Homeಮುಖಪುಟಮೋದಿ ಸರ್ಕಾರದ ಮಹಾದ್ರೋಹ-ಮಾರಾಟವಾಗುತ್ತಿರುವ ’ಮಹಾರತ್ನಗಳು’: ಚಿಂತಕ ಶಿವಸುಂದರ್‌ ಬರಹ

ಮೋದಿ ಸರ್ಕಾರದ ಮಹಾದ್ರೋಹ-ಮಾರಾಟವಾಗುತ್ತಿರುವ ’ಮಹಾರತ್ನಗಳು’: ಚಿಂತಕ ಶಿವಸುಂದರ್‌ ಬರಹ

ಅನಂತ್ ಕುಮಾರ್ ಹೆಗ್ಡೆಯ ’ದೇಶದ್ರೋಹಿ’ ಹೇಳಿಕೆಯ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಮಹಾನ್ ದೇಶದ್ರೋಹವನ್ನು ಅರ್ಥಮಾಡಿಕೊಳ್ಳಲು ಈ ಲೇಖನ ಓದಿ.

- Advertisement -
- Advertisement -

ದ್ವೇಷೋತ್ಪಾದಕ ಸಂಸದ ಅನಂತ್ ಕುಮಾರ್ ಹೆಗ್ಡೆ, BSNL ನಷ್ಟಕ್ಕೆ ಕಾರಣ ಅಲ್ಲಿ ಕೆಲಸ ಮಾಡುತ್ತಿರುವ “ದೇಶದ್ರೋಹಿ ಕಾರ್ಮಿಕರು” ಎಂದು ಹೇಳುವುದರ ಹಿಂದೆ ಮೋದಿ ಸರ್ಕಾರ ಮಾಡುತ್ತಿರುವ ಮಹಾ ದೇಶದ್ರೋಹವನ್ನು ಮುಚ್ಚಿಕೊಳ್ಳುವ ತಂತ್ರವಿದೆ.

ಅಸಲು BSNL ಅನ್ನು ಉದ್ದೇಶಪೂರ್ವಕವಾಗಿ ನಷ್ಟಕ್ಕೆ ಗುರಿಮಾಡಿದ್ದೇ ಮೋದಿ ಸರ್ಕಾರ. ಏಕೆಂದರೆ ಅಪಾರ ಸ್ವತ್ತು ಮತ್ತು ಲಕ್ಷ ಟವರ್‌ಗಳು ಹಾಗು ಇತರ ಸಲಕರಣೆಗಳನ್ನುಳ್ಳ ಸರ್ಕಾರಿ BSNL ಅನ್ನು ಅನಾಮತ್ತಾಗಿ ತಮ್ಮ ಪರಮಾಪ್ತ ಸ್ನೇಹಿತ ಅಂಬಾನಿಯ Jio ಗೆ ಕೊಟ್ಟುಬಿಡುವ ಮಹಾನ್ ದೇಶದ್ರೋಹಿ ಯೋಜನೆ ಇದರ ಹಿಂದೆ ಇದೆ.

ಅಷ್ಟೇ ಅಲ್ಲ. ಈಗಾಗಲೇ ಮೋದಿ ಸರ್ಕಾರ ಅಪಾರ ಲಾಭ ಮಾಡುತ್ತಿರುವ ಹಾಗೂ ಸರ್ಕಾರದಿಂದಲೇ “ಮಹಾ ರತ್ನಗಳು” ಎಂದು ಮನ್ನಣೆ ಪಡೆದಿರುವ ೧೦ ಸರ್ಕಾರಿ ಉದ್ಯಮಗಳನ್ನು ಕೂಡ ಇದೆ ರೀತಿ ಅಂಬಾನಿ ಗಳಿಗೆ ಮಾರಿಕೊಳ್ಳುತ್ತಿದೆ

ಅನಂತ್ ಕುಮಾರ್ ಹೆಗ್ಡೆಯ “ದೇಶದ್ರೋಹಿ” ಹೇಳಿಕೆಯ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಈ ಮಹಾನ್ ದೇಶದ್ರೋಹವನ್ನು ಅರ್ಥಮಾಡಿಕೊಳ್ಳಲು ಈ ಹಿಂದೆ “ವಾರ್ತಾಭಾರತಿ”ಗೆ ಬರೆದ ಲೇಖನವೊಂದನ್ನು ಮತ್ತೊಮ್ಮೆ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.

ಮೋದಿ ಕೈಯಲ್ಲಿ ಮಾಣಿಕ್ಯಗಳು:

ಮೋದಿ ಸರ್ಕಾರದ ಸಚಿವ ಸಂಪುಟವು ಮೊನ್ನೆ ಬಿಪಿಸಿಎಲ್ ಆನ್ನೂ ಒಳಗೊಂಡಂತೆ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಕಂಟೈನರ್ ಕಾರ್ಪೊರೇಷನ್ ಇನ್ನಿತ್ಯಾದಿ ಐದು ಮಹತ್ವದ ಸಾರ್ವಜನಿಕ ಕ್ಷೇತ್ರದ ಕಂಪನಿಗಳನ್ನು ತ್ವರಿತವಾಗಿ ಖಾಸಗೀಕರಿಸುವ ತೀರ್ಮಾನ ತೆಗೆದುಕೊಂಡಿದೆ.

