Homeಕರ್ನಾಟಕತುಳುನಾಡಿನ ಮಸೀದಿಗಳು ದ್ರಾವಿಡಶೈಲಿಯಲ್ಲಿ ಯಾಕಿದೆ? ತುಳುನಾಡಿನ ಇತಿಹಾಸವೇನು? ಮಾಧ್ಯಮಗಳ ಸುಳ್ಳುಗಳೇನು?

ತುಳುನಾಡಿನ ಮಸೀದಿಗಳು ದ್ರಾವಿಡಶೈಲಿಯಲ್ಲಿ ಯಾಕಿದೆ? ತುಳುನಾಡಿನ ಇತಿಹಾಸವೇನು? ಮಾಧ್ಯಮಗಳ ಸುಳ್ಳುಗಳೇನು?

- Advertisement -
- Advertisement -

ಟಿವಿ9 ಕನ್ನಡ, ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ಕನ್ನಡದ ಮಾಧ್ಯಮಗಳು ದಕ್ಷಿಣ ಕನ್ನಡದ ಗಂಜಿಮಠದ ಬಳಿಯ ಮಳಲಿ ಪೇಟೆಯಲ್ಲಿರುವ ಮಸೀದಿಯೊಂದರಲ್ಲಿ ಹಿಂದೂ ದೇವಾಲಯ ಪತ್ತೆಯಾಗಿದೆ ಎಂಬ ಸುದ್ದಿಯನ್ನು ವರದಿ ಮಾಡಿವೆ. ಇತಿಹಾಸ ಶಿಸ್ತುಬದ್ಧ ಅಧ್ಯಯನ ಕ್ರಮವನ್ನು ಬಯಸುವ ಚರಿತ್ರೆ ಕೋಮುವಾದಕ್ಕೆ ಅಫೀಮಾಗಿ ನೀಡುವುದರಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಇದನ್ನು ಕನ್ನಡದ ಮಾಧ್ಯಮಗಳು ಸಾಬೀತು ಮಾಡಿವೆ. ತಮಗೆ ಇರುವ ಚರಿತ್ರೆಯ ಬಗೆಗಿನ ಕಳಪೆ ಜ್ಞಾನವನ್ನು ಓದುಗರ ತಲೆಗೆ ತುಂಬಿಸಿವೆ.

ಕನ್ನಡದ ಮಾಧ್ಯಮಗಳು ಎಷ್ಟು ಹೀನಾಯ ಸ್ಥಿತಿಗೆ ತಲುಪಿವೆ ಎಂದರೆ ವಾಟ್ಸಪ್, ಫೇಸ್ಬುಕ್ ಗಳಲ್ಲಿ ಬರುವ ಪೋಸ್ಟ್‌ಗಳನ್ನು ಸುದ್ದಿ ಎಂದು ಪ್ರಕಟಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತುಳುನಾಡು ಎಂದು ಕರೆಯಲ್ಪಡುವ ಐತಿಹಾಸಿಕವಾಗಿ ಈಗಿನ ಉಡುಪಿಯ ಗಂಗೊಳ್ಳಿಯಿಂದ ಕಾಸರಗೋಡಿನವರೆಗೆ ಇರುವ ಈ ಭೂಭಾಗಕ್ಕೆ ಒಂದು ಸುಧೀರ್ಘ ಇತಿಹಾಸವಿದೆ. ಪೋರ್ಚುಗೀಸ್‌ ಪ್ರವಾಸಿ ದುಆರ್ತೆ ಬರ್ಬೋಸ ತುಳುನಾಡನ್ನು ಉತ್ತರದ ಹೊನ್ನಾವರದಿಂದ ದಕ್ಷಿಣದ ಪಯಸ್ವಿನಿಯವರೆಗೆ ಎಂದು ಗುರುತಿಸಿದ್ದಾರೆ. ತಮಿಳು ಸಂಗಂ ಸಾಹಿತ್ಯದಲ್ಲಿ ತುಳುನಾಡನ್ನು ನನ್ನನ್‌ ಎಂಬ ರಾಜ ಆಳುತ್ತಿದ್ದ ಎಂದು ಉಲ್ಲೇಖವಿದೆ.

