ನಮ್ಮ ನೆಲ ಮೂಲದ ಪ್ರತಿಭೆ ಸಿದ್ದಗಂಗಯ್ಯ ಕಂಬಾಳು ನಿರ್ಗಮಿಸಿದ್ದಾರೆ. ನಿಸರ್ಗಪ್ರಿಯ ಎಂಬ ಹೆಸರಿನಿಂದ ಬರೆಯುತ್ತಿದ್ದ ಕಂಬಾಳು ತಮ್ಮ ವಿಶಿಷ್ಟ ಪ್ರತಿಭೆಯಿಂದ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದರು. ಅವರು ಸಾಹಿತ್ಯ ಪ್ರಕಾರದ ಎಲ್ಲಾ ಕ್ಷೇತ್ರಗಳಲ್ಲೂ ಕೃಷಿ ಮಾಡಿದ್ದರು. ಅವರ ಕೃಷಿಯ ಹೂರಣವೇ ನೆಲ ಮೂಲವಾಗಿದ್ದರಿಂದ ನಿಸರ್ಗಪ್ರಿಯ ಎಂಬ ಗೌಪ್ಯನಾಮಕ್ಕೆ ಗೌರವ ತಂದಿದ್ದರು. ಕ್ರಮೇಣ ಈ ನಿಸರ್ಗಪ್ರಿಯ ಯಾರು ಅಲ್ಲ ನಮ್ಮ ನಡುವೆ ಬಡಬೇಸಾಯಗಾರನಂತೆ ಕಾಣುವ ಸಿದ್ದಗಂಗಯ್ಯ ಕಂಬಾಳು ಎಂಬುದು ನಮ್ಮೆಲ್ಲರ ಅರಿವಿಗೆ ಬಂತು. ಅದೇ ಹೆಸರಿನಲ್ಲವರು ’ಮೈಥಲಿ’ ಎಂಬ ರಾಮಾಯಣ ಧಾರಾವಾಹಿಯನ್ನು ಸುಧಾ ವಾರಪತ್ರಿಕೆಯಲ್ಲಿ ಆರಂಭಿಸಿದರು. ಆಗ ಸೀತೆಯ ಬಗ್ಗೆ ಕನಿಕರಗೊಂಡಿದ್ದ ಮನಸ್ಸುಗಳೆಲ್ಲಾ ದಂಗುಬಡಿದು ಹೋದವು. ನಮ್ಮ ಮಹಿಳಾ ಹೋರಾಟಗಾರ್ತಿಯರಿಗೆ ಸೀತೆಯ ಅಂತರಾಳದ ನೋವುಗಳು ಅರಿವಿಗೆ ಬಂದು ಯಾರೀ ಸಿದ್ದಗಂಗಯ್ಯ ಎನ್ನುವಂತಾಯ್ತು. ಅದಾದ ಮೇಲೆ ಸಿದ್ದಗಂಗಯ್ಯನವರ ಮೇಲೆ ಪೇಜಾವರ ಶ್ರೀಗಳ ಕಣ್ಣು ಬಿತ್ತು.
