Homeಮುಖಪುಟಕಾಂಗ್ರೆಸ್‍ಗೆ ಮತ ಹೆಚ್ಚಳ, ಆದರೆ ನಿರ್ಣಾಯಕ ಸೋಲು: ಕಾರಣಗಳೇನು?

ಕಾಂಗ್ರೆಸ್‍ಗೆ ಮತ ಹೆಚ್ಚಳ, ಆದರೆ ನಿರ್ಣಾಯಕ ಸೋಲು: ಕಾರಣಗಳೇನು?

- Advertisement -
- Advertisement -

ನೀಲಗಾರ |

ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಸೋತಿದೆ. ಕಾಂಗ್ರೆಸ್ ಗೆದ್ದಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಕಡೆ ಗೆಲುವಿನ ಅಂತರ ಬಹಳ ಕಡಿಮೆಯಿದೆ; ಕಾಂಗ್ರೆಸ್‍ನ ವಿರುದ್ಧ ಬಿಜೆಪಿ ಅಥವಾ ಜೆಡಿಎಸ್ ಗೆದ್ದಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಕಡೆ ಅಂತರ ದೊಡ್ಡದಿದೆ. ಕಾಂಗ್ರೆಸ್‍ನ ಘಟಾನುಘಟಿಗಳು ಹಲವರು ಸೋತಿದ್ದಾರೆ. ಇದರರ್ಥ, ಕ್ಷೇತ್ರವಾರು ನೋಡಿದರೆ ಈ ಚುನಾವಣೆಯ ಫಲಿತಾಂಶ ನಿರ್ಣಾಯಕವಾಗಿ ಕಾಂಗ್ರೆಸ್‍ನ ವಿರುದ್ಧ ನೀಡಿರುವ ಓಟು ಆಗಿದೆ. ಇದಕ್ಕೆ ಕಾರಣಗಳೇನೇ ಇರಬಹುದು; ನಮಗೆ ಒಪ್ಪಿಗೆ ಇಲ್ಲದಿರಬಹುದು. ಆದರೆ, ಕ್ಷೇತ್ರವಾರು ಮತಗಳ ಅಂತರವು ಇದನ್ನು ದೃಢೀಕರಿಸುತ್ತದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಬಿಜೆಪಿಗಿಂತ ಹೆಚ್ಚು ಮತಗಳು ಸಿಕ್ಕಿವೆ. 2013ರ ಚುನಾವಣೆಗಿಂತ ಈ ಸಾರಿ ಕಾಂಗ್ರೆಸ್‍ನ ಮತಪ್ರಮಾಣವೂ ಶೇ.36.6ರಿಂದ ಶೇ.38ಕ್ಕೆ ಹೆಚ್ಚಾಗಿದ್ದು, ಬಿಜೆಪಿಗಿಂತ ಶೇ.1.8ರಷ್ಟು ಅಧಿಕವಿದೆ. ಈ ವೈರುಧ್ಯಕ್ಕೆ ಕಾರಣವೇನು ಎಂಬುದನ್ನು ಕೂಲಂಕಷವಾಗಿ ವಿಶ್ಲೇಷಣೆಗೆ ಒಳಪಡಿಸುವ ಅಗತ್ಯವಿದೆ.

ಕಾಂಗ್ರೆಸ್‍ಗೆ ಆಡಳಿತ ವಿರೋಧಿ ಅಲೆ ಇರಲಿಲ್ಲವೆಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರ. ಮುಸ್ಲಿಂ ಸಮುದಾಯವು ಹಿಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಕಾಂಗ್ರೆಸ್‍ಗೆ ಓಟು ಹಾಕಿದೆ (ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯ ವಿವರಗಳು ಇದನ್ನು ಪುಷ್ಟೀಕರಿಸುತ್ತವೆ. ಅದರ ಪ್ರಕಾರ ಶೇ.80ರಷ್ಟು ಮುಸ್ಲಿಮರು ಕಾಂಗ್ರೆಸ್‍ಗೆ ಓಟು ಹಾಕಿದ್ದಾರೆ). ಇದಲ್ಲದೇ, ದಲಿತ ಹಿಂದುಳಿದ ಸಮುದಾಯಗಳ ಮತಗಳೂ ಹಿಂದಿಗಿಂತ ಹೆಚ್ಚು ಕ್ರೋಢೀಕೃತವಾಗದಿದ್ದರೆ ಈ ಮತಪ್ರಮಾಣದ ಹೆಚ್ಚಳ ಸಾಧ್ಯವಿರುತ್ತಿರಲಿಲ್ಲ. ಈ ಮೂರೂ ಸಹಾ ಸಿದ್ದರಾಮಯ್ಯನವರ ಸಾಧನೆಯೇ ಆಗಿದೆ. ಈ ರೀತಿಯ ಆಡಳಿತ ನೀತಿಗೆ ರಾಹುಲ್‍ಗಾಂಧಿಯವರ ನೇತೃತ್ವದ ಕಾಂಗ್ರೆಸ್‍ನ ಹೈಕಮ್ಯಾಂಡ್‍ನ ಬೆಂಬಲ ದಕ್ಕಿದ್ದಕ್ಕೂ ಕ್ರೆಡಿಟ್ ಸಲ್ಲಬೇಕು.

