ಬೆಂಗಳೂರು: ಕರ್ನಾಟಕದಲ್ಲಿ E20 ಪೆಟ್ರೋಲ್ನಲ್ಲಿ ನಿಗದಿತ ಮಿತಿಗಿಂತಲೂ ಅಧಿಕ ಪ್ರಮಾಣದ ಎಥನಾಲ್ ಬೆರೆಸಿ ಸಾರ್ವಜನಿಕರಿಗೆ ವಂಚಿಸಲಾಗುತ್ತಿದೆ ಎನ್ನುವ ರಾಜ್ಯ ಸರ್ಕಾರದ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಯೊಂದು ಭಾರಿ ಸಂಚಲನ ಮೂಡಿಸಿದೆ. ಪೆಟ್ರೋಲ್ನಲ್ಲಿ ಎಥನಾಲ್ ಮಿಶ್ರಣದ ಪ್ರಮಾಣವನ್ನು ಶೇ. 20 ರಿಂದ ಶೇ. 30ಕ್ಕೆ ಏರಿಸುವ ಕುರಿತು ಕೇಂದ್ರ ಸರ್ಕಾರದ ಹಂತದಲ್ಲಿ ಈ ಹಿಂದೆಯೇ ಚರ್ಚೆಗಳು ನಡೆದಿವೆ ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕದಾದ್ಯಂತ ‘ಮಿಷನ್ ನಿಖರ’ ಕಾರ್ಯಚರಣೆಯಡಿ ಸಚಿವ ರಿಜ್ವಾನ್ ಆರ್ಷದ್ ನೇತೃತ್ವದಲ್ಲಿ ಪೆಟ್ರೋಲ್ ಬಂಕ್ಗಳಿಂದ ಸಂಗ್ರಹಿಸಲಾದ ಸ್ಯಾಂಪಲ್ಗಳನ್ನು ಪ್ರಸಿದ್ಧ NABL ಪರೀಕ್ಷಾಗಾರಕ್ಕೆ ಕಳುಹಿಸಲಾಗಿತ್ತು. ಕೇಂದ್ರ ತೈಲ ಕಂಪನಿಗಳು ಶೇ. 20ರಷ್ಟು (E20) ಎಥನಾಲ್ ಮಿಶ್ರಣ ಮಾಡುವುದಾಗಿ ಹೇಳಿಕೊಂಡಿದ್ದರೂ, ಪರೀಕ್ಷಾ ವರದಿಗಳಲ್ಲಿ ಶೇ. 25.5 ರಿಂದ ಶೇ. 31.2 ರಷ್ಟು ಎಥನಾಲ್ ಇರುವುದು ದೃಢಪಟ್ಟಿತ್ತು. ಇದರ ಪರಿಣಾಮವಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇಂಜಿನ್, ಫ್ಯುಯೆಲ್ ಪಂಪ್ ಮತ್ತು ಸೀಲ್ಸ್ಗಳು ಹಾಳಾಗುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಮತ್ತು ರಿಜ್ವಾನ್ ಆರ್ಷದ್ ಆರೋಪಿಸಿದ್ದರು. ಈ ಮೂಲಕ ಭಾರತದ ವಾಹನ ಸವಾರರಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಲಾಗುತ್ತಿದೆ ಎನ್ನುವ ಪ್ರಗತಿಪರ ಆರೋಪ ರಾಜ್ಯಾದ್ಯಂತ ಕಾವು ಪಡೆದುಕೊಂಡಿತ್ತು.
ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಹೆಚ್ಡಿಕೆ ಸ್ಪೋಟಕ ಹೇಳಿಕೆ:
ಈ ವಿವಾದದ ಕಾವೇರಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಹೆಚ್.ಡಿ. ಕುಮಾರಸ್ವಾಮಿ ಅವರನ್ನು “ಕರ್ನಾಟಕದಲ್ಲಿ ಶೇ. 20ರಷ್ಟು ಎಥನಾಲ್ ಬೆರೆಸುವ ಬದಲು ಶೇ. 31.5ರಷ್ಟು ಎಥನಾಲ್ ಬೆರೆಸಿರುವ ಪೆಟ್ರೋಲ್ ಮಾರಾಟವಾಗುತ್ತಿದೆ ಎಂದು ಸಚಿವ ರಿಜ್ವಾನ್ ಆರ್ಷದ್ ಆರೋಪಿಸಿದ್ದಾರಲ್ಲವೇ?” ಎಂದು ಕೇಳಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಾನು ನೋಡಿರುವ ಪ್ರಕಾರ, ಕೇಂದ್ರ ಸರ್ಕಾರದಲ್ಲಿ ಎಥನಾಲ್ ಮಿಶ್ರಣವನ್ನು ಶೇ. 20ರಿಂದ ಶೇ. 30ಕ್ಕೆ ಏರಿಕೆ ಮಾಡಲು ಚರ್ಚೆಗಳು ನಡೆಯುತ್ತಿವೆ. ಇಲಾಖೆಗಳಲ್ಲಿ ಕೆಲವು ತೀರ್ಮಾನಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಇದು ನನ್ನ ಇಲಾಖೆಗೆ ಸಂಬಂಧಪಟ್ಟ ವಿಷಯವಲ್ಲ. ನಾನು ಎಥನಾಲ್ ಬಗ್ಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ದೆಹಲಿಗೆ ಹೋದ ಮೇಲೆ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ” ಎಂದು ಹೇಳುವ ಮೂಲಕ ಎಥೆನಾಲ್ ಬಗೆಗಿನ ಚರ್ಚೆಗಳಿಗೆ ಸ್ಪೋಟಕ ತಿರುವು ಕೊಟ್ಟಿದ್ದಾರೆ.