ಇದು ಒಂದು ವಾರದ ಹಿಂದೆ ಖಾಸಗೀಕರಿಸಲು ನಿಗದಿಯಾದ 28 ಕಂಪನಿಗಳ ಜೊತೆಗೆ ಹೊಸದಾಗಿ ಸೇರಿಸಲಾದ ಪಟ್ಟಿ!
ಈ ಎರಡೂ ಪಟ್ಟಿಗಳ ನಡುವೆ ಒಂದು ಪ್ರಮುಖ ವ್ಯತ್ಯಾಸವಿದೆ. ವಾರದ ಹಿಂದೆ ಪ್ರಕಟಿಸಲಾದ 28 ಕಂಪನಿಗಳು ನಷ್ಟ ಮಾಡುತ್ತಿದ್ದ ಸಾರ್ವಜನಿಕ ಕಂಪನಿಗಳು. ಮತ್ತು ಅದರಲ್ಲಿರುವ ಬಹುಪಾಲು ಕಂಪನಿಗಳನ್ನು ಖಾಸಗೀಕರಿಸಲು ಕಳೆದ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಯಾವ ಖಾಸಗೀ ಕಂಪನಿಗಳು ಅವನ್ನು ಕೊಳ್ಳಲು ಮುಂದೆ ಬರುತ್ತಿಲ್ಲ.

ಆದರೆ ಮೊನ್ನೆ ಖಾಸಗೀಕರಣಗೊಳ್ಳಲು ಕ್ಯಾಬಿನೆಟ್ಟಿನಲ್ಲಿ ಅನುಮೋದನೆಗೊಂಡ ಬಿಪಿಸಿಎಲ್ ಹಾಗೂ ಇನ್ನಿತರ ನಾಲ್ಕು ಕಂಪನಿಗಳು ಲಾಭ ತರುತ್ತಿದ್ದ ಸಾರ್ವಜನಿಕ ಸಂಸ್ಥೆಗಳು ಮತ್ತು ಅವುಗಳನ್ನು ಕೂಡಲೇ ಖಾಸಗೀಕರಿಸುವ ಯೋಜನೆ ಇದಕ್ಕೆ ಮುಂಚೆಯಂತೂ ಇರಲೇ ಇಲ್ಲ.

ಉದಾಹರಣೆಗೆ ಭಾರತದ ಪೆಟ್ರೋಲಿಯಂ ಕ್ಷೇತ್ರದ ಎರಡನೇ ದೈತ್ಯ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್- ಬಿಪಿಸಿಎಲ್ ಕಂಪನಿಯನ್ನೇ ಗಮನಿಸಿ. ಬಿಪಿಸಿಎಲ್ ಸಂಸ್ಥೆಯು ಕಳೆದ ಐದು ವರ್ಷದಿಂದ ಸತತವಾಗಿ ಸರಾಸರಿ 5ooo ಕೋಟಿ ರೂಗಳಿಗೂ ಹೆಚ್ಚು ಮೊತ್ತದ ಲಾಭ ಗಳಿಸುತ್ತಿರುವ ಕಂಪನಿ.

ಕಳೆದ ಐದು ವರ್ಷದಲ್ಲಿ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ತೆರಿಗೆ ಇನ್ನಿತ್ಯಾದಿ ರೂಪಗಳಲ್ಲಿ ಸರ್ಕಾರಕ್ಕೆ 3೦,೦೦೦ ಕೋಟಿ ರೂಗಳಷ್ಟು ಹಣವನ್ನು ಒದಗಿಸಿದೆ. ಇಂಥ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಸರ್ಕಾರವು ಕೇವಲ 6೦,೦೦೦ ಕೋಟಿ ರೂ.ಗಳಿಗೆ ತನ್ನ ಇಡೀ ಶೇ.53 ರಷ್ಟು ಶೇರನ್ನು ಮಾರಿಬಿಡುತ್ತಿದೆ.

ವಾಸ್ತವವಾಗಿ ಬಿಪಿಸಿಎಲ್ ಸಂಸ್ಥೆಯನ್ನು ಇದೇ ಸರ್ಕಾರವೇ 2019 ರಲ್ಲಿ ಮಹಾರತ್ನ ಎಂದು ಕರೆದು ಗೌರವಿಸಿತ್ತು

ದೇಶ ಕಟ್ಟಿದ ಮಹಾರತ್ನಗಳು!

