Homeಮುಖಪುಟದೆಹಲಿ ಚುನಾವಣೆಯಲ್ಲಿ ಈ ಬಾರಿಯು ಆಪ್‌ ಗೆಲ್ಲುತ್ತದೆ. ಏಕೆಂದರೆ...

ದೆಹಲಿ ಚುನಾವಣೆಯಲ್ಲಿ ಈ ಬಾರಿಯು ಆಪ್‌ ಗೆಲ್ಲುತ್ತದೆ. ಏಕೆಂದರೆ…

ದೇಶಕ್ಕೆ ನರೇಂದ್ರ ಮೋದಿ, ದೆಹಲಿಗೆ ಕೇಜ್ರಿವಾಲ್ ಎಂದು ಹಲವು ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

- Advertisement -
- Advertisement -

ದೆಹಲಿಯ ಚುನಾವಣೆಯನ್ನು “ಪ್ರಸ್ತುತ ಆಪ್ ಸರ್ಕಾರದ ಇದುವರೆಗಿನ ಕಾರ್ಯಸಾಧನೆಗಳು ಮತ್ತು ಬಿಂಬಿತವಾಗಿರುವ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಆಶ್ಚರ್ಯವಾದ ಫಲಿತಾಂಶಗಳೇನು ಇರಲಿಕ್ಕಿಲ್ಲ” ಎಂದುಕೊಳ್ಳಬಹುದು. ಅಂದರೆ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಆಪ್ ಒಟ್ಟು 70 ಕ್ಷೇತ್ರಗಳಲ್ಲಿ ಕನಿಷ್ಟ 50ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಅಧಿಕಾರದ ಗದ್ದುಗೆ ಏರಲಿದೆ.

ಆದರೆ ರಾಷ್ಟ್ರರಾಜಧಾನಿಯಲ್ಲಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಈ ಬಾರಿ, ಧರ್ಮ, ದೇಶದ್ರೋಹ, ಪಾಕಿಸ್ತಾನ, ಕೋಮು ಪ್ರಚೋದನಾ ಹೇಳಿಕೆಗಳ ಜೊತೆಗೆ ಒಂದಷ್ಟು ಸುಳ್ಳುಗಳನ್ನು ಹೆಣೆದು ಮತದಾರರ ಮನಸ್ಸನ್ನು ಹ್ಯಾಕ್ ಮಾಡಲು ಯತ್ನಿಸುತ್ತಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳನ್ನು ಕಳೆದುಕೊಂಡ ಬಿಜೆಪಿ ದೆಹಲಿ ಗೆಲ್ಲಲು ತನ್ನಿಡೀ ಬಲವನ್ನು ಸುರಿದಿದೆ. ಹಾಗಾಗಿ ದೆಹಲಿ ಚುನಾವಣೆಗೆ ಈ ಬಾರಿ ವಿಶೇಷ ಮಹತ್ವವಿದೆ.

ಒಂದು ಕಡೆ ಜನರಿಂದಲೇ ಹುಟ್ಟಿಬಂದ ಆಮ್‌ಆದ್ಮಿ ಪಾರ್ಟಿ ತನ್ನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ನೀಡಿದ ಭರವಸೆಗಳನ್ನು ಬಹುತೇಕ ಈಡೇರಿಸಿ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಇನ್ನೊಂದು ಕಡೆ ‘ವಿಕಾಸ’ದ ಹಳಿ ಏರಿಬಂದ ಬಿಜೆಪಿ ಹಳಿ ಬದಲಿಸಿ ಸನಾತನ ಧರ್ಮದ ಹೆಸರಿನಲ್ಲಿ ದೇಶವನ್ನು ಸನಾತನ ಕಾಲಕ್ಕೆ ಕರೆದೊಯ್ಯುವ ಭರದಲ್ಲಿದ್ದಂತಿದೆ. ಈ ಮಧ್ಯೆ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಭಾಗವಹಿಸುತ್ತಿದೆ.

ಆಪ್ ಏಕೆ ಗೆಲ್ಲುತ್ತದೆ?

