Homeಎಕಾನಮಿ2020-21ನೇ ಸಾಲಿನ ಆಯವ್ಯಯ ತುಂಬಾ ಪೇಲವವಾಗಿದೆ : ಮುರಳಿ ಕೃಷ್ಣ ಜಿ.ಆರ್‌

2020-21ನೇ ಸಾಲಿನ ಆಯವ್ಯಯ ತುಂಬಾ ಪೇಲವವಾಗಿದೆ : ಮುರಳಿ ಕೃಷ್ಣ ಜಿ.ಆರ್‌

ಇತರೆ ವೆಚ್ಚಗಳಲ್ಲಿ ಅತಿಹೆಚ್ಚಿನ ಹಣ ಇದ್ದು ಈ ಹಣವನ್ನು ಸಮಗ್ರವಾಗಿ ಬಳಸುವ ಅಗತ್ಯವಿದೆ. ತಪ್ಪಿದಲ್ಲಿ ಇದು “ಲಭ್ಯವಿರುವ ಹಣವನ್ನು ಹಂಚಿಕೆ ಮಾಡಿದ ಅಭಿವೃದ್ಧಿ ರಹಿತ ಬಜೆಟ್” ಮಾತ್ರ.

- Advertisement -
- Advertisement -

ರಾಜ್ಯ ಮತ್ತು ದೇಶದಲ್ಲಿನ ಆರ್ಥಿಕತೆ ಹಿಂಜರಿತ ಮತ್ತು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ಯಡಿಯೂರಪ್ಪನವರು ಗುರುವಾರ ಮಂಡಿಸಿದ 2020-21ನೇ ಸಾಲಿನ ಆಯವ್ಯಯ ತುಂಬಾ ಪೇಲವವಾಗಿದೆ. ಆರ್ಥಿಕ ಪ್ರಗತಿಯಲ್ಲಿ ಕುಂಠಿತ ಕಂಡಿರುವುದು ಮತ್ತು ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡದಿರುವುದು ಬಜೆಟ್‍ನಲ್ಲಿ ಕಣ್ಣು ಕುಕ್ಕುವಂತೆ ಕಾಣುತ್ತಿದೆ.

ರಾಜ್ಯದ ಆರ್ಥಿಕ ಪ್ರಗತಿ 2019-20ರಲ್ಲಿ ಶೇ.7.8ರಷ್ಟು ಇದ್ದದು 2020-21ರಲ್ಲಿ ಶೇ.6.8ಕ್ಕೆ ಇಳಿಮುಖ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಕೈಗಾರಿಕಾ ಕ್ಷೇತ್ರದ ಪ್ರಗತಿ 2018-19ರಲ್ಲಿ ಶೇ.5.6ರಷ್ಟು ಇದ್ದದು 2019-20ರಲ್ಲಿ ಶೇ.4.8ಕ್ಕೆ ಕುಸಿದಿದೆ. ರಾಜ್ಯದ ಬೊಕ್ಕಸಕ್ಕೆ ಅತಿಹೆಚ್ಚು ಆದಾಯ ತಂದುಕೊಡುತ್ತಿರುವ ಸೇವಾ ಕ್ಷೇತ್ರದ ಪ್ರಗತಿ 2018-19ರಲ್ಲಿ ಶೇ.9.8ರಷ್ಟು ಇದ್ದದು 2019-20ಕ್ಕೆ ಶೇ.7.9ಕ್ಕೆ ಇಳಿದಿದೆ. ಈ ಅಂಕಿಅಂಶಗಳನ್ನು ಗಮನಿಸಿದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹಿಂಜರಿತದ ಹಾದಿಯಲ್ಲಿರುವುದು ಕಾಣಲಿದೆ. ವ್ಯತಿರಿಕ್ತವಾದ ಈ ಅಂಶಗಳನ್ನು ಹಿಮ್ಮೆಟ್ಟಿ ಪ್ರಗತಿಯತ್ತ ಕೊಂಡೊಯ್ಯುವ ದೂರದೃಷ್ಟಿ, ಮುನ್ನೋಟ ಇರಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ ಮುಖ್ಯಮಂತ್ರಿಗಳು ಇಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಬಜೆಟ್‍ನಲ್ಲಿ ಆದಾಯ ಸಂಗ್ರಹಕ್ಕೂ ನಿರ್ದಿಷ್ಟ ಮತ್ತು ಸ್ಪಷ್ಟವಾದ ಯೋಜನೆಗಳಿಲ್ಲ. ಹಾಗೆಯೇ ಅಭಿವೃದ್ಧಿ ಕುರಿತಂತೆಯೂ ಮುನ್ನೋಟ ಹೊಂದಿರುವ ಯಾವುದೇ ಯೋಜನೆಗಳ ಪ್ರಸ್ತಾಪ ಬಜೆಟ್‍ನಲ್ಲಿ ಇಲ್ಲ. ರಾಜ್ಯ ಮತ್ತು ದೇಶ ಮುಖ್ಯವಾಗಿ ಎದುರಿಸುತ್ತಿರುವ ಸಮಸ್ಯೆ ನಿರುದ್ಯೋಗ ಮತ್ತು ಸಾಮಾನ್ಯ ಜನರ ಖರೀದಿ ಸಾಮರ್ಥ್ಯ ಕುಂಠಿತಗೊಂಡಿರುವುದು. ಕೈಗಾರಿಕೆ ಮತ್ತು ಸೇವಾ ಕ್ಷೇತ್ರದಲ್ಲಿ ಕಾಣುತ್ತಿರುವ ಹಿನ್ನಡೆ. ಹೀಗಿರುವಾಗ ಕನಿಷ್ಠ ರಾಜ್ಯದಲ್ಲಿನ ಹಣಕಾಸು ಪರಿಸ್ಥಿತಿ ಕುಸಿಯದಂತೆ ತಡೆದು ಸಮತೋಲನದಲ್ಲಿಡಲು ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕಾಗಿರುವುದು ಇವತ್ತಿನ ತುರ್ತು. ಇದಕ್ಕಾಗಿ ಮೂಲಸೌಕರ್ಯ, ನೀರಾವರಿ ಮತ್ತಿತರ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಬೇಕು. ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದಾಗ ಜನರಿಗೆ ಉದ್ಯೋಗ ಸಿಗಲಿದೆ. ಇದರಿಂದ ಅವರ ಕೈಗೆ ಹಣ ಹೋಗಲಿದ್ದು ಅವರಲ್ಲಿನ ಖರೀದಿ ಶಕ್ತಿ ಹೆಚ್ಚಲಿದೆ. ಇದರಿಂದ ಆರ್ಥಿಕತೆಯಲ್ಲಿ ಚೇತರಿಕೆ, ಲವಲವಿಕೆ ಕಾಣಲಿದ್ದು ಸಮತೋಲನವನ್ನು ಕಾಪಾಡಲು ಸಾಧ್ಯವಾಗಲಿದೆ. ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟುವಲ್ಲಿ ಅತ್ಯಂತ ಪರಿಣಾಮಕಾರಿಯಾಗಲಿದೆ.

ಆದರೆ ಅಂತಹ ಯಾವುದೇ ಬೃಹತ್ ಯೋಜನೆಯನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ. ಹೇಳಲೇಬೇಕಾಗಿರುವ ಎರಡು ಯೋಜನೆಗಳೆಂದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ ವಿಸ್ತರಣೆ ಮತ್ತು ಸಬ್‍ಅರ್ಬನ್ ರೈಲ್ವೆ ಯೋಜನೆ. ಆದರೆ ಈ ಯೋಜನೆಗಳಿಗೆ ಮೀಸಲಿಟ್ಟಿರುವ ಹಣ ಮಾತ್ರ ತೀರಾ ತೀರಾನೇ ಕಡಿಮೆ. ಸಬ್‍ಅರ್ಬನ್ ರೈಲ್ವೆಗೆ ಕೇಂದ್ರ ಸರ್ಕಾರ 1 ಕೋಟಿ ರೂ. ಮೀಸಲಿಟ್ಟಿದ್ದರೆ, ರಾಜ್ಯ ಸರ್ಕಾರ ಈ ಸಾಲಿನ ಬಜೆಟ್‍ನಲ್ಲಿ ರೂ.500 ಕೋಟಿ ಮಾತ್ರ ಮೀಸಲಿರಿಸಿದೆ. ಈ ಹಣ ಭೂ ಸ್ವಾಧೀನಕ್ಕೂ ಸಾಲುವುದಿಲ್ಲ ಇನ್ನು ಯೋಜನೆ ಕಾರ್ಯಗತವಾಗುವುದಾದರೂ ಹೇಗೆ? ಇನ್ನು ಮೆಟ್ರೋ ಕುರಿತಂತೆ ಪ್ರಸ್ತಾಪಿಸಲಾಗಿದೆ ಅಷ್ಟೆ. ಆದರೆ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ. ಹೀಗಿರುವಾಗ ಮೂಲಸೌಕರ್ಯ ಅಭಿವೃದ್ಧಿಯೂ ಸಾಧ್ಯವಾಗದು, ಉದ್ಯೋಗ ಸೃಷ್ಟಿ ಮಾತಂತೂ ದೂರವೇ ಉಳಿಯಲಿದೆ.

ಕೃಷಿ, ನೀರಾವರಿ ಸೇರಿದಂತೆ ಯಾವ ಕ್ಷೇತ್ರಕ್ಕೂ ಇಲ್ಲಿ ಆದ್ಯತೆಯನ್ನು ನೀಡಿಲ್ಲ. ಎತ್ತಿನಹೊಳೆ ಯೋಜನೆಗೆ 1,500 ಕೋಟಿ ಮತ್ತು ಮಹದಾಯಿ ಯೋಜನೆಗೆ 500 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಹೊರತುಪಡಿಸಿದರೆ ರಾಜ್ಯದ ಯಾವುದೇ ನದಿ ಪ್ರಾಂಗಣದಲ್ಲಿ ಲಭ್ಯವಿರುವ ನೀರನ್ನು ಸಂಪೂರ್ಣವಾಗಿ ಬಳಸಿಕೊಂಡು ಮುನ್ನಡೆಯುವ ಯಾವುದೇ ದೂರದೃಷ್ಟಿಯನ್ನು ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ತೋರಿಸಿಲ್ಲ. ಕೃಷ್ಣಾ ನದಿಕೊಳ್ಳ ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅತಿದೊಡ್ಡದು. ನಮ್ಮ ಪಾಲಿನ ನೀರನ್ನು ಇನ್ನೂ ಸಂಪೂರ್ಣವಾಗಿ ಬಳಕೆ ಮಾಡಿಲ್ಲ. ರಾಜ್ಯದ ಅತಿಹೆಚ್ಚಿನ ಭೂ ಪ್ರದೇಶ ಒಳಗಾಗುವುದೇ ಕೃಷ್ಣಾ ಬೇಸಿನ್‍ಗೆ. ಹೀಗಿರುವಾಗ ಈ ಯೋಜನೆಯನ್ನು ಪೂರ್ಣಗೊಳಿಸಲು ಮತ್ತು ರಾಜ್ಯದ ಬರಡು ಭೂಮಿಯನ್ನು ನೀರಾವರಿಗೆ ಒಳಪಡಿಸಲು ಅತಿಹೆಚ್ಚಿನ ಹಣವನ್ನು ತೊಡಗಿಸಬೇಕಾಗಿದೆ. ಆದರೆ ಬಜೆಟ್‍ನಲ್ಲಿ ಈ ಕುರಿತು ಒಂದೇ ಒಂದು ಅಕ್ಷರ ಪ್ರಸ್ತಾಪಿಸಿಲ್ಲ. ಇನ್ನು ರಾಜ್ಯದಲ್ಲಿ ಕೃಷಿ ಹೇಗೆ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ.

ಯಡಿಯೂರಪ್ಪನವರು ಅತ್ಯಂತ ನಿರ್ಲಕ್ಷ್ಯ ವಹಿಸಿರುವ ಮತ್ತೊಂದು ಕ್ಷೇತ್ರ ಕೃಷಿ. ರೈತರ ಮಗ, ಸಾಯುವವರೆಗೂ ಅವರಿಗಾಗಿ ಹೋರಾಟ, ಬದುಕು ಎಂದೆಲ್ಲಾ ಭಾಷಣಗಳಲ್ಲಿ ಹೇಳುತ್ತಾರೆ. ಆದರೆ ಬಜೆಟ್‍ನಲ್ಲಿ ಮಾತ್ರ ರೈತರ ಫಸಲಿಗೆ ಲಾಭದಾಯಕ ದರ ಕೊಡುವ ಕುರಿತು ನಿರ್ದಿಷ್ಟ ಯೋಜನೆಗಳನ್ನು ಪ್ರಸ್ತಾಪಿಸಿಲ್ಲ. ಕೇಂದ್ರ ಸರ್ಕಾರ ಬೆಂಬಲ ಬೆಲೆಗೆ ಖರೀದಿಸುವ ಉತ್ಪನ್ನಗಳಿಗೆ ರಾಜ್ಯ ನೀಡುವ ಪ್ರೋತ್ಸಾಹ ಧನದ ಪ್ರಸ್ತಾಪ ಬಿಟ್ಟರೆ ಬೇರೇನೂ ಇಲ್ಲ. ಇಂದು ಅತ್ಯಂತ ನಿಕೃಷ್ಟ ಬದುಕು ಸಾಗಿಸುತ್ತಿರುವವರು ಕೃಷಿಕರು. ತೊಡಗಿಸಿರುವ ಬಂಡವಾಳವೂ ಸಿಗುತ್ತಿಲ್ಲ. ತರಕಾರಿ ಉತ್ಪನ್ನಗಳನ್ನು ಬೀದಿಗೆ ಚೆಲ್ಲ ತಮ್ಮ ರೋದನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸೋತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ರೈತರ ಉತ್ಪನ್ನಗಳನ್ನು ದೇಶದ ಬೇರೆ ಬೇರೆ ರಾಜ್ಯಗಳಿಗೆ ರವಾನಿಸಲು ಕೇಂದ್ರ ಬಜೆಟ್‍ನಲ್ಲಿ ಪ್ರಸ್ತಾಪಿಸಿರುವ ಕಿಸಾನ್ ರೈಲ್ ಯೋಜನೆಯನ್ನು ತಾವೂ ಪ್ರಸ್ತಾಪಿಸಿ ಹೊಣೆಗಾರಿಕೆಯಿಂದ ಮೆತ್ತಗೆ ಜಾರಿಕೊಂಡಿದ್ದಾರೆ.

ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಆದರೆ ಸರ್ಕಾರಿ ಸ್ವಾಮ್ಯದ ಕಬ್ಬು ಅರೆಯುವ ಕಾರ್ಖಾನೆಗಳು ಒಂದರ ನಂತರ ಮತ್ತೊಂದು ನಷ್ಟಕ್ಕೆ ಗುರಿಯಾಗುತ್ತಿವೆ. ಮುಚ್ಚುವ ಹಂತಕ್ಕೆ ತಲುಪಿವೆ, ಇವುಗಳನ್ನು ಪುನಶ್ಚೇತನಗೊಳಿಸಿ ರೈತರನ್ನು ರಕ್ಷಿಸಬೇಕೆಂಬ ಸಂವೇದನೆಯನ್ನೇ ಕಳೆದುಕೊಂಡಿದ್ದಾರೆ. ಇರುವ ಹಣದಲ್ಲಿ ಸಣ್ಣ ನೀರಾವರಿ, ತುಂತುರು ನೀರಾವರಿ, ತೆಂಗು, ಅಡಿಕೆ ಎಂದು ಸಣ್ಣಪುಟ್ಟ ನೆರವು ನೀಡುವುದನ್ನಷ್ಟೇ ಮಾಡಲಾಗಿದೆ.

ರಾಜ್ಯದಲ್ಲಿ ದುಡಿಯುವ ವಯಸ್ಸಿನ ಮಾನವ ಸಂಪನ್ಮೂಲ ಯಥೇಚ್ಚವಾಗಿದೆ. ಆಧುನಿಕ ಕೈಗಾರಿಕೆ ಮತ್ತು ಪ್ರಗತಿಗೆ ತಕ್ಕಂತೆ ಯುವ ಜನರಿಗೆ ಅಗತ್ಯ ಕೌಶಲ್ಯ ತರಬೇತಿಯನ್ನು ನೀಡುವ ಜರೂರು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಅಗತ್ಯವಿದೆ. ಈ ಯುವಶಕ್ತಿಯನ್ನು ಬಳಸಿಕೊಳ್ಳಲು ಒಂದು ಸಮಗ್ರ ಯೋಜನೆಯನ್ನು ರೂಪಿಸುವ ಅಗತ್ಯವಿತ್ತು. ಆದರೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಈ ವರ್ಷ ಕೇವಲ 1000 ಯುವಕರಿಗೆ ತರಬೇತಿ ನೀಡುವುದಾಗಿ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಏಕೆಂದರೆ ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ವಿದ್ಯಾವಂತ ನಿರುದ್ಯೋಗಿಗಳು ಸಿಗಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಜೆಟ್‍ನಲ್ಲಿ ಪ್ರಸ್ತಾಪಿಸಿರುವ ಸಂಖ್ಯೆ ಏನೇನೂ ಇಲ್ಲ. ಕನಿಷ್ಠ ಪ್ರತಿ ಜಿಲ್ಲೆ, ಪ್ರಮುಖ ತಾಲ್ಲೂಕುಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಭಿಸಿ ಲಕ್ಷಾಂತರ ಯುವಕರಿಗೆ ತರಬೇತಿ ನೀಡಿದರೆ ಅವರು ಉದ್ಯೋಗ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗುತ್ತಿತ್ತು.

ಬಜೆಟ್‍ನ್ನು ಸಂಪೂರ್ಣವಾಗಿ ಅವಲೋಕನ ಮಾಡಿದಾಗ ರಾಜ್ಯದ ಆರ್ಥಿಕತೆ ಗಂಭೀರ ಪರಿಸ್ಥಿತಿಯಲ್ಲಿ ಇರುವುದು ಕಾಣಲಿದೆ. ಇಂತಹ ಸಂದರ್ಭದಲ್ಲಿ ಪ್ರತಿಮೆ, ಮಂಟಪಗಳನ್ನು ನಿರ್ಮಿಸುವಂತಹ ಯೋಜನೆಗಳನ್ನು ಪ್ರಕಟಿಸುವುದು ಬುದ್ಧಿವಂತಿಕೆ ಅಲ್ಲ. ಕಾಲ ಮಿಂಚಿಲ್ಲ. ತೆರಿಗೆ ಸಂರಚನೆಯನ್ನು ಬದಲಾಯಿಸಬೇಕು. ಸಾರ್ವಜನಿಕ ಮತ್ತು ಸರ್ಕಾರಿ ಹೂಡಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬೇಕು. ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು. ಮೂಲಸೌಕರ್ಯ ನಿರ್ಮಾಣ ಯೋಜನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕು. ಆಗ ಮಾತ್ರ ಆರ್ಥಿಕ ಹಿಂಜರಿತವನ್ನು ಸಶಕ್ತವಾಗಿ ಹಿಮ್ಮೆಟ್ಟಲು ಸಾಧ್ಯವಾಗಲಿದೆ. ಬಜೆಟ್ ಅಂಕಿಅಂಶಗಳ ಅನುಸಾರ ಇತರೆ ವೆಚ್ಚಗಳಲ್ಲಿ ಅತಿಹೆಚ್ಚಿನ ಹಣ ಇದ್ದು ಈ ಹಣವನ್ನು ಸಮಗ್ರವಾಗಿ ಬಳಸುವ ಅಗತ್ಯವಿದೆ. ತಪ್ಪಿದಲ್ಲಿ ಇದು “ಲಭ್ಯವಿರುವ ಹಣವನ್ನು ಹಂಚಿಕೆ ಮಾಡಿದ ಅಭಿವೃದ್ಧಿ ರಹಿತ ಬಜೆಟ್” ಮಾತ್ರ.

(ಲೇಖಕರು ಹಿರಿಯ ಪತ್ರಕರ್ತರು.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...