Homeಕರ್ನಾಟಕಏನಿದು ಎನ್‌ಪಿಎಸ್‌, ಒಪಿಎಸ್? ಲಕ್ಷಾಂತರ ನೌಕರರ ಆತಂಕವೇನು?

ಏನಿದು ಎನ್‌ಪಿಎಸ್‌, ಒಪಿಎಸ್? ಲಕ್ಷಾಂತರ ನೌಕರರ ಆತಂಕವೇನು?

- Advertisement -
- Advertisement -

“ನೀವೇನ್ ಬಿಡ್ರಿ, ಸರ್ಕಾರಿ ನೌಕರರು. ಸಾಯೋವರೆಗೂ ಆರಾಮವಾಗಿ ಇರ್ತೀರಿ. ಒಳ್ಳೆಯ ಸಂಬಳ, ನಿವೃತ್ತಿಯಾದ ಮೇಲೆ ಕೊನೆಯ ಸ್ಯಾಲರಿಯ ಅರ್ಧದಷ್ಟು ಪಿಂಚಣಿ ಬರುತ್ತದೆ” ಎಂಬುದೊಂದು ಕಾಲವಿತ್ತು. ಆದರೀಗ ಈ ಮಾತು ಬಹುದೊಡ್ಡ ಅಣಕವಾಗಿ ಕಾಣುತ್ತಿದೆ. ಇಡೀ ಪಿಂಚಣಿ ವ್ಯವಸ್ಥೆಯನ್ನು ಬದಲಾಯಿಸಿದ ಪ್ರಭುತ್ವ, ಸರ್ಕಾರಿ ನೌಕರರ ಪಾಲಿನ ಮರಣ ಶಾಸನವನ್ನು ಬರೆದು ಒಂದೂವರೆ ದಶಕವೇ ಆಯಿತು. ನಿವೃತ್ತಿಯಾಗುತ್ತಿರುವ ಮತ್ತು ಈಗಾಗಲೇ ನಿವೃತ್ತಿಯಾಗಿರುವ ನೌಕರರ ಬದುಕು ಅನಿಶ್ಚಿತತೆಯಿಂದ ಕೂಡಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಕಾಲದಲ್ಲಿ ಆರಂಭವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಚಾಲ್ತಿಗೆ ಬಂದ ರಾಷ್ಟ್ರೀಯ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ಸರ್ಕಾರಿ ನೌಕರರ ನಿವೃತ್ತಿಯ ಬದುಕನ್ನು ನೋವಿಗೆ ದೂಡಿದೆ. ಸರ್ಕಾರಗಳು ಬಂದಿವೆ, ಹೋಗಿವೆ; ಆದರೆ ಸರ್ಕಾರಿ ನೌಕರರ ಆತಂಕವಂತೂ ಕರಗಲೇ ಇಲ್ಲ.

ಬೆಳಗಾವಿಯ ಸುವರ್ಣಸೌಧದಲ್ಲಿ ಕಲಾಪ ಶುರುವಾಗಿದೆ, ಮತ್ತೊಂದೆಡೆ ಚುನಾವಣೆ ತಯಾರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳಿವೆ. ಇದೆಲ್ಲದರ ನಡುವೆ ಚುನಾವಣೆ ಹೊಸ್ತಿಲಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ದಶಕದ ಹೋರಾಟಕ್ಕೆ ಹೇಗಾದರೂ ಗೆಲುವು ದೊರಕಿಸಿಕೊಳ್ಳುವ ಪ್ರಯತ್ನಕ್ಕೆ ನೌಕರರು ಕೈಹಾಕಿದ್ದಾರೆ. ’ಹಳೆಯ ಪಿಂಚಣಿ ಯೋಜನೆ’ (ಒಪಿಎಸ್) ಜಾರಿಗೆ ತರಬೇಕು. ಒಪಿಎಸ್ ಜಾರಿ ಮಾಡಿದವರಿಗೆ ನಮ್ಮ ಮತ’ ಎಂಬ ಕೂಗು ದೊಡ್ಡದಾಗುತ್ತಿದೆ.

