ಕಳೆದ ಕೆಲವು ವರುಷಗಳಿಂದ ನಡೆಯುತ್ತಿರುವ ಪ್ರತಿ ಹೋರಾಟವೂ ಸೋಲಿನ ಹೋರಾಟಗಳೇ ಆಗಿಬಿಟ್ಟಿರುವ ಭಾವನೆ ಮೂಡುವಂತಿದೆ. ಪ್ರಜಾಪ್ರಭುತ್ವದ ಎಲ್ಲಾ ಅಂಗಗಳ ಮೇಲೂ ಯುದ್ಧ ಸಾರುತ್ತಿರುವ ಸರ್ವಾಧಿಕಾರ ಭಾರತದಲ್ಲಿದೆ. ವಿಶ್ವವಿದ್ಯಾಲಯಗಳು ಪ್ರತಿನಿತ್ಯ ಭೌತಿಕವಾಗಿ ಮತ್ತು ಸೈದ್ಧಾಂತಿಕ ದಾಳಿಗೆ ಒಳಗಾಗುತ್ತಿವೆ. ಅಲ್ಪಸಂಖ್ಯಾತ ಮುಸ್ಲಿಮರು ಹತ್ಯೆಯಾಗುತ್ತಿರುವುದು, ಗೆಳೆಯರು ಮತ್ತು ಕಾಮ್ರೇಡುಗಳು ಬಂಧನಕ್ಕೆ ಅಥವಾ ಸಾವಿಗೆ ದೂಡಲ್ಪಡುತ್ತಿರುವುದು ಸಾಮಾನ್ಯ ಸಂಗತಿಯಂತಾಗಿಬಿಡುತ್ತಿರುವುದು ಹೊಟ್ಟೆಗೆ ಬೆಂಕಿ ಬಿದ್ದಂತಾಗುತ್ತಿದೆ. ಗೌರಿ ಲಂಕೇಶರನ್ನು ಸಾಯಿಸಲಾಯಿತು, ನಾವೆಲ್ಲರೂ ಮುಂದಿನ ಲೆಕ್ಕದಲ್ಲಿ ಸಾಯುವ ಗೆಳೆಯರಾರು ಎಂಬ ಆಲೋಚನೆಯಲ್ಲಿ ದಿನ ದೂಡುವಂತಾಯಿತು. ಸುದ್ದಿ ವಾಹಿನಿಗಳನ್ನು ವೀಕ್ಷಿಸುವುದು ಅಸಾಧ್ಯದ ಸಂಗತಿ ಆಗಿಹೋಗಿದೆ. ಇಸ್ಲಾಮೋಪೋಬಿಯಾ ಮತ್ತು ಪ್ರಜಾಪ್ರಭುತ್ವ ವಿರೋಧಿ ವಿಷ ಕಕ್ಕುವ ವಾಹಿನಿಗಳು ಒಂದೆಡೆಯಾದರೆ ಮತ್ತೊಂದೆಡೆ ಪ್ರಗತಿಪರ ಸುದ್ದಿಗಳ ನಡುವೆ ಆಯ್ಕೆ ಇದೆ ಆದರೆ “ಎರಡೂ ಪಾಳಯಗಳಲ್ಲಿ” ಧೈರ್ಯ ಮತ್ತು ಬದ್ಧತೆಯ ಕೊರತೆ ಎದ್ದು ಕಾಣುತ್ತದೆ.

photo courtesy: Scrooll.in

ಅರುಂಧತಿ ರಾಯ್ ಹೇಳುವಂತೆ ಕೊರೊನಾ ವೈರಾಣು ಉಂಟುಮಾಡಿರುವ ಬಿಕ್ಕಟ್ಟಿನ ಸನ್ನಿವೇಶವು ನಮ್ಮ ಸಮಾಜಕ್ಕೆ ತೆಗೆದ ಎಕ್ಸ್-ರೇಯಂತಿದೆ. ಇತರೆಲ್ಲ ಸಂಗತಿಗಳ ಬಗ್ಗೆ ಎಷ್ಟು ಕ್ರೂರತೆಯಿಂದ ಮತ್ತು ನಿರ್ಲಕ್ಷ್ಯತೆಯಿಂದ ಆಳುವವರು ನಡೆದುಕೊಳ್ಳುತ್ತಿದ್ದರೋ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲೂ ಅದೇ ರೀತಿ ನಡೆದುಕೊಂಡಿದ್ದಾರೆ. ಇಸ್ಲಾಮೋಪೋಬಿಯಾವನ್ನು ಹರಡಲು ಈ ಸಂದರ್ಭವನ್ನು ಬಳಸಿಕೊಂಡು, ವೈರಸ್ಸಿಗೆ ಮುಸ್ಲಿಮರಷ್ಟೇ ಕಾರಣ ಎಂದು ಆರೋಪಿಸಿದರು. ಅಸ್ಪೃಶ್ಯತೆಯ ಹಳೆಯ ಕರಾಳತೆಯನ್ನು ಬಳಸಿಕೊಂಡು ದಲಿತ ಪೌರ ಕಾರ್ಮಿಕರನ್ನು ನಿಷ್ಠುರವಾಗಿ ನಡೆಸಿಕೊಂಡರು; ವೈದ್ಯರು, ದಾದಿಯರು ಮತ್ತು ಇತರೆ ಆರೋಗ್ಯ ಕಾರ್ಯಕರ್ತರನ್ನೂ ಇದೇ ರೀತಿ ನಡೆಸಿಕೊಳ್ಳಲು ಈ ಸಾಂಕ್ರಮಿಕ ನೆಪವಾಯಿತು. ಈ ಅಸ್ಪೃಶ್ಯತೆಯ ಸಾಧನವನ್ನು ಮುಸಲ್ಮಾನರ ಮೇಲೂ ಪ್ರಯೋಗಿಸಿ ಸಾಮಾಜಿಕ ಬಹಿಷ್ಕಾರಕ್ಕೊಳಪಡಿಸಿದರು. ವಲಸೆ ಕಾರ್ಮಿಕರನ್ನಂತೂ ಕಂಡು ಕೇಳರಿಯದ ಕ್ರೌರ್ಯಕ್ಕೆ ಈಡು ಮಾಡಲಾಯಿತು. ವಲಸೆ ಕಾರ್ಮಿಕರು ಸಾವಿರಾರು ಕಿಲೋಮೀಟರುಗಳನ್ನು ನಡೆದು ಅವರ ಊರು-ಮನೆಗಳನ್ನು ತಲುಪುವಂತೆ ಮಾಡಲಾಯಿತು. “ಲಾಕ್‍ಡೌನಿನ ನಿಯಮಗಳನ್ನು” ಮುರಿದ ಆರೋಪದ ಮೇಲೆ ಪೊಲೀಸರು ಮನಸೋ ಇಚ್ಛೆ ಲಾಠಿ ಬೀಸಿದರು.

ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ರೋಗಪೀಡಿತವಾಗಿದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಖಾಸಗಿ ಆಸ್ಪತ್ರೆಗಳು ಆರೋಗ್ಯ ಒದಗಿಸುವ ನೆಪದಲ್ಲಿ ವೈದ್ಯಕೀಯ ಸೇವೆಯ ಬೆಲೆಗಳನ್ನು ವಿಪರೀತವೆನ್ನುಂತೆ ಹೆಚ್ಚಿಸಿದರು. ಹೆಚ್ಚಿನ ಜನರಿಗೆ ಕನಿಷ್ಠ ಮಟ್ಟದ ನೈರ್ಮಲ್ಯ ಮತ್ತು ಸುರಕ್ಷತೆ ಲಭ್ಯವಿಲ್ಲದ ದೇಶದಲ್ಲಿಯೇ ಇವೆಲ್ಲವೂ ನಡೆದುಹೋದವು.

ಈಗ ಲಾಕ್‍ಡೌನ್ ತೆರವಾಗುತ್ತಿದೆ, ಆದರೆ ಪ್ರಜಾಪ್ರಭುತ್ವ ಇನ್ನೂ ಲಾಕ್‍ಡೌನ್ ಇಂದ ಹೊರಬಂದಿಲ್ಲ. ಪ್ರತಿಭಟನೆಗಳನ್ನು ಇನ್ನೂ ನಿಷೇಧಿಸಲಾಗಿದೆ. ಆದರೆ ಲಾಕ್‍ಡೌನಿನ ಸಂದರ್ಭದಲ್ಲಿ ಹೋರಾಟಗಾರರು, ಬುದ್ಧಿಜೀವಿಗಳನ್ನು, ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗಟ್ಟುವುದು ಮುಂದುವರಿದಿದೆ. ಭೀಮಾ ಕೋರೆಗಾಂವ್ ಪ್ರಕರಣ ಮತ್ತು ಈಗ ದೆಹಲಿಯಲ್ಲಿ ಮುಸ್ಲಿಮರ ವಿರುದ್ಧ ನಡೆದ ಗಲಭೆ ಮತ್ತು ನರಮೇಧ ಪ್ರಕರಣಗಳನ್ನು ನೆಪವಾಗಿಸಿಟ್ಟುಕೊಂಡು ಅಮಾಯಕ ಹೋರಾಟಗಾರರನ್ನು ಕರಾಳ ಯುಎಪಿಎ ಕಾಯ್ದೆಯಡಿ ಬಂಧಿಸಿ ಜಾಮೀನು ಸಿಗದಂತೆ, ವಿಚಾರಣೆಯೂ ನಡೆಯದಂತೆ ನೋಡಿಕೊಂಡು ಜೈಲಿಗೆ ಕಳುಹಿಸಲಾಗುತ್ತಿದೆ.

ಫ್ಯಾಸಿಸ್ಟರು ನಮ್ಮ ಜೊತೆ ನಡೆಸುತ್ತಿರುವ ಮನೋಯುದ್ಧದಲ್ಲಿ, ನಮ್ಮ ಅಪ್ರಸ್ತುತೆಯ ಕುರಿತು ಅಬ್ಬರಿಸಲಾಗುತ್ತಿದೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧದ ಅವರ ಗೆಲುವಿನ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಇಂತಹ ವಿಷಮ ಸಂದರ್ಭದಲ್ಲಿ ಹತಾಶೆಗೊಳಗಾಗುವುದಕ್ಕೆ ಮನಸ್ಸು ಪ್ರೇರೇಪಿಸುತ್ತದೆ, ಹತಾಶೆಗೊಳಗಾಗುವುದು ಅನುಕೂಲಕರವೆನ್ನಿಸುತ್ತದೆ. “ಭಾರತ ಬಿಡಿಸಿಕೊಳ್ಳಲಾಗದಷ್ಟು ಕೋಮುವಾದಿ, ಜಾತಿವಾದಿ, ಪಿತೃಪ್ರಧಾನ ಸಮಾಜ” ಎನ್ನುತ್ತಾ ಭಾರತೀಯರ ಮೇಲಿನ ನಂಬುಗೆಯನ್ನು “ಕಳೆದುಕೊಂಡು” ಭಾರತವೊಂದು ಹಿಂದೂ ಫ್ಯಾಸಿಸ್ಟ್ ರಾಷ್ಟ್ರವಾಗುವುದಕ್ಕೆ ಕಳೆದ ಶತಮಾನದಿಂದಲೂ ಕಾಯುತ್ತಿತ್ತು ಎಂಬ ಅಭಿಪ್ರಾಯಕ್ಕೆ ಬರುವುದಕ್ಕೆ ಬಹಳಷ್ಟು ಮಂದಿಗೆ ಸುಲಭವೆನಿಸುತ್ತಿದೆ. ನಮ್ಮ ಜನರ ಮೇಲಿನ ನಂಬುಗೆ “ಕಳೆದುಕೊಳ್ಳುವ” ಉದ್ವೇಗ ಸುಲಭವೇ ಹೌದಾದರೂ, ಇದು ಸೋಮಾರಿತನ ಮತ್ತು ರಾಜಕೀಯವಾಗಿ ಸೋಲಲಿಚ್ಛಿಸುವವರ ಮನಸ್ಥಿತಿ ಎಂದು ನನಗೆ ಅನ್ನಿಸುತ್ತದೆ. ಸೋಲುವ ‘ಐಷಾರಾಮಿ’ತನವನ್ನು ಒಪ್ಪಿಕೊಳ್ಳುವಷ್ಟು ಸಿರಿವಂತರು ನಾವಲ್ಲ. ಮೋದಿಗೆ ಮತ ಹಾಕಿದವರನ್ನು ಕೋಪದಿಂದ ಬಯ್ದುಕೊಂಡು, ಇಡೀ ದೇಶವೇ ನೀತಿ ಕಳೆದುಕೊಂಡು ಫ್ಯಾಸಿಸ್ಟ್ ಮನಸ್ಥಿತಿಯನ್ನು ಬೆಳೆಸಿಕೊಂಡಿದೆ ಎಂದುಕೊಳ್ಳುವುದು ನಿಖರವಾದದ್ದಲ್ಲ ಮತ್ತು ರಾಜಕೀಯವಾಗಿ ಘನವಾದದ್ದೂ ಅಲ್ಲ.

ಜನರಲ್ಲಿ ವೈರುಧ್ಯದ ರೂಪದ ಪ್ರಜ್ಞೆಗಳು ಮನೆಮಾಡಿರುತ್ತಚೆ, ಒಬ್ಬ ವ್ಯಕ್ತಿಯಲ್ಲಿಯೇ ಅದರ ಹತ್ತಾರು ರೀತಿಯ ರೂಪಗಳು ಇರುವುದು ಅಪರೂಪವೇನಲ್ಲ. ಹಿಂದುತ್ವ ರಾಜಕೀಯವು ಜನರನ್ನು “ಹಿಂದೂ”ಗಳಾಗಿ ಗುರುತಿಸಿಕೊಳ್ಳಲು ಪ್ರೇರೇಪಿಸುತ್ತದೆ. ಹಿಂದುತ್ವದ “ಹಿಂದೂ”ವಿನ ಗುರುತೆಂದರೆ ಮುಸ್ಲಿಮರು ಮತ್ತು ಇನ್ನಿತರೆ ಅಲ್ಪಸಂಖ್ಯಾತರೆಡೆಗಿನ ದ್ವೇಷ ಮತ್ತು ಬ್ರಾಹ್ಮಣ್ಯದ ಪಿತೃಪ್ರಾಧ್ಯಾನ್ಯತೆಯ ಬಗೆಗಿನ ‘ಹೆಮ್ಮೆ’. ಬಲಶಾಲಿ ಪ್ರಭುತ್ವಕ್ಕೆಕ್ಕೆ ನಿಷ್ಠೆ ತೋರಿಸಲು ಹೇಳುವ ಹಿಂದುತ್ವದ ರಾಜಕೀಯವು, ಪ್ರಭುತ್ವ ವಿರೋಧಿ ಪ್ರತಿರೋಧದ ದನಿಗಳೆಲ್ಲವನ್ನೂ ದೇಶಕ್ಕೆ ದ್ರೋಹ ಬಗೆಯುತ್ತಿರುವವರೆಂದು ಗುರುತಿಸುವಂತೆ ಸೂಚಿಸುತ್ತದೆ. ಎಡಪಂಥೀಯ ಚಳವಳಿಗಳು ಮತ್ತು ಇನ್ನಿತರೆ ಜನ ಚಳುವಳಿಗಳು ಜನರಿಗೆ ಕಾರ್ಮಿಕರಾಗಿ ಅಥವಾ ಶ್ರಮಿಕರಾಗಿ, ಮಹಿಳೆಯರಾಗಿ, ದಲಿತರಾಗಿ, ಈ ದೇಶದ ಶೋಷಕ ವ್ಯವಸ್ಥೆಗಳಿಗೆ ಮತ್ತು ಶೋಷಣೆಯ ಸಿದ್ಧಾಂತಗಳಿಗೆ ಸವಾಲೆಸೆದು ಭಾರತವನ್ನು ಬದಲಾಯಿಸಲು ಬದ್ಧವಾಗಿರುವ ಭಾರತೀಯನಾಗಿ ಗುರುತಿಸಿಕೊಳ್ಳುವಂತೆ ಕರೆ ಕೊಡುತ್ತವೆ. ಈ ಚಳುವಳಿಗಳು ಭಾರತೀಯರಿಗೆ ಅವರಲ್ಲಿರುವ ಶಕ್ತಿ – ಗುಣಗಳಿಗೆ ಅನುಸಾರವಾಗಿ ವೈಯಕ್ತಿಕವಾಗಿ ಉತ್ತಮರಾಗಿ ಆದರೆ ಮುಖ್ಯವಾಗಿ ಸಾಮಾಜಿಕವಾಗಿ-ಸಾಮುದಾಯಿಕವಾಗಿ ಉತ್ತಮಗೊಳ್ಳಿ ಎಂದು ಕೇಳಿಕೊಳ್ಳುತ್ತವೆ.

ಸೋಲಿನ ಮೇಲೆ ಸೋಲು ಅನುಭವಿಸುತ್ತಿರುವ ಈ ಸಂದರ್ಭದಲ್ಲಿ, ಫ್ಯಾಸಿಸ್ಟ್ ವಿರೋಧಿಗಳು ಅನುಸರಿಸಬೇಕಾದ ದಾರಿ ಯಾವುದು? ಅಳವಡಿಸಿಕೊಳ್ಳಬೇಕಾದ ಅತ್ಯುತ್ತಮ ನಿಲುವು ಯಾವುದು? ಮೊಟ್ಟ ಮೊದಲಿಗೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದನ್ನು ನಿಲ್ಲಿಸಿ ಸದ್ಯದ ಸಂದರ್ಭದಲ್ಲಿ ವಿರೋಧಿ ಗೆಲುವು ಕಾಣುತ್ತಿದ್ದಾನೆ ಎಂದು ಒಪ್ಪಿಕೊಳ್ಳಬೇಕು. ಹತಾಶೆ ಮತ್ತು ಅದು ನೀಡುವ ಹುಸಿನೆಮ್ಮದಿಗಳು ನಮ್ಮ ಮಡಿಲಿಗೆ ಬೀಳುವುದನ್ನು ತಪ್ಪಿಸಿಕೊಳ್ಳುವುದು ಮುಂದಿನ ಹೆಜ್ಜೆ. ಅಲ್ಲಾಡುವ ಹಲ್ಲು ನೀಡುವ ವಿಚಿತ್ರ ಖುಷಿಯಂತೆ ಅದಾಗಬಾರದು. “ಜನರಲ್ಲೇ ಏನೋ ಐಬಿದೆ” ಎಂದು ನನ್ನ ಸ್ನೇಹಿತರೂ ಆಗಿರುವ ಉತ್ತಮ ಚಳುವಳಿಗಾರೊಬ್ಬರು ನನಗೆ ಹೇಳಿದ್ದರು. ಇಂತಹ ಹೇಳಿಕೆ ನೀಡುವ ಪ್ರಲೋಭನೆಗಳನ್ನು ಹತ್ತಿಕ್ಕಿಕೊಳ್ಳಬೇಕಿದೆ.

ಮೋದಿಗೆ ಮತ ಹಾಕಿದ “ಅಸಹನೆಯ ಬಹುಸಂಖ್ಯಾತರು” ತಾವು ಮಾಡಿದ್ದಕ್ಕೆ ಅನುಭವಿಸಲಿ ಬಿಡಿ ಎಂಬ ಜಿಗುಪ್ಸೆಯ ಬಾಲಿಶ ಮಾತುಗಳನ್ನಾಡುವ ಸಂದರ್ಭದಲ್ಲಿ ನಾವಿಲ್ಲ. ಬದಲಿಗೆ, ಭಾರತದಲ್ಲಿ ಫ್ಯಾಸಿಸಂ ಬೆಳೆಯುತ್ತಿರುವುದರ ಬಗ್ಗೆ ಅಷ್ಟೇನು ಆತಂಕಿತರಾಗದ ಮತ್ತು ಈ ತುರ್ತನ್ನು ಗ್ರಹಿಸದ ಜನರ ಹೆಚ್ಚಿನ ತಿಳಿವಳಿಕೆಗಾಗಿ ಹೆಚ್ಚಿನ ಅನುಭೂತಿ ತೋರಿಸುವ ಕೆಲಸವನ್ನು ನಾವು ಮತ್ತು ನಮ್ಮೆಲ್ಲ ಸಂಗಾತಿಗಳು-ಹೋರಾಟಗಾರರು ಮಾಡಬೇಕಿದೆ.

photo courtesy: Al Jazeera

ಫೆಬ್ರವರಿ ತಿಂಗಳಿನ ಬಹುಪಾಲನ್ನು ನಾನು ಬಿಹಾರದಲ್ಲಿ ಸಿಎಎ, ಎನ್.ಪಿ.ಆರ್ ಮತ್ತು ಎನ್.ಆರ್.ಸಿ ವಿರೋಧಿ ಚಳವಳಿಯಲ್ಲಿ ಕಳೆದೆ. ಮುಸ್ಲಿಮೇತರರ ನಡುವೆ ಈ ನಮ್ಮ ಹೋರಾಟದ ಹೆಚ್ಚಿನ ಸಮಯವನ್ನು ಕಳೆದಿದ್ದು. ಮುಸ್ಲಿಮರಷ್ಟೇ ಈ ಹೊಸ ನೀತಿಗಳಿಗೆ ಭಯಪಡಬೇಕು ಎಂಬ ಬಿಜೆಪಿಯ ಪ್ರಚಾರವನ್ನು ನಂಬಿಕೊಂಡಿದ್ದ ಜನರ ತಿಳಿವಳಿಕೆಗಾಗಿ ನಮ್ಮ ಸಮಯ ಮೀಸಲಿರಿಸಿದ್ದೆವು. ಚಳುವಳಿಗೆ ಒಳ್ಳೆಯ ಯಶಸ್ಸು ದೊರಕಿತು. ದೇಶದೆಲ್ಲೆಡೆ ಕೂಡ ಎನ್.ಪಿ.ಆರ್, ಸಿಎಎ ಮತ್ತು ಎನ್.ಆರ್.ಸಿ ಕುರಿತ ಸರಕಾರದ ಪ್ರಚಾರಕ್ಕೆ ನಿರೀಕ್ಷೆಯಷ್ಟು ಯಶ ಸಿಗಲಿಲ್ಲ. ಸರಕಾರಕ್ಕೆ ಒಂದೆಜ್ಜೆ ಹಿಂದೆ ಇಡದೆ ಬೇರೆ ದಾರಿಯಿರಲಿಲ್ಲ. ಸಿಎಎ ಅನ್ನು ಉಳಿಸಿಕೊಳ್ಳುವ ಸಲುವಾಗಿ ಎನ್.ಪಿ.ಆರ್ ಕಾಯ್ದೆಯನ್ನು ಒಂದಷ್ಟು ಸಡಿಲಮಾಡಿ, ಎನ್.ಆರ್.ಸಿಯನ್ನು ಹಿಂದಕ್ಕೆ ತಳ್ಳಲಾಯಿತು.

ಬಿಹಾರದ ಶಹೀನ್ ಬಾಗ್‍ಗಳಲ್ಲಿ ಮಾತನಾಡಲೂ ಒಂದಷ್ಟು ಸಮಯ ನಾನು ಮೀಸಲಿರಿಸಿದೆ. “ನಾವು, ಮುಸ್ಲಿಮರು ಇಲ್ಲಿ ಹೊರಬಂದು ಪ್ರತಿಭಟಿಸುತ್ತಿದ್ದೇವೆ. ಆದರಿಲ್ಲಿ ಭಾಗವಹಿಸುವ ಹಿಂದೂಗಳ ಸಂಖ್ಯೆ ಯಾಕೆ ಕಡಿಮೆಯಿದೆ?” ಎಂಬ ಪ್ರಶ್ನೆ ಎದುರಾಗುತ್ತಿತ್ತು. ಸಮಸ್ಯೆಯನ್ನು ಬೇರೆಯದೇ ದೃಷ್ಟಿಕೋನದಿಂದ ಬಗೆಹರಿಸುವಂತೆ ನಾನು ಅವರಿಗೆ ತಿಳಿಸಿದೆ. ದಲಿತರು, ಆದಿವಾಸಿಗಳು ಅಥವಾ ಭೂಮಿರಹಿತ ಕಾರ್ಮಿಕರು “ತಮ್ಮ” ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿದ್ದಾಗ ನಮ್ಮಲ್ಲೆಷ್ಟು ಜನರು ಅವರಿಗೆ ಜೊತೆಯಾಗಿದ್ದೆವು ಎಂದು ಪ್ರಶ್ನಿಸಿದೆ. ನಾಗರೀಕತ್ವದ ಕುರಿತಾದ ಈ ಹೊಸ ನೀತಿಗಳು ನೇರವಾಗಿ ನಮ್ಮನ್ನು ನೇರವಾಗಿ ಭಾದಿಸುವುದಿಲ್ಲ ಎಂಬ ಯೋಚನೆಯಿದ್ದಾಗ ಅವರೆಲ್ಲರೂ ಈ ಹೋರಾಟಗಳಲ್ಲಿ ಭಾಗವಹಿಸದೇ ಇರುವುದರಲ್ಲಿ ಅಚ್ಚರಿಯೇನಿದೆ? ಪ್ರತಿಭಟನೆಯಿಂದ ದೂರವುಳಿದ ಹಿಂದೂಗಳನ್ನು ದೂಷಿಸುವುದರ ಬದಲು, ಭಾರತದ ಎಲ್ಲಾ ದುರ್ಬಲ ವರ್ಗಗಳನ್ನು ತಲುಪುವ ಜವಾಬ್ದಾರಿ ನಮ್ಮ ಮೇಲೇಯೇ ಇದೆ. ಅವರ ಕಾಳಜಿಗಳೇನಿವೆ, ಅವರ ಹೋರಾಟಗಳೇನು ಎಂದು ಕೇಳಿ ತಿಳಿದುಕೊಂಡು ಅವರಿಗೆ ಬೆಂಬಲ ನೀಡಿ ನಂತರ ಸಿಎಎ, ಎನ್.ಪಿ.ಆರ್ ಮತ್ತು ಎನ್.ಆರ್.ಸಿ ಭಾರತೀಯ ಮುಸ್ಲಿಮರ ಹಕ್ಕುಗಳನ್ನು ಹೇಗೆ ಕಸಿದುಕೊಳ್ಳುವ ಬೆದರಿಕೆ ಒಡ್ಡುತ್ತಿವೆ ಎಂದು ವಿವರಿಸಿ, ಜೊತೆ ಜೊತೆಗೆ ಈ ಕಾಯ್ದೆಗಳು ದೇಶದ ಪ್ರತಿಯೊಬ್ಬ ನಿವಾಸಿಯ ಮೇಲೂ “ಅನುಮಾನಾಸ್ಪದ ಮತದಾರ”ನೆಂಬ ತೂಗು ಕತ್ತಿಯನ್ನಿಟ್ಟು, ಎಲ್ಲರನ್ನೂ ಪ್ರಭುತ್ವದ ಮತ್ತು ಆಳುವ ಪಕ್ಷಗಳ ಮರ್ಜಿಗೆ ತಳ್ಳುತ್ತವೆ ಎನ್ನುವುದನ್ನು ವಿವರಿಸಿ ಹೇಳಬೇಕು. ಅನುಭೂತಿ ಮತ್ತು ಒಗ್ಗಟ್ಟು ಸಾರ್ವತ್ರಿಕವಾಗಿ ಸಾಂಕ್ರಾಮಿಕವಾಗಿ ಬೆಳೆಯಬಹುದು.

ಆದುದರಿಂದ ನಾನು ಕಂಡುಕೊಳ್ಳುವ ಉಪಯುಕ್ತ, ಪರಿಣಾಮಕಾರಿ ಮತ್ತು ನೀತಿಯುತ ನಿಲುವು, ಮೂರ್ಖ ಗುಂಪುಗಳಿಂದ ಮೋಸವಾಗುತ್ತಿದ್ದರೂ ಧೈರ್ಯದಿಂದ ತುಂಬಿದ ಏಕಾಂಗಿ ವಿವೇಕದ ದನಿಯಾಗಿ ಕಳೆದುಹೋಗುವಂತದ್ದಾಗಿರಬಾರದು. ಈ ಸಮಯದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸುತ್ತಿರುವ ಫ್ಯಾಸಿಸಂನಿಂದ ಪೀಡಿತರಾದ ಸಂತ್ರಸ್ತರು ಕೂಡ ಪ್ರತಿಷ್ಟಿತ ಅಥವಾ ಎಲೈಟಿಸ್ಟ್ ಆಗಿರುವ ಆದರೆ ಮೂಲದಲ್ಲಿ ಪ್ರಜಾಸತ್ತಾತ್ಮಕವಾಗಿರಿದ ನಿಲುವನ್ನು ಅಳವಡಿಸಿಕೊಂಡರೂ ಅದು ಸರಿಯಲ್ಲ.

ಬದಲಿಗೆ ನಾವು ಅನುಭೂತಿಯ, ತೆರೆದ ಮನದ ಹೋರಾಟದ ನಿಲುವನ್ನು ಹೊಂದಬೇಕು. ಬಿಜೆಪಿಗೆ ಮತ ಹಾಕಿದವರು ಮತ್ತು ಈ ಪ್ರತಿಭಟನೆಗಳಲ್ಲಿ ಭಾಗವಹಿಸುವ ಅಗತ್ಯತೆಯನ್ನು ಕಾಣದವರಿಗು ಅನುಭೂತಿಯ ಮತ್ತು ವಿಶಾಲ ತೆರೆದ ಮನಸ್ಸಿನ ಸಾಧ್ಯತೆ ಇದೆ ಎನ್ನುವುದರಲ್ಲಿ ನಂಬುಗೆ ಹೊಂದಬೇಕು. ಈ ನಿಟ್ಟಿನಲ್ಲಿ ನಮ್ಮಲ್ಲಿ ಮತ್ತು ಇತರರಲ್ಲಿ ಆ ಸಾಮಥ್ರ್ಯವನ್ನು ಹೊಂದುವ ಬಗೆಗಳನ್ನು ನಾವು ಕಂಡುಕೊಳ್ಳಬೇಕು.

ಈಗಿನ ದಿನಗಳಲ್ಲಿ ನನಗೆ ಮಂತ್ರವೇ ಆಗಿಬಿಟ್ಟಿರುವಂತಹ ರಿಚರ್ಡ್ ಜೆ ಬರ್ನ್‍ಸ್ಟೈನ್ ಅವರ ಪ್ರಬಂಧ “ದಿ ಅಜೆರ್ಂಟ್ ರಿಲೆವೆನ್ಸ್ ಆಫ್ ಹನಾ ಅರೆಂಟ್”ನ ಸಾಲುಗಳನ್ನು ಉಲ್ಲೇಖಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ: “ನಮ್ಮ ರಾಜಕೀಯ ಜೀವನದಲ್ಲಿ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಅವಶ್ಯಕತೆಯೇ ಅರೆಂಟ್‍ರವರ ಬರಹಗಳ ಮುಖ್ಯ ಸಾರ. ನಿರಾಕರಣವಾದ, ಸಿನಿಕತೆ ಮತ್ತು ಉದಾಸೀನತೆಗೆ ಆಕರ್ಷಣೆಗೊಳ್ಳುವುದರ ಕುರಿತು ಅರೆಂಟ್ ನಮ್ಮನ್ನು ಎಚ್ಚರಿಸುತ್ತಾರೆ. ಸುಳ್ಳು ಸುಳ್ಳೇ ಭರವಸೆಗಳು ಮತ್ತು ಪೊಳ್ಳು ಹತಾಶೆಗಳು ಮುತ್ತಿಕೊಳ್ಳುವುದನ್ನು ವಿರೋಧಿಸುತ್ತಾರೆ. ನಮ್ಮ ಕರಾಳ ಕಾಲದ ಸಂಗತಿಗಳಾದ – ಸುಳ್ಳುಗಳು, ಮೋಸ, ಸ್ವಯಂ ವಂಚನೆ, ವ್ಯಕ್ತಿ ವಿಜೃಂಭಣೆ, ಸತ್ಯ ಮತ್ತು ಸುಳ್ಳಿನ ನಡುವಿನ ಮುಖ್ಯ ವ್ಯತ್ಯಾಸವನ್ನೇ ಅಳಿಸಿಹಾಕಿಬಿಡುವಂತಹ ಪ್ರಯತ್ನಗಳ ಕುರಿತು ಅರೆಂಟ್ ಧೈರ್ಯದಿಂದ ವಿವರಿಸುತ್ತಾರೆ”.

ನಮ್ಮಲ್ಲಿರುವ ಧೈರ್ಯವಂತರು ಸುಳ್ಳು ಭರವಸೆ ಮತ್ತು ಪೊಳ್ಳು ಹತಾಶೆಯನ್ನು ವಿರೋಧಿಸಬೇಕಿದೆ, ನಿರಾಕರಣ ಮತ್ತು ಸಿನಿಕತೆಯ ತೆಕ್ಕೆಗೆ ಬೀಳುವುದನ್ನು ವಿರೋಧಿಸಬೇಕಿದೆ. ಅನುಭೂತಿ ಮತ್ತು ತೆರೆದ ಮನಸ್ಥಿತಿಯ ಕುರಿತು ನೆನಪು ಮಾಡಿಕೊಂಡು ಒಗ್ಗಟ್ಟಿನ ಹೋರಾಟವನ್ನು ಕಟ್ಟುವತ್ತ ಕಾರ್ಯನಿರ್ವಹಿಸಬೇಕಿರುವುದನ್ನು ನಾವು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳಬೇಕಿದೆ. ಕೋಪದ ಕೈಗೆ ಮನಸ್ಸನ್ನು ನೀಡಿ ಹತಾಶೆಗೆ ಒಳಗಾಗುವುದನ್ನು ತಪ್ಪಿಸಬೇಕಿದೆ.

ಕವಿತಾ ಕೃಷ್ಣನ್: ಜೆಎನ್‌ಯು ಹಳೆಯ ವಿದ್ಯಾರ್ಥಿನಿಯಾದ ಇವರು, ವಿದ್ಯಾರ್ಥಿ ಸಂಘಟನೆಯ ಮೂಲಕ ಎಡಪಂಥೀಯ ಚಳವಳಿಯ ಭಾದವಾದರು. ಎಐಪಿಡಬ್ಲ್ಯೂಎ ಕಾರ್ಯದರ್ಶಿಯೂ ಆದ ಅವರು ಸಿಪಿಐಎಂಎಲ್ ಲಿಬರೇಷನ್ನಿನ ಪಾಲಿಟ್ ಬ್ಯೂರೋ ಸದಸ್ಯೆ.

ಕನ್ನಡಕ್ಕೆ: ಡಾ.ಕೆ.ಆರ್ ಅಶೋಕ್


ಇದನ್ನು ಒದಿ: 2020ರಲ್ಲೂ ಮಾತನಾಡುತ್ತಿದ್ದಾರೆ ಗೌರಿ! -ಗೀತಾ ಹರಿಹರನ್

LEAVE A REPLY

Please enter your comment!
Please enter your name here