Homeಕರ್ನಾಟಕಕೇಂದ್ರದಿಂದ ಐಎಎಸ್‌ಗಳು ದೂರ ಉಳಿಯಲು ಕೇಂದ್ರದ ಕಿರುಕುಳವೇ ಕಾರಣ: ಸಸಿಕಾಂತ್‌ ಸೆಂಥಿಲ್‌

ಕೇಂದ್ರದಿಂದ ಐಎಎಸ್‌ಗಳು ದೂರ ಉಳಿಯಲು ಕೇಂದ್ರದ ಕಿರುಕುಳವೇ ಕಾರಣ: ಸಸಿಕಾಂತ್‌ ಸೆಂಥಿಲ್‌

ಐಎಎಸ್‌ ಕೇಡರ್‌‌ ನಿಯಮಗಳು 1954ಕ್ಕೆ ತಿದ್ದುಪಡಿಗಳನ್ನು ತರಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್‌ ವಿರೋಧಿಸಿದ್ದಾರೆ.

- Advertisement -
- Advertisement -

ಐಎಎಸ್‌ ಕೇಡರ್‌‌ ನಿಯಮಗಳು 1954ಕ್ಕೆ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರ ಹೊರಟಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ.

ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳ ಇಳಿಕೆಯಾಗುತ್ತಿದೆ.  2011ರಲ್ಲಿ 309 ಮಂದಿ ಇದ್ದ ಅಧಿಕಾರಿಗಳಿದ್ದರು. ಈಗ 223 ಮಂದಿ ಇದ್ದಾರೆ. ಕೇಂದ್ರೀಯ ನಿಯೋಜನೆ 2011ರಲ್ಲಿ ಶೇ. 25ರಷ್ಟಿತ್ತು. ಈಗ ಶೇ. 18ಕ್ಕೆ ಕುಸಿದಿದೆ.

ಮಂಜೂರಾದ ಹುದ್ದೆಗಳಲ್ಲಿ ಒಂದಿಷ್ಟು ಮಂದಿಯನ್ನು ‘ಕೇಂದ್ರೀಯ ನಿಯೋಜನೆ ಮೀಸಲು’ (ಸಿಡಿಆರ್‌) ಅನ್ವಯ ಕೇಂದ್ರ ಸೇವೆಗೆ ಕಳುಹಿಸಬೇಕಿದ್ದು, ಬಹುತೇಕ ರಾಜ್ಯಗಳು ಸಿ.ಡಿ.ಆರ್‌ ಪಾಲಿಸುತ್ತಿಲ್ಲ ಎಂಬುದು ಕೇಂದ್ರದ ಆರೋಪ. ಹೀಗಾಗಿ ಐಎಎಸ್‌ (ಕೇಡರ್‌) ನಿಯಮಗಳು- 1954ರ ನಿಯಮ 6 (1)ಕ್ಕೆ ಹೆಚ್ಚುವರಿ ಅಂಶಗಳನ್ನು ಸೇರಿಸಿ ತಿದ್ದುಪಡಿ ಮಾಡಲು ಮುಂದಾಗಿದೆ. ಕೇಂದ್ರ ನಿಗದಿಪಡಿಸಿದ ಕಾಲಮಿತಿಯಲ್ಲಿ ಕೇಂದ್ರದ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ತಿದ್ದುಪಡಿ ತರುವಂತೆ ನಿಯಮ ರೂಪಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧಿಸಿದ್ದಾರೆ. ಕೇಂದ್ರವು ಒಕ್ಕೂಟ ವ್ಯವಸ್ಥೆಯನ್ನು ನಿರ್ಲಕ್ಷಿಸುತ್ತಿದೆ ಎಂದಿದ್ದಾರೆ.

ಈ ವಿವಾದದ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿರುವ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, ಕೇಂದ್ರದ ನಿರ್ಧಾರವನ್ನು ವಿರೋಧಿಸಿದರು. “ಕೇಂದ್ರ ಸರ್ಕಾರ ಮಾಡಲು ಹೊರಟಿರುವ ತಿದ್ದುಪಡಿಗಳು ಒಕ್ಕೂಟ ಸಹಕಾರ ತತ್ವಕ್ಕೆ ವಿರುದ್ಧವಾಗಿದೆ” ಎಂದರು.

