Homeಮುಖಪುಟವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನ; ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಸಮುದಾಯಗಳ ಮಾಹಿತಿ ತಾಣಗಳಾಗಿ ಬೆಳೆಯಬೇಕಿದೆ

ವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನ; ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಸಮುದಾಯಗಳ ಮಾಹಿತಿ ತಾಣಗಳಾಗಿ ಬೆಳೆಯಬೇಕಿದೆ

- Advertisement -
- Advertisement -

ಸಾರ್ವಜನಿಕ ಗ್ರಂಥಾಲಯಗಳು ’ಜನಸಾಮಾನ್ಯರ ವಿಶ್ವವಿದ್ಯಾಲಯಗಳು’ ಎಂಬ ಅಭಿಪ್ರಾಯವಿದೆ. ಸಮುದಾಯಗಳ ಸಾಂಸ್ಕೃತಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಮುಖ್ಯವಾದದ್ದು. ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಬೆಳವಣಿಗೆಗೆ ಒಂದು ಸುದೀರ್ಘ ಇತಿಹಾಸವಿದೆ. ಬರೋಡಾದ ಮಹಾರಾಜ ಸಯ್ಯಾಜಿರಾವ್ ಗಾಯುಕ್ವಾಡ್‌ರವರಿಂದ ಮೊದಲ್ಗೊಂಡು ಇಂದಿನ ರಾಷ್ಟ್ರೀಯ ಗ್ರಂಥಾಲಯಗಳ ಮಿಷನ್‌ವರೆಗೆ ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಬೆಳವಣಿಗೆಗಳಲ್ಲಿ ಅನೇಕ ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಗ್ರಂಥಾಲಯದ ಪಿತಾಮಹ ಎಂದು ಭಾರತದಲ್ಲಿ ಹೆಸರುವಾಸಿಯಾಗಿರುವ ಡಾ. ಎಸ್ ಆರ್ ರಂಗನಾಥನ್‌ರವರು ಭಾರತದಲ್ಲಿ ಗ್ರಂಥಾಲಯ ಚಳವಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನ ದೊಡ್ಡರೀತಿಯಲ್ಲಿ
ಅಭಿವೃದ್ಧಿಪಡಿಸಲು ಒಕ್ಕೂಟ ಸರ್ಕಾರಗಳು ಸಾರ್ವಜನಿಕ ಗ್ರಂಥಾಲಯ ಕಾಯಿದೆಗಳ ಮೂಲಕ ಸಾಕಷ್ಟು ಪ್ರಯತ್ನಗಳನ್ನು ಮಾಡಿವೆ. ಭಾರತದಲ್ಲಿ ಮೊದಲ ಬಾರಿಗೆ 1948ರಲ್ಲಿ ಮದ್ರಾಸ್ ಸಾರ್ವಜನಿಕ ಗ್ರಂಥಾಲಯ ಕಾಯಿದೆಯನ್ನು ತಮಿಳುನಾಡಿನಲ್ಲಿ ಜಾರಿಗೆ ತರಲಾಯಿತು. ತದನಂತರ ಕರ್ನಾಟಕ ಸೇರಿದಂತೆ
ಅನೇಕ ರಾಜ್ಯಗಳು ಸಾರ್ವಜನಿಕ ಗ್ರಂಥಾಲಯ ಕಾಯಿದೆಗಳನ್ನು ಜಾರಿಗೆ ತಂದಿವೆ. ಇಂದು ಭಾರತದಲ್ಲಿ ಸರಿಸುಮಾರು 47000ದಷ್ಟು ಸಾರ್ವಜನಿಕ ಗ್ರಂಥಾಲಯಗಳಿವೆ. ಅದರೂ ಕೂಡ ಸಾರ್ವಜನಿಕ ಗ್ರಂಥಾಲಯಗಳು ನಿರೀಕ್ಷಿಸಿದ ಮಟ್ಟದಲ್ಲಿ ಮತ್ತು ಆಧುನಿಕ ಜಗತ್ತಿನ ಜ್ಞಾನದ ಬಾಗಿಲಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸಲು ಅಥವಾ ಇವತ್ತಿನ ಡಿಜಟಲ್ ಮಾಹಿತಿ ಯುಗದ ಜೊತೆ ಹೆಜ್ಜೆ ಹಾಕಲು ಅನೇಕ ತೊಡರುಗಳನ್ನು ಎದುರಿಸುತ್ತಿದೆ.

