`ಹಮ್‍ಕೋ ಹಮಾರಾ ಹೀ ಕುಚ್ ಸ್ಟ್ರಾಟಜಿಂಯಾ ಹೈ. ಜಸ್ಟ್ ವೆಯ್ಟ್ ಅಂಡ್ ಸೀ..!’


ಇಲ್ಲಿಗೆ ಎಂಟತ್ತು ತಿಂಗಳ ಹಿಂದೆ, ಚುನಾವಣಾ ತಯಾರಿ ಕುರಿತು ಬೆಂಗಳೂರಿನ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅಮಿತ್ ಶಾ ಉತ್ತರಿಸಿದ್ದ ಪರಿ ಇದು. ಶಾ ಉತ್ತರದಲ್ಲಿ ಅಂತದ್ದ್ಯಾವ ಅಚ್ಚರಿಯೂ ಇರಲಿಲ್ಲ. ಯಾಕೆಂದರೆ 2014ರ ನಂತರದಲ್ಲಿ ಬಿಜೆಪಿ ಗೆಲ್ಲುತ್ತಾ ಬಂದ ಪ್ರತಿ ಎಲೆಕ್ಷನ್ನಿನ ಪೋಸ್ಟ್‍ಮಾರ್ಟಂ ಮಾಡಿದ ಎಂತವರಿಗೇ ಆದರೂ ಬಿಜೆಪಿ ಜನರಾಜಕಾರಣಕ್ಕಿಂತ ಹೆಚ್ಚಾಗಿ ಇಂಥಾ ಸ್ಟ್ರಾಟಜಿಗಳನ್ನು ಹೆಣೆದೇ ಗೆದ್ದಿರುವುದು ಮನದಟ್ಟಾಗುತ್ತದೆ. ಇಲ್ಲದೇ ಹೋಗಿದ್ದರೆ ತ್ರಿಪುರಾದಂತಹ ಈಶಾನ್ಯ ನಾಡನ್ನು ಅನಾಮತ್ತು ಕಮ್ಯುನಿಸ್ಟರಿಂದ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಮಮತಾ ದೀದಿಯ ತೃಣಮೂಲ ಪಾರ್ಟಿಯಿಂದ ಘಟಾನುಘಟಿ ನಾಯಕರುಗಳನ್ನು ಪಕ್ಷಕ್ಕೆ ತುಂಬಿಕೊಂಡು ಫೀಲ್ಡಿಂಗ್ ಮಾಡಿದ್ದು, ಅಲ್ಲಿ ಬಿಜೆಪಿಯ ಗದ್ದುಗೆ ಹಾದಿಯನ್ನು ಸುಗಮಗೊಳಿಸಿತ್ತು.


ಅಂತದ್ದೇ ಸ್ಟ್ರಾಟಜಿಗಳನ್ನು ಕರ್ನಾಟಕದ ಮೇಲೂ ಪ್ರಯೋಗಿಸಲು ಬಂದಿದ್ದ ಅಮಿತ್ ಶಾ ಹೇಳಿಕೆ ಅಚ್ಚರಿ ಮೂಡಿಸುವುದಕ್ಕಿಂತ ಹೆಚ್ಚಾಗಿ ಆತಂಕ ಹುಟ್ಟುಹಾಕಿತ್ತು. ಯಾಕೆಂದ್ರೆ, ಬಿಜೆಪಿಯ ಮೊಟ್ಟಮೊದಲ ಸ್ಟ್ರಾಟಜಿಯೇ ಕೋಮು ರಾಜಕಾರಣ. ಮುಜಫರಾಬಾದ್ ಎಂಬ ಸಣ್ಣ ಕಿಡಿಹೊತ್ತಿಸಿ ಉತ್ತರ ಪ್ರದೇಶವನ್ನು ಇಡಿಯಾಗಿ ತನ್ನ ಜೋಳಿಗೆಗೆ ಇಳಿಸಿಕೊಂಡ ಬಿಜೆಪಿ ಎಲ್ಲೇ ಚುನಾವಣೆಗೆ ಸಜ್ಜಾದರು ಮೊದಲು ಪ್ರಯೋಗಿಸುವುದು ಅದೇ ವೆರಿ ಓಲ್ಡ್ ಧರ್ಮದ ಬ್ರಹ್ಮಾಸ್ತ್ರವನ್ನು. ಆದರೆ ಬಿಜೆಪಿಯ ಅಂತಹ ಪ್ರಯತ್ನ ಕರ್ನಾಟಕದ ಮಟ್ಟಿಗೆ ಸಕ್ಸಸ್ ಕಾಣಲೇ ಇಲ್ಲ. ಅಸಲಿಗೆ ಉತ್ತರ ಭಾರತದ ರಾಜನೀತಿಗೂ, ದಕ್ಷಿಣ ರಾಜ್ಯಗಳ ರಾಜಕಾರಣಕ್ಕೂ ಒಂದಷ್ಟು ಭಿನ್ನತೆಗಳಿವೆ. ಶಿಕ್ಷಣ, ಕುಶಲತೆ, ಉದ್ಯೋಗ, ಉತ್ಪಾದನೆ, ಆದಾಯ, ಆರೋಗ್ಯ ಹೀಗೆ ಸಕಲಷ್ಟು ತುಲನೆಗಳಲ್ಲಿ ಇಲ್ಲಿನ ರಾಜ್ಯಗಳು ಇಡೀ ದೇಶದಲ್ಲೇ ಮುಂಚೂಣಿಯಲ್ಲಿವೆ. ಬೇರೆಬೇರೆ ಕಾಲಘಟ್ಟಗಳಲ್ಲಿ ಈ ದ್ರಾವಿಡ ನೆಲಗಳಲ್ಲಿ ಪುಟಿದೆದ್ದ ಸಾಮಾಜಿಕ ಮತ್ತು ಸಾಂಸ್ಕøತಿಕ ಚಳವಳಿಗಳು ಸಹಾ ಈ ಜನರನ್ನು ವಿಚಾರವಂತರನ್ನಾಗಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಜನರ ಪ್ರಾದೇಶಿಕ ಮತ್ತು ಭಾಷಾ ಅಸ್ಮಿತೆಗಳು ಬಿಜೆಪಿಯ ಸಾಂಪ್ರದಾಯಿಕ ರಾಜನೀತಿಗೆ ಬಲುದೊಡ್ಡ ತೊಡಕು.
ಹಾಗಾಗಿ ದಕ್ಷಿಣ ಭಾರತದಲ್ಲಿ ಕೋಮು ಪೊಲಿಟಿಕ್ಸ್ ಅಷ್ಟು ಸುಲಭಕ್ಕೆ ಲಾಭದಾಯಕವಾಗದು. ಇದು ಮೋದಿ ಮತ್ತು ಅಮಿತ್ ಶಾ ಜೋಡಿಗೆ ಗೊತ್ತಿರದ ಸಂಗತಿಯೇನಲ್ಲ. ಹಾಗಿದ್ದೂ ಅಮಿತ್ ಶಾ ಬಲು ಕಾನ್ಫಿಡೆನ್ಸ್‍ನಿಂದ ಸ್ಟ್ರಾಟಜಿ`ಗಳ’ ಬಗ್ಗೆ ಉತ್ತರಿಸಿದ್ದನ್ನು ನೋಡಿದರೆ, ಅವರ ಮನಸ್ಸಿನಲ್ಲಿ ಕೋಮು ರಾಜಕಾರಣದ ಹೊರತಾಗಿಯೂ ಒಂದೆರಡು ಬೇರೆ ಮಹಾನ್ ಅಸ್ತ್ರಗಳು ಸುಳಿದಾಡಿದ್ದಿರಬಹುದು. ಅದರಲ್ಲಿ ಪ್ರಮುಖವಾದುದು ಕಪ್ಪುಹಣ ಕುಳಗಳ `ಹೈಜಾಕ್ ರಾಜಕಾರಣ’!