2003ರ ಅಕ್ಟೋಬರ್ 29ರಂದು ’ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ’ (ಪಿಎಫ್‌ಆರ್‌ಡಿಎ) ಸ್ಥಾಪನೆಯಾಯಿತು. ಕಾನೂನಿನ ಅಧಿಕೃತತೆ ಒದಗಿಸುವ ಭಾಗವಾಗಿ ಎನ್‌ಡಿಎ ಸರ್ಕಾರ 2003ರ ಡಿಸೆಂಬರ್ 29ರಂದು ಅಧಿಸೂಚನೆ ಹೊರಡಿಸಿತು. 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಈ ಅಧಿಸೂಚನೆಯನ್ನೇ ಮುಂದುವರಿಸಿತು. 2006ರಲ್ಲಿ ರಾಜ್ಯದ ಅರ್ಥಸಚಿವರಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಬಜೆಟ್ ಭಾಷಣದಲ್ಲಿ ಎನ್‌ಪಿಎಸ್ ಜಾರಿಯ ಕುರಿತು ಮಾತನಾಡಿದ್ದರು. ಕೊನೆಯದಾಗಿ 11.11.2009ರಂದು ಈ ಹಿಂದಿನ ಬಜೆಟ್ ಪ್ರಸ್ತಾಪಗಳ ಮುಂದುವರಿಕೆಯಾಗಿ, 1.4.2006 ನಂತರ ಹೊಸದಾಗಿ ನೇಮಕವಾಗಿರುವ ರಾಜ್ಯ ಸರ್ಕಾರದ ಎಲ್ಲಾ ನೌಕರರಿಗೂ ಪೂರ್ವಾನ್ವಯವಾಗುವಂತೆ ಎನ್‌ಪಿಎಸ್ ಜಾರಿಗೊಳಿಸುವ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿತು. ಆ ಮೂಲಕ ಸರ್ಕಾರಿ ನೌಕರರಿಗೆ ಇದ್ದ ಪಿಂಚಣಿ ಭದ್ರತೆಯನ್ನು ತೆರವು ಮಾಡಲಾಯಿತು.

ಎನ್‌ಪಿಎಸ್ ಆತಂಕಕಾರಿ ಏಕೆ?

’ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ’ದ ವತಿಯಿಂದ 2016ರಲ್ಲಿ ಬಿಡುಗಡೆ ಮಾಡಲಾಗಿರುವ ’ನಿಶ್ಚಿತ ಪಿಂಚಣಿ ನಮ್ಮ ಹಕ್ಕು’ ಕೈಪಿಡಿಯಲ್ಲಿ ದಿವಂಗತ ಎಸ್.ಪ್ರಸನ್ನಕುಮಾರ್ ಅವರು ಎನ್‌ಪಿಎಸ್‌ನ ಅವಾಂತರಗಳ ಕುರಿತು ವಿವರಿಸಿದ್ದಾರೆ. ಎನ್‌ಪಿಎಸ್ ತಳಹದಿಯಾಗಿರುವ ಮೂರು ಅಂಶಗಳ ಕುರಿತು ಬೆಳಕು ಚೆಲ್ಲಿ ಸರ್ಕಾರಿ ನೌಕರರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಒಂದನೇ ಅಂಶ- ಪಿಂಚಣಿ ವಿಚಾರದಲ್ಲಿ ನಿಗದಿತ ಫಲ ಅಥವಾ ಲಾಭದ ಬದಲು ’ನಿಗದಿತ ಕೊಡುಗೆ’ ವ್ಯವಸ್ಥೆ: ನಿಗದಿತ ಫಲವೆಂದರೆ ಈಗಾಗಲೇ ಇರುವ ಪಿಂಚಣಿ ವ್ಯವಸ್ಥೆಯಾಗಿದೆ. ಒಂದು ನಿರ್ದಿಷ್ಟ ಕಾಲದವರೆಗೆ ಸೇವೆ ಸಲ್ಲಿಸಿ ನಿವೃತ್ತಿಯಾದಾಗ, ಸಲ್ಲಿಸಿದ ಸೇವೆಯ ವರ್ಷಗಳ ಆಧಾರದಲ್ಲಿ ಪಿಂಚಣಿ ನಿಗದಿಪಡಿಸಲಾಗುತ್ತಿತ್ತು. ಯಾವುದೇ ನೌಕರರಿಗೆ ನಿವೃತ್ತಿ ವೇತನ ಎಷ್ಟು ಸಿಗಬೇಕೆಂಬುದು ಸೇವೆಗೆ ಸೇರಿದ್ದಾಗಲೇ ಸೇವಾ ನಿಯಮಗಳ ಪ್ರಕಾರ ನಿಗದಿಯಾಗುತ್ತದೆ. ಆದರೆ ಎನ್‌ಪಿಎಸ್ ಮೂಲಕ ಅದನ್ನೀಗ ’ನಿಗದಿತ ಕೊಡುಗೆ’ ಪಿಂಚಣಿ ವಿಧಾನವನ್ನಾಗಿ ಬದಲಿಸಲಾಗಿದೆ. ಪ್ರತಿ ನೌಕರನ ಸಂಬಳದ ನಿಗದಿತ ಮೊತ್ತದಲ್ಲಿ ಪ್ರತಿ ತಿಂಗಳು ಶೇ. 10ರಷ್ಟು ಕಡಿತ ಮಾಡಿ ’ಪಿಂಚಣಿ ನಿಧಿ’ಗೆ ಜಮಾ ಮಾಡಲಾಗುತ್ತದೆ. ಪಿಂಚಣಿ ನಿಧಿಗೆ ನೌಕರನು ನಿರ್ದಿಷ್ಟ ಕೊಡುಗೆ ನೀಡಬೇಕಾಗುತ್ತದೆ. ಆದರೆ ಪಿಂಚಣಿ ಎಷ್ಟು ದೊರೆಯುತ್ತದೆ, ಎಷ್ಟು ವರ್ಷದ ಸೇವೆಗೆ ಎಷ್ಟು ನೀಡಲಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಿಖರ ಉತ್ತರವಿಲ್ಲ. ಅಂದರೆ ನೌಕರರ ಪಿಂಚಣಿ ಕಡಿತ ಮಾಡುವ ಜವಾಬ್ದಾರಿ ಹೊತ್ತ ಸಂಸ್ಥೆಗಳು ತಮ್ಮ ಲಾಭ ನಷ್ಟಕ್ಕೆ ಅನುಗುಣವಾಗಿ ಪಿಂಚಣಿ ಮೊತ್ತವನ್ನು ನಿಗದಿಪಡಿಸುತ್ತವೆ.