ಸರ್ಕಾರದ ನೀತಿಗಳ ಪ್ರಕಾರ ಒಂದು ಸಾರ್ವಜನಿಕ ಸಂಸ್ಥೆಗೆ ಮಹಾರತ್ನ ಎಂಬ ಗೌರವ ಸಿಗಬೇಕೆಂದರೆ, ಅದು ಸತತವಾಗಿ ಮೂರು ವರ್ಷಗಳ ಕಾಲ 5೦೦೦ ಕೋಟಿ ರೂಗಳಿಗಿಂತಲೂ ಹೆಚ್ಚಿನ ನಿವ್ವಳ ಲಾಭ ಮಾಡಿರಬೇಕು. ಸತತವಾಗಿ ಮೂರು ವರ್ಷಗಳ ಕಾಲ 25,೦೦೦ ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸಿರಬೇಕು. ಒಟ್ಟು 15,೦೦೦ ಕೋಟಿಗೆ ಕಡಿಮೆ ಇರದಷ್ಟು ಆಸ್ತಿಪಾಸ್ತಿಯನ್ನು ಹೊಂದಿರಬೇಕು. ಹಾಗೂ ಜಾಗತಿಕವಾಗಿಯೂ ತನ್ನ ಛಾಪನ್ನು ಮೂಡಿಸಿರಬೇಕು.

ಅಂದರೆ ಸಾರಾಂಶದಲ್ಲಿ ಒಂದು ಮಹಾರತ್ನ ಕಂಪನಿ ಎಂದರೆ ದೇಶಕ್ಕೆ ಹೆಮ್ಮೆ, ಆದಾಯ, ಹಾಗೂ ಅಭಿವೃದ್ಧಿಗಳನ್ನು ತರುವಂಥಾ ಕಂಪನಿಯೆಂದರ್ಥ. ಹಾಗೂ ಒಂದು ನಿಜವಾದ ದೇಶಪ್ರೇಮಿ ಸರ್ಕಾರ ಅಂಥಾ ಮಹಾರತ್ನಗಳನ್ನು ಕಾಪಾಡಬೇಕೆ ವಿನಾ ಖಾಸಗೀಯವರಿಗೆ ಮಾರಬಾರದಲ್ಲವೇ?

ಆದರೆ ಮೋದಿ ಸರ್ಕಾರ ಕಳೆದ ಐದು ವರ್ಷಗಳಿಂದ ಖಾಸಗೀಕರಣದ ಹೆಸರಿನಲ್ಲಿ ಮಾರುತ್ತಿರುವುದು ಮಹಾರತ್ನಗಳನ್ನೇ ಹೊರತು ನಷ್ಟದ ಉದ್ದಿಮೆಗಳನ್ನಲ್ಲ ಎಂಬುದನ್ನು ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣಕ್ಕೆಂದೇ ಸೃಷ್ಟಿಸಲಾಗಿರುವ ಡಿಪಾರ್ಟ್‌ಮೆಂಟ್ ಆಫ್ ಇನ್‌ವೆಸ್ಟ್‌ಮೆಂಟ್ ಅಂಡ್ ಪಬ್ಲಿಕ್ ಅಸೆಟ್ ಮ್ಯಾನೇಜ್‌ಮೆಂಟ್- ದೀಪಂ (!?)- ನ ಅಂಕಿಅಂಶಗಳನ್ನು ಹಾಗು ವಾರ್ಷಿಕ ವರದಿಗಳನ್ನು ನೋಡಿದರೆ ಅರ್ಥವಾಗುತ್ತದೆ.

ಪ್ರಸ್ತುತ ಅಂದರೆ 2019 ಅಕ್ಟೋಬರ್ ವೇಳೆಗೆ ದೇಶದ ಹತ್ತು ಸಾರ್ವಜನಿಕ ಸಂಸ್ಥೆಗಳನ್ನು ಮಹಾರತ್ನಗಳೆಂದು ಘೋಷಿಸಲಾಗಿದೆ. ಅವುಗಳೆಂದರೆ;

  1. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)
  2. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್)
  3. ಕೋಲ್ ಇಂಡಿಯಾ ಲಿಮಿಟೆಡ್
  4. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಜಿಎಐಎಲ್)
  5. ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್)
  6. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿ)
  7. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ)
  8. ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ಒಎನ್‌ಜಿಸಿ)
  9. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು
  10. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್)