ಕೆ.ಜಿ ಶೇಷ ಅಯ್ಯರ್‌ ತಮ್ಮ “ಚೇರಾ ಕಿಂಗ್‌‌ಡಂ ಆಫ್‌ ಅಂಗಂ ಪಿರೆಡ್‌”ನಲ್ಲಿ ನನ್ನನ್‌ ಬನವಾಸಿಯ ಕದಂಬ ವಂಶದವ ಎಂದು ಗುರುತಿಸುತ್ತಾರೆ. 12ನೇ ಶತಮಾನದ ನಯಸೇನನ ಧರ್ಮಾಮೃತದಲ್ಲಿ ತುಳುನಾಡಿನ ಉಲ್ಲೇಖವಿದೆ. ಎಂಟನೇ ಶತಮಾನದ ಪಲ್ಲವ ರಾಜ ಎರಡನೇ ನಂದಿವರ್ಮನ್‌‌ನ ದತ್ತಿ ಶಾಸನವೊಂದರಲ್ಲಿ ತುಳುವಿನ ಮೊದಲ ಶಾಸನ ಉಲ್ಲೇಖ ಸಿಗುತ್ತದೆ.

ಬೇಕಲ್ ಕೋಟೆ, ಕಾಸರಗೋಡು ಜಿಲ್ಲೆ, ಕೇರಳ (ಇದು ತುಳುನಾಡಿನ ವ್ಯಾಪಾರಿ ಕೇಂದ್ರವಾಗಿತ್ತು) 

ಇಲ್ಲಿ ಉಲ್ಲೇಖವಾಗಿರುವ ತುಳುನಾಡು ಇಂದಿನ ಮೇರೆಗಳನ್ನು ಮೀರಿ ವಿಸ್ತರಿಸಿತ್ತು. ತುಳುನಾಡು ರಾಜಕೀಯವಾಗಿ ತುಳುಭಾಷಿಕ ಪ್ರದೇಶಗಳನ್ನು ಮಾತ್ರವಲ್ಲ ಕನ್ನಡ ಭಾಷಿಕ ಪ್ರದೇಶಗಳನ್ನೂ ಒಳಗೊಂಡಿತ್ತು. ಸುಮಾರು 250 ಕಿ.ಮೀ ವಿಸ್ತಾರವಾದ ಕರಾವಳಿಯನ್ನು ಹೊಂದಿದ್ದ ತುಳುನಾಡಿಗೆ ಸಾಗರ ವ್ಯಾಪಾರವೇ ಮುಖ್ಯ ಆರ್ಥಿಕ ಮೂಲ. ಕರ್ನಾಟಕವನ್ನಾಳಿದ ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯ ನಗರದ ಅರಸರು, ಕೆಳದಿ ನಾಯಕರು- ಇವರು ಯಾರೂ ತುಳುನಾಡನ್ನು ಆಳಿದ ಆಳುಪರ ಮತ್ತು ಇತರ ಸಣ್ಣ ರಾಜ ಮನೆತನಗಳ ಜೊತೆಗೆ ವೈರತ್ವವನ್ನು ಬೆಳೆಸಲಿಲ್ಲ. ಯಾಕೆಂದರೆ ಈ ರಾಜವಂಶಗಳಿಗೆ ಅರಬ್ಬೀ ಕಡಲಿನ ಮೂಲಕ ವ್ಯಾಪಾರ ನಡೆಸಬೇಕಿತ್ತು.

ತುಳುನಾಡನ್ನು ಆಳಿದ ಆಳುಪರ ಮೊದಲ ಉಲ್ಲೇಖ ಇರುವ ಕ್ರಿ.ಶ 420ರ ಹಲ್ಮಿಡಿ ಶಾಸನದಲ್ಲಿ ಬರುವ ಆಳುಪ ಗಣ ಪಶುಪತಿ ಕದಂಬರ ರಾಜ ಕಾಕುಸ್ಥವರ್ಮನ ಮಗಳು ಲಕ್ಷ್ನಿಯನ್ನು ಮದುವೆಯಾಗಿದ್ದ. ಬನವಾಸಿ ಕದಂಬರ ಅಂತ್ಯದ ನಂತರ ಪ್ರಭಾವಿಗಳಾದ ಬಾದಾಮಿಯ ಚಾಲುಕ್ಯರೂ ಆಳುಪರ ಜೊತೆಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದರು. ಚಾಲುಕ್ಯ ದೊರೆ ಕೀರ್ತಿವರ್ಮನ ತಮ್ಮ ಮಂಗಳೇಶನ ವಿವಾಹವು ಆಳುಪ ರಾಜಕುಮಾರಿ ಕದಂಬ ಮಹಾದೇವಿಯೊಂದಿಗೆ ನಡೆಯಿತು. ಆಳುಪ ದೊರೆ ಒಂದನೇ ಆಳುವರಸ ಗುಣಸಾಗರನ ಮಗ ಚಿತ್ರವಾಹನನು ಚಾಲುಕ್ಯ ರಾಜಕುಮಾರಿ ಕುಂಕುಮದೇವಿಯನ್ನು ವಿವಾಹವಾಗುತ್ತಾನೆ, ಹತ್ತನೇ ಶತಮಾನದಲ್ಲಿ ಹೊಂಬುಚ್ಛದ ಸಾಂತರ ರಾಜ ಚಾಗಿ ಸಾಂತರ ಆಳುಪರ ರಣಂಜಯನ ಮಗಳಾದ ಎಂಜಲದೇವಿಯನ್ನು ಮದುವೆಯಾಗುತ್ತಾನೆ.

