ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಮೊಬೈಲ್ ಕಳ್ಳತನದ ಶಂಕೆಯಲ್ಲಿ 17 ವರ್ಷದ ಬಾಲಕನನ್ನು ಆತನ ಚಿಕ್ಕಪ್ಪ ಮತ್ತು ಮೂವರು ಪೊಲೀಸರು ಪೊಲೀಸ್ ಚೌಕಿಯೊಳಗೆ ನಿರ್ದಯವಾಗಿ ಥಳಿಸಿದ್ದು, ಹಲ್ಲೆಗೊಳಗಾದ ನಾಲ್ಕು ದಿನಗಳ ನಂತರ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪೊಲೀಸರು ಹಲ್ಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಬಾಲಕನ ಕುಟುಂಬ ಆರೋಪಿಸಿದೆ. ಸದ್ಯ ಪೊಲೀಸ್ ಚೌಕಿಯ ಉಸ್ತುವಾರಿ ಸೇರಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಒಬ್ಬರು ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಅಮಾನತಾಗಿದ್ದಾರೆ.
ಲಖಿಂಪುರ್ ಖೇರಿ ಎಸ್‌ಎಸ್‌ಪಿ ಸಂಜೀವ್ ಸುಮನ್, “ನಾವು ಪೊಲೀಸರ ವಿರುದ್ಧ ನೀಡಲಾಗಿರುವ ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರೆಂದು ಕಂಡುಬಂದರೆ ಯಾರನ್ನೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಕನನ್ನು ಥಳಿಸಿದ ಪೊಲೀಸ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕನ ಕುಟುಂಬದವರು ಹಿರಿಯ ಪೊಲೀಸರಿಗೆ ಮೃತನ ದೇಹದ ಮೇಲಿನ ಬಾಹ್ಯ ಗಾಯಗಳನ್ನು ತೋರಿಸಿದ್ದಾರೆ.
Another custodial death in #UttarPradesh . This time in #lakhimpur@Uppolice @ARajesh_SP @priyankagandhi pic.twitter.com/aMqprBhRl9
— Abushahma Khan (@abushahma007) January 23, 2022
ಇತ್ತ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬಾಲಕನ ವಿಚಾರಣೆ ನಡೆಯಿತು. ನಂತರ ಆತನನ್ನು ಬಿಡಲಾಯಿತು. ಬಾಲಕನ ಕುಟುಂಬವು ಮೊದಲು ಹಲ್ಲೆಗೆ ಆತನ ಚಿಕ್ಕಪ್ಪನನ್ನು ದೂಷಿಸಿದೆ. ಆದರೆ ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿದೆ ಎಂದು ಲಖಿಂಪುರ್ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
‘‘ಈ ತಿಂಗಳ 17ರಂದು ಬಾಲಕನ ಚಿಕ್ಕಪ್ಪ ಬಾಲಕನ ಮೇಲೆ ಫೋನ್ ಕದ್ದಿದ್ದಾನೆ ಎಂದು ಆರೋಪಿಸಿದ್ದರು. ದೂರಿನ ಮೇರೆಗೆ 19 ರಂದು ಎರಡೂ ಕಡೆಯಿಂದ ಬಾಲಕನ ಕುಟುಂಬದವರು ಹಾಗೂ ಗ್ರಾಮದ ಮುಖಂಡರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಯಿತು. ನಂತರ ಅವರು ರಾಜಿ ಮಾಡಿಕೊಂಡರು. ಬಳಿಕ ಪೊಲೀಸ್ ಠಾಣೆಯಿಂದ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಹಿಂತಿರುಗಿದರು. ಜನವರಿ 23 ರ ಬೆಳಗ್ಗೆ ಹುಡುಗನ ತಾಯಿ 5 ರಿಂದ 6 ಜನರೊಂದಿಗೆ ಪೊಲೀಸ್ ಠಾಣೆಗೆ ಬಂದು, ಜ.20 ರಂದು ರಾತ್ರಿ ಬಾಲಕನ ಚಿಕ್ಕಪ್ಪ ಮತ್ತು ಇತರ ಕೆಲವರು ಆತನನನ್ನು ಥಳಿಸಿದ್ದಾರೆ ಎಂದು ಹೇಳಿದ್ದರು. ಅದೇ ರಾತ್ರಿ ಬಾಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಪೊಲೀಸರು ಥಳಿಸಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ತನಿಖೆ ನಡೆಸುತ್ತೇವೆ. ಪೊಲೀಸರೇ ಹೊಣೆಗಾರರಾಗಿದ್ದರೆ ಕ್ರಮ ಎದುರಿಸಬೇಕಾಗುತ್ತದೆ” ಎಂದು ಪೊಲೀಸ್ ಮುಖ್ಯಸ್ಥ ಸಂಜೀವ್ ಸುಮನ್ ಹೇಳಿದ್ದಾರೆ.
