Homeಕರ್ನಾಟಕಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ

ಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ

ಪಠ್ಯದಲ್ಲಿ ಭಗತ್‌ಸಿಂಗ್, ನಾರಾಯಣಗುರು, ಪೆರಿಯಾರ್‌ ಪಾಠಗಳಿಗೆ ಕೋಕ್‌, ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಕುರಿತ ವ್ಯಂಗ್ಯ ಸೇರಿದಂತೆ ಹಲವು ಸಂಗತಿಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ರೋಹಿತ್‌ ಚಕ್ರತೀರ್ಥರಿಗೆ ಕೇಳಲಾಗಿದೆ.

- Advertisement -
- Advertisement -

ಬಲಪಂಥೀಯ ವಿಚಾರಗಳ ಪ್ರತಿಪಾದಕ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ರಚನೆಯಾದ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯು ಈಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪಠ್ಯಗಳಲ್ಲಿ ಬದಲಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಭಗತ್‌ಸಿಂಗ್‌, ನಾರಾಯಣಗುರು, ಪೆರಿಯಾರ್‌ ಕುರಿತ ಪಠ್ಯ ಸೇರಿದಂತೆ ಹಲವು ಸಂಗತಿಗಳನ್ನು ಕೈಬಿಟ್ಟು ಬಲಪಂಥೀಯ ವಿಚಾರಧಾರೆಗಳ ಲೇಖಕರ ಪಾಠಗಳನ್ನು ಸೇರಿಸಿದ್ದಾರೆಂಬ ಆರೋಪಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಎದ್ದಿರುವ ಪ್ರಶ್ನೆಗಳನ್ನಿಟ್ಟುಕೊಂಡು ರೋಹಿತ್‌ ಚಕ್ರತೀರ್ಥ ಅವರನ್ನು ‘ನಾನುಗೌರಿ.ಕಾಂ’ ಸಂದರ್ಶಿಸಿದೆ.

ಪ್ರಶ್ನೆ: ಜಿ.ರಾಮಕೃಷ್ಣ ಅವರು ಬರೆದಿರುವ ‘ಭಗತ್‌ಸಿಂಗ್‌’ ಪಾಠವನ್ನು ಪಠ್ಯದಿಂದ ಹೊರಗಿಡಲಾಗಿದೆ. ಜೊತೆಗೆ ಲಂಕೇಶ್‌, ಸಾ.ರಾ.ಅಬೂಬುಕರ್‌ ಅವರ ಬರಹ ಸೇರಿದಂತೆ ಹಲವು ವಿಷಯಗಳನ್ನು ಕೈಬಿಟ್ಟಿರುವುದು ಈಗ ಲಭ್ಯವಾಗಿರುವ ಪಿಡಿಎಫ್‌ಗಳಿಂದ ತಿಳಿದುಬಂದಿದೆ. ಈ ಪಾಠಗಳನ್ನು ಹೊರಗಿಡಲು ಇದ್ದ ಮಾನದಂಡಗಳೇನು?

ಚಕ್ರತೀರ್ಥ: ‘ಭಗತ್‌ಸಿಂಗ್‌’ ಕುರಿತ ಪಠ್ಯವನ್ನು ನಾವು ಕೈಬಿಟ್ಟಿಲ್ಲ. ಇನ್ನಷ್ಟು ವಿಚಾರಗಳನ್ನು ಸೇರಿಸಿದ್ದೇವೆ. ಈಗ ಇದ್ದ ಪಠ್ಯದಲ್ಲಿ ಕೇವಲ ಬಾಲ್ಯದ ವಿವರಗಳು ಮಾತ್ರ ಇದ್ದವು. ಕ್ರಾಂತಿಯ ವಿವರಗಳನ್ನೆಲ್ಲ ಒಳಗೊಂಡಿದ್ದೇವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರಶ್ನೆ: ‘ಭಗತ್‌ಸಿಂಗ್‌’ ಕುರಿತ ಪಠ್ಯವನ್ನು ಹತ್ತನೇ ತರಗತಿಯ ಕನ್ನಡ ಭಾಷಾ ವಿಷಯದಲ್ಲಿಯೇ ಉಳಿಸಿಕೊಳ್ಳಲಾಗಿದೆಯೋ? ಅಥವಾ ಸಮಾಜ ವಿಜ್ಞಾನಕ್ಕೆ ಸೇರಿಸಲಾಗಿದೆಯೋ?

ಚಕ್ರತೀರ್ಥ: ಯಾರೋ ಒಬ್ಬರು ಈ ಕುರಿತು ಆರೋಪಿಸಿದಾಗ, “ಭಾಷಾ ವಿಷಯದಲ್ಲೇ ಭಗತ್‌ಸಿಂಗ್‌ ಪಠ್ಯ ಇದೆ. ಆದರೆ ಭಗತ್‌ಸಿಂಗ್‌ ಪಾಠ ಕನ್ನಡದಲ್ಲೇ ಇರಬೇಕೆಂದೇನೂ ಇಲ್ಲ, ಅದು ಸಮಾಜ ವಿಜ್ಞಾನದ ವಿಷಯವೂ ಹೌದು. ಅಲ್ಲಿಯೂ ಭಗತ್‌ ಸಿಂಗ್ ಸೇರಿದಂತೆ ಎಲ್ಲ ಕ್ರಾಂತಿಕಾರಿಗಳ ವಿಷಯಗಳನ್ನು ಹೇಳಿಯೇ ಇರುತ್ತೇವೆ. ಹಾಗೆಂದು ನಾವೇನು ಕನ್ನಡದಲ್ಲಿ ಭಗತ್‌ಸಿಂಗ್‌ ಪಠ್ಯವನ್ನು ಬಿಟ್ಟಿಲ್ಲ.

ಇದನ್ನೂ ಓದಿರಿ: ತ್ರಿವರ್ಣ ಧ್ವಜ v/s ಭಗವಾಧ್ವಜ: ಹೆಡಗೇವಾರ್‌ ಮೂಲಪಠ್ಯವನ್ನೇ ತಿರುಚಿದ ಚಕ್ರತೀರ್ಥ ಸಮಿತಿ; ಇಲ್ಲಿದೆ ನೋಡಿ ಸಾಕ್ಷಿ!

