ಸಂತೆಯ ಗದ್ದಲದಲ್ಲಿ ಗಂಟು ಕಳ್ಳರು ತಾವು ಮಾಡುವ ಕೆಲಸವನ್ನ ನಿರಾತಂಕವಾಗಿ ಮಾಡಿ ಮುಗಿಸಿದಂತೆ ವಿಧಾನಸಭೆಯಲ್ಲಿ ಧರಣಿ, ಗೌಜು ಗದ್ದಲ ನಡೆಯುತ್ತಿದ್ದಾಗಲೇ, ಇತ್ತ ಶಾಸಕರು ಮಂತ್ರಿಗಳು ಮತ್ತು ಮುಖ್ಯಮಂತ್ರಿಯ ಸಂಬಳ ಹೆಚ್ಚಿಸುವ ಬಿಲ್ಲನ್ನು ಸದ್ದಿಲ್ಲದೆ ಜಾರಿಮಾಡಿಕೊಂಡರಂತಲ್ಲಾ. ಸಾಮಾನ್ಯವಾಗಿ ಜೇಬುಗಳ್ಳರು ಮಾತ್ರ ಇಂತಹ ಕೆಲಸ ಮಾಡುತ್ತಾರೆಂದು ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಗಲುಗಳ್ಳರು ತಮ್ಮ ತುಟ್ಟಿಭತ್ಯೆಗಳನ್ನು ಏರಿಸಿಕೊಳ್ಳುವುದನ್ನು ಅನಾದಿಕಾಲದಿಂದ ನೋಡುತ್ತ ಬಂದಿದ್ದಾರೆ ಸಾಮಾನ್ಯ ಜನ. ಈಗಲೂ ಕೂಡ ಕನಿಕರದ ಒಪ್ಪಿಗೆ ಕೊಡುತ್ತಿದ್ದರು. ಆದರದು ಚರ್ಚೆಯಾಗಬೇಕಿತ್ತು. ಶಾಸಕರು ಹಾಲಿ ಪಡೆಯುತ್ತಿರುವ ಸಂಬಳ ಸಾಲುತ್ತಿಲ್ಲ, ಅಜ್ಜಿ ಹೊಸೆದ ದಾರವೆಲ್ಲಾ ಅಜ್ಜನ ಉಡದಾರಕ್ಕೆ ಸಾಲುತ್ತಿಲ್ಲ ಎಂಬಂತೆ, ಸರಕಾರ ಈಗ ಕೊಡುತ್ತಿರುವುದೆಲ್ಲಾ ಹಿಂದಿನ ಚುನಾವಣೆಗಾಗಿ ಮಾಡಿಕೊಂಡ ಸಾಲದ ಬಡ್ಡಿಗೇ ಸಾಲುತ್ತಿಲ್ಲ ಎಂಬುದು ಹಲವು ಶಾಸಕರ ಸುಳ್ಳು ಆಳಲಾಗಿತ್ತು. ವಾಸ್ತವವಾಗಿ ಈಗ ಸರಕಾರದ ಅಭಿವೃದ್ಧಿ ಕೆಲಸಗಳಲ್ಲಿ ನಲವತ್ತು ಪರಸೆಂಟು ಶಾಸಕರ ಪಟಾಲಂಗೆ ಸೇರುತ್ತಿದೆಯಂತೆ, ಇನ್ನ ರೆವಿನ್ಯೂ ಇಲಾಖೆ, ಅಬಕಾರಿ ಇಲಾಖೆ, ಕಾಡಿನ ಇಲಾಖೆ, ಗಣಿಗಾರಿಕೆ ಬಾಬ್ತು ಮತ್ತು ಪೊಲೀಸ್ ಠಾಣೆಗಳು ಒಪ್ಪಿಸುವ ಕಪ್ಪ ಕಾಣಿಕೆಯನ್ನ ಬರೆದುಕೊಂಡು ಟೋಟ್ಲು ಮಾಡಿದರೆ, ಈಗ ಸರಕಾರ ಗುಪ್ತವಾಗಿ ಮಂಜೂರು ಮಾಡಿಕೊಂಡ ಸಂಬಳದ ಮೊತ್ತ ಜುಜುಬಿ ಚಿಲ್ಲರೆ ಕಾಸಂತಲ್ಲಾ ಥೂತ್ತೇರಿ.