ಹೊಸ ತಿದ್ದುಪಡಿಗಳಿಂದಾಗುವ ಸಮಸ್ಯೆಗಳನ್ನು ಸೆಂಥಿಲ್ ವಿವರಿಸಿದರು.

“ರಾಜ್ಯದಲ್ಲಿ ಒಂದು ಮುಖ್ಯವಾದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಐಎಎಸ್‌ ಅಧಿಕಾರಿಯನ್ನು ಯಾವುದೇ ಮುನ್ನೆಚ್ಚರಿಕೆ ನೀಡದೆ ಕೆಲಸದಿಂದ ತೆಗೆದು ಕೇಂದ್ರಕ್ಕೆ ಕರೆಸಿಕೊಳ್ಳುವ ಅವಕಾಶವನ್ನು ಈ ತಿದ್ದುಪಡಿಗಳು ಕೇಂದ್ರ ಸರ್ಕಾರಕ್ಕೆ ನೀಡುತ್ತವೆ” ಎಂದು ತಿಳಿಸಿದರು.

“ರಾಜ್ಯದಲ್ಲಿ ಕೇಂದ್ರಕ್ಕೆ ವಿರೋಧಿಯಾಗಿರುವ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರಕ್ಕೆ ಕಿರುಕುಳ ನೀಡಲೆಂದೇ ಕೆಲವು ಮುಖ್ಯವಾದ ಅಧಿಕಾರಿಗಳನ್ನು ಕೇಂದ್ರ ಕರೆಸಿಕೊಳ್ಳುವ ಅವಕಾಶ ಈ ತಿದ್ದುಪಡಿ ನಿಯಮಗಳಲ್ಲಿದೆ” ಎಂದು ಹೇಳಿದರು.

“ಈ ರೀತಿಯ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಸಿಕ್ಕಿದಾಗ ಐಎಎಸ್ ಅಧಿಕಾರಿಗಳು ಹೆದರಿಕೊಂಡೇ ಇರಬೇಕಾಗುತ್ತದೆ. ನಮ್ಮನ್ನು ರಾಜ್ಯದಿಂದ ತೆಗೆದು ಕೇಂದ್ರಕ್ಕೆ ಕರೆಸಿಕೊಂಡು ಹಿಂಸೆ ಕೊಡುತ್ತಾರೆ ಎಂಬ ಭಯದಲ್ಲೇ ಐಎಎಸ್‌ಗಳು ಕೆಲಸ ಮಾಡಬೇಕಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಕೇಂದ್ರದಲ್ಲಿ ಕೆಲಸ ಮಾಡುವ ಐಎಎಸ್ ಅಧಿಕಾರಿಗಳ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈ ಸಮಸ್ಯೆ ಏಕೆ ತಲೆದೋರಿದೆ ಎಂದರೆ, ಕೇಂದ್ರದಲ್ಲಿ ಇವರೊಂದಿಗೆ ಕೆಲಸ ಮಾಡಲು ಐಎಎಸ್‌ ಅಧಿಕಾರಿಗಳು ಸಿದ್ಧವಿಲ್ಲ. ಎಲ್ಲರೂ ಓಡಿ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರದ ವರ್ತನೆಯಿಂದ ಬೇಸತ್ತು ಅಧಿಕಾರಿಗಳು ರಾಜ್ಯದಲ್ಲೇ ಉಳಿಯಲು ಬಯಸುತ್ತಿದ್ದಾರೆ” ಎಂದರು.

