Homeಮುಖಪುಟಸಾದತ್ ಹಸನ್ ಮಂಟೋನ ಕಥೆ 'ಹಲಾಕತ್ - ಮೃತ್ಯುದೇವತೆ': ಅನುವಾದ - ಪುನೀತ್ ಅಪ್ಪು

ಸಾದತ್ ಹಸನ್ ಮಂಟೋನ ಕಥೆ ‘ಹಲಾಕತ್ – ಮೃತ್ಯುದೇವತೆ’: ಅನುವಾದ – ಪುನೀತ್ ಅಪ್ಪು

ಮಂಟೊ ಚಿತ್ರಿಸಿದ ಹೆಣ್ಣು ' ಸೌಗಂಧಿ' ಎಂಬ ಕಥಾಸಂಕಲನವನ್ನು ಪುನೀತ್ ಅಪ್ಪು ಹೊರತರುತ್ತಿದ್ದಾರೆ. ಅದರ ಒಂದು ಕಥೆ ಇಲ್ಲಿದೆ.

- Advertisement -
- Advertisement -

ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ ಜನರಿಗೋಸ್ಕರ ಮರುಗಿದ, ಭಾರತದ ಕನವರಿಕೆಯಲ್ಲಿಯೇ ಪ್ರಾಣ ತ್ಯಜಿಸಿದ ಮಂಟೋ ಬರಿಯ ಕಥೆಗಾರನಲ್ಲ, ಆತನ ಬದುಕೇ ಒಂದು ರೂಪಕ. ಕೇವಲ 43 ವರ್ಷ ಬದುಕಿದ್ದ ಮಾಂಟೋ ಸೃಷ್ಟಿಸಿದ ಸಾಹಿತ್ಯ ಮರೆಯಲಾಗದು. ಅವರ ಒಂದು ಕಥೆಯನ್ನು ಕನ್ನಡದ ಯುವ ಬರಹಗಾರ ಪುನೀತ್ ಅಪ್ಪು ಕನ್ನಡೀಕರಿಸಿದ್ದಾರೆ.

ಆ ಊರಿನ ಹೆಸರು ಅಷ್ಟೊಂದು ಮುಖ್ಯವಲ್ಲ. ಪೇಷಾವರದ ಹೊರವಲಯದಲ್ಲಿರುವ ಒಂದು ಹಳ್ಳಿ, ಪುಟ್ಟ ಮಣ್ಣಿನ ಮನೆಯೊಂದನ್ನು ಕಟ್ಟಿಕೊಂಡು ಆ ಹೆಂಗಸು ಇದ್ದುದು ಅಲ್ಲಿಯೇ, ಡಾಮರು ಹಾಕದ ಧೂಳು ತುಂಬಿದ ರಸ್ತೆಯ ಪಕ್ಕದಲ್ಲೇ ಇದ್ದರೂ ಸುತ್ತಲೂ ದಟ್ಟವಾಗಿ ಬೆಳೆದಿದ್ದ ಪಾಪಾಸುಕಳ್ಳಿಗಳ ಬೇಲಿಯಿಂದಾಗಿ ಅದು ಅಷ್ಟು ಸುಲಭವಾಗಿ ಕಾಣಿಸುತ್ತಿರಲಿಲ್ಲ.

ಪಾಪಾಸುಕಳ್ಳಿಗಳು ಚೆನ್ನಾಗಿ ಒಣಗಿಹೋಗಿದ್ದವು. ಆದರೆ ಅವು ಎಷ್ಟು ದಟ್ಟವಾಗಿ ಮತ್ತು ಉದ್ದುದ್ದವಾಗಿ ಬೆಳೆದಿದ್ದವೆಂದರೆ ಆ ಮನೆ ಹೊರಗಿನವರ ದೃಷ್ಟಿಗೆ ಬೀಳದಂತೆ ಮುಳ್ಳಿನ ಪರದೆಗಳನ್ನೇ ಎಬ್ಬಿಸಿದಂತೆ ಕಾಣುತ್ತಿದ್ದವು. ಅದು ಮೊದಲಿನಿಂದಲೇ ಇತ್ತೋ ಅಥವಾ ಆ ಹೆಂಗಸೇ ಅದನ್ನು ನೆಟ್ಟಿದ್ದಳೋ ಎಂದು ಬಹುಷಃ ಯಾರಿಗೂ ತಿಳಿದಿರಲಿಲ್ಲ.

ಅದು ಮೂರು ಸಣ್ಣ ಸಣ್ಣ ಕೋಣೆಗಳುಳ್ಳ ಒಂದು ಪುಟ್ಟ ಗುಡಿಸಲಾಗಿತ್ತು. ಆದರೂ ಮನೆಯೊಳಗೆ ಎಲ್ಲವೂ ಚೊಕ್ಕವಾಗಿತ್ತು. ಪೀಠೋಪಕರಣಗಳಂತಹುದು ಏನೂ ಜಾಸ್ತಿ ಇಲ್ಲದಿದ್ದರೂ ಅಲ್ಲಿರುವಂತಹದೆಲ್ಲವೂ ತಕ್ಕಮಟ್ಟಿಗೆ ಸುಂದರವಾಗಿಯೇ ಇದ್ದವು. ಹಿಂದಿನ ಕೋಣೆಯಲ್ಲಿ ಒಂದು ದೊಡ್ಡನೆಯ ಮಂಚವಿತ್ತು, ಅದಕ್ಕೆ ತಾಗಿಯೇ ಇದ್ದ ಚಾವಡಿಯಂತಹ ಸ್ಥಳದಲ್ಲಿ ಮಣ್ಣಿನ ಹಣತೆಯೊಂದು ರಾತ್ರಿಯಿಡೀ ಉರಿಯುತ್ತಿತ್ತು. ಎಲ್ಲವೂ ವ್ಯವಸ್ಥಿತವಾಗಿಯೇ ಇತ್ತು.

ಈಗ ತನ್ನ ಹದಿಹರೆಯದ ಹೆಣ್ಣುಮಗಳೊಂದಿಗೆ ವಾಸಿಸುತ್ತಿದ್ದ ಆ ಹೆಂಗಸಿನ ವಿಷಯಕ್ಕೆ ಬರೋಣ.

ಅವರ ಬಗ್ಗೆ ಸಾಕಷ್ಟು ಸುದ್ದಿಗಳಿದ್ದವು. ಕೆಲವರು ಆ ಹೆಣ್ಣುಮಗಳು ಆಕೆಯ ಅಸಲಿ ಮಗಳೇ ಅಲ್ಲವೆಂದೂ, ಒಬ್ಬ ಅನಾಥ ಮಗುವೊಂದನ್ನು ಕೊಂಡು ತಂದು ಆಕೆಯೇ ಸಾಕಿದ್ದಾಳೆಂದೂ ಹೇಳುತ್ತಿದ್ದರು. ಇನ್ನು ಕೆಲವರು ಅದು ಆಕೆಯ ಅನೈತಿಕ ಸಂಬಂಧದ ಮಗಳಿರಬೇಕೆಂದೂ ಹಾಗೂ ಕೆಲವರು ಅವಳ ನಿಜವಾದ ಮಗಳೇ ಆಗಿದ್ದಾಳೆಂದೂ ನಂಬಿದ್ದರು. ಯಾರಿಗೂ ಸತ್ಯ ವಿಷಯ ಮಾತ್ರ ಗೊತ್ತಿರಲಿಲ್ಲ.

ನಿಮಗೆ ಆ ಹೆಂಗಸಿನ ಹೆಸರು ಹೇಳಲು ನನಗೆ ಮರೆತೇ ಹೋಗಿತ್ತು, ಅದು ಅಂತಹ ವಿಷಯವೇನೂ ಅಲ್ಲ. ಅದು ಸಕೀನಾ, ಮೆಹ್ತಾಬ್, ಗುಲ್ಶನ್ ಅಥವಾ ಇನ್ನೇನೋ ಆಗಿರಬಹುದು ಆದರೆ ನಮ್ಮ ಅನುಕೂಲತೆಗಾಗಿ ಆಕೆಯನ್ನು ಸರ್ದಾರ್ ಎಂದು ಕರೆಯೋಣ.

ಆಕೆ ಮಧ್ಯವಯಸ್ಕಳಾಗಿದ್ದಳು, ಹರೆಯದಲ್ಲಿ ಸಾಕಷ್ಟು ಸುಂದರಿಯಾಗಿದ್ದಿರಬಹುದು. ವಯಸ್ಸಿಗಿಂತ ತುಸು ಕಿರಿಯವಳಾಗಿಯೇ ಕಾಣಿಸುತ್ತಿದ್ದರೂ ಈಗ ಆಕೆಯ ಮುಖ ಸುಕ್ಕು ಬೀಳಲು ಶುರುವಾಗಿತ್ತು.

ಆಕೆಯ ಮಗಳು… ಒಂದು ವೇಳೆ ಆಕೆಯ ಮಗಳೇ ಆಗಿದ್ದರೆ.. ತುಂಬಾ ಅಂದವಾಗಿದ್ದಳು. ಆಕೆಯೇನೂ ತುಂಬಾ ಸುಖಿ ಎಂದು ಹೇಳುವಂತಿಲ್ಲವಾದರೂ ಆಕೆ ಸುಖವಾಗಿಯೇ ಇದ್ದಳು. ದಂಧೆಯೂ ಚೆನ್ನಾಗಿಯೇ ಇತ್ತು. ಆ ಹುಡುಗಿ, ನಾನವಳನ್ನು ನವಾಬ್ ಎಂದು ಕರೆಯುತ್ತೇನೆ, ತನ್ನ ಬದುಕಿನ ಬಗ್ಗೆ ದುಃಖಿಯೇನೂ ಆಗಿರಲಿಲ್ಲ. ವೈವಾಹಿಕ ಸಂಬಂಧಗಳ ಕಲ್ಪನೆಯೇ ಇಲ್ಲದ ವಾತಾವರಣವೊಂದರಲ್ಲಿ ಆಕೆ ಬೆಳೆದು ದೊಡ್ಡವಳಾಗಿದ್ದಳು.

