Homeಕರ್ನಾಟಕಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ: ಕಾಳಜಿ ವಹಿಸದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ: ಕಾಳಜಿ ವಹಿಸದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ಎಲ್ಲಾ ಪೌರಕಾರ್ಮಿಕರಿಗೂ ಪಿಪಿಇ ಕಿಟ್ ನೀಡಬೇಕು ಮತ್ತು ಉಚಿತ ಹಾಗೂ ತ್ವರಿತ ಕೋವಿಡ್ ಟೆಸ್ಟ್ ಮಾಡಿಸಬೇಕು, ಉತ್ತಮ ಕೆಲಸದ ವಾತಾವರಣ ಕಲ್ಪಿಸಿ, ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು ಎಂಬುದು ಕಾರ್ಮಿಕರ ಹಕ್ಕೊತ್ತಾಯವಾಗಿದೆ.

- Advertisement -
- Advertisement -

ಕೊರೊನಾ ವಾರಿಯರ್ಸ್ ಆಗಿ ಮುಂಚೂಣಿಯಲ್ಲಿ ನಿಂತು ನಿರಂತರವಾಗಿ ಕೆಲಸ ಮಾಡುತ್ತಿರುವ ಮೂವರು ಪೌರಕಾರ್ಮಿಕರು ಕೋವಿಡ್‌ಗೆ ಬಲಿಯಾಗಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಲ್ಲಿ ಸರ್ಕಾರದ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿರುವ ಪೌರಕಾರ್ಮಿಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಸಾವನಪ್ಪಿದ ಪೌರಕಾರ್ಮಿಕರಿಗೆ ಇಂದು ಬೆಳಿಗ್ಗೆ ಮಾಗಡಿ ರಸ್ತೆ ಸೇರಿದಂತೆ ಹಲವೆಡೆ   AICCTU ಸಂಘಟನೆಯ ಪೌರಕಾರ್ಮಿಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಲ್ಲದೇ ಇಂದು ಸಂಜೆ ಮೊಂಬತ್ತಿ ಪ್ರತಿಭಟನೆಗೆ ಕರೆ ನೀಡಿದ್ದು ಮತ್ತು ನಾಳೆ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಬಿಬಿಎಂಪಿ ಪೌರಕಾರ್ಮಿಕ ಸಂಘ ಮತ್ತು ಅಖಿಲ ಭಾರತ ಪೌರಕಾರ್ಮಿಕ ಸಂಘಟನೆಗಳ ಕೇಂದ್ರ ಸಮಿತಿ ನಿರ್ಧರಿಸಿದೆ.

ವಿಜಯನಗರ ವಾರ್ಡ್‌ ಮತ್ತು ಕತ್ರಿಗುಪ್ಪೆ ವಾರ್ಡ್ ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಗೋರಿಪಾಳ್ಯದ ನಿವಾಸಿಗಳಾದ ನರಸಮ್ಮ ಮತ್ತು ಶ್ರೀನಿವಾಸಲು ಕಳೆದ ವಾರ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಆದರೆ ಇಲ್ಲಿಯವರೆಗೂ ಸರ್ಕಾರವಾಗಲಿ, ಬಿಬಿಎಂಪಿಯಾಗಲಿ ಆ ಪೌರಕಾರ್ಮಿಕರ ಪರವಾಗಿ ಒಂದೂ ಮಾತು ಆಡಿಲ್ಲ, ಅವರ ಕುಟುಂಬ ನೆರವು ನೀಡಿಲ್ಲ ಎಂಬುದು ಪೌರಕಾರ್ಮಿಕರ ಆರೋಪವಾಗಿದೆ.

ಇನ್ನೊಂದೆಡೆ ರಾಮಸ್ವಾಮಿ ಪಾಳ್ಯದ 28 ವರ್ಷದ ಶಿಲ್ಪಾ ಎಂಬ ಪೌರಕಾರ್ಮಿಕರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದು ಸೂಕ್ತ ಸಮಯದಲ್ಲಿ ಆಸ್ಪತ್ರೆ ಸಿಗದುದ್ದುದ್ದೆ ಸಾವಿಗೆ ಕಾರಣ ಎಂದು ಕುಟುಂಬದವರು ದೂರಿದ್ದಾರೆ. ಕೋವಿಡ್ ಪಾಸಿಟಿವ್ ಆದ ಅವರಿಗೆ ಉಸಿರಾಟ ಸಮಸ್ಯೆ ಉಂಟಾದಾಗ ವೆಂಟಿಲೇಟರ್ ಇರುವ ಆಸ್ಪತ್ರೆ ಸಿಗದೆ ಅಲೆದಾಡಿದ್ದಾರೆ. 7 ಆಸ್ಪತ್ರೆಗಳ ಅಲೆದಾಟದ ನಂತರ ಕೊನೆಗೆ ಕಾವಲ್ ಭೈರಸಂದ್ರದ ಡಾ.ಬಿ.ಆರ್ ಅಂಬೇಡ್ಕರ್ ವೈದ್ಯಕೀಯ ಕಾಲೇಜಿಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕೋವಿಡ್‌ನಿಂದ ಮೃತಪಟ್ಟ ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ

ಕೋವಿಡ್‌ನಿಂದ ಮೃತಪಟ್ಟ ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ, ಮಾಗಡಿ ರಸ್ತೆ, ಬೆಂಗಳೂರು. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆಗೆ ತೀರ್ಮಾನ

Posted by Naanu Gauri on Friday, July 17, 2020

ಇಷ್ಟೆಲ್ಲಾ ಸಾವು ನೋವುಗಳು ವರದಿಯಾಗುತ್ತಿದ್ದರೂ ಸರ್ಕಾರ ನಮ್ಮ ಕಡೆ ಕಣ್ಣೆತ್ತಿ ನೋಡುತ್ತಿಲ್ಲ. ಮಾಸ್ಕ್ ಸ್ಯಾನಿಟೈಸರ್ ಬಿಟ್ಟರೆ ಬೇರೆನೂ ಕೊಡುತ್ತಿಲ್ಲ. ಸಾವನಪ್ಪಿದ ಪೌರಕಾರ್ಮಿಕರ ಕುಟುಂಬಕ್ಕೆ ಕರೆ ಮಾಡಿ ಸಾಂತ್ವಾನ ಹೇಳುವ ಕನಿಷ್ಟ ಕೆಲಸ ಸರ್ಕಾರದ ಕಡೆಯಿಂದ ಆಗಿಲ್ಲ. ಉಳಿದ ಪೌರಕಾರ್ಮಿಕರೂ ಸಹ ಕೋವಿಡ್‌ಗೆ ತುತ್ತಾಗುವ ಸಂಭವವಿರುವುದರಿಂದ ಅವರ ಕಾಳಜಿಗೆ ಸರ್ಕಾರದ ಬಳಿ ಯಾವುದೇ ಕ್ರಮಗಳಿಲ್ಲ. ಹಾಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಪೌರಕಾರ್ಮಿಕರು ತಿಳಿಸಿದ್ದಾರೆ.

ಇದುವರೆಗೂ ಸೂಕ್ತ ರಕ್ಷಣೆ ನೀಡಿ ಎಂದು ಹಲವಾರು ಮನವಿಗಳನ್ನು ಬಿಬಿಎಂಪಿಗೆ ಸಲ್ಲಿಸಿದ್ದೇವೆ. ಆದರೆ ಬಿಬಿಎಂಪಿ ಸ್ಪಂದಿಸಿಲ್ಲ. ಸರ್ಕಾರದ ನಿರ್ಲಕ್ಷ್ಯಕ್ಕೆ ಇನ್ನು ಎಷ್ಟು ಜನ ಕಾರ್ಮಿಕರು ಬಾಧಿತರಾಗಬೇಕು ಎಂದು ಪೌರಕಾರ್ಮಿಕರು ಪ್ರಶ್ನಿಸಿದ್ದಾರೆ.

ಎಲ್ಲಾ ಪೌರಕಾರ್ಮಿಕರಿಗೂ ಪಿಪಿಇ ಕಿಟ್ ನೀಡಬೇಕು ಮತ್ತು ಉಚಿತ ಹಾಗೂ ತ್ವರಿತ ಕೋವಿಡ್ ಟೆಸ್ಟ್ ಮಾಡಿಸಬೇಕು, ಉತ್ತಮ ಕೆಲಸದ ವಾತಾವರಣ ಕಲ್ಪಿಸಿ, ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು ಎಂಬುದು ಕಾರ್ಮಿಕರ ಹಕ್ಕೊತ್ತಾಯವಾಗಿದೆ.

ಇಂದು ಸಂಜೆ 7 ಗಂಟೆಗೆ ಎಲ್ಲಾ ಪೌರಕಾರ್ಮಿಕರು ಸೇರಿದಂತೆ ಪ್ರಜ್ಞಾವಂತರು ತಮ್ಮ ತಮ್ಮ ಮನೆಗಳಲ್ಲಿಯೇ ಮೋಂಬತ್ತಿ ಹಚ್ಚುವುದರ ಮೂಲಕ ಸಾವನಪ್ಪಿದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ. ಆ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಜೊತೆಗೆ ಬಿಬಿಎಂಪಿ ಕಮಿಷನರ್, ಬಿಬಿಎಂಪಿ ಮೇಯತ್ ಮತ್ತು aicctukar ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಬೇಕೆಂದು ಬಿಬಿಎಂಪಿ ಪೌರಕಾರ್ಮಿಕ ಸಂಘ ಮತ್ತು ಅಖಿಲ ಭಾರತ ಪೌರಕಾರ್ಮಿಕ ಸಂಘಟನೆಗಳ ಕೇಂದ್ರ ಸಮಿತಿ ಮನವಿ ಮಾಡಿದೆ.

ಅದೇ ರೀತಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಬಿಬಿಎಂಪಿ ಕಚೇರಿ ಎದುರು ಮತ್ತು ತಮ್ಮ ತಮ್ಮ ವಾರ್ಡ್ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.


ಇದನ್ನೂ ಓದಿ: ಪೌರಕಾರ್ಮಿಕರಿಗೂ ಕೊರೊನ ಸೋಂಕು; ಸಮುದಾಯದ ನಡುವೆ ಹರಡುವ ಆತಂಕದಲ್ಲಿ ಕುಟುಂಬಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read