ಸಿಬಿಐ ಮತ್ತು ಐಟಿ ಭೂತ


ಬಿಜೆಪಿಗೆ ಇದೇನು ಹೊಸದಲ್ಲ. ಬ್ಲ್ಯಾಕ್‍ಮನಿ ವಿರುದ್ಧ ಹೋರಾಡುತ್ತೇನೆ ಅಂತ ಬಿಜೆಪಿ ಘೋಷಣೆ ಹೊರಡಿಸಿದ್ದೇ ಬ್ಲ್ಯಾಕ್‍ಮನಿವಾಲಾಗಳನ್ನು ಪಳಗಿಸುವ ತನ್ನ ಬ್ಲ್ಯಾಕ್ ಮ್ಯಾಜಿಕ್ ಅಜೆಂಡಾ ಇಟ್ಟುಕೊಂಡು ಅನ್ನೋದು ಈಗೀಗ ಬಯಲಾಗುತ್ತಿದೆ. ಸಿಬಿಐ ಮತ್ತು ಐಟಿ ಇಲಾಖೆಗಳನ್ನು ಕಾಂಗ್ರೆಸ್ ದುರ್ಬಳಕೆ ಮಾಡುತ್ತಿದೆ ಎಂಬುದಾಗಿ ಬೊಬ್ಬೆ ಹಾಕುತ್ತಾ ಅಧಿಕಾರಕ್ಕೇರಿದ ಬಿಜೆಪಿ, ಕಾಂಗ್ರೆಸ್‍ಗಿಂತಲೂ ಹೀನಾಯವಾಗಿ ಇವೆರಡು ಸಂಸ್ಥೆಗಳನ್ನು ತನ್ನ ಪೊಲಿಟಿಕಲ್ ದಾಳವಾಗಿಸಿಕೊಳ್ಳುತ್ತಾ ಬಂದಿದೆ. ದೂರದ ಉದಾಹರಣೆಗಳೇಕೆ, ಗುಜರಾತ್‍ನ ರಾಜ್ಯಸಭಾ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಶಾಸಕರನ್ನು ತಂದು ಗುಡ್ಡೆ ಹಾಕಿಕೊಂಡಿದ್ದ ಸಚಿವ ಡಿ.ಕೆ.ಶಿವಕುಮಾರ್‍ರನ್ನು ಬೆದರಿಸಲು ಬಿಜೆಪಿ ಬಳಸಿದ ಅಸ್ತ್ರ ಯಾವುದೆನ್ನುವುದನ್ನು ನೆನಪಿಸಿಕೊಂಡರೆ ಸಾಕು ವಾಸ್ತವ ಮನದಟ್ಟಾಗಿ ಬಿಡುತ್ತೆ.


ಇಂಥಾ ಸಾಕಷ್ಟು ನಿದರ್ಶನಗಳಿವೆ. ಪಶ್ಚಿಮ ಬಂಗಾಳದ ವೆಲ್‍ನೋನ್ ಪೊಲಿಟಿಷಿಯನ್ ಕಂ ಯುಪಿಎ ಸರ್ಕಾರದ ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಇದ್ದಕ್ಕಿದ್ದಂತೆ ತೃಣಮೂಲದ ದೀದಿಗೆ ಕೈಕೊಟ್ಟು ಬಿಜೆಪಿ ಸೇರಿದ್ದರ ಹಿಂದೆ ಮತ್ತ್ಯಾವ ಘನಂದಾರಿ ರಾಜಕಾರಣವೂ ಇರಲಿಲ್ಲ. ಶಾರದಾ ಚಿಟ್‍ಫಂಡ್ ಹಗರಣದಲ್ಲಿ ಥಳುಕು ಹಾಕಿಕೊಂಡಿದ್ದ ಈತ ಬಿಜೆಪಿ ಸೇರುವುದಕ್ಕೂ ಕೆಲ ದಿನ ಮೊದಲು ನಾರದಾ ನ್ಯೂಸ್ ಚಾನೆಲ್ ನಡೆಸಿದ್ದ ಸ್ಟಿಂಗ್ ಆಪರೇಷನ್‍ನಲ್ಲಿ ಸಿಕ್ಕಿಬಿದ್ದು ಸಿಬಿಐ ಕೇಸು ಹೇರಿಸಿಕೊಂಡಿದ್ದ. ಆ ತನಿಖೆಯೇನಾದರು ಸರಿಯಾದ ದಿಕ್ಕಿನಲ್ಲಿ ಸಾಗಿದ್ದರೆ ಆತ ಇಷ್ಟೊತ್ತಿಗಾಗಲೇ ಜೈಲು ಸೇರಬೇಕಿತ್ತು. ಆದರೆ ಹಾಗಾಗಲಿಲ್ಲ. ಬಿಜೆಪಿ ಸಖ್ಯವೇ ಇದಕ್ಕೆ ಕಾರಣ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಇತ್ತ ಹರ್ಯಾಣದ ಕಾಂಗ್ರೆಸ್ ರಾಜಕಾರಣಿ ರಾವ್ ಇಂದ್ರಜಿತ್ ಸಿಂಗ್ ಕೂಡಾ ಬಿಜೆಪಿ ಸೇರಿದ್ದು ತನ್ನ ಮೇಲಿದ್ದ ಕಾಂಡಿವಲ್ಲಿ ಭೂಹಗರಣದಿಂದ ಬಚಾವಾಗಲು ಎಂಬ ಮಾತು ಕೇಳಿಬರುತ್ತಿದೆ. ಭೂಪೇಂದ್ರ ಸಿಂಗ್ ಹೂಡಾರ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಿ ಹರ್ಯಾಣದಲ್ಲಿ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸುವಲ್ಲಿ ಇಂದ್ರಜಿತ್ ಸಿಂಗ್ ಫ್ಯಾಕ್ಟರ್ ಪರಿಣಾಮಕಾರಿ ಪಾತ್ರ ನಿಭಾಯಿಸಿತ್ತು. ಯಾಕೆಂದರೆ ಇಂದ್ರಜಿತ್ ತಂದೆ ರಾವ್ ಬಿರೇಂದರ್ ಸಿಂಗ್ ಹರ್ಯಾಣದ ಮುಖ್ಯಮಂತ್ರಿಯಾಗಿದ್ದಂತವರು. ಹಾಗಾಗಿ ಹರ್ಯಾಣದಲ್ಲಿ ಇಂದ್ರಜಿತ್ ಸಿಂಗ್‍ರ ರಾಜಕೀಯ ಪಾರುಪತ್ಯವಿದೆ. ಅದನ್ನು ಬಳಸಿಕೊಳ್ಳುವುದಕ್ಕೆಂದೇ ಬಿಜೆಪಿ ಕಾಂಡಿವಲ್ಲಿ ಕೇಸನ್ನು ಬಳಸಿಕೊಂಡಿತ್ತು ಎಂಬುದು ಒಂದು ವಾದ.


ಇತ್ತೀಚೆಗೆ ನಡೆದ ನಾಗಾಲ್ಯಾಂಡ್ ಚುನಾವಣೆಯಲ್ಲು ಕೇವಲ 2 ಸೀಟು ಗೆದ್ದ ಬಿಜೆಪಿ, ಮಿಕ್ಕೆಲ್ಲ ಕಾಂಗ್ರೆಸೇತರ ಶಾಸಕರನ್ನು ಗುಡ್ಡೆಹಾಕಿಕೊಂಡು ಸರ್ಕಾರ ರಚಿಸಿದ್ದು ಕೂಡಾ ಇದೇ ಸ್ಟ್ರಾಟಜಿ ಅಡಿಯಲ್ಲಿ. ನೈಸರ್ಗಿಕ ಸಂಪನ್ಮೂಲ ದಟ್ಟವಾಗಿರುವ ನಾಗಾಲ್ಯಾಂಡ್‍ನಲ್ಲಿ ಭ್ರಷ್ಟಾಚಾರಕ್ಕೂ ಕೊರತೆಯಿಲ್ಲ. ಯಾವ ಮಟ್ಟಕ್ಕೆಂದರೆ, 2016ರಲ್ಲಿ ಮಾಜಿ ಸಿಎಂ ಕಾಲಿಕೊ ಪುಲ್‍ರವರೇ ತಮ್ಮ ಶಾಸಕರ ಭ್ರಷ್ಟತೆ, ಹಣ ಮತ್ತು ಅಧಿಕಾರ ದಾಹಕ್ಕೆ ಬೇಸತ್ತು ಡೆತ್‍ನೋಟ್ ಬರೆದಿಟ್ಟು ಮುಖ್ಯಮಂತ್ರಿಗಳ ಅಧಿಕೃತ ಬಂಗಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಒಂದು ತಿಂಗಳು ಮುನ್ನವಷ್ಟೇ ಬಂಡಾಯವೆದ್ದಿದ್ದ ಕಾಂಗ್ರೆಸ್ ಶಾಸಕರಿಗೆ ಕುಮ್ಮಕ್ಕು ನೀಡಿದ್ದ ಬಿಜೆಪಿ ಸುಪ್ರೀಂ ಕೋರ್ಟ್ ಮೂಲಕ ಪುಲ್‍ರವರ ಸರ್ಕಾರ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಭ್ರಷ್ಟತೆಯನ್ನು ಆ ಪರಿ ಮೈಗೂಡಿಸಿಕೊಂಡಿರುವ ನಾಗಾಲ್ಯಾಂಡ್‍ನ ರಾಜಕಾರಣಿಗಳು ಏಕಾಏಕಿ ಮನಪರಿವರ್ತನೆಗೊಂಡು, ರಾಷ್ಟ್ರ ನಿರ್ಮಾಣದ ಸದ್ಭಾವನೆಯಿಂದ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂಬ ವಾದವನ್ನು ನಂಬಲು ಕಷ್ಟವಾಗುತ್ತೆ. ಅದರ ಬದಲಿಗೆ, ಅವರ ಬ್ಲ್ಯಾಕ್‍ಮನಿ ವೀಕ್ನೆಸ್ಸುಗಳಿಗೆ ಸಿಬಿಐ, ಐಟಿ ಭೂತ ತೋರಿಸಿ ಬೆದರಿಸಿ ತಮ್ಮ ಬುಟ್ಟಿಗೆ ಬೀಳಿಸಿಕೊಂಡಿದ್ದಾರೆ ಎಂಬ ವಿಶ್ಲೇಷಣೆಯೇ ಹೆಚ್ಚು ನಂಬಿಕಾರ್ಹ ಎನಿಸಿಕೊಳ್ಳುತ್ತದೆ.


ಇನ್ನು ಒಂದೇಒಂದು ಸೀಟೂ ಇರದ ತಮಿಳುನಾಡು ರಾಜಕಾರಣವನ್ನು ಪರೋಕ್ಷವಾಗಿ ಬಿಜೆಪಿ ನಿಯಂತ್ರಿಸುತ್ತಿರೋದೆ ಅಲ್ಲಿನ ರಾಜಕಾರಣಿಗಳ ಭ್ರಷ್ಟ ವೀಕ್ನೆಸ್ಸುಗಳನ್ನು ಬಂಡವಾಳ ಮಾಡಿಕೊಂಡು. ಅಲ್ಲಿ ಕಾರ್ತಿ ಚಿದಂಬರಂ ಮೇಲೆ ಐಟಿ ದಾಳಿ ನಡೆಸಿ ಕಾಂಗ್ರೆಸ್ಸನ್ನು ನಿರ್ನಾಮ ಮಾಡಿ, ಆನಂತರ ಪ್ರಾದೇಶಿಕ ಪಕ್ಷಗಳನ್ನು ಆಪೋಷನ ತೆಗೆದುಕೊಳ್ಳೋದು ಬಿಜೆಪಿ ದೂರಾಲೋಚನೆಯ ಇರಾದೆಯಾಗಿರುವಂತಿದೆ.
ಕರ್ನಾಟಕದ ಟಾರ್ಗೆಟ್‍ಗಳು
ಯಾವಾಗ ಕೋಮುದಳ್ಳುರಿಯ ರಾಜಕಾರಣ ಕರ್ನಾಟಕದಲ್ಲಿ ವರ್ಕ್‍ಔಟ್ ಆಗುವುದಿಲ್ಲ ಅನ್ನೋದು ಅಮಿತ್ ಶಾ-ಮೋದಿ ಜೋಡಿಗೆ ಖಾತ್ರಿಯಾಯ್ತೊ ಆಗ ಅವರು ಪ್ಲ್ಯಾನ್ ಬಿಯತ್ತ ಕಣ್ಣುಹಾಯಿಸಿದ್ದರು. ಐಟಿ ರೇಡಿಗೆ ಆಹಾರವಾಗಬಲ್ಲ ಕಾಂಗ್ರೆಸ್‍ನ ಬಿಗ್ ಮ್ಯಾಗ್ನೆಟ್‍ಗಳನ್ನು ಪಳಗಿಸುವ ಯತ್ನ ಅದಾಗಿತ್ತು. ಅಂದಹಾಗೆ ಈ ಪ್ರಯತ್ನ ನಿನ್ನೆ ಮೊನ್ನೆಯದಲ್ಲ, ಕಳೆದ ಎರಡು ಮೂರು ವರ್ಷಗಳಿಂದಲೇ ಅಂತವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಾ ವೇದಿಕೆ ಸಿದ್ದಗೊಳಿಸಿಕೊಳ್ಳಲಾಗಿತ್ತು. ಆ ಲಿಸ್ಟ್‍ನಲ್ಲಿ ಡಿ.ಕೆ.ಶಿವಕುಮಾರ್, ವಸತಿ ಸಚಿವ ಲೇಔಟ್ ಕೃಷ್ಣಪ್ಪ ಮತ್ತವರ ಮಗ ಪ್ರಿಯಾ ಕೃಷ್ಣ, ಶಾಮನೂರು ಶಿವಶಂಕರಪ್ಪ, ಅವರ ಮಗ ಎಸ್.ಎಸ್.ಮಲ್ಲಿಕಾರ್ಜುನ್, ಪ್ರಮೋಧ್ ಮಧ್ವರಾಜ್, ಎಂ.ಬಿ.ಪಾಟೀಲರಂತಹ ಘಟಾನುಘಟಿಗಳ ಹೆಸರುಗಳಿದ್ದವು.


ಡಿ.ಕೆ.ಶಿವಕುಮಾರ್ ಮೇಲಂತೂ ಗುಜರಾತ್ ರಾಜ್ಯಸಭಾ ಎಲೆಕ್ಷನ್ ವೇಳೆ ನೇರ ಅಖಾಡಕ್ಕಿಳಿದಿದ್ದ ಕೇಂದ್ರ ಸರ್ಕಾರದ ವರ್ತನೆ ಬಿಜೆಪಿಯ ಮೇಲೆ ಅಧಿಕಾರ ದುರ್ಬಳಕೆಯೆ ನೆಗೆಟಿವ್ ಪರಿಣಾಮ ಬೀರಿತ್ತು. ಅದೇನೆಲ್ಲ ಅಕ್ರಮ, ಹಗರಣಗಳಿದ್ದರೂ ಡಿಕೇಶಿ ದಾಢಸಿತನದಿಂದ ಐಟಿ ಪ್ರಕರಣವನ್ನು ನಿಭಾಯಿಸಿದ್ದು ಉಳಿದ ಕಾಂಗ್ರೆಸ್ಸಿಗರಲ್ಲೂ ಕೊಂಚ ಧೈರ್ಯ ತುಂಬಿದಂತೆ ಕಾಣುತ್ತೆ. ಹಾಗಾಗಿಯೇ ಇನ್ನೇನು ಬಿಜೆಪಿಗೆ ಸೇರಿಯೇ ಬಿಡುತ್ತಾರೆ ಎನ್ನಲಾಗಿದ್ದ ಪ್ರಮೋಧ್ ಮಧ್ವರಾಜ್ ಮತ್ತು ಸಚಿವ ಕೃಷ್ಣಪ್ಪ, ಅವರ ಮಗ ಪ್ರಿಯಾಕೃಷ್ಣ ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಗಳಾಗಿಯೇ ಕಣಕ್ಕಿಳಿಯುತ್ತಿದ್ದಾರೆ. ಭೂ ಹಗರಣಗಳನ್ನು ಸುತ್ತಿಕೊಂಡಿರುವ ಲೇಔಟ್ ಕೃಷ್ಣಪ್ಪರಂತೂ ಬಿಜೆಪಿ ಸೇರಿಯೇಬಿಟ್ಟರು ಎಂಬ ಗುಲ್ಲೆದ್ದಿತ್ತು. ಸದ್ಯದ ಮಟ್ಟಿಗೆ ಇಡೀ ರಾಜ್ಯದಲ್ಲಿ ಅತಿ ಶ್ರೀಮಂತ ಎಂಎಲ್‍ಎ ಅಂದರೆ ಅವರ ಪ್ರಿಯಾಕೃಷ್ಣ. ಆತನ ಘೋಷಿತ ಆಸ್ತಿಯ ಮೊತ್ತವೇ ಬರೋಬ್ಬರಿ 910 ಕೋಟಿ ರೂಪಾಯಿ. ಇನ್ನು ಅಘೋಷಿತ ಸ್ವತ್ತು ಎಷ್ಟಿರಬೇಡ. ಅಂತಹ ಸಾಮ್ರಾಜ್ಯವನ್ನು ಐಟಿ ದಾಳಿಯಿಂದ ರಕ್ಷಿಸಿಕೊಳ್ಳಬೇಕೆಂದರೆ ಅವರು ಬಿಜೆಪಿ ತಾಳಕ್ಕೆ ಕುಣಿಯಲೇಬೇಕಿತ್ತು.


ಇನ್ನು ಶಾಮನೂರು ಕುಟುಂಬದ ಕತೆ ಇದಕ್ಕಿಂತ ಭೀನ್ನವೇನಲ್ಲ. ಅರ್ಧ ದಾವಣಗೆರೆಯನ್ನೇ ತಮ್ಮ ಖಾಸಗಿ ಸ್ವತ್ತಾಗಿಸಿಕೊಂಡಿರುವ ಶಾಮನೂರು ಫ್ಯಾಮಿಲಿಗೆ 2016ರಿಂದಲೇ ಐಟಿ ರೇಡಿನ ರುಚಿ ತೋರಿಸಲಾಗುತ್ತಿದೆ. ಹಾಗಾಗಿ ಅವರೂ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರದಲ್ಲಿ ಖುದ್ದು ಯಡಿಯೂರಪ್ಪನವೇ `ಕೆಲವೇ ದಿನಗಳಲ್ಲಿ ಮಧ್ಯ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ಅಪ್ಪ ಮಕ್ಕಳು ಬಿಜೆಪಿ ಸೇರಿಲಿದ್ದಾರೆ’ ಎಂಬ `ಬ್ರೇಕಿಂಗ್ ನ್ಯೂಸ್’ ಕೊಟ್ಟಿದ್ದರು! ಆದರೆ ಅದು ನಿಜವಾಗಲಿಲ್ಲ.
ಬಿಜೆಪಿ ಪಾಲಿಗೆ ಅದ್ಯಾವ ಶನಿ ಹೆಗಲೇರಿದೆಯೋ ಗೊತ್ತಿಲ್ಲ. ಕರ್ನಾಟಕದಲ್ಲಿ ಅವರ ಹೆಣೆಯುವ ಪ್ರತಿ ತಂತ್ರವೂ ಉಲ್ಟಾ ಹೊಡೆಯುತ್ತಿದೆ. ಅದು ಮಹಾದಾಯಿ ವಿಚಾರ ಇರಬಹುದು, ನಾಡಧ್ವಜ, ಲಿಂಗಾಯತ ಧರ್ಮದ ಸಂಗತಿ ಇರಬಹುದು, ಹಿಂದೂತ್ವದ ರಾಜಕಾರಣ ಇರಬಹುದು. ಅದೇರೀತಿ ಈ ಬ್ಲ್ಯಾಕ್‍ಮನಿ ಹೈಜಾಕ್ ರಾಜಕಾರಣವೂ ಬಿಜೆಪಿಗೆ ವರ್ಕ್‍ಔಟ್ ಆದಂತಿಲ್ಲ. ಈ ಹಂತದಲ್ಲೇ ಅಂತದ್ದೊಂದು ನಿರ್ಧಾರಕ್ಕೆ ಬರುವುದೂ ತಪ್ಪಾದೀತು. ಯಾಕೆಂದರೆ, ಅವರನ್ನು ನೇರವಾಗಿ ಬಿಜೆಪಿ ಸೇರಿಸಿಕೊಳ್ಳಲು ಸಾಧ್ಯವಾಗದಿದ್ದರೂ ಕಾಂಗ್ರೆಸ್‍ನಲ್ಲೇ ಅವರು ನಿಷ್ಕ್ರಿಯರಾಗಿ ಉಳಿಯುವಂತೆ ಅಥವಾ ಬಿಜೆಪಿಗೆ ಪೂರಕವಾಗಿ ಕೆಲಸ ಮಾಡುವಂತೆ ಅವರನ್ನು ಟೇಮ್ ಮಾಡಲಾಗಿದೆ ಎಂಬ ವಾದಗಳೂ ಕೇಳಿಬರುತ್ತಿವೆ. ಸ್ವತಃ ರಾಹುಲ್‍ಗಾಂಧಿ ಮಂಡ್ಯಕ್ಕೆ ಬಂದಾಗಲು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಎಂ.ಕೃಷ್ಣಪ್ಪ ಅತ್ತ ತಲೆಹಾಕದಿದ್ದುದು, ತಮ್ಮದೇ ಪಕ್ಷಕ್ಕೆ ಮುಜುಗರ ಉಂಟುಮಾಡಿದ ಶಾಮನೂರು ಕುಟುಂಬ ಲಿಂಗಾಯತ ಧರ್ಮದ ವಿಚಾರದಲ್ಲಿ ಬಿಜೆಪಿಗೆ ಪೂರಕವಾಗುವಂತೆ ವರ್ತಿಸಿದ್ದೆಲ್ಲವೂ ಇಂತಹ ವಾದಗಳನ್ನು ಪುಷ್ಠೀಕರಿಸುತ್ತಿವೆ. ಅದೇನೆ ಇರಲಿ, ಇಡೀ ಆಪರೇಷನ್ ಬಿಜೆಪಿಗೆ ಇತರೆ ರಾಜ್ಯಗಳಲ್ಲಿ ವರ್ಕ್‍ಔಟ್ ಆದಂತೆ ಕರ್ನಾಟಕದಲ್ಲಿ ಕೈ ಹಿಡಿದಿಲ್ಲ ಅನ್ನೋದು ಮಾತ್ರ ಸತ್ಯ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here