ಪ್ರಶ್ನೆ: ಡಾ.ಜಿ.ರಾಮಕೃಷ್ಣ ಅವರು ಬರೆದ ‘ಭಗತ್‌ಸಿಂಗ್‌’ ಪಠ್ಯವಿತ್ತು. ಅದನ್ನೇ ಉಳಿಸಿಕೊಂಡಿದ್ದೀರೋ? ಬೇರೆಯವರು ಬರೆದ ಪಠ್ಯವನ್ನು ಸೇರಿಸಿದ್ದೀರೋ?

ಚಕ್ರತೀರ್ಥ: ಜಿ.ರಾಮಕೃಷ್ಣ ಅವರ ಪಠ್ಯವನ್ನೇನು ನಾವು ಕೈಬಿಟ್ಟಿಲ್ಲ.

ಪ್ರಶ್ನೆ: ಈಗ ಸಿಕ್ಕಿರುವ ಪಿಡಿಎಫ್‌ ಪ್ರತಿಗಳು ಶಿಕ್ಷಣ ಇಲಾಖೆಯ ಮೂಲದಿಂದಲೇ ಬಂದಿವೆ. ಲಭ್ಯವಿರುವ ಪಿಡಿಎಫ್‌ ಪ್ರಕಾರ, ‘ಜಿ.ರಾಮಕೃಷ್ಣ’ ಅವರು ಬರೆದಿರುವ ‘ಭಗತ್‌ಸಿಂಗ್‌’ ಪಠ್ಯವನ್ನು ಕೈಬಿಟ್ಟಿರುವುದು ಸ್ಪಷ್ಟವಾಗುತ್ತದೆ.

ಚಕ್ರತೀರ್ಥ: ಈಗ ಯಾವುದ್ಯಾವುದೋ ಪಿಡಿಎಫ್‌ಗಳು ವಾಟ್ಸ್‌ಅಪ್‌ನಲ್ಲಿ ಹರಿದಾಡುತ್ತಿದೆ. ನನ್ನ ಕೈಗೆ ಯಾವುದೇ ಪಠ್ಯಪುಸ್ತಕ ಬಂದಿಲ್ಲ. ವಾಟ್ಸ್‌ಅಪ್‌ನಲ್ಲಿ ಹರಿದಾಡುತ್ತಿರುವ ಪಿಡಿಎಫ್‌ಗಳನ್ನು ಅಧಿಕೃತವೆಂದು ಪರಿಗಣಿಸುವುದಿಲ್ಲ.

ಪ್ರಶ್ನೆ: ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌ ಅವರ ಮೂಲ ಭಾಷಣದಲ್ಲಿ ‘ಭಗವಾಧ್ವಜ’ ಎಂದಿದೆ. ಹತ್ತನೇ ತರಗತಿ ಪಠ್ಯದಲ್ಲಿ ಕೇವಲ ‘ಧ್ವಜ’ ಎಂದು ತಿರುಚಿರುವುದೇಕೆ?

ಚಕ್ರತೀರ್ಥ: ಯಾವುದೇ ವ್ಯಕ್ತಿಯ ಬರಹವನ್ನು ಪಾಠವಾಗಿ ಅಳವಡಿಸುವಾಗ ಒಂದಿಷ್ಟು ಪರಿಷ್ಕರಣೆ ಮಾಡುವುದು ಇದ್ದೇ ಇರುತ್ತದೆ. ಇದ್ದದ್ದನ್ನೇ ನೇರವಾಗಿ ಪಠ್ಯ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಈಗ ಹೊರಗಿಡಲಾಗಿರುವ ಪಿ.ಲಂಕೇಶ್ ಅವರ ಕಥೆಯಾದ ‘ಮೃಗ ಮತ್ತು ಸುಂದರಿ’ಯನ್ನು ಮೂಲದಲ್ಲಿಯೇ ಇರುವಂತೆ ಪಠ್ಯ ಮಾಡಲಾಗಿರಲಿಲ್ಲ. ಬರಗೂರು ರಾಮಚಂದ್ರ ಅವರು ಲಂಕೇಶ್ ಅವರ ಕಥೆಯ ಮೂಲ ಸ್ವರೂಪವನ್ನು ಪೂರ್ತಿಯಾಗಿ ಕೆಡಿಸಿ, ಏಳೆಂಟು ಪುಟಗಳಲ್ಲಿನ ಕಥೆಯನ್ನು ಎರಡು ಮೂರು ಪುಟಗಳಿಗೆ ಇಳಿಸಿದ್ದರು.

ಇದನ್ನೂ ಓದಿರಿ: ಭಾಷಾಪಠ್ಯದಲ್ಲಿ ಸಾಮಾಜಿಕ ನ್ಯಾಯ, ಲಿಂಗಸಮಾನತೆ ತುರುಕಬಾರದು: ರೋಹಿತ್‌ ಚಕ್ರತೀರ್ಥ ಸಮಿತಿ

ಪ್ರಶ್ನೆ: ಪಠ್ಯವನ್ನು ಅಳವಡಿಸುವಾಗ ಮೂಲ ಆಶಯವನ್ನು ಉಳಿಸಿಕೊಂಡಿರುತ್ತಾರಲ್ಲ?

ಚಕ್ರವರ್ತಿ: ನಾವು ಹೆಗಡೇವಾರ್‌ ಪಠ್ಯದಲ್ಲಿ ಮೂಲ ಆಶಯವನ್ನು ಉಳಿಸಿಕೊಂಡಿಯೇ ಇದ್ದೇವೆ. ವ್ಯಕ್ತಿಗಳ ಪೂಜೆ ಮಾಡಬೇಡಿ ಎಂಬುದೇ ಹೆಡಗೇವಾರ್‌ ಪಠ್ಯದ ಆಶಯ. ವ್ಯಕ್ತಿ ಪೂಜೆಯ ಬದಲು ಒಂದು ಮೌಲ್ಯವನ್ನು ಮೂರ್ತೀಕರಿಸುವ ವಸ್ತುವನ್ನು ಇಟ್ಟುಕೊಂಡು ಗೌರವ ಸಲ್ಲಿಸಿ ಎನ್ನುತ್ತಾರೆ ಹೆಡಗೇವಾರ್‌. ಅವರು ‘ಭಗವಾಧ್ವಜ’ ಎಂದಿದ್ದನ್ನು ‘ಧ್ವಜ’ ಎಂದು ಉಳಿಸಿಕೊಂಡಿದ್ದೇವೆ. ಕೋಮುಭಾವನೆ ತರಬಾರದು ಎಂಬ ಎಚ್ಚರದಿಂದ ಭಗವಾಧ್ವಜ ಎಂಬುದನ್ನು ‘ಧ್ವಜ’ ಎಂದು ತಿದ್ದಿದ್ದೇವೆ.