ಮೇಲ್ನೋಟಕ್ಕೆ ಕಾಣುವಂತೆ ಮೇಲಿನ ಹತ್ತೂ ಕಂಪನಿಗಳೂ ಸಹ ದೇಶದ ಆರ್ಥಿಕತೆಯ ಕೀಲಕವಾದ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಕಲ್ಲಿದ್ದಲು, ವಿದ್ಯುತ್, ತೈಲ, ಅನಿಲ ಇವುಗಳು ಯಾವುದೇ ಆರ್ಥಿಕತೆಯ ಪ್ರಮುಖ ಎಂಟು ಕ್ಷೇತ್ರಗಳಲ್ಲಿ ಸೇರುತ್ತವೆ. ಆ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಮತ್ತು ಪರಿಣಾಮಕಾರಿ ಉತ್ಪಾದಕತೆಯನ್ನು ಹೊಂದಿದ್ದರೆ ಆ ದೇಶದ ಅಭಿವೃದ್ಧಿ ಸುಗಮವಾಗುತ್ತದೆ.  ಯಾವ ದೇಶಗಳು ಈ ಕ್ಷೇತ್ರಗಳನ್ನು ಖಾಸಗೀಕರಿಸಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಪರಭಾರೆ ಮಾಡುತ್ತವೆಯೋ ಆ ದೇಶದ ಅಭಿವೃದ್ಧಿ ದಿಕ್ಕೆಡುವುದು ಮಾತ್ರವಲ್ಲದೆ ಆ ದೇಶಗಳು ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುತ್ತವೆ.

ಆದರೆ ಭಾರತವು ಹಾಗಾಗದೆ ಒಂದಷ್ಟು ಮಟ್ಟಿಗಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಕಡೆ ಮೇಲಿನ ಮಹಾರತ್ನಗಳು ತಮ್ಮ ಕೊಡುಗೆಯನ್ನು ನೀಡುತ್ತಿದ್ದವು. ಆದರೆ ಮೋದಿ ಸರ್ಕಾರ ಬಂದಮೇಲೆ ಆಗುತ್ತಿರುವುದೇ ಬೇರೆ.

ಸರ್ಕಾರದ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವ ಹೆಸರಿನಲ್ಲಿ ಸರ್ಕಾರಗಳು ತೆರಿಗೆ ಆದಾಯದ ಜೊತೆಗೆ ನಷ್ಟದಲ್ಲಿರುವ ಸರ್ಕಾರಿ ಉದ್ದಿಮೆಗಳನ್ನು ಮಾರಿ ಅದರ ಆದಾಯವನ್ನು ಸರ್ಕಾರದ ವೆಚ್ಚಕ್ಕೆ ಸೇರಿಸಿಕೊಳ್ಳುವುದನ್ನು ಕಾಂಗ್ರೆಸ್ ಸರ್ಕಾರವೇ ಪ್ರಾರಂಭಿಸಿತ್ತು. ಆದರೆ ಅದನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿರುವುದು ಮೋದಿ ಸರ್ಕಾರ. ಆದರೆ ಅದು ಖಾಸಗೀಕರಿಸುತ್ತಿರುವುದು ನಷ್ಟದ ಕಂಪನಿಗಳನ್ನೇ?

ಅದನ್ನು ವಿಶ್ಲೇಷಿಸುವ ಮುಂಚೆ ಭಾರತದ ಸರ್ಕಾರಿ ಕಂಪನಿಗಳನ್ನು ಅಸಲು ಲಾಭದಾಯಕ ಮತ್ತು ನಷ್ಟದಾಯಕ ಎಂದು ವಿಂಗಡಿಸುವುದು ಸರಿಯೇ ಎಂದು ನೋಡೋಣ.

ಉದ್ಯೋಗ ನೀಡುವ ಕಂಪನಿಗಳು- ನಷ್ಟ ತೋರಿಸುವ ಸರ್ಕಾರಗಳು

2018 ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಸೇರಿದ 339 ಸಾರ್ವಜನಿಕ ಸಂಸ್ಥೆಗಳಿದ್ದವು. ಅವುಗಳಲ್ಲಿ ಒಟ್ಟಾರೆಯಾಗಿ 13 ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ತೊಡಗಿಸಲಾಗಿದೆ.

2017-18 ರ ಸಾಲಿನಲ್ಲಿ ಆ ೩೩೯ ಕಂಪನಿಗಳಲ್ಲಿ 184 ಕಂಪನಿಗಳು ಲಾಭ ಮಾಡುತ್ತಿದ್ದರೆ, ೮೪ ಕಂಪನಿಗಳು ನಷ್ಟಕ್ಕೆ ಗುರಿಯಾಗಿದ್ದವು. ಆದರೂ ಅದೇ ಸಾಲಿನಲ್ಲಿ ಲಾಭ ಮಾಡುತ್ತಿದ್ದ ಕಂಪನಿಗಳು 1,31,೦೦೦ ಕೋಟಿ ರೂ.ಗಳಷ್ಟು ಲಾಭ ಮಾಡಿದ್ದರೆ, ನಷ್ಟ ಮಾಡುತ್ತಿದ್ದ ಕಂಪನಿಗಳು ಕೇವಲ 3೦,೦೦೦ ಕೋಟಿ ನಷ್ಟ ಮಾಡಿದ್ದವು. ಅಂದರೆ ಒಟ್ಟಾರೆಯಾಗಿ ಭಾರತದ ಆರ್ಥಿಕತೆಗೆ ಸಾರ್ವಜನಿಕ ಉದ್ಯಮಗಳಿಂದ ನಷ್ಟವೇನೂ ಆಗಿರಲಿಲ್ಲ.

