡ್ಡನ್ನೂ ಕೊಟ್ಟು ಕಳಿಸಿದನಂತೆ.

“ನೋಡು ಯಂಗವುರೆ ಜನ.. ಇನ್ನ ಯಂಥ್ಯಥಾ ಜನ ಬತ್ತರೊ ನೋಡನ ಅಂತ ಕಾಯ್ತಯಿದ್ದಿನಿ ಕಲ” ಅಂದ.

“ಸರಿಯಾಗಿ ಬೈಬೇಕಿತ್ತು” ಅಂದೆ.

“ಬೈಬಾರ್ದು ಕಲ. ಅವುಕೇನು ಬೈಸಿಗತ್ತವೆ. ತಿರಗ ಇತ್ತಗೆ ಬರದಂಗೆ ವಂಟೋಯ್ತವೆ. ನಮ್ಮಣೆ ಬರನೆ ಇಷ್ಟು ಅನ್ನಕತ್ತವೆ. ಅದ್ಕೆ ಸಯಿಸಿಗಂಡು ನಾವೇ ತಿದ್ದಬೇಕು” ಕಲ ಅಂದ ರಾಮಣ್ಣ. ನಿಜವಾಗ್ಲು ಹಳ್ಳಿ ಡಾಕ್ಟರಾಗಕ್ಕೆ ಯೋಗ್ಯವಾಗಿ ಕಂಡ. ಜೊತೆಗೆ ಅವನ ಜವಬ್ದಾರಿ ನೋಡಿ ಹೆಮ್ಮೆ ಅನ್ನಸ್ತು.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-7; ’ಏ ನಮ್ಮ ಟ್ರೈನಿಂಗೆ ಬ್ಯಾರೆ, ನಮ್ಮ ಜನಗಳು ಹೇಳೊ ಕತೆನೆ ಬ್ಯಾರೆ ಕಲ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...