ಪ್ರಶ್ನೆ: 2002ರವರೆಗೂ ಆರ್‌ಎಸ್‌ಎಸ್ ಕಚೇರಿಯ ಮೇಲೆ ತ್ರಿವರ್ಣಧ್ವಜ ಹಾರಿಸಿದ ಇತಿಹಾಸವಿಲ್ಲವಲ್ಲ.

ಚಕ್ರತೀರ್ಥ: ಅದಕ್ಕೂ ಇದ್ದಕ್ಕೂ ಸಂಬಂಧವಿಲ್ಲ.

ಪ್ರಶ್ನೆ: ‘ಭಗವಾಧ್ವಜ’ ಎಂದು ಹೇಳಿರುವುದನ್ನು ‘ತ್ರಿವರ್ಣಧ್ವಜ’ ಎಂದು ಭಾವಿಸಲು ಸಾಧ್ಯವೇ?

ಚಕ್ರತೀರ್ಥ: ‘ತ್ರಿವರ್ಣಧ್ವಜ’ ಎಂದು ಭಾವಿಸಲು ಅವಕಾಶವಿಲ್ಲ. ಈ ರೀತಿಯ ಆರೋಪಗಳನ್ನು ಮಾಡಿರುವವರು ಯಾರು?

ಪ್ರಶ್ನೆ: ಪ್ರಜ್ಞಾವಂತರು ಪ್ರಶ್ನೆ ಮಾಡುತ್ತಿದ್ದಾರೆ. ಅದನ್ನೇ ಇಲ್ಲಿ ಪ್ರಸ್ತಾಪಿಸಲಾಗಿದೆ.

ಚಕ್ರತೀರ್ಥ: ಪ್ರಜ್ಞಾವಂತರು ಪ್ರಶ್ನೆ ಮಾಡಲು ಅವಕಾಶವಿಲ್ಲ. ನಾವು ಅಧ್ಯಾಯವನ್ನು ಬರೆಯುವಾಗ ಕೃತಿಕಾರನ ಪರಿಚಯವನ್ನೂ ಹಾಕಿರುತ್ತೇವೆ. ಕೃತಿಕಾರನ ಪರಿಚಯದಲ್ಲಿ ಅವರು ಯಾವಾಗ ಹುಟ್ಟಿದರು, ಯಾವ ತೀರಿಕೊಂಡರು ಎಂಬುದನ್ನು ತಿಳಿಸಿರುತ್ತೇವೆ. (ಲಭ್ಯವಾದ ಪಿಡಿಎಫ್‌ ಪ್ರತಿಯಲ್ಲಿ ಹೆಡಗೇವಾರ್‌‌ ಯಾವಾಗ ತೀರಿಕೊಂಡರೆಂಬ ವಿವರ ಇಲ್ಲ). ಸ್ವಾತಂತ್ರ್ಯ ಪೂರ್ವದಲ್ಲೇ ಅವರು ತೀರಿಕೊಂಡಿದ್ದಾರೆ. ಹೀಗಿರುವಾಗ ಹೆಡಗೇವಾರ್‌ ತ್ರಿವರ್ಣ ಧ್ವಜದ ಕುರಿತು ಹೇಳಲು ಹೇಗೆ ಸಾಧ್ಯ? ಇದು ಪ್ರಜ್ಞಾವಂತರಿಗೆ ಅರ್ಥವಾಗುತ್ತದೆ. ಈ ಎಡ ಚಿಂತಕರಿಗೆ ಅರ್ಥವಾಗುವುದಿಲ್ಲ.

ಪ್ರಶ್ನೆ: ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಅಂದಿನ ಕಾಂಗ್ರೆಸ್‌ 1930 ಜನವರಿ 26ರಂದು ತ್ರಿವರ್ಣ ಧ್ವಜವನ್ನು ಹಾರಿಸಲು ಕರೆ ನೀಡುತ್ತದೆ. ಅದಕ್ಕೆ ವಿರೋಧ ವ್ಯಕ್ತಪಡಿಸುವ ಹೆಡಗೇವಾರ್‌, ತ್ರಿವರ್ಣ ಧ್ವಜದ ಬದಲು, ಭಗವಾಧ್ವಜ ಹಾರಿಸಬೇಕೆಂದು ಹೇಳುತ್ತಾರಲ್ಲ?

ಚಕ್ರತೀರ್ಥ: ಹೆಡಗೇವಾರ್‌ ಅವರಿಗೆ ಈ ವಿಚಾರದಲ್ಲಿ ಸ್ಪಷ್ಟತೆ ಇದೆ. ತ್ರಿವರ್ಣಧ್ವಜ ಎಂಬುದು ಅಂದಿನ ಕಾಂಗ್ರೆಸ್‌ನ ಧ್ವಜವಾಗಿತ್ತು. ಅಧಿಕೃತ ರಾಷ್ಟ್ರಧ್ವಜವಾಗಿದ್ದು ಸ್ವಾತಂತ್ರ್ಯ ನಂತರದಲ್ಲಿ.