ಹಿಂದೂ ಧರ್ಮದ ಗರ್ಭಗುಡಿಯೊಳಗಿದ್ದ ಪೇಜಾವರಶ್ರೀಗಳು ತಾವು ಪೂಜಿಸುವ ಯಾವುದೇ ದೇವರ ಬಗ್ಗೆ ಸಣ್ಣ ಅಪಸ್ವರ ಟೀಕೆ ಬಂದರೂ ಅವರನ್ನು ವಿಚಾರಣೆಗೊಳಪಡಿಸುವ ಹಕ್ಕನ್ನು ತಮಗೆ ತಾವೇ ಆರೋಪಿಸಿಕೊಂಡಿದ್ದರು. ಆದ್ದರಿಂದ ಸಿದ್ದಗಂಗಯ್ಯನವರಿಗೆ ಪೇಜಾವರಶ್ರೀಗಳಿಂದ ಬುಲಾವ್ ಬಂತು. ಧರ್ಮನಿಂದನೆಯ ವಿಚಾರಣೆ ನಡೆಯುವ ಸ್ಥಳ ಯಾವುದೆಂದು ವಿಚಾರಿಸಿದರು. ಅದು ನಡೆಯುವುದು ವಿದ್ಯಾಪೀಠದಲ್ಲೆಂದು ತಿಳಿದು ಬಂತು. ಶ್ರೀನಿವಾಸನಗರದ ಬಸ್‌ಸ್ಟಾಪಿನಲ್ಲಿಳಿದು ಅಡ್ರೆಸ್ ಕೇಳಿಕೊಂಡು ವಿದ್ಯಾಪೀಠ ತಲುಪಿದರು. ಪೀಠದ ವರಾಂಡದಲ್ಲಿ ಅಡ್ಡಾಡುತ್ತಿದ್ದ ಮಾಣಿಗಳನ್ನು ವಿಚಾರಿಸಲಾಗಿ ಅವರು ಪೇಜಾವರ ಶ್ರೀ ಬಳಿ ಕರೆದುಕೊಂಡು ಹೋದರು. ಈಗಾಗಲೇ ಪುರುಷೋತ್ತಮರನ್ನ ಹೀಯಾಳಿಸಿದರು ಎಂಬ ಆರೋಪದ ಕಾರಣವಾಗಿ ಜೀವ ಬೆದರಿಕೆಗೆ ತುತ್ತಾಗಿರುವ ಭಗವಾನರ ಇನ್ನೊಂದು ಅವತಾರದಂತೆ ಕಾಣಬೇಕಿದ್ದ ಸಿದ್ದಗಂಗಯ್ಯ ತಪ್ಪಿಸಿಕೊಂಡ ಹಸು ಹುಡುಕುತ್ತ ಬಂದ ಬಡವನಂತೆ ಕಾಣುತ್ತಿದ್ದುದು ಮಠೋಪಜೀವಿಗಳಿಗೆ ಅಚ್ಚರಿಯುಂಟುಮಾಡಿತ್ತು. ಸಿದ್ದಗಂಗಯ್ಯನವರು ಪೇಜಾವರಶ್ರೀಗಳ ಪೀಠದೆದುರು ನಿಂತು ತಮ್ಮನ್ನು ಕರೆಸಿದ ಕಾರಣ ಕೇಳಿದರು.
“ನೋಡಿ ಸ್ವಾಮಿ ನಮ್ಮ ಆರಾಧ್ಯ ದೈವಗಳಾದ ರಾಮ ಕೃಷ್ಣರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ, ಇದು ಕೂಡದು” ಎಂದರು.
“ನೋಡಿ ಸ್ವಾಮಿ ಕೃಷ್ಣ ನಮ್ಮವನು. ರಾಮ ಕ್ಷತ್ರಿಯ, ನೀವು ಬ್ರಾಹ್ಮಣರು, ನಿಮಗೂ ಅವರಿಗೂ ಏನು ಸಂಬಂಧ” ಎಂದರು. ಪೇಜಾವರಶ್ರೀ ಈ ಅನಿರೀಕ್ಷಿತ ಪ್ರಶ್ನೆಯಿಂದ ಗಲಿಬಿಲಿಯಾದರು.
“ಹಾಗಲ್ಲ ಅವರು ಸರ್ವಜನಾಂಗಕ್ಕೂ ಪೂಜನೀಯ ದೇವರುಗಳು. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಬರೆಯುವುದು ನಾವು ಸಹಿಸುವುದಿಲ್ಲ” ಎಂದರು.