“ಬಾಲಕನ ಕುಟುಂಬವು ಎರಡು ದೂರುಗಳನ್ನು ದಾಖಲಿಸಿದೆ. ಆತನ ಚಿಕ್ಕಪ್ಪ ರಾಮ್ ಬಹದ್ದೂರ್ ಮತ್ತು ನೆರೆಹೊರೆಯವರಾದ ರಾಜವೀರ್ ಸಿಂಗ್ ವಿರುದ್ಧ ಐಪಿಸಿಯ ಸೆಕ್ಷನ್ 304 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ಎರಡನೇ ದೂರು ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳ ವಿರುದ್ಧವಾಗಿದೆ. ನಾವು ಪ್ರಕರಣವನ್ನು ವಿವರವಾಗಿ ತನಿಖೆ ಮಾಡುತ್ತಿದ್ದೇವೆ ಮತ್ತು ಅದರಂತೆ ಸಂಬಂಧಪಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಬಾಲಕನ ಅಕ್ಕ “ಪೊಲೀಸರು ನನ್ನ ತಮ್ಮನನ್ನು ವಿಚಾರಣೆ ನಡೆಸುವಾಗ ನನ್ನ ತಾಯಿಯನ್ನು ವಾಪಸ್ ಕಳುಹಿಸಿದ್ದರು. ಬಳಿಕ ಆತನನ್ನು ಬೆಲ್ಟ್‌ಗಳಿಂದ ನಿರ್ದಯವಾಗಿ ಥಳಿಸಿದ್ದಾರೆ. ಕೆಲವು ಗಂಟೆಗಳ ನಂತರ, ನನ್ನ ಸಹೋದರನನ್ನು ಕರೆದೊಯ್ಯಲು ನಮಗೆ ಕರೆ ಬಂದಿತು. ಆದರೆ ನನ್ನ ಪೋಷಕರು ಅಲ್ಲಿಗೆ ತಲುಪಿದಾಗ, ಪೊಲೀಸರು ಮತ್ತು ನನ್ನ ಚಿಕ್ಕಪ್ಪ ತೀವ್ರವಾಗಿ ಥಳಿಸಿದ್ದಾರೆ ಎಂದು ನನ್ನ ತಮ್ಮ ತಿಳಿಸಿದ್ದಾನೆ. ಆತನನ್ನು ಮನೆಗ ಎಕರೆತಂದಿದ್ದೇವು ಆದರೆ, ಅವನ ಸ್ಥಿತಿ ತೀರಾ ಹದಗೆಟ್ಟಾಗ ಪಾಲಿಯಾ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಂಧ್ರ ಪ್ರದೇಶ: ಠಾಣೆಯಲ್ಲಿ ದಲಿತ ಮಹಿಳೆಯನ್ನು ತೀವ್ರವಾಗಿ ಥಳಿಸಿದ ಪೊಲೀಸರು-ಆರೋಪ