ಎರಡನೇ ಅಂಶ- ಸಾಮಾಜಿಕ ಸಹಾಯದ ಬದಲಾಗಿ ವಿಮಾ ಪದ್ಧತಿ: ಸಾಮಾಜಿಕ ಸಹಾಯವೆಂಬುದು ಸರ್ಕಾರ ಜವಾಬ್ದಾರಿಯಾಗಿತ್ತು. ಆದರೆ ಈಗ ನೌಕರರೇ ತಮ್ಮ ಉಳಿತಾಯದ ಮೂಲಕ ಭವಿಷ್ಯವನ್ನು ಭದ್ರತೆ ಮಾಡಿಕೊಳ್ಳಬೇಕು ಎಂಬುದನ್ನು ’ವಿಮೆ’ಯ ಪ್ರಸ್ತಾಪ ಹೇಳುತ್ತದೆ. ಸಮಾಜದ ಎಲ್ಲ ಜನರ ಕೊಡುಗೆಯಿಂದಿರುವ ಸರ್ಕಾರದ ಖಜಾನೆಯಿಂದ ಶ್ರೀಮಂತ ಬಂಡವಾಳಗಾರರಿಗೆ ರಿಯಾಯಿತಿಗಳನ್ನು ನೀಡಲು ಖರ್ಚು ಮಾಡಬಹುದೇ ಹೊರತು ಜನಸಾಮಾನ್ಯರಿಗೆ, ನೌಕರರಿಗೆ ಸರ್ಕಾರದ ಖಜಾನೆಯಿಂದ ಏನು ಸಹಾಯ ಮಾಡಬಾರದು ಎಂಬುದು ಈ ಅಂಶದ ತಿರುಳಾಗಿದೆ.

