Homeಮುಖಪುಟಒಂದು ಭಾರತದೊಳಗೆ ಹಲವು ಭಾರತಗಳಿವೆ; ಇದು ಬಿಜೆಪಿಯವರಿಗೆ ಗೊತ್ತಿಲ್ಲ

ಒಂದು ಭಾರತದೊಳಗೆ ಹಲವು ಭಾರತಗಳಿವೆ; ಇದು ಬಿಜೆಪಿಯವರಿಗೆ ಗೊತ್ತಿಲ್ಲ

ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ಎಲ್ಲವೂ ಬರೀ ಪೇಪರ್‌ಗಳಲ್ಲಿವೆ ಅಷ್ಟೆ. ಪೇಪರ್ ಮೇಲೆ ಸಕ್ಕರೆ ಎಂದು ಬರೆದು, ಅದನ್ನು ನೆಕ್ಕಿದರೆ ಸಿಹಿಯಾಗಿರುತ್ತದೆಯೇ? ಬೆಂಬಲ ಬೆಲೆಯ ಇಂದಿನ ಪರಿಸ್ಥಿತಿ ಇದೇ ಆಗಿದೆ.

- Advertisement -
- Advertisement -

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಮುಂದು ಮಾಡಿದ್ದ ಕೃಷಿ ಸಂಬಂಧಿ ಮೂರು ಮಸೂದೆಗಳ ವಿರುದ್ಧ ದೇಶದಾದ್ಯಂತ ಹಲವು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಯಾವ ಪ್ರತಿಭಟನೆಗಳಿಗೂ ಸ್ಪಂದಿಸದೆ, ಸಂಸತ್ತಿನಲ್ಲಿ ಪ್ರಶ್ನೋತ್ತರಕ್ಕೂ ಅವಕಾಶ ನೀಡದೆ ಈ ಮೂರು ಮಸೂದೆಗಳಿಗೆ ಕೇಂದ್ರ ಸರ್ಕಾರ ಬಹುಮತದ ಅಂಗೀಕಾರ ಪಡೆದು ಕಾಯ್ದೆಗಳನ್ನಾಗಿಸಿತು. ಈ ಕಾಯ್ದೆಗಳು ರೈತರ ಹಿತಾಸಕ್ತಿಗೆ ಮಾಡುವ ಅನಾಹತಗಳನ್ನು ವಿರೋಧಿಸಿ ಹೋರಾಟಗಳು ಇನ್ನೂ ಮುಂದುವರೆಯುತ್ತಲೇ ಇವೆ.

ಕರ್ನಾಟಕದಲ್ಲಿಯು ಹಲವು ಸಂಘಟನೆಗಳು ಒಗ್ಗೂಡಿ ಒಂದು ವಾರಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿದವು. ಕೇಂದ್ರ ಸರ್ಕಾರದ ಕಾಯ್ದೆಗಳಿಗೆ ಪೂರಕವಾದ ಹಲವು ಕಾಯ್ದೆಗಳು ವಿಧಾನಸಭೆಯಲ್ಲಿ ಮಂಜೂರಾದವು. ಸದ್ಯಕ್ಕೆ ವಿಧಾನ ಪರಿಷತ್ತಿನಲ್ಲಿ ಈ ಕಾಯ್ದೆಗಳನ್ನು ತಡೆಹಿಡಿಯಲಾಗಿದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಹೋರಾಟಗಳನ್ನು ಕುರಿತು ಕರ್ನಾಟಕದ ರೈತಮುಖಂಡರಾದ ಬಡಗಲಪುರ ನಾಗೇಂದ್ರ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ತಮಿಳು ನಾಡಿನ ರೈತ ಮುಖಂಡರಾದ ಕಣ್ಣಯ್ಯನ್ ಸುಬ್ರಮಣಿಯನ್ ಅವರನ್ನು ನ್ಯಾಯಪಥ ಸಂದರ್ಶಿಸಿತು. ಮೂವರೂ ಮುಖಂಡರು ಈ ಕಾಯ್ದೆಗಳಿಂದ ಒದಗಲಿರುವ ಅಪಾಯಗಳನ್ನು ಹಾಗೂ ತಾವು ಮುಂದುವರೆಸಲಿರುವ ಹೋರಾಟದ ಸ್ವರೂಪವನ್ನು ಚರ್ಚಿಸಿದ್ದಾರೆ.

1. ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಜಾರಿ ಮಾಡಿದ ಮೂರು ಕಾಯ್ದೆಗಳ ಬಗ್ಗೆ ಮತ್ತು ರಾಜ್ಯದ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂಸುಧಾರಣ ತಿದ್ದುಪಡಿ ವಿರುದ್ಧ ಹೋರಾಟ ನಡೆಸಿದ್ದು ಏಕೆ? ತಮಿಳುನಾಡಿನಲ್ಲಿ ನಡೆದ ಹೋರಾಟಗಳ ಬಗ್ಗೆ ತಿಳಿಸಿ.

ಈಗ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತಂದಿರುವ ಕಾನೂನುಗಳನ್ನು ನಾವು ಪ್ರತ್ಯೇಕವಾಗಿ ನೋಡಿದರೆ ಸಾಲದು. ಯಾಕೆಂದರೆ ರಾಜ್ಯ ಪಟ್ಟಿಯಲ್ಲಿರುವ ಕೃಷಿ ಕಾಯ್ದೆಗಳಿಗೆ ಕೇಂದ್ರ ತಿದ್ದುಪಡಿತರಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಈ ಹಿಂದೆಯೇ ರಾಜ್ಯಗಳಿಗೆ ಸಕ್ರ್ಯುಲರ್ ಹೊರಡಿಸಿ ಇದಕ್ಕೆ ಪೂರಕವಾದ ಕಾಯ್ದೆಗಳನ್ನು ರಾಜ್ಯಗಳಲ್ಲಿ ತನ್ನಿ ಎಂದಿತ್ತು. ಅದೂ ಸಾಲದೆಂಬಂತೆ ಸ್ವತಃ ಕೇಂದ್ರ ಸರ್ಕಾರವೇ ಸುಗ್ರೀವಾಜ್ಞೆ ಹೊರಡಿಸಿ ಲೋಕಸಭೆಯಲ್ಲಿ ಅನುಮೋದನೆ ಪಡೆದು, ರಾಜ್ಯಸಭೆಯಲ್ಲಿ ಚರ್ಚಿಸದೆಯೇ ಜಾರಿಗೆ ತಂದಿದೆ. ಇದರ ಹಿಂದಿರುವ ಉದ್ದೇಶ ಟ್ರಾನ್ಸ್‌ನ್ಯಾಷನಲ್ ಕಾರ್ಪೊರೆಟ್‍ಗಳಿಗೆ ಹೂಡಿಕೆ ಅನುಕೂಲ ಮಾಡಿಕೊಡುವುದೇ ಆಗಿದೆ. ಈ ಮೂರೂ ಕಾಯ್ದೆಗಳ ತಿದ್ದುಪಡಿಯೂ ಸಹ ಅವರಿಗೇ ಅನುಕೂಲವಾಗಲಿದೆ.

ಎಪಿಎಂಸಿ ಕಾಯ್ದೆಯಿರುವುದರಿಂದ ಕಾರ್ಪೋರೆಟ್‍ಗಳು ದೊಡ್ಡ ಮಟ್ಟದಲ್ಲಿ ಬೆಳೆಗಳನ್ನು ಖರೀದಿಸಲು ಸಾದ್ಯವಿಲ್ಲ ಅಥವಾ ಸಂಗ್ರಹಿಸಲು ಸಾಧ್ಯವಿಲ್ಲ. ಹಾಗಾಗಿ ರೈತರು ಹೊರಗಡೆಯೂ ಮಾರಾಟ ಮಾಡಬಹುದು ಎಂಬ ಕಾನೂನು ತನ್ನಿ ಎಂದು ಅವರು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ. ಇನ್ನು ಭೂ ಒಪ್ಪಂದದ ಕಾಯ್ದೆಗೆ ಸಂಬಂಧಿಸಿದಂತೆ, ಹೊರಗಿನ ದೇಶದವರು ಇಲ್ಲಿ ಭೂಮಿ ಕೊಳ್ಳಲು ಈಗಿರುವ ಕಾಯ್ದೆ ತೊಡಕಾಗಿದೆ. ಹಾಗಾಗಿ ಇದನ್ನು ತಿದ್ದುಪಡಿ ಮಾಡಿ ಎಂದು ಅವರು ಒತ್ತಡ ಹಾಕಿದ್ದಾರೆ. ರೈತರಲ್ಲದವರು ಭೂಮಿ ಕೊಳ್ಳುವುದಕ್ಕೆ ಈ ಹಿಂದಿನ ಕಾಯ್ದೆ ತೊಡಕಾಗಿತ್ತು. ಹಾಗಾಗಿ ಇದನ್ನು ನಿವಾರಿಸಿ ಎಂದು ಕಾರ್ಪೊರೆಟ್‍ಗಳು ಒತ್ತಡ ಹೇರಿದ್ದರಿಂದಲೇ ಸುಗ್ರೀವಾಜ್ಞೆಗಳ ಮೂಲಕ ಈ ಕಾನೂನನ್ನು ಜಾರಿಗೆ ತಂದಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿರುವ ಸಾವಿರಾರು ಇತ್ಯರ್ಥವಾಗದ ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿದೆ.

ಹಾಗಾದರೆ ಈ ಕಾರ್ಪೊರೆಟ್‍ಗಳು ಬರಬಾರದೇ? ಖಂಡಿತ ಬರಲಿ. ಆದರೆ ಅದೇ ಸಂಪೂರ್ಣವಾಗಿರಬಾರದು. ಬರೀ ಕಾರ್ಪೊರೆಟ್‍ಮಯವಾದರೆ ಅಥವಾ ಕಾರ್ಪೊರೆಟೈಸೇಷನ್ ಆಗಿಬಿಟ್ಟರೆ, ಅವರೆಲ್ಲಾ ತಮ್ಮೊಳಗೆ ಒಂದು ಸಿಂಡಿಕೇಟ್ ಮಾಡಿಕೊಳ್ಳುವುದರ ಮೂಲಕ ಮತ್ತೊಮ್ಮೆ ಏಕಸ್ವಾಮ್ಯ ಮಾರುಕಟ್ಟೆ ಪದ್ಧತಿಯನ್ನು ಜಾರಿಗೆ ತರುತ್ತಾರೆ. ಕಾರ್ಪೊರೆಟ್‍ನವರು ಬರುವಾಗ ಯಾವಾಗಲೂ ಒಪ್ಪಂದದ ಮೂಲಕವೇ ಬರುತ್ತಾರೆ. ರೈತ ಒಮ್ಮೆ ಈ ಒಪ್ಪಂದಕ್ಕೆ ಸಹಿ ಹಾಕಿದರೆ, ಆತ ದೊಡ್ಡದೊಡ್ಡ ಕಂಪನಿಗಳ ಗುಲಾಮನಾಗುತ್ತಾನೆ. ಇದರಿಂದ ರೈತರಿಗೆ ಆಯ್ಕೆಗಳು ಕಡಿಮೆಯಾಗುತ್ತವೆ. ಹಾಗಾಗಿ ಭವಿಷ್ಯದಲ್ಲಿ ಖಂಡಿತವಾಗಿಯೂ ರೈತರಿಗೆ ಭಾರಿ ಸಮಸ್ಯೆಗಳು ಉಲ್ಬಣವಾಗುತ್ತವೆ. ಇದರಿಂದ ತೊಡಕುಂಟಾಗುತ್ತದೆ. ಈ ಕಾಯ್ದೆಯಲ್ಲಿರುವ ಹಿಡನ್ ಅಜೆಂಡಾಗಳು ಸಾಮಾನ್ಯ ರೈತರಿಗೆ ತಿಳಿದಿರುವುದಿಲ್ಲ. ಆದರೆ ರೈತ ಮುಖಂಡರಿಗೆ ಇವುಗಳೆಲ್ಲಾ ಸ್ಪಷ್ಟವಾಗಿ ತಿಳಿದಿದೆ. ಹಾಗಾಗಿಯೇ ಇದನ್ನು ರೈತ ಸಂಘಟನೆಗಳು ವಿರೋಧಿಸುತ್ತಿವೆ.

2. ಐಕ್ಯ ಹೋರಾಟದ ಬೇಡಿಕೆಗಳು ಒಂದು ಮಟ್ಟಕ್ಕೆ ಜನ ಸಾಮಾನ್ಯರಿಗೆ ತಲುಪಿದವಾದರೂ ಮೂರು ಕಾಯ್ದೆಗಳನ್ನು ತಂದ ಕೇಂದ್ರ ಸರ್ಕಾರವಾಗಲೀ ಅದಕ್ಕೆ ಪೂರಕ ಕಾಯ್ದೆಗಳನ್ನು ತಂದ ರಾಜ್ಯ ಸರ್ಕಾರವಾಗಲೀ ಇವುಗಳಿಂದ ವಿಚಲಿತವಾಗಲೇ ಇಲ್ಲವಲ್ಲಾ ಏಕೆ?

ಪ್ರಸ್ತುತ ಕೇಂದ್ರ ಸರ್ಕಾರದ ವರ್ತನೆ ಸರ್ವಾಧಿಕಾರಿ ಧೋರಣೆಯದ್ದಾಗಿದೆ. ಆರಂಭದಲ್ಲಿ 2 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ನಂತರ ಸಮ್ಮಿಶ್ರ ಸರ್ಕಾರಕ್ಕೆ ಕೈಜೋಡಿಸಿತ್ತು. ಆದರೆ 2014ರಲ್ಲಿ ಬಹುಮತ ಬಂದು ಆಡಳಿತದ ಚುಕ್ಕಾಣಿ ಹಿಡಿದರು. ಆಗ ಇವರ ವರ್ತನೆ ಬದಲಾಯಿತು. ಇನ್ನು 2019ರಲ್ಲಿ ಭಾರೀ ಬಹುಮತ ಬಂದ ನಂತರ, ನಾವೇ ಭಾರತ, ನಾವು ಹೇಳುವುದೇ ನಡೆಯಬೇಕು ಎಂದುಕೊಂಡರು. ಹಾಗಾಗಿ ಇವರಿಗೆ ಸಂಸತ್ತಿನಲ್ಲಿ ಬಹುಮತವಿರುವುದರಿಂದ ಎಷ್ಟೇ ಜನ ವಿರೋಧಿಸಿದರೂ ತಾವು ಅಂದುಕೊಂಡದ್ದನ್ನು ಮಾಡಿಯೇ ತೀರುತ್ತಾರೆ.

3. ಎಪಿಎಂಸಿ ಕೂಡ ರೈತರ ಹಿತಕ್ಕಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರೆ ಕೇಂದ್ರ ಸರಕಾರ ಈಗ ತರಲು ಹೊರಟಿರುವ ಫ್ರೀ ಮಾರುಕಟ್ಟೆ ಅದಕ್ಕಿಂತಲೂ ಮಾರಕ ಎಂಬುದು ರೈತ ಹೋರಾಟಗಾರರ ಕೂಗು. ಆದರೆ, ಹಿಂದೆಯೂ ತಮ್ಮ ಪರವಾಗಿ ಇರದಿದ್ದ ಎಪಿಎಂಸಿ ಕುರಿತಾಗಿ ರೈತರಿಗೇಕೆ ಆಸಕ್ತಿ ಇರುತ್ತದೆ? ಹಾಗಾಗಿಯೇ ಇದು ದೊಡ್ಡ ಹೋರಾಟವಾಗಲಿಲ್ಲವಾ? ನಿಮ್ಮ ಅನಿಸಿಕೆಯೇನು?

ಎಪಿಎಂಸಿಯಲ್ಲಿಯೂ ಹಲವು ತೊಡಕುಗಳಿವೆ. ಅವುಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಸಮಸ್ಯೆಯಿರುವುದು ಈ ಕಾಯ್ದೆಯನ್ನು ಚರ್ಚಿಸದೇ ಜಾರಿಗೆ ತಂದಿರುವುದರಲ್ಲಿ. ಮಾರುಕಟ್ಟೆಯಲ್ಲಿ ಸುಧಾರಣೆ ತರುವ ಸಲುವಾಗಿ, ರೈತರಿಗೆ ಅನುಕೂಲವಾಗಲಿ ಎಂದು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ನಾನು ಈ ಕಾಯ್ದೆಯ ಬಗ್ಗೆ ಆಳವಾಗಿ ಮಾತನಾಡಲು ಹೋಗುವುದಿಲ್ಲ. ಈ ಕಾಯ್ದೆಯ ಮೂಲಭೂತ ತತ್ವದ ಬಗ್ಗೆ ಮಾತ್ರ ಮಾತನಾಡುತ್ತೇನೆ. ಈ ಕಾಯ್ದೆಯ ಪ್ರಮುಖ ಉದ್ದೇಶ ಮತ್ತು ಪ್ರಾಥಮಿಕ ತತ್ವ, ಏಕಸ್ವಾಮ್ಯ ಮಾರುಕಟ್ಟೆಯಿಂದ ಸಾರ್ವತ್ರಿಕ ಮಾರುಕಟ್ಟೆಗೆ ರೂಪಾಂತರಗೊಳ್ಳುವ ಮೂಲಕ ಬೆಲೆ ನಿಗದಿ ಮಾಡುವಲ್ಲಿ ರೈತರೂ ಪಾಲ್ಗೊಳ್ಳಬೇಕು ಎನ್ನುವುದೇ ಆಗಿದೆ. ರೈತರೆಲ್ಲಾ ತಮ್ಮೊಳಗೆ ಒಂದು ಸಿಂಡಿಕೇಟ್ ಮಾಡಿಕೊಂಡು ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಬೆಲೆಯನ್ನು ಇಳಿಸಬಾರದು ಎಂದು ನಿಯಮ ಮಾಡಿಕೊಳ್ಳುತ್ತಾರೆ. ಆದರೆ ಇದರಲ್ಲಿ ದಳ್ಳಾಳಿಗಳ ಆಕ್ರಮಣದಿಂದ ಇಂದಿಗೂ ಸಮಸ್ಯೆ ಹಾಗೇ ಉಳಿದಿದೆ. ಇದನ್ನು ನಿವಾರಿಸಲು ಎಪಿಎಂಸಿ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಿ, ರೈತ ಸ್ನೇಹಿಯಾಗಿ ಮಾಡಿದ್ದರೆ ಸಾಕಿತ್ತು. ಆದರೆ ಇವರು ಮಾಡುತ್ತಿರುವುದು ಈ ಕಾಯ್ದೆಯನ್ನೇ ಬುಡಸಮೇತ ಕಿತ್ತುಹಾಕುವ ಕೆಲಸ. ಇದಕ್ಕೆ ಇವರು ನೀಡುತ್ತಿರುವ ಸಮರ್ಥನೆ ಏನೆಂದರೆ, “ಒಂದು ದೇಶ, ಒಂದು ಮಾರುಕಟ್ಟೆ” ಎಂಬುದು. ಇದು ದೊಡ್ಡ ಡೋಂಗಿಯಾಗಿದ್ದು, ನಮ್ಮ ಭಾರತದಲ್ಲಿ ಇದು ಯಶಸ್ವಿಯಾಗುವುದಿಲ್ಲ. ಏಕೆಂದರೆ “ಒಂದು ಭಾರತದೊಳಗೆ ಹಲವು ಭಾರತಗಳಿವೆ” ಎಂಬುದು ಅವರಿಗೆ ತಿಳಿದಿಲ್ಲ.

ಕೇಂದ್ರ ಸರ್ಕಾರ ಹೇಳಿದಂತೆ ಈ ಎಪಿಎಂಸಿ ಕಾಯ್ದೆಯನ್ನು ಜೂನ್ ತಿಂಗಳಿನಲ್ಲಿಯೇ ತಮಿಳುನಾಡಿನಲ್ಲಿ ಜಾರಿಗೆ ತರಲಾಗಿದೆ. ಆದರೆ ಇದಕ್ಕೆ ತೀವ್ರವಾದ ವಿರೋಧವೆಂಬಂತೆ ಏನೂ ವ್ಯಕ್ತವಾಗಿಲ್ಲ. ಇದಕ್ಕೆ ಮೊದಲ ಕಾರಣ, ನಮ್ಮಲ್ಲಿ ಎಪಿಎಂಸಿಯ ವಹಿವಾಟು ಉಳಿದ ರಾಜ್ಯಗಳಿಗೆ ಹೋಲಿಸಿದರೆ ಸಂಪೂರ್ಣ ಕಡಿಮೆ. ಹಾಗಾಗಿ ಇದರ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಇನ್ನು ಎರಡನೆಯದಾಗಿ, ಅಕಸ್ಮಾತ್, ಇದರಿಂದ ತೊಂದರೆಯಾಗುವುದಾದರೆ ತಮಿಳುನಾಡು ಸರ್ಕಾರದ ಮೇಲೆ ಒತ್ತಡ ತಂದರೆ ತಮಿಳುನಾಡಿನ ಪ್ರಾದೇಶಿಕ ಆಡಳಿತ ಪಕ್ಷವು ಕೂಡಲೇ ತಿದ್ದುಪಡಿಯನ್ನು ನಿಷೇಧಿಸುತ್ತದೆ ಎಂಬ ನಂಬಿಕೆ ಎಲ್ಲರಿಗೂ ಇದೆ. ಹಾಗಾಗಿ ನಮ್ಮಲ್ಲಿ ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಅಷ್ಟಾಗಿ ವಿರೋಧ ವ್ಯಕ್ತವಾಗಿಲ್ಲ.

ಇನ್ನು ಭಾರತದ ವಿಷಯಕ್ಕೆ ಬರುವುದಾದರೆ, ದೇಶದಾದ್ಯಂತ ಹೆಚ್ಚಿನ ರೈತರು ಸಂಘಟಿತರಾಗಿಲ್ಲ. ಇದ್ದಂತಹ ಸಂಘಟನೆಗಳು ವಿಘಟನೆಗೆ ಒಳಗಾಗಿವೆ. ಹಾಗಾಗಿ ಈ ವಿದ್ಯಮಾನಕ್ಕೆ ವಿರೋಧವಾಗಿ ದೊಡ್ಡಮಟ್ಟದಲ್ಲಿ ಈ ಹೋರಾಟ ಸಂಭವಿಸಲಿಲ್ಲ. ಸಂಘಟನೆಗಳಿದ್ದರೆ ಮಾತ್ರ ಜನರು ಹೋರಾಟಕ್ಕೆ ಇಳಿಯಲು ಸಾಧ್ಯ. ಆದರೆ ಇಲ್ಲಿ ಸಂಘಟನೆಗಳೇ ಹೋಳಾಗಿರುವುದರಿಂದ ಚದುರಿದ ಗುಂಪುಗಳಷ್ಟೇ ಪ್ರತಿಭಟಿಸುತ್ತಿವೆ.

4. ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ಇತ್ಯಾದಿಗಳು ಸ್ವಾಮಿನಾಥನ್ ಅವರ ಶಿಫಾರಸ್ಸಿನ ನಂತರ ಇನ್ನೂ ಬಲ ಪಡೆದುಕೊಳ್ಳಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಇದಕ್ಕೆ ಕಾರಣವೇನು?

ಈ ಸಮಿತಿಯ ಶಿಫಾರಸ್ಸಿನ ಪ್ರಕಾರ ಬೆಂಬಲ ಬೆಲೆ ಇನ್ನೂ ಹೆಚ್ಚಿನ ಬಲ ಪಡೆದುಕೊಳ್ಳಬೇಕಿತ್ತು. ಆದರೆ, ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ಎಲ್ಲವೂ ಬರೀ ಪೇಪರ್‌ಗಳಲ್ಲಿವೆ ಅಷ್ಟೆ. ಪೇಪರ್ ಮೇಲೆ ಸಕ್ಕರೆ ಎಂದು ಬರೆದು, ಅದನ್ನು ನೆಕ್ಕಿದರೆ ಸಿಹಿಯಾಗಿರುತ್ತದೆಯೇ. ಬೆಂಬಲ ಬೆಲೆಯ ಇಂದಿನ ಪರಿಸ್ಥಿತಿ ಇದೇ ಆಗಿದೆ.

5. ಕೋವಿಡ್ ಸಂದರ್ಭವು ಕೃಷಿ ಕ್ಷೇತ್ರದ ಮೇಲೆ ಯಾವ ಪರಿಣಾಮವನ್ನು ಬೀರಿತು?

ಖಂಡಿತವಾಗಿಯೂ ದೊಡ್ಡ ಹೊಡೆತ ಬಿದ್ದಿದೆ. ಕೊರೊನಾದಿಂದ ಕಾರ್ಮಿಕರು ಸಿಗಲಿಲ್ಲ. ಸುಗ್ಗಿಯ ಕಾಲದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಸರಿಯಾದ ಮಾರುಕಟ್ಟೆ ಸಿಗಲಿಲ್ಲ. ಸಿಕ್ಕರೂ ನ್ಯಾಯಯುತವಾದ ಬೆಲೆ ಸಿಗಲಿಲ್ಲ. ಬೇಡಿಕೆ ಕುಸಿದಿತ್ತು. ಈಗೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ.

6. ಬಿಡಿಬಿಡಿಯಾಗಿ ಹೋರಾಟ ನಡೆಸುತ್ತಿದ್ದ ಸಂಘಟನೆಗಳ ಒಟ್ಟಾಗಿ ಸೇರಿ ಬಂದ್‌ಗೆ ಕರೆ ನೀಡಿದಿರಿ. ಈ ಐಕ್ಯತೆ ಮುಂದೆಯೂ ಮುಂದುವರೆಯಲಿದೆಯೇ?

ಈಗ ಇರುವ ಪರಿಸ್ಥಿತಿಯನ್ನು ನೋಡಿದರೆ, ನನ್ನ ಪ್ರಕಾರ ಇದು ಮುಂದುವರಿಯುವುದು ಒಳ್ಳೆಯದು. ಈಗಿರುವ ಸಂಘಟನೆಗಳು ಪರಸ್ಪರ ಧನಿಯಾಗುತ್ತಾ ಮುಂದುವರೆದರೆ ಖಂಡಿತ ಅನುಕೂಲವಾಗಲಿದೆ.

7. ಒಳ್ಳೆಯ ಮುಂಗಾರು ಮತ್ತು ಒಳ್ಳೆಯ ಬಿತ್ತನೆಯಾಗಿರುವ ಈ ಹೊತ್ತಿನಲ್ಲಿ ಬಂಪರ್ ಬೆಳೆ ಮತ್ತು ಬೆಲೆ ಕುಸಿತ ಸಂಭವಿಸಬಹುದು. ಆ ನಿಟ್ಟಿನಲ್ಲಿ ನಿಮ್ಮ ಮುಂದಾಲೋಚನೆಯೇನು?

ಬೇಡಿಕೆಗಿಂತ ಹೆಚ್ಚಾಗಿ ವಿತರಣೆಯಿದ್ದರೆ ಖಂಡಿತವಾಗಿಯೂ ಬೆಲೆಕುಸಿತವುಂಟಾಗುತ್ತದೆ. ಇದನ್ನು ಮಾರುಕಟ್ಟೆ ನಿರ್ಧರಿಸುತ್ತದೆ. ಹಾಗಾಗಿ ಭವಿಷ್ಯವನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ.

ಕಣ್ಣಯ್ಯನ್ ಸುಬ್ರಮಣಿಯನ್

ಕಳೆದ ಹಲವು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳ ಕಾಲ ಚಾಮರಜನಗರದಲ್ಲಿಯೂ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಪ್ರಸ್ತುತ ತಮಿಳುನಾಡಿನಲ್ಲಿದ್ದಾರೆ. ಕರ್ನಾಟಕದ ಐಕ್ಯ ಹೋರಾಟದಲ್ಲಿಯೂ ತಮಿಳುನಾಡಿನ ರೈತಮುಖಂಡರಾಗಿ ಪ್ರತಿನಿಧಿಸಿದ್ದರು.

ಸಂದರ್ಶನ: ಪ್ರತಾಪ್ ಹುಣುಸೂರು


ಇದನ್ನೂ ಓದಿ: ಭಾರತದ ರೈತರಿಗೆ ತಿಳಿದಿರುವ ಸತ್ಯ ಅರ್ಥಶಾಸ್ತ್ರಜ್ಞರಿಗೆ ಗೊತ್ತಾಗುತ್ತಿಲ್ಲ: ಯೋಗೇಂದ್ರ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read