“ಯಾವುದೇ ಸಚಿವಾಲಯದಲ್ಲೂ ತಮ್ಮ ಅಭಿಪ್ರಾಯವನ್ನು ಹೇಳಲು ಐಎಎಸ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಯಾವುದೇ ಸಚಿವಾಲಯದ ಸಚಿವರ ಅಭಿಪ್ರಾಯಗಳನ್ನು ಪ್ರಧಾನಿಯವರು ಆಲಿಸುವುದಿಲ್ಲ. ಎಲ್ಲವೂ ಪ್ರಧಾನಿ ಕೇಂದ್ರಿತವಾಗಿ ನಡೆಯುತ್ತಿವೆ. ಪ್ರಧಾನಿ ಹೇಳಿದಂತೆ ಕಡತಗಳನ್ನು ಮಾಡಬೇಕಾಗಿದೆ. ಯಾರ ಬಗ್ಗೆಯೂ ಏನನ್ನೂ ಅಧಿಕಾರಿಗಳು ಹೇಳುವಂತಿಲ್ಲ. ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಏನಾದರೂ ಒಂದು ಸಣ್ಣ ಅಪಾದನೆ ಬಂದರೆ ಅಧಿಕಾರಿಯ ವೃತ್ತಿಬದುಕನ್ನೇ ಮುಗಿಸಿಬಿಡುತ್ತಾರೆ. ಇಂತಹ ಕಷ್ಟವನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು ಎಂದು ಐಎಎಸ್ ಅಧಿಕಾರಿಗಳು ಭಾವಿಸುತ್ತಾರೆ” ಎನ್ನುತ್ತಾರೆ ಸಸಿಕಾಂತ್‌.

“ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವುದು ಪ್ರತಿಯೊಬ್ಬ ಐಎಎಸ್ ಅಧಿಕಾರಿಗೂ ಹೆಮ್ಮೆಯ ವಿಷಯವಾಗಿರುತ್ತದೆ. ಆದರೆ ಅವಕಾಶ ಇದ್ದರೂ ಕೇಂದ್ರಕ್ಕೆ ಹೋಗುತ್ತಿಲ್ಲ ಎಂಬುದಕ್ಕೆ ಏನು ಕಾರಣ? ಐಎಎಸ್‌ ಅಧಿಕಾರಿಗಳು ಈಗ ಕಡ್ಡಾಯವಾಗಿ ಕೇಂದ್ರಕ್ಕೆ ಬರಬೇಕು ಎಂದು ನಿಯಮ ರೂಪಿಸಲು ಹೊರಟಿರುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.

“ಜನರ ಜೊತೆಯಲ್ಲಿ ನೇರ ಸಂಪರ್ಕದಲ್ಲಿರುವುದು ರಾಜ್ಯ ಸರ್ಕಾರಗಳು ಮಾತ್ರ. ಕೇಂದ್ರಕ್ಕೆ ಜನ ಸಂಪರ್ಕ ಸಾಧ್ಯವಾಗದು. ರಾಜ್ಯದಲ್ಲಿ ಕೆಲಸ ಮಾಡಿದ ಐಎಎಸ್‌ ಅಧಿಕಾರಿಗಳು ಕೇಂದ್ರಕ್ಕೆ ಬರಬೇಕೆಂಬ ವ್ಯವಸ್ಥೆಯನ್ನು ನಮ್ಮ ಒಕ್ಕೂಟ ವ್ಯವಸ್ಥೆ ಮಾಡಿಕೊಂಡಿದೆ ಎಂದರೆ, ಜನರ ಜೊತೆಯಲ್ಲಿ ಕೆಲಸ ಮಾಡಿದವರು ಕೇಂದ್ರದಲ್ಲಿ ಇರಬೇಕೆಂಬ ಉದ್ದೇಶದಿಂದಷ್ಟೇ. ಎಲ್ಲವಾದರೆ ನೇರವಾಗಿ ನೇಮಕಾತಿಯನ್ನು ಅವರಾಗಿಯೇ ಮಾಡಿಕೊಳ್ಳಬಹುದಿತ್ತಲ್ಲ” ಎಂದರು.