ಇತ್ತೀಚಿಗೆ ಗ್ರಂಥಾಲಯಗಳಿಗೆ ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ನೀಡುತ್ತಿದ್ದ ಅನುದಾನಗಳನ್ನು ಕಡಿತಗೊಳಿಸಲಾಗುತ್ತಿದೆ. ಗ್ರಂಥಾಲಯ ಸೆಸ್ ಮೂಲಕ ಮಹಾನಗರಗಳ ನಗರಪಾಲಿಕೆಗಳು ಸ್ವೀಕರಿಸುವ ಗ್ರಂಥಾಲಯ ಕರ ಅಥವಾ ಸೆಸ್ ಹಣವನ್ನು ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗೆ ನೀಡದೇ ಅನೇಕ ನಗರಪಾಲಿಕೆಗಳು ಬಾಕಿ ಉಳಿಸಿಕೊಂಡಿರುವ ನಿದರ್ಶನಗಳು ನಮ್ಮ ಮುಂದಿವೆ. ಬೆಂಗಳೂರಿನ ಬಿಬಿಎಂಪಿ ಸರಿಸುಮಾರು 300 ಕೋಟಿ ಅಧಿಕ ಗ್ರಂಥಾಲಯ ಕರವನ್ನು ಬಾಕಿ ಇರಿಸಿಕೊಂಡಿದೆ. ಇನ್ನೂ ಕೆಲ ಉತ್ತರ ಭಾರತದ ರಾಜ್ಯಗಳು ಸಾರ್ವಜನಿಕ ಗ್ರಂಥಾಲಯ ಕಾಯಿದೆಯನ್ನು ಜಾರಿಗೊಳಿಸಿದರು ಸಹ ಯಾವುದೇ ಸೆಸ್ ಸಂಗ್ರಹಿಸದೆ ಗ್ರಂಥಾಲಯಗಳ ಅಭಿವೃದ್ದಿಗೆ ಹೆಚ್ಚು ನಿಗಾ ನೀಡಿಲ್ಲ.

ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವುದು ಮತ್ತು ಅದನ್ನು ಹಂಚುವುದು ಸಾಮಾನ್ಯವಾಗಿರುವ ಸಂಗತಿ. ಇದು ಸಮಾಜದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರಿದೆ. ಸುಳ್ಳು ಸುದ್ದಿಗಳ ಹಂಚುವಿಕೆಯ ಕಾರಣದಿಂದ ಸಮುದಾಯಗಳನ್ನು ಮತ್ತು ಅಪರಿಚಿತ ವ್ಯಕ್ತಿಗಳನ್ನ ಸಂಶಯಿಸುವ ಪ್ರಸಂಗಗಳು ನೆಡೆಯುತ್ತಿದ್ದು ಇದು ಗುಂಪು ಹತ್ಯೆಗಳಿಗೆ ಕಾರಣವಾಗಿವೆ. ಭಾರತದಲ್ಲಿ ವಾಟ್ಸಾಪ್‌ನಲ್ಲಿ ಹರಿದಾಡಿದ ಕೆಲ ಸುಳ್ಳು ಸುದ್ದಿಗಳ ಪರಿಣಾಮ ಕೆಲ ಅಪರಿಚಿತ ವ್ಯಕ್ತಿಗಳನ್ನು ಮಕ್ಕಳ ಅಪಹರಣಕಾರರು ಎಂದು ಭಾವಿಸಿ ಅವರನ್ನು ಹತ್ಯೆ ಮಾಡಿದ ತೀರ ಖಂಡನೀಯ ಕೃತ್ಯಗಳು ಸಂಭವಿಸಿದ್ದವು. ಇಂತಹ ಸುಳುಸುದ್ದಿಗಳ ಪ್ರಸರಣಕ್ಕೆ ಡಿಜಿಟಲ್ ಮಾಹಿತಿಯ ಸಾಕ್ಷರತೆಯ ಕೊರತೆ ಪ್ರಮುಖ ಕಾರಣ ಎಂದು ಅನೇಕ ವರದಿಗಳು ಉಲ್ಲೇಖ ಮಾಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಾರ್ವಜನಿಕ ಗ್ರಂಥಾಲಯಗಳು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ. ಸರ್ಕಾರ ಸಾರ್ವಜನಿಕರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಮತ್ತು ನಿಖರ ಮಾಹಿತಿಗಳನ್ನು ಬಳಸಲು ಉತ್ತೇಜಿಸಲು ಸಾರ್ವಜನಿಕ ಗ್ರಂಥಾಲಯಗಳನ್ನು ಮುನ್ನಲೆಗೆ ತರಬೇಕಾಗಿದೆ ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಅಮೆರಿಕ ಮತ್ತು ಮುಖ್ಯವಾಗಿ ಇತರ ಪಶ್ಚಿಮ ದೇಶಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಡಿಜಿಟಲ್ ಮಾಹಿತಿ ಸಾಕ್ಷರತೆ, ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚುವ ಮತ್ತು ಅವುಗಳ ಮೂಲವನ್ನು ತಿಳಿಯುವ ಬಗ್ಗೆ ಸ್ಥಳೀಯ ಸಮುದಾಯಗಳ ಜನ ಸಮೂಹಕ್ಕೆ ತರಬೇತಿಯನ್ನು ನೀಡುವಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲು ಬಳಸಲಾಗುತ್ತಿದೆ.

ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಸಮುದಾಯ ಮಾಹಿತಿ ಮತ್ತು ತಂತ್ರಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಚಿಂತನೆಗಳು ನಡೆದಿವೆಯಾದರೂ ಇವುಗಳಿಗೆ ಒಂದು ಸ್ಪಷ್ಟ ರೂಪ ಸಿಕ್ಕಿಲ್ಲ. ಇಂದು ಸಾರ್ವಜನಿಕ ಗ್ರಂಥಾಲಯಗಳನ್ನು ಕೇವಲ ಗ್ರಂಥಾಲಯಗಳ ದೃಷ್ಟಿಯಿಂದ ನೋಡದೆ ಅವುಗಳನ್ನು ಸಮುದಾಯದ ಮಾಹಿತಿ ಮತ್ತು ತಂತ್ರಜ್ಞಾನ ಕಲಿಕಾ ಕೇಂದ್ರಗಳಾಗಿ ಪರಿಭಾವಿಸಬೇಕಿದೆ. ಇದು ಜರೂರಾಗಿ ಆಗಬೇಕಾದ ಕೆಲಸವಾಗಿದ್ದು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ.

2015ರಲ್ಲಿ ಒಕ್ಕೂಟ ಸರ್ಕಾರ ಭಾರತದ ನಗರಾಭಿವೃದ್ದಿ ಯೋಜನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ತರಲು ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ತಂತ್ರಜ್ಞಾನಾಧಾರಿತ ದತ್ತಾಂಶಗಳನ್ನು ವ್ಯವಸ್ಥಿತ ರೀತಿಯಲ್ಲಿ ಬಳಸಿ ಜನರ ಜೀವನಮಟ್ಟವನ್ನು ಸುಧಾರಿಸುವ ಮತ್ತು ಸುಸ್ಥಿರ ಅಭಿವೃದ್ದಿಗೆ ಒತ್ತು ನೀಡುವ ಮಾತುಗಳಿವೆ. ಇಲ್ಲಿ ಮುಕ್ತ ಸಾರ್ವಜನಿಕ ಸ್ಥಳಗಳಾದ ಆಟದ ಮೈದಾನಗಳು, ಉದ್ಯಾನವನಗಳು ಮತ್ತು ಮನೋರಂಜನಾ ಸ್ಥಳಗಳ ಅಭಿವೃದ್ದಿಗೆ ವಿಶೇಷ ಒತ್ತು ನೀಡಲಾಗಿದೆ. ಅದರ ಬಹುಮುಖ್ಯ ಸಾರ್ವಜನಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದ ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಯನ್ನು ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಲ್ಲಿ ಪರಿಗಣಿಸದಿರುವುದು ಏಕೋ ತಿಳಿಯದಾಗಿದೆ.

ಗುಡಪಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಪ್ರಾರಂಭಿಸಿರುವ ಡಿಜಿಟಲ್ ಲೈಬ್ರರಿ

ಸಾರ್ವಜನಿಕ ಗ್ರಂಥಾಲಯಗಳನ್ನು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಮತ್ತು ಎರವಲು ನೀಡುವ ಕೇಂದ್ರಗಳೆಂಬ ಸೀಮಿತ ದೃಷ್ಟಿಕೋನದಲ್ಲಿ ಪರಿಭಾವಿಸದೇ ಅವುಗಳನ್ನು ಮುಕ್ತ ಜ್ಞಾನ ಕೇಂದ್ರಗಳೆಂದು ಪರಿಗಣಿಸಬೇಕಿದೆ. ಜೊತೆಗೆ ಅವುಗಳನ್ನು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಮನೋರಂಜನಾ ಸಾರ್ವಜನಿಕ ಸ್ಥಳಗಳಾಗಿ ಅಭಿವೃದ್ಧಿಪಡಿಸಬೇಕಿದೆ. ಸಾರ್ವಜನಿಕ ಗ್ರಂಥಾಲಯಗಳು ಸ್ಥಳೀಯ ಸಮುದಾಯಗಳ ಶೈಕ್ಷಣಿಕ ಮತ್ತು ಅರ್ಥಿಕ ಮೇಲ್‌ಚಲನೆಗೆ ಕೂಡ ದೊಡ್ಡಮಟ್ಟದಲ್ಲಿ ಕೊಡುಗೆ ನೀಡುತ್ತವೆ ಎನ್ನುವುದನ್ನು ನಾವು ಮರೆಯಬಾರದು. ವಿಶ್ವಸಂಸ್ಥೆ (ಯುನೆಸ್ಕೋ) ಕೂಡ 2030ರ ಒಳಗೆ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪಲು, ಮಾಹಿತಿಯ ಸುಲಭ ಪ್ರಸರಣ ಮತ್ತು ದೊರೆಯುವಿಕೆಗೆ ಸಾರ್ವಜನಿಕ ಗ್ರಂಥಾಲಯಗಳು ಬಹುಮುಖ್ಯ ಪಾತ್ರವಹಿಸುತ್ತದೆ ಎನ್ನುವುದನ್ನು ಒತ್ತಿಹೇಳಿದೆ. ಈ ದೃಷ್ಟಿಯಲ್ಲಿ ಕೇವಲ ಕಟ್ಟಡಗಳ ಮತ್ತು ರಸ್ತೆಗಳ ಕಾಮಗಾರಿಯನ್ನು ಸ್ಮಾರ್ಟ್ ಸಿಟಿಯ ಅಭಿವೃದ್ಧಿ ಎಂದು ಭಾವಿಸದೇ ಸಾರ್ವಜನಿಕ ಗ್ರಂಥಾಲಯಗಳನ್ನು ನಗರಗಳ ಪ್ರಮುಖ ಮುಕ್ತ ಸಾಂಸ್ಕೃತಿಕ ಮತ್ತು ಜ್ಞಾನಕೇಂದ್ರಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಇದೆ.

ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಹಿಂದುಳಿಯಲು ಪ್ರಮುಖ ಕಾರಣ ಅವುಗಳನ್ನು ಸೀಮಿತ ಅರ್ಥದಲ್ಲಿ ಗ್ರಹಿಸುತ್ತಿರುವುದು. ಗ್ರಂಥಾಲಯಗಳು ಪುಸ್ತಕಗಳನ್ನು ಎರವಲು ಪಡೆಯಲು ಮತ್ತು ದಿನಪತ್ರಿಕೆಗಳನ್ನು ಇಲ್ಲವೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಮುಕ್ತವಾಗಿರುವ ತಾಣ ಎಂದು ಮಾತ್ರ ನೋಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗ್ರಂಥಾಲಯಗಳು ಸ್ಥಳೀಯ ಸಮುದಾಯಗಳ ಅಗತ್ಯತೆಯಿಂದ ವಿಮುಖವಾಗಿರುವುದು ಮತ್ತು ಆಧುನಿಕ ಮಾಹಿತಿ ತಂತ್ರಜ್ಞಾನಗಳನ್ನು ಮಾಹಿತಿ ಪ್ರಸರಣ ವ್ಯವಸ್ಥೆಯ ಭಾಗವಾಗಿ ಆಳವಡಿಸಿಕೊಳ್ಳದಿರುವುದು. ಇದರಿಂದ ಜನ ಸಮುದಾಯಗಳನ್ನು ತನ್ನತ್ತ ಸೆಳೆಯಲು ಗ್ರಂಥಾಲಯಗಳು ಎಲ್ಲೋ ವಿಫಲವಾಗುತ್ತಿವೆ.