ಇದನ್ನೂ ಓದಿರಿ: ಸರ್ಕಾರ ಹೊರಗಿಟ್ಟಿರುವ ಕ್ರಾಂತಿಕಾರಿ ‘ಭಗತ್‌ಸಿಂಗ್‌’ ಪಾಠದಲ್ಲಿ ಇರುವುದೇನು? ಆ ಪುಟ್ಟ ಪಠ್ಯ ಇಲ್ಲಿದೆ

ಪ್ರಶ್ನೆ: ಆ ನಂತರದಲ್ಲೂ 2002ನೇ ಇಸವಿಯವರೆಗೂ ಆರ್‌ಎಸ್‌ಎಸ್‌ ತನ್ನ ಕಚೇರಿಯಲ್ಲಿ ತ್ರಿವರ್ಣಧ್ವಜವನ್ನು ಹಾರಿಸಿರಲಿಲ್ಲವಲ್ಲ.

ಚಕ್ರತೀರ್ಥ: 2002- 2003ನೇ ಇಸವಿಗಳನ್ನು ಮತ್ತೆ ಮತ್ತೆ ಇಟ್ಟುಕೊಂಡು ಕೂರಬೇಡಿ. ಹೆಡಗೇವಾರ್‌ ಈ ಭಾಷಣವನ್ನು ಮಾಡಿದಾಗ ಸಂಘದ ಧ್ವಜವಾಗಿದ್ದದ್ದು ಭಗವಾಧ್ವಜ. ಹೀಗಾಗಿ ‘ಭಗವಾ’ ಎಂಬುದನ್ನು ತೆಗೆದುಹಾಕಿದ್ದೇವೆ.

ಪ್ರಶ್ನೆ: ಹೆಡಗೇವಾರ್‌ ಪರಿಚಯಿಸುವ ನಿಟ್ಟಿನಲ್ಲಿ, ಆರ್‌ಎಸ್‌ಎಸ್‌ಅನ್ನು ಮಕ್ಕಳಿಗೆ ಪರಿಚಯಿಸುವ ಹಿಡನ್‌ ಅಜೆಂಡಾವಿದೆಯಲ್ಲ?

ಚಕ್ರತೀರ್ಥ: ಈ ಆರೋಪವನ್ನು ಮಾಡುವವರು ಪಠ್ಯಪುಸ್ತಕವನ್ನು ಓದಿಲ್ಲ. ಲೇಖಕರ ಪರಿಚಯ ಮಾಡುವಾಗ ಅವರ ಹಿನ್ನೆಲೆಯನ್ನು ಹೇಳುತ್ತೇವೆ. ಹೆಡಗೇವಾರ್‌ ಬಗ್ಗೆ ಹೇಳುವಾಗ ಆರ್‌ಎಸ್‌ಎಸ್ ಕಟ್ಟಿದರು ಎಂದು ಹೇಳಲೇಬೇಕು. ವ್ಯಕ್ತಿಗಳ ವಿಚಾರಗಳನ್ನು ಹೇಳುವಾಗ ವ್ಯಕ್ತಿಯ ಹಿನ್ನೆಲೆಯನ್ನು ತಿಳಿಸಬೇಕು.

ಪ್ರಶ್ನೆ: ಹೆಡಗೇವಾರ್‌ ಅವರ ನಿಜಸ್ವರೂಪವನ್ನು ಹೇಳದೆ, ಅವರ ಯಾವುದೋ ಒಂದು ಭಾಷಣವನ್ನಿಟ್ಟು ಆ ಮೂಲಕ ಆರ್‌ಎಸ್‌ಎಸ್‌ನ ಪರಿಚಯ ಮಾಡಿಕೊಡುವುದು ಇಲ್ಲಿನ ಅಜೆಂಡಾವಾಗಿದೆಯಲ್ಲ?

ಚಕ್ರತೀರ್ಥ: ‘ಅಗ್ರಹಾರದಲ್ಲಿ ಬಾಂಬ್‌ ಹಾಕಬೇಕು’ ದೇವನೂರ ಮಹಾದೇವ ಅವರು ಹೇಳಿದ್ದಾರೆ. ಅದನ್ನು ಪರಿಚಯದಲ್ಲಿ ಕೊಡಲು ಆಗುತ್ತಾ? ದೇವನೂರರ ಪಾಠವನ್ನು ಇಡುವಾಗ ಅವರು ಏನು ಬರೆದಿದ್ದಾರೆ, ಯಾವ ಸಮುದಾಯದ ಪರವಾಗಿ ಮಾತನಾಡಿದ್ದಾರೆ, ಇತ್ಯಾದಿ ವಿಚಾರಗಳನ್ನು ತಿಳಿಸಬೇಕಾಗುತ್ತದೆ. ಮಾಡಿರುವ ಸಾಧನೆಗಳನ್ನು ಹೇಳಬೇಕೇ ಹೊರತು ವ್ಯಕ್ತಿಯ ನೆಗಟಿವ್ ವಿಚಾರಗಳನ್ನು (ಇದ್ದರೂ ಇಲ್ಲದಿದ್ದರೂ) ಕೃತಿಕಾರನ ಪರಿಚಯದಲ್ಲಿ ಹೇಳಲಾಗುವುದಿಲ್ಲ.

ಪ್ರಶ್ನೆ: ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸಿದ ಹೆಡಗೇವಾರ್‌ ಅವರ ಪಾಠವನ್ನು ಮಕ್ಕಳು ಓದಬೇಕೆ?

ಚಕ್ರತೀರ್ಥ: ಇದು ನಿಮ್ಮದೇ ಹೇಳಿಕೆ ಹೊರತು ನಿಜವಾದ ಸಂಗತಿಯಲ್ಲ.

(ಟಿಪ್ಪಣಿ: ಹೆಡಗೇವಾರ್‌ ಅವರ ಕುರಿತು ಆರ್‌ಎಸ್‌ಎಸ್‌ ಮೂಲದವರೇ ಆದ ಜೀವನ ಚರಿತ್ರಾಕಾರ ಬಿಷಿಕರ್‌ ಬರೆದಿರುವ ಪಠ್ಯವನ್ನು ಆಧರಿಸಿ ಈ ಪ್ರಶ್ನೆಯನ್ನು ಕೇಳಲಾಗಿದೆ ಎಂದು ಚಕ್ರತೀರ್ಥರ ಗಮನಕ್ಕೆ ತರಲಾಯಿತು. ಬ್ರಾಹ್ಮಣ ಆತಿಥೇಯರಿಗೆ ಬೇಸರವಾಗುತ್ತದೆ ಎಂದು ದಲಿತನನ್ನು ಹೊರಗೆ ಕೂರಿಸಿದ್ದು ದಾಖಲಾಗಿರುವುದನ್ನು ವಿವರಿಸಲಾಯಿತು. ಇದನ್ನು ಕೇಳಿದ ಬಳಿಕ ಚಕ್ರತೀರ್ಥ ಮಾತು ಮುಂದುವರಿಸಿದರು.)