ಅಷ್ಟು ಮಾತ್ರವಲ್ಲ. ಈ ಎಲ್ಲಾ ಕಂಪನಿಗಳು 2018 ರ ಸಾಲಿನಲ್ಲಿ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ಟ್ಯಾಕ್ಸ್‌ಗಳ ರೂಪದಲ್ಲಿ ಸರ್ಕಾರಕ್ಕೆ 3,೧೦,೦೦ ಕೋಟಿ ರೂಗಳನ್ನು ಪಾವತಿ ಮಾಡಿದ್ದವು. ಜೊತೆಗೆ 11 ಲಕ್ಷದಷ್ಟು ಉದ್ಯೋಗಗಳನ್ನು ನೀಡಿದ್ದವು. ಮತ್ತು ಅವರಿಗೆ 2018 ರ ಸಾಲಿನಲ್ಲಿ 1,15,೦೦೦ ಕೋಟಿ ರೂಪಾಯಿಗಳನ್ನು ಸಂಬಳ ಸಾರಿಗೆಯ ರೂಪದಲ್ಲಿ ನೀಡಲಾಗಿತ್ತು.

ಸಹಜವಾಗಿಯೇ ಆ ಮೊತ್ತವು ಆರ್ಥಿಕತೆಯಲ್ಲಿ ಅಷ್ಟರ ಮಟ್ಟಿಗಿನ ಬೇಡಿಕಯನ್ನು ಸೃಷ್ಟಿಸುತ್ತಷ್ಟೆ. ಇವತ್ತು ಈ ದೇಶದ ಆರ್ಥಿಕತೆ ಕಂಗೆಟ್ಟಿರುವುದೇ ಜನರ ಕೊಳ್ಳುವ ಶಕ್ತಿಯ ಕುಸಿತದಿಂದ, ಅದಕ್ಕೆ ಕಾರಣವಾಗಿರುವ ನಿರುದ್ಯೋಗದಿಂದ ಎನ್ನುವುದರ ಹಿನ್ನೆಲೆಯಲ್ಲಿ ಈ ಉದ್ಯೋಗಗಳ ಮಹತ್ವ ಅರ್ಥವಾಗುತ್ತದೆ. ಸರ್ಕಾರಿ ಕಂಪನಿಗಳನ್ನು ನಷ್ಟದಾಯಕ ಎಂದು ವರ್ಗೀಕರಿಸುವುದರ ಅಸಂಬದ್ಧತೆಯನ್ನು ತೋರಿಸುತ್ತದೆ.

ಅದೇನೇ ಇರಲಿ. ಮೋದಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ನಷ್ಟಕ್ಕೆ ಗುರಿಯಾಗಿರುವ ಆ 84 ಕಂಪನಿಗಳನ್ನು ಖಾಸಗೀಕರಿಸುವುದಾಗಿ ಹೇಳುತ್ತಾ ಬಂದಿತ್ತು. ವಾಸ್ತವವಾಗಿ ಪ್ರತಿ ಬಜೆಟ್ಟಿನಲ್ಲೂ ಮೋದಿ ಸರ್ಕಾರ ಸಾರ್ವಜನಿಕ ಸಂಸ್ಥೆಗಳ ಮಾರಾಟದಿಂದ ಎಷ್ಟು ಸಂಪನ್ಮೂಲ ಕ್ರೂಢೀಕರಿಸಲಾಗುವುದೆಂದು ಘೋಷಿಸುತ್ತಲೇ ಬಂದಿದೆ. ಹಾಗೂ ಈ ಬಗೆಯಲ್ಲಿ ದೇಶದ ಸ್ವತ್ತುಗಳ ಹರಾಜಿನ ಮೂಲಕ 2014-2018 ರ ನಡುವೆ 3 ಲಕ್ಷ ಕೋಟಿಗಳನ್ನು ಸಂಗ್ರಹಿಸಿದೆ.

ಆದರೆ ಅದು ನಷ್ಟದ ಕಂಪನಿಯನ್ನು ಹರಾಜು ಮಾಡಿಯಲ್ಲ. ಬದಲಿಗೆ ಮಹಾರತ್ನಗಳನ್ನು ಮಾರಿ.

