Homeಮುಖಪುಟರಾತ್ರೋರಾತ್ರಿ ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಬದಲಿಸಿದ ಕೊತ್ತೂರು ಮಂಜುನಾಥ್ ಯಾರು? ಕ್ಷೇತ್ರದ ಸಮೀಕ್ಷೆ ಹೀಗಿದೆ

ರಾತ್ರೋರಾತ್ರಿ ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಬದಲಿಸಿದ ಕೊತ್ತೂರು ಮಂಜುನಾಥ್ ಯಾರು? ಕ್ಷೇತ್ರದ ಸಮೀಕ್ಷೆ ಹೀಗಿದೆ

- Advertisement -
- Advertisement -

ಬುಧವಾರ ರಾತ್ರಿ ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಡಾ. ಬಿ.ಸಿ ಮುದ್ದುಗಂಗಾಧರ್ ಎಂಬುವವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿತ್ತು. ಆದರೆ 10 ಗಂಟೆಗಳಲ್ಲಿ ಅವರನ್ನು ಬದಲಿಸಿ ಆದಿನಾರಾಯಣ ಎಂಬುವವರಿಗೆ ಕಾಂಗ್ರೆಸ್ ಬಿ ಫಾರಂ ನೀಡಿದೆ. ಇದಕ್ಕೆ ಕಾರಣರಾದ ವ್ಯಕ್ತಿ ಕೊತ್ತೂರು ಮಂಜುನಾಥ್! ಯಾರಿವರು? ಅಭ್ಯರ್ಥಿ ಬದಲಾಗಲು ಕಾರಣವೇನು?

ಮುಳಬಾಗಿಲು ವಿಧಾನಸಭಾ ಕ್ಷೇತ್ರ 2008ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಆ ಚುನಾವಣೆಯಲ್ಲಿ ಆಗ ಕಾಂಗ್ರೆಸ್ ಅಭ್ಯರ್ಥಿ ಅಮರೇಶ್‌ರವರು ಜೆಡಿಎಸ್‌ನ ಎನ್ ಮುನಿನಂಜಪ್ಪನವರನ್ನು 1,854 ಮತಗಳಿಂದ ಮಣಿಸಿ ಶಾಸಕರಾದರು. ಆದರೆ 2013ರ ವೇಳೆಗೆ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು ಕೊತ್ತೂರು ಮಂಜುನಾಥ್. ಕಾಂಗ್ರೆಸ್ ಟಿಕೆಟ್ ನೀಡದಿದ್ದುದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು 73,146 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿ ಮುನಿನಂಜಪ್ಪರನ್ನು 33,734 ಮತಗಳ ಭಾರೀ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾದರು.

ಕೊತ್ತೂರು ಮುಂಜುನಾಥ್ ಜಾತಿ ಪ್ರಮಾಣ ಪತ್ರ ವಿವಾದ

ಮುಳಬಾಗಿಲು ತಾಲ್ಲೂಕಿನ ಮರಹೇರು ಕೊತ್ತೂರು ಗ್ರಾಮದ ಇವರು ಜನಪ್ರಿಯ ಶಾಸಕರೂ ಆಗಿದ್ದರು. 2018ರ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷ ಸೇರಿದ್ದರು. ಬಿ ಫಾರಂ ಪಡೆದು ನಾಮಪತ್ರ ಸಹ ಸಲ್ಲಿಸಿದ್ದರು. ಅಷ್ಟರಲ್ಲಿ ಬೈರಾಗಿ ಎಂಬ ಹಿಂದುಳಿದ ಜಾತಿಯ ಕೊತ್ತೂರು ಮಂಜುನಾಥ್‌ರವರು ಬುಡಗ ಜಂಗಮ ಜಾತಿ ಹೆಸರಿನಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪಡೆದಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲಾಗಿತ್ತು. ಹೈಕೋರ್ಟ್ ಆ ದೂರನ್ನು ಪರಿಗಣಿಸಿ ಅವರ ಪ.ಜಾ ಪ್ರಮಾಣ ಪತ್ರವನ್ನು ಅಸಿಂಧು ಎಂದು ಘೋಷಿಸಿತು. ಹಾಗಾಗಿ ನಾಮಪತ್ರ ಪರಿಶೀಲನೆ ವೇಳೆ ಚುನಾವಣಾ ಅಧಿಕಾರಿಗಳು ಕೊತ್ತೂರು ಮಂಜುನಾಥ್‌ರವರ ನಾಮಪತ್ರವನ್ನು ತಿರಸ್ಕರಿಸಿದರು. ಇದರಿಂದ ಶಾಕ್‌ಗೆ ಒಳಗಾದ ಅವರು ಚುನಾವಣೆಯಿಂದ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಗಿ ಬಂತು. ಕಣದಲ್ಲಿ ಇಲ್ಲದ ಕಾರಣ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್.ನಾಗೇಶ್‌ರವರಿಗೆ ಬೆಂಬಲ ಘೋಷಿಸಿ ಗೆಲ್ಲಿಸಬೇಕಾಯಿತು. ಜೆಡಿಎಸ್ ಪಕ್ಷದ ಸಮೃದ್ಧಿ ಮಂಜುನಾಥ್‌ರವರು ಪ್ರಬಲ ಪೈಪೋಟಿ ಕೊಟ್ಟರೂ ಸಹ 6,715 ಮತಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಕಾಂಗ್ರೆಸ್ ಟಿಕೆಟ್ ಸಿಗದುದ್ದಕ್ಕೆ ಬೇಸರಗೊಂಡು ಬಿಜೆಪಿ ಸೇರಿದ್ದ ಮಾಜಿ ಶಾಸಕ ಅಮರೇಶ್ ಕೇವಲ 8,411 ಮತಗಳಿಗೆ ಸೀಮಿತಗೊಂಡರು.