ಈ ಎಲ್ಲಾ ವೈವಾಹಿಕ ಸಂಬಂಧಗಳು ಮಂಗಳೂರನ್ನು ಆಳುತ್ತಿದ್ದ ಆಳುಪರ ಸುಪರ್ಧಿಯಲ್ಲಿದ್ದ ಕಡಲನ್ನು ತಮ್ಮ ವ್ಯವಹಾರಕ್ಕೆ ಬಳಸಿಕೊಳ್ಳುವ ಉದ್ದೇಶದಿಂದಲೂ ನಡೆದಿದೆ. ಹೀಗಿರುವಾಗ ಕಡಲಿನ ಮೂಲಕ ತುಳುನಾಡು ಸಾವಿರಾರು ವರ್ಷಗಳಿಂದಲೇ ಚೀನಾ, ಈಜಿಪ್ಟ್‌, ತ್ಸುನೇಷಿಯಾ, ಅರಬ್‌ ಮೊದಲಾದ ದೇಶಗಳ ಜೊತೆಗೆ ವ್ಯಾಪಾರ ನಡೆಸುತ್ತಿತ್ತು. ಹೀಗಾಗಿ ಯಹೂದಿ, ಚೀನೀ, ಮುಸ್ಲಿಂ ವ್ಯಾಪಾರಿಗಳ ಜೊತೆಗೆ ತುಳುನಾಡು ಎಂದಿಗೂ ದ್ವೇಷ ಸಾಧಿಸಲಿಲ್ಲ. ಬದಲಾಗಿ ಇವುಗಳ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಲು ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಿದವು. ವಿಜಯ ನಗರದ ಅರಸರು ತುಳುನಾಡನ್ನು ಬಾರ್ಕೂರು ಮತ್ತು ಮಂಗಳೂರು ಎಂದು ವಿಭಾಗಿಸಿದರು. ಈ ಎರಡೂ ಕೇಂದ್ರಗಳಿಂದ ವ್ಯಾಪಾರ ವಹಿವಾಟು ನಡೆಯುತ್ತಿದ್ದವು.

ಮಂಗಳೂರಿನ ಝೀನತ್‌ ಭಕ್ಷ್‌‌(ಬ್ಯಾರಿಗಳ ಬೆಲಿಯೊ ಪಳ್ಳಿ)

ಬಸ್ರೂರು ತುಳುನಾಡಿನ ಪ್ರಮುಖ ವ್ಯಾಪಾರ ಕೇಂದ್ರ. ಕ್ರಿ.ಶ 1514 ರಲ್ಲಿ ಡ್ವಾರ್ಟ್‌ ಬರ್ಬೋಸಾ, “ಬಸ್ರೂರಿಗೆ ಮಲಬಾರ್‌, ಜುಬೇರ್‌, ಏಡನ್‌ ಮುಂತಾದ ಭಾಗಗಳಿಂದ ಹಡಗುಗಳು ಬರುತ್ತಿದ್ದವು. ಹಂಗಾರಕಟ್ಟೆ ಬಾರ್ಕೂರು ಬಂದರು ವಿಜಯನಗರದ ಆಡಳಿತ ಕೇಂದ್ರಗಳಲ್ಲಿ ಪ್ರಮುಖವಾದದ್ದು. ಸದಾ ಮುಸ್ಲಿಂ ವ್ಯಾಪಾರಿಗಳಿಂದ ತುಂಬಿ ಕೊಂಡಿರುತ್ತಿತ್ತು” ಎಂದು ದಾಖಲಿಸುತ್ತಾರೆ.

