ಪ್ರಪಂಚ ಆಗಾಗ್ಗೆ ಹಿಟ್ಲರ್‌ನನ್ನ ನೆನಸಿಕೊಂಡು ಬೆಚ್ಚುತ್ತಿತ್ತು. ಆತನ ಭಯಾನಕ ಯುಗವೊಂದು ಅಂತ್ಯವಾದುದಕ್ಕೆ ನಿಟ್ಟುಸಿರುಬಿಟ್ಟಿತ್ತು. ಆದರೇನು ಆತನ ಭೂತ ರಷ್ಯಾದಲ್ಲಿ ವಕ್ಕರಿಸಿದೆಯಂತಲ್ಲಾ. ರಷ್ಯಾದ ಅಧ್ಯಕ್ಷ ಪುಟಿನ್ ದೇಹವನ್ನ ಹೊಕ್ಕ ಹಿಟ್ಲರ್ ಭೂತ, ಜಗತ್ತಿನ ನಾಶದ ಬಗ್ಗೆ ಮಾತನಾಡುತ್ತಿದ್ದಾನಲ್ಲಾ. ಜಗತ್ತಿನ ಸರ್ವಾಧಿಕಾರಿಗಳ ಅಂತ್ಯವೆಲ್ಲಾ ಕೆಟ್ಟದಾಗಿ ಕೊನೆಯಾಗಿದೆ. ವಿನಾಶಕಾರಿ ಸಾಹಸಕ್ಕೆ ಕೈಹಾಕಿರುವ ಪುಟಿನ್, ತನ್ನ ಅಂತ್ಯದವರೆಗೂ ವಿರಮಿಸುವಂತೆ ಕಾಣುತ್ತಿಲ್ಲ. ಈ ನಡುವೆ, ಎಲ್ಲ ಹೊಡೆದಾಡಿ ಸತ್ತರೆ ನಮ್ಮ ಯಜಮಾನ ನೂಕಾಟದಲ್ಲೇ ಸತ್ತ ಎಂಬ ಗಾದೆಯಂತೆ ನಮ್ಮ ಮೋದಿ ಕತೆಯಾಗಿದೆಯಲ್ಲಾ. ಅಮೆರಿಕ ಅತ್ತ ರಷ್ಯ ಸಹವಾಸಕ್ಕೆ ಹೋದಿಯಾ ಜೋಕೆ ಎಂದರೆ, ಇತ್ತ ನಮ್ಮ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳು ಉಕ್ರೇನಿನಲ್ಲಿ ಸಿಕ್ಕಿಕೊಂಡು ಕರೆತರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಿರುವಾಗ, ಈಗಾಗಲೇ ತೀರಿಕೊಂಡ ಹಾವೇರಿಯ ನವೀನನ ಪಾರ್ಥಿವ ಶರೀರವನ್ನು ಮರಳಿ ತರುವ ವಿಷಯದಲ್ಲಿ ಅರವಿಂದ ಬೆಲ್ಲದ್ ಎಂಬ ಶಾಸಕ ನವೀನನ ಶವ ತರುವ ಜಾಗದಲ್ಲಿ 8 ಜನ ವಿದ್ಯಾರ್ಥಿಗಳನ್ನ ತರಬಹುದು ಎಂದುಬಿಟ್ಟಿದ್ದಾನಲ್ಲಾ. ಇದು ಇಡೀ ಬಿಜೆಪಿಯವರ ಮನಸ್ಥಿತಿಯಾದ್ದರಿಂದ ಯಾರೂ ಖಂಡಿಸಿಲ್ಲವಂತಲ್ಲಾ. ಥೂತ್ತೇರಿ.