ಬಸವರಾಜ್ ಬೊಮ್ಮಾಯಿ

ಮೂರನೇ ಅಂಶ- ’ಹೂಡಿಕೆ’ಗಳನ್ನು ಸಂಸ್ಥೆಗಳಿಗೆ ’ಸಾಲ’ದ ಸ್ವರೂಪದ ಬದಲಾಗಿ ಷೇರು ಬಂಡವಾಳ ಪದ್ಧತಿಯಲ್ಲಿ ನೀಡುವುದು: ಇಲ್ಲಿ ನೌಕರರ ಉಳಿತಾಯದ ಹಣವನ್ನೇ ಪೂರ್ಣ ವಂಚಿಸುವ ಹುನ್ನಾರವಿದೆ. ನೌಕರರ ಉಳಿತಾಯವನ್ನು ಸಾಲದ ರೂಪದಲ್ಲಿ ಹೂಡಿಕೆ ಮಾಡುವುದಕ್ಕೂ ಷೇರುಗಳಾಗಿ ಬಳಸುವುದಕ್ಕೂ ವ್ಯತ್ಯಾಸವಿದೆ. ಸಾಲವೆಂದು ಪರಿಗಣಿಸಿದಾಗ ಬಡ್ಡಿಯನ್ನು ನೀಡಲಾಗುತ್ತದೆ. ಅದಕ್ಕೆ ಬದಲಾಗಿ ಕಂಪನಿಯ ಷೇರು ಬಂಡವಾಳವಾಗಿ ಪರಿಗಣಿಸಿದರೆ ಕಂಪನಿಗೆ ಲಾಭ ಬಂದರೆ ಡಿವಿಡೆಂಡ್ ನೀಡಲಾಗುತ್ತದೆ. ನಷ್ಟವಾದರೆ ಇಡೀ ಉಳಿತಾಯವೇ ಇಲ್ಲವಾಗುತ್ತದೆ.

ಈ ಮೂರು ಅಂಶಗಳು ಎನ್‌ಪಿಎಸ್ ವ್ಯವಸ್ಥೆಯ ಆತಂಕಗಳನ್ನು ಪರಿಚಯಿಸುತ್ತದೆ. ಇದಲ್ಲದೆ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್‌ಮೆಂಟ್ ಫಂಡ್ ಕಾಯಿದೆಯ ಸೆಕ್ಷನ್ 12(5)ರ ಪ್ರಕಾರ “ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಸಮಯಕ್ಕೆ ಯಾವುದೇ ನೌಕರರಿಗೂ ಈ ಪಿಂಚಣಿ ಯೋಜನೆಯನ್ನು ಅನ್ವಯಿಸಿ ಜಾರಿಗೊಳಿಸುವ ಅಧಿಕಾರವಿರುತ್ತದೆ.” ಅಂದರೆ ಈ ಸೆಕ್ಷನ್ ಅನ್ವಯ ರಾಜ್ಯ ಸರ್ಕಾರವು ಈಗ ಸೇವೆ ಸಲ್ಲಿಸುತ್ತಿರುವ ನೌಕರರಿಗೂ ಈಗಾಗಲೇ ನಿವೃತ್ತಿಯಾದ ನೌಕರರಿಗೂ ಅನ್ವಯಿಸಿ ಎನ್‌ಪಿಎಸ್ ಜಾರಿಗೊಳಿಸಬಹುದು!

ಇದನ್ನೂ ಓದಿ: ಎನ್‌ಪಿಎಸ್‌ ವಿರುದ್ಧ ರಾಜ್ಯ ಸರ್ಕಾರಿ ನೌಕರರ ಆಕ್ರೋಶ; ಲಕ್ಷಕ್ಕೂ ಹೆಚ್ಚು ಜನರಿಂದ ಪ್ರತಿಭಟನೆ

’ಕರ್ನಾಟಕ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ’ದ ನೇತೃತ್ವದಲ್ಲಿ ಸರ್ಕಾರಿ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ. ಕಳೆದ ಸೋಮವಾರ ನಡೆದ ಹೋರಾಟದಲ್ಲಿ ಸುಮಾರು ಒಂದು ಲಕ್ಷ ಜನ ನೌಕರರು ಪಾಲ್ಗೊಂಡಿದ್ದು ಗಮನಾರ್ಹ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಎನ್‌ಪಿಎಸ್ ಚರ್ಚೆ ಮುನ್ನಲೆಗೆ ಬಂದಿದೆ. ಅನೇಕ ಶಾಸಕರು ಎನ್‌ಪಿಎಸ್ ರದ್ದತಿ ಮಾಡುವಂತೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ನೌಕರರ ಹೋರಾಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಗಮನಿಸಿದ್ದಾರೆ. ಈ ಕುರಿತು ಚರ್ಚೆ ಮಾಡಲು ಅವಕಾಶ ನೀಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಂಗಳವಾರ ಭರವಸೆ ನೀಡಿದ್ದಾರೆ.