ಸ್ಥಳೀಯ ಜನರ ಮಾಹಿತಿಯ ಅಗತ್ಯತೆಯನ್ನು ಪೂರೈಸಲು ಪುಸ್ತಕಗಳ ಖರೀದಿಯನ್ನು ವಿಕೇಂದ್ರೀಕರಣಗೊಳಿಸುವ ಜರೂರತ್ತು ಬಹಳ ಇದೆ. ಇವತ್ತಿಗೆ ಗ್ರಂಥಾಲಯ ಇಲಾಖೆಯಡಿಯಲ್ಲಿ ಬರುವ ಬಹುತೇಕ ಜಿಲ್ಲಾ ಮತ್ತು ನಗರ ಗ್ರಂಥಾಲಯಗಳಿಗೆ ನಡೆಯುವ ಪುಸ್ತಕಗಳ ಖರೀದಿಯನ್ನು ಗ್ರಂಥಾಲಯ ಇಲಾಖೆ ರಾಜ್ಯ ಮಟ್ಟದಲ್ಲೇ ಮಾಡುವುದು. ಇದರಿಂದಾಗಿ ಸ್ಥಳೀಯ ಜನಸಮುದಾಯಗಳಿಗೆ ಅಗತ್ಯವಿರುವ ಪುಸ್ತಕಗಳು ಮತ್ತು ಮಾಹಿತಿಯನ್ನು ಒದಗಿಸಲು ಸಾರ್ವಜನಿಕ ಗ್ರಂಥಾಲಯಗಳು ವಿಫಲವಾಗಿವೆ. ಇದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲಿ ಪುಸ್ತಕಗಳ ಖರೀದಿಗೆ ಅವಕಾಶ ಕಲ್ಪಿಸುವುದರ ಜೊತೆಗೆ ಸ್ಥಳೀಯ ಗ್ರಂಥಾಲಯ ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ತಕ್ಷಣ ಒದಗಿಸುವ ವ್ಯವಸ್ಥೆಯನ್ನು ಭಾರತದ ಗ್ರಂಥಾಲಯಗಳಲ್ಲಿ ಮಾಡಬೇಕಿದೆ.

ವಿಕೇಂದ್ರೀಕರಣದ ಪರಿಣಾಮ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಬರುವ ಗ್ರಾಮ ಪಂಚಾಯಿತ್‌ಗಳಲ್ಲಿ ಗ್ರಂಥಾಲಯಗಳಿಗೆ ಹೊಸ ಕಾಯಕಲ್ಪ ಸಾಧ್ಯವಾಗುತ್ತಿದೆ. ಕರ್ನಾಟಕದ ಅನೇಕ ಗ್ರಾಮ ಪಂಚಾಯತ್ ಗ್ರಂಥಾಲಯಗಳು ಕೋವಿಡ್ ಕಾಲದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತವಾಗದಂತೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ಕೇರಳ ರಾಜ್ಯದಲ್ಲಿ ಕೂಡ ಸ್ಥಳೀಯ ಪಂಚಾಯತಿಗಳಿಗೆ ಗ್ರಂಥಾಲಯದ ನಿರ್ವಹಣೆಯ ಹೊಣೆ ಇರುವುದರಿಂದ ಅತಿ ಪುಟ್ಟ ರಾಜ್ಯವಾದ ಕೇರಳದಲ್ಲಿ ಇಂದು ಅತಿ ಹೆಚ್ಚು ಪಂಚಾಯತ್ ಗ್ರಂಥಾಲಯಗಳಿವೆ.