*******
ಈ ಶಾಸಕ ಮಂತ್ರಿ ಮಹೋದಯರ ಸವಲತ್ತಿನ ಹಣವನ್ನು ಈ ಸಮಯದಲ್ಲಿ ಹೆಚ್ಚು ಮಾಡಿಕೊಂಡದ್ದು ಜೀವಂತ ಮಿಕಗಳನ್ನ ಹರಿದು ತಿನ್ನುವಂತಹ ಹೈನಾಗಳ ಕೃತ್ಯವಾಗಿದೆಯಂತಲ್ಲಾ. ಸದರಿ ಸರಕಾರ ಪ್ರವಾಹದಿಂದ ಬೀದಿಗೆ ಬಿದ್ದ ಕುಟುಂಬಗಳ ಯೋಗಕ್ಷೇಮ ನೋಡಲಿಲ್ಲ. ಕೊರೊನಾದಿಂದ ನಿರ್ಗತಿಕರಾದವರಿಗೆ ಏನು ಮಾಡಿದರೆಂಬುದು ತಿಳಿಯಲಿಲ್ಲ. ಕೊರೊನಾ ಸಾವಿಗೆ ತುತ್ತಾಗಿ ಸತ್ತವರ ಮಕ್ಕಳು ಅನಾಥರಾಗಿ, ಆ ಮಕ್ಕಳು ಯಾವ ಸವಲತ್ತಿಗೆ ತುತ್ತಾದರೆಂಬ ಮಾಹಿತಿ ಯಾರಿಗೂ ಇಲ್ಲ. ಈ ನಡುವೆ ಸರಕಾರದ ಮಾಸಾಶನ ಕಾಯುತ್ತ ಕುಳಿತವರ ಕಣ್ಣು ಒದ್ದೆಯಾಗಿವೆ. ಅತಿಥಿ ಉಪನ್ಯಾಸಕರು, ಪ್ರವಾಹಕ್ಕೆ ಸಿಕ್ಕವರು ನಡುಗೋಡೆಯ ಮೇಲೆ ನಿಂತಂತೆ ದಿಕ್ಕುಕಾಣದಂತಹ ಕಣ್ಣುಗಳಿಂದ ಸರಕಾರದ ಕಡೆ ನೋಡುತ್ತಿದ್ದಾರೆ. ಇನ್ನ ಮೂರುದಶಕದ ಹಿಂದೆ ಗ್ರಾಮಪಂಚಾಯ್ತಿ ಗ್ರಂಥಾಲಯಗಳಿಗೆ ಗೌರವಧನದಿಂದ ನೇಮಕವಾದ ಗ್ರಂಥಾಲಯ ಮೇಲ್ವಿಚಾರಕರು ಈಗ ಪಿಂಚಣಿಯಿಲ್ಲದೆ ನಿವೃತ್ತರಾಗುತ್ತಿದ್ದಾರೆ. ಕಡೆ ತಿಂಗಳ ಗೌರವಧನವಾದ ಹನ್ನೆರಡು ಸಾವಿರ ತೆಗೆದುಕೊಂಡು ಮುಂದೆ ಅವರ ಹೆಂಡತಿ ಮಕ್ಕಳ ಕತೆಯೇನು ಎಂದು ನೆನಸಿಕೊಂಡರೆ ಭಯವಾಗುತ್ತದೆ. ಪ್ರತಿ ಕೆಲಸಕ್ಕೂ ಫೈನಾನ್ಸ್ ಡಿಪಾರ್ಟ್‌ಮೆಂಟಿನ ಒಪ್ಪಿಗೆ ಬೇಕಾಗುತ್ತದೆಂಬ ತಕರಾರು ತೆಗೆವ ಈ ಜನಪ್ರತಿನಿಧಿಗಳು ಇಂತಹ ಭೀಕರ ಸ್ಥಿತಿಯಲ್ಲಿಯೂ ತಮ್ಮ ಸವಲತ್ತುಗಳನ್ನು ಏರಿಸಿಕೊಂಡು ನಿಜಕ್ಕೂ ಸರಕಾರದ ಖಜಾನೆ ಕಳ್ಳರಾದರಂತಲ್ಲಾ ಥೂತ್ತೇರಿ.