ಇದನ್ನೂ ಓದಿರಿ: ಬಜರಂಗದಳದ ನಾಯಕರು ಮಕ್ಕಳನ್ನು ಉಗ್ರಗಾಮಿಗಳನ್ನಾಗಿ ಮಾಡಲು ಹೊರಟಿದ್ದಾರೋ?: ಕುಮಾರಸ್ವಾಮಿ ಕಿಡಿ

ಚಕ್ರತೀರ್ಥ: ಈ ರೀತಿಯಲ್ಲಿ ಹೇಳುತ್ತೀರಿ. ದೇವನೂರ ಮಹಾದೇವ ಅವರು ಅಗ್ರಹಾರಗಳಿಗೆ ಬಾಂಬ್‌ ಹಾಕಬೇಕು ಎಂದು ಹೇಳಿದ್ದಾರೆ. ಈ ಮಾತನ್ನು ನಿರಾಕರಿಸುತ್ತೀರಾ? ಗೂಗಲ್‌ ಮಾಡಿದರೆ ಈ ವಿಷಯ ಸಿಗುತ್ತದೆ. (ಟಿಪ್ಪಣಿ: ಸ್ವತಂತ್ರವಾಗಿ ಪರಿಶೀಲಿಸಿದಾಗ ದೇವನೂರ ಮಹಾದೇವ ಅವರು ಹೀಗೆ ಹೇಳಿಕೆ ನೀಡಿದ ಉದಾಹರಣೆ ಸಿಕ್ಕಿಲ್ಲ. ‘ಆತ್ಮಸಾಕ್ಷಿ ಎಂಬುದೊಂದು ಇದೆಯೇ?’ ಎಂಬ ಶೀರ್ಷಿಕೆಯ ಲೇಖನದಲ್ಲಿ ದೇವನೂರರು- ಯಾವ ಜೀವಗಳಿಗೂ ಅಪಾಯವಾಗದಂತೆ, ಆ ಜಾತಿ ಟೌನ್‌ಶಿಪ್ ನಿರ್ಮಾಣಕ್ಕೆ ಬಾಂಬ್ ಹಾಕಬೇಕು. ಯಾಕೆಂದರೆ ನಾವು ಹೊಸ ಭಾರತವನ್ನು ಕಟ್ಟಬೇಕಾಗಿದೆ. ಕಷ್ಟ. ತುಂಬಾನೇ ಕಷ್ಟ.. ಆದರೂ ಕಟ್ಟಬೇಕಾಗಿದೆ- ಎಂದಿದ್ದಾರೆಯೇ ಹೊರತು, ಅಗ್ರಹಾರಕ್ಕೆ ಬಾಂಬ್‌ ಹಾಕಿ ಹಿಂಸೆ ಮಾಡಿ ಎಂದು ಪ್ರತಿಪಾದಿಸಿಲ್ಲ).

ಪ್ರಶ್ನೆ: ಪಠ್ಯಪುಸ್ತಕದ ಪರಿವಿಡಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಪರಿಚಯಿಸುವಾಗ ‘ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ’ ಎಂದೂ, ‘ಡಾ.ಆರ್‌.ಗಣೇಶ್‌’ ಎಂಬವರನ್ನು ಪರಿಚಯಿಸುವಾಗ ‘ಶತಾವಧಾನಿ ಡಾ.ಆರ್‌.ಗಣೇಶ್‌’  ಎಂದು ಬರೆಯಲಾಗಿದೆ. ಕುವೆಂಪು, ಜಿ.ಎಸ್‌.ಶಿವರುದ್ರಪ್ಪ ಅವರ ಹೆಸರುಗಳನ್ನು ಬರೆಯುವಾಗ ‘ರಾಷ್ಟ್ರಕವಿ’ ಎಂಬ ಬಿರುದು ಕಾಣುವುದಿಲ್ಲ? ಜಾತಿಯ ಮೂಲ ನಿಮಗೆ ಅಪ್ಯಾಯಮಾನವಾಗಿದೆ ಎಂಬ ಆರೋಪವಿದೆ.

ಚಕ್ರತೀರ್ಥ: ಈ ರೀತಿ ಆರೋಪ ಮಾಡಿದವರಿಗೆ ಸಾಮಾನ್ಯ ಜ್ಞಾನ ಇಲ್ಲ. ‘ಶತಾವಧಾನಿ’ ಜಾತಿಯ ಸೂಚಕವಲ್ಲ. ‘ವಿದ್ಯಾವಾಚಸ್ಪತಿ’ ಎಂಬುದೂ ಜಾತಿ ಸೂಚಕವಲ್ಲ. ‘ಮಹಾನಾಯಕ ಅಂಬೇಡ್ಕರ್‌’ ಎಂದು ಕರೆದರೆ, ‘ಮಹಾನಾಯಕ’ ಜಾತಿ ಸೂಚಕವಲ್ಲ.

ಪ್ರಶ್ನೆ: ಇದೇ ಪ್ರಶ್ನೆಯನ್ನು ಕೇಳುತ್ತಿರುವುದು- ವಿದ್ಯಾವಾಚಸ್ಪತಿ, ಶತಾವಧಾನಿಗಿಂತ ‘ರಾಷ್ಟ್ರಕವಿ’ ಪದವಿ ಚಿಕ್ಕದೆ?