“ದೇಶದ ವಿವಿಧ ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿದೆ. ರಾಜಸ್ಥಾನ, ಛತ್ತೀಸ್‌ಗಡ, ಝಾರ್ಖಂಡ, ಪಂಜಾಬ್‌ನಲ್ಲಿ ಇರುವಂತೆ ಹಳೆಯ ಪಿಂಚಣಿ ಪದ್ಧತಿಯನ್ನೇ ರಾಜ್ಯದಲ್ಲಿಯೂ ಜಾರಿಗೆ ತರಬೇಕು. ಸರ್ಕಾರ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾವು ಅಂತಿಮ ಸಮರಕ್ಕೆ ಧುಮುಕಿದ್ದೇವೆ. ಅನಿರ್ದಿಷ್ಟಾವಧಿ ಧರಣಿ ಮೂಲಕ, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಕರೆ ಕೊಟ್ಟಿದ್ದೇವೆ. ವೋಟ್ ಫಾರ್ ಒಪಿಎಸ್ ಎಂಬುದು ನಮ್ಮ ಎಚ್ಚರಿಕೆ” ಎಂದಿದ್ದಾರೆ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್.

ಉದಾರೀಕರಣದ ನೀತಿಯೊಳಗೆ ಹುಟ್ಟಿದ ಎನ್‌ಪಿಎಸ್: ಪ್ರೊ.ಬರಗೂರು

’ನ್ಯಾಯಪಥ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, “ಒಪಿಎಸ್ ರದ್ದು ಮಾಡಿದ್ದು, ಜಾಗತೀಕರಣದ ಹೆಸರಲ್ಲಿ ಬಂದ ಆರ್ಥಿಕ ಉದಾರೀಕರಣದ ಫಲವಾಗಿದೆ. ಇದರ ಮೂಲವನ್ನು ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ಕಾಣಬಹುದು. 2001ರಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಮಾಡಿದ ಒಂದು ದಾಸ್ತಾವೇಜನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಭಾರತದಲ್ಲಿನ ವೃದ್ಧಾಪ್ಯ ಭದ್ರತೆಯನ್ನು ಕುರಿತು ವಿಶ್ವ ಬ್ಯಾಂಕ್ ಕೆಲವು ಸಲಹೆಗಳನ್ನು ನೀಡಿತು. ಪಿಂಚಣಿ ವ್ಯವಸ್ಥೆ ಹೇಗಿರಬೇಕೆಂದು ಐಎಂಎಫ್ ಹೇಳಿತು. ಈ ಸಂಸ್ಥೆಗಳ ಸೂಚನೆ, ಸಲಹೆಗಳಿಂದಾಗಿ ಸಮಸ್ಯೆ ಉದ್ಭವವಾಯಿತು. “ಯಾವುದೇ ಸರ್ಕಾರಿ ನೌಕರನಿಗೆ ನಿಶ್ಚಿತ ಫಲ ಇರಬಾರದು, ಷೇರು ಪದ್ಧತಿ ಬರಬೇಕು, ಸಾಮಾಜಿಕ ಸಹಾಯ ರದ್ದಾಗಬೇಕು ಎಂಬುದು ಈ ಸಂಸ್ಥೆಗಳ ಸಲಹೆಯಾಗಿತ್ತು. ಭಾರತವೂ ಈ ಸಂಸ್ಥೆಗಳನ್ನು ಅನುಸರಿಸುವ ಕಾರಣ 2004ರಲ್ಲಿ ಬಿಜೆಪಿ ಸರ್ಕಾರ ಈ ನೀತಿಗಳನ್ನು ಅನುಷ್ಠಾನ ಮಾಡಿತು. ಮನಮೋಹನ್ ಸಿಂಗ್ ಸರ್ಕಾರ ಕಾಯ್ದೆ ಮಾಡಲು ಮುಂದಾಯಿತು. ಎಡಪಕ್ಷಗಳು ವಿರೋಧ ಮಾಡಿದ್ದರಿಂದ ವಿಳಂಬ ಮಾಡಿ, 2013ರಲ್ಲಿ ಕಾಯ್ದೆ ಮಾಡಲಾಯಿತು” ಎಂದು ವಿವರಿಸಿದರು.