“ಅಲ್ಲಾ ಸ್ವಾಮಿ ನಾನಂದ ಮಾತ ಪುನಃ ಅನ್ನಬೇಕಾಗುತ್ತೆ. ಕೃಷ್ಣ ಗೊಲ್ಲರವನು, ಅಂದ್ರೆ ನಮ್ಮವನು. ರಾಮ ಕ್ಷತ್ರಿಯ. ರಾಜನ ತಪ್ಪನ್ನ ಪ್ರಶ್ನೆ ಮಾಡೋ ಅಂತ ಹಕ್ಕನ್ನ ರಾಮನೆ ಕೊಟ್ಟಿದ್ದ. ಇನ್ನ ರಾಮಾಂಜನೇಯರಿಗೆ ಯುದ್ಧ ಆದಾಗ ರಾಮ ಎಷ್ಟೇ ಆಗಲಿ ನೀವು ಕಪಿಗಳು ಅಂತ ಮೂದಲಿಸಿದ. ಆಗ ಆಂಜನೇಯ ಆ ಕಪಿಗಳೇ ಅಲ್ಲವ ಯುದ್ಧ ಮಾಡಿ ಸೀತೆಯನ್ನು ತಂದು ನಿಮಗೊಪ್ಪಿಸಿದ್ದು ಪ್ರಭು ಅಂದ. ರಾಮ ಸತ್ಯಸಂಗತಿಗಳ ಒಪ್ಪಿಗತಿದ್ದ. ಅದಕೆ ಅಲವ ಅವನು ಪುರುಷೋತ್ತಮನಾಗಿದ್ದು. ಇವ್ಲೆಲ್ಲ ನಿಮಗೆ ಗೊತ್ತಿರಬೇಕು” ಅಂದರು. ಪೇಜಾವರ ವಿಚಾರಣಾ ಸಭೆ ದಂಗುಬಡಿದುಹೋಯ್ತು. ಕೃಷ್ಣ ನಮ್ಮವನು ಎಂದ ಈತ ಗೊಲ್ಲರವನಿರಬೇಕೆಂದು ಜಗದ್ಗುರುಗಳು ಗಲಿಬಿಲಿಗೊಳಗಾದರು.
“ನೋಡಿ ಹೀಗೆಲ್ಲ ಮಾತನಾಡುವುದು ಬೇಡ. ನೀವು ನಮ್ಮ ದೈವಗಳ ಬಗ್ಗೆ ಹಗುರವಾಗಿ ವಾದಿಸುವುದು ಬೇಡ, ಈಗ ಹೋಗಿ” ಎಂದುಬಿಟ್ಟರು. ಪೇಜಾವರರು ಹಾಗನ್ನಬೇಕಾದರೆ, ಈ ಮನುಷ್ಯ ಮತ್ತೆ ಕೆದಕುವಂತೆ ಕೃಷ್ಣ ರಾಮರ ಮತ್ತು ತಮ್ಮ ಸಂಬಂಧದ ವಿಷಯ ಹೇಳುವಂತೆ ಸವಾಲಾಕಲು ತಯಾರಾಗುವಂತೆ ಕಂಡರು. ಆದ್ದರಿಂದ ಬೇಗ ಸಾಗಹಾಕಲು ಪೇಜಾವರರು ಹವಣಿಸಿದರು. ತಾವಾಡಿದ ಮಾತು ಪೇಜಾವರರಿಗೆ ತಾಕಿದೆ ಇಷ್ಟು ಸಾಕು ಎಂದು ಗ್ರಹಿಸಿದ ಕಂಬಾಳರು ಅಲ್ಲಿಂದ ನಿರ್ಗಮಿಸಿದರು.