ಹದಿನೈದನೇ ಶತಮಾನದಲ್ಲಿ ತುಳುನಾಡಿನ ವಾಣಿಜ್ಯ ಕೇಂದ್ರ ಮಂಗಳೂರಿನ ಕೊಡಿಯಾಲ್‌ ಬಂದರು ಯೆಮನ್‌, ಫರ್ಷಿಯಾ ವ್ಯಾಪಾರಿಗಳಿಂದ ತುಂಬಿಹೋಗಿತ್ತು. ಕ್ರಿ.ಶ 1514 ರಲ್ಲಿ ತುಳುನಾಡಿಗೆ ಬಂದಿದ್ದ ಇಬ್ನ್‌ ಬತೂತ ಕೊಡಿಯಾಲ ಒಂದು ದೊಡ್ಡ ಪಟ್ಟಣವೆಂದೂ ಇದು ಮೂರ್‌‌ಗಳೆಂದು ಕರೆಯಲ್ಪಡುತ್ತಿದ್ದ ಬ್ಯಾರಿಗಳೂ ಜೆಂಟೈಲ್‌‌ಗಳೂ ಭತ್ತ ಹಾಗೂ ಕರಿಮೆಣಸು ವ್ಯಾಪಾರ ಮಾಡುತ್ತಿದ್ದ ಬಗ್ಗೆ ಬರೆದಿದ್ದಾರೆ.

ಹೀಗೆ ಬೇರೆ ಬೇರೆ ಭಾಗಗಳಿಂದ ವ್ಯಾಪಾರಕ್ಕೆ ಬರುತ್ತಿದ್ದ ಯಾವುದೇ ಸಮುದಾಯಗಳನ್ನೂ ತುಳುನಾಡಿನ ರಾಜರು ಪುರಸ್ಕರಿಸದೇ ಬಿಡುತ್ತಿರಲಿಲ್ಲ. ಸಾಂಸ್ಕೃತಿಕವಾಗಿ, ಆಡಳಿತದಲ್ಲಿ ಚೌಟಾದಿ ಇತರ ಅರಸರು ವಿಶೇಷ ಸ್ಥಾನವನ್ನು ನೀಡಿದ್ದಾರೆ. ಮುಸ್ಲಿಂ ವ್ಯಾಪಾರಿಗಳಿಗೆ ನಮಾಜು ಮಾಡಲು ಮಸೀದಿಗಳನ್ನೂ ಕಟ್ಟಿ ಕೊಟ್ಟಿದ್ದಾರೆ. ಹೀಗಾಗಿ ತುಳುನಾಡಿನ ಪ್ರಾಚೀನ ಮಸೀದಿಗಳು ದ್ರಾವಿಡ ವಾಸ್ತುಶೈಲಿಯಲ್ಲಿವೆ.

ಭಾರತದ ಮೊದಲ ಮಸೀದಿ (ಚೇರಮಾನ್ ಜುಮ್ಮಾ ಮಸೀದಿ, ಕೇರಳ)

ಮಂಗಳೂರಿನ ಝೀನತ್‌ ಭಕ್ಷ್‌ ಜುಮಾ ಮಸೀದಿ ಇಂತಹ ಪ್ರಾಚೀನ ಮಸೀದಿಗಳಲ್ಲಿ ಒಂದು. ಕ್ರಿ.ಶ 644 ರಲ್ಲಿ ಕಟ್ಟಿದ ಈ ಮಸೀದಿ ಭಾರತದ ಮೂರನೇ ಪ್ರಾಚೀನ ಮಸೀದಿ ಮತ್ತು ಕರ್ನಾಟಕದ ಮೊದಲ ಮಸೀದಿ. ಮಂಗಳೂರಿನ ಬಂದರಿನಲ್ಲಿರುವ ಈ ಮಸೀದಿಯನ್ನು “ಬೆಳಿಯ ಪಳ್ಳಿ” ಎಂದು ಕರೆಯುತ್ತಾರೆ. ಪ್ರವಾದಿ ಮಹಮ್ಮದರ ಜೀವನ ಕಾಲದಲ್ಲಿ ‘ಹಝರತ್‌ ಮಹಮ್ಮದ್‌ ಮಲಿಕ್‌ ಬಿನ್‌ ದೀನಾರ್‌’ ಎಂಬ ಪ್ರವಾದಿಯ ನೇರ ಸಂಗಾತಿಯೊಬ್ಬರು ಒಂದು ಅರಬ್‌ ವ್ಯಾಪಾರಿಗಳ ತಂಡದೊಂದಿಗೆ ಕೇರಳದ ಮಲಬಾರ್‌ ಹಾಗೂ ಕೋಡಂಗಲ್ಲೂರಿಗೆ ಬರುತ್ತಾರೆ.