ಆದರೆ, ಕ್ಷೇತ್ರವಾರು ವಿಶ್ಲೇಷಣೆಯ ಪ್ರಕಾರ ನಿಸ್ಸಂದೇಹವಾಗಿ ಇದು ಕಾಂಗ್ರೆಸ್‍ನ ರಾಜಕಾರಣದ ವಿರುದ್ದ ಮತ್ತು ಸಿದ್ದರಾಮಯ್ಯನವರ ರಾಜಕಾರಣದ ವಿರುದ್ಧದ ಓಟು. ಇದಕ್ಕೆ ಪ್ರತಿಪಕ್ಷಗಳು, ಅದರಲ್ಲೂ ಬಿಜೆಪಿಯು ನಡೆಸಿದ ವ್ಯವಸ್ಥಿತ ಅಪಪ್ರಚಾರ ಮತ್ತು ಪ್ರಚಾರ ಒಂದು ಕಾರಣವಾದರೆ, ಇನ್ನೊಂದು ಕಾರಣವು ಈ ದೇಶದ ಸಾಮಾಜಿಕ ವಾಸ್ತವಕ್ಕೆ ಸಂಬಂಧಿಸಿದ್ದಾಗಿದೆ. ಈ ಸಾಮಾಜಿಕ ವಾಸ್ತವಕ್ಕೆ ಕನ್ನಡಿ ಹಿಡಿಯುವಂತೆ ಮೇಲ್ಜಾತಿಗಳು ಸಿದ್ದರಾಮಯ್ಯನವರ ಬಗ್ಗೆ ಹೊಂದಿದ್ದ ದೊಡ್ಡ ಮಟ್ಟದ ಅಸಹನೆಯು ಸ್ಪಷ್ಟವಾಗಿ ವ್ಯಕ್ತವಾಗಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರ ಸೋಲಿನ ಪ್ರಮಾಣ ಹಾಗೂ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳು ಗಣನೀಯವಾಗಿರುವ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಪ್ರಮಾಣವು ಇದನ್ನು ತೋರಿಸುತ್ತವೆ. ಹಾಸನ ಹಾಗೂ ರಾಮನಗರ ಜಿಲ್ಲೆಗಳಲ್ಲಿ ತಲಾ ಒಂದು ಕ್ಷೇತ್ರ ಬಿಟ್ಟರೆ ಎಲ್ಲಾ ಕ್ಷೇತ್ರಗಳಲ್ಲಿ, ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿರುವುದರಲ್ಲಿ ಈ ಅಂಶ ಬಹಳ ಕೆಲಸ ಮಾಡಿದೆ. ದಲಿತ ಸಮುದಾಯ ಮತ್ತು ಕುರುಬರು ಗಣನೀಯ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಂಗ್ರೆಸ್ ಉಳಿದುಕೊಂಡಿದ್ದರೆ, ಮಧ್ಯ ಕರ್ನಾಟಕದ ಮೇಲ್ಜಾತಿ ಪ್ರಧಾನ ಕ್ಷೇತ್ರಗಳಲ್ಲಿ ಬಿಜೆಪಿ ಸ್ವೀಪ್ ಮಾಡಿದೆ. ಸ್ಥಳೀಯ ನಿರ್ದಿಷ್ಟತೆಗಳ ಕಾರಣದಿಂದ ಅಲ್ಲಲ್ಲಿ ಅಪವಾದಗಳು ಇವೆಯಾದರೂ, ಮೇಲ್ಜಾತಿ ವಿರೋಧವು ಕಾಂಗ್ರೆಸ್‍ನ ವಿರುದ್ಧ ಕೆಲಸ ಮಾಡಿರುವುದರಲ್ಲಿ ಸಂದೇಹವಿಲ್ಲ.

ಇದೊಂದೇ ಈ ಚುನಾವಣೆಯನ್ನು ನಿರ್ಧರಿಸಿದ ಸಂಗತಿ ಎನ್ನಲಾಗುವುದಿಲ್ಲ. ಅದರಲ್ಲೂ 40+ ಸ್ಥಾನಗಳಿಂದ 104ಕ್ಕೆ ಬಿಜೆಪಿ ಏರಿರುವುದರಲ್ಲಿ ಹಲವಾರು ಸಂಗತಿಗಳು ಕೆಲಸ ಮಾಡಿವೆ. ವ್ಯವಸ್ಥಿತ ಚುನಾವಣಾ ಯಂತ್ರಾಂಗವನ್ನು ಹೊಂದಿರುವುದರಲ್ಲಿ ಮತ