ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪಟ್ಟಿ ಪೊಲೀಸ್ ಠಾಣೆಯ ಕೋಣೆಯೊಂದರಲ್ಲಿ ದಲಿತ ಯುವಕನೊಬ್ಬ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಂತರ, ಪೊಲೀಸರು ಮತ್ತು ಅಪ್ರಾಪ್ತ ಬಾಲಕಿಯ ಕುಟುಂಬದವರ ವಿರುದ್ಧ ಕೊಲೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇಬ್ಬರೂ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ನೀಡಿದ್ದ ಅಪಹರಣದ ಪ್ರಕರಣದಲ್ಲಿ ಮೃತ ಯುವಕನನ್ನು ಬಂಧಿಸಲಾಗಿತ್ತು.
ಕರ್ತವ್ಯಲೋಪ ಆರೋಪದ ಮೇಲೆ ಪ್ರತಾಪಗಢ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪಕ್ ಭುಕರ್ ಅವರು ಪಟ್ಟಿ ಠಾಣೆಯ ಎಸ್‌ಎಚ್‌ಒ (ಠಾಣಾಧಿಕಾರಿ) ಆನಂದ್ ಪಾಲ್ ಸಿಂಗ್ ಮತ್ತು ತನಿಖಾಧಿಕಾರಿ ಓಂಕರ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.
ವೃತ್ತ ನಿರೀಕ್ಷಕ (ಸಿಒ) ಪ್ರದೀಪ್ ಸಿಂಗ್ ಅವರ ಪ್ರಕಾರ, ಯುವಕ ತನ್ನ 17 ವರ್ಷದ ಮಗಳನ್ನು ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಿಸಿದ್ದಾನೆ ಎಂದು ಬಾಲಕಿಯ ತಂದೆ ದೂರು ದಾಖಲಿಸಿದ್ದರು. ಇಬ್ಬರೂ ಒಂದೇ ಗ್ರಾಮದವರು. ಗಾಜಿಯಾಬಾದ್‌ನಿಂದ ಬಾಲಕಿಯನ್ನು ಪತ್ತೆ ಹಚ್ಚಿ ಕರೆತರಲಾಗಿದ್ದು, ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಎದುರು ಆಕೆಯ ಹೇಳಿಕೆಗಳನ್ನು ದಾಖಲಿಸಲಾಗಿದೆ. “ತಾನು ಸ್ವಯಂಪ್ರೇರಣೆಯಿಂದ ಯುವಕನೊಂದಿಗೆ ಹೋಗಿರುವುದಾಗಿ ಮತ್ತು ಆತನೊಂದಿಗೆ ಬದುಕಲು ಬಯಸುವುದಾಗಿ ಆಕೆ ತಿಳಿಸಿದ್ದಾಳೆ. ಆದರೆ ಆಕೆ ಅಪ್ರಾಪ್ತೆಯಾಗಿರುವುದರಿಂದ, ಮೇಜರ್ ಆಗುವವರೆಗೆ ಸ್ವತಃ ಈ ನಿರ್ಧಾರ ತೆಗೆದುಕೊಳ್ಳಲು ಕಾನೂನು ಅವಕಾಶ ನೀಡುವುದಿಲ್ಲ” ಎಂದು ಸಿಂಗ್ ತಿಳಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಯುವಕನನ್ನು ಬಂಧಿಸಿರಲಿಲ್ಲ, ಆತ ಸೋಮವಾರ ತಾನಾಗಿಯೇ ಪೊಲೀಸ್ ಠಾಣೆಗೆ ಬಂದಿದ್ದ ಎಂದು ಸಿಒ ತಿಳಿಸಿದ್ದಾರೆ. ಆತನನ್ನು ಲಾಕಪ್‌ನಲ್ಲಿ ಇರಿಸಿರಲಿಲ್ಲ, ಬದಲಿಗೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ವಿಚಾರಣೆ ನಡೆಸುತ್ತಿದ್ದ ಕೋಣೆಯಲ್ಲಿ ಕೂರಿಸಲಾಗಿತ್ತು. ತನಿಖಾಧಿಕಾರಿ ಯಾವುದೇ ಕೆಲಸಕ್ಕಾಗಿ ಕೋಣೆಯಿಂದ ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಯುವಕ ಬಾತ್‌ರೂಮ್ ವೆಂಟಿಲೇಟರ್‌ಗೆ ಅಂಟಿಸಿದ್ದ ಕಬ್ಬಿಣದ ರಾಡಿಗೆ ನೇಣುಹಾಕಿಕೊಂಡಿರುವುದು ಕಂಡುಬಂದಿದೆ ಎಂದು ಸಿಂಗ್ ಹೇಳಿದರು.