“ಆಲ್‌ ಇಂಡಿಯಾ ಸರ್ವೀಸ್‌ ಬಂದಿರುವ ಕಾರಣವೇ ಜನರೊಂದಿಗೆ ಅಧಿಕಾರಿಗಳು ಇರಬೇಕೆಂದು. ಒಂದು ಪಾಲಿಸಿ ಜನರ ಮೇಲೆ ಹೇಗೆ ಪರಿಣಾಮ ಬೀರಿದ ಎಂಬುದು ಜನರ ಜೊತೆ ಕೆಲಸ ಮಾಡಿದವರಿಗೆ ತಿಳಿಯುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ಕೇಂದ್ರಕ್ಕಿಂತ ರಾಜ್ಯ ಸರ್ಕಾರಗಳಲ್ಲಿಯೇ ಐಎಎಸ್ ಅಧಿಕಾರಿಗಳ ಸೇವೆ ಮುಖ್ಯವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿರಿ: ಐಎಎಸ್‌ ನಿಯಮಗಳ ಬದಲಾವಣೆ ಪ್ರಸ್ತಾಪ: ಕೇಂದ್ರದ ನಡೆಗೆ ಸಿಎಂಗಳ ಆಕ್ಷೇಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ರಾಜ್ಯ ಸರ್ಕಾರಗಳಿಗೆ ಇರುವ ಅಧಿಕಾರಗಳನ್ನು ಕಿತ್ತುಕೊಳ್ಳುವ ಒಕ್ಕೂಟ ಸರ್ಕಾರದ ಈ ಕ್ರಮ ಕಂಡನಾರ್ಹ.

  2. ಸಸಿಕಾಂತ್ ಸೆಂತಿಲ್ ವಾದ ಸರಿಯಾಗಿದೆ. ಅದರೊಂದಿಗೆ ಕೇಂದ್ರವು, ರಾಜ್ಯ ಸರ್ಕಾರವನ್ನು ಕಡೆಗಣಿಸಿ, ರಾಜ್ಯಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರಣೆ ಕೇಳಲು, ಕೇಂದ್ರದ ಯೋಜನೆಗಳನ್ನು ಕಾರ್ಯಗತ ಮಾಡಲು, ರಾಜ್ಯ ಸೇವೆಯಲ್ಲಿ ನಿಯೋಜಿತರಾದ ಐಎಎಸ್ ಅಧಿಕಾರಿಗಳಲ್ಲಿ ನೇರವಾಗಿ ಚರ್ಚಿಸುವುದು ಎಷ್ಟು ಸರಿ? ಇದು, ರಾಜ್ಯ ಸರ್ಕಾರವೊಂದನ್ನು ಮತ್ತು ಅದನ್ನು ಆಡಳಿತ ಮಾಡಲು ನಿಯೋಜಿಸಿದ ಜನರನ್ನು ಅವಮಾನಿಸಿದಂತಲ್ಲವೆ?

  3. ಒಕ್ಕೂಟ ಸರ್ಕಾರ ದಲ್ಲಿ , ಅಂದರೆ ನೇರವಾಗಿ ಆ ಸರ್ಕಾರದ ಅಡಿಯಲ್ಲಿ ಮಾತ್ರ, ಕೆಲಸ ಮಾಡಲೆಂದೇ ಆರಂಭದಲ್ಲಿಯೇ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳ ಬಹುದು. ಐಎಎಸ್ ಪರೀಕ್ಷೆ ಬರೆಯುವಾಗಲೇ ಅಭ್ಯರ್ಥಿಗಳು ದೆಹಲಿ ಸರ್ಕಾರದ ಅಡಿಯಲ್ಲಿ ಕೆಲಸಮಾಡುವ ತಮ್ಮ ಇಚ್ಛೆಯನ್ನು ವ್ಯಕಪಡಿಸ ಬಹುದು. ವಿವಿಧ ರಾಜ್ಯಗಳ ಕ್ಯಾಡರ್ಬಗಳು ಇದ್ದಂತೆ ಒಕ್ಕೂಟ ಸರ್ಕಾರದ ಕ್ಯಾಡರ್ ಒಂದನ್ನು ಸೃಷ್ಟಿಸುವುದರ ಮೂಲಕ ಈ ಸಮಸ್ಯೆ ಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವೇ?

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...