ಆಮ್‌ಆದ್ಮಿ ನೀಡಿದ ಭರವಸೆಗಳಲ್ಲಿ “ವಿದ್ಯುತ್ ದರ ಕಡಿತ, ಉಚಿತ ನೀರು ಸರಬರಾಜು, ಉಚಿತ ಆರೋಗ್ಯ, ಮುಖ್ಯವಾಗಿ ಉತ್ತಮ ದರ್ಜೆಯ ಶಿಕ್ಷಣ” ಎಂಬ ಮೂಲ ಸೌಕರ್ಯಗಳನ್ನು ನೀಡಿದ ರೀತಿ ಇತ್ತೀಚಿನ ವರ್ಷಗಳ ರಾಜಕೀಯ ಪಕ್ಷಗಳನ್ನು ನೋಡಿದಾಗ ಅದು ರಾಜಕಾರಣದಲ್ಲಿ ಓಯಸಿಸ್‌ನಂತೆ ಕಾಣುತ್ತದೆ. ಅತ್ಯುತ್ತಮ ಸರ್ಕಾರಿ ಶಾಲೆಗಳು, ಉತ್ತಮ ಮೊಹಲ್ಲಾ ಕ್ಲಿನಿಕ್‌ಗಳು ದೇಶದ ಗಮನ ಸೆಳೆದಿವೆ. ಮಹಿಳೆಯರಿಗೆ ಉಚಿತ ಪ್ರಯಾಣ, ದೆಹಲಿ ತುಂಬಾ ಸಿಸಿಟಿವಿ ಕ್ಯಾಮರಾಗಳು, ಮನೆಬಾಗಿಲಿಗೆ ಸರ್ಕಾರಿ ಸೇವೆಗಳು ಹೀಗೆ ಅವರು ಮಾಡಿರುವ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೀಗೂ ಕೆಲಸ ಮಾಡಬಹುದು ಎನ್ನುವುದನ್ನು ಬಹುಶಃ ಜನ ಮರೆತೇಹೋಗಿರುವ ಸಮಯದಲ್ಲಿ ಅಲ್ಲಿನ ಮುಖ್ಯಮಂತ್ರಿ ಕೇಜ್ರಿವಾಲ್ ಒಂದು ಉದಾಹರಣೆಯಾಗಿ ಭಿನ್ನವಾಗಿ ನಿಲ್ಲುತ್ತಾರೆ. ಆದರೆ ಅವರ ಸರ್ಕಾರ ಹಾಗೂ ಅವರ ವೈಯಕ್ತಿಕ ನಡೆಗಳನ್ನು ನೇರವಾಗಿ ಟೀಕಿಸಲು ಸಕಾರಣಗಳು ಇಲ್ಲದ್ದರಿಂದ ಬಿಜೆಪಿ ‘ತುಕುಡೆ ತುಕುಡೆ ಗ್ಯಾಂಗ್ ಹಿಂದೆ ನಿಂತಿರುವ ದೇಶದ್ರೋಹಿಗಳು’ ಎನ್ನುವ ಪರೋಕ್ಷ ದಾಳಿಯಿಂದ ಉರುಳಿಸುವ ಯತ್ನ ನಡೆಸುತ್ತಿದೆ.