“ಯಾವುದೇ ಸರ್ಕಾರಿ ನೌಕರರಲ್ಲಿ ಅಭದ್ರತೆಯನ್ನು ಉಂಟುಮಾಡುವುದೇ ಇವರ ನೀತಿಯಾಗಿದೆ. ಹೀಗಾಗಿಯೇ ಹೊರಗುತ್ತಿಗೆ ಎಂಬುದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸರ್ಕಾರಿ ನೌಕರರನ್ನೂ ಹೊರಗುತ್ತಿಗೆ ನೌಕರರಂತೆ ನೋಡಿಕೊಳ್ಳಲಾಗುತ್ತಿದೆ” ಎಂದ ಅವರು, “ಎನ್‌ಪಿಎಸ್ ವಿಚಾರವಾಗಿ ಆರಂಭದಲ್ಲಿ ನೌಕರರನ್ನು ನಂಬಿಸಲಾಯಿತು. ನೌಕರರು ಕೋಟ್ಯಾಧಿಪತಿಗಳಾಗುತ್ತಾರೆ, ಷೇರುಪೇಟೆಯಿಂದ ಕೋಟಿಕೋಟಿ ರೂಪಾಯಿ ಲಾಭವಾಗುತ್ತದೆ ಎಂದು ತಿಳಿಸಲಾಯಿತು. ವಾಸ್ತವ ಬೇರೆಯಾಗಿದೆ. ನನ್ನ ಬಳಿಯೇ ಇರುವ ಕೆಲವು ಅಧಿಕೃತ ಮಾಹಿತಿಯ ಪ್ರಕಾರ ಎನ್‌ಪಿಎಸ್‌ನಿಂದಾಗಿ ನಿವೃತ್ತರು 1000 ರೂಪಾಯಿ, ಕೆಲವರು 900 ರೂಪಾಯಿ, ಕೆಲವರು 700 ರೂಪಾಯಿ ಮಾಸಿಕವಾಗಿ ಪಡೆಯುತ್ತಿದ್ದಾರೆ” ಎಂದು ವಿಷಾದಿಸಿದರು.

ಪ್ರೊ.ಬರಗೂರು ರಾಮಚಂದ್ರಪ್ಪ

“ಸರ್ಕಾರಿ ನೌಕರರ ಹಣವನ್ನು ತೆಗೆದುಕೊಂಡು ಷೇರುಪೇಟೆಯಲ್ಲಿ ತೊಡಗಿಸುತ್ತೇವೆ ಎಂಬ ನೀತಿಯೇ ಮನುಷ್ಯ ವಿರೋಧಿಯಾದದ್ದು. ಬಂಡವಾಳಶಾಹಿಗಳು ಯಾರಾದರೂ ಮಾರುಕಟ್ಟೆಯಲ್ಲಿ ಹಣವನ್ನು ತೊಡಗಿಸಿಕೊಳ್ಳಲಿ. ಆದರೆ ನೌಕರರ ಹಣವನ್ನು ಬಳಸುವುದು ಅಕ್ಷಮ್ಯ. ಸರ್ಕಾರಿ ಸೇವೆ ಸಲ್ಲಿಸಿದವರಿಗೆ ಒಪಿಎಸ್ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಒಪಿಎಸ್‌ನಿಂದ ಆರ್ಥಿಕ ಹೊರೆಯಾಗುತ್ತದೆ ಎಂದು ಅನೇಕರು ವಾದಿಸುತ್ತಾರೆ. ಆದರೆ 1935ರಿಂದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿತ್ತು. ಎಂಟು ದಶಕಗಳಿಂದ ಆಗದ ಆರ್ಥಿಕ ಹೊರೆ ಈಗ ಆಗುತ್ತದೆ ಎಂಬುದಕ್ಕೆ ಅರ್ಥವೇ ಇಲ್ಲ” ಎಂದು ತಿಳಿಸಿದರು.

“ಎನ್‌ಪಿಎಸ್ ಬೇಡ ಎಂದು 2018ರ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯವರು ಮಾತನಾಡಿದ್ದರು. ಬಿಜೆಪಿಯ ನಾಯಕರಾದ ಬಿ.ಎಸ್.ಯಡಿಯೂಪ್ಪ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್ ಒಪಿಎಸ್‌ಗಾಗಿ ಆಗ್ರಹಿಸಿದ್ದರು. ಈಗ ಅವರೇ ಅಧಿಕಾರದಲ್ಲಿದ್ದಾರೆ. ಸರ್ಕಾರ ನಡೆಸುತ್ತಿರುವವರಿಗೆ ಪಾಪಪ್ರಜ್ಞೆ ಕಾಡಬೇಕು” ಎಂದು ಆಶಿಸಿದರು.