ಮೋದಿ ಸರ್ಕಾರದಲ್ಲಿ ಬೆಣಚು ಕಲ್ಲುಗಳಾದ ಮಹಾರತ್ನಗಳು

ಉದಾಹರಣೆಗೆ ಕರ್ನಾಟಕದ ಬಿಜೆಪಿ ಎಂಪಿ ಶಿವಕುಮಾರ್ ಉದಾಸಿಯವರು ಕೇಳಿರುವ ಚುಕ್ಕೆ ರಹಿತ ಪ್ರಶ್ನೆಯೊಂದಕ್ಕೆ 2019 ರ ನವಂಬರ್ 18 ರಂದು ಹಣಕಾಸು ಮಂತ್ರಿಗಳು ಕೊಟ್ಟಿರುವ ವಿವರ ಇಂತಿದೆ:
2014-15 ರ ಸಾಲಿನಲ್ಲಿ ಭಾರತ ಸರ್ಕಾರವು ಸರ್ಕಾರಿ ಕಂಪನಿಗಳಲ್ಲಿನ ಸರ್ಕಾರದ ಶೇರುಗಳನ್ನು ಮಾರಿ 24,348 ಕೋಟಿ ರೂಪಾಯಿಗಳನ್ನು ಕ್ರೂಢೀಕರಿಸಿದೆ. ಆದರೆ ಇದರಲ್ಲಿ ನಷ್ಟ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದ ಕಂಪನಿಗಳ ಶೇರು ಮಾರಾಟದಿಂದ ಪಡೆದುಕೊಂಡದ್ದು 24 ಕೋಟಿ ರೂಪಾಯಿಗಳು ಮಾತ್ರ. ಆದರೆ ಮಹಾರತ್ನ ಕಂಪನಿಯಾದ ಕೋಲ್ ಇಂಡಿಯಾದಲ್ಲಿ ಶೆ.10 ರಷ್ಟು ಶೇರನ್ನು ಮಾರಾಟ ಮಾಡಿ 22,೦೦೦ ಕೋಟಿ ರೂಪಾಯಿಗಳನ್ನೂ ಹಾಗೂ ಮತ್ತೊಂದು ಮಹಾರತ್ನವಾದ ಸ್ಟೀಲ್ ಅಥಾರಿಟಿಯ ಶೇ.5 ರಷ್ಟು ಮಾರಾಟದಿಂದ 1700 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಯಿತು.

2015-16 ರ ಸಾಲಿನಲ್ಲಿ ಸರ್ಕಾರಿ ಕಂಪನಿಗಳಲ್ಲಿನ ತನ್ನ ಪಾಲನ್ನು ಮಾರುವುದರಿಂದ 24,000 ಕೋಟಿ ಸಂಗ್ರಹಿಸಿದ್ದರೆ ಅದರಲ್ಲಿ 14,000 ಕೋಟಿ ರೂ. ಬಂದದ್ದು ಮಹಾರತ್ನ ಕಂಪನಿಯಾದ ಇಂಡಿಯಾ ಆಯಿಲ್ ಮತ್ತು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ನಿನಲ್ಲಿನ ಸರ್ಕಾರದ ಪಾಲಿನ ಮಾರಾಟದಿಂದ
2016-17 ರ ಸಾಲಿನಲ್ಲಿ ಈ ಮಾರ್ಗದಲ್ಲಿ 44,000 ಕೋಟಿ ರೂಗಳನ್ನು ಸಂಗ್ರಹಿಸಿದ್ದರೆ ಅದರಲ್ಲಿ ಶೇ.70 ರಷ್ಟು ಮೊತ್ತವನ್ನು 10 ಮಹಾರತ್ನಗಳನ್ನು ಮತ್ತು ಇತರ 12 ಲಾಭದಾಯಕ ಸರ್ಕಾರಿ ಕಂಪನಿಗಳನ್ನು ಕಂಪನಿಗಳನ್ನು ಸೇರಿಸಿ ರೂಪಿಸಲಾದ ಭಾರತ್-22 ಎಂಬ ಸ್ಟಾಕನ್ನು ಮಾರುವ ಮೂಲಕ ಹಾಗೂ ವಿಶೆಷವಾಗಿ ಕೋಲ್ ಇಂಡಿಯಾ ಮತ್ತು ಇಂದಿಯನ್ ಆಯಿಲ್ ಕಂಪನಿಯ ಶೇರುಗಳನ್ನು ಮಾರುವ ಮೂಲಕ ಸಂಗ್ರಹಿಸಲಾಯಿತು.

2017-18 ರ ಸಾಲಿನಲ್ಲಿ ಈ ದಾರಿಯಲ್ಲಿ 100,056 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಯಿತು. ಇದರ ಪ್ರಧಾನ ಪಾಲು ಬಂದದ್ದು ಭಾರತ್-22 ರ ಮಾರಾಟದಿಂದ ಮತ್ತು ನಷ್ಟದಾಯಕ ಕಂಪೆನಿಗಳನ್ನು ಲಾಭದಾಯಕ ಸರ್ಕಾರಿ ಕಂಪನಿಗಳು ಕೊಂಡುಕೊಳ್ಳುವಂತೆ ಮಾಡುವ ಮೂಲಕ.