ಇವರನ್ನು ಸ್ವಾಗತಿಸಿದ ರಾಜ ಚೆರುಮಾನ್‌ ಪೆರುಮಾಳ್‌ ವ್ಯಾಪಾರಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಸೀದಿ ಕಟ್ಟಲು ಭೂಮಿಯನ್ನೂ ನೀಡುತ್ತಾರೆ. ಹೀಗೆ ಮೊದಲ ಮಸೀದಿ ಚೆರುಮಾನ್‌ ಜುಮಾ ಮಸೀದಿ ತ್ರಿಶೂರ್‌‌ನ ಕೋಡಂಗಲ್ಲೂರಿನಲ್ಲಿ ಕ್ರಿ.ಶ 629 ರಲ್ಲಿ ನಿರ್ಮಾಣವಾಗುತ್ತದೆ. ಎರಡನೇಯ ಮಸೀದಿ ಮಾಲಿಕ್‌ ದಿನಾರ್‌ ಮಸೀದಿ ಕಾಸರಗೋಡಿನ ತಲಂಗರದಲ್ಲಿ ನಿರ್ಮಾಣವಾಗುತ್ತದೆ.

ಕ್ರಿ.ಶ 643, ಎಪ್ರಿಲ್‌ 18ರಂದು ಭಾರತದ ಮೂರನೇ ಮಸೀದಿ ಝೀನತ್‌ ಭಕ್ಷ್‌ ಮಸೀದಿ ಮಂಗಳೂರಿನಲ್ಲಿ ನಿರ್ಮಾಣವಾಗುತ್ತದೆ. ಮಾಲಿಕ್‌ ಬಿನ್‌ ಅಬ್ದುಲ್ಲಾ ಇದರ ಮೊದಲ ಖಾಝೀಯಾಗಿ ನೇಮಕವಾಗುತ್ತಾರೆ. ಹೀಗೆ ನಿರ್ಮಾಣವಾದ ಹತ್ತು ಮಸೀದಿಗಳಲ್ಲಿ ಬಾರ್ಕೂರಿನಲ್ಲಿ ಇದ್ದ ದೀನಾರ್‌ ಮಸೀದಿ ನಾಶವಾಗಿದೆ.

ಮಾಲಿಕ್ ದೀನಾರ್‌ ಮಸೀದಿ, ಕಾಸರಗೋಡ್‌

ಭಾರತಕ್ಕೆ, ಮುಖ್ಯವಾಗಿ ಕೇರಳ ಹಾಗೂ ತುಳುನಾಡಿಗೆ ಇಸ್ಲಾಂ ಪ್ರವಾದಿ ಪೈಗಂಬರರ ಕಾಲಘಟ್ಟದಲ್ಲಿಯೇ ಪ್ರವೇಶ ಪಡೆದಿತ್ತು. ಆದರೆ ಅರಬರು ಇಸ್ಲಾಂ ಸ್ವೀಕರಿಸುವ ಮೊದಲು ಸಬಯನ್‌ ಧರ್ಮವನ್ನು ಅನುಸರಿಸುತ್ತಿದ್ದಾಗಲೇ ತುಳುನಾಡಿನ ಜೊತೆಗೆ ವ್ಯಾಪಾರ ನಡೆಸುತ್ತಿದ್ದರು. ಮುಸ್ಲಿಮರಾದ ನಂತರವೂ ಅದನ್ನು ಮುಂದುವರಿಸಿದರು. ಆ ನಂತರ ಬಾರ್ಕೂರು, ಮಂಗಳೂರು, ಉಳ್ಳಾಲ, ಕಾಸರಗೋಡುಗಳಲ್ಲಿ ಮುಸ್ಲಿಂ ವರ್ತಕರು ತುಂಬಿಕೊಂಡಿದ್ದರು. ಅನೇಕರು ಸ್ಥಳೀಯ ಮಹಿಳೆಯರನ್ನು ಮದುವೆಯಾದರು. ಈ ಮೂಲಕ ಅನೇಕ ಮುಸ್ಲಿಂ ಸಮುದಾಯಗಳ ಹುಟ್ಟಿಗೆ ಕಾರಣರಾದರು. ಈ ಮೂಲಕ ಇಸ್ಲಾಂ ಭಾರತೀಯ ಧರ್ಮಗಳಲ್ಲಿ ಒಂದಾಯ್ತು.