ಸರ್ದಾರ್ ಹಿಂದಿನ ಕೋಣೆಯಲ್ಲಿದ್ದ ದೊಡ್ಡ ಮಂಚದ ಮೇಲೆ ಆಕೆಯ ಮೊದಲ ಗಂಡಸನ್ನು ತಂದಿದ್ದಾಗ, ಅದೊಂದು ಋತುಮತಿಯರಾದ ನಂತರ ಹೆಣ್ಣು ಮಕ್ಕಳ ಜೊತೆಗೆ ನಡೆಯುವ ಸಹಜ ಕ್ರಿಯೆಯೆಂದೇ ನವಾಬ್ ಭಾವಿಸಿದ್ದಳು. ನಂತರದ ದಿನಗಳಲ್ಲಿ ಅದೇ ಆಕೆಯ ಬದುಕಿನ ಭಾಗವಾಗಿತ್ತು ಮತ್ತು ಆಕೆ ಅದರಲ್ಲಿ ಖುಷಿ ಪಡುತ್ತಿದ್ದಳು.

ಆದರೆ ಬಹುಪ್ರಚಲಿತದಲ್ಲಿದ್ದ ನಂಬಿಕೆಯಂತೆ, ಆಕೆ ಓರ್ವ ವೇಶ್ಯೇ ಎಂದು ತಿಳಿದಿದ್ದರೂ ಆಕೆಗೆ ಯಾವುದೇ ಪಾಪದ ಬಗೆಗಿನ ತಿಳುವಳಿಕೆಯಾಗಲಿ, ಜ್ಞಾನವಾಗಲೀ ಇರಲಿಲ್ಲ. ಅದಕ್ಕೆ ಆಕೆಯ ಜಗತ್ತಿನಲ್ಲಿ ಅಸ್ತಿತ್ವವೇ ಇರಲಿಲ್ಲ.

ಆಕೆಯಲ್ಲೊಂದು ದೈಹಿಕ ಪ್ರಾಮಾಣಿಕತೆಯಿತ್ತು. ಆಕೆಯನ್ನು ಕೊಂಡುಕೊಂಡಂತಹ ಗಂಡಸರಿಗೆ, ಆಕೆ ನಿಶ್ಶರ್ತವಾಗಿ ಮತ್ತು ಸಂಪೂರ್ಣವಾಗಿ ತನ್ನನ್ನು ಒಪ್ಪಿಸಿಬಿಡುತ್ತಿದ್ದಳು. ಗಂಡಸರನ್ನು ನಯವಾಗಿ ಮತ್ತು ಯಾವುದೇ ತಿರಸ್ಕಾರವಿಲ್ಲದೆ ಪ್ರೀತಿಸುವುದು ಹೆಣ್ಣಿನ ಕರ್ತವ್ಯವೆಂದೇ ಆಕೆ ತಿಳಿದಿದ್ದಳು.

ದೊಡ್ಡ ನಗರಗಳಲ್ಲಿ ಬದುಕುತ್ತಿದ್ದವರ ಹಾಗೆ ಬದುಕಿನ ಯಾವ ವಿಷಯಗಳೂ ಆಕೆಗೆ ಗೊತ್ತಿರಲಿಲ್ಲ, ಆದರೆ ಆಕೆಯ ಬಳಿ ಬರುತ್ತಿದ್ದ ಗಂಡಸರ ಮೂಲಕ ಆಕೆ ನಗರದ ಹವ್ಯಾಸಗಳಾದ, ಬೆಳಗ್ಗೆ ಹಲ್ಲುಜ್ಜುವುದು, ಹಾಸಿಗೆಯಲ್ಲಿ ಕುಳಿತುಕೊಂಡೇ ಬೆಳಗಿನ ಟೀ ಕುಡಿಯುವುದು, ಹೊರಗೆ ತಿರುಗಾಡಲು ಹೋಗುವುದಕ್ಕಿಂತ ಮುಂಚೆ ಒಂದು ಸಣ್ಣ ಸ್ನಾನ ಮಾಡುವುದು ಇತ್ಯಾದಿಗಳನ್ನು ಕಲಿತಿದ್ದಳು.

ಎಲ್ಲಾ ಗಂಡಸರೂ ಒಂದೇ ರೀತಿಯಲ್ಲಿ ಇರುತ್ತಿರಲಿಲ್ಲ. ಕೆಲವರು ಬೆಳಿಗ್ಗೆ ಸಿಗರೇಟು ಮಾತ್ರ ಸೇದಲು ಇಚ್ಛಿಸುತ್ತಿದ್ದರು, ಇನ್ನು ಕೆಲವರಿಗೆ ಒಂದು ಕಪ್ಪು ಬಿಸಿ ಬಿಸಿ ಟೀ ಬೇಕಾಗುತ್ತಿತ್ತು. ಕೆಲವರು ಕೆಟ್ಟ ರೀತಿಯಲ್ಲಿ ನಿದ್ದೆ ಮಾಡುತ್ತಿದ್ದರೆ, ಕೆಲವರು ಚೆನ್ನಾಗಿ ಮಲಗಿ ಬೆಳಗ್ಗೆ ಸದ್ದಿಲ್ಲದೆ ಹೊರಟು ಬಿಡುತ್ತಿದ್ದರು.

ಸರ್ದಾರ್, ಜಗತ್ತಿನಲ್ಲಿ ಸಂಕಟಗಳೇ ಇಲ್ಲದ ಹೆಂಗಸಾಗಿದ್ದಳು. ಆಕೆಗೆ ತನ್ನ ಮಗಳ — ಅಥವಾ ಅವಳ ಇನ್ನೇನೋ ಆಗಿದ್ದವಳ ಗಿರಾಕಿಗಳ ಜೊತೆಗೆ ಹೊಂದಿಕೊಳ್ಳುವ ಸಾಮರ್ಥ್ಯದ ಮೇಲೆ ನಂಬಿಕೆಯಿತ್ತು. ಆಕೆ ಸಾಮಾನ್ಯವಾಗಿ ಒಂದಿಷ್ಟು ಅಫೀಮು ಸೇವಿಸಿ ಬಹುಬೇಗನೇ ಸಂತೋಷದಿಂದ ನಿದ್ದೆ ಹೋಗುತ್ತಿದ್ದಳು. ಅಂತಹಾ ತುರ್ತು ಸಂದರ್ಭಗಳಲ್ಲಿ ಮಾತ್ರ ಆಕೆ ಎಚ್ಚರವಿರುತ್ತಿದ್ದಳು. ಗಿರಾಕಿಗಳು ಕೆಲವೊಮ್ಮೆ ಕಂಠಪೂರ್ತಿ ಕುಡಿದು ತೂರಾಡುವ ಸಂದರ್ಭದಲ್ಲಿ ಅವರನ್ನು ಪುನಃಶ್ಚೇತನಗೊಳಿಸಬೇಕಾಗುತ್ತಿತ್ತು. ಆಗ ಸರ್ದಾರ್ ಅನುಭವಸ್ಥೆಯಂತೆ ಮಾತನಾಡುತ್ತಿದ್ದಳು. ‘ಅವನಿಗೆ ಸ್ವಲ್ಪ ಮಾವಿನ ಉಪ್ಪಿನಕಾಯಿ ಕೊಡು ಅಥವಾ ವಾಂತಿ ಆಗೋ ಹಾಗೆ ಒಂದು ಗ್ಲಾಸ್ ಉಪ್ಪು ನೀರು ಕುಡಿಸು ನಂತರ ಮಲಗಿಸಿ ಬಿಡು’ ಇತ್ಯಾದಿ.

ಸರ್ದಾರ್ ತುಂಬಾ ಎಚ್ಚರಿಕೆಯ ಹೆಂಗಸಾಗಿದ್ದಳು. ಗ್ರಾಹಕರು ಮುಂಗಡವಾಗಿಯೇ ಹಣ ತುಂಬಬೇಕಾಗಿತ್ತು. ಹಣ ಸಂಗ್ರಹಿಸಿದ ನಂತರ ಆಕೆ ಹೇಳುತ್ತಿದ್ದಳು, ‘ ಈಗ ನೀವಿಬ್ರೂ ಒಳಗೆ ಹೋಗಿ ಸಂತೋಷ ಪಡ್ರಿ’.

ಹಣ ಯಾವತ್ತೂ ಸರ್ದಾರಳದೇ ಕೈ ಸೇರುತ್ತಿದ್ದರೂ ಯಾವುದೇ ಉಡುಗೊರೆಗಳನ್ನು ಗಿರಾಕಿಗಳು ನೀಡಿದಾಗ ಮಾತ್ರ ಅದು ನವಾಬಳಿಗೇ ಸಿಗುತ್ತಿತ್ತು. ತುಂಬಾ ಜನ ಗಿರಾಕಿಗಳು ಶ್ರೀಮಂತರಾಗಿರುತ್ತಿದ್ದರು ಮತ್ತು ಅವರು ಆಗಾಗ ಬಟ್ಟೆ ಬರೆಗಳು, ಹಣ್ಣುಗಳು, ಸಿಹಿ ತಿನಿಸುಗಳನ್ನು ನವಾಬಳಿಗೆ ಉಡುಗೊರೆಯಾಗಿ ನೀಡುತ್ತಿದ್ದರು.

ನವಾಬ್ ಓರ್ವ ತೃಪ್ತ ಹೆಣ್ಣು ಮಗಳಾಗಿದ್ದಳು. ಮೂರು ಕೋಣೆಗಳ ಮಣ್ಣಿನ ಮನೆಯಲ್ಲಿ ಬದುಕು ಊಹಿಸುವಷ್ಟು ಮಟ್ಟಿಗೆ ಚಂದವಾಗಿಯೇ ಸಾಗುತ್ತಿತ್ತು. ಸೇನಾಧಿಕಾರಿಯೊಬ್ಬ ಕೆಲವು ದಿನಗಳ ಹಿಂದೆ ಒಂದು ಗ್ರಾಮಾಫೋನ್ ಮತ್ತು ಕೆಲವು ರೆಕಾರ್ಡುಗಳನ್ನು ತಂದುಕೊಟ್ಟಿದ್ದ, ಆಕೆ ಏಕಾಂಗಿಯಾಗಿದ್ದಾಗ ಅವುಗಳನ್ನು ಚಾಲು ಮಾಡಿ ಆಲಿಸುತ್ತಿದ್ದಳು. ಆಕೆ ಕೆಲವೊಮ್ಮೆ ಅದರ ಜೊತೆಗೆಯೇ ದನಿ ಸೇರಿಸಿ ಹಾಡಲು ಪ್ರಯತ್ನಿಸುತ್ತಿದ್ದಳು, ಆದರೆ ಆಕೆಗೆ ಹಾಡುವ ಪ್ರತಿಭೆಯಿರಲಿಲ್ಲ, ಅಲ್ಲದೆ ಅದು ಆಕೆಗೆ ಗೊತ್ತೂ ಇರಲಿಲ್ಲ. ಅಸಲಿಗೆ ಆಕೆಗೆ ಕೆಲವು ವಿಷಯಗಳಷ್ಟೇ ಗೊತ್ತಿದ್ದವು ಮತ್ತು ಹೆಚ್ಚು ತಿಳಿದುಕೊಳ್ಳಬೇಕೆಂಬ ಆಸಕ್ತಿಯೂ ಇರಲಿಲ್ಲ. ಆಕೆ ಅಜ್ಞಾನಿಯಾಗಿದ್ದಿರಬಹುದು, ಆದರೆ ಆಕೆ ಖುಷಿಯಿಂದಿದ್ದಳು.

ಆ ಪಾಪಾಸುಕಳ್ಳಿಗಳ ಬೇಲಿಯಾಚೆಗಿನ ಬದುಕು ಹೇಗಿರಬಹುದು ಎಂಬ ಬಗ್ಗೆ ಆಕೆಗೆ ಯಾವ ಕಬರೂ ಇರಲಿಲ್ಲ. ಆಕೆಗೆ ಗೊತ್ತಿದ್ದಿದ್ದು ದೂಳು ತುಂಬಿದ ಕಲ್ಲು ಮಣ್ಣಿನ ಗಡಸು ರಸ್ತೆ, ಅದರ ಮೇಲೆ ಕಾರುಗಳನ್ನು ಚಲಾಯಿಸಿಕೊಂಡು ಹಾರ್ನ್ ಒತ್ತಿ ತಮ್ಮ ಆಗಮನವನ್ನು ಸೂಚಿಸುವ ಗಂಡಸರು, ವಾಹನವನ್ನು ಎಷ್ಟು ದೂರದಲ್ಲಿ ನಿಲ್ಲಿಸಬೇಕೆಂದು ಸಂಜ್ಞೆ ಮಾಡಿದಾಗ ಅದನ್ನು ಶಿರಸಾವಹಿಸಿಕೊಂಡು ಪಾಲಿಸಿ ನೇರವಾಗಿ ಕೋಣೆಯ ದೊಡ್ಡನೆಯ ಮಂಚದ ಕಡೆಗೆ ಬರುತ್ತಿದ್ದ ಗಿರಾಕಿಗಳು, ಇಷ್ಟು ಮಾತ್ರ.

ಐದಾರು ಜನ ಖಾಯಂ ಗಿರಾಕಿಗಳಿದ್ದರೂ ಕೂಡಾ ಸರ್ದಾರ್ ಯಾವ ರೀತಿಯಲ್ಲಿ ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದಳೆಂದರೆ, ಪರಸ್ಪರ ಪರಿಚಯವಿದ್ದ ಎರಡು ಗಿರಾಕಿಗಳು ಎದುರುಬದುರಾಗದಂತೆ ಎಚ್ಚರವಹಿಸುತ್ತಿದ್ದಳು. ಎಲ್ಲಾ ಗಿರಾಕಿಗಳಿಗೂ ಅವರದೇ ಆದ ನಿರ್ದಿಷ್ಟ ದಿನಗಳಿದ್ದುದರಿಂದ ಯಾವುದೇ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ.

ನವಾಬ್ ಗರ್ಭಧರಿಸದಂತೆ ಕೂಡಾ ಸರ್ದಾರ್ ಎಚ್ಚರಿಕೆ ವಹಿಸುತ್ತಿದ್ದಳು. ಇದು ಪ್ರತೀದಿನ ಘಟಿಸಬಹುದಾಗಿದ್ದ ಸಾಧ್ಯತೆಯಾಗಿದ್ದರೂ ಕಳೆದ ಎರಡೂವರೆ ವರ್ಷಗಳಿಂದ ಅಂತಹ ಯಾವುದೇ ಅವಗಢಗಳಾಗಿರಲಿಲ್ಲ. ಪೋಲಿಸರಿಗೂ ಸರ್ದಾರಳ ವ್ಯವಹಾರದ ಬಗ್ಗೆ ಸುಳಿವಿರಲಿಲ್ಲ ಮತ್ತು ಆಕೆಯ ಗ್ರಾಹಕರೂ ಹಾಗೆಯೇ ಆಯ್ದ ವ್ಯಕ್ತಿಗಳಾಗಿದ್ದರು.

ಒಂದು ದಿನ ದೊಡ್ಡದಾದ ಡಾಡ್ಜ್ ಕಾರೊಂದು ಮನೆಯ ಬಳಿ ಬಂದು ನಿಂತಿತು. ಚಾಲಕ ಒಮ್ಮೆ ಹಾರ್ನ್ ಒತ್ತಿದ ಮತ್ತು ಸರ್ದಾರ್ ಹೊರಗೆ ಬಂದಳು. ಆತ ಯಾರೆಂದು ಸರ್ದಾರಳಿಗೆ ಗೊತ್ತಿರಲಿಲ್ಲ, ಆ ಅಪರಿಚಿತನೂ ಆತನ ಪರಿಚಯ ಮಾಡಿಕೊಳ್ಳಲಿಲ್ಲ. ಆತ ಕಾರನ್ನು ಬದಿಯಲ್ಲಿ ನಿಲುಗಡೆ ಮಾಡಿದವನೇ ಹಳೇ ಗಿರಾಕಿಯಂತೆ ಸೀದಾ ಮನೆಯೊಳಗೆ ನುಗ್ಗಿದ.

ಸರ್ದಾರ್ ಸ್ವಲ್ಪ ಗೊಂದಲಕ್ಕೊಳಗಾದಳು, ಆದರೆ ನವಾಬ್ ಆತನನ್ನು ನಗುಮೊಗದಿಂದ ಸ್ವಾಗತಿಸಿ ಹಿಂದಿನ ಕೋಣೆಗೆ ಕರೆದೊಯ್ದಳು. ಸರ್ದಾರ್ ಅವರನ್ನು ಹಿಂಬಾಲಿಸಿಕೊಂಡು ಕೋಣೆಗೆ ಹೋದಾಗ ಅವರಿಬ್ಬರೂ ಮಂಚದ ಮೇಲೆ ಒತ್ತೊತ್ತಾಗಿ ಕುಳಿತುಕೊಂಡು ಮಾತನಾಡುತ್ತಿದ್ದರು. ಗಿರಾಕಿ ಸ್ಫುರದ್ರೂಪಿ ಮಾತ್ರವಲ್ಲ ಸಿರಿವಂತನೂ ಹೌದು ಎಂದು ಒಂದೇ ನೋಟದಲ್ಲಿ ಆಕೆಗೆ ತಿಳಿಯಿತು. ಆದರೂ ‘ಯಾರು ವಿಳಾಸಕೊಟ್ಟರು ನಿಮಗೆ?’ ಎಂದು ಕೇಳಿಯೇ ಬಿಟ್ಟಳು.

ಅಪರಿಚಿತ ಒಂದು ನಗು ಬೀರಿದ. ನಂತರ ತನ್ನ ತೋಳುಗಳಿಂದ ನವಾಬಳ ಹೆಗಲುಗಳನ್ನು ಆದರದಿಂದ ಬಳಸಿಕೊಳ್ಳುತ್ತಾ ಹೇಳಿದ, ‘ಇವಳೇ ‘. ನವಾಬ್ ಅಚ್ಚರಿಯಿಂದೊಮ್ಮೆ ನೆಗೆದು ಲಲ್ಲೆಗೆರೆಯುವಂತೆ ಕೇಳಿದಳು, ‘ನಾನೇ ? ನನ್ನ ಬದುಕಿನಲ್ಲೇ ನಿಮ್ಮನ್ನ ನೋಡೋದು ಇದೇ ಮೊದಲು’. ‘ಆದರೆ ನಾನು ನೋಡಿದ್ದೀನಿ’, ಅಪರಿಚಿತ ಗಂಭೀರವಾಗಿಯೇ ಉತ್ತರಿಸಿದ.

ನವಾಬ್ ಆಶ್ಚರ್ಯಭರಿತಳಾಗಿ ಕೇಳಿದಳು, ಎಲ್ಲಿ, ಯಾವಾಗ?’
ಅಪರಿಚಿತ ಆಕೆಯ ಕೈಗಳನ್ನೆತ್ತಿಕೊಂಡು ತನ್ನ ಕೈಗಳ ಮೇಲಿರಿಸಿಕೊಂಡು ಹೇಳಿದ,
‘ನಿನಗದು ಗೊತ್ತಾಗದು, ನಿನ್ನ ತಾಯಿಯಲ್ಲಿ ಕೇಳು’.
‘ನಾನಿವರನ್ನು ಭೇಟಿಯಾಗಿದ್ದೇನೆಯೇ ?’
ನವಾಬ್ ಮಗುವಿನಂತೆ ಸರ್ದಾರಳಲ್ಲಿ ಕೇಳಿದಳು.

ಸರ್ದಾರ್ ಅಷ್ಟರಲ್ಲಿಯೇ ಯಾರೋ ಖಾಯಂ ಗಿರಾಕಿಗಳು ಈತನಿಗೆ ಆಕೆಯ ವಿಳಾಸ ನೀಡಿರಬಹುದೆಂಬ ತೀರ್ಮಾನಕ್ಕೆ ಬಂದಿದ್ದಳು.
‘ನೀನು ಅದರ ಬಗ್ಗೆ ತಲೆ ಕೆಡಿಸ್ಕೋಬೇಡ, ಆಮೇಲೆ ಹೇಳ್ತೀನಿ ‘ ಎಂದು ನವಾಬಳಿಗೆ ತಿಳಿ ಹೇಳಿದಳು.

ನಂತರ ಸರ್ದಾರ್ ಕೋಣೆಯಿಂದ ಹೊರಗೆ ಬಂದು ಒಂದಿಷ್ಟು ಅಫೀಮು ಸೇವಿಸಿ ತೃಪ್ತಿಯಿಂದ ಹಾಸಿಗೆಗೆ ಒರಗಿಕೊಂಡಳು. ಆ ಅಪರಿಚಿತನೇನೂ ಕಿರುಕುಳ ಕೊಡುವ ಗಂಡಸರಂತೆ ಕಂಡಿರಲಿಲ್ಲ.

ಆತನ ಹೆಸರು ಹೈಬತ್ ಖಾನ್, ನೆರೆಯ ಹಝಾರ ಜೆಲ್ಲೆಯ ಅತೀದೊಡ್ಡ ಭೂಮಾಲಿಕನಾಗಿದ್ದ. ‘ಇನ್ನು ಮುಂದೆ ಇಲ್ಲಿ ಯಾವ ಗಂಡಸರೂ ಕಾಲಿಡೋದು ನನಗಿಷ್ಟವಿಲ್ಲ’ ಆತ ಕೆಲವು ಗಂಟೆಗಳ ನಂತರ ಮನೆಯಿಂದ ಹೊರಹೋಗುತ್ತಾ ಸರ್ದಾರಳಲ್ಲಿ ಹೇಳಿದ. ‘ಅದು ಹೇಗೆ ಸಾಧ್ಯ ಖಾನ್ ಸಾಹೇಬರೇ?, ಆಕೆಯ ಬದುಕಿನ ಮೊತ್ತವನ್ನು ಭರಿಸಲು ನಿಮಗೆ ಸಾಧ್ಯವೇ?’ ಸರ್ದಾರ್ ತನ್ನ ವ್ಯಾವಹಾರಿಕ ಜಗತ್ತಿನ ಅನುಭವಸ್ಥೆಯಾಗಿ ಕೇಳಿದ್ದಳು.

ಹೈಬತ್ ಖಾನ್ ಆಕೆಗೆ ಉತ್ತರಿಸಲಿಲ್ಲ, ಜೇಬಿನಿಂದ ಕೈ ತುಂಬಾ ನೋಟುಗಳನ್ನು ತೆಗೆದು ನೆಲದ ಮೇಲೆ ಎಸೆದುಬಿಟ್ಟ. ಆತ ತನ್ನ ಬೆರಳುಗಳಿಂದ ವಜ್ರದ ಉಂಗುರವೊಂದನ್ನು ಸಹಾ ಕಳಚಿ ನವಾಬಳ ಬೆರಳಿಗೆ ತೊಡಿಸಿದ. ನಂತರ ಆತ ಸರಸರನೆ ಪಾಪಾಸುಕಳ್ಳಿಗಳ ಬೇಲಿಯ ಗುಂಟ ನಡೆದುಹೋಗಿ ಕಾರು ಚಲಾಯಿಸಿಕೊಂಡು ಹೊರಟುಹೋದ.

ನವಾಬ್ ಹಣದತ್ತ ತಿರುಗಿಯೂ ನೋಡಲಿಲ್ಲ, ಅವಳು ದೊಡ್ಡ ವಜ್ರದ ಹರಳಿರುವ ಆ ಉಂಗುರವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಕಾರು ಭರ್ರನೆ ಸದ್ದು ಮಾಡುತ್ತಾ ಧೂಳೆಬ್ಬಿಸಿಕೊಂಡು ಹೋದ ಸದ್ದು ಆಕೆಗೆ ಕೇಳಿಸಿತು.

ಆಕೆ ಉಂಗುರದ ಗುಂಗಿನಿಂದ ತುಸು ಹೊರಬಂದಾಗ, ಸರ್ದಾರ್ ನೆಲದ ಮೇಲೆ ಚೆಲ್ಲಿದ್ದ ನೋಟುಗಳನ್ನು ಹೆಕ್ಕಿ ಲೆಕ್ಕಹಾಕುತ್ತಿದ್ದಳು. ಹತ್ತೊಂಬತ್ತು ನೂರು ರೂಪಾಯಿಗಳ ಬ್ಯಾಂಕ್ ನೋಟುಗಳಿದ್ದವು. ಇನ್ನೊಂದು ನೋಟು ಸೇರಿಸಿದ್ದರೆ ಎರಡು ಸಾವಿರವಾಗುತ್ತಿತ್ತು, ಎಂದು ಸರ್ದಾರ್ ಯೋಚಿಸಿದಳು, ಆದರೆ ಅದಕ್ಕಾಗಿ ಆಕೆಗೆ ವಿಷಾದವೇನೂ ಆಗಲಿಲ್ಲ. ಆಕೆ ಹಣವನ್ನು ಎತ್ತಿಟ್ಟು, ಸ್ವಲ್ಪ ಅಫೀಮು ಸೇವಿಸಿ ಹಾಸಿಗೆಗೆ ಒರಗಿಕೊಂಡಳು.

ನವಾಬ್ ಪುಳಕಗೊಂಡಿದ್ದಳು. ಆಕೆಗೆ ವಜ್ರದುಂಗುರದಿಂದ ದೃಷ್ಟಿ ಕೀಳುವುದೇ ಅಸಾಧ್ಯವಾಗಿತ್ತು. ಕೆಲವು ದಿನಗಳುರುಳಿದವು. ಮಧ್ಯದಲ್ಲಿ ಒಬ್ಬ ಹಳೇ ಗಿರಾಕಿ ಬೇಟಿ ನೀಡಿದ್ದ, ಆದರೆ ಸರ್ದಾರ್ ಪೋಲಿಸು ದಾಳಿ ಆಗುವ ಸೂಚನೆಯಿದ್ದ ಕಾರಣ ದಂಧೆಯನ್ನೇ ನಿಲ್ಲಿಸಲು ತೀರ್ಮಾನಿಸಿದ್ದುದಾಗಿ ಹೇಳಿ ಆತನನ್ನು ಸಾಗಹಾಕಿದ್ದಳು.

ಸರ್ದಾರಳ ಲೆಕ್ಕಾಚಾರ ಸರಳವಾಗಿತ್ತು. ಆಕೆಗೆ ಹೈಬತ್ ಖಾನನ ಸಿರಿವಂತಿಕೆಯ ಅರಿವಿತ್ತು ಮತ್ತು ಹಣದ ತೊಂದರೆಯೂ ನಿವಾರಣೆಯಾಗುತ್ತಿತ್ತು ಮಾತ್ರವಲ್ಲದೆ, ಇನ್ನು ಮುಂದೆ ಕೇವಲ ಒಬ್ಬ ಗಿರಾಕಿಯಲ್ಲಿ ಮಾತ್ರ ಏಗಿದ್ದರೆ ಸಾಕಿತ್ತು. ನಂತರದ ದಿನಗಳಲ್ಲಿ ಆಕೆ ಎಲ್ಲಾ ಗಿರಾಕಿಗಳನ್ನೂ ಒಬ್ಬೊಬ್ಬರಂತೆಯೇ ಕಳಚಿಕೊಳ್ಳುವಲ್ಲಿ ಸಫಲಳಾದಳು.

ಒಂದು ವಾರದ ನಂತರ ಹೈಬತ್ ಖಾನ್ ತನ್ನ ಎರಡನೆಯ ಬೇಟಿ ಕೊಟ್ಟ, ಆತ ಸರ್ದಾರಳಲ್ಲಿ ಏನೂ ಮಾತನಾಡದೆ ಸರ್ದಾರಳನ್ನು ಆಕೆಯ ಅಫೀಮು ಮತ್ತು ಹಾಸಿಗೆಯಲ್ಲಿಯೇ ಬಿಟ್ಟು ಅವರು ಹಿಂದಿನ ಕೋಣೆ ಸೇರಿಬಿಟ್ಟಿದ್ದರು.

ಹೈಬತ್ ಖಾನ್ ಈಗ ಖಾಯಂ ಗಿರಾಕಿಯಾಗಿಬಿಟ್ಟಿದ್ದ. ಆತನನ್ನು ನವಾಬ್ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದ್ದಳು. ಆತನಿಗೆ ಆಕೆಯ ಕೃತ್ರಿಮವಲ್ಲದ, ವೇಶ್ಯೆಯರಲ್ಲಿ ಸಾಮಾನ್ಯವಾಗಿದ್ದ ವೃತ್ತಿಪರತೆಯ ಗಡಸುತನವಿಲ್ಲದ, ಮುಗ್ದ ಪ್ರೇಮದಾಟಗಳು ಇಷ್ಟವಾಗಿದ್ದವು. ಹಾಗೆಯೇ ಆಕೆಯಲ್ಲಿ ಗೃಹಿಣಿಯಂತಹ ಯಾವ ಲಕ್ಷಣಗಳೂ ಇರಲಿಲ್ಲ. ಆಕೆ ತಾಯಿಯ ಬಳಿ ಮಲಗಿಕೊಂಡು ಮೊಲೆಗಳ ಜೊತೆ ಆಟವಾಡುತ್ತಾ ಕೊನೆಗೆ ಬೆರಳು ಚೀಪಿಕೊಂಡು ನಿದ್ದೆ ಹೋಗುವ ಮಗುವಿನಂತೆ ಆತನ ಬಳಿ ಮಲಗಿ ಬಿಡುತ್ತಿದ್ದಳು.

ಇಂತಹ ಅನುಭವ ಹೈಬತ್ ಖಾನನಿಗೆ ತೀರಾ ಹೊಸದಾಗಿತ್ತು. ನವಾಬ್ ಎಲ್ಲರಂತಿರಲಿಲ್ಲ. ಆಕೆ ಅನನ್ಯವಾಗಿದ್ದಳು, ದಿನಾ ಆಕೆಯಲ್ಲಿ ಆಸಕ್ತಿ ಕೆದರುತ್ತಿತ್ತು ಹಾಗೆಯೇ ಸುಖವೂ ಕೂಡಾ, ಆತನ ಬೇಟಿಯೂ ಖಾಯಂ ಆಗತೊಡಗಿತು.

ಸರ್ದಾರ್ ಖುಷಿಯಿಂದಿದ್ದಳು. ಆಕೆಗೆ ಇಂತಹ ಸಂತುಲಿತ ಹಣದ ಹರಿವು ಹಿಂದೆಂದೂ ಇರಲಿಲ್ಲ. ಆದರೆ ನವಾಬ್ ಮಾತ್ರ ಕೆಲವೊಂದು ಸಲ ಚಿಂತಿತಳಾಗುತ್ತಿದ್ದಳು. ಹೈಬತ್ ಖಾನನಿಗೆ ಯಾವುದೋ ಅವ್ಯಕ್ತ ಭಯವಿರುವಂತೆ ಅನಿಸುತ್ತಿತ್ತು. ಅದು ಕೆಲವು ಸಣ್ಣ ಪುಟ್ಟ ಸಂಗತಿಗಳಲ್ಲಿ ವ್ಯಕ್ತವಾಗುತ್ತಿತ್ತು. ಪಕ್ಕದ ರಸ್ತೆಯಲ್ಲಿ ಯಾವುದಾದರೂ ಕಾರೋ ಅಥವಾ ಬಸ್ಸೋ ಸದ್ದು ಮಾಡಿಕೊಂಡು ಮನೆಯನ್ನು ಹಾದು ಹೋದಾಗ ಆತನ ದೇಹದಲ್ಲೊಂದು ಸಣ್ಣ ನಡುಕ ಹುಟ್ಟುತ್ತಿತ್ತು. ಒಮ್ಮೊಮ್ಮೆ ಆತ ಹಾಸಿಗೆಯಿಂದೆದ್ದು ಓಡಿ ಹೋಗಿ ಆ ವಾಹನದ ನೊಂದಣಿ ಸಂಖ್ಯೆಯನ್ನು ಓದಲು ಯತ್ನಿಸುತ್ತಿದ್ದ.

ಒಂದು ರಾತ್ರಿ, ಆಗ ತಾನೇ ಹಾದು ಹೋದ ಬಸ್ಸೊಂದರ ಸದ್ದಿಗೆ ಆತ ಅಕ್ಷರಶಃ ಬೆದರಿಹೋಗಿ ಆಕೆಯ ತೋಳುಗಳಿಂದ ಬಿಡಿಸಿಕೊಂಡು ಎದ್ದು ಕುಳಿತುಬಿಟ್ಟಿದ್ದ. ನವಾಬಳಂತೂ ಹುಸಿನಿದ್ದೆಯವಳು, ಆಕೆಯೂ ಎದ್ದು ಕುಳಿತಳು. ಆತ ಭಯಗ್ರಸ್ತನಾಗಿದ್ದುದನ್ನು ನೋಡಿ ಆಕೆಯೂ ಭೀತಳಾದಳು. ‘ಏನಾಯ್ತು?’ ಆಕೆಯ ಭಯಮಿಶ್ರಿತ ಧ್ವನಿ ಸ್ವಲ್ಪ ಜೋರಾಗಿಯೇ ಇತ್ತು.

ಅಷ್ಟರಲ್ಲಾಗಲೇ ಹೈಬತ್ ಖಾನ್ ಸಾವರಿಸಿಕೊಂಡುಬಿಟ್ಟಿದ್ದ. ‘ಏನಿಲ್ಲ ಒಂದು ಕೆಟ್ಟ ಕನಸು ಬಿದ್ದಿತ್ತು’, ಆತ ಸಮಾಧಾನ ಹೇಳಿದ. ಬಸ್ಸು ಹೋಗಿತ್ತು, ಆದರೂ ಅದರ ಸದ್ದು ದೂರದಿಂದ ಕೇಳಿ ಬರುತ್ತಿತ್ತು.

‘ಇಲ್ಲ ಖಾನ್, ಏನೋ ಇದೆ, ಯಾವಾಗಲೂ ವಾಹನಗಳ ಸದ್ದಿಗೆ ನೀವು ಬೆಚ್ಚಿ ಬೀಳುತ್ತೀರಿ ‘. ನವಾಬ್ ಕೇಳಿದ್ದಳು.

ಹೈಬತ್ ಖಾನನಿಗೆ ಮಾತ್ರ ಅದರಿಂದ ಅಭಿಮಾನಕ್ಕೆ ಕುಟುಕಿದಂತಾಗಿತ್ತು, ‘ತಲೆ ಹರಟೆ ಮಾಡ್ಬೇಡ’, ಆತ ಸ್ವಲ್ಪ ಖಾರವಾಗಿಯೇ ಹೇಳಿದ್ದ, ‘ ಕಾರು ಬಸ್ಸುಗಳಿಗೆ ಯಾರಾದ್ರೂ ಯಾಕೆ ಹೆದರ್ಕೋಬೇಕು?’.

ನವಾಬ್ ಅಳಲಾರಂಭಿಸಿದ್ದಳು, ಆದರೆ ಹೈಬತ್ ಖಾನ್ ಆಕೆಯನ್ನು ತೋಳುಗಳಲ್ಲಿ ಬಳಸಿಕೊಂಡು ಸಮಾಧಾನ ಮಾಡಲೆತ್ನಿಸಿದ್ದ. ಆಕೆ ಅಳುವುದನ್ನು ನಿಲ್ಲಿಸಿದ್ದಳು.

ಆತ ಸ್ಫುರದ್ರೂಪಿಯಾಗಿದ್ದ, ಅಜಾನುಬಾಹುವೂ, ಅಷ್ಟೇ ಅದಮ್ಯ ಪ್ರೇಮಿಯೂ ಆಗಿದ್ದ. ಆತನ ಒಂದೊಂದು ಸ್ಪರ್ಷಗಳೂ ನವಾಬಳ ಎಳೆ ದೇಹದಲ್ಲಿ ಪ್ರಣಯದ ಕಿಚ್ಚು ಹತ್ತಿಸಿದ್ದವು. ಪ್ರಣಯದ ಸೂಕ್ಷ್ಮ ಪಾಠಗಳನ್ನು ಆಕೆ ಕಲಿಯಲಾರಂಭಿಸಿದ್ದೂ ಆತನಿಂದಲೇ. ಆಕೆಯ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಆಕೆ ಪ್ರೀತಿ ಎಂಬ ಒಂದು ಅವಸ್ಥೆಯನ್ನು ಅನುಭವಿಸಿದ್ದಳು. ಆತ ಹೊರಟುಹೋದ ನಂತರವೂ ಆಕೆ ಆತನಿಗಾಗಿಯೇ ಹಂಬಲಿಸುತ್ತಿದ್ದಳು, ಅದೇ ಗುಂಗಿನಲ್ಲಿ ರೆಕಾರ್ಡುಗಳನ್ನು ತನ್ನ ಗ್ರಾಮಾಫೋನಿನಲ್ಲಿ ಕೊನೆಯಿಲ್ಲದಂತೆ ತಿರುಗಿಸಿ ಆಲಿಸುತ್ತಿದ್ದಳು.

ತಿಂಗಳುಗಳು ಕಳೆದವು. ಹೈಬತ್ ಖಾನನ ಮೇಲೆ ನವಾಬಳ ಪ್ರೀತಿಯೂ ಗಾಢವಾಗತೊಡಗಿತು ಹಾಗೆಯೇ ಆಕೆಯ ಉದ್ವೇಗವೂ ಕೂಡಾ. ಇತ್ತೀಚೆಗೆ ಆತನ ಬೇಟಿಗಳೂ ವಿಚಿತ್ರವಾಗಿರುತ್ತಿದ್ದವು. ಆತ ಕೊಂಚ ಕಾಲ ಇದ್ದುಹೋಗಲೆಂದು ಬರುತ್ತಿದ್ದ, ತುಂಬಾ ತಲೆಬಿಸಿಯಲ್ಲಿದ್ದವನಂತೇ ಕಂಡುಬರುತ್ತಿದ್ದ, ಹಾಗೆಯೇ ಒಮ್ಮೊಮ್ಮೆ ತಕ್ಷಣ ಹೊರಟು ಬಿಡುತ್ತಿದ್ದ. ಆತ ಯಾವುದೋ ಒತ್ತಡದಲ್ಲಿದ್ದುದಂತೂ ದಿಟವಾಗಿತ್ತು. ಆತನಿಗೆ ಆಕೆಯನ್ನು ಬಿಟ್ಟು ಹೋಗಲು ಇಷ್ಟವಿರುತ್ತಿರಲಿಲ್ಲ, ಆದರೂ ಆತ ಹೊರಟು ಹೋಗುತ್ತಿದ್ದ.

ನವಾಬ್ ಎಷ್ಟೋ ಸಲ ಸತ್ಯವನ್ನು ತಿಳಿದುಕೊಳ್ಳಲು ಯತ್ನಿಸಿದ್ದಳು, ಆತ ಮಾತ್ರ ಹಾರಿಕೆಯ ಉತ್ತರ ಕೊಟ್ಟುಬಿಡುತ್ತಿದ್ದ.

ಒಂದು ದಿನ ಆತನ ಡಾಡ್ಜ್ ಮನೆಯ ಹತ್ತಿರವೇ ಬಂದು ಎಂದಿನ ಜಾಗದಲ್ಲಿ ನಿಂತುಕೊಂಡಿತು. ನವಾಬ್ ನಿದ್ದೆಯಲ್ಲಿದ್ದಳು, ಕಾರಿನ ಹಾರ್ನ್ ಸದ್ದು ಕೇಳಿದವಳೇ ಎದ್ದುಬಿಟ್ಟಿದ್ದಳು. ಆಕೆ ಹೊರಗೆ ಓಡಿದವಳು ಬಾಗಿಲಲ್ಲಿಯೇ ಹೈಬತ್ ಖಾನನ ತೆಕ್ಕೆಯಲ್ಲಿದ್ದಳು. ಆಕೆಯನ್ನು ಪ್ರೀತಿಯಿಂದ ತಬ್ಬಿದವನು, ಅನಾಮತ್ತಾಗಿ ಎತ್ತಿಕೊಂಡು ಸೀದಾ ಕೋಣೆಯತ್ತ ನಡೆದಿದ್ದ.

ಅವರಿಬ್ಬರೂ ನವಪ್ರೇಮಿಗಳಂತೆ ತುಂಬಾ ಹೊತ್ತಿನವರೆಗೆ ಮಾತನಾಡಿದ್ದರು. ಆಕೆಯ ಜೀವನದಲ್ಲಿ ಮೊದಲ ಬಾರಿಗೆ ನವಾಬ್ ಆತನಲ್ಲಿ ಕೇಳಿದ್ದಳು, ‘ ಖಾನ್, ನನಗೊಂದು ಜೊತೆ ಬಂಗಾರದ ಬಳೆ ತಂದುಕೊಡಿ’.

ಹೈಬತ್ ಖಾನ್ ಆಕೆಯ ಮಾಂಸಲ ಹಸ್ತವನ್ನು ಹಲವಾರು ಬಾರಿ ಚುಂಬಿಸುತ್ತಾ ಹೇಳಿದ್ದ, ‘ ನಾಳೆಯೇ ತಂದು ಕೊಡುವೆ ಚಿನ್ನಾ, ನಿನಗೋಸ್ಕರ ಬೇಕಾದ್ರೆ ಜೀವಾನೂ ಕೊಡ್ತೀನಿ’.

ನವಾಬ್ ನಾಚಿಕೆಯಿಂದ ನುಲಿಯುತ್ತಾ ಹೇಳಿದ್ದಳು, ‘ಅಯ್ಯೋ ಇಲ್ಲ ಖಾನ್, ಜೀವ ಕೊಡಬೇಕಾಗಿರೋದು ಈ ಬಡಪಾಯಿ’.

‘ನಾಳೆ ವಾಪಾಸು ಬರುತ್ತಾ ನಿನ್ನ ಬಂಗಾರದ ಬಳೆಗಳನ್ನು ತರ್ತೀನಿ, ನಾನೇ ಅವುಗಳನ್ನು ನಿನಗೆ ತೊಡಿಸ್ತೀನಿ’. ಹೈಬತ್ ಖಾನ್ ಆಕೆಯನ್ನು ಮುದ್ದಿಸುತ್ತಾ ಹೇಳಿದ್ದ.

ನವಾಬ್ ಪ್ರೇಮದ ಪರಾಕಾಷ್ಠೆಯನ್ನು ತಲುಪಿದ್ದಳು. ಆಕೆಗೆ ಆನಂದದಿಂದ ಕುಪ್ಪಳಿಸಿ ಕುಣಿಯುವ ಎಂದನಿಸುತ್ತಿತ್ತು. ಸರ್ದಾರ್ ಆಕೆಯನ್ನು ನೋಡಿ ಸಮಾಧಾನ ಪಡುತ್ತಾ ತನ್ನ ಅಫೀಮು ಮತ್ತು ಹಾಸಿಗೆಯತ್ತ ಸಾಗಿದ್ದಳು.

ಮರುದಿನ ಬೆಳಿಗ್ಗೆ ನವಾಬ್ ಅತ್ಯುತ್ಸಾಹದ ಸ್ಥಿತಿಯಲ್ಲಿಯೇ ಎದ್ದು ಕುಳಿತಿದ್ದಳು. ಆ ದಿನ ಆತ ಆಕೆಗೆ ಬಂಗಾರದ ಬಳೆಗಳನ್ನು ತರುವವನಿದ್ದ, ಆಕೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದಳು ಆದರೂ ಆಕೆಯ ಮನಸ್ಸು ಅಶಾಂತವಾಗಿತ್ತು. ರಾತ್ರಿ ಆಕೆಗೆ ಸರಿಯಾಗಿ ನಿದ್ರಿಸಲು ಸಾಧ್ಯವಾಗಿರಲಿಲ್ಲ.

ಆಕೆ ತಾಯಿಯಲ್ಲಿ ಹೇಳಿದ್ದಳು, ‘ಖಾನ್ ಬರಲೇ ಇಲ್ಲ. ಅವರು ನನಗೆ ಮಾತು ಕೊಟ್ಟಿದ್ದರು’. ಆಕೆಯ ಎದೆ ಭಾರವಾಗಿತ್ತು.

ಆತನಿಗೇನಾದರೂ ಅಪಘಾತವಾಗಿರಬಹುದೇ? ಒಮ್ಮೆಲೆ ಏನಾದರೂ ಅನಾರೋಗ್ಯ ಕಾಡಿ ಬಿಟ್ಟಿತೇ? ಯಾರಾದರೂ ರಸ್ತೆ ಮಧ್ಯದಲ್ಲೇ ದರೋಡೆ ಮಾಡಿಬಿಟ್ಟರೇ ? ಮಾರ್ಗದಲ್ಲಿ ಹೋಗುತ್ತಿದ್ದ ಕಾರುಗಳ ಸದ್ದನ್ನು ಕೇಳುತ್ತಿದ್ದ ಆಕೆಗೆ ಹೈಬತ್ ಖಾನನ ಮತ್ತು ಕಾರುಗಳ ಸದ್ದಿಗೆ ಆತ ಬೆಚ್ಚಿ ಬೀಳುತ್ತಿದ್ದ ನೆನಪು ಕಾಡುತ್ತಿತ್ತು.

ಒಂದು ವಾರ ಕಳೆಯಿತು. ಪಾಪಾಸುಕಳ್ಳಿ ಬೇಲಿಗಳಾಚೆ ಇದ್ದ ಮನೆ ಸಂದರ್ಶಕರಿಲ್ಲದೆಯೇ ಉಳಿಯಿತು. ಆಗೊಮ್ಮೆ ಈಗೊಮ್ಮೆ ಕಾರುಗಳು ಧೂಳಿನ ಮೋಡಗಳೆನ್ನೆಬ್ಬಿಸುತ್ತಾ ಹಾದು ಹೋಗುತ್ತಿದ್ದವು. ಆಕೆ ಆ ಹಾದಿಯಲ್ಲಿ ಸಾಗುವ ಎಲ್ಲಾ ಕಾರುಗಳು ಮತ್ತು ಬಸ್ಸುಗಳೊಂದಿಗೆ ಹೈಬತ್ ಖಾನನನ್ನು ಥಳಕು ಹಾಕುತ್ತಿದ್ದಳು. ಆತನ ಗೈರು ಹಾಜರಿಗೂ ಈ ವಾಹನಗಳಿಗೂ ಏನೋ ಸಂಬಂಧವಿದೆಯೆಂದೇ ಆಕೆಗೆ ಅನಿಸುತ್ತಿತ್ತು.

ಒಂದು ಮಧ್ಯಾಹ್ನ ಇಬ್ಬರೂ ಊಟದ ನಂತರದ ಒಂದು ಸಣ್ಣ ನಿದ್ದೆಗೆ ಸಿದ್ಧತೆ ಮಾಡುತ್ತಿದ್ದಾಗ, ಹೊರಗೆ ಕಾರು ನಿಲ್ಲಿಸಿದ ಸದ್ದು ಕೇಳಿಸಿತು. ಹಾರ್ನ್ ಕೂಡಾ ಕೇಳಿಬಂತು ಆದರೆ ಅದು ಹೈಬತ್ ಖಾನನ ಕಾರಿನದಾಗಿರಲಿಲ್ಲ. ಹಾಗಾದರೆ ಯಾರಾಗಿರಬಹುದು?

ಯಾರಾದರೂ ಹಳೇ ಗಿರಾಕಿಯಿರಬಹುದೇ ಎಂದು ಖಾತ್ರಿ ಪಡಿಸಲು ಸರ್ದಾರ್ ಹೊರಗೆ ಹೋದಳು. ಹಾಗೇನಾದರೂ ಆಗಿದ್ದರೆ ಆಕೆ ಆ ಗಿರಾಕಿಯನ್ನು ವಾಪಾಸು ಕಳುಹಿಸುತ್ತಿದ್ದಳು ಆದರೆ ಬಂದವನು ಹೈಬತ್ ಖಾನ್. ಆತ ಚಾಲಕನ ಸೀಟಿನಲ್ಲಿ ಕುಳಿತ್ತಿದ್ದ ಆದರೆ ಅದು ಅವನ ಕಾರಾಗಿರಲಿಲ್ಲ. ಆತನ ಪಕ್ಕದಲ್ಲಿ ಅಂದವಾಗಿ ಬಟ್ಟೆ ಧರಿಸಿದ್ದ ಅಷ್ಟೇ ಸುಂದರವಾದ ಹೆಂಗಸೊಬ್ಬಳು ಕುಳಿತಿದ್ದಳು.

ಹೈಬತ್ ಖಾನ್ ಕಾರಿನಿಂದ ಹೊರಗಿಳಿದ, ಜೊತೆಗೆ ಆ ಹೆಂಗಸೂ ಇಳಿದಳು. ಸರ್ದಾರಳಿಗೆ ಏನೂ ಅರ್ಥವಾಗಲಿಲ್ಲ. ಈತನೊಂದಿಗೆ ಈ ಹೆಂಗಸಿಗೇನು ಕೆಲಸ? ಯಾರೀಕೆ? ಈಕೆಯನ್ನು ಇಲ್ಲಿಗೇಕೆ ಕರೆ ತಂದಿದ್ದಾನೇ?’

ಅವರಿಬ್ಬರೂ ಆಕೆಯನ್ನು ಗಮನಿಸದಂತೆಯೇ ಸೀದಾ ಒಳಗಡಿಯಿಟ್ಟರು. ಸರ್ದಾರ್ ನಂತರ ಅವರನ್ನು ಹಿಂಬಾಲಿಸಿದವಳು ಒಳಗೆ ಹೋದಾಗ ಮೂವರೂ ಕೋಣೆಯಲ್ಲಿ ಒಬ್ಬರ ಪಕ್ಕ ಒಬ್ಬರು ಮಂಚದ ಮೇಲೆ ಕುಳಿತಿದ್ದರು. ಎಲ್ಲಾ ವಿಷಯದಲ್ಲಿಯೂ ಅಲ್ಲೊಂದು ವಿಚಿತ್ರ ಮೌನವಾವರಿಸಿತ್ತು. ಚಿನ್ನಾಭರಣಗಳನ್ನು ದಟ್ಟವಾಗಿ ಧರಿಸಿದ್ದ ಆ ಹೆಂಗಸು ಕೂಡಾ ಸ್ವಲ್ಪ ಅಧೀರಳಾದಂತೆ ಕಾಣಿಸುತ್ತಿದ್ದಳು.

ಸರ್ದಾರ್ ಬಾಗಿಲ ಬಳಿ ಹೋಗಿ ನಿಂತಾಗ ಹೈಬತ್ ಖಾನ್ ಆಕೆಯತ್ತ ನೋಡಿದ ಆಕೆ ಆತನಿಗೆ ಸಲಾಂ ಹೇಳಿದಳು, ಆದರೆ ಆತ ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಆತ ನಿಜವಾಗಿಯೂ ಗೊಂದಲದಲ್ಲಿದ್ದಂತೆ ಕಂಡಿತ್ತು.

ಆ ಹೆಂಗಸು ಸರ್ದಾರಳಲ್ಲಿ ಹೇಳಿದಳು, ‘ಸರಿ ನಾವೀಗ ಬಂದುದಾಯ್ತಲ್ಲ? ನಮಗೇನಾದ್ರೂ ಬಾಯಿ ಸಿಹಿ ತೆಗೆದುಕೊಂಡು ಬಾ’ .

‘ಈಗಲೇ ತರ್ತೀನಮ್ಮ, ಏನು ತಗೋತೀರೀ?’ ಸರ್ದಾರ್ ಕೂಡಲೇ ಉತ್ತರಿಸಿದ್ದಳು. ಅವಳೊಳಗಿನ ಅತಿಥೇಯತೆ ಈಗ ಎಚ್ಚರವಾಗಿತ್ತು.

ಆದರೂ ಆ ಹೆಂಗಸಿನ ಮಾತಿನಲ್ಲಿ ಏನೋ ಒಂದು ಅಧಿಕಾರವಾಣಿಯಿತ್ತು. ‘ಬೇಗ ಅಡುಗೆ ಮನೆ ಕಡೆ ಹೋಗು’, ಆಕೆ ಸರ್ದಾರಳಿಗೆ ಆದೇಶ ಮಾಡುವ ರೀತಿಯಲ್ಲಿ ಹೇಳಿದ್ದಳು.’ ಒಲೆಯಲ್ಲಿ ಬೆಂಕಿ ಉರಿಸು, ದೊಡ್ಡದಾದ ಪಾತ್ರೆಯೇನಾದ್ರೂ ಇದೆಯಾ? ‘

‘ಹ್ಞೂಂ’ ಸರ್ದಾರ್ ಹೌದೆನ್ನುವಂತೆ ತಲೆಯಲ್ಲಾಡಿಸಿದ್ದಳು.

‘ಅದನ್ನು ಚೆನ್ನಾಗಿ ತೊಳೆದಿಡು, ನಾನೂ ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಬಂದು ಬಿಡ್ತೀನಿ’ , ಎಂದು ಹೇಳಿದ ಆ ಹೆಂಗಸು ಮಂಚದ ಮೇಲಿನಿಂದ ಎದ್ದು ಮೇಜಿನ ಮೇಲಿದ್ದ ಗ್ರಾಮಾಫೋನನ್ನು ಪರೀಕ್ಷಿಸಲಾರಂಭಿಸಿದ್ದಳು.

‘ಆದ್ರೆ ಇಲ್ಲಿ ಈಗ ಮಾಂಸ ತಂದು ಕೊಡೋರು ಯಾರೂ ಇಲ್ಲ’, ಸರ್ದಾರ್ ಕ್ಷಮೆ ಯಾಚಿಸುವವಳ ಹಾಗೆ ಹೇಳಿದ್ದಳು.

‘ಅದೆಲ್ಲಾ ಬರುತ್ತೆ, ನೋಡು ನೀನೀಗ ಒಲೆ ಉರಿಸು ಮತ್ತು ನಾನೇನು ಹೇಳಿದ್ದೀನೋ ಅದನ್ನು ಮಾಡು’

ಸರ್ದಾರ್ ಹೊರಗೆ ಹೋದಳು. ಆ ಹೆಂಗಸು ನಗುತ್ತಾ ನವಾಬಳತ್ತ ನೋಡಿ ಹೇಳಿದಳು, ‘ನವಾಬ್, ನಿನಗೋಸ್ಕರ ನಾವು ಬಂಗಾರದ ಬಳೆಗಳನ್ನು ತಂದೀವಿ’.

ಆಕೆ ತನ್ನ ಕೈಚೀಲದಿಂದ ಮಿಣಿ ಮಿಣಿ ಕಾಗದದಲ್ಲಿ ಸುತ್ತಲಾಗಿದ್ದ ಭಾರವಾದ ಫಳ ಫಳನೆ ಹೊಳೆಯುವ ಬಂಗಾರದ ಬಳೆಗಳನ್ನು ಹೊರ ತೆಗೆದಳು.

ನವಾಬ್ ಹೈಬತ್ ಖಾನನೆಡೆಗೆ ನೋಡುತ್ತಾ ಕೇಳಿದಳು ‘ಈಕೆ ಯಾರು ಖಾನ್?’ ಆಕೆಯ ಧ್ವನಿಯಲ್ಲಿ ಭಯವಿತ್ತು. ಹೈಬತ್ ಖಾನ್ ಆಕೆಯ ಪಕ್ಕದಲ್ಲಿ ಸುಮ್ಮನೆ ಕುಳಿತುಕೊಂಡಿದ್ದ.

ಬಳೆಗಳೊಂದಿಗೆ ಆಟವಾಡುತಾ ಆ ಹೆಂಗಸು ಹೇಳಿದಳು, ‘ನಾನು ಯಾರೆಂದಾ?, ನಾನು ಹೈಬತ್ ಖಾನನ ಸೋದರಿ’, ನಂತರ ಆಕೆ ಕುಳಿತಲ್ಲಿಯೇ ಕುಸಿದು ಹೋಗುತ್ತಿದ್ದ ಖಾನನತ್ತ ನೋಡುತ್ತಾ ನವಾಬಳಲ್ಲಿ ಹೇಳಿದಳು, ‘ನನ್ನ ಹೆಸರು ಹಲಾಕತ್’.

ನವಾಬಳಿಗೆ ಏನಾಗುತ್ತಿದೆಯೆಂದೇ ಅರ್ಥವಾಗಲಿಲ್ಲ, ಆಕೆ ಮಾತ್ರ ಭಯಗೊಂಡಿದ್ದಳು.

ಹೆಂಗಸು ನವಾಬಳ ಬಳಿಗೆ ಹೋಗಿ ಅವಳ ಕೈಗಳಿಗೆ ಬಂಗಾರದ ಬಳೆಗಳನ್ನು ತೊಡಿಸತೊಡಗಿದಳು. ನಂತರ ಆಕೆ ಹೈಬತ್ ಖಾನನತ್ತ ನೋಡಿ ಹೇಳಿದಳು, ‘ನೋಡು, ನೀನೀಗ ಹೊರಗೆ ಹೋಗು, ನಾನು ಇವಳಿಗೆ ಸುಂದರವಾಗಿ ಬಟ್ಟೆ ತೊಡಿಸಿ ತಯಾರು ಮಾಡಿ ನಿನ್ನ ಬಳಿ ಕರಕೊಂಡು ಬರುವೆ’.

ಹೈಬತ್ ಖಾನ್ ಇನ್ನೂ ಬೊಂಬೆಯಂತೆ ಅತ್ತಿತ್ತ ಮಿಸುಕಾಡದೆ ಅಲ್ಲಿಯೇ ಕುಳಿತ್ತಿದ್ದ.’ ಹೊರಗೆ ಹೋಗು, ಕೇಳಿಸ್ಲಿಲ್ವಾ ನಿನಗೆ?’ ಆಕೆ ಖಾರವಾಗಿಯೇ ಹೇಳಿದ್ದಳು.

ಆತ ನವಾಬಳತ್ತ ಒಮ್ಮೆ ನೋಡಿ ಕೋಣೆಯಿಂದ ಹೊರಗೆ ಹೋದ.

ಅಡುಗೆ ಒಲೆ ಮನೆಯ ಹೊರಗೆಯೇ ಇತ್ತು. ಸರ್ದಾರ್ ಒಲೆಯಲ್ಲಿ ಬೆಂಕಿ ಉರಿಸುತ್ತಿದ್ದಳು. ಆತ ಆಕೆಯಲ್ಲಿ ಮಾತನಾಡದೆ, ಪಾಪಾಸು ಕಳ್ಳಿಗಳ ಬೇಲಿ ಗುಂಟ ಸಾಗಿ ರಸ್ತೆಯ ಪಕ್ಕಕ್ಕೆ ಬಂದ. ಆತನಿಗೆ ಅರೆಪ್ರಜ್ಞೆಯಲ್ಲಿದ್ದ ಹಾಗೆ ಅನಿಸುತ್ತಿತ್ತು.

ಬಸ್ಸೊಂದು ಅದೇ ರಸ್ತೆಯಲ್ಲಿ ಬಂತು. ಆತನಿಗೆ ಆ ಬಸ್ಸಿಗೆ ಕೈ ಅಡ್ಡ ಹಿಡಿದು ನಿಲ್ಲಿಸಿ ಸೀದಾ ಅದಕ್ಕೆ ಹತ್ತಿ ಬಿಡಬೇಕೆಂಬ ಒತ್ತಡವೊಂದು ಒಳಗಿನಿಂದ ನುಗ್ಗಿ ಬಂದಿತು. ಆದರೆ ಆತ ಹಾಗೇನೂ ಮಾಡಲಿಲ್ಲ. ಬಸ್ಸು ಮುಂದೆ ಹೋಗಿತ್ತು. ಒಮ್ಮೆ ಜೋರಾಗಿ ಬೊಬ್ಬೆ ಹಾಕಿ ಬಸ್ಸು ನಿಲ್ಲಿಸಲು ಯತ್ನಿಸಿದ, ಆದರೆ ಆತನ ಧ್ವನಿ ಉಡುಗಿಹೋಗಿತ್ತು.

ಹಲವಾರು ಸುಖದ ರಾತ್ರಿಗಳನ್ನು ಕಳೆದಿದ್ದ ಆ ಮನೆಯೊಳಗೆ ಓಡಿ ಹೋಗಬೇಕೆನಿಸಿತು, ಆದರೆ ಆತನ ಕಾಲುಗಳು ನೆಲದೊಳಕ್ಕೆ ಹುದುಗಿ ಹೋದ ಹಾಗಿತ್ತು.

ಆತ ಅಲ್ಲೇ ನಿಂತುಕೊಂಡು ನಡೆದ ಘಟನೆಗಳನ್ನು ಮೆಲುಕು ಹಾಕತೊಡಗಿದ. ಈಗ ಮನೆಯೊಳಗಿದ್ದ ಹೆಂಗಸು ಆತನಿಗೆ ದೀರ್ಘ ಕಾಲದ ಪರಿಚಯಸ್ಥೆ. ಆತ ಆಕೆಯ ಗಂಡನ ಸ್ನೇಹಿತನಾಗಿದ್ದ, ಆ ಸ್ನೇಹಿತ ಮೃತ ಪಟ್ಟಿದ್ದ. ಆತ ತುಂಬಾ ಕಾಲದ ಹಿಂದಿನ ಅವರ ಭೇಟಿಯ ನೆನಪು ಮಾಡಿಕೊಂಡ. ಆಕೆಯ ಗಂಡನ ಮರಣದ ಸಂದರ್ಭದಲ್ಲಿ ಆತ ಆಕೆಗೆ ಸಮಾಧಾನ ಹೇಳಲು ಹೋಗಿದ್ದ. ಆದರೆ ಆಗಲೇ ಆಕೆಯ ಪ್ರಿಯಕರನಾಗಿ ಬಿಟ್ಟಿದ್ದ. ಎಲ್ಲವೂ ಬೇಗನೇ ನಡೆದುಹೋಗಿತ್ತು. ಆಕೆಯಂತೂ ತನ್ನನ್ನು ನೋಡಿಕೊಳ್ಳು ಎಂದು ಒಬ್ಬ ಕೆಲಸದಾಳಿಗೆ ಸಣ್ಣ ಕೆಲಸವೊಂದನ್ನು ವಹಿಸುವಂತೆ ಹೇಳಿದ್ದಳು.

ಹೈಬತ್ ಖಾನನಿಗೆ ಹೆಂಗಸರೊಡನೆ ಹೆಚ್ಚು ಅನುಭವವಿರಲಿಲ್ಲ. ಶಾಹಿನಾ, ಆಕೆ ನವಾಬಳ ಬಳಿಯಲ್ಲಿ ತನ್ನ ಹೆಸರು ಹಲಾಕತ್ ಅಥವಾ ಸಾವು ಎಂದು ಹೇಳಿದ್ದಳು. ಆಕೆ ಈತನ ಪ್ರೇಮಿಯಾದಾಗ ಬದುಕಿನಲ್ಲಿ ಏನೋ ಮಹತ್ತರ ಸಾಧನೆ ಮಾಡಿದ ಹಾಗೇ ಆತನಿಗೆ ಅನಿಸಿತ್ತು. ಆಕೆ ಮೊದಲೇ ಸಾಕಷ್ಟು ಶ್ರೀಮಂತಳಾಗಿದ್ದಳು. ಈಗ ಗಂಡನ ಹಣವೂ ಕೈ ಸೇರಿತ್ತು. ಆದರೆ ಈತನಿಗೆ ಅದರಲ್ಲಿ ಆಸಕ್ತಿಯಿರಲಿಲ್ಲ. ಆಕೆ ಈತನ ಬದುಕಿನಲ್ಲಿ ಬಂದ ನಿಜವಾದ ಹೆಣ್ಣಾಗಿದ್ದಳು. ಆದಕಾರಣ ಈತ ಆಕೆಗೆ ತನ್ನನ್ನು ಮೋಹಿಸಲು ಬಿಟ್ಟುಕೊಟ್ಟಿದ್ದ.

ತುಂಬಾ ಹೊತ್ತಿನವರೆಗೆ ಆತ ರಸ್ತೆಯ ಪಕ್ಕದಲ್ಲೇ ನಿಂತುಕೊಂಡಿದ್ದ. ಕೊನೆಗೆ, ಆತ ಮನೆಯ ಕಡೆ ಹೊರಟ. ಮುಂದಿನ ಬಾಗಿಲು ಮುಚ್ಚಿತ್ತು. ಹೊರಗೆ ಒಲೆಯಲ್ಲಿ ಸರ್ದಾರ್ ಏನನ್ನೋ ಬೇಯಿಸುತ್ತಿದ್ದಳು.

ಆತ ಕೋಣೆಯ ಬಳಿ ಹೋಗಿ ಬಾಗಿಲನ್ನು ತಟ್ಟಿದಾಗ, ಅದು ತೆರೆದುಕೊಂಡಿತು. ನೆಲದ ಮೇಲೆಲ್ಲಾ ನೆತ್ತರು ಚೆಲ್ಲಿಕೊಂಡಿತ್ತು, ಶಾಹಿನಾ ಗೋಡೆಗೆ ಒರಗಿಕೊಂಡು ನಿಂತಿದ್ದಳು. ಆಕೆ ಹೇಳಿದಳು, ‘ನಾನು ನವಾಬಳನ್ನು ನಿನಗೋಸ್ಕರ ಅಂದವಾಗಿ ಸಿಂಗರಿಸಿದ್ದೀನಿ ‘.

‘ಆಕೆಯೆಲ್ಲಿ?’, ಆತ ಆತಂಕದಿಂದಲೇ ಕೇಳಿದ, ಭೀತಿಯಿಂದ ಆತನ ಗಂಟಲು ಒಣಗಿಹೋಗಿತ್ತು.

‘ಆಕೆ ಸ್ವಲ್ಪ ಹಾಸಿಗೆ ಮೇಲಿದ್ದಾಳೆ, ಆದ್ರೆ ಹೆಚ್ಚಾಗಿ ಅಡುಗೆ ಮನೇಲಿಯೇ ಇದ್ದಾಳೆ’, ಶಾಹಿನಾ ಉತ್ತರಿಸಿದಳು.

ಹೈಬತ್ ಖಾನ್ ಥರ ಥರನೆ ನಡುಗಿಹೋದ. ನೆಲದ ಮೇಲೆ ಚೆಲ್ಲಿದ್ದ ನೆತ್ತರ ಮಡುವಿನಲ್ಲಿ ಬಿದ್ದಿದ್ದ ಉದ್ದನೆಯ ಚಾಕುವೊಂದು ಆತನಿಗೆ ಕಾಣಿಸಿತ್ತು. ಹಾಸಿಗೆಯಲ್ಲಿ ಯಾರೋ ಮಲಗಿದ್ದರು, ಮೇಲೆ ರಕ್ತಸಿಕ್ತ ಹೊದಿಕೆಯನ್ನು ಹೊದಿಸಲಾಗಿತ್ತು.

‘ಅಲ್ಲೇನಿದೆ ಅಂತಾ ತಿಳಿಯೋ ಕುತೂಹಲ ಇಲ್ವಾ ನಿಂಗೇ, ಹೊದಿಕೆಯೆತ್ತಿ ತೋರಿಸ್ಲೇನು?’, ಶಾಹಿನಾ ನಕ್ಕಳು. ‘ಅದು ನಿನ್ನ ನವಾಬ್, ತುಂಬಾ ಮುತುವರ್ಜಿಯಿಂದ ಆಕೆಯನ್ನು ಶೃಂಗರಿಸಿರುವೆ, ಆದ್ರೆ ನೀನು ಹಸಿದಿರೋ ಹಾಗೆ ಕಾಣ್ತಿದೆ, ಮೊದಲು ನಿನ್ನ ಊಟವಾಗ್ಲಿ, ಅಲ್ಲಿ ಸರ್ದಾರ್ ಜಗತ್ತಿನಲ್ಲಿಯೇ ಅತ್ತ್ಯುತ್ತಮವಾಗಿರುವ ಮಾಂಸದಡಿಗೆಯನ್ನು ಬೇಯಿಸ್ತಿದ್ದಾಳೆ. ಅದನ್ನ ನನ್ನ ಕೈಯ್ಯಾರೆ ತಯಾರಿಸಿದ್ದೀನಿ’

‘ಏನು ಮಾಡಿದ್ದೀಯಾ ನೀನು?’, ಹೈಬತ್ ಖಾನ್ ಕಿರುಚಿದ.

ಶಾಹಿನಾ ಮತ್ತೊಮ್ಮೆ ನಕ್ಕಳು, ‘ಡಾರ್ಲಿಂಗ್ ಇದೇನು ಮೊದಲ ಸಲವಲ್ಲ. ನನ್ನ ಗಂಡ, ನಿನ್ನಂತೆಯೇ ದ್ರೋಹಿಯಾಗಿದ್ದ. ಆತನನ್ನು ಕೊಂದು, ಚೂರು ಚೂರು ಮಾಡಿ ಹಕ್ಕಿಗಳಿಗೆ ಎಸಿಬೇಕಾಯ್ತು. ಆದ್ರೆ ನಾನು ನಿನ್ನನ್ನು ಪ್ರೀತಿಸಿದ್ದೆ ಅದಕ್ಕೆ ನಿನ್ನ ಬದಲಿಗೆ ನಾನು…’

ಆಕೆ ಮಾತನ್ನು ಪೂರ್ತಿಗೊಳಿಸದೆ, ಹಾಸಿಗೆಯ ಮೇಲಿನ ರಾಶಿಗೆ ಹೊದಿಸಿದ್ದ ಹೊದಿಕೆಯನ್ನು ಮೇಲೆತ್ತಿದಳು. ಹೈಬತ್ ಖಾನ್ ತಲೆಸುತ್ತಿ ಬಂದು ನೆಲಕ್ಕೊರಗಿದ.

ಆತನಿಗೆ ಪ್ರಜ್ಞೆ ಮರುಕಳಿಸಿದಾಗ ಆತ ಕಾರಿನಲ್ಲಿದ್ದ. ಶಾಹಿನಾ ಕಾರು ಚಲಾಯಿಸುತ್ತಿದ್ದಳು, ಬಹುಷಃ ಯಾವುದೋ ಕಾಡಿನ ದಾರಿಯಲ್ಲಿ.

▪▪▪▪▪▪▪▪▪▪▪▪▪▪

ಉರ್ದು ಮೂಲಕಥೆ : ಸಾದತ್ ಹಸನ್ ಮಂಟೋನ ‘ಸರ್ಕಂಡೋ ಕೆ ಪೀಚೆ’
ಅನುವಾದ : ಪುನೀತ್ ಅಪ್ಪು, ಯುವ ವಕೀಲರು ಮತ್ತು ಬರಹಗಾರರು. ಮಂಟೋನ ಹಲವು ಕಥೆಗಳನ್ನು ಅನುವಾದಿಸಿದ್ದಾರೆ.


ಇದನ್ನೂ ಓದಿ: ಪಿಸುಮಾತಿನ ರಾತ್ರಿಗಳು; ಮಾಂಟೋ ಜನ್ಮದಿನಕ್ಕೊಂದು ಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಚೆನ್ನಾಗಿದೆ. ಆದರೆ ಆಕೆಯ ಜಾಗದಲ್ಲಿ ನಿಂತು ನೋಡಬೇಕಿತ್ತು ಎನ್ನುವ ಅನಿಸಿಕೆ……

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...