ಇದರ ಜೊತೆಗೆ ತಂತ್ರಜ್ಞಾನದ ಅಳವಡಿಕೆಯಿಂದ ಕ್ಷಣಾರ್ಧದಲ್ಲಿ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳ ಮತ್ತು ಮಾಹಿತಿಯ ವಿವರಗಳನ್ನು ಪಡೆಯುವ ವ್ಯವಸ್ಥೆ ರೂಪಿಸಬೇಕಿದೆ. ಬಹುತೇಕ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಆನ್‌ಲೈನ್ ಕ್ಯಾಟಲಾಗ್‌ಗಳು ಇವತ್ತಿಗೂ ಸಿಗುವುದಿಲ್ಲ. ಗ್ರಂಥಾಲಯಗಳ ಆನ್‌ಲೈನ್ ಪುಸ್ತಕಗಳ ಪಟ್ಟಿ ಜೊತೆಗೆ ಉತ್ತಮ ಸಮುದಾಯ ಸ್ನೇಹಿ ಗ್ರಂಥಾಲಯ ವೆಬ್‌ತಾಣಗಳನ್ನು ಅಭಿವೃದ್ಧಿಪಡಿಸಬೇಕಿದೆ. ಈ ವೆಬ್‌ತಾಣಗಳ ಮೂಲಕ ಸರ್ಕಾರದ ಮಾಹಿತಿಗಳನ್ನು ಮತ್ತು ಜನಸಾಮಾನ್ಯರಿಗೆ ಲಭ್ಯವಿರುವ ಸೇವೆಗಳ ಮಾಹಿತಿಯನ್ನು ಒದಗಿಸುವ ವ್ಯವಸ್ಥೆ ಮಾಡಬಹುದು. ವಿಶೇಷ ತುರ್ತು ಸಂದರ್ಭಗಳಲ್ಲಿ ಇವುಗಳನ್ನು (ಉದಾಹರಣೆಗೆ: ಕೋವಿಡ್ ರೋಗಕ್ಕೆ ಸಂಬಂಧಿಸಿದ ಆರೋಗ್ಯ ಮಾಹಿತಿ) ಮಾಹಿತಿ ಕೇಂದ್ರಗಳಾಗಿ ಪರಿವರ್ತಿಸಬಹುದಾಗಿದೆ.

ಗದಗಿನ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಆನ್‌ಲೈನ್ ಕಲಿಕೆಯಲ್ಲಿ ವಿದ್ಯಾರ್ಥಿಗಳು

ಕೊರೊನಾ ಕಾಲದಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್ ಲೈಬ್ರರಿ ಸೇವೆಯನ್ನು ಪ್ರಾರಂಭ ಮಾಡಿತ್ತು. ಇದರ ಮೂಲಕ ಜನಸಾಮಾನ್ಯರು ಪುಸ್ತಕಗಳನ್ನು ಪಿಡಿಎಫ್ ಮಾದರಿಯಲ್ಲಿ ಓದುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದು ಕೇವಲ ಪಿಡಿಎಫ್ ಮಾದರಿಗಳಿಗೆ ಸೀಮಿತವಾಗಬೇಕಿಲ್ಲ. ಸಾರ್ವಜನಿಕ ಗ್ರಂಥಾಲಯಗಳು ಇ-ಬುಕ್ಸ್, ಆಡಿಯೋ ಪುಸ್ತಕಗಳು ಮತ್ತು ಇತರ ಮಾದರಿಯಲ್ಲಿ ಪುಸ್ತಕಗಳನ್ನು ಓದುವ ವ್ಯವಸ್ಥೆ ಒದಗಿಸಬೇಕು. ಜೊತೆಗೆ ವೆಬ್‌ತಾಣಗಳ ಮೂಲಕ ಪುಸ್ತಕಗಳನ್ನು ಎರವಲು ಪಡೆಯಲು ಮತ್ತು ನವೀಕರಿಸುವ ವ್ಯವಸ್ಥೆ ಮಾಡಬಹುದು. ಅಮೆರಿಕ ಮತ್ತು ಇನ್ನೂ ಹಲವು ಮುಂದುವರೆದ ದೇಶಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಇ-ಬುಕ್ಸ್ ರೀಡರ್‌ಗಳನ್ನು (ಉದಾ: ಕಿಂಡಲ್ ಇ-ಬುಕ್ಸ್ ರೀಡರ್) ಆಡಿಯೋ ಪುಸ್ತಕಗಳನ್ನು ಕೇಳಲು ಹೆಡ್ ಪೋನ್‌ಗಳನ್ನು ಎರವಲು ನೀಡುವ ವ್ಯವಸ್ಥೆ ಇದೆ. ಮಕ್ಕಳಿಗೆ ವಿಶೇಷ ಗ್ರಂಥಾಲಯ ಸೇವೆಗಳನ್ನು ನೀಡುವ, ಓದುವ ಆಟವಾಡುವ, ಅಲ್ಲೇ ವಿರಮಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ನಮ್ಮ ದೇಶದಲ್ಲಿ ಕೂಡ ಗ್ರಂಥಾಲಯದತ್ತ ಜನರನ್ನು ಸೆಳೆಯಲು ಇಂತಹ ಆಧುನಿಕ ಸೇವೆಗಳನ್ನು ಪರಿಚಯಿಸಬೇಕಾಗಿದೆ.