2018-19 ರ ಸಾಲಿನಲ್ಲಿ 84971 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದ್ದರೆ ಅದರಲ್ಲಿ ಭಾರತ್-22, ಕೋಲ್ ಇಂಡಿಯಾ, ಇಂಡಿಯನ್ ಆಯಿಲ್, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಇತ್ಯಾದಿ ಮಹಾರತ್ನಗಳ ಮಾರಾಟದಿಂದಲೇ..
ಇನ್ನು 2019-20 ರ ಸಾಲಿನಲ್ಲಿ ಈವರೆಗೆ 17364 ಕೋಟಿ ರೂಗಳನ್ನು ಮಾತ್ರ ಸಂಗ್ರಹಿಸಿದ್ದರೂ, ಅದರಲ್ಲೂ ಸಹ ಭಾರತ್-22 ಮತ್ತು ಮಹಾರತ್ನಗಳ ಪಾಲೇ 15,000 ಕೋಟಿ ರೂಗಳಾಗಿದೆ.

(ಮತ್ತಷ್ಟು ವಿವರಗಳನ್ನು ಆಸಕ್ತರು ಲೋಕಸಭಾ ವೆಬ್‌ಸೈಟಿನಗೆ ಹೋಗಲು ಇಲ್ಲಿ ಕ್ಲಿಕ್ ಮಾಡುವ ಮೂಲಕ ಪಡೆಯಬಹುದು)

ಸಣ್ಣ ತೂತು ಮುಚ್ಚಿಕೊಳ್ಳಲು ದೊಡ್ಡ ತೂತು ಕೊರೆಯುವುದು ಮನೆಮುರುಕುತನವಲ್ಲವೇ?

ಆದರೆ ಈ ವರ್ಷ ಮೋದಿ ಸರ್ಕಾರ ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿದೆ. ಈವರ್ಷ ಬಜೆಟ್ ಮಂಡಿಸುವಾಗಲೇ ಸರ್ಕಾರಿ ಕಂಪನಿಗಳ ಮಾರಾಟದ ಮೂಲಕ 1,10,000 ಕೋಟಿ ರೂಗಳನ್ನು ಸಂಗ್ರಹಿಸುವುದಾಗಿ ಸರ್ಕಾರ ಘೋಷಿಸಿತ್ತು. ತೆರಿಗೆ ಮೂಲಗಳಿಂದಲೇ ಹೋದ ವರ್ಷಕ್ಕಿಂತ 2 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವುದಾಗಿ ಕೊಚ್ಚಿಕೊಂಡಿತ್ತು.

ಆದರೆ 1991 ರಿಂದ ಕಾಂಗ್ರೆಸ್ ಪ್ರಾರಂಭಿಸಿದ ಜನವಿರೋಧಿ ಆರ್ಥಿಕ ನೀತಿಗಳನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಜಾರಿ ಮಾಡಲಾರಂಭಿಸಿದ ಮೋದಿ ಸರ್ಕಾರದ ಕ್ರಮಗಳು ಜನರ ಅದರಲ್ಲೂ ಗ್ರಾಮೀಣ ರೈತಾಪಿಯ ಬೆನ್ನೆಲುಬನ್ನೇ ಮುರಿಯಲಾರಂಭಿಸಿತ್ತು. ಅದರ ಜೊತೆಗೆ 2016 ರ ನೋಟು ನಿಷೇಧ ಹಾಗೂ 2017 ರಲ್ಲಿ ಜಾರಿಗೆ ತಂದ ಜಿಎಸ್‌ಟಿ ನೀತಿಗಳು ಸಣ್ಣಪುಟ್ಟ ಉದ್ಯಮಿಗಳ, ರೈತಾಪಿಗಳ, ಅಸಂಘಟಿತ ವಲಯದ ಕೋಟ್ಯಂತರ ಜನರ ಕೊಳ್ಳುವ ಶಕ್ತಿಯನ್ನೇ ಕಿತ್ತುಕೊಂಡ ಮೇಲೆ ಒಟ್ಟಾರೆ ದೇಶದ ಆರ್ಥಿಕತೆ ಹಿಂದಿನ ಹಲವು ದಶಕಗಳಿಗಿಂತಲೂ ಪಾತಾಳವನ್ನು ಮುಟ್ಟಿದೆ.

ಹೀಗಾಗಿ ಈ ವರ್ಷದ ತೆರಿಗೆ ಸಂಗ್ರಹ ಹೋದವರ್ಷಕ್ಕಿಂತ 2 ಲಕ್ಷ ಕೋಟಿ ಜಾಸ್ತಿಯಾಗುವುದಿರಲಿ. ಒಂದೂವರೆ ಲಕ್ಷ ಕೋಟಿ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸ್ರುವ ಕಾರ್ಯಕ್ರಮಗಳನ್ನು ಅರ್ಧದಷ್ಟು ಜಾರಿ ಮಾಡಬೇಕಾದರೂ ತೆರಿಗೆಯೇತರ ಸಂಪನ್ಮೂಲದ ಸಂಗ್ರಹಿಸಬೇಕಾಗಿದೆ. ಆದರೆ ನವಂಬರ್ ಕಳೆಯುತ್ತಾ ಬಂದರೂ ಪ್ರಮುಖ ತೆರಿಗೆಯೇತರ ಆದಾಯ ಮೂಲವಾಗಿರುವ ಖಾಸಗೀಕರಣದಿಂದ ಸಂಗ್ರಹವಾಗಿರುವುದು ಕೇವಲ 17 ಸಾವಿರ ಕೋಟಿ ರೂಗಳು ಮಾತ್ರ.

ಈ ಕಾರಣದಿಂದಾಗಿಯೇ ಇದ್ದಕ್ಕಿದ್ದಂತೆ ಈವರಗೆ ಮಾರುವ ಪಟ್ಟಿಯಲ್ಲಿ ಇಲ್ಲದಿದ್ದ ಮಹಾರತ್ನ ಬಿಪಿಸಿಎಲ್ ಅನ್ನು ತರಾತುರಿಯಲ್ಲಿ ಮಾರಿ 60 ಸಾವಿರ ಕೋಟಿಗಳನ್ನು ಸಂಗ್ರಹಿಸಹೊರಟಿದೆ. ಇದನ್ನು ಕೊಂಡುಕೊಳ್ಳಲು ತುದಿಗಾಲಲ್ಲಿ ನಿಂತಿರುವುದು ಭಾರತದ ಅಂಬಾನಿಯ ಮೂಲಕ ಸೌದಿಯ ಆರಾಮ್ಕೋ, ಬ್ರಿಟನ್ನಿನ ಬಿಪಿ ಮತ್ತು ಶೆಲ್ ಆಯಿಲ್ ಕಂಪನಿಗಳು. ಈವರೆಗೆ ತೈಲ ವಿತರಣೆಯು ಸರ್ಕಾರದ ಒಡೆತನದಲ್ಲಿ ಇದ್ದಿದ್ದಕ್ಕೆ ಭಾರತದ ತೈಲ ಬೆಲೆ ಏರಿಕೆ ಲ್ಯಾಟಿನ್ ಅಮೆರಿಕಾದಲ್ಲಿ ಆದಷ್ಟು ಏರಲಿಲ್ಲ. ಹಾಗೆಯೇ ತೈಲ ವಿತರಣೆಯ ಸಾರ್ವಭೌಮತೆ ಇನ್ನೂ ಸರ್ಕಾರದ ಒಡೆತನದಲ್ಲೇ ಇದ್ದಿದೆ. ಆದರೆ ನಾಳೆ ಅದರಲ್ಲೂ ಈ ವಿದೇಶಿ ಕಂಪನಿಗಳದ್ದೇ ಮೇಲುಗೈ ಆದರೆ ಭಾರತವು ತನ್ನ ಪರಾವಲಂಬನೆಯಿಂದಾಗಿಯೇ ಜನರ ಹಾಗೂ ದೇಶದ ಅಭಿವೃದ್ಧಿಯ ಬಗೆಗಿನ ಸಾರ್ವಭೌಮತೆಯನ್ನೇ ಕಳೆದುಕೊಳ್ಳುತ್ತದೆ.

ಈ ಮೇಲಿನ ವಿವರಗಳು ಸ್ಪಷ್ಟಪಡಿಸುವಂತೆ ಖಾಸಗಿ ಕಂಪನಿಗಳು ಲಾಭದಾಯಕ ಸರ್ಕಾರಿ ಕಂಪನಿಗಳನ್ನು ಕೊಳ್ಳುತ್ತವೆಯೇ ವಿನಾ ನಷ್ಟದ ಕಂಪನಿಗಳನ್ನಲ್ಲ. ಮತ್ತು ಮೋದಿ ಸರ್ಕಾರವು ಈ ದೇಶದ ಮಹಾರತ್ನಗಳನ್ನು ಬಿಡಿಬಿಡಿಯಾಗಿ ಮತ್ತು ಇಡಿಯಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಿ ದೇಶದ ಸಾರ್ವಭೌಮತೆಯನ್ನು ಹರಾಜಿಗಿಡುತ್ತಿದೆ.

ಇದಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿರಬಹುದೇ?

ಶಿವಸುಂದರ್ (ಲೇಖಕರು ಸಾಮಾಜಿಕ ಹೋರಾಟಗಾರರು, ಚಿಂತಕರು)


 ಓದಿ: ಕಮರಿದ ವಿಶ್ವಾಸ; ಕುಲೀನ ಅನುಮಾನಗಳ ನಡುವೆ, ಈ ದೇಶ ಮತ್ತೊಮ್ಮೆ ವಿಭಜನೆಯಾಗಿದೆ: ಶಿವಸುಂದರ್‌


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read