ಪ್ರಯಾಗ್‌ರಾಜ್‌ನ ಡಾ. ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎಲ್‌ಯು) ಕಾನೂನು ವಿಭಾಗದ ಮುಖ್ಯಸ್ಥರ ವಿರುದ್ಧ ದಲಿತ ವಿದ್ಯಾರ್ಥಿಯೊಬ್ಬರು ಮಾಡಿದ ಜಾತಿ ಆಧಾರಿತ ತಾರತಮ್ಯ ಮತ್ತು ಅವಮಾನದ ಆರೋಪಗಳ ಬಗ್ಗೆ ತನಿಖೆ ನಡೆಸಲು ಹಾಗೂ ವಿದ್ಯಾರ್ಥಿಯ ದೂರಿನ ಕುರಿತು ವಿಶ್ವವಿದ್ಯಾಲಯವು ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಪರಿಶೀಲಿಸಲು ಅಲಹಾಬಾದ್ ಹೈಕೋರ್ಟ್ ಇಬ್ಬರು ನ್ಯಾಯಾಂಗ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ.
ವಿದ್ಯಾರ್ಥಿಯ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಲು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ನ್ಯಾಯಾಲಯವು ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ವಿಭಾಗದ ಮುಖ್ಯಸ್ಥರನ್ನು (ಎಚ್‌ಒಡಿ) ಎಲ್ಲಾ ಆಡಳಿತಾತ್ಮಕ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಆದೇಶಿಸಿದೆ.
ಬಿಎ ಎಲ್ಎಲ್ ಬಿ (ಆನರ್ಸ್) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು, ಎಚ್‌ಒಡಿ ಮತ್ತು ಬಾಲಕರ ಹಾಸ್ಟೆಲ್‌ನ ವಾರ್ಡನ್ ತಮ್ಮ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಬಳಸಿ ಜಾತಿ ಆಧಾರಿತವಾಗಿ ಅವಮಾನಿಸಿದ್ದಾರೆ, ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ತನ್ನ ದೂರಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ವಿವಿ ಆಡಳಿತ ಮಂಡಳಿಯು ಎಚ್‌ಒಡಿಯನ್ನು ರಕ್ಷಿಸಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.
ಸಾಂವಿಧಾನಿಕ ಕಾನೂನು-I ಪರೀಕ್ಷೆಯಲ್ಲಿ ತಾನು ಟಾಪರ್ ಆಗಿದ್ದೆ ಎಂಬುದು ಸಂಬಂಧಪಟ್ಟ ಅಧ್ಯಾಪಕರಿಗೆ ತಿಳಿದಿದ್ದರಿಂದಲೇ ಆ ರೀತಿಯ ಹೇಳಿಕೆಯನ್ನು ತನಗೆ ನೀಡಲಾಗಿದೆ ಎಂದು ಅರ್ಜಿದಾರ ಆರೋಪಿಸಿದ್ದಾನೆ. ತನ್ನ ಜಾತಿಯ ಕಾರಣಕ್ಕಾಗಿ ತನ್ನ ಉತ್ತರ ಪತ್ರಿಕೆಗಳನ್ನು ಕಟ್ಟುನಿಟ್ಟಾದ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ. ಎಚ್‌ಒಡಿ ಈ ಹಿಂದೆಯೂ ಜಾತಿ ಮತ್ತು ಮೀಸಲಾತಿಗೆ ಸಂಬಂಧಿಸಿದಂತೆ ಅವಮಾನಕರ ಹೇಳಿಕೆಗಳನ್ನು ನೀಡಿದ್ದರು ಎಂದು ಆತ ಹೇಳಿಕೊಂಡಿದ್ದಾನೆ.
ಸೆಪ್ಟೆಂಬರ್ 16 ರಂದು ನೀಡಿದ ಆದೇಶದಲ್ಲಿ, ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರಿದ್ದ ಏಕಸದಸ್ಯ ಪೀಠವು ಈ ಆರೋಪಗಳು ಗಂಭೀರವಾಗಿದ್ದು, ನಿಷ್ಪಕ್ಷಪಾತ ಸಂಸ್ಥೆಯಿಂದ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದೆ. ಪ್ರಯಾಗ್‌ರಾಜ್ ಜಿಲ್ಲಾ ನ್ಯಾಯಾಲಯದ ಸ್ಮಾಲ್ ಕಾಸ್ ಕೋರ್ಟ್‌ನ ನ್ಯಾಯಾಧೀಶರು ಮತ್ತು ಪ್ರಯಾಗ್‌ರಾಜ್‌ನ ವಿಶೇಷ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಒಳಗೊಂಡ ಸಮಿತಿಯನ್ನು ರಚಿಸಿರುವ ನ್ಯಾಯಾಲಯವು, ತನಿಖೆ ನಡೆಸಿ ಸೆಪ್ಟೆಂಬರ್ 24 ರ ಮುಂದಿನ ವಿಚಾರಣೆಯ ಮೊದಲು ವರದಿ ಸಲ್ಲಿಸುವಂತೆ ಸೂಚಿಸಿದೆ.
ಮುಂದಿನ ಆದೇಶದವರೆಗೆ, ವಿಭಾಗದ ಮುಖ್ಯಸ್ಥರನ್ನು (ಎಚ್‌ಒಡಿ) ಎಲ್ಲಾ ಆಡಳಿತಾತ್ಮಕ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ.