ನಾನು ಗಮನಿಸಿದಂತೆ ಕಂಬಾಳರು ಈ ಪ್ರಸಂಗವನ್ನು ಎಲ್ಲೂ ಹೇಳಿಕೊಳ್ಳಲಿಲ್ಲ. ಆ ರೂಪದ ಪ್ರಚಾರವೂ ಅವರಿಗೆ ಬೇಕಿರಲಿಲ್ಲ. ಆ ದಿನ ನಾಗತಿಹಳ್ಳಿ ಚಂದ್ರಶೇಖರನ ಆಫೀಸಿನಲ್ಲಿ ಕುಳಿತು ಅವಿದ್ಯಾವಂತರ ಅವಿವೇಕವನ್ನು ಹೇಳಿದಂತೆ ಸಹಜವಾಗಿ ಹೇಳಿದ್ದರು. ಅವತ್ತು ನಾಗತಿಹಳ್ಳಿ ಚಂದ್ರಶೇಖರನ ಕೋರಿಕೆಯಂತೆ ಕರಿಭಂಟ ಎನ್ನುವ ಜನಪದ ನಾಟಕ ಬರೆದುಕೊಟ್ಟರು. ಅದೊಂದು ಅದ್ಭುತ ನಾಟಕ; ನಾಗರಿಕ ಜಗತ್ತಿನ ನರರನ್ನು ಕಂಡರಾಗದ ಕಾಡಿನ ಜನರು ಅವರ ವಾಸನೆಗೂ ಕೆರಳುವಂತೆ ವ್ಯಗ್ರಗೊಳ್ಳುವ ಕಥಾವಸ್ತು. ಇವತ್ತಿಗೂ ನಮ್ಮ ಕಾಡೊಳಗಿನ ಅದಿವಾಸಿಗಳು ಹೆದರುವುದು ಕಾಡುಪ್ರಾಣಿಗಳಿಗಲ್ಲ ಬದಲಿಗೆ ಕಾಡಿನ ಇಲಾಖೆಯ ಜನರಿಗೆ. ಇಂತಹ ವಸ್ತುವಿದ್ದ ನಾಟಕವನ್ನು ನಾಗತಿಹಳ್ಳಿ ಹೆಣ್ಣುಮಕ್ಕಳು ಮನಮುಟ್ಟುವಂತೆ ಅಭಿನಯಿಸಿ ದೆಹಲಿಯವರೆಗೂ ಹೋಗಿಬಂದರು. ಮನೆಯ ಹೊಸಲಿಂದ ಈಚೆ ಬರದಂತಿದ್ದ ಹೆಣ್ಣುಮಕ್ಕಳೆಲ್ಲಾ ಮನಬಿಚ್ಚಿ ಅಭಿನಯಿಸಿದ್ದು ಒಂದು ದಾಖಲೆಯಾಗಿತ್ತು. ತಾನು ಬರೆದದ್ದನ್ನು ಈ ಲೋಕಕ್ಕೆ ಅರ್ಪಿಸಿದ ನಂತರ ಸಿದ್ದಗಂಗಯ್ಯ ಅತ್ತ ಸುಳಿಯುತ್ತಿರಲಿಲ್ಲ. ಅದೇನಿದ್ದರೂ ಈಗ ಆ ಲೋಕಕ್ಕೆ ಸೇರಿದ್ದು ಎನ್ನುವಂತಿದ್ದರು. ಈಗ ನಮ್ಮೆಲ್ಲಾ ಪ್ರತಿಭಾವಂತರನ್ನು, ದೇವರುಗಳನ್ನು ಮತ್ತು ಐತಿಹಾಸಿಕ ವ್ಯಕ್ತಿಗಳನ್ನ ಅಪಹರಿಸಿ ತಮ್ಮವರನ್ನಾಗಿಸಿಕೊಳ್ಳುತ್ತಿರುವವರ ವಿರುದ್ಧ ಕಂಬಾಳರಂತೆ ಪ್ರಶ್ನೆಮಾಡಿ ದಕ್ಕಿಸಿಕೊಳ್ಳಬೇಕಿದೆ. ಅದು ನಾವು ಸಿದ್ದಗಂಗಯ್ಯನವರಿಗೆ ಸಲ್ಲಿಸುವ ಗೌರವ.
ಇದನ್ನೂ ಓದಿ: ಮುರುಘಾ ಶರಣರ ಮರುಳು ಮಾತು ನಿಜವೆ?