ತುಳುನಾಡಿನಲ್ಲಿ ಇದ್ದ ಜಾತಿ ವ್ಯವಸ್ಥೆಯ ಕೆಳಸ್ತರದ ಸಮುದಾಯಗಳು ಇಸ್ಲಾಂ ಅನ್ನು ಸ್ವೀಕರಿಸಿದರು. ಇದಕ್ಕೆ ಮುಖ್ಯ ಕಾರಣ ಜಾತೀಯ ತಾರತಮ್ಯ. ಬಿಲ್ಲವರು, ಮೊಗವೀರರು ಮೊದಲಾದ ಸಮುದಾಯಗಳು ಇಸ್ಲಾಂ ಅನ್ನು ಸ್ವೀಕರಿಸಿದವು. ಬಂಟ ಮತ್ತು ಜೈನರೂ ಇಸ್ಲಾಂ ಸ್ವೀಕರಿಸಿದರು. ಅದು ಅವರಿಗೆ ಪ್ರತಿಷ್ಠೆಯಾಗಿತ್ತು.

12 ನೇ ಶತಮಾನದಲ್ಲಿ ಬೆನ್‌ ಇಜು ಎಂಬ ತ್ಸುನೇಷಿಯಾದ ಯಹೂದಿ ವ್ಯಾಪಾರಿಯೊಬ್ಬರು ‘ಆಶು’ ಎಂಬ ಮಂಗಳೂರಿನ ಗುಲಾಮಗಿರಿಗೆ ತಳ್ಳಲ್ಪಟ್ಟ ಹುಡುಗಿಯನ್ನು ಯಹೂದಿ ಧರ್ಮಕ್ಕೆ ಮತಾಂತರ ಮಾಡಿ ಮದುವೆಯಾಗುತ್ತಾರೆ, ಹೀಗೆ ಜಾತೀಯ ಅಸಮಾನತೆಗೆ ತುತ್ತಾದ ಅನೇಕರು ಇಸ್ಲಾಂ ಅನ್ನು ಸ್ವೀಕರಿಸಿದರು.

ಹೀಗೆ ಕಟ್ಟಲ್ಪಟ್ಟ ಮಸೀದಿಗಳು ಕಾಲಾಂತರದಲ್ಲಿ ಅನೇಕ ಬಾರಿ ನವೀಕರಣಗೊಂಡಿವೆ. ಇಂದು ಗಂಜಿಮಠದಲ್ಲಿ ಇರುವ ಮಳಲಿಯ ಮಸೀದಿಯೂ ದ್ರಾವಿಡ ಶೈಲಿಯಲ್ಲಿಯೇ ಇದೆ. ಆದರೆ ಇದು ದೇವಾಲಯಗಳ ವಾಸ್ತುಶಿಲ್ಪದ ಎಲ್ಲಾ ಲಕ್ಷಣಗಳನ್ನು ಹೊಂದಿಲ್ಲ. ಮಸೀದಿಯ ಮಟ್ಟಿಲುಗಳಲ್ಲಿ ವ್ಯಾಲಿಯಾಗಲೀ, ಗಜಲಕ್ಷ್ಮಿ, ಪೂರ್ಣ ಘಟ, ಪದ್ಮನಂದಿ, ಗಂಧರ್ವ ಯಾವುದೂ ಇಲ್ಲ. ಹಿಂದೂ ದೇವಾಲಯಗಳ ಕಂಬಗಳಲ್ಲಿ ಕಾಣುವ ವ್ಯಾಲಿ, ಕುಬೇರ, ಯಕ್ಷ, ನರಸಿಂಹ, ತೋರಣ, ಶಂಖ, ಚಕ್ರ, ನಾಗಬಂಧ, ಶೀವತ್ಸ ಕೆತ್ತನೆಗಳೂ ಇಲ್ಲ. ಬದಲಾಗಿ ಇಂಡೋ-ಸಾರ್ಸನಿಕ್‌(ಇಂಡೋ-ಇಸ್ಲಾಮಿಕ್‌) ಶೈಲಿಯಲ್ಲಿ ಕಾಣುವ ಹೂವಿನ ಕುಂಡ, ಬಳ್ಳಿಗಳು ಇವೆ.

ಈ ಮಸೀದಿಗಳನ್ನು ಕಟ್ಟಿದವರು ದ್ರಾವಿಡರೇ ಆಗಿರುವ ಕಾರಣ ಇವು ದ್ರಾವಿಡ ಶೈಲಿಯಲ್ಲಿಯೇ ಇವೆ. ಇವುಗಳು ತುಳುನಾಡಿನ ‘ಇಸ್ಲಾಂ ವಾಸ್ತುಶಿಲ್ಪ’!