ಬಿಜೆಪಿ ವರಸೆ…

ಇಲ್ಲಿವರೆಗೂ ಭಾರತದ ಗಣತಂತ್ರದಲ್ಲಿ ಕಂಡುಕೇಳರಿಯದ ಘಟನೆಗಳು ಇಂದಿನ ದಿನ ನಡೆಯುತ್ತಿವೆ. ಕೇಂದ್ರ ಸರ್ಕಾರ ಪಾಸು ಮಾಡಿದ ಸಿಎಎಯಂತಹ ಕಾಯ್ದೆಯ ವಿರುದ್ಧ ದೇಶದ ಒಂದು ದೊಡ್ಡ ಜನಸಮೂಹ ಕಂಡುಕೇಳರಿಯದ ರೀತಿಯಲ್ಲಿ ನಿರಂತರವಾದ ಪ್ರತಿಭಟನೆಯನ್ನು ಮಾಡುತ್ತಿದ್ದರೆ, ಸರ್ಕಾರದ ಪ್ರತಿನಿಧಿಗಳು ಉಪಯುಕ್ತ ಚರ್ಚೆಗಳನ್ನು ಕೈಗೊಳ್ಳುವ ಬದಲು ಮನೆಮನೆಗೆ ತಿರುಗಿ ಸಿಎಎ ಕಾಯ್ದೆಯ ಉಪಯುಕ್ತತೆಯ ಬಗ್ಗೆ ತಿಳಿವಳಿಕೆ ನೀಡುವಲ್ಲಿ ನಿರತರಾಗಿದ್ದಾರೆ. ಅನುರಾಗ್ ಠಾಕೂರ್ ಎಂಬ ಕೇಂದ್ರ ಮಂತ್ರಿ ತನ್ನ ಸಾರ್ವಜನಿಕ ಭಾಷಣದಲ್ಲಿ “ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ” ಎಂಬ ಘೋಷಣೆ ಕೂಗಿದರೆ, ಇನ್ನೊಬ್ಬ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ವರ್ಮಾ “ಶಾಹಿನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸುವ ಜನ ನಾಳೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಹೆಂಡತಿ, ಮಗಳನ್ನು ರೇಪ್ ಮಾಡುತ್ತಾರೆ, ನಮಗೆ ಮತ ನೀಡಿದರೆ ಅಂತವರನ್ನು ಒಂದು ಗಂಟೆಯಲ್ಲಿ ಕಿತ್ತು ಹಾಕುತ್ತೇವೆ” ಎನ್ನುತ್ತಾನೆ. ಎಲ್ಲರಿಗಿಂತ ಹೆಚ್ಚಾಗಿ ದೇಶದ ಗೃಹಮಂತ್ರಿ ಅಮಿತ್ ಶಾ “ನೀವು ಸಿಟ್ಟಿನಿಂದ ಇವಿಯಂ ಗುಂಡಿ ಒತ್ತಿದರೆ ಅದರ ಬಿಸಿ ಶಾಹಿನ್‌ಬಾಗ್‌ನಲ್ಲಿರುವರನ್ನು ತಟ್ಟಬೇಕು” ಎಂಬ ಫರ್ಮಾನು ಹೊರಡಿಸುತ್ತಾರೆ. ಶಾಹಿನ್‌ಬಾಗ್ ಎಂಬುದು ಇಂದು ದೇಶದಲ್ಲಿ ಪ್ರತಿಭಟನೆ ನಡೆಸುವವರಿಗೆ ಒಂದು ಮಾದರಿಯಾಗಿ ಬದಲಾಗುತ್ತಿರುವುದು ಬಿಜೆಪಿಗೆ ಮಗ್ಗುಲಮುಳ್ಳಾಗಿ ಕಾಡುತ್ತಿದೆ.

ಜೆಎನ್‌ಯು ಒಳಗೆ ಗೂಂಡಾಗಳು ಅಟ್ಟಹಾಸ ಮಾಡುವುದನ್ನು ಕೈಕಟ್ಟಿ ನೋಡುತ್ತಾ ಕುಳಿತ ಗೃಹಮಂತ್ರಿಗೆ, ಶಾಹಿನ್‌ಬಾಗ್‌ನಲ್ಲಿ ಕುಳಿತ ಮಹಿಳೆಯರನ್ನು ಓಡಿಸುವುದು ದೂಡ್ಡ ಮಾತೇನಲ್ಲ. ಆದರೆ ಈಗಾಗಲೇ ಬೇಕಾದಷ್ಟು ಹುಳ ಮೈಮೇಲೆ ಬಿಟ್ಟುಕೊಂಡಿರುವ ಅವರಿಗೆ ಅದ್ಯಾಕೋ ಒಳನಡುಕ ಶುರುವಾದಂತಿದೆ.

ದೆಹಲಿಯ ಗದ್ದುಗೆ ಎನ್ನುವುದು ಕೇಂದ್ರ ಸರ್ಕಾರದ ಆಡಳಿತ ಪಕ್ಷಕ್ಕೆ ಸೇರಿದರೆ ಅದರ ಸ್ವರೂಪವೇ ಬೇರೆ. ಆದರೆ ಬೇರೆ ಪಕ್ಷಕ್ಕೆ ಸೇರಿದ್ದರೆ ಅದೊಂದು ದೊಡ್ಡ ಪ್ರಮಾಣದ ಮಹಾನಗರ ಪಾಲಿಕೆಗಿಂತ ಭಿನ್ನವೇನಲ್ಲ. ಆದರೆ ದೇಶದ ರಾಜಧಾನಿಯನ್ನೇ ಕೈಯಲ್ಲಿಟ್ಟುಕೊಳ್ಳಲು ಆಗದವರು ಎಂಬ ಹಣೆಪಟ್ಟಿ ಬಿಜೆಪಿಗೆ ದೊಡ್ಡದಾಗಿ ಕಾಡುತ್ತಿದೆ.