ಚಕ್ರತೀರ್ಥ: ಶತಾವಧಾನಿ, ವಿದ್ಯಾವಾಚಸ್ಪತಿ ಎಂಬುದು ಅವರ ಹೆಸರುಗಳ ಮುಂದೆಯೇ ಸೇರಿಕೊಂಡಿದೆ. ಹಾಗೆಯೇ ಬಳಸುತ್ತಾರೆ. ರಾಷ್ಟ್ರಕವಿಗಳಿಗೆ ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ ಗೌರವವನ್ನು ಸೂಚಿಸಿದ್ದೇವೆ. ಮೊಸರಲ್ಲಿ ಕಲ್ಲು ಹುಡುಕಲಾಗುತ್ತಿದೆ. ವಿವಾದ ಸೃಷ್ಟಿಸಲು ಬೇರೆ ವಿಷಯಗಳು ಇಲ್ಲವಾದ ಕಾರಣ ಇದನ್ನು ಹಿಡಿದುಕೊಂಡಿದ್ದಾರೆ.

(ಟಿಪ್ಪಣಿ: ಶತವಾಧಾನಿ, ವಿದ್ಯಾವಾಚಸ್ಪತಿ ಕುರಿತಷ್ಟೇ ಇಲ್ಲಿ ಪ್ರಶ್ನೆ ಕೇಳುತ್ತಿಲ್ಲ. ಹಲವು ಗೊಂದಲಗಳ ಕುರಿತು ಈಗ ಪ್ರಶ್ನೆ ಎದ್ದಿರುವುದನ್ನು ರೋಹಿತ್‌ ಚಕ್ರತೀರ್ಥ ಅವರ ಗಮನಕ್ಕೆ ತರಲಾಯಿತು.)

ಪ್ರಶ್ನೆ: ಮರುಪರಿಷ್ಕರಣೆ ಮಾತುಗಳನ್ನು ಬರೆಯುತ್ತಾ, “ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯನ್ನು ಭಾಷಾ ಪಠ್ಯದಲ್ಲಿ ತುರುಕಲಾಗಿದೆ” ಎನ್ನುತ್ತೀರಿ. ಅಂದರೆ ಇದರರ್ಥ.

ಚಕ್ರತೀರ್ಥ: ಲಿಂಗ ಸಮಾನತೆ, ಜಾತಿ ಸಮಾನತೆಯನ್ನು ನೋಡಲೇಬಾರದು ಎಂದು ನಾನು ಹೇಳಿಲ್ಲ. ಯಾವುದಾದರೂ ಒಂದು ಬರಹವನ್ನು ಆಯ್ದುಕೊಳ್ಳುವಾಗ ಜಾತಿ, ಲಿಂಗ ಮುಖ್ಯವಾಗಬಾರದು. ಬರಹ ಮಾತ್ರ ಮುಖ್ಯವಾಗಬೇಕು ಎಂಬುದು ನಮ್ಮ ಟಿಪ್ಪಣಿಯ ಅರ್ಥ.

ಪ್ರಶ್ನೆ: ‘ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯನ್ನು ತರುಕಲ್ಪಟ್ಟಿದೆ’ ಎನ್ನುತ್ತೀರಿ. ಯಾವ ಪಠ್ಯದಲ್ಲಿ ತುರುಕಲಾಗಿತ್ತು?

ಚಕ್ರತೀರ್ಥ: ತುರಕಲ್ಪಟ್ಟಿತ್ತು ಎಂದು ಹೇಳುವಾಗ ಇಂಥದ್ದೇ ಎಂದು ನಿರ್ದಿಷ್ಟವಾಗಿ ಹೇಳಲು ಆಗಲ್ಲ. ಬರಗೂರು ರಾಮಚಂದ್ರಪ್ಪ ಅವರು ಕೊಟ್ಟ ವರದಿಯನ್ನು ಆಧರಿಸಿ ಹೇಳುತ್ತಿದ್ದೇನೆ. ಜಾತಿಯನ್ನು ಮುಂದೆ ಮಾಡಿ ಪಠ್ಯವನ್ನು ಇಟ್ಟಿದ್ದಾರೆ. ಯಾರೂ ಏನೇ ಬರೆದರೂ ಜಾತಿ ಕಾರಣಕ್ಕಾಗಿ ಪಠ್ಯದಲ್ಲಿ ಪ್ರಕಟ ಮಾಡಲು ಆಗುವುದಿಲ್ಲ.

ಪ್ರಶ್ನೆ: ಯಾರೂ ಏನೇ ಬರೆದರೂ ಪ್ರಕಟ ಮಾಡಲು ಆಗಲ್ಲ ಎಂದು ಹೇಳುತ್ತೀರಿ. ಅದು ಯಾವ ವಿಚಾರ ಎಂದು ತಿಳಿಸುವಿರಾ? ಲಂಕೇಶ್‌ ಅವರ ಪಠ್ಯವೋ, ಜಿ.ರಾಮಕೃಷ್ಣರ ಪಠ್ಯವೋ, ಸಾ.ರಾ.ಅಬೂಬುಕರ್‌ ಅವರ ಪಾಠವೋ? ಯಾವುದು? 

ಚಕ್ರತೀರ್ಥ: ನಾನು ಅದನ್ನು ಸರ್ಕಾರಕ್ಕೆ ಹೇಳಿದ್ದೀನಿ. ನಾನು ಪ್ರತಿಯೊಂದನ್ನೂ ಮಾಧ್ಯಮಕ್ಕೆ ವಿವರವಾಗಿ ಹೇಳುವ ಅಗತ್ಯವಿಲ್ಲ. ಜಿ.ರಾಮಕೃಷ್ಣ ಅವರ ಜಾತಿ, ಲಂಕೇಶ್ ಅವರ ಜಾತಿ ಯಾವುದೆಂದು ನನಗೆ ಗೊತ್ತಿಲ್ಲ. ಯಾರನ್ನೂ ಕೂಡ ನಾನು ಜಾತಿಯ ಮೂಲಕ ಗುರುತಿಸುವುದಿಲ್ಲ.

ಪ್ರಶ್ನೆ: ಸಾ.ರಾ.ಅಬೂಬುಕರ್‌ ಅವರ ‘ಯುದ್ಧ’ ಎಂಬ ಅದ್ಭುತ ಕತೆಯನ್ನು ತೆಗೆದಿದ್ದೀರಿ. ಅದರಲ್ಲಿ ಯಾವುದು ಅಪಥ್ಯವಾದ ವಿಚಾರವಾಗಿತ್ತು?