ಈ ಮಸೀದಿಗಳು ದ್ರಾವಿಡ ಶೈಲಿಯಲ್ಲಿ ಇದ್ದರೆ 1820ರಲ್ಲಿ ಕೊಡಗಿನ ಹಾಲೇರಿ ವಂಶದ ರಾಜ 2ನೇ ಲಿಂಗರಾಜೇಂದ್ರ ನಿರ್ಮಿಸಿದ ಮಡಿಕೇರಿಯ ಓಂ ಕಾರೇಶ್ವರ ದೇವಾಲಯ ಗುಂಬಜ್ ಗಳನ್ನು ಹೊಂದಿರುವ ಇಂಡೋ ಸಾರ್ಸೆನಿಕ್ ಶೈಲಿಯಲ್ಲಿದೆ.

ಓಂಕಾರೇಶ್ವರ ದೇವಾಲಯ

ಮಂಗಳೂರಿನ ಬೆಲಿಯ ಪಳ್ಳಿ, ಕಾಸರಗೋಡಿನ ಮಸೀದಿ, ಪ್ರಖ್ಯಾತ ಭಾವೈಕ್ಯತೆಯ ಕೇಂದ್ರ ಅಜಿಲ ಮೊಗರು ಮಾತ್ರವಲ್ಲ ತುಳುನಾಡಿನ ಅನೇಕ ಮಸೀದಿಗಳು ಇದೇ ಶೈಲಿಯಲ್ಲಿವೆ. ಇವು ಹಿಂದೂಗಳು ದೇವಾಲಯಗಳಾಗಿ ಕಂಡು ಈ ಮಸೀದಿಗಳಿಗೆ ಹರಕೆ ಹೇಳಿಕೊಳ್ಳುತ್ತಿದ್ದರು ಮತ್ತು ಕಾಣಿಕೆ ಸಲ್ಲಿಸುತ್ತಿದ್ದರು. ಅಲ್ಲದೇ, ತಮ್ಮ ಒಡೆತನದ ಪ್ರದೇಶದಲ್ಲಿ ನಡೆಯುವ ಜಾತ್ರೆ, ನೇಮ ಮೊದಲಾದ ಆಚರಣೆಗಳಿಗೆ, ಪಟ್ಟ ಕಟ್ಟುವಾಗ ಕೂಡ ತುಳು ರಾಜ ವಂಶದವರು ಈ ಮಸೀದಿಗಳಿಗೆ ವಿಶೇಷ ಆಹ್ವಾನ ಗೌರವಿಸಿವೆ.