ಕೋಣೆಯಲ್ಲಿದ್ದ ಕಂಬಳಿಯ ಚಿಂದಿಯಿಂದ ಯುವಕ ನೇಣುಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಠಾಣೆಯಲ್ಲಿದ್ದ ಆರೋಪಿಯ ಮೇಲೆ ನಿಗಾ ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರಿಂದ ಎಸ್‌ಎಚ್‌ಒ ಮತ್ತು ಉಪನಿರೀಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಂಗ್ ಹೇಳಿದರು.
ಯುವಕ ಮತ್ತು ಬಾಲಕಿ ಈ ಹಿಂದೆ ಕೂಡ ಒಮ್ಮೆ ಪರಾರಿಯಾಗಿದ್ದರು ಎಂದು ಸಿಒ ತಿಳಿಸಿದರು. ಆ ಸಂದರ್ಭದಲ್ಲೂ ಬಾಲಕಿಯನ್ನು ವಾಪಸ್ ಕರೆತರಲಾಗಿದ್ದು, ತಾನಾಗಿಯೇ ಬಿಟ್ಟುಹೋಗಿರುವುದಾಗಿ ಮತ್ತು ಯುವಕನೊಂದಿಗೆ ಬದುಕಲು ಬಯಸುವುದಾಗಿ ಆಕೆ ತಿಳಿಸಿದ್ದಾಳೆ. ಅಪ್ರಾಪ್ತೆಯಾಗಿದ್ದರಿಂದ ಆಕೆಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿತ್ತು.
ಈ ಬಾರಿ ಬಾಲಕಿಯನ್ನು ಪತ್ತೆ ಹಚ್ಚಿ ಕರೆತಂದ ನಂತರ, ಯುವಕ ಪೊಲೀಸ್ ಠಾಣೆಗೆ ಬಂದು ತಾವಿಬ್ಬರೂ ಮದುವೆಯಾಗಿದ್ದು ದಂಪತಿಯಂತೆ ವಾಸಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದನು ಎಂದು ಸಿಂಗ್ ತಿಳಿಸಿದರು.
ಆದರೆ, ಬಾಲಕಿಯ ತಂದೆಯ ಪ್ರಚೋದನೆಯ ಮೇರೆಗೆ ಪೊಲೀಸರು ಯುವಕನಿಗೆ ಚಿತ್ರಹಿಂಸೆ ನೀಡಿದ್ದಾರೆ, ಆತನ ಸಾವನ್ನು ಮುಚ್ಚಿಹಾಕಲು ನೇಣುಬಿಗಿದುಕೊಂಡಿರುವಂತೆ ನಾಟಕವಾಡಲಾಗಿದೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬದವರ ದೂರಿನ ಆಧಾರದ ಮೇಲೆ ಪೊಲೀಸರು ಹಾಗೂ ಬಾಲಕಿಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಒ ತಿಳಿಸಿದ್ದಾರೆ. “ಅವರ ಮೇಲಿನ ಆರೋಪಗಳನ್ನು ತನಿಖೆಯು ಸಾಬೀತುಪಡಿಸಲಿದೆ” ಎಂದು ಅವರು ಹೇಳಿದರು.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ಗಳು 103(1) (ಕೊಲೆ) ಮತ್ತು 351(3) (ಕ್ರಿಮಿನಲ್ ಬೆದರಿಕೆ) ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಸಾಕ್ಷ್ಯಗಳನ್ನು ಭದ್ರಪಡಿಸಿಕೊಳ್ಳಲಾಗಿದೆ ಎಂದು ಪ್ರತಾಪಗಢ ಪೊಲೀಸರು ತಿಳಿಸಿದ್ದಾರೆ. ಈ ಸಾವಿನ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದಾರೆ.
ಯುವಕನ ಕುಟುಂಬದವರು ಆರೋಪಿಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಉನ್ನತ ಮಟ್ಟದ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ನಾಗೀನಾ ಸಂಸದ ಹಾಗೂ ಆಜಾದ್ ಸಮಾಜ ಪಾರ್ಟಿಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅವರು ‘ಎಕ್ಸ್’ ಪೋಸ್ಟ್ ಮೂಲಕ ಒತ್ತಾಯಿಸಿದ್ದಾರೆ.


