Homeಕರ್ನಾಟಕದಲಿತ ವ್ಯಕ್ತಿಯ ನಿಗೂಢ ಸಾವು ಪ್ರಕರಣ: ಹಾಲಿ, ಮಾಜಿ ಶಾಸಕರ ಜಾಣಮೌನ

ದಲಿತ ವ್ಯಕ್ತಿಯ ನಿಗೂಢ ಸಾವು ಪ್ರಕರಣ: ಹಾಲಿ, ಮಾಜಿ ಶಾಸಕರ ಜಾಣಮೌನ

- Advertisement -
- Advertisement -

ತುಮಕೂರು ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ, ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಜಾಣಮೌನಕ್ಕೆ ಶರಣಾಗಿದೆ. ಚುನಾವಣೆ ಬಂದಾಗ ಓಟಿಗಾಗಿ ದಲಿತರ ಜಪ ಮಾಡುವ ಸರ್ಕಾರ, ಜನಪತ್ರಿನಿಧಿಗಳು ನಂತರ ಮತದಾರರನ್ನು ಮರೆತುಬಿಡುತ್ತಾರೆಂಬುದಕ್ಕೆ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ ಎಂದು ದಲಿತ ಸಂಘಟನೆಗಳು ದೂರಿವೆ.

ಪ್ರಮುಖ ದಲಿತ ಅಧಿಕಾರಿಗಳ ಎತ್ತಂಗಡಿ ಒಂದೆಡೆಯಾದರೆ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್ ಮತ್ತು ಮಧುಗಿರಿ ತಾಲೂಕುಗಳಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ತುರುವೇಕೆರೆಯ ಗಿರಿಯನಹಳ್ಳಿಯ ದಲಿತ ವ್ಯಕ್ತಿ ಕೆಂಪಯ್ಯ ನಿಗೂಢ ಸಾವನ್ನಪ್ಪಿ ಮೂರು ತಿಂಗಳು ಕಳೆದರೂ ಸ್ಥಳೀಯ ಶಾಸಕರು ತುಟಿ ಬಿಚ್ಚಿಲ್ಲದಿರುವುದಕ್ಕೆ ಮತ್ತು ಪರಸ್ಪರ ಕಚ್ಚಾಡುತ್ತಿರುವುದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತುರುವೇಕೆರೆಯ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಹಾಲಿ ಶಾಸಕ ಮಸಾಲ ಜಯರಾಂ, ದಲಿತ ವ್ಯಕ್ತಿ ಕೆಂಪಯ್ಯ ನಿಗೂಢ ಸಾವಿನ ಕುರಿತು ಒಂದು ಮಾತನ್ನು ಆಡಿಲ್ಲ. ಹಾಲಿ ಮತ್ತು ಮಾಜಿ ಶಾಸಕರು ಪ್ರತಿಷ್ಠೆಗೆ ಬಿದ್ದು ಜನರನ್ನು ಮರೆತಿದ್ದಾರೆ. ದಲಿತರನ್ನು ಕಡೆಗಣಿಸುತ್ತಿದ್ದಾರೆ ಎಂದು ದಲಿತ ಸಂಘಟನೆಗಳು ದೂರಿವೆ. ಕೂಡಲೇ ಹಾಲಿ ಮತ್ತು ಮಾಜಿ ಶಾಸಕರು ಕೆಂಪಯ್ಯ ಪ್ರಕರಣದ ಕುರಿತು ತಮ್ಮ ನಿಲುವೇನೆಂಬುದನ್ನು ವ್ಯಕ್ತಪಡಿಸಬೇಕೆಂದು ಆಗ್ರಹಿಸಿವೆ.

ಸರ್ಕಾರ ಮತ್ತು ಪೊಲೀಸ್ ವೈಫಲ್ಯ

ಕೆಂಪಯ್ಯ ನಿಗೂಢ ಸಾವು ಪ್ರಕರಣದಲ್ಲಿ ಪೊಲೀಸರು ದೂರುದಾರರ ಮನವಿಯ ಅಂಶಗಳನ್ನ ಪರಿಗಣಿಸಿಲ್ಲ. ತನಿಖೆಯ ಪ್ರಾಥಮಿಕ ಹಂತದ ಕ್ರಮಗಳನ್ನು ಅನುಸರಿಸಿಲ್ಲ. ಅಶಕ್ತ ಕುಟುಂಬದ ರಕ್ಷಣೆಗೆ ಮುಂದಾಗಿಲ್ಲ. ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ಹಾಗಾಗಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸತ್ಯಶೋಧನ ಸಮಿತಿಯ ಸದಸ್ಯ ಮತ್ತು ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಆರೋಪಿಸಿದ್ದಾರೆ.

ಪಿಯುಸಿಎಲ್ ಮತ್ತು ಪರ್ಯಾಯ ಕಾನೂನು ವೇದಿಕೆ ಸದಸ್ಯರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸ್ವತ್ತನ್ನು ರಕ್ಷಿಸಲು ಮುಂದಾದ ನೌಕರರಿಗೆ ರಕ್ಷಣೆ ನೀಡಿಲ್ಲ. ಇದು ಸರ್ಕಾರದ ವೈಫಲ್ಯ. ಮೃತನ ಕುಟುಂಬದಲ್ಲಿ ಹೆಣ್ಣುಮಕ್ಕಳೇ ಇದ್ದು ಅವರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ ಕೈಚೆಲ್ಲಿ ಕುಳಿತಿದೆ.  ತರುವೇಕೆರೆಯಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದರೂ ಬಡವರ ಗೋಳನ್ನು ಕೇಳುವವರೇ ಇಲ್ಲ. ಹಾಗಾಗಿ ಮೃತನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಕೆಂಪಯ್ಯ ನಿಗೂಢ ಸಾವು ಪ್ರಕರಣವನ್ನು ಸಿಐಡಿಗೆ ವಹಿಸಬೇಕು, ಬಡಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪರ್ಯಾಯ ಕಾನೂನು ವೇದಿಕೆಯ ಸದಸ್ಯ ಹಾಗೂ ಹೈಕೋರ್ಟ್ ವಕೀಲ ಎಸ್. ಶಿವಮಣಿಥನ್ ಮಾತನಾಡಿ ಕೆಂಪಯ್ಯ ನಿಗೂಡ ಸಾವು ಪ್ರಕರಣದಲ್ಲಿ ಸ್ಥಳ ಮಹಜರು ಮಾಡಿಲ್ಲ. ಎ.ಎಸ್.ಪಿ. ಘಟನೆ ಸ್ಥಳದಲ್ಲಿ ಹೇಳಿಕೆ ಪಡೆಯದೇ ಸಾಕ್ಷ್ಯಗಳನ್ನು ತುಮಕೂರಿಗೆ ಕರೆಸಿಕೊಂಡು ಹೇಳಿಕೆ ಪಡೆದಿದ್ದಾರೆ. ಯಾವುದೇ ಪ್ರಕರಣವಾದರೂ ಸ್ಥಳ ತನಿಖೆ ನಡೆಸಿ ಸ್ಥಳದಲ್ಲೇ ಸಾಕ್ಷ್ಯಗಳ ಹೇಳಿಕೆ ಮತ್ತು ಸಹಿ ಪಡೆಯಬೇಕು. ಮಹಜರು ಮಾಡಬೇಕಾದಾಗ ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸಿಲ್ಲ. ಇದರಲ್ಲಿ ಪೊಲೀಸರ ವೈಫಲ್ಯ ಎದ್ದುಕಾಣುತ್ತದೆ ಎಂದು ಆರೋಪಿಸಿದ್ದಾರೆ.

ದಂಡಿನಶಿವರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗಂಗಣ್ಣ ಒತ್ತಾಯಪೂರಕವಾಗಿ ದೂರು ನೀಡಲು ವಿಳಂಬಕ್ಕೆ ಸಂಬಂಧಿಕರ ಜೊತೆ ಚರ್ಚಿಸಿದ್ದು ಕಾರಣ ಎಂದು ದೂರುದಾರರಿಂದ ಬರೆಸಿಕೊಂಡಿದ್ದಾರೆ. ದೂರು ದಾಖಲಿಸಲು ಮತ್ತು ಎಫ್ಐಆರ್ ದಾಖಲಿಸಲು ವಿಳಂಬಕ್ಕೆ ಪೊಲೀಸರೇ ಕಾರಣ. ಸಾರ್ವಜನಿಕ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಕೆಂಪಯ್ಯ ತಹಶೀಲ್ದಾರ್ ಅವರಿಗೆ ತಿಳಿಸಿದ್ದಾರೆ. ಹಾಗಾಗಿ ಗ್ರಾಮಲೆಕ್ಕಿಗರನ್ನು ಸ್ಥಳಕ್ಕೆ ಕಳುಹಿಸಿ ಮಣ್ಣು ಗಣಿ ನಡೆಸುತ್ತಿದ್ದವರಿಗೆ ಎಚ್ಚರಿಕೆ ನೀಡಲಾಗಿದೆ. ಆನಂತರ ಕೆಂಪಯ್ಯ ಅವರಿಗೆ ಅರೋಪಿಗಳು ಜೀವಬೆದರಿಕೆ ಹಾಕಿದ್ದು ಈ ಮಾಹಿತಿಯನ್ನು ಕಂದಾಯ ಅಧಿಕಾರಿಗೆ ತಿಳಿಸಿದ್ದಾರೆ. ಆದರೆ ಕಂದಾಯ ಅಧಿಕಾರಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದ್ದಾರೆ.

ಘಟನೆ ಸಂಬಂಧ ಸಾಕ್ಷ್ಯ ಸಂಗ್ರಹ ಮಾಡಿಲ್ಲ. ಆರೋಪಿಗಳು ಸ್ಥಳದಲ್ಲಿದ್ದರೂ ಅವರ ಸಿಮ್ ಮತ್ತು ಕಾಲರ್ ಐಡಿ ಡಿಟೈಲ್ ಸಂಗ್ರಹಿಸಿಲ್ಲ. ಎ.ಎಸ್.ಪಿ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಕುಟುಂಬದ ಸದಸ್ಯರಿಗೆ ಮರಣೋತ್ತರ ಪರೀಕ್ಷೆಯ ವರದಿ ನೀಡಿಲ್ಲ. ಇದನ್ನು ನೋಡಿದರೆ ಪೊಲೀಸರೊಂದಿಗೆ ವೈದ್ಯರು ಶಾಮೀಲಾಗಿದ್ದಾರೆ. ಪೊಲೀಸ್, ವೈದ್ಯರ ಲೋಪಗಳು ಎದ್ದುಕಾಣುತ್ತವೆ. ಎಫ್‌ಐಆರ್ ದಾಖಲಿಸಿ ತಿಂಗಳು ಕಳೆದರೂ ಚಾರ್ಜ್ ಶೀಟ್ ಏಕೆ ಸಲ್ಲಿಸಿಲ್ಲ ಎಂದು ಟೀಕಿಸಿದ್ದಾರೆ.

ಮೃತ ಕೆಂಪಯ್ಯ ಪುತ್ರಿ ಚೈತ್ರಾ ಮಾತನಾಡಿ, ನಮಗೆ ಪ್ರಾಣ ಬೆದರಿಕೆ ಇದೆ. ಪೊಲೀಸರು ರಕ್ಷಣೆ ಕೊಡುತ್ತಿಲ್ಲ. ನಾವು ಗ್ರಾಮದಲ್ಲಿ ವಾಸ ಮಾಡಲು ಕಷ್ಟವಾಗುತ್ತಿದೆ. ತಂದೆಯ ಮರಣೋತ್ತರ ಪರೀಕ್ಷೆಯ ವರದಿಯನ್ನು ಕೇಳಿದರೆ ಕೊಡುತ್ತಿಲ್ಲ. ಮನೆಯಲ್ಲಿ ಎಲ್ಲರೂ ಹೆಣ್ಣುಮಕ್ಕಳೇ ಇದ್ದೇವೆ. ನಮಗೆ ರಕ್ಷಣೆ ಬೇಕು. ನ್ಯಾಯ ಬೇಕು. ನಮ್ಮ ತಂದೆಯ ಸಾವಿಗೆ ಕಾರಣರಾರಿಗೆ ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ಸತ್ಯಶೋಧನ ಸಮಿತಿಯ ಸದಸ್ಯ ಟಿ.ವಿ.ನರಸಿಂಹಪ್ಪ, ಪರ್ಯಾಯ ಕಾನೂನು ವೇದಿಕೆಯ ಬಸವಪ್ರಸಾದ್ ಕುನಾಲೆ, ಪಿಯುಸಿಎಲ್ ಉಪಾಧ್ಯಕ್ಷೆ ದೀಪಿಕ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ ಹಾಜರಿದ್ದರು.


ಇದನ್ನೂ ಓದಿ; ಬೋರ್‌ವೆಲ್ ಕೊರೆಸಿದ್ದಕ್ಕೆ ದಲಿತನ ಮೇಲೆ ಹಲ್ಲೆ: ಆರೋಪಿಗಳ ಬೆಂಬಲಕ್ಕೆ ನಿಂತ ರಾಜಕಾರಣಿ?

ಇದನ್ನೂ ಓದಿ: ತುರುವೇಕೆರೆಯಲ್ಲಿ ದಲಿತ ಮುಖಂಡನ ಸಂಶಯಾಸ್ಪದ ಸಾವು – ಪೊಲೀಸ್ ವೈಫಲ್ಯವೆಂದ ಪಿಯುಸಿಎಲ್ ಸತ್ಯಶೋಧನ ಸಮಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read