“2018ರ ಬೆಳಗಾವಿ ಅಧಿವೇಶನದಲ್ಲಿ ಆಡಿದ್ದ ಮಾತುಗಳನ್ನು ಅನುಷ್ಠಾನಕ್ಕೆ ತರುವ ಸೌಭಾಗ್ಯ ತಮಗೆ ಬಂದಿದೆ ಎಂದು ಬಿಜೆಪಿ ನಾಯಕರು ಭಾವಿಸಬೇಕು. ವಿರೋಧ ಪಕ್ಷವೂ ಈ ಕುರಿತು ಮಾತನಾಡಬೇಕು. ಅವರಿಗೂ ಪಾಪಪ್ರಜ್ಞೆ ಕಾಡುತ್ತಿದ್ದರೆ ಈ ಅಧಿವೇಶನದಲ್ಲಿ ಒತ್ತಡವನ್ನು ತರಬೇಕು” ಎಂದು ಆಗ್ರಹಿಸಿದರು.

“ಸರ್ಕಾರ ಈ ಅಧಿವೇಶನದಲ್ಲೇ ಎನ್‌ಪಿಎಸ್ ಜಾರಿಗೆ ಕ್ರಮ ಜರುಗಿಸಬೇಕು. ಇದಾಗದಿದ್ದರೆ ವಿರೋಧ ಪಕ್ಷವು ಎನ್‌ಪಿಎಸ್ ಜಾರಿಯ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿಯೇ ಸ್ಪಷ್ಟವಾಗಿ ತಿಳಿಸಬೇಕು. ಆಡಳಿತ ಮತ್ತು ವಿರೋಧ ಪಕ್ಷ- ಇಬ್ಬರ ಮೇಲೂ ಜವಾಬ್ದಾರಿಗಳು ಹೆಚ್ಚಿವೆ” ಎಂದು ಅಭಿಪ್ರಾಯಪಟ್ಟರು.

’ಷೇರು ವ್ಯವಸ್ಥೆಯಿಂದ ನೌಕರರ ಭವಿಷ್ಯ ಮಣ್ಣುಪಾಲು’

ಉಪನ್ಯಾಸಕರಾದ ಕೆ.ಆರ್.ಪೇಟೆ ವಾಸು ಅವರು ಪತ್ರಿಕೆಯೊಂದಿಗೆ ಮಾತನಾಡಿ, “ನಮ್ಮ ಸೇವೆಯನ್ನು ಪರಿಗಣಿಸಿ, ನಮ್ಮ ಇಳಿವಯಸ್ಸಿನ ಆರೋಗ್ಯ ಕಾಪಾಡುವುದು ಮತ್ತು ನಮ್ಮ ಭವಿಷ್ಯಕ್ಕೆ ಭದ್ರತೆಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ನಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹಾಕಿ ಏರಿಳಿತವನ್ನು ಉಂಟು ಮಾಡುವುದರಿಂದಾಗಿ ನಮ್ಮ ಭವಿಷ್ಯವೇ ಮಣ್ಣು ಪಾಲಾಗುತ್ತದೆ. ಎನ್‌ಪಿಎಸ್ ಜಾರಿಗೊಳಿಸಿದ ಸಾಕಷ್ಟು ದೇಶಗಳು ಈಗಾಗಲೇ ಮಣ್ಣುಮುಕ್ಕಿವೆ” ಎಂದು ಎಚ್ಚರಿಸಿದರು.

“ಸುಮಾರು ಮೂವತ್ತು ವರ್ಷಗಳ ಕಾಲ ಸರ್ಕಾರಕ್ಕಾಗಿ ನಾವು ದುಡಿದಿರುವುದನ್ನು ಹೊರೆ ಎಂದು ಸರ್ಕಾರ ಭಾವಿಸಬಾರದು. ಎಲ್ಲವನ್ನೂ ವ್ಯವಹಾರಿಕವಾಗಿಯೇ ನೋಡಬಾರದು. ನಿರುದ್ಯೋಗಿಗಳನ್ನೆಲ್ಲ ಗುಂಡಿಟ್ಟು ಕೊಲ್ಲಬೇಕು ಎಂಬಂತೆ ಸರ್ಕಾರದ ನೀತಿಗಳು ಇರಬಾರದು” ಎಂದು ಮನವಿ ಮಾಡಿದರು.