ಚಕ್ರತೀರ್ಥ: ಸಮಿತಿಯ ಒಮ್ಮತದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಅವರೆಲ್ಲರ ನಿರ್ಧಾರದಂತೆ ಕೆಲವು ಪಾಠಗಳನ್ನು ಬಿಡಲಾಗಿದೆ. ಹೊಸ ಚಿಂತನೆಯನ್ನು ಕೊಡದೆ ಇರುವ ಬರಹಗಳನ್ನು ಅಥವಾ ಪುನರಾವರ್ತನೆಯಾಗಿರುವ ಬರಹಗಳನ್ನು ಕೈಬಿಡಬೇಕೆಂದು ಸಮಿತಿ ನಿರ್ಧರಿಸಿತು. ಬೇರೆ ಬೇರೆ ಪ್ರಕಾರದ ಬರಹಗಳನ್ನು ಪಠ್ಯದಲ್ಲಿ ನೀಡಲಾಗಿದೆ.

ಪ್ರಶ್ನೆ: ಲಂಕೇಶ್‌ ಅವರ ‘ಮೃಗ ಮತ್ತು ಸುಂದರಿ’, ಸಾ.ರಾ. ಅಬೂಬುಕರ್‌‌ ಅವರ ‘ಯುದ್ಧ’ – ಕಥಾ ಪ್ರಕಾರಕ್ಕೆ ಸೇರಿದ್ದವು. ವೈವಿಧ್ಯಮಯ ಪಠ್ಯವನ್ನು ಅಳವಡಿಸಿಕೊಳ್ಳಲಾಗಿತ್ತು. ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’, ಡಾ.ಆರ್‌.ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಠ್ಯ ಯಾವ ಪ್ರಕಾರಕ್ಕೆ ಸೇರುತ್ತವೆ?

ಚಕ್ರತೀರ್ಥ: ಕೇವಲ ಹತ್ತನೇ ತರಗತಿ ಪಠ್ಯದ ಬಗ್ಗೆ ಮಾತ್ರ ಮಾತನಾಡಬೇಡಿ. ನಾನು ಒಂದರಿಂದ ಹತ್ತನೇ ತರಗತಿಯವರೆಗಿನ ಎಲ್ಲ ಪ್ರಕಾರದ ಪಠ್ಯದ ಬಗ್ಗೆ ಮಾತನಾಡಬಲ್ಲೆ. ಹತ್ತನೇ ತರಗತಿಯನ್ನಷ್ಟೇ ಇಟ್ಟುಕೊಂಡು ನೇತಾಡುತ್ತಿದ್ದೀರಾ? ನಾನು ಎಲ್ಲ ಪಠ್ಯವನ್ನು ಸೇರಿಸಿ ಮಾತನಾಡುತ್ತೇನೆ. ಚರ್ಚೆಗೆ ಬರಲಿ.

ಪ್ರಶ್ನೆ: ಪಠ್ಯಪುಸ್ತಕವನ್ನು ಪರಿಶೀಲನೆ ಮಾಡಿದ ಮೇಲೆ ಅನುಮೋದನೆಗೆಂದು ಒಂದು ಸಮಿತಿ ಇರಬೇಕಲ್ಲ. ನಿಮ್ಮ ವರದಿಯನ್ನು ಅನುಮೋದನೆ ಮಾಡಿದ್ದು ಯಾರು?

ಚಕ್ರತೀರ್ಥ: ನಿಮಗೆ ಪಠ್ಯಪುಸ್ತಕ ಪರಿಶೀಲನೆ ಬಗ್ಗೆ ತಿಳಿವಳಿಕೆ ಇಲ್ಲ. ಹಲವು ಶಿಕ್ಷಕರನ್ನು ಕರೆಸಿ ಅವರ ಅಭಿಪ್ರಾಯಗಳನ್ನು ತೆಗೆದುಕೊಂಡು ಪಠ್ಯವನ್ನು ಅಂತಿಮ ಮಾಡಿದ್ದೇವೆ.

ಪ್ರಶ್ನೆ: ಯಾವುದೇ ಪಠ್ಯವನ್ನು ಇಡುವಾಗ ಮಕ್ಕಳ ಮನಸ್ಥಿತಿಯನ್ನು ಗಮನಿಸಬೇಕಾಗುತ್ತದೆ. ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಾಠ ಹತ್ತನೇ ತರಗತಿ ಮಕ್ಕಳ ವಯೋಮಾನಕ್ಕೆ ಸೂಕ್ತವೇ? ಈ ರೀತಿಯ ಅಧ್ಯಾತ್ಮದ ಪಠ್ಯವನ್ನು ಮಕ್ಕಳಿಗೆ ಅರ್ಥಮಾಡಿಸುವುದು ಹೇಗೆ? ಚಕ್ರತೀರ್ಥ ಅವರು ಯಾವುದೇ ಶಿಕ್ಷಣ ತಜ್ಞರಲ್ಲ ಎಂದು ವಿಷಯ ತಜ್ಞರು ಆರೋಪಿಸುವುದಕ್ಕೆ ಇದೊಂದು ಉದಾಹರಣೆಯಾಗಿದೆಯಲ್ಲ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಚಕ್ರತೀರ್ಥ: ತಜ್ಞರು ನನ್ನೊಂದಿಗೆ ನೇರವಾಗಿ ವಾದಕ್ಕೆ ಬರಲಿ. ಹಳೆಗನ್ನಡ ಕಾವ್ಯದ ಕುರಿತು ಕಲಿಯುವುದು ಕಷ್ಟವಾಗುವುದಿಲ್ಲ. ಈ ಪಠ್ಯ ಸಮಸ್ಯೆಯಾಗುತ್ತದೆಯೇ? ಗದ್ಯದಲ್ಲಿ ಸಂಕೀರ್ಣತೆ ಇರಬಾರದು ಎಂದು ಇದೆಯೇ? ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮಕ್ಕಳು ಕನ್ನಡ ಕಲಿಯುತ್ತಾರೆ. ನಮ್ಮ ಮಕ್ಕಳ ಬೌದ್ಧಿಕತೆಯನ್ನು ನೀವು ಹೀಗಳೆಯುತ್ತಿದ್ದೀರಿ.