ಹೈಕೋರ್ಟ್‌ನಲ್ಲಿಯೂ ಕೂಡ ಕೊತ್ತೂರು ಮಂಜುನಾಥ್‌ರವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ತಿರಸ್ಕೃತಗೊಂಡಿದ್ದರಿಂದ ಅವರು ಮುಳಬಾಗಿಲು ಪ.ಜಾ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆದರೂ ಅವರಿಗೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಅವರು ಮುಳಬಾಗಿಲು ಕ್ಷೇತ್ರಕ್ಕೆ ತನ್ನ ಅನುಯಾಯಿ ಆದಿನಾರಾಯಣರವರಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಕಾಂಗ್ರೆಸ್ ಡಾ. ಬಿ.ಸಿ ಮುದ್ದುಗಂಗಾಧರ್ ಹೆಸರು ಪ್ರಕಟಿಸಿದಾಗ ಕೋಪಗೊಂಡ ಮಂಜುನಾಥ್, ಈಗ ಘೋಷಿಸಿರುವ ಅಭ್ಯರ್ಥಿಯ ಹೆಸರೇ ಕೇಳಿಲ್ಲ. ಹಾಗಾಗಿ ಬದಲಿಸಬೇಕು, ಇಲ್ಲವಾದಲ್ಲಿ ತಾನು ಕೋಲಾರದಲ್ಲಿ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹಠ ಹಿಡಿದು ಕೂತರು. ಕೊನೆಗೂ ಕೊತ್ತೂರು ಮಂಜು ಒತ್ತಡಕ್ಕೆ ಮಣಿದು ಮುಳುಬಾಗಿಲು ಕ್ಷೇತ್ರದ ಅಭ್ಯರ್ಥಿಯನ್ನೇ ಪಕ್ಷ ಬದಲಾಯಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಭ್ಯರ್ಥಿಯಾಗಿ ಘೋಷಿಸಿದ್ದ ಡಾ. ಬಿ ಸಿ ಮುದ್ದು ಗಂಗಾಧರ್ ಬದಲಿಗೆ ಆದಿನಾರಾಯಣಗೆ ಪಕ್ಷ ಟಿಕೆಟ್ ನೀಡಿದೆ. ಏಕೆಂದರೆ ಕೊತ್ತೂರು ಮಂಜುನಾಥ್ ಬೆಂಬಲವಿಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆಲುವು ಕಷ್ಟ ಎಂಬುದು ಕಳೆದ ಎರಡು ಚುನಾವಣೆಗಳಲ್ಲಿ ನಿರೂಪಿತವಾಗಿದೆ.

ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್‌

ಜೆಡಿಎಸ್ ಪಕ್ಷವು ಸಮೃದ್ಧಿ ಮಂಜುನಾಥ್‌ ನವರಿಗೆ ಟಿಕೆಟ್ ನೀಡಿದೆ. ಅವರು ಕಳೆದ ಬಾರಿ ಪೈಪೋಟಿ ನೀಡಿ ಸೋಲನಪ್ಪಿದ್ದರು. ಈ ಬಾರಿ ಗೆದ್ದು ತೀರುವ ಹಠ ತೊಟ್ಟಿದ್ದಾರೆ.

ಬಿಜೆಪಿಗೆ ಮುಳಬಾಗಿಲಿನಲ್ಲಿ ಯಾವುದೇ ನೆಲೆ ಇಲ್ಲ. ಅದು ಶಿಗೇಹಳ್ಳಿ ಸುಂದರ್‌ ಎಂಬುವವರಿಗೆ ಟಿಕೆಟ್ ನೀಡಿದೆ. ಇನ್ನು ಕಳೆದ ಸಲ ಗೆದ್ದು ಶಾಸಕರಾಗಿದ್ದ ಎಚ್.ನಾಗೇಶ್‌ರವರು ಕಾಂಗ್ರೆಸ್ ಪಕ್ಷ ಸೇರಿದ್ದು, ಮಹದೇವಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಹಾಗಾಗಿ ಮುಳಬಾಗಿಲಿನಲ್ಲಿ ಸದ್ಯಕ್ಕೆ ಕಾಂಗ್ರೆಸ್‌ನ ಆದಿನಾರಾಯಣ ಮತ್ತು ಜೆಡಿಎಸ್‌ನ ಸಮೃದ್ಧಿ ಮಂಜುನಾಥ್‌ ನಡುವೆ ಹಣಾಹಣಿ ನಡೆಯುತ್ತಿದೆ.

ಅಂದಾಜು ಜಾತಿವಾರು ಮತಗಳು

ಕೋಲಾರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಂತೆ ಮುಳಬಾಗಿಲಿನಲ್ಲಿಯೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಸ್‌ಸಿ, ಎಸ್‌ಟಿ ಮತಗಳು ಸುಮಾರು 60,000ದಷ್ಟಿದ್ದು ಒಕ್ಕಲಿಗ ಮತಗಳು 50,000ದಷ್ಟಿವೆ. ಮುಸ್ಲಿಮರು 35,000ಕ್ಕೂ ಹೆಚ್ಚಿನ ಮತಗಳನ್ನು ಹೊಂದಿದ್ದಾರೆ ಎನ್ನಲಾಗಿದ್ದು ಇತರ ಹಿಂದುಳಿದ ವರ್ಗಗಳ 50,000 ಮತ್ತು ಉಳಿದ ಸಮುದಾಯಗಳ 10,000 ಮತಗಳಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಳಬಾಗಿಲು: ಪಕ್ಷೇತರ ಅಭ್ಯರ್ಥಿಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್ ಬೀಳಲಿದೆಯೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...