ಇಷ್ಟು ದಿನಗಳ ಕಾಲ ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಕೇಂದ್ರದ ನಾಯಕರು “ಎಥನಾಲ್ ಬೆರೆಸುವ ಮಿತಿ ಶೇ. 20 ದಾಟಿಲ್ಲ, ಹೆಚ್ಚಿಸುವ ಯಾವುದೇ ಯೋಜನೆಯೂ ಇಲ್ಲ” ಎಂದು ಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಆದರೆ, ಎನ್ಡಿಎ ಸರ್ಕಾರದ ಒಕ್ಕೂಟದ ಪ್ರಮುಖ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರೇ “ಕೇಂದ್ರದಲ್ಲಿ ಎಥನಾಲ್ ಅನ್ನು ಶೇ. 30ಕ್ಕೆ ಏರಿಸಲು ಕಳೆದ 3-4 ತಿಂಗಳುಗಳಿಂದ ಚರ್ಚೆ ಮತ್ತು ತೀರ್ಮಾನಗಳು ನಡೆದಿವೆ” ಎಂದು ಸ್ವತಃ ಒಪ್ಪಿಕೊಂಡಿರುವುದು ಕೇಂದ್ರ ಸರ್ಕಾರದ ಮುಖವಾಡವನ್ನು ಕಳಚಿಹಾಕಿದಂತಾಗಿದೆ.
ಸಚಿವ ರಿಜ್ವಾನ್ ಆರ್ಷದ್ ವಾಗ್ದಾಳಿ!
ಕೇಂದ್ರ ಸಚಿವರ ಈ ಸ್ವಯಂಕೃತ ಹೇಳಿಕೆಯ ವೀಡಿಯೋವನ್ನು ತಮ್ಮ X (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಆರ್ಷದ್, ಕೇಂದ್ರ ಸರ್ಕಾರ ಹಾಗೂ ತೈಲ ಮಾರುಕಟ್ಟೆ ಕಂಪನಿಗಳಾದ BPCL, HPCL ಮತ್ತು Indian Oil ಸಂಸ್ಥೆಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಕೇಂದ್ರ ಸರ್ಕಾರ ಎಥನಾಲ್ ಮಿಶ್ರಣವನ್ನು ಶೇ. 20ರಿಂದ ಶೇ. 30ಕ್ಕೆ ಏರಿಸಲು ಕಳೆದ 3-4 ತಿಂಗಳುಗಳಿಂದ ಯೋಜಿಸುತ್ತಿದೆ ಎಂಬುದನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ ದೃಢಪಡಿಸಿದ್ದಾರೆ. ಹಾಗಾದರೆ, ಅಧಿಕೃತ ಘೋಷಣೆಗೆ ಮುನ್ನವೇ ಸಾರ್ವಜನಿಕರಿಗೆ ಗೊತ್ತಿಲ್ಲದೆ ಅನಧಿಕೃತವಾಗಿ ಪೆಟ್ರೋಲ್ನಲ್ಲಿ ಶೇ. 31ಕ್ಕೂ ಹೆಚ್ಚು ಎಥನಾಲ್ ಬೆರೆಸಿರುವುದು ಈ ಬೃಹತ್ ಯೋಜನೆಯ ಭಾಗವೇ?” ಎಂದು ಪ್ರಶ್ನಿಸಿರುವ ಅವರು, #E20Turns420 ಹ್ಯಾಶ್ಟ್ಯಾಗ್ ಮೂಲಕ ಕೇಂದ್ರ ಸರ್ಕಾರದ ಎಥೆನಾಲ್ ಬ್ಲೆಂಡಿಂಗ್ ವಿವಾದವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಒಟ್ಟಾರೆಯಾಗಿ, ರಾಜ್ಯ ಸರ್ಕಾರ NABL ಲ್ಯಾಬ್ ವರದಿಗಳ ಮೂಲಕ ಎತ್ತಿಹಿಡಿದಿದ್ದ ಶೇ. 31ಕ್ಕೂ ಅಧಿಕ ಎಥನಾಲ್ ಮಿಶ್ರಣದ ಹಗರಣಕ್ಕೆ, ಕೇಂದ್ರ ಸಚಿವರ ಈ ಹೇಳಿಕೆಯೇ ಅತ್ಯಂತ ಪ್ರಬಲ ಸಾಕ್ಷಿಯನ್ನೊದಗಿಸಿದಂತಾಗಿದೆ. ಅನಧಿಕೃತವಾಗಿ ಎಥನಾಲ್ ಪ್ರಮಾಣ ಹೆಚ್ಚಿಸಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಹಾಗೂ ಸಾರ್ವಜನಿಕರ ಜೇಬಿಗೆ ಕನ್ನ ಹಾಕುವ ಹಿಂಬಾಗಿಲ ಕಾರ್ಯಾಚರಣೆ ಕೇಂದ್ರದ ಹಂತದಲ್ಲಿ ನಡೆದಿತ್ತು ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ಈಗ ಸಂಪೂರ್ಣ ಪುಷ್ಟಿ ದೊರೆತಂತಾಗಿದೆ.