****
ಉನ್ನತ ವ್ಯಾಸಂಗಕ್ಕೆಂದು ಉಕ್ರೇನಿಗೆ ಹೋದ ನಮ್ಮ ಹುಡುಗರು ಯುದ್ಧದ ಹೊಗೆಯಲ್ಲಿ ಸಿಕ್ಕಿಕೊಂಡು ಏದುಸಿರು ಬಿಡುತ್ತಿರುವಾಗ ಅವರನ್ನ ಭಾರತಕ್ಕೆ ಕರೆತರುವ ಕಾರ್ಯಾಚರಣೆಗೆ ಯಾವ ಹೆಸರಿಡಬೇಕೆಂಬ ಸಂಚು ಬಿಜೆಪಿಗಳ ತಲೆಯಲ್ಲಿ ಶಾನೆ ದಿನ ಸುಳಿದಾಡಿತಂತಲ್ಲಾ. ಇತರ ದೇಶಗಳು ತಮ್ಮ ದೂತಾವಾಸದ ಸಿಬ್ಬಂದಿಗಳನ್ನು ಬಳಸಿಕೊಂಡು ತಮ್ಮವರನ್ನು ಕರೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಉತ್ತರ ಭಾರತದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಬಿಜೆಪಿಗಳ ತಲೆಯಲ್ಲಿ ಮಿಂಚು ಹೊಳೆದಂತಾಗಿ ಆಪರೇಷನ್ ಗಂಗಾ ಹೊಳೆಯಿತಂತಲ್ಲಾ. ಆ ಕೂಡಲೇ ರೋಮಾಂಚನಗೊಂಡು ಆಪರೇಷನ್ ಗಂಗಾ ಮೂಲಕ ನಮ್ಮ ವಿದ್ಯಾರ್ಥಿಗಳನ್ನ ಕರೆತರುವಷ್ಟರಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ರಷ್ಯಾ ಶೆಲ್ ದಾಳಿಗೆ ಹತ್ಯೆಯಾದರು. ಮಕ್ಕಳನ್ನು ಕರೆತರುವಲ್ಲಿ ಆದ ವಿಳಂಬ, ಭಾರತದ ದೂತವಾಸದವರ ಕಣ್ಮರೆ ಇವೆಲ್ಲವನ್ನು ಗ್ರಹಿಸಿದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಕ್ಕೆ, ಜಾಲತಾಣದ ಕೀಟಗಳು ಅವರ ನೋವನ್ನೂ ಲೆಕ್ಕಿಸದೆ ಕುಟುಕಿದವಂತಲ್ಲಾ. ಆಪರೇಷನ್ ಗಂಗಾ ಕಾರ್ಯಾಚರಣೆಯಿನ್ನೂ ಪೂರ್ಣಗೊಂಡಿಲ್ಲ, ಆಗಲೇ ನಮ್ಮ ಪ್ರಧಾನಿಗಳು ನಮ್ಮ ಕಾರ್ಯಾಚರಣೆಯಿಂದ ಭಾರತದ ವರ್ಚಸ್ಸು ಉತ್ತುಂಗದಲ್ಲಿ ಬೆಳಗುತ್ತಿದೆ ಎಂದಿದ್ದಾರಲ್ಲಾ. ಅಂತೂ ಕಳೆಗುಂದಿದ್ದ ಭಾರತದ ವರ್ಚಸ್ಸು ಏರಬೇಕಾದರೆ ಯುದ್ದ ಸಂಭವಿಸಬೇಕಾಯ್ತಂತಲ್ಲಾ. ಥೂ ಥೂ ಥೂತ್ತೇರಿ.
****

ಅರವಿಂದ ಬೆಲ್ಲದ್
ಯಾವ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಹೇಗೆ ನಡೆದುಕೊಳ್ಳಬೇಕೆಂಬುದೆ ಈ ಬಿಜೆಪಿಗಳಿಗೆ ಗೊತ್ತಿಲ್ಲವಲ್ಲ ಎಂಬುದು ಭಾರತದ ಸಾಮಾನ್ಯ ಪ್ರಜೆಯ ಅಳಲಾಗಿದೆಯಂತಲ್ಲಾ. ಯುದ್ಧ ಪೀಡಿತ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಕರೆತಂದ ಮಾತ್ರಕ್ಕೆ ಈ ದೇಶದ ವರ್ಚಸ್ಸು ಜಗತ್ತಿನಲ್ಲಿ ಬೆಳಗಬೇಕಾದರೆ ಅದಿನ್ನೆಂತಹ ಜಗತ್ತು ಇದಿನ್ನೆಂತಹ ದೇಶ ಎನ್ನುವಂತಹ ಕಿಡಿಗೇಡಿ ಮಾತುಗಳು ಬಿತ್ತರವಾಗುತ್ತಿವೆಯಂತಲ್ಲಾ. ಈ ಸಮಯದಲ್ಲಿ ಹಿಂದಿರುಗಿ ನೋಡಿದರೆ ನಮ್ಮನ್ನಾಳುವವರ ಬೇಜವಾಬ್ದಾರಿತನಗಳು ಸಾಲುಗಟ್ಟಿವೆಯಲ್ಲಾ. ಮುಖ್ಯವಾಗಿ ಕೊರೊನಾ ಭಾರತಕ್ಕೆ ಕಾಲಿಟ್ಟಾಗ ಆ ಬಗ್ಗೆ ಎಚ್ಚರವಹಿಸದ ನಾಯಕರು ಅಮೆರಿಕದ ಅಧ್ಯಕ್ಷನ ಜೊತೆ ಸಾರ್ವಜನಿಕ ಸಭೆ ಮಾಡಿ, ಮೆರವಣಿಗೆ ಮಾಡಿ, ಆತನನ್ನು ತಬ್ಬಿಕೊಂಡು ಕಳಿಸಿಕೊಡುವಷ್ಟರಲ್ಲಿ ಕೊರೊನಾ ಮಾರಿ ಭಾರತಾಂಬೆಯ ಸೆರಗಿನಲ್ಲಿ ಆಶ್ರಯ ಪಡೆದಾಗಿತ್ತಲ್ಲಾ. ಕೊರೊನಾ ಅನಾಹುತವನ್ನ ತಬ್ಲಿಗಿ ಮುಸ್ಲಿಮರ ಮೇಲೆ ಎತ್ತಿಹಾಕಿದ ಮತಾಂಧರು ಏಕದಂ ಲಾಕ್‌ಡೌನ್ ಮಾಡಿದ ಪರಿಣಾಮ ಸಾವಿರಾರು ಭಾರತಮಾತೆಯ ಪುತ್ರರು ಅಸುನೀಗಿದರು. ಇತಿಹಾಸ ತೋರಿಸಿದ ಭೀಕರತೆಯ ಬಗ್ಗೆ ಎಚ್ಚರಿಕೆಯಿದ್ದಿದ್ದರೆ, ಉಕ್ರೇನಿನಲ್ಲಿ ಸಿಕ್ಕಿಕೊಂಡ ವಿದ್ಯಾರ್ಥಿಗಳನ್ನು ತಿಂಗಳ ಮೊದಲೇ ಕರಕೊಂಡು ಬಂದಿದ್ದರೆ, ಐದುನೂರು ಜನ ಹುತಾತ್ಮ ರೈತರಿಂದ ಮಂಕಾಗಿರುವ ಭಾರತದ ವರ್ಚಸ್ಸು ಸುಧಾರಿಸುತ್ತಿಲ್ಲ. ಥೂತ್ತೇರಿ.
****
ಶಿವಮೊಗ್ಗದ ಮುಸ್ಲಿಮರು ಮತ್ತೊಮ್ಮೆ ಈಶ್ವರಪ್ಪನನ್ನು ಗೆಲ್ಲಿಸಿ ಕಳುಹಿಸುವ ಪಣತೊಟ್ಟಿದ್ದಾರಂತಲ್ಲಾ. ಹಾಗೆ ನೋಡಿದರೆ ಈಶ್ವರಪ್ಪ ಶಾಸಕನಾಗಿದ್ದೇ ಹತ್ಯೆಗೊಂಡವರ ಶವಯಾತ್ರೆಗಳನ್ನು ಮಾಡುವ ಮುಖಾಂತರ. ಪ್ರತಿವರ್ಷ ಗಣಪತಿ ಮೆರವಣಿಗೆ ಸಮಯದಲ್ಲಿ ಅಶ್ಲೀಲ ಘೋಷಣೆಗಳನ್ನು ಕೂಗುವುದು; ಇದು ಕೋಮುಘರ್ಷಣೆಗಳಿಗೆ ಕಾರಣವಾಗಿ ಹತ್ಯೆಗಳು ನಡೆಯುವುದು; ಕೂಡಲೇ ಈಶ್ವರಪ್ಪ ಓಡಿಬಂದು ಹತ್ಯೆಗೊಂಡವನ ಮೆರವಣಿಗೆ ಮಾಡಿ, ಚಿತಾಗಾರ ತಲುಪಿಸಿ ಬಂದು, ಭೀಕರ ಭಾಷಣ ಮಾಡಿ ಚಿತಾಗಾರದ ಕಾವು ಆರದಂತೆ ನೋಡಿಕೊಂಡು ಚುನಾವಣೆಗೆ ಹೋಗುವುದು; ಹೀಗೆ ಸುಮಾರು ಹತ್ಯೆ ನಡೆದ ನಂತರ ಈಶ್ವರಪ್ಪ ಶಾಸಕ ಮಂತ್ರಿ ಎಲ್ಲವೂ ಆದರು. ಈಗ ಮನೆಗೆ ಹೋಗಲಿದ್ದ ಈಶ್ವರಪ್ಪನನ್ನ ಮತ್ತಷ್ಟು ಬಲಿಷ್ಠಗೊಳಿಸುವ ತೀರ್ಮಾನ ತೆಗೆದುಕೊಂಡಿರುವಂತೆ ಕಾಣುತ್ತಿದೆಯಲ್ಲ; ಈಗ ನಡೆದಿರುವ ಕೊಲೆಯ ಹಿನ್ನೆಲೆಯಲ್ಲಿ ಎರಡೂ ಕಡೆಯ ಧರ್ಮಾಂಧರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈಶ್ವರಪ್ಪ ಮತ್ತೊಂದು ಚಾನ್ಸ್ ಹೊಡಿತಾರೆ ಅಂತಾ ಇದಾರಲ್ಲ. ಥೂತ್ತೇರಿ.

ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು


