ದೇಶದ ಶೋಷಿತ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಮಹಾರಾಷ್ಟ್ರದಲ್ಲಿ `ನಳಂದಾ ಅಕಾಡೆಮಿ’ ಎಂಬ ವಿಶಿಷ್ಟ ಸಂಸ್ಥೆ ರೂಪತಳೆದಿದೆ. ಅಂಬೇಡ್ಕರ್‍ರ ಕನಸನ್ನು ತನ್ನದೇ ರೀತಿಯಲ್ಲಿ ನನಸಾಗಿಸಲು ದುಡಿಯುತ್ತಿರುವ ಅದರ ಸಂಸ್ಥಾಪಕ ಅನೂಪ್ ಕುಮಾರ್‍ರವರ ಸಂದರ್ಶನ ಇಲ್ಲಿದೆ.

ಪ್ರಶ್ನೆ: ನಮಸ್ಕಾರ! ನಿಮ್ಮ ಊರು, ಬಾಲ್ಯ, ಕೌಟುಂಬಿಕ ಹಿನ್ನೆಲೆ ಮೊದಲಾದವುಗಳ ಬಗ್ಗೆ ಸ್ವಲ್ಪ ಹೇಳಿ.
ಅನೂಪ್ ಕುಮಾರ್: ನಮ್ಮ ಊರು ಉತ್ತರ ಪ್ರದೇಶದ ಲಖೀಂಪುರ್ ಖೇರಿ ಪಟ್ಟಣ. ನಮ್ಮದು ದಲಿತ ಹಿನ್ನೆಲೆಯ ಕುಟುಂಬ. ತಂದೆ ವಕೀಲರಾಗಿದ್ದರು ಮತ್ತು ತಾಯಿ 10ನೇ ತರಗತಿ ಪಾಸಾಗಿದ್ದರು. ಆದರೆ, ನನ್ನ ಪೋಷಕರು ಸುಶಿಕ್ಷಿತರಾಗಿದ್ದ ಕಾರಣಕ್ಕೆ ನಮಗೆ ದೇಶಾದ್ಯಂತ ದಲಿತರ ಮೇಲಾಗುತ್ತಿದ್ದ ದೌರ್ಜನ್ಯ ತಾರತಮ್ಯಗಳ ಬಗ್ಗೆ ತಿಳಿಯುತ್ತಿತ್ತೆಂದೇನೂ ಇಲ್ಲ. ಜಾತಿ ಇಂದು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೊಳಗಾದಂತೆ 15-20 ವರ್ಷಗಳ ಹಿಂದೆ ಆಗುತ್ತಿರಲಿಲ್ಲ. ನನ್ನ ಎಷ್ಟೋ ಸಹಪಾಠಿಗಳನ್ನು ಅವರ ಕುಟುಂಬ ನಮ್ಮ ಮನೆಗೆ ಕಳಿಸುತ್ತಿರಲಿಲ್ಲ, ಹಾಗೆಯೆ ಈ ಕಡೆಯಿಂದಲೂ ಅದೇ ಪರಿಸ್ಥಿತಿ. ಭೇಧಭಾವ ಸಹಜವೆಂಬಂತಹ ಸ್ಥಿತಿಯಿತ್ತು. ಅದರ ಬಗ್ಗೆ ವಿಶೇಷವಾಗಿ ಗಮನಹರಿಸಬೇಕಾದ್ದೇನೂ ಇರಲಿಲ್ಲ ಎಂಬಂತೆ! ಜಾತಿ ಎಲ್ಲೆಡೆ ನಿಚ್ಚಳವಾಗಿ ಎದ್ದು ಕಾಣುತ್ತಿತ್ತು, ಆದರೂ ಅದು ರಾಜಕೀಯ ವಿಚಾರವಾಗಿ ಗಮನ ಸೆಳೆದಿರಲಿಲ್ಲ.

ಪ್ರ: ನಿಮ್ಮ ಈ ಸಾಮಾಜಿಕ ಚಟುವಟಿಕೆಗಳಿಗೆ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು?
ಅನೂಪ್: ಬೇರೆ ಯಾವುದೇ ಭಾರತೀಯ ಕುಟುಂಬದಂತೆ ನನ್ನ ಕುಟುಂಬವೂ ನಾನು ಚೆನ್ನಾಗಿ ಓದಿ ಒಂದು ಒಳ್ಳೆ ನೌಕರಿ ಹಿಡಿದು, ನನ್ನದೇ ಒಂದು ಕುಟುಂಬ ಕಟ್ಟಿಕೊಂಡು (ನಗುತ್ತಾ) ಮಜವಾಗಿ ‘ಸೆಟಲ್’ ಆಗಬೇಕೆಂದು ಬಯಸಿತ್ತು. ಟಿಪಿಕಲ್ ಮಧ್ಯಮವರ್ಗದ ಬಯಕೆಗಳು ಹೇಗಿರುತ್ತವೆಂದು ನಿಮಗೆ ಗೊತ್ತು. ನಾನು ನನ್ನ ಬದುಕಿನ ಮಾರ್ಗವನ್ನು ಬದಲಿಸುತ್ತೇನೆಂದ ಕೂಡಲೇ ಬಹಳ ಪ್ರತಿರೋಧ ಬಂತು. ಆದರೆ ನಾನು ಬಹಳ ಗಟ್ಟಿ ನಿರ್ಧಾರದ ವ್ಯಕ್ತಿ, ಏನು ಮಾಡಬೇಕೆಂದು ಅಂದುಕೊಳ್ಳುತ್ತೇನೋ ಅದನ್ನು ಮಾಡಿಯೇ ತೀರುತ್ತೇನೆ. ಅದು ಗೊತ್ತಿದ್ದುದರಿಂದ ಅವರು ನನ್ನನ್ನು ತಡೆಯಲು ಪ್ರಯತ್ನಿಸಲಿಲ್ಲ. ಆದರೆ ಕುಟುಂಬಕ್ಕೂ ನನಗೂ ಸಂಪರ್ಕ ಕಡಿದುಹೋಯಿತು.
ನನ್ನ ತಾಯಿ ಸಾಮಾನ್ಯವಾಗಿ ನನ್ನನ್ನು ಬೆಂಬಲಿಸುವವರಾಗಿದ್ದರೂ ಅವರಿಗೆ ಅಥವಾ ಕುಟುಂಬದ ಇತರರಿಗೆ ನಾನು ಏನು ಮಾಡುತ್ತಿದ್ದೇನೆಂದು ಸರಿಯಾಗಿ ಗೊತ್ತಿರಲಿಲ್ಲ. 2005ರಲ್ಲಿ ನನ್ನ ತಂದೆಗೆ ಅದಾಗಲೇ ನಾಲ್ಕನೇ ಹಂತ ತಲುಪಿರುವ ಕ್ಯಾನ್ಸರ್ ಖಾಯಿಲೆಯಾಗಿರುವುದು ಪತ್ತೆಯಾಯಿತು. ನನ್ನ ಒಡಹುಟ್ಟಿದವರಲ್ಲೆಲ್ಲ ನಾನೊಬ್ಬನೇ ಇನ್ನೂ ತಳವೂರದಿರುವವನು ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಅವರನ್ನು ನೋಡಲು ಹೋದಾಗ ಅವರು ನನ್ನ ಕುರಿತು ತಾಯಿಗೆ ಏನೋ ಹೇಳಿದರು. ತಾಯಿ ನನ್ನನ್ನು ಪಕ್ಕಕ್ಕೆ ಕರೆದು “ಅವರಿಗೆ ನಿನ್ನ ಬಗ್ಗೆಯೇ ಚಿಂತೆ” ಎಂದು ಹೇಳಿದರು. ಆಗ ನಾನು ಮೊಟ್ಟಮೊದಲ ಬಾರಿ ಬ್ಯಾಗಿನಿಂದ ನಾನು ಜೆಎನ್‍ಯುನಲ್ಲಿ ಸಂಪಾದಿಸಿ ಹೊರತರುತ್ತಿದ್ದ ಇನ್‍ಸೈಟ್ (ಒಳನೋಟ) ಪತ್ರಿಕೆಯನ್ನು ತೋರಿಸಿದೆ. ತಾಯಿ ಅದನ್ನು ನೋಡಿ ತಂದೆಗೆ ತೋರಿಸಿದರು. ‘ಅವನು ಈ ಕೆಲಸ ಮಾಡುತ್ತಿದ್ದಾನೆ, ಇದೇನೂ ತಪ್ಪಲ್ಲವಲ್ಲ’ ಎಂದರು. ಅವರಿಗೆ ನಾನು ಏನಾದರೂ ಅರ್ಥಪೂರ್ಣವಾದುದ್ದನ್ನು ಮಾಡುತ್ತೇನೆಯೇ ಹೊರತು ಬದುಕನ್ನು ವ್ಯರ್ಥವಾಗಿ ಕಳೆಯುವುದಿಲ್ಲ ಎಂಬ ನಂಬಿಕೆಯಿತ್ತು. ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಲಾರಂಭಿಸಿದರು. ನಿಜ ಹೇಳಬೇಕೆಂದರೆ (ನಗುತ್ತಾ) ನನ್ನ ಕುರಿತ ಕುಟುಂಬದ ಕಹಿಯನ್ನೆಲ್ಲ ತಾವೇ ಸಹಿಸಿದರು.

ಪ್ರ: ನೀವು ಒಬ್ಬ ಕಲಿಕಾ ಮಾರ್ಗದರ್ಶಿಯಾಗುತ್ತೀರಿ ಎಂದಾಗಲೀ, ನಳಂದಾ ಅಕಾಡೆಮಿ ಆರಂಭಿಸುತ್ತೀರಿ ಎಂದಾಗಲೀ ಮೊದಲು ಅಂದುಕೊಂಡಿದ್ದಿರಾ?
ಅನೂಪ್: ಇಲ್ಲ, ನಾನು ಅದನ್ನು ಆಲೋಚಿಸಿರಲಿಲ್ಲ. 2013ರಲ್ಲಿ ದೆಹಲಿಯಿಂದ ಹೊರಟ ನಂತರ ನಾನು ಮಹಾರಾಷ್ಟ್ರದ ವಾರ್ಧಾದಲ್ಲಿ ನಳಂದಾ ಅಕಾಡೆಮಿ ಆರಂಭಿಸಿದೆ. ತಾರತಮ್ಯದ ವಿರುದ್ಧ ಸಕ್ರಿಯವಾಗಿ ಕ್ರಿಯಾಶೀಲನಾಗಿದ್ದ ನನಗೆ ಸದಾ ಅನಿಸುತ್ತಿದ್ದುದು ನಾನು ಏನಾದರೂ ಖಚಿತವಾದುದನ್ನು, ರಚನಾತ್ಮಕವಾದುದನ್ನು ಮಾಡಬೇಕು ಅಂತ. ಇಡೀ ಜೀವನ ಬಿಡಿಬಿಡಿ ಪ್ರಕರಣಗಳ ವಿಚಾರದಲ್ಲಿ ಹೋರಾಡುತ್ತಲೇ ಕಳೆಯಲಾರೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ನಾನೊಬ್ಬ ಹೋರಾಟಗಾರ (ಆಕ್ಟಿವಿಸ್ಟ್) ಆಗಬೇಕೆಂದು ನಾನು ಅಂದುಕೊಂಡಿರಲಿಲ್ಲ. ನೀವು ತಿಳಿದಿರುವ ಎಲ್ಲಾ ಚಟುವಟಿಕೆಗಳನ್ನೂ ನಾನು ಮಾಡುತ್ತಾ ಬಂದೆ ನಿಜ, ಆದರೆ ನನಗೆ ತಳಮಟ್ಟದಲ್ಲಿ ಏನಾದರೂ ಮಾಡಲೇಬೇಕೆಂಬ ತುಡಿತವಿತ್ತು. 2013ರವರೆಗೂ ಏನು ಮಾಡಬಹುದೆಂದು ಹೊಳೆದಿರಲಿಲ್ಲ. ತಾರತಮ್ಯದ ಪ್ರಕರಣಗಳ ವಿರುದ್ಧ ನಾನು ಹೋರಾಡುತ್ತಿದ್ದೆ, ಆದರೆ ನನಗೆ ತುಂಬ ಸಮಾಧಾನವೇನೂ ಇರಲಿಲ್ಲ. ಭಾವನಾತ್ಮಕವಾಗಿಯೂ ಅದು ಬಹಳ ಕಠಿಣವಾದ ಕೆಲಸ.
ನಾನೂ ಕೂಡಾ ತಾರತಮ್ಯವನ್ನು ಹತ್ತಿರದಿಂದ ಕಂಡವನೇ ಆಗಿದ್ದೆ. ನನ್ನ ತಂದೆ ವಕೀಲರಾಗಿದ್ದರೂ ಅವರು ಜಾತಿಯಿಂದ ದಲಿತರಾಗಿದ್ದ ಕಾರಣಕ್ಕೆ ಬಹಳಷ್ಟು ಕೇಸುಗಳು ಅವರಿಗೆ ಸಿಗುತ್ತಿರಲಿಲ್ಲ. ಸಣ್ಣ ಪಟ್ಟಣದ ದಲಿತ ವಕೀಲನ ಸ್ಥಿತಿ ನೀವು ಟಿವಿಗಳಲ್ಲಿ ನೋಡುವ ನಗರಗಳ ವಕೀಲರಂತಿರುವುದಿಲ್ಲ. ಆದ್ದರಿಂದ ಶೈಕ್ಷಣಿಕವಾಗಿ ನಮ್ಮ ಕುಟುಂಬ ಮುಂದಿದ್ದರೂ ಆರ್ಥಿಕವಾಗಿ ಸುಸ್ಥಿತಿಯಲ್ಲಿರಲಿಲ್ಲ. ನನ್ನ ಸಹೋದರ ದುಡಿಯಲಾರಂಭಿಸಿದ ಮೇಲಷ್ಟೇ ನಮ್ಮ ಸ್ಥಿತಿಗತಿ ಕೊಂಚ ಸುಧಾರಿಸಿತು. ನಾನೂ ಕೂಡಾ ಐಎಎಸ್ ಮಾಡಬೇಕೆಂದು ಬಯಸಿದ್ದೆ. ಪರೀಕ್ಷೆಯಲ್ಲಿ ತೇರ್ಗಡೆಯೂ ಆಗಿದ್ದೆ. ಆದರೆ ಅದನ್ನು ಅಲ್ಲಿಗೇ ಕೈಬಿಟ್ಟೆ. ಏಕೆಂದರೆ ಎಂಜಿನಿಯರಿಂಗ್ ಪದವಿ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದ ಪಾಪಪ್ರಜ್ಞೆಯ ಕಾರಣಕ್ಕೆ ನಾನು ಐಎಎಸ್ ಹಿಂದೆ ಬಿದ್ದಿದ್ದೇನೆಂಬುದು ನನಗೆ ಹೊಳೆಯಿತು. ತಕ್ಷಣ ನಾನು ನನ್ನ ಬದುಕಿನ ಧ್ಯೇಯವನ್ನು ಹುಡುಕಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗೆ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ‘ಇನ್‍ಸೈಟ್’ ಪತ್ರಿಕೆಯನ್ನು ಆರಂಭಿಸಿದೆ.
ಇನ್‍ಸೈಟ್‍ನ್ನು ಆರಂಭಿಸಿದ್ದು ಜಾತಿ ಕುರಿತ ಚರ್ಚೆಯನ್ನು ಹುಟ್ಟುಹಾಕಬೇಕೆಂಬ ಕಾರಣಕ್ಕೆ. ವಿದ್ಯಾರ್ಥಿಗಳು ತಾವು ಕಂಡಿದ್ದು, ಅನುಭವಿಸಿದ್ದನ್ನು ಬರೆಯಬೇಕೆಂಬ ಕಾರಣಕ್ಕೆ. ಆಗೆಲ್ಲ, ಜಾತಿಯು ಕೇವಲ ಹಳ್ಳಿಗಳಲ್ಲಿ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗುತ್ತಿತ್ತು. ಕೇರಳದಲ್ಲಿ ಜಾತಿಯಿಲ್ಲ, ಕರ್ನಾಟಕದಲ್ಲಿ ಜಾತಿಯಿಲ್ಲ, ಹಾಗೆಯೇ ವಿಶ್ವವಿದ್ಯಾಲಯಗಳು ಮತ್ತು ನಗರಗಳಲ್ಲಂತೂ ಇಲ್ಲವೇ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ, ನಮ್ಮಗಳ ಅನುಭವ ಬೇರೇನನ್ನೋ ಹೇಳುತ್ತಿತ್ತು. ಮೇಲ್ಜಾತಿಯವರು ಜಾತಿಯನ್ನು ಪರಿಭಾವಿಸುವುದು ಬೇರೆ ರೀತಿ, ಅವರಿಗೆ ಅದು ಸಹಜವೂ ಆಗಿರಬಹುದು. ಜೆಎನ್‍ಯುನಲ್ಲಿ ಅದು ‘ಮೆರಿಟ್’ ರೂಪದಲ್ಲಿತ್ತು. ಈ ಮೆರಿಟ್ ಎಂಬ ಪರಿಕಲ್ಪನೆಯೇ ಜಾತಿವಾದಿಯಾದದ್ದು. ನಿಜಕ್ಕೂ ಆ ಪರಿಕಲ್ಪನೆಗೂ ವ್ಯಕ್ತಿಗಳ ಪ್ರತಿಭೆಗೂ ಸಂಬಂಧವೇ ಇಲ್ಲ. ಈ ಎಲ್ಲ ವಿಚಾರಗಳನ್ನೂ ವಿಶ್ಲೇಷಿಸಲು ಇನ್‍ಸೈಟ್ ಒಂದು ವೇದಿಕೆಯಾಗಿತ್ತು.

ಪ್ರ: ಮೆರಿಟ್ ಎಂಬ ಪರಿಕಲ್ಪನೆಯೇ ಜಾತಿವಾದದ ಮೇಲೆ ನಿಂತಿದೆ ಎಂದು ಹೇಳಿದಿರಿ. ಸ್ವಲ್ಪ ವಿವರಿಸುತ್ತೀರಾ?
ಅನೂಪ್: ನೋಡಿ, ಭಾರತದಲ್ಲಿ ಮೆರಿಟ್ ಎಂಬ ಪರಿಕಲ್ಪನೆ ಕೃತಕವಾಗಿ ಕಟ್ಟಲ್ಪಟ್ಟಿರುವುದು ಎಂದು ನಾನು ನಿಮಗೆ ಹೇಳಿದೆ. ಉದಾಹರಣೆಗೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಪರೀಕ್ಷೆಗಳೂ ಇಂಗ್ಲೀಷಿನಲ್ಲಿರುತ್ತವೆ. ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಕಲಿತ ವಿದ್ಯಾರ್ಥಿಗಳು ಅವುಗಳನ್ನು ಪಾಸು ಮಾಡಲು ಕಷ್ಟವಾಗುತ್ತದೆ. ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಬಹುಪಾಲು ಶಿಕ್ಷಣ ಮಾಧ್ಯಮ ಯಾವುದಾದರೂ ರಾಜ್ಯ ಭಾಷೆ ಆಗಿರುತ್ತದೆ ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಇಂತಹ ವಿ.ವಿಗಳಲ್ಲೇ ಕಲಿಯುತ್ತಿರುತ್ತಾರೆ.
ಕೋಚಿಂಗ್ ಕ್ಲಾಸುಗಳಿಗೆ ಹೋಗುವ ಶಕ್ತಿಯಿಲ್ಲದ ಅಥವಾ ಅವಕಾಶ ಇಲ್ಲದ ವಿದ್ಯಾರ್ಥಿಗಳಿಗೆ ಐಐಟಿ ಅಥವಾ ಐಐಎಮ್‍ಗಳೊಳಕ್ಕೆ ಪ್ರವೇಶಿಸುವ ಅವಕಾಶವೇ ಇರುವುದಿಲ್ಲ. ರಾಜ್ಯ ಬೋರ್ಡ್ ಪರೀಕ್ಷೆಗಳಲ್ಲಿ 80%ಗಿಂತ ಹೆಚ್ಚು ಅಂಕ ಪಡೆದರೂ ‘ನೀಟ್’ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಹೋದ ವಿದ್ಯಾರ್ಥಿಗಳ ಸಾಕಷ್ಟು ಉದಾಹರಣೆಯನ್ನು ನಾನು ಕೊಡಬಲ್ಲೆ. ಕೆಲವು ಪೋಷಕರು 9ನೇ ತರಗತಿಯಿಂದಲೇ ಮಕ್ಕಳನ್ನು ಕೋಚಿಂಗ್‍ಗೆ ಕಳಿಸಬಲ್ಲವರಾಗಿರುತ್ತಾರೆ. ಇದೊಂದು ಸಮಸ್ಯೆ ಎಂಬುದು ಎಲ್ಲರಿಗೂ ಗೊತ್ತು. ಶಿಕ್ಷಣ ತಜ್ಞರು, ಅಭಿಪ್ರಾಯ ರೂಪಿಸುವವರು, ಮೆರಿಟ್ ಮತ್ತು ಮೀಸಲಾತಿಯ ಬಗ್ಗೆ ಮಾತನಾಡುವವರು-ಎಲ್ಲರಿಗೂ; ಆದರೆ ಯಾರೂ ಇದನ್ನು ಪ್ರಶ್ನಿಸುವುದಿಲ್ಲ. ಅಂತಿಮವಾಗಿ ‘ಮೆರಿಟ್’ ಎಂಬುದರ ಪೂರ್ತಿ ಹೊರೆ ದಲಿತ ವಿದ್ಯಾರ್ಥಿಯ ಮೇಲೆ ಬೀಳುತ್ತದೆ.
ಹಾಗಾದರೆ ನಮ್ಮ ದೇಶದ ಕೇವಲ 15% ಜನರು ಮಾತ್ರ ಪ್ರತಿಭಾವಂತರು ಎಂದು ಹೇಳಬೇಕೆ? ಇದು ತಪ್ಪು; ಇದು ಜನಾಂಗೀಯವಾದ. ಉಳಿದ ದೊಡ್ಡ ಸಂಖ್ಯೆಯ ಜನಸಮುದಾಯ ಜನಾಂಗೀಯ ತಾರತಮ್ಯಕ್ಕೆ ಒಳಗಾಗುತ್ತದೆ. ಹಾಗಿದ್ದರೆ ಬಹುಸಂಖ್ಯಾತ ನೊಬೆಲ್ ಪ್ರಶಸ್ತಿ ವಿಜೇತರು ಬಿಳಿಯರು ಎಂಬ ಕಾರಣಕ್ಕೆ ನಾನು ಪ್ರಪಂಚದಲ್ಲಿ ಬಿಳಿ ಜನಾಂಗ ಮಾತ್ರವೇ ಅತ್ಯಪೂರ್ವ ಪ್ರತಿಭೆ ಉಳ್ಳವರು ಎಂದು ಹೇಳಲು ಸಾಧ್ಯವೇ? ಇಲ್ಲ. ಏಕೆಂದರೆ, ಅವರಿಗೆ ಉತ್ತಮ ಸವಲತ್ತುಗಳಿವೆ, ಅವರಿಗೆ ಒಳ್ಳೆಯ ವಿಶ್ವವಿದ್ಯಾಲಯಗಳಿವೆ, ಅವರು ತಮ್ಮ ಸಂಶೋಧಕರಿಗೆ ಉತ್ತಮ ಗೌರವಧನ ನೀಡುತ್ತಾರೆ; ಅಷ್ಟು ಮಾತ್ರವಲ್ಲ ನೊಬೆಲ್ ಗೆಲ್ಲುವ ಮಾನದಂಡಗಳನ್ನೂ ಅವರೇ ನಿರ್ಧರಿಸುತ್ತಾರೆ! ನೀವು ಅವರ ವಿಶ್ವವಿದ್ಯಾಲಯಗಳಿಂದ ಬಂದವರಲ್ಲವಾದರೆ ಸಾಕು, ನೀವು ನೊಬೆಲ್ ಗೆಲ್ಲುವ ಸಾಧ್ಯತೆ ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದ ಪಾಶ್ಚಾತ್ಯ ದೇಶಗಳ ಸಾಂಸ್ಕøತಿಕ ಪರಿಸರದಿಂದ ಹೊರತಾಗಿರುವ ಮೂರನೇ ಜಗತ್ತಿನ ದೇಶಗಳ ಪ್ರತಿಭಾವಂತರಿಗೆ ಇಂತಹ ಪ್ರಶಸ್ತಿಗಳು ದೊರೆಯುವ ಸಾಧ್ಯತೆ ಕಡಿಮೆ. ಇವೆಲ್ಲ ಅರ್ಥಮಾಡಿಕೊಳ್ಳಬೇಕಿರುವ ಬಹಳ ಸರಳವಾದ ಸಂಗತಿಗಳು………
ಉನ್ನತ ಶಿಕ್ಷಣ ಎಲ್ಲಾ ಕಡೆಯೂ ಕಲೀನರಿಗೆ ಸೀಮಿತಗೊಂಡಿದೆ. ಆದರೆ ಭಾರತದಲ್ಲಿರುವಂತೆ ಬೇರೆಲ್ಲೂ ಅದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಿಲ್ಲ; ಭಾರತದಲ್ಲಿ ಮಾತ್ರ ದಲಿತರು ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಹೀಗಾಗುತ್ತದೆ!

ಪ್ರ: ಈ ಎಲ್ಲಾ ಹಿನ್ನೆಲೆಯಲ್ಲಿ ಈಗ ನಡೆದಿರುವ ಮೀಸಲಾತಿ ವಿರೋಧಿ ವಾಗ್ವಾದದ ಕುರಿತು ನಿಮ್ಮ ಅನಿಸಿಕೆಯೇನು?
ಅನೂಪ್: ಪ್ರಜಾತಂತ್ರ ಎಂಬುದೇ ಸೂಕ್ತ ಪ್ರಾತಿನಿಧ್ಯವನ್ನು ಎಲ್ಲಾ ರಂಗಗಳಲ್ಲೂ ಖಾತ್ರಿಗೊಳಿಸುವುದರಲ್ಲಿದೆ. ಇಡೀ ದೇಶದ ಎಲ್ಲ ಜನಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಇರಲೇಬೇಕು. ‘ಈ ಸಂಸ್ಥೆಯನ್ನು ನಾನು ಕಟ್ಟಿದ್ದೇನೆ, ಅದಕ್ಕಾಗಿ ಇಲ್ಲಿ ಎಸ್‍ಸಿ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ’ ಎಂದು ಪ್ರಜಾತಂತ್ರದಲ್ಲಿ ಯಾರೂ ಹೇಳಲು ಸಾಧ್ಯವಿಲ್ಲ. ಪ್ರಜಾತಂತ್ರವು, ಎಲ್ಲಾ ಪ್ರಜೆಗಳಿಗೂ ಸಂಪನ್ಮೂಲದ ಮೇಲೆ ಅವರವರ ಪಾಲಿನ ಹಕ್ಕು ಇರಲೇಬೇಕು ಎಂಬ ಬಹಳ ಸರಳವಾದ ತತ್ವದ ಮೇಲೆ ನಿಂತಿದೆ. “ನಾವು ಕೇವಲ ಮೆರಿಟ್ ಮತ್ತು ಸ್ಫರ್ಧೆಯ ಬಗ್ಗೆ ಮಾತನಾಡೋಣ” ಎಂದು ಹೇಳುವುದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ತಪ್ಪು.

ಪ್ರ: ಆದರೆ, ಪರಿಸ್ಥಿತಿ ಹಾಗಿಲ್ಲವಲ್ಲ!?
ಅನೂಪ್: ಇಲ್ಲ….. ಇಲ್ಲಿ ನಾನು ಜಾತಿ ತಾರತಮ್ಯದ ಬಗ್ಗೆ ಮಾತನಾಡಿದರೆ, ನಾನು ಜಾತಿವಾದಿಯಾಗಿಬಿಡುತ್ತೇನೆ. ಮೇಲ್ಜಾತಿಗಳ ಬುದ್ಧಿಜೀವಿಗಳು ‘ನೀನು ಸಮಾಜವನ್ನು ಒಡೆಯುತ್ತಿದ್ದೀ’ ಎಂದು ನನಗೆ ಹೇಳುತ್ತಾರೆ. ಈ ಪರಿಕಲ್ಪನೆಯನ್ನೇ ಅಪರಾಧೀಕರಣಗೊಳಿಸಲಾಗಿದೆ. ನಾನು ನಮ್ಮ ಸಮಾಜದಲ್ಲಿ ಅಸ್ತಿತ್ವದಲ್ಲಿಲ್ಲದ ಯಾವುದೋ ವಿಚಾರ ಮಾತಾಡಿದ್ದೀನೇನೋ ಎಂದು ಬಿಂಬಿಸಲಾಗುತ್ತದೆ. ನಾನು ಪ್ರತಿಭಾವಂತನಲ್ಲದ್ದರಿಂದ, ನನಗೆ ಮೀಸಲಾತಿ ಬೇಕಿದೆ; ಆ ಕಾರಣಕ್ಕೆ ನಾನು ಈ ಎಲ್ಲ ಚರ್ಚೆ ಎತ್ತಿದ್ದೇನೆಂಬಂತೆ ನಡೆದುಕೊಳ್ಳುತ್ತಾರೆ. ಆದ್ದರಿಂದ ಇಂತಹ ಸ್ಥಿತಿಯಲ್ಲಿ ನ್ಯಾಯಕ್ಕಾಗಿ ಹೋರಾಡುವುದೂ ಕೂಡಾ ಕಷ್ಟವಾಗುತ್ತದೆ. ಈ ಸ್ಥಿತಿಯಲ್ಲಿ ಬದಲಾವಣೆ ತರಬೇಕಿರುವುದು ಮೇಲ್ಜಾತಿಗಳಿಂದ ಬಂದವರೇ, ಚೆಂಡು ಇರುವುದು ಅವರದ್ದೇ ಅಂಗಳದಲ್ಲಿ.

ಪ್ರ: ಇತ್ತೀಚಿನ ಒಂದು ಬೆಳವಣಿಗೆಯನ್ನೂ ಚರ್ಚಿಸುವುದಾದರೆ, ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಕೇಸರೀಕರಣದ ಪ್ರಕ್ರಿಯೆಯ ಬಗ್ಗೆ ಏನು ಹೇಳಲು ಬಯಸುತ್ತೀರಿ?
ಅನೂಪ್: ಇಡೀ ‘ಹಿಂದುತ್ವ’ದ ಪರಿಕಲ್ಪನೆಯೇ, ಜಾತಿ ಪದ್ಧತಿಯನ್ನು ಪ್ರಶ್ನಿಸುವುದರ ವಿರುದ್ಧ ಮೇಲ್ಜಾತಿಗಳ ರಕ್ಷಣಾತ್ಮಕ ಯುದ್ಧ. ಅವರು ಜಾತಿಯನ್ನು ಬಗೆಹರಿಸಲು ಬಯಸುವುದಿಲ್ಲವಾದ್ದರಿಂದ ಹೊರಗೆ ಒಂದು ಶತೃವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ, ಆ ‘ಶತೃ’ವೇ ಮುಸ್ಲಿಮರು. ಜಾತಿಯೆಂಬ ನಿಜವಾದ ಶತೃವನ್ನು ಪಕ್ಕಕ್ಕೆ ತಳ್ಳುವುದಕ್ಕಾಗಿಯೇ ಈ ತಂತ್ರ. ನಾನು ಹಿಂದುತ್ವ ಮತ್ತು ಜಾತಿವಾದವನ್ನು ಬೇರೆಬೇರೆ ಎಂದು ನೋಡುವುದಿಲ್ಲ. ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವ ಮೇಲ್ಜಾತಿಗಳ ತಂತ್ರ ಇದು.

ಪ್ರ: ಇದೆಲ್ಲವನ್ನೂ ನೋಡುವಾಗ, ನಳಂದಾ ಅಕಾಡೆಮಿಯ ಪ್ರಯತ್ನ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಜಾತಿಯನ್ನು ಪರಿಭಾವಿಸುವ ರೀತಿಯನ್ನು ಗಮನಾರ್ಹವಾಗಿ ಬದಲಿಸಬಲ್ಲದು ಎಂದು ನಿಮಗನಿಸುತ್ತದೆಯೇ?
ಅನೂಪ್: ನಾನು ಹಾಗೆ ಅಂದುಕೊಂಡಿಲ್ಲ. ಏಕೆಂದರೆ ನಾನು ಬಹಳ ಕಡಿಮೆ ಸಂಖ್ಯೆಯ ಸಣ್ಣ ಗುಂಪನ್ನಷ್ಟೇ ತಲುಪುತ್ತಿದ್ದೇನೆ. ನನಗೆ ನನ್ನ ಮಿತಿಗಳ ಅರಿವಿದೆ. ಆದರೆ ಇಂತಹ ಒಂದು ಮಾದರಿಯನ್ನು ನಾನು ಸೃಷ್ಟಿಸಲು ಬಯಸಿದ್ದೆ; ಅದು ಸಾಧ್ಯವಾಗಿದೆ. ಈ ಪ್ರಯತ್ನ ಹಲವು ಕೋನಗಳಿಂದ ಪ್ರತಿಧ್ವನಿಸುತ್ತದೆ ಎಂಬ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ. ತಿರುವನಂತಪುರದಲ್ಲಿ ನನ್ನ ಸ್ನೇಹಿತರೊಬ್ಬರು ಇಂತಹ ‘ತಕ್ಷಶಿಲಾ’ ಎಂಬ ಸಂಸ್ಥೆಯನ್ನು ಆರಂಭಿಸುತ್ತಿದ್ದಾರೆ!

ಪ್ರ: ನಳಂದಾ ಅಕಾಡೆಮಿಯ ಬಗ್ಗೆ ಸ್ವಲ್ಪ ಹೇಳಿ…ನೀವೊಬ್ಬರೇ ಏಕಾಂಗಿಯಾಗಿ ಹಲವಾರು ವಿಷಯಗಳನ್ನು ಅಲ್ಲಿ ಬೋಧಿಸುತ್ತಿದ್ದೀರಿ. ಅವರನ್ನು ಪ್ರೇರೇಪಿಸುತ್ತಿದ್ದೀರಿ. ಇವೆಲ್ಲವೂ ಹೇಗೆ ನಡೆಯುತ್ತದೆ? ಹಣಕಾಸಿನ ನೆರವಿಗೆ ಯಾವುದಾದರೂ ಎನ್‍ಜಿಓ ಜೊತೆ ಕೈಜೋಡಿಸಿದ್ದೀರಾ? ಅಲ್ಲಿ ವಿದ್ಯಾರ್ಥಿಗಳ ಆಯ್ಕೆ, ಅದರ ಕಾರ್ಯವೈಖರಿ…ಇತ್ಯಾದಿ.
ಅನೂಪ್: ನಳಂದಾ ಅಕಾಡೆಮಿಯನ್ನು ನಾನು ವಾರ್ಧಾದಲ್ಲಿ ಆರಂಭಿಸಲು ಕಾರಣ ಅಲ್ಲಿನ ಸಮುದಾಯ ಇದಕ್ಕೆ ಬೆಂಬಲಕ್ಕೆ ನಿಂತದ್ದು. ನಾನು ಒಂದು ವರ್ಷ ಕಾಲ ಅಲ್ಲಿನ ಅಂಬೇಡ್ಕರ್ ಸಮಾಜಕಾರ್ಯದ ಕಾಲೇಜಿನಲ್ಲಿ ಇಂಗ್ಲೀಷ್ ಕಲಿಸುತ್ತಿದ್ದೆ. ನಿಧಾನವಾಗಿ ಅಲ್ಲಿನವರಿಗೆ ನನ್ನ ಮೇಲೆ ನಂಬಿಕೆ ಬಂತು ಮತ್ತು ಪೂರ್ಣ ಬೆಂಬಲ ಸಿಕ್ಕಿತು.
ನಾನು ಯಾವುದೇ ಎನ್‍ಜಿಒಗಳ ಜೊತೆಯಲ್ಲೂ ಕೆಲಸ ಮಾಡುತ್ತಿಲ್ಲ. ಮೊದಲು 3 ವರ್ಷ ನಾನು ಅಂತಹ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಾಮಾಜಿಕ ಕೆಲಸವನ್ನೆಲ್ಲ ಜನರು ದುಡ್ಡಿಗಾಗಿ ಮಾಡುತ್ತಿದ್ದೇನೆಂದು ಭಾವಿಸುತ್ತಿದ್ದರು. ಆದರೆ ಈಗ ಹಾಗಿಲ್ಲ; ಸಮಾಜದಲ್ಲಿ ನನ್ನ ಕೆಲಸಕ್ಕೆ ಬಹಳ ಗೌರವ ಮತ್ತು ಪ್ರೋತ್ಸಾಹ ದೊರೆಯುತ್ತಿದೆ.
ನಾನು ವಿದ್ಯಾರ್ಥಿಗಳನ್ನು ಆರಿಸುವಾಗ ಅವರ ಹಿನ್ನೆಲೆ ನೋಡುತ್ತೇನೆ. ಅಂಚಿಗೆ ತಳ್ಳಲ್ಪಟ್ಟ ಹಿನ್ನೆಲೆಗಳ ವಿದ್ಯಾರ್ಥಿಗಳಿಗೆ ಆದ್ಯತೆ. ತಳಸಮುದಾಯಗಳಿಗೆ ಸೇರಿದ್ದರೂ ಆರ್ಥಿಕವಾಗಿ ಬಲಾಢ್ಯರಾಗಿದ್ದರೆ ಅವರಿಗೆ ಹೆಚ್ಚು ಆದ್ಯತೆ ಕೊಡುವುದಿಲ್ಲ. ನಾನೊಬ್ಬನೇ ಇಂಗ್ಲೀಷ್, ರಾಜ್ಯಶಾಸ್ತ್ರ, ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನ, ಗಣಿತ, ಸಂವಿಧಾನ, ಸಮಕಾಲೀನ ಸಂಗತಿಗಳು ಹಾಗೂ ತರ್ಕಶಾಸ್ತ್ರವನ್ನು ಕಲಿಸುತ್ತೇನೆ. ಜೊತೆಗೆ ಕೆಲವು ಗೆಳೆಯರನ್ನು ಕರೆದು ಅವರ ಅನುಭವಗಳನ್ನು ಹಂಚಿಕೊಳ್ಳುವಂತೆ ತಿಳಿಸುತ್ತೇನೆ. ಆ ಮೂಲಕ ನನ್ನ ವಿದ್ಯಾರ್ಥಿಗಳು ತಾವೂ ಕೂಡಾ ಹೀಗೆ ಮಹತ್ತಾದದ್ದನ್ನು ಸಾಧಿಸಬಹುದೆಂಬ ಆತ್ಮವಿಶ್ವಾಸ ಗಳಿಸಬೇಕು. ನಮ್ಮಲ್ಲಿ ಕಲಿಕೆ ಕೇವಲ ಒಂದು ಭಾಗವಷ್ಟೇ. ಮುಖ್ಯವಾದ ಸಂಗತಿಯೆಂದರೆ ಕನಸು ಕಾಣುವುದು ಮತ್ತು ಆ ಕನಸನ್ನು ನನಸಾಗಿಸಿಕೊಳ್ಳುವುದು. ನಮ್ಮಲ್ಲಿ ಅವರಿಗೆ ಆ ಪ್ರೇರಣೆ ಸಿಗಬೇಕೆಂಬುದಕ್ಕೆ ನಾನು ವಿಶೇಷ ಮಹತ್ವ ನೀಡುತ್ತೇನೆ.
ಪ್ರೇರಣೆ ಬಹಳ ಮುಖ್ಯ. ಈ ಮಕ್ಕಳಲ್ಲಿ ಹೆಚ್ಚಿನವರು ಸಂಕೀರ್ಣ ಹಿನ್ನೆಲೆಗಳಿಂದ ಬಂದಿರುತ್ತಾರೆ; ಅವರಿಗೆ ಶಿಕ್ಷಕರು ತಮ್ಮನ್ನು ಅರಿತಿದ್ದಾರೆ ಮತ್ತು ನೆರವಾಗುತ್ತಾರೆಂಬ ನಂಬಿಕೆ ಬಂದಾಕ್ಷಣ ಅವರ ಸಾಮಥ್ರ್ಯ ಗಣನೀಯವಾಗಿ ವೃದ್ಧಿಸುತ್ತದೆ. ನಾನು ಕಲಿಕೆಗಿಂತ ಮೊದಲು ಅವರ ಮಾನಸಿಕ ಸ್ವಾಸ್ಥ್ಯದ ಮೇಲೆ ಹೆಚ್ಚು ಕೆಲಸ ಮಾಡುತ್ತೇನೆ ಮತ್ತು ಅವರಲ್ಲಿ ವಿಶ್ವಾಸ ತುಂಬುವ ಪರಿಸರವನ್ನು ಸೃಷ್ಟಿಸಲು ಪ್ರಯತ್ನಿಸುತ್ತೇನೆ.
ಹೀಗೆ ಅಕಾಡೆಮಿಯ ಹೊರಗಿನ ಯುವಜನರನ್ನೂ ಪ್ರೇರೇಪಿಸುವುದಕ್ಕಾಗಿ, ಉನ್ನತ ಶಿಕ್ಷಣ ಸಂಸ್ಥೆಗಳೊಳಕ್ಕೆ ಆಯ್ಕೆಯಾಗಿರುವ ನಮ್ಮ ವಿದ್ಯಾರ್ಥಿಗಳು ಮೇಳಗಳನ್ನು ಆಯೋಜಿಸಿ ಅಲ್ಲಿನ ವಿದ್ಯಾರ್ಥಿಗಳಲ್ಲಿ ವಿಶ್ವಾಸ ತುಂಬುತ್ತಾರೆ. ಅಕಾಡೆಮಿಯಲ್ಲಿ ಶಿಸ್ತಿಗೆ ಆದ್ಯತೆ ಕೊಟ್ಟರೂ ಅದರಿಂದ ಹೊರಗೆ ನಾನು ಅವರಿಗೊಬ್ಬ ಹಿರಿಯಣ್ಣನಂತಿದ್ದೇನೆ. ನಳಂದಾ ಒಂದು ದೊಡ್ಡ ಚಂದದ ಖುಷಿಯ ಕುಟುಂಬದಂತಿದೆ.

ಪ್ರ: ಕೊನೆಯದಾಗಿ, ನಿಮ್ಮ ವಿದ್ಯಾರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತೀರಿ?
ಅನೂಪ್: ಎಲ್ಲರೂ ನನಗೆ ಇದೇ ಪ್ರಶ್ನೆ ಕೇಳುತ್ತಾರೆ; ನಾನು ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಅವರು ತಮ್ಮ ಕನಸುಗಳನ್ನು ಸಾಧಿಸಿಕೊಂಡರೆ ಅಷ್ಟೇ ಸಾಕು. ಅದರಾಚೆ ಅವರ ಕುರಿತ ನನ್ನ ಆಸೆ ಇಷ್ಟೇ; ಅವರೂ ಈ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಲಿ ಎಂಬುದು!
ನನ್ನ ವಿದ್ಯಾರ್ಥಿಗಳಿಗೆ ಇಷ್ಟನ್ನು ಮಾತ್ರ ಹೇಳುತ್ತೇನೆ; ಕೆಲವು ವರ್ಷಗಳ ನಂತರ ನನ್ನನ್ನು ಸಂಪರ್ಕಿಸಿ, ‘ನಾನು ಇಂಥದ್ದೆಲ್ಲ ಮಾಡಿದ್ದೇನೆ’ ಎಂದು ಹೇಳಿ ಸಾಕು; ಇದಕ್ಕಿಂತ ಹೆಚ್ಚು ಇನ್ನೇನನ್ನೂ ನಾನು ಬಯಸುವುದಿಲ್ಲ!.

ಸಂದರ್ಶಕರು
ಸಂಜನಾ ಶಶಿಧರ್
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ

ಹಾಗೂ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಇಂಟರ್ನ್

ಅನುವಾದ
ಮಲ್ಲಿಗೆ ಸಿರಿಮನೆ

LEAVE A REPLY

Please enter your comment!
Please enter your name here