ಇದನ್ನೂ ಓದಿರಿ: ಮೈಸೂರಿನ ‘ಹದಿನಾರು’ ಗ್ರಾಮದಲ್ಲಿ ವೈಷ್ಣವ ದೇವಾಲಯದ ಗೋಡೆ ಕೆಡವಿದಾಗ ಸಿಕ್ಕಿತ್ತು ಜೈನ ವಿಗ್ರಹ!

ಪ್ರಶ್ನೆ: ಎಲ್ಲ ಮಕ್ಕಳು ಒಂದೇ ಮನಸ್ಥಿತಿಯಲ್ಲಿ ಇರುವುದಿಲ್ಲ ಅಲ್ಲವೇ? 

ಚಕ್ರತೀರ್ಥ: ಮಕ್ಕಳಿಗೆ ಸರಳವಾದದ್ದನ್ನೇ ಕೊಟ್ಟು ಅಭ್ಯಾಸ ಮಾಡಿದ್ದೇವೆ. ಮಕ್ಕಳಿಗೆ ಭಾರವಾಗಬಾರದು ಎಂದು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಶಿಕ್ಷಕರಿಗೆ ತರಬೇತಿ ನೀಡಬೇಕೆಂದು ಸರ್ಕಾರಕ್ಕೆ, ಶಿಕ್ಷಣ ಸಚಿವರಿಗೆ ಶಿಫಾರಸ್ಸು ಮಾಡಿದ್ದೇನೆ.

ಪ್ರಶ್ನೆ: ಇಷ್ಟೆಲ್ಲ ಮಾತನಾಡುವ ಚಕ್ರತೀರ್ಥ ಶಿಕ್ಷಣ ತಜ್ಞರಲ್ಲ ಎಂದು ಆರೋಪವಿದೆ.

ಚಕ್ರತೀರ್ಥ: ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಶಿಕ್ಷಣದ ಬಗ್ಗೆ ಐದಾರು ವರ್ಷಗಳಿಂದ ಮಾತನಾಡುತ್ತಾ, ಬರೆಯುತ್ತಾ ಬಂದಿದ್ದೇನೆ.

ಪ್ರಶ್ನೆ: ಹತ್ತನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸಮಾಜ ಸುಧಾರಕರಾದ ನಾರಾಯಣಗುರುಗಳು ಹಾಗೂ ಪೆರಿಯಾರ್‌ ರಾಮಸ್ವಾಮಿ ನಾಯ್ಕರ್‌ ಅವರ ಪಠ್ಯವನ್ನು ಕೈಬಿಡಲಾಗಿದೆ ಎಂಬುದು ಚರ್ಚೆಗೆ ಬಂದಿದೆಯಲ್ಲ.

ಚಕ್ರತೀರ್ಥ: ಅರ್ಧ ಪಠ್ಯಪುಸ್ತಕವನ್ನು ತಿಳಿದುಕೊಂಡಿರುವವರು ಈ ಆರೋಪ ಮಾಡುತ್ತಿದ್ದಾರೆ. ಸುರಳಿಯಾಕಾರದ ಕಲಿಕೆ ಪ್ರಕಾರ ವಿಷಯವೊಂದರ ಕುರಿತು ಒಂದು ತರಗತಿಯಲ್ಲಿ ಕಲಿತರೆ, ಮುಂದುವರಿದಿದ್ದನ್ನು ಮುಂದಿನ ತರಗತಿಯಲ್ಲಿ ಕಲಿಯುತ್ತಾರೆ. ಏಳನೇ ತರಗತಿಯಲ್ಲಿ ಎಲ್ಲ ಸುಧಾರಕರ ಕುರಿತು ತಿಳಿಸಲಾಗಿದೆ. ಅಲ್ಲಿ ನಾರಾಯಣಗುರುಗಳು ಹಾಗೂ ಪೆರಿಯಾರ್‌ ಅವರ ವಿಷಯ ಬಂದಿದೆ. ಹತ್ತನೇ ತರಗತಿಯಲ್ಲಿ ಇದರ ವಿಸ್ತೃತ ರೂಪವಾಗಿ ಸಾಮಾಜಿಕ ಧಾರ್ಮಿಕ ಸಂಸ್ಥೆಗಳ ಪಾಠವನ್ನು ನೀಡಲಾಗಿದೆ.

(ಟಿಪ್ಪಣಿ: ಸಂದರ್ಶನದ ಎಲ್ಲ ಪ್ರಶ್ನೆಗಳನ್ನು ಪಠ್ಯದ ಪಿಡಿಎಫ್‌ ಪ್ರತಿಯಲ್ಲಿನ ಅಂಶಗಳನ್ನೇ ಆಧರಿಸಿ ಕೇಳಲಾಗಿದೆ ಎಂಬ ಸಂಗತಿಯನ್ನು ಚಕ್ರತೀರ್ಥರಿಗೆ ತಿಳಿಸಲಾಗಿದೆ. ಭಗತ್‌ಸಿಂಗ್‌ ಪಠ್ಯ ಕೈಬಿಟ್ಟಿರುವುದನ್ನು ಹೊರತುಪಡಿಸಿ, ಬಹುತೇಕ ವಿಚಾರಗಳನ್ನು ಚಕ್ರತೀರ್ಥ ಅವರು ಒಪ್ಪಿಕೊಂಡು ಉತ್ತರಿಸಿರುವುದನ್ನು ಇಲ್ಲಿ ಗಮನಿಸಬಹುದು. ಹಾಗಾದರೆ ಅಧಿಕೃತ ಪಠ್ಯವನ್ನು ಸರ್ಕಾರ ಮೊದಲೇ ಪ್ರಕಟಿಸಿ, ವಿವಾದವನ್ನು ಮೈಮೇಲೆ ಎಳೆದುಕೊಂಡು ಬಳಿ ಯೂಟರ್ನ್ ತೆಗೆದುಕೊಂಡಿತೇ?)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...