********
ಹಿಜಾಬ್ ಬಟ್ಟೆಯ ವಿಷಯ ಕರ್ನಾಟಕದ ತುಂಬ ಹರಡಿದ ಸನ್ನಿವೇಶವನ್ನ ಬಳಸಿಕೊಂಡು ಕೇಸರಿ ವಸ್ತ್ರವನ್ನ ಕರ್ನಾಟಕದ ತುಂಬ ಹಾಸಲು ಕೊರಟ ಕೇಸರಿ ಕಂದಗಳು ಧರ್ಮಸ್ಥಳಕ್ಕೆ ಹೊರಟ ಶಿವಭಕ್ತಾದಿಗಳನ್ನು ಹಿಡಿದು ಕೇಸರಿ ವಸ್ತ್ರಕೊಟ್ಟು, ಜೊತೆಗೆ ಮಜ್ಜಿಗೆ ಪಾನಕ ಕೊಟ್ಟು ಕಳಿಸುತ್ತಿದ್ದಾರಂತಲ್ಲಾ. ಈ ಕಂದಗಳ ಈ ಶ್ರಮ ನೋಡಿದ ಕಾಂಗೈಗಳು ಕಂಗಾಲಾಗಿ ತಾವೇನು ಹಂಚಬೇಕೆಂಬುದು ಹೊಳೆಯದೆ, ಮೇಕೆದಾಟಿನ ಕಡೆ ಹೊರಟರಂತಲ್ಲಾ. ಅತ್ತ ಕೇಸರಿ ವಸ್ತ್ರ ವಿತರಣೆ ಇತ್ತ ಮೇಕೆದಾಟಿನ ಪಾದಯಾತ್ರೆ ನೋಡಿದ ಕುಮಾರಣ್ಣನವರು ಇವರಿಬ್ಬರದೂ ಅಧಿಕಾರ ದಾಹದ ನಡವಳಿಕೆ ಎಂದು ನಿರ್ಲಿಪ್ತವಾಗಿ ಹೇಳಿ, ಈಗೇನು ಮಾಡಬೇಕೆಂಬ ಗೊಂದಲಕ್ಕೆ ಬಿದ್ದರಂತಲ್ಲಾ. ಈ ನಡುವೆ ಕರ್ನಾಟಕದ ಕೆಲ ಬುದ್ಧಿಜೀವಿಗಳು, ನೋಡಿ ಎಡೂರಪ್ಪನವರು ಸಂಘಪರಿವಾರದಿಂದ ಬಂದವರು, ಆದರೂ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡುವಾಗ ಹಸಿರು ಶಾಲು ಹಾಕಿದ್ದರು, ಅದೇ ಬಸವರಾಜ ಬೊಮ್ಮಾಯಿ ಎಂಬ ವ್ಯಕ್ತಿ, ರಾಯಿಸ್ಟ್ ಬೊಮ್ಮಾಯಿ ಎಂದು ಹೆಸರಾಗಿದ್ದ ಎಸ್ಸಾರ್ ಬೊಮ್ಮಾಯಿ ಮಗ, ಈತನಿಗೂ ಕೇಸರಿ ಶಾಲಿಗೂ ಯಾವ ಸಂಬಂಧವೂ ಇಲ್ಲ, ಆದರೂ ಕೇಸರಿ ಶಾಲನ್ನ ಹೊದ್ದು ಕುಂಟುತ್ತ ನಡೆದದ್ದು ನಿಜವೊ ನಟನೆಯೋ ಎಂಬುದೇ ಗೊತ್ತಾಗುತ್ತಿಲ್ಲ, ಒಟ್ಟಿನಲ್ಲಿ ಇವರೊಬ್ಬ ಸೂತ್ರದ ಗೊಂಬೆ ಎಂದರಂತಲ್ಲಾ ಥೂತ್ತೇರಿ.
