Homeಮುಖಪುಟತೋರಿಕೆಯ ದೇಶಭಕ್ತಿಗೂ ನಿಜವಾದ ದೇಶಭಕ್ತಿಗೂ ತುಂಬಾ ವ್ಯತ್ಯಾಸವಿದೆ - ಡಾ.ಕಫೀಲ್ ಖಾನ್ ಸಂದರ್ಶನ

ತೋರಿಕೆಯ ದೇಶಭಕ್ತಿಗೂ ನಿಜವಾದ ದೇಶಭಕ್ತಿಗೂ ತುಂಬಾ ವ್ಯತ್ಯಾಸವಿದೆ – ಡಾ.ಕಫೀಲ್ ಖಾನ್ ಸಂದರ್ಶನ

ಓರ್ವ ವೈದ್ಯನಾಗಿ ದೇಶದಲ್ಲಿರುವ 130 ಕೋಟಿ ಜನರಿಗೂ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಉಚಿತವಾಗಿ ಉತ್ತಮ ವೈದ್ಯಕೀಯ ಸೌಲಭ್ಯ ಲಭ್ಯವಾಗಬೇಕು ಎಂಬುದು ನನ್ನ ಕನಸು. ಇದಕ್ಕೆ ದೇಶದ ಜಿಡಿಪಿ ಮೌಲ್ಯದ ಶೇ.3ರಷ್ಟಾದರೂ ಹಣವನ್ನು ಖರ್ಚು ಮಾಡಬೇಕು.

- Advertisement -
- Advertisement -

ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (ಎನ್‌ಎಸ್‌ಎ) ಬಂಧನದಲ್ಲಿದ್ದ ಉತ್ತರ ಪ್ರದೇಶದ ಡಾ.ಕಫೀಲ್‌ ಖಾನ್ ಬಿಡುಗಡೆಯಾಗಿದ್ದಾರೆ. ಅವರು ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಆದರೂ 8 ತಿಂಗಳ ಕಾಲ ಅವರು ಜೈಲಿನಲ್ಲಿರಬೇಕಾಗಿಬಂದಿತ್ತು. ಈ ಹಿನ್ನೆಲೆಯಲ್ಲಿ ನಾನುಗೌರಿ.ಕಾಂ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿತು. ಅದರ ಪೂರ್ಣಪಾಠ ಕೆಳಗಿದೆ.

ಪ್ರ: ತುಂಬಾ ದಿನಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದೀರಿ. ಜೈಲಿನ ಅನುಭವಗಳೇನು? ನಿಮ್ಮಂತೆಯೇ ಹಲವರು ರಾಜಕೀಯ ಕೈದಿಗಳಾಗಿ ವಿನಾಕಾರಣ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಈ ಕುರಿತು ನೀವು ಏನನ್ನು ಹೇಳಲು ಬಯಸುತ್ತೀರಿ?

ಉ: ನನ್ನಂತೆ ಹಲವರು ಸುಳ್ಳು ಆರೋಪಗಳ ಮೇಲೆ ಈ ಸರ್ಕಾರದಿಂದ ಬಂಧಿತರಾಗಿದ್ದಾರೆ. ಆದರೂ, ನನ್ನ ಬಂಧನವನ್ನು ವಿರೋಧಿಸಿ ಕರ್ನಾಟಕವೂ ಸೇರಿ ಭಾರತದ ಜನಸಮೂಹ ಧ್ವನಿಯನ್ನು ಒಟ್ಟುಗೂಡಿಸಿ ಹೋರಾಟ ನಡೆಸಿದ್ದಕ್ಕೆ ನಾನು ಮೊದಲಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ  ಧ್ವನಿ ಹತ್ತಿಕ್ಕುವುದನ್ನು ವಿರೋಧಿಸಿ ನಾನುಗೌರಿ ತಂಡದವರು ಕೂಡ ಸಾರ್ವಜನಿಕ ಅಭಿಪ್ರಾಯ ಮೂಡಿಸುವುದಕ್ಕೆ ಕೆಲಸ ಮಾಡಿದ್ದನ್ನು ಜೈಲಿನಲ್ಲಿದ್ದಾಗ ನನ್ನ ಸಹೋದರ ಆದಿಲ್ ನನಗೆ ತಿಳಿಸಿದ್ದಾರೆ. ಇನ್ನೂ ನನ್ನ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ನನಗೆ ತುಂಬಾ ಸಮಾಧಾನಕರವಾಗಿದೆ. ಅಲ್ಲದೆ ಇದೊಂದು ಲ್ಯಾಂಡ್ ಮಾರ್ಕ್ ತೀರ್ಪು ಎಂಬುದರಲ್ಲಿ ಎರಡು ಮಾತಿಲ್ಲ.

ಸುಪ್ರೀಂಕೋರ್ಟ್‍ನಲ್ಲಿ ಕೆಲಸ ಮಾಡುತ್ತಿರುವ ನನ್ನ ವಕೀಲರೂ ಸಹ “ಕಳೆದ 20-25 ವರ್ಷಗಳಲ್ಲಿ ನ್ಯಾಯಾಲಯ ನೀಡಿರುವ ಮಹತ್ವದ ತೀರ್ಪಿದು” ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಉತ್ತರಪ್ರದೇಶದಂತಹ ರಾಜ್ಯದಲ್ಲಿ ಅನೇಕರ ವಿರುದ್ಧ ಗೋವಧೆ ಕುರಿತ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿನಲ್ಲಿಡಲಾಗಿದೆ. ಇಂತಹವರ ಪಾಲಿಗೆ ನ್ಯಾಯಾಲಯದ ಈ ತೀರ್ಪು ಕಾನೂನು ನೆರವಾಗಿ ಬರುವ ಸಾಧ್ಯತೆ ಇದೆ.

ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಪೊಲೀಸರು ಬಂಧಿಸಿದ್ದಾಗ ನಾನು ಮಾತ್ರವಲ್ಲ ನನ್ನ ಇಡೀ ಕುಟುಂಬ ಮಾನಸಿಕವಾಗಿ ಜರ್ಜರಿತವಾಗಿತ್ತು. ನನ್ನನ್ನು ಬಂಧಿಸಿದ ಆರಂಭದ ದಿನಗಳಲ್ಲಿ ನಾನು ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿಯೂ ಸಾಕಷ್ಟು ಹಿಂಸೆಗೆ ಒಳಗಾಗಿದ್ದೇನೆ.

ನನ್ನನ್ನು ಬಂಧಿಸಿದಾಗ ಪೊಲೀಸರು ನನ್ನನ್ನು ಬೆತ್ತಲೆಗೊಳಿಸಿ ಮಂಡಿಯೂರಿಸಿ ಬಾರುಕೋಲಿನಿಂದ ಬೆನ್ನು ಮತ್ತು ಪಾದಗಳ ಮೇಲೆ ಹೊಡೆದಿದ್ದರು. ಕಪಾಳಕ್ಕೆ ಬಾರಿಸಿದ್ದರು. ಅಶ್ಲೀಲ ಪದಗಳಿಂದ ನಿಂದಿಸಿದ್ದರು. ಸತತ ಮೂರು ದಿನಗಳ ಕಾಲ ಊಟ ನೀಡದೆ ಉಪವಾಸಕ್ಕೆ ಕೆಡವಿದ್ದರು. ಒಟ್ಟಾರೆ ಪೊಲೀಸ್ ಕಸ್ಟಡಿಯಲ್ಲಿ ನಾನು ಅನುಭವಿಸಿದ ಹಿಂಸೆಗಳನ್ನು ವಿವರಿಸುವುದೇ ಒಂದು ರೀತಿಯಲ್ಲಿ ಯಾತನಾಮಯ.

ವಿಚಾರಣೆ ಸಂದರ್ಭದಲ್ಲಿ ನನ್ನ ಬಳಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಯಿತು. “ನಿನಗೆ ವಿದೇಶಗಳ ಜೊತೆ ಸಂಪರ್ಕ ಇದೆ. ಅವರ ಜೊತೆಗೆ ಸೇರಿ ಒಂದು ರೀತಿಯ ಪೌಡರ್‍ಅನ್ನು ಸೃಷ್ಟಿಸಿ ಆ ಮೂಲಕ ಇಡೀ ದೇಶದಲ್ಲಿ ವಿವಿಧ ಬಗೆಯ ರೋಗಗಳನ್ನು ಹರಡಲು ಪ್ರಯತ್ನಿಸುತ್ತಿದ್ದೀಯ. ಆ ಮೂಲಕ ಸರ್ಕಾರವನ್ನು ಕೆಡವಲು ಸಂಚು ರೂಪಿಸಲು ಮುಂದಾಗಿದ್ದೀಯ ಎಂಬ ಕುರಿತು ನಮಗೆ ಖಚಿತ ಮಾಹಿತಿ ಇದೆ” ಎಂದು ಪ್ರಶ್ನೆ ಮಾಡಿದ್ದರು.

ಆಗ ನಾನು ವೈದ್ಯನಾಗಿ ಸಾಕಷ್ಟು ಜನರಿಗೆ ಸೇವೆ ಮಾಡಿದವನು. ಎಷ್ಟೋ ಕಡೆಗಳಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ಮಾಡಿದ್ದೇನೆ. ಇನ್ನೂ ನೀವು ಕೊರೊನಾ ಬಗ್ಗೆ ಉಲ್ಲೇಖಿಸುತ್ತಿದ್ದೀರಿ ಎಂಬುದಾದರೆ ಈ ಪ್ರಶ್ನೆಯನ್ನು ನೀವು ಚೀನಾ ಬಳಿಯೇ ಕೇಳಬೇಕು. ಇನ್ನು ನಾನೊಬ್ಬ ಸಾಮಾನ್ಯ ವ್ಯಕ್ತಿ. ಈ ಸರ್ಕಾರವನ್ನು ನಾನು ಒಬ್ಬ ಹೇಗೆ ಬೀಳಿಸಬಲ್ಲೆ? ಎಂದು ನಾನು ವಿಚಾರಣೆ ಸಂದರ್ಭದಲ್ಲಿ ಉತ್ತರಿಸಿದ್ದೆ.

ಒಟ್ಟಾರೆ ನನ್ನ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಆದರೆ, ವಿಚಾರಣೆ ಸಂದರ್ಭದಲ್ಲಿ ನನ್ನ ಮೇಲಾದ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳನ್ನು ಮಾತ್ರ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಪ್ರ: ನೀವು ಜೈಲಿನಲ್ಲಿದ್ದ ಸಂದರ್ಭದಲ್ಲಿ ನಿಮ್ಮ ಇಡೀ ಕುಟುಂಬ ತುಂಬಾ ಮಾನಸಿಕ ಹಿಂಸೆಯನ್ನು ಅನುಭವಿಸಿತ್ತು. ನೀವು ಬಿಡುಗಡೆಯಾದ ಸಂದರ್ಭದಲ್ಲಿ ನಿಮ್ಮ ಮನೆಯವರ ಪ್ರತಿಕ್ರಿಯೆ ಹೇಗಿತ್ತು? ನೀವು ಮುಂದೆ ಏನು ಮಾಡಬೇಕೆಂದು ಬಯಸಿದ್ದೀರಿ?

ಉ: ನೀವು ಅಲಹಾಬಾದ್ ನ್ಯಾಯಾಲಯದ ತೀರ್ಪನ್ನು ಓದಿದರೆ ಮೊದಲ ಪುಟದಲ್ಲೇ “2017ರ ಗೋರಖ್‍ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಾಗಿ ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಸರ್ಕಾರ ಉದ್ದೇಶಪೂರ್ವಕವಾಗಿ ಕಫೀಲ್ ಖಾನ್‍ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ” ಎಂದು ಅಭಿಪ್ರಾಯಪಟ್ಟಿದೆ.

ಇದು ಕೇವಲ ಆರೇಳು ತಿಂಗಳ ಸಮಸ್ಯೆಯಲ್ಲ. ಕಳೆದ ಮೂರು ವರ್ಷದಿಂದ ನನ್ನ ಇಡೀ ಕುಟುಂಬ ಮಾನಸಿಕವಾಗಿ ಸಾಕಷ್ಟು ಸಂಕಷ್ಟವನ್ನು ಎದುರಿಸಿದೆ. ಆದರೆ, ಇದೀಗ ನನ್ನ ಬಿಡುಗಡೆಯಿಂದಾಗಿ ನನ್ನ ಇಡೀ ಕುಟುಂಬ ಸಂತೋಷಕ್ಕೊಳಗಾಗಿದೆ. ಅವರೊಂದಿಗೆ ನಾನು ಅಮೂಲ್ಯವಾದ ಕ್ಷಣಗಳನ್ನು ಕಳೆಯುತ್ತಿದ್ದೇನೆ. ಇನ್ನೂ ನನ್ನ ತಾಯಿಯಂತು “ದಯವಿಟ್ಟು ಇದನ್ನೆಲ್ಲ ನಿಲ್ಲಿಸಿಬಿಡು, ನಿನ್ನ ಪಾಡಿಗೆ ಸುಮ್ಮನೆ ಇದ್ದುಬಿಡು” ಎಂದು ಕೈಮುಗಿದು ಬೇಡಿಕೊಂಡರು.

ಆದರೆ, ಈ ವೇಳೆ ನಾನು ನನ್ನ ತಾಯಿಗೆ ಒಂದು ಮಾತನ್ನು ಹೇಳಿದ್ದೆ, “ನನ್ನ ಸುತ್ತಲಿನ ಸಮಾಜದಲ್ಲಿ ಒಂದು ಅನ್ಯಾಯ ನಡೆದರೆ, ಕಾನೂನಿಗೆ ವಿರುದ್ಧವಾದ ಕೆಲಸಗಳು ನಡೆಯುತ್ತಿದ್ದರೆ, ಅದನ್ನು ನೋಡಿಕೊಂಡು ಕಂಡೂ ಕಾಣದಂತೆ ನಾನು ಹೇಗೆ ಸುಮ್ಮನಿರಲಿ?” ಎಂದು ಪ್ರಶ್ನೆ ಮಾಡಿದ್ದೆ. ನನ್ನ ತಾಯಿಯ ಬಳಿ ನಾನು ಕೇಳಿರುವ ಈ ಪ್ರಶ್ನೆಗೆ ಕೊನೆವರೆಗೂ ನಾನು ಬದ್ಧನಾಗಿರುತ್ತೇನೆ.

ನಾನು ಜೈಲಿನಿಂದ ಬಿಡುಗಡೆಯಾದ ತಕ್ಷಣ ಹಲವರು ಹತ್ತಾರು ವದಂತಿಗಳನ್ನು ಹರಡುತ್ತಿದ್ದಾರೆ. “ನಾನು ಯಾವುದೋ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯವನ್ನು ಪ್ರವೇಶಿಸಲು ಹವಣಿಸುತ್ತಿದ್ದೇನೆ, ಈಗಾಗಲೇ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದೇನೆ. ಉತ್ತರಪ್ರದೇಶ ಸರ್ಕಾರಕ್ಕೆ ಹೆದರಿ ರಾಜಸ್ಥಾನಕ್ಕೆ ಸ್ಥಳಾಂತರವಾಗಲಿದ್ದೇನೆ” ಹೀಗೆ ನಾನಾ ವದಂತಿಗಳನ್ನು ಹರಡುತ್ತಿದ್ದಾರೆ. ಸತ್ಯವೇನೆಂದರೆ ನಾನೊಬ್ಬ ವೈದ್ಯ. ಕೊನೆಯವರೆಗೆ ನಾನು ನನ್ನದೇ ವೃತ್ತಿಯಲ್ಲಿ ಮುಂದುವರೆಯಲು, ಜನರ ಸೇವೆ ಮಾಡಲು ಬಯಸುತ್ತೇನೆ. ಅಲ್ಲದೆ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ, ಇನ್ನು ಉತ್ತರಪ್ರದೇಶಕ್ಕೆ ಹೆದರಿ ರಾಜಸ್ಥಾನಕ್ಕೆ ಓಡುವ ಮಾತೇ ಇಲ್ಲ!


ಇದನ್ನೂ ಓದಿ: ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿಲ್ಲ, ವೈದ್ಯನಾಗಿಯೇ ಉಳಿಯುವೆ: ಡಾ.ಕಫೀಲ್ ಖಾನ್


ಪ್ರಸ್ತುತ ದೇಶದಲ್ಲಿ ನಾನಾ ಸಮಸ್ಯೆಗಳಿವೆ. ಪ್ರಜಾತಂತ್ರ ವ್ಯವಸ್ಥೆ ಕುಸಿಯುತ್ತಿದೆ. ಫ್ಯಾಸಿಸಂ ಬೆಳೆಯುತ್ತಿದೆ. ಜನ ನಿರುದ್ಯೋಗ, ಬಡತನದಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆಗಳ ವಿರುದ್ಧ ಇಡೀ ಸಮಾಜ ಒಗ್ಗಟ್ಟಿನಿಂದ ಧ್ವನಿ ಎತ್ತರಿಸಬೇಕಾದ ಅಗತ್ಯವಿದೆ. ಆದರೆ, ಇದರಬದಲು ಪಾಕಿಸ್ತಾನ, ತೀನ್ ತಲಾಕ್, ಹಲಾಲ್, ಬಜರಂಗಬಲಿ ಎಂದು ಅನವಶ್ಯಕ ವಿಚಾರಗಳ ಬಗ್ಗೆ ಧ್ವನಿ ಎತ್ತುವ ಮೂಲಕ ತಮ್ಮ ಶಕ್ತಿ ಸಾಮಥ್ರ್ಯವನ್ನು ವ್ಯರ್ಥಗೊಳಿಸುತ್ತಿದ್ದಾರೆ.

ಸಮಾಜ ಇಂತಹ ದಿಕ್ಕಿನೆಡೆ ಮುಖ ಮಾಡಿರುವ ಈ ಸಂದರ್ಭದಲ್ಲಿ ನಾನು ಒಂದು ಮಾತನ್ನು ಹೇಳಲು ಇಚ್ಛಿಸುತ್ತೇನೆ. ದಿವಂಗತ ಗೌರಿ ಲಂಕೇಶ್ ಅವರಂತೆಯೇ ನಾನು ಸಹ ನನ್ನ ಉಸಿರು ಇರುವವರೆಗೆ ಇಂತಹ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆತನ ಹಕ್ಕುಗಳನ್ನು ತಲುಪಿಸಲು ಪ್ರಯತ್ನಿಸುತ್ತೇನೆ. ಅಲ್ಲದೆ, ಇಂತಹ ಸಮಾನಮನಸ್ಕರ ಜೊತೆಗೂಡಿ ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ನನ್ನ ಹೋರಾಟಕ್ಕೆ ನನ್ನ ಧ್ವನಿ ಎಂದಿಗೂ ಇರಲಿದೆ.

photo courtesy: The Print

ಇದರ ಹೊರತಾಗಿಯೂ ಓರ್ವ ವೈದ್ಯನಾಗಿ ದೇಶದಲ್ಲಿರುವ 130 ಕೋಟಿ ಜನರಿಗೂ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಉಚಿತವಾಗಿ ಉತ್ತಮ ವೈದ್ಯಕೀಯ ಸೌಲಭ್ಯ ಲಭ್ಯವಾಗಬೇಕು ಎಂಬುದು ನನ್ನ ಕನಸು. ಇದಕ್ಕೆ ದೇಶದ ಜಿಡಿಪಿ ಮೌಲ್ಯದ ಶೇ.3ರಷ್ಟಾದರೂ ಹಣವನ್ನು ಖರ್ಚು ಮಾಡಬೇಕು. ಬಿಹಾರ – ಉತ್ತರಪ್ರದೇಶದ ಗಡಿಭಾಗದಲ್ಲಿ ಡಾ.ಕಫೀಲ್ ಖಾನ್ ಸ್ಮೈಲ್ ಫೌಂಡೇಶನ್ ಹೆಸರಿನಲ್ಲಿ ಒಂದು ಸುಸಜ್ಜಿತವಾದ ಆಸ್ಪತ್ರೆಯನ್ನು ನಿರ್ಮಿಸಿ, ಅಲ್ಲಿ ಎಲ್ಲರಿಗೂ ಉಚಿತ ಹಾಗೂ ಉತ್ತಮ ಚಿಕಿತ್ಸೆ ನೀಡಬೇಕು ಎಂಬುದು ನನ್ನ ಕನಸು.

ಪ್ರ: ನೀವು ಇದೀಗ ಸಾಮಾಜಿಕ ಬದುಕಿಗೆ ಪ್ರವೇಶಿಸಿದ್ದೀರಿ. ಉತ್ತರಪ್ರದೇಶ ಸರ್ಕಾರ ಸೇರಿದಂತೆ ಅನೇಕ ಸರ್ಕಾರಗಳ ವಿರುದ್ಧ ಧ್ವನಿ ಎತ್ತುತ್ತಿದ್ದೀರಿ. ನೀವು ಹೀಗೆ ಹೋರಾಟಕ್ಕೆ ಮುಂದಾಗುವಂತೆ ನಿಮ್ಮ ಮೇಲೆ ಪ್ರಭಾವ ಬೀರಿದವರು ಯಾರು?

ಉ: ನಾನು ಈವರೆಗೆ ನನ್ನ ಮನಸ್ಸು ಏನನ್ನು ಹೇಳಿದೆಯೋ ಅದನ್ನೇ ಪಾಲಿಸಿದ್ದೇನೆ. ನನ್ನ ಮನದ ಮಾತನ್ನು ಕೇಳಿ ನಡೆದಿದ್ದೇನೆ. ಕಣ್ಣೆದುರು ಒಂದು ವಿಚಾರ ತಪ್ಪು ಎಂದು ತಿಳಿದಿದ್ದರೂ ಸಹ ಅದನ್ನು ಕಂಡೂಕಾಣದಂತೆ ಹೇಗೆ ಇರುವುದು? ನನ್ನ ಆತ್ಮಸಾಕ್ಷಿ ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪದು. ಅಲ್ಲದೆ, ಇದೆಲ್ಲಕ್ಕೂ ದೇವರ ಕೃಪೆ ಕಾರಣ ಎಂಬುದು ನನ್ನ ಅಭಿಪ್ರಾಯ.

ಪ್ರ: 2017ರ ಹಿಂದಿನ ಕಫೀಲ್ ಖಾನ್‍ನನ್ನೂ 2017ರ ನಂತರದ ಕಫೀಲ್ ಖಾನ್‍ನನ್ನೂ ನೀವು ಹೇಗೆ ನೋಡುತ್ತೀರಿ?

2017ಕ್ಕಿಂತ ಹಿಂದೆ ಕಫೀಲ್ ಖಾನ್ ಎಂದರೆ ಯಾರು ಎಂದೇ ಯಾರಿಗೂ ತಿಳಿದಿರಲಿಲ್ಲ. ನಾನು ಕರ್ನಾಟಕದ ಮಣಿಪಾಲ್‍ನಲ್ಲೇ ವೈದ್ಯಕೀಯ ಶಿಕ್ಷಣ ಮುಗಿಸಿದ್ದು. ನನ್ನನ್ನು ನಾನು ರೂಪಿಸಿಕೊಳ್ಳುವುದಕ್ಕೆ ನಾನು ಕರ್ನಾಟಕದಲ್ಲಿ ಕಳೆದ 12 ವರ್ಷಗಳು ನೆರವಾಗಿದ್ದವು. ನಂತರ ಕಫೀಲ್ ಖಾನ್ ಎಂಬ ವ್ಯಕ್ತಿ ಬೆಳಗ್ಗೆ ಎದ್ದು ಆಸ್ಪತ್ರೆಗೆ ಹೋಗುವವನು ಸಂಜೆ ಮನೆಗೆ ಬಂದು ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯುವ ಸಾಮಾನ್ಯದವನಂತೆ ದಿನಚರಿ ಇತ್ತು.

ಆದರೆ, 2017 ರ ನಂತರ ಎಲ್ಲವೂ ಬದಲಾಗಿದೆ. ಸಮಾಜದಲ್ಲಿರುವ ಸಮಸ್ಯೆಗಳಿಗೆ ಹೆದರಿ ಹಿಂದೆ ಸರಿಯುವ ಮಾತೇ ಇಲ್ಲ. ಸತ್ಯವನ್ನು ಮಾತನಾಡಿ ಗೌರಿ ಲಂಕೇಶ್‍ರಂತಹ ಹೋರಾಟಗಾರರು ಗುಂಡಿಗೆ ಪ್ರಾಣ ಚೆಲ್ಲಿದಾಗಲೂ ನಮ್ಮಂತವರು ಮಾತನಾಡದಿದ್ದರೆ ಸರಿಯಲ್ಲ. ಹೀಗಾಗಿ ತಪ್ಪುಗಳ ವಿರುದ್ಧ ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ನಾನು ನನ್ನ ಧ್ವನಿಯನ್ನು ದಾಖಲಿಸಿದ್ದೇನೆ. ನಾನು ಜೈಲಿನಲ್ಲಿದ್ದ ದಿನಗಳಲ್ಲಿ ದೇಶದ ಎಲ್ಲ ಜನರೂ ನನ್ನ ಪರವಾಗಿ ಧ್ವನಿ ಎತ್ತಿದ್ದಾರೆ. ನನ್ನ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಜನರಿಗೆ ಒಂದು ಸಮಸ್ಯೆ ಎದುರಾದಲ್ಲಿ ಅವರ ಪರವಾಗಿ ಧ್ವನಿ ಎತ್ತುವ ಕರ್ತವ್ಯ ಜವಾಬ್ದಾರಿ ನನ್ನ ಮೇಲಿದೆ.

ಪ್ರ: ಕೊರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮದೇ ದೇಶದಲ್ಲಿ ನೆರವು ಸಿಗದೆ ಹಲವರು ಸಾವನ್ನಪ್ಪಿದ್ದರು. ದೆಹಲಿಯ ನಿಜಾಮುದ್ದೀನ್ ಘಟನೆಯನ್ನು ಮುಂದಿಟ್ಟು ಅಲ್ಪಸಂಖ್ಯಾತ ಸಮುದಾಯದ ಜನರನ್ನು ಅಪರಾಧಿಗಳು ಎಂಬಂತೆ ಬಿಂಬಿಸಲಾಗಿತ್ತು. ಇವೆಲ್ಲವನ್ನು ನಿಭಾಯಿಸಿದ ರೀತಿಯ ಬಗ್ಗೆ ಹೇಳಿ?

ಭಾರತ ಸ್ವಾತಂತ್ರ್ಯ ಗಳಿಸಿ 73 ವರ್ಷಗಳಾದರೂ ಬಡವರ ಧ್ವನಿಗೆ ಮಾತ್ರ ಈವರೆಗೆ ಬಲ ಬಂದಿಲ್ಲ. ಅದರಲ್ಲೂ ಕೊರೊನಾ ಕಾಲದಲ್ಲಿ ದೇಶದ ವಲಸೆ ಕಾರ್ಮಿಕರು ಅನುಭವಿಸಿರುವ ಯಾತನೆಗಳು – ಅದಕ್ಕೆ ಕಾರಣವಾದವರು ಕ್ಷಮೆಗೆ ಅರ್ಹರೇ ಅಲ್ಲ. ಕೋಟ್ಯಂತರ ಜನ ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನೂರಾರು ಜನ ವಲಸೆ ಹೋಗುವಾಗ ಬಸವಳಿದು ಮೃತಪಟ್ಟರೆ, ಒಂದಷ್ಟು ಜನ ಹಸಿವಿನಿಂದ ಮೃತಪಟ್ಟಿದ್ದಾರೆ. ಕೆಲವರು ಸಾವಿರಾರು ಕಿಲೋಮೀಟರ್ ನಡೆದೇ ಹೋಗಿದ್ದಾರೆ ಎಂಬ ಸುದ್ದಿಯನ್ನು ಓದಿ ನಾನು ಆಘಾತಕ್ಕೊಳಗಾಗಿದ್ದೆ. ಇದು ನಿಜಕ್ಕೂ ಇಡೀ ದೇಶಕ್ಕೆ ಬಂದೊದಗಿದೆ ಕೆಟ್ಟ ಅನುಭವ. ಇದರಿಂದಲೂ ನಾವು ಪಾಠ ಕಲಿಯದಿದ್ದರೆ ಭವಿಷ್ಯ ಮತ್ತಷ್ಟು ಕರಾಳವಾಗಲಿದೆ.

ಜನವರಿ 27, 2020 ರಲ್ಲಿ ನನ್ನನ್ನು ಬಂಧನಕ್ಕೊಳಪಡಿಸುವ ಮುನ್ನ ನನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ನಾನು ಮಾತನಾಡಿದ್ದೆ. ಆಗಿನ್ನು ಭಾರತದಲ್ಲಿ ಒಂದೇಒಂದು ಕೊರೊನಾ ಪ್ರಕರಣ ದಾಖಲಾಗಿರಲಿಲ್ಲ. ಈ ವೇಳೆ ಕೊರೊನಾ ಭಾರತಕ್ಕೆ ಬಂದರೆ ಪರಿಸ್ಥಿತಿ ಏನಾಗಲಿದೆ? ಆಗ ನಾವು ಏನನ್ನು ಮಾಡಬೇಕು? ಏನನ್ನು ಮಾಡಬಾರದು? ಎಂದು ನಾನು ಯೂಟ್ಯೂಬ್ ಮೂಲಕ ಮಾಹಿತಿ ನೀಡಿದ್ದೆ. ಮಾರ್ಚ್ 19 ರಂದು ಲಾಕ್‍ಡೌನ್ ಘೋಷಣೆಗೂ ಮುನ್ನ ನಾನು ಜೈಲಿನಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಿಸ್ತಾರವಾದ ಪತ್ರವೊಂದನ್ನು ಬರೆದಿದ್ದೆ.

ಈ ಪತ್ರದಲ್ಲಿ, “ಲಾಕ್‍ಡೌನ್‍ನಿಂದಾಗಿ ಕೊರೊನಾವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಈ ಸಮಯದಲ್ಲಿ ನಾವು ಆಸ್ಪತ್ರೆಗಳನ್ನು, ಬೆಡ್‍ಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ, ಕೊರೊನಾವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ದೇಶದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವುದೊಂದೆ ದಾರಿ. ವಿಶ್ವ ಆರೋಗ್ಯ ಸಂಸ್ಥೆಯವರೂ ಇದನ್ನೇ ಹೇಳಿದ್ದಾರೆ” ಎಂದು ಉಲ್ಲೇಖಿಸಿದ್ದೆ. ಆದರೆ, ನನ್ನ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬರಲೇ ಇಲ್ಲ.

ಇನ್ನೂ ವಲಸೆ ಕಾರ್ಮಿಕರ ಸಮಸ್ಯೆ ಒಂದು ರಾಷ್ಟ್ರೀಯ ವಿಪತ್ತು. ಪ್ರಧಾನಿ ಮೋದಿ ರಾತ್ರಿ 8 ಗಂಟೆಗೆ ಟಿವಿ ಪರದೆಯಲ್ಲಿ ಕಾಣಿಸಿಕೊಂಡು ನಾಳೆಯಿಂದ ಲಾಕ್‍ಡೌನ್ ಎಂದು ಆತುರದಿಂದ ಘೋಷಿಸಿದ ಆ ಒಂದು ನಿರ್ಧಾರ ವಲಸೆ ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಿತ್ತು. ನೋಟ್ ಬ್ಯಾನ್‍ನಂತೆ ಇದನ್ನೂ ಅತಿದೊಡ್ಡ ರಾಷ್ಟ್ರೀಯ ವಿಪತ್ತು ಎಂದರೆ ತಪ್ಪಾಗಲಾರದು.

ಕೆಲವು ದಿನಗಳ ಮೊದಲು ಭಾರತವನ್ನು ಅಮೆರಿಕ, ಬ್ರೆಜಿಲ್ ಹಾಗೂ ಇಟಲಿ ದೇಶಗಳಿಗೆ ಹೋಲಿಕೆ ಮಾಡಿ ನಮ್ಮ ದೇಶದಲ್ಲಿ ಅವರಿಗಿಂತ ಕಡಿಮೆ ಪ್ರಮಾಣದ ಸೋಂಕು ಪೀಡಿತರಿದ್ದಾರೆ. ಆ ದೇಶಕ್ಕಿಂತ ಕಡಿಮೆ ಸಾವುಗಳು ಸಂಭವಿಸಿವೆ ಎಂದು ಸುದ್ದಿ ಮಾಡಲಾಗುತ್ತಿತ್ತು. ಅಸಲಿಗೆ ಇವರ್ಯಾರೂ ಕೊರೊನಾದಿಂದ ಮೃತಪಟ್ಟ ಓರ್ವ ವ್ಯಕ್ತಿಯ ಮನೆಗೆ ತೆರಳಿ ಆ ಕುಟುಂಬದವರ ಅನುಭವವನ್ನು ದಾಖಲಿಸಲಿಲ್ಲ. ಭಾರತದಲ್ಲಿ ಇಂದು ಸಾವಿರಾರು ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಸಾವಿನಿಂದಾಗಿ ಒಂದೊಂದು ಮನೆಯಲ್ಲೂ ಒಂದೊಂದು ರೀತಿಯ ಚಿಂತಾಜನಕ ಸ್ಥಿತಿ ಉಂಟಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಬೇರೆ ದೇಶಗಳ ಅಂಕಿಸಂಖ್ಯೆಗಳನ್ನು ಮುಂದಿಟ್ಟು ಮಾತನಾಡುವುದು ಅಸಮಂಜಸ. ಏಕೆಂದರೆ ಒಂದೊಂದು ಜೀವವೂ ಅಮೂಲ್ಯ. ಒಬ್ಬನ ಸಾವೂ ಸಾವೇ!

ಅಸಲಿಗೆ ಭಾರತ ಸರ್ಕಾರ ಈವರೆಗೆ ದೇಶದಲ್ಲಿ ಕೊರೊನಾ ಸಾಮೂಹಿಕವಾಗಿ ಹರಡಿಲ್ಲ ಎಂದು ವಾದಿಸುತ್ತಿದೆ. ಆದರೆ, ಅನೇಕ ವರದಿಗಳು ಈಗಾಗಲೇ ಬಹಿರಂಗವಾಗಿದ್ದು, ಮಾರ್ಚ್ ತಿಂಗಳಿನಿಂದಲೇ ದೇಶದಲ್ಲಿ ಕೊರೊನಾ ಸಾಮೂಹಿಕವಾಗಿ ಹರಡಿದೆ ಎಂದು ಹೇಳುತ್ತಿದೆ. ಪುಣೆಯಲ್ಲಿ ನಡೆದ ಸೀರೋ ಸರ್ವೇ ಕೂಡ ಇದನ್ನು ಸೂಚಿಸುತ್ತದೆ. ಡಿಸೆಂಬರ್ ವೇಳೆಗೆ ದೇಶದಲ್ಲಿ ಕೋಟ್ಯಂತರ ಜನ ಈ ಸೋಂಕಿಗೆ ತುತ್ತಾಗಲಿದ್ದಾರೆ. ಇದೆಲ್ಲಕ್ಕೂ ಸರ್ಕಾರದ ಬೇಜವಾಬ್ದಾರಿ ಕಾರ್ಯತಂತ್ರವೇ ಕಾರಣ. ವಲಸೆ ಕಾರ್ಮಿಕರ ವಿಚಾರದಲ್ಲಿ ಮಾತ್ರವಲ್ಲ. ಕೊರೊನಾ ಸಂಬಂಧಿತ ಎಲ್ಲಾ ವಿಚಾರದಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ.

ಇದಲ್ಲದೆ ಚೀನಾದ ಗಡಿಯಲ್ಲಿ ಭಾರತದ ಸೈನಿಕರು ಕೊಲ್ಲಲ್ಪಡುತ್ತಿದ್ದಾರೆ. ದೇಶದ ಆರ್ಥಿಕತೆ, ಜಿಡಿಪಿ ಪಾತಾಳಕ್ಕೆ ಕುಸಿಯುತ್ತಿದೆ. ಯುವಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ದೇಶ ಈವರೆಗೆ ಕಂಡಿರದ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಶಿಕ್ಷಣ ಕ್ಷೇತ್ರ ವಿಪತ್ತನ್ನು ಎದುರಿಸುತ್ತಿದೆ ಆದರೆ ಯಾರೂ ಈ ಕುರಿತು ಮಾತನಾಡದೆ ಇರುವುದು ವಿಪರ್ಯಾಸ.

ಅಸಲಿಗೆ ತೋರಿಕೆಯ ದೇಶಭಕ್ತಿಗೂ ನಿಜವಾದ ದೇಶಭಕ್ತಿಗೂ ತುಂಬಾ ವ್ಯತ್ಯಾಸವಿದೆ. ನೀವು ಯಾವ ಧರ್ಮದಲ್ಲಿ ಜನಿಸಿದ್ದರೂ ಈ ದೇಶ ನನ್ನನ್ನು ಎಂದು ಭಾವಿಸುವುದು, ಈ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವುದು ನಿಜವಾದ ದೇಶಭಕ್ತಿ. ನನಗೆ ಅಮೆರಿಕ, ಆಸ್ಟ್ರೇಲಿಯಾ ಯುರೋಪ್ ಸೇರಿದಂತೆ ಅನೇಕ ದೇಶಗಳಿಂದ ಕರೆ ಬಂದಿತ್ತು. ಇಲ್ಲಿಗೆ ಬಂದು ಕುಟುಂಬ ಸಮೇತರಾಗಿ ನೆಲೆಸಿ – ನಿಮಗೆ ಗ್ರೀನ್‍ಕಾರ್ಡ್ ನೀಡುತ್ತೇವೆ ಎಂದಿದ್ದರು. ಆದರೆ, ನಾನು ನನ್ನ ದೇಶವನ್ನು ಬಿಟ್ಟು ಎಲ್ಲೂ ಹೋಗಲಾರೆ, ಕೊನೆಯವರೆಗೆ ಈ ದೇಶಕ್ಕಾಗಿ ಹೆಮ್ಮೆಯಿಂದ ಸೇವೆ ಸಲ್ಲಿಸುವೆ – ಏಕೆಂದರೆ ಇದು ನನ್ನ ದೇಶ. ಹಾಗೆಯೇ ಉತ್ತರಪ್ರದೇಶದಲ್ಲಿಯೇ ಸೇವೆ ಸಲ್ಲಿಸುತ್ತೇನೆ.

ಪ್ರ: ಹಲವು ವರ್ಷಗಳ ಕಾಲ ದೇಶದ ಮುಂದೆ ಗುಜರಾತ್ ಮಾದರಿಯನ್ನು ಇಟ್ಟು ಜನರನ್ನು ಮರಳುಮಾಡಿದರು. ಈಗ ಉತ್ತರಪ್ರದೇಶದ ಮಾಡೆಲ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ನೀವೇ ಆರಂಭದಲ್ಲಿ ಹೇಳಿದಂತೆ ಮುಗ್ಧರ ಮೇಲೆ ಇಲ್ಲಸಲ್ಲದ ಕಾರಣ ನೀಡಿ ಎನ್‍ಎಸ್‍ಎ ಪ್ರಕರಣಗಳನ್ನು ಯುಪಿ ಸರ್ಕಾರ ದಾಖಲಿಸಲಾಗುತ್ತಿದೆ. ಉತ್ತರ ಪ್ರದೇಶ ಮಾಡೆಲ್‍ನ ನಿಜವಾದ ಸ್ವರೂಪದ ಬಗ್ಗೆ ನೀವೇನು ಹೇಳುತ್ತೀರಿ?

ಉ: ಕೆಲವು ದಿನಗಳ ಹಿಂದ ವ್ಯವಹಾರ ನಡೆಸಲು ಸುಲಭವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರಪ್ರದೇಶ ಎರಡನೇ ಸ್ಥಾನಕ್ಕೇರಿದೆ ಎಂದು ಸುದ್ದಿಯನ್ನು ಹರಿದುಬಿಡಲಾಯಿತು. ಇದು ದತ್ತಾಂಶಗಳ ತಿರುಚುವಿಕೆಯಲ್ಲದೇ ಬೇರೇನೂ ಅಲ್ಲ.

ದೇಶದ ಜಿಡಿಪಿ ಕುಸಿತಕ್ಕೆ ಉತ್ತರಪ್ರದೇಶದ ದೊಡ್ಡ ಕೊಡುಗೆ ಇದೆ. ಲಕ್ಷಾಂತರ ವಲಸಿಗರು ರಾಜ್ಯಕ್ಕೆ ಮರಳಿದಾಗ ಅವರ ಅಗತ್ಯಗಳನ್ನು ಪೂರೈಸುವುದಾಗಿ ಮುಖ್ಯಮಂತ್ರಿಗಳು ದೊಡ್ಡ ದೊಡ್ಡ ಮಾತುಗಳನ್ನು ಆಡಿದ್ದರು. ಇಲ್ಲಿಯವರೆಗೂ 500ರೂ ಕೊಟ್ಟಿರುವುದನ್ನು ಬಿಟ್ಟರೆ ಬೇರೆ ನೆರವು ನೀಡಿಲ್ಲ. ಬರೀ ಸಾರ್ವಜನಿಕ ಸ್ಟಂಟ್‍ಗಳು.

ಉತ್ತರಪ್ರದೇಶದಲ್ಲಿ ಮುಸಲ್ಮಾನರ ಮೇಲಷ್ಟೇ ಅಲ್ಲ, ದಲಿತರು, ಯಾದವರ ಮೇಲೆ ಕೂಡ ನಿರಂತರವಾಗಿ ಹಲ್ಲೆಗಳಾಗುತ್ತಿವೆ. ಇದಕ್ಕೆ ಪ್ರತಿಯಾಗಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ರಾಮಮಂದಿರದ ವಿಷಯವನ್ನು ಮುಂದಿಟ್ಟುಕೊಂಡು ಭವ್ಯವಾದ ಮಾತುಗಳನ್ನು ಸರ್ಕಾರ ಆಡುತ್ತಿದ್ದರೆ ನೆಲಮಟ್ಟದ ಪರಿಸ್ಥಿತಿಯೇ ಬೇರೆ ಇದೆ. ಪ್ರಾಥಮಿಕ ಆರೋಗ್ಯ ವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದೆ. ವೈದ್ಯರ ಸಂಖ್ಯೆ ಕೂಡ ಸಮರ್ಪಕವಾಗಿಲ್ಲ.

ಇದು ಹೇಗಾಯಿತು ಎಂದರೆ ಹೊರಗೆ ಭವ್ಯವಾಗಿ ಕಾಣುವಂತೆ ಕಟ್ಟಡಕ್ಕೆ ಬಣ್ಣ ಬಳಿದು ಒಳಗೆ ಬಿರುಕು ಬಿಟ್ಟಿರುವ ಗೋಡೆಗಳಿದ್ದಂತೆ.

  • ಸಂದರ್ಶನ: ಸ್ವಾತಿ ಶುಕ್ಲಾ ಮತ್ತು ಗುರುಪ್ರಸಾದ್ ಆಕೃತಿ

ಇದನ್ನೂ ಓದಿ: ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಎದುರಿಸಬೇಕಾದ ವಿಫಲತೆಗಳು – ಕವಿತಾ ಕೃಷ್ಣನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಪ್ರಜ್ವಲ್ ರೇವಣ್ಣಗೆ ಸಿದ್ದರಾಮಯ್ಯ ಕ್ರಿಮಿನಲ್ ಹಣೆಪಟ್ಟಿ ಕಟ್ಟಿದ್ದಾರೆ: ಕುಮಾರಸ್ವಾಮಿ

0
'ಇನ್ನೂ ಆರೋಪಿಯಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕ್ರಿಮಿನಲ್ ಎಂಬ ಹಣೆಪಟ್ಟಿ ಕಟ್ಟಿದ್ದಾರೆ' ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಲೈಂಗಿಕ ಹಗರಣದ...