ಭಾರತದ ಸಾರ್ವಜನಿಕ ಗ್ರಂಥಾಲಯಗಳಿಗೆ ಸ್ಪಷ್ಟ ಕಾಯಕಲ್ಪ ನೀಡಬೇಕಾದರೆ ಗ್ರಂಥಾಲಯಗಳಿಗೆ ಸೂಕ್ತ ಹಣಕಾಸಿನ ನೆರವನ್ನು ಸರ್ಕಾರಗಳು ಒದಗಿಸಬೇಕು. ಜಗತ್ತಿನ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗೆ ವೆಚ್ಚ ಮಾಡುತ್ತಿರುವ ಹಣ ಏನೇನು ಸಾಲದು. ಕೇವಲ 7 ಪೈಸೆಯಷ್ಟು ವಾರ್ಷಿಕ ತಲಾ ವೆಚ್ಚವನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ಭಾರತದಲ್ಲಿ ವಿನಿಯೋಗಿಸಲಾಗುತ್ತಿದೆ. ಅದೇ ಶೇಕಡಾ 95.6%ರಷ್ಟು ಜನರಿಗೆ ಸಾರ್ವಜನಿಕ ಗ್ರಂಥಾಲಯದ ಸೌಲಭ್ಯವನ್ನು ಒದಗಿಸುತ್ತಿರುವ ಅಮೆರಿಕದಲ್ಲಿ ಗ್ರಂಥಾಲಯಗಳ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವ ವಾರ್ಷಿಕ ತಲಾ ವೆಚ್ಚ 2500 ರೂಪಾಯಿಗಳು (35.96$). ಆಧುನಿಕ ಸೇವಾ-ಸೌಲಭ್ಯಗಳನ್ನು ಪರಿಚಯಿಸಲು ಮತ್ತು ನಿರಂತರ ಕಲಿಕಾ ಜ್ಞಾನ ಕೇಂದ್ರಗಳಾಗಿ ಭಾರತದಲ್ಲಿನ ಸಾರ್ವಜನಿಕ ಗ್ರಂಥಾಲಯಗಳನ್ನ ಪರಿವರ್ತಿಸಲು ಅವುಗಳಿಗೆ ನಿರಂತರ ಅರ್ಥಿಕ ನೆರವಿನ ಅವಶ್ಯಕತೆ ಇದೆ ಎನ್ನುವುದನ್ನು ಸಾರ್ವಜನಿಕ ಗ್ರಂಥಾಲಯಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಬೆಂಗಳೂರಿನ ಪ್ರದೀಪ್ ಬಾಲಾಜಿಯವರ ಅಭಿಪ್ರಾಯವಾಗಿದೆ.

ಸಾರ್ವಜನಿಕ ಗ್ರಂಥಾಲಯಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗಿಲ್ಲ, ಅವು ಸಮುದಾಯದ ಮಾಹಿತಿ ಮತ್ತು ಜ್ಞಾನ ಕೇಂದ್ರಗಳು, ಸಾಂಸ್ಕೃತಿಕ, ಮನೋರಂಜನಾ ತಾಣಗಳು ಮತ್ತು ನಿರಂತರ ಕಲಿಕಾ ಕೇಂದ್ರಗಳು. ಎಲ್ಲಾ ಧರ್ಮದ ಜಾತಿಯ ಮತ್ತು ಎಲ್ಲಾ ವಯಸ್ಸಿನ ಜನರು ಪರಸ್ಪರ ಮುಕ್ತ ಸಂವಹನಕ್ಕಾಗಿ ಬಳಸಬಹುದಾದ ಪ್ರದೇಶ
ಗ್ರಂಥಾಲಯ. ಎಲ್ಲ ಸಮುದಾಯದ ಜನರು ವಿಶಾಲ ಅರಿವಿನ ಮನೋಭಾವವನ್ನು ಬೆಳೆಸಿಕೊಳ್ಳಲು ಮುಕ್ತ ಪ್ರಜಾಸತ್ತಾತ್ಮಕ ಸ್ಥಳಗಳಾದ ಸಾರ್ವಜನಿಕ ಗ್ರಂಥಾಲಯಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ.

ವಸಂತ ರಾಜು ಎನ್

ವಸಂತ ರಾಜು ಎನ್
ಪ್ರಸ್ತುತ ತಲಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ದಹಿಸುತ್ತಿರುವ ಕೋಮು ವಿಷಮತೆಗೆ ಮಠಾಧೀಶರುಗಳ ತುಪ್ಪ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...