ಬಿಜೆಪಿ, ಕಾಂಗ್ರೆಸ್‌ಗೆ ಮುಖಗಳಿಲ್ಲ…

ದೇಶಕ್ಕೆ ನರೇಂದ್ರ ಮೋದಿ, ದೆಹಲಿಗೆ ಕೇಜ್ರಿವಾಲ್ ಎಂದು ಹಲವು ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲೋಕಸಭೆಯ ಚುನಾವಣೆಯ ವೇಳೆಯಲ್ಲಿ ಹೇಗೆ ಮೋದಿಗೆ ಎದುರಾಳಿಗಳಿರಲಿಲ್ಲವೋ ಹಾಗೆ ಈಗ ದೆಹಲಿಯಲ್ಲಿ ಕೇಜ್ರಿವಾಲ್‌ಗೆ ಎದುರಾಳಿಗಳಿಲ್ಲ.. ಇದುವರೆಗೂ ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲಿ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.

ಪ್ರತಿದಿನ ಅರವಿಂದ್ ಕೇಜ್ರಿವಾಲ್ ಮೇಲೆ ಟೀಕೆ ಮಾಡುತ್ತಿರುವ ಬಿಜೆಪಿಗೆ ಕೇಜ್ರಿವಾಲ್ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ, ಅವರೊಡನೆ ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ. ಆದರೆ ಆ ರೀತಿಯ ಸಮರ್ಥ ಅಭ್ಯರ್ಥಿ ಇದ್ದರೆ ತಾನೇ ಚರ್ಚೆಯ ವಿಷಯ…?

ಕೊನೆಯದಾಗಿ…

ದಿಲ್ಲಿಯಲ್ಲಿ ಮೇಲು ಮತ್ತು ಮಧ್ಯಮ ವರ್ಗದವರು ಕೇಜ್ರಿವಾಲ್ ಬಗ್ಗೆ ಭ್ರಮನಿರಸನಗೊಂಡಿರಬಹುದು. ಆದರೆ, ಅವರು ಕೆಳಮಧ್ಯಮ ಮತ್ತು ಬಡಜನರು ಮತ್ತು ಆ ನಡುವೆ ಬದುಕುವ ಜನರ ಕಣ್ಮಣಿಯಾಗಿಯೇ ಉಳಿದಿದ್ದಾರೆ. ಬಿಜೆಪಿ ನಾಯಕರಿಗೆ ವ್ಯತಿರಿಕ್ತವಾಗಿ ಅವರು ಯಾವತ್ತೂ ಕಾಲಿಗೆ ಚಕ್ರ ಕಟ್ಟಿಕೊಂಡಿರುವ ವ್ಯಕ್ತಿ. 2017ರ ಏಪ್ರಿಲ್‌ನಲ್ಲಿ ನಡೆದ ದಿಲ್ಲಿ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಸೋತ ಬಳಿಕ ಅವರು ದಿಲ್ಲಿಯ ಮೂಲೆಮೂಲೆಯನ್ನೂ ತಿರುಗಿ ಪ್ರತಿದಿನವೆಂಬತೆ ಚಿಕ್ಕ ದೊಡ್ಡ ಸಭೆಗಳಲ್ಲಿ ಮಾತನಾಡುತ್ತಲೇ ಇದ್ದಾರೆ. ಅವರೀಗ ತನ್ನ ಮಾಂತ್ರಿಕ ಸ್ಪರ್ಶವನ್ನು ಮರಳಿ ಪಡೆದಂತಿದೆ ಎನ್ನುತ್ತಾರೆ ದೆಹಲಿಯ ಪತ್ರಕರ್ತ ಅಶುತೋಷ್..

ಹಾಗೆಯೇ ಕೇಜ್ರಿವಾಲ್ ಮೌನ ಸಹ ಅವರಿಗೆ ವರದಾನವಾಗಲಿದೆ. 2015ರ ಭಾರೀ ಗೆಲುವಿನ ನಂತರ ಕೇಜ್ರಿವಾಲ್ ಆಕ್ರಮಣಕಾರಿಯಾಗಿ ಮೋದಿಯನ್ನು ಎದುರಿಸಿದ್ದರು. ಅದನ್ನು ಮೋದಿ ನೆಗೆಟಿವಾಗಿ ಬಳಸಿದ್ದರು. ಆದರೆ, ಈ ಬಾರಿ ಅವರ ಮೌನ ಮೋದಿಗೆ ಯಾವುದೇ ಅಸ್ತ್ರ ಒದಗಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಕೇಜ್ರಿವಾಲ್ ಈ ಚುನಾವಣೆಯಲ್ಲಿ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...