ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ಸರಬರಾಜು ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಯಮಾನುಸಾರ ಇರಬೇಕಾದ ಶೇಕಡಾ 20 ಕ್ಕಿಂತಲೂ ಅಧಿಕ ಪ್ರಮಾಣದ ಎಥನಾಲ್ ಮಿಶ್ರಣ ಮಾಡುತ್ತಿರುವುದು ಈಗ ರಾಜ್ಯ ಸರ್ಕಾರ ನಡೆಸಿದ ತನಿಖೆಯಿಂದ ಬಯಲಾಗಿದೆ. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೆಟ್ರೋಲ್‌ನಲ್ಲಿ ಎಥನಾಲ್ ಸಮ್ಮಿಶ್ರಣ (Ethanol Blending) ವಿಚಾರವಾಗಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಜನತೆಗೆ ಸಂಪೂರ್ಣ ಸುಳ್ಳು ಹೇಳುವ ಮೂಲಕ ಬೃಹತ್ ವಂಚನೆ ಎಸಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಯಮಗಳ ಪ್ರಕಾರ ಶೇಕಡಾ 20ಕ್ಕಿಂತ ಹೆಚ್ಚು ಎಥನಾಲ್ ಬೆರೆಸಬಾರದು ಎಂದು ಸರ್ಕಾರ ಘೋಷಿಸಿಕೊಂಡಿತ್ತಾದರೂ, ಕೇಂದ್ರ ಸರ್ಕಾರದಿಂದಲೇ ಮಾನ್ಯತೆ ಪಡೆದಿರುವ NABL (National Accreditation Board for Testing and Calibration Laboratories) ಪ್ರಯೋಗಾಲಯಗಳ ಪರೀಕ್ಷಾ ವರದಿಗಳು ಭಿನ್ನವಾದ ಮತ್ತು ಆಘಾತಕಾರಿ ಸತ್ಯವನ್ನು ಹೊರಹಾಕಿವೆ ಎಂದಿದ್ದಾರೆ .
ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣವು ನಿಗದಿತ ಮಿತಿಯನ್ನು ಮೀರಿ ಬರೋಬ್ಬರಿ ಶೇಕಡಾ 35 ರಿಂದ 40 ಪ್ರತಿಶತದಷ್ಟು ಬೆರೆಸಲಾಗುತ್ತಿದೆ ಎಂಬುದು ಪರೀಕ್ಷೆಯಲ್ಲಿ ಸಾಬೀತಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಸಂಸ್ಥೆಗಳೇ ಅನುಮೋದಿಸಿರುವ ಈ ಪರೀಕ್ಷಾ ವರದಿಗಳು ಒಕ್ಕೂಟ ಸರ್ಕಾರದ ಕಪಟತನವನ್ನು ಸಾಕ್ಷಿ ಸಮೇತ ಬಯಲು ಮಾಡಿವೆ. ಇಡೀ ಎಥನಾಲ್ ಸಮ್ಮಿಶ್ರಣ ಯೋಜನೆಯನ್ನು ದೇಶದ ಇಂಧನ ಭದ್ರತೆ ಅಥವಾ ಪರಿಸರ ರಕ್ಷಣೆಯ ಹೆಸರಿನಲ್ಲಿ ಜಾರಿಗೆ ತರಲಾಗಿಲ್ಲ, ಬದಲಿಗೆ ಕೇಂದ್ರ ಸಚಿವರುಗಳು ಹಾಗೂ ತಮಗೆ ಬೇಕಾದ ಉದ್ಯಮಿಗಳ ಜೇಬು ತುಂಬಿಸಲು ಮತ್ತು ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಡಲು ಮಾತ್ರ ಈ ಹಗರಣವನ್ನು ನಡೆಸಲಾಗುತ್ತಿದೆ ಎಂದು ಖರ್ಗೆ ನೇರ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ನೀಡಿದ್ದ ಹೇಳಿಕೆಯನ್ನು ನೆನಪಿಸಿದ ಪ್ರಿಯಾಂಕ್ ಖರ್ಗೆ, ಎಥನಾಲ್ ಮಿಕ್ಸಿಂಗ್ ಎಂಬುದು ದೇಶಾದ್ಯಂತ ಜಾರಿಯಲ್ಲಿರುವ ಖಾಯಂ ಯೋಜನೆಯಲ್ಲ, ಅದೊಂದು ತಾತ್ಕಾಲಿಕ ‘ಪ್ರಯೋಗ’ (Experiment) ಎಂದು ಸಾಲಿಸಿಟರ್ ಜನರಲ್ ಉನ್ನತ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಪ್ರಸ್ತುತ ಇಡೀ ದೇಶದ 1.3 ಬಿಲಿಯನ್ ಅಂದರೆ 130 ಕೋಟಿ ಜನರನ್ನು ಪ್ರಯೋಗಾಲಯದ ಜೀವಿಗಳನ್ನಾಗಿ ಮಾಡಿಕೊಂಡು ಪ್ರಯೋಗ ನಡೆಸಲಾಗುತ್ತಿದೆ. ದೇಶದ ಇಷ್ಟೊಂದು ದೊಡ್ಡ ಜನಸಂಖ್ಯೆಯ ಮೇಲೆ ಇಂತಹ ಅಪಾಯಕಾರಿ ಪ್ರಯೋಗ ನಡೆಸುವುದು ಹೇಗೆ ಸಾಧ್ಯ? ತನ್ನದೇ ಜನರಿಗೆ ಸತತ ಸುಳ್ಳುಗಳನ್ನು ಹೇಳುತ್ತಾ ಲಾಭ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ಇಂಧನ ನೀತಿ ಸಾರ್ವಜನಿಕರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುತ್ತಿದೆ ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆಯಾಗಿ, E20 ಪೆಟ್ರೋಲ್ ಹಗರಣ ಮತ್ತು ಎಥನಾಲ್ ಪ್ರಮಾಣ ಹೆಚ್ಚಳದ ವಿವಾದವು ದಿನದಿಂದ ದಿನಕ್ಕೆ ಭಾರಿ ರಾಜಕೀಯ ಕಾಡ್ಗಿಚ್ಚಾಗಿ ರೂಪಾಂತರಗೊಳ್ಳುತ್ತಿದೆ. ಒಂದೆಡೆ ತೈಲ ಕಂಪನಿಗಳು ಪೆಟ್ರೋಲ್ ಬಂಕ್ ಮಾಲೀಕರ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಟ್-ಕಾಪಿ-ಪೇಸ್ಟ್ ಸ್ಕ್ರಿಪ್ಟೆಡ್ ವೀಡಿಯೋಗಳನ್ನು ಬಿಡುಗಡೆ ಮಾಡಿ ಡ್ಯಾಮೇಜ್ ಕಂಟ್ರೋಲ್‌ಗೆ ಇಳಿಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಮತ್ತೊಂದೆಡೆ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು NABL ಲೇಬಲ್ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.