ಕೆ.ಆರ್.ಪೇಟೆ ವಾಸು

“ಎನ್‌ಪಿಎಸ್ ಜಾರಿಗೆ ತಂದ ಸಂದರ್ಭದಲ್ಲಿ ನೌಕರರನ್ನು ಚೆನ್ನಾಗಿ ನಂಬಿಸಲಾಯಿತು. ಒಪಿಎಸ್‌ಗಿಂತ ಎನ್‌ಪಿಎಸ್‌ನಲ್ಲಿ ದುಪ್ಪಟ್ಟು ಲಾಭವಾಗುತ್ತದೆ ಎಂದು ದೊಡ್ಡದೊಡ್ಡ ವ್ಯಕ್ತಿಗಳ ಮೂಲಕ ನೌಕರರ ಮೈಂಡ್‌ವಾಶ್ ಮಾಡಿಸಲಾಯಿತು. ಇದು ಅಪಾಯಕಾರಿ ನೀತಿಯಾಗಿದೆ ಎಂದು ನಮ್ಮಂಥವರು ಪ್ರತಿಭಟಿಸುತ್ತಿದ್ದ ಕಾಲದಲ್ಲಿ ನನ್ನ ಸಹೋದ್ಯೋಗಿ ಮಿತ್ರರೇ ನಮ್ಮನ್ನು ವಿರೋಧಿಸುತ್ತಿದ್ದರು. ನಿವೃತ್ತಿಯ ನಂತರದಲ್ಲಿ ಕೋಟಿಕೋಟಿ ಹಣ ಬರುತ್ತದೆ ಎಂದು ಅಕ್ಷರಶಃ ನಂಬಿದ್ದರು. ಮಿಲಿಟರಿ ಕೋಟಾದಲ್ಲಿ ಸೇರಿ ನಮ್ಮ ಜೊತೆಯಲ್ಲಿಯೇ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ. ಅವರ್‍ಯಾರಿಗೂ ಮೂರು ಸಾವಿರದ ಮೇಲೆ ಪಿಂಚಣಿ ಬಂದ ಉದಾಹರಣೆ ಇಲ್ಲ. ಸೇವೆಯ ಕೊನೆಯ ತಿಂಗಳಲ್ಲಿ 70 ಸಾವಿರ ರೂ. ಸಂಬಳ ಪಡೆದವರು, ನಿವೃತ್ತಿಯ ನಂತರ ಕೇವಲ 3,000 ರೂ. ಪಿಂಚಣಿ ಪಡೆದಿರುವುದು ಬಹುದೊಡ್ಡ ಅನ್ಯಾಯ” ಎಂದು ಬೇಸರ ವ್ಯಕ್ತಪಡಿಸಿದರು.

“2015ರ ಅವಧಿಯಲ್ಲಿ ನಮ್ಮೆಲ್ಲರ ಕಿಚ್ಚು ಶಾಂತರಾಮ್ ಅವರ ನೇತೃತ್ವದಲ್ಲಿ ಸ್ಫೋಟಿಸಿತು. ನಮ್ಮ ಹೋರಾಟ ಯಾವುದೇ ಮುಲಾಜಿಗೆ ಒಳಗಾಗಿಲ್ಲ. ಬೇರೆ ರಾಜ್ಯಗಳಲ್ಲಿ ಹೋರಾಟಗಳು ನಡೆಯುತ್ತಿವೆ. ರಾಜಸ್ಥಾನ, ಛತ್ತೀಸ್‌ಗಢ, ಪಂಜಾಬ್‌ನಲ್ಲಿ ಮುಖ್ಯಮಂತ್ರಿಗಳೇ ನೇರವಾಗಿ ಪ್ರವೇಶಿಸಿ ಸಮಸ್ಯೆ ಆಲಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ವೋಟ್ ಫಾರ್ ಒಪಿಎಸ್ ಅಭಿಯಾನ ಮಾಡಿದೆವು. ಎನ್‌ಪಿಎಸ್ ರದ್ದು ಮಾಡುವುದಾಗಿ ಹೇಳಿದ ಪಕ್ಷಕ್ಕೆ ವೋಟುಗಳು ಬಿದ್ದವು. ಸರ್ಕಾರಿ ನೌಕರರು ಹಾಗೂ ಕುಟುಂಬದವರ ಮತಗಳು ಚುನಾವಣೆಯಲ್ಲಿ ನಿರ್ಣಾಯಕವಾಗಲಿವೆ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರತಿಕ್ರಿಯೆ ನೀಡಿ, ಎನ್‌ಪಿಎಸ್ ರದ್ದು ಮಾಡುವುದು ಕಷ್ಟವೆಂದು ಹೇಳುತ್ತಿದೆ. ನಾವು ಹೋರಾಟ ನಡೆಸುತ್ತೇವೆ. ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇವೆ” ಎಂದು ಆಶಾಭಾವನೆ ವ್ಯಕ್ತಪಡುತ್ತಾರೆ ವಾಸು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...