*******
ಶ್ರೀಕೃಷ್ಣರಾಜೇಂದ್ರ ಒಡೆಯರು ಗಾಂಧೀಜಿಯಿಂದ ರಾಜರ್ಷಿ ಎಂಬ ಹೆಸರು ಪಡೆದವರು. ಕಲೆ, ಸಾಹಿತ್ಯ, ಸಂಗೀತ ಮತ್ತು ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ಇಂತಹ ಮಹನೀಯರ ಮಹತ್ವದ ತೀರ್ಮಾನದಿಂದ ರಚನೆಗೊಂಡು ಮುನ್ನಡೆದ ಕನ್ನಡ ಸಾಹಿತ್ಯ ಪರಿಷತ್ತಿಗೆ ಗಂಡಾಂತರ ಬಂದಿದೆಯಂತಲ್ಲಾ. ಕನ್ನಡ ಸಾಹಿತ್ಯ ಪರಿಷತ್‌ಗೆ ಆಯ್ಕೆಯಾಗಿ ಬಂದ ಜೋಷಿ ಕನ್ನಡ ಸಾಹಿತ್ಯ ಪರಿಷತ್‌ಅನ್ನು ಬ್ರಾಹ್ಮಣೀಕರಿಸಲು ಮನಸ್ಸು ಮಾಡಿದ ದಿನದಿಂದಲೇ ಎಲ್ಲ ಕಾಯಿಲೆಗಳು ಪ್ರಾರಂಭವಾಗಿದೆಯಂತಲ್ಲಾ. ಕಳೆದ ಶತಮಾನದಿಂದ ನಿರಾತಂಕವಾಗಿ ತನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತ ಬಂದ ಸಾಹಿತ್ಯ ಪರಿಷತ್‌ಅನ್ನು ತನ್ನ ಪುರೋಹಿತಶಾಹಿ ಚಿಂತನೆಗಳಿಂದ ಬದಲಾಯಿಸಲು ಹೊರಟ ಜೋಷಿ ತಾನು ಗುರುಗೋವಿಂದರ ಸಂಬಂಧಿ ಎಂದು ಹೇಳಿಕೊಂಡಿದ್ದಾರೆ, ಗುರುಗೋವಿಂದರನ್ನ ಅವರ ಶಿಷ್ಯ ಶಿಶುನಾಳ ಶರೀಫರು “ವಜ್ರದ ಹರಳು” ಎಂದು ಕರೆದರು. ಅಂತಹ ವಜ್ರದ ಹರಳಿನ ವಂಶದ ಈತ ಮರಳಿನ ಕಣವಾಗುವ ಕಡೆ ನಡೆಯುವ ಮೊದಲು, ಕನ್ನಡ ಸಾಹಿತ್ಯ ಪರಂಪರೆಯ ನಡೆಯನ್ನ ಅವಲೋಕಿಸಬೇಕಿದೆಯಂತಲ್ಲಾ. ಅದಕ್ಕಿಂತ ಮೊದಲು ತಲೆಯಲ್ಲಿ ತುಂಬಿಕೊಂಡಿರುವ ಅಸಂಬದ್ಧ ಸಂಗತಿಗಳನ್ನು ಆಚೆಹಾಕಿ, ಮೈಸೂರು ಸ್ಯಾಂಡಲ್ ಸೋಪಿನಿಂದ ತೊಳೆದುಕೊಂಡು ಹೊಸದಾಗಿ ಯೋಚಿಸಬೇಕಿದೆಯಂತಲ್ಲಾ ಥೂತ್ತೇರಿ
ಇದನ್ನೂ ಓದಿ: ಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!