ಚರಿತ್ರೆಯನ್ನು ತಿರುಚುವ ಮತ್ತು ಕೋಮುವಾದಿ ಅಜೆಂಡಾಗಳಿಗೆ ಬಳಸುವ ಕ್ರಮ ಹೊಸತೇನಲ್ಲ. ಆದರೆ ಇದಕ್ಕೆ ತುಳುನಾಡಿನ ಇತಿಹಾಸ ಬಲಿಯಾಗಿಲ್ಲ. ತುಳು ನಾಡಿಗೆ ಚರಿತ್ರೆಯ ಅಧ್ಯಯನದ ದೊಡ್ಡ ಪರಂಪರೆ ಇದೆ. ಗಣಪತಿ ರಾವ್ ಐಗಳ, ಪೊಳಲಿ ಶೀನಪ್ಪ ಹೆಗ್ಗಡೆ, ಮಂಜೇಶ್ವರ ಗೋವಿಂದ ಪೈ, ಕಿಲ್ಲೆ ಮೊದಲಾದ ವಿದ್ವಾಂಸರು ಹಾಗೂ ಪಾದೂರು ಗುರುರಾಜ ಭಟ್, ಕೆ ವಿ ರಮೇಶ್, ಪ್ರೊ. ಭಾಸ್ಕರ ಆನಂದ ಸಾಲೆತ್ತೂರು ಮೊದಲಾದ ಇತಿಹಾಸ ತಜ್ಞರು ನಡೆಸಿರುವ ಸಂಶೋಧನೆಗಳು ನಮ್ಮ ಹಾದಿಯನ್ನು ಸುಗಮ ಮಾಡಿವೆ. ಕೋಮುವಾದಿ ಶಕ್ತಿಗಳು ಇತಿಹಾಸವನ್ನು ತಿರುಚಿ ಗಲಬೆ ಎಬ್ಬಿಸುವ ತಂತ್ರಗಳನ್ನು ಎಷ್ಟೇ ಮಾಡಿದರೂ ನಮ್ಮ ಹಿರಿಯರು ದಾಖಲಿಸಿದ ಚರಿತ್ರೆಯ ಮೂಲಕ ಉತ್ತರ ನೀಡಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಚರಣ್ ಐವರ್ನಾಡುರ, 2022, ಎಪ್ರಿಲ್ 22 ರ, “ತುಳುನಾಡಿನ ಮಸೀದಿಗಳು ದ್ರಾವಿಡಶೈಲಿಯಲ್ಲಿ ಯಾಕಿದೆ? ತುಳುನಾಡಿನ ಇತಿಹಾಸವೇನು? ಮಾಧ್ಯಮಗಳ ಸುಳ್ಳುಗಳೇನು?” ಎಂಬ ಬರಹ ಓದಿದೆ. ಮಂಗಳೂರಿನ ಝೀನತ್ ಭಕ್ಷ್ ಜುಮಾ ಮಸೀದಿ ಕ್ರಿ. ಶ. 644 ರಲ್ಲಿ ಕಟ್ಟಲ್ಪಟ್ಟಿತು ಎಂದು ದಾಖಲಿಸಿದ್ದಾರೆ.ಈ ಮಸೀದಿ ಭಾರತದ ಮೂರನೇ ಪ್ರಾಚೀನ ಮಸೀದಿ ಮತ್ತು ಕರ್ನಾಟಕದ ಮೊದಲ ಮಸೀದಿ ಎಂದು ದಾಖಲಿಸಿದ್ದಾರೆ!
    ಅರೇಬಿಯಾದಿಂದ ಪೂರ್ವ ದೇಶಗಳಿಗೆ ಮಸೀದಿ ಬಂದಿದ್ದೇ 8ನೇ ಶತಮಾನದಲ್ಲಿ ಎಂದು ದಾಖಲೆಗಳು ಸ್ಪಷ್ಟಪಡಿಸುತ್ತವೆ. ಹೀಗಿರುವಾಗ, ಮಂಗಳೂರಿನ ಝೀನತ್ ಭಕ್ಷ್ ಜುಮಾ ಮಸೀದಿ ಕ್ರಿ.ಶ 644 ರಲ್ಲಿ ಕಟ್ಟಿದ್ದು ಹೇಗೆ ಆಗಲು ಸಾಧ್ಯ?!?
    ಎಲ್ಲೋ ಕೊಂಡಿ ತಪ್ಪಿದೆ ಎನ್ನಿಸುತ್ತದೆ.

  2. D Ramappa ru kelida prashnege uttara needabekadudu gouri.com na kartavya , addarinda thada madodu beda adastu bega uttarisi, Naobba muslim nanna vishvasa Andre nanu charitreyannu odi tilida prakara barathakke ಕ್ರಿ.ಶ 629 ralli bandide Andre barathadalli modala maseedi nirmanagondaddu ಕ್ರಿ.ಶ 629 keralada kodungallurinalli, idu aithihasikavagi dakalegonda purave, Ramapparavru helida prakara arabiyadinda poorva deshagalige maseedi bandiddu 8 ne shathamanadalli anta nanu heege Andre ramapparavru helidantaha purave yenide adannu ide modala bari keltirodu hagondu paksha idre gouri.com ravru ramapparige naija ithihasavannu spastavagi thilisikodabeku. Nimma javabdari…

  3. ಉಡುಪಿ ಜಿಲ್ಲೆ ಬಾರ್ಕೂರಿನಲ್ಲಿ ಆರಂಭದ ಹತ್ತು ಮಸೀದಿಗಳಲ್ಲಿ ಬಾರ್ಕೂರಿನ ನಾಶವಾಗಿದೆ ಎಂದು ಬರೆಯಲಾಗಿದೆ. ಬಾರ್ಕೂರಿನಲ್ಲಿ 648 ಮಸೀದಿ ನಿರ್ಮಿಸಲಾಗಿತ್ತು ಅದು ಶಿಥಿಲಗೊಂಡಾಗ ಅದೇ ಸ್ಥಳದಲ್ಲಿ ಮಸೀದಿಯ ಪುನರ್ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಉದ್ಯಾವರ ಸಂಪಿಗೆ ನಗರದ ಮಸೀದಿ ಕೂಡಾ ಆರಂಭದ ಕಾಲದ್ದು ಎಂದು ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...