Homeಕರ್ನಾಟಕದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ ಖಂಡಿಸಿದ ಕರ್ನಾಟಕದ ಹಿರಿಯ ಗಣ್ಯರು : ಜಂಟಿ ಹೇಳಿಕೆ ಬಿಡುಗಡೆ

ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ ಖಂಡಿಸಿದ ಕರ್ನಾಟಕದ ಹಿರಿಯ ಗಣ್ಯರು : ಜಂಟಿ ಹೇಳಿಕೆ ಬಿಡುಗಡೆ

ಸರ್ಕಾರದ ರೀತಿ-ನೀತಿ ಧೋರಣೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಇರುವುದು, ಆರ್ಥಿಕ ಹಗರಣಗಳ ಬಗ್ಗೆ ಪರಿಣಿತ ಬರಹಗಳನ್ನು ನರಸಿಂಹಮೂರ್ತಿ ಅವರು ಬರೆದಿರುವುದನ್ನು ಸರ್ಕಾರವು ಅಪರಾಧ ಎಂದು ಪರಿಗಣಿಸುತ್ತದೆಯೇ ಎಂದು ನಾವು ಕೇಳಬಯಸುತ್ತೇವೆ

- Advertisement -
- Advertisement -

ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನವನ್ನು ಖಂಡಿಸುತ್ತೇವೆ. ಪ್ರಜಾತಂತ್ರದ ಭಿನ್ನ ದನಿಗಳನ್ನು ಎತ್ತಿ ಹಿಡಿಯುವ ನಮ್ಮ ಪ್ರಯತ್ನ ಮುಂದುವರೆಯುತ್ತದೆ ಎಂದು ಕರ್ನಾಟಕದ ವಿವಿಧ ಗಣ್ಯರು ಪ್ರತಿಪಾದಿಸಿದ್ದು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಗೌರಿ ಮೀಡಿಯಾ ಟ್ರಸ್ಟ್ ನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಬಂಧನ, ಬಂಧಿಸಲು ಕೊಟ್ಟಿರುವ ಕಾರಣ ಮತ್ತು ರೀತಿಯನ್ನು ನಾವುಗಳು ಖಂಡಿಸುತ್ತೇವೆ. ವಿವಿಧ ಜನಪರ ಹೋರಾಟಗಳಲ್ಲಿ ಭಾಗಿಯಾಗುತ್ತಾ, ಚಿಂತನಶೀಲ ಬರಹಗಳನ್ನು ಬರೆದಿರುವ ನರಸಿಂಹಮೂರ್ತಿಯವರು ಕರ್ನಾಟಕದ ಪ್ರಮುಖ ಸಾಮಾಜಿಕ ಕಾರ್ಯಕರ್ತರಲ್ಲೊಬ್ಬರು. ಬಿಎಂಐಸಿ ವಿರೋಧಿ ಹೋರಾಟ ಮತ್ತು ಗೌರಿ ಮೀಡಿಯಾ ಪ್ರಯತ್ನಗಳ ಭಾಗವಾಗಿ ನಮಗೆ ಅವರೊಡನೆ ನೇರ ಒಡನಾಟವೂ ಇದೆ ಎಂದು ಸಾರಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ರೈತ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ, ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು, ಗೌರಿ ಮೀಡಿಯಾ ಟ್ರಸ್ಟ್‌ನ ಅಧ್ಯಕ್ಷರಾದ ನಗರಗೆರೆ ರಮೇಶ್, ಹಿರಿಯ ಸಾಹಿತಿಗಳು & ಕ.ಸಾ.ಪದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್ (ಚಂಪಾ), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಮತ್ತು ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ದಸಂಸದ ಹಿರಿಯ ನಾಯಕರಾದ   ಎನ್.ವೆಂಕಟೇಶ್, ಸಾಹಿತಿ ಮತ್ತು ಹಿರಿಯ ಪತ್ರಕರ್ತರಾದ  ಡಾ.ವಿಜಯಮ್ಮ, ಮಾಜಿ ಸಚಿವರಾದ ಬಿ.ಟಿ.ಲಲಿತಾನಾಯಕ್, ರಂಗಕರ್ಮಿಗಳಾದ ರಘುನಂದನ್, ಹಿರಿಯ ವಿಮರ್ಶಕರಾದ  ಜಿ.ರಾಜಶೇಖರ್ ಮತ್ತು ಸಿಪಿಐ ಪಕ್ಷದ ನಾಯಕರಾದ ಡಾ.ಸಿದ್ದನಗೌಡ ಪಾಟೀಲ್‌ರವರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಇವರನ್ನು ವಿವಿಧ ಪ್ರಕರಣಗಳಲ್ಲಿ 25 ವರ್ಷಗಳ ಹಿಂದೆ ಭಾಗಿಯಾಗಿದ್ದ ವಿನೋದ್ ಎಂದು ಗುರುತಿಸಿರುವುದೇ ಆಧಾರವೆಂದು ಹೇಳಿ, ಆ ಕಾರಣಕ್ಕೆ ಬಂಧಿಸಿದ್ದೇವೆಂದು ಹೇಳಲಾಗಿದೆ. ರಾಯಚೂರು ಮತ್ತು ರಾಜ್ಯದ ಹಲವೆಡೆ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುತ್ತಾ, ಜನಾಂದೋಲನಗಳಲ್ಲಿ ಭಾಗಿಯಾಗುತ್ತಾ ಬಂದಿರುವುದಲ್ಲದೇ ಅವರು ಬರೆದಿರುವ ಹಲವು ಲೇಖನಗಳು ಪ್ರಮುಖ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಹೀಗಿರುವಾಗ 25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದರು ಎಂಬುದು ಸುಳ್ಳು ಆರೋಪ ಎಂದು ಖಚಿತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ರೀತಿ-ನೀತಿ ಧೋರಣೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಇರುವುದು, ಆರ್ಥಿಕ ಹಗರಣಗಳ ಬಗ್ಗೆ ಪರಿಣಿತ ಬರಹಗಳನ್ನು ನರಸಿಂಹಮೂರ್ತಿ ಅವರು ಬರೆದಿರುವುದನ್ನು ಸರ್ಕಾರವು ಅಪರಾಧ ಎಂದು ಪರಿಗಣಿಸುತ್ತದೆಯೇ ಎಂದು ನಾವು ಕೇಳಬಯಸುತ್ತೇವೆ. ಗೌರಿ ಲಂಕೇಶರ ಪರಂಪರೆಯ ಮುಂದುವರಿಕೆಯಾಗಿ ನಡೆಸುತ್ತಿರುವ ಮಾಧ್ಯಮ ಸಂಸ್ಥೆಯನ್ನು ಗುರಿ ಮಾಡುವ ಉದ್ದೇಶದಿಂದ ಸರ್ಕಾರವು ಇಂತಹ ಕ್ರಮಗಳಿಗೆ ಮುಂದಾಗಿದೆಯೆ ಎಂಬ ಅನುಮಾನ ಹುಟ್ಟಲು ಕಾರಣಗಳಿವೆ. ದೇಶದ ವಿವಿಧ ಭಾಗಗಳಲ್ಲಿ ಜನಪರ ಪತ್ರಿಕೋದ್ಯಮದ ದನಿಗಳನ್ನು ದಮನಿಸುತ್ತಿರುವ ಹಲವು ಉದಾಹರಣೆಗಳನ್ನು ನೋಡುತ್ತಿದ್ದೇವೆ. ಆದರೆ, ದೇಶದ ಸಾಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲು ವಿವಿಧ ಮಾರ್ಗಗಳನ್ನು ಬಳಸಿದರೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ.

ಗೌರಿ ಲಂಕೇಶ್-ನ್ಯಾಯಪಥ ಪತ್ರಿಕೆಯ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲು ರಾಯಚೂರಿಗೆ ಹೋಗಿದ್ದ ಮೂರ್ತಿಯವರನ್ನು ಬಂಧಿಸಿರುವ ರೀತಿ ಖಂಡನಾರ್ಹವಾಗಿದ್ದು, ಈ ಕೂಡಲೇ ಕಾನೂನುಪ್ರಕ್ರಿಯೆ ಚುರುಕುಗೊಳಿಸಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಈ ಹಿರಿಯ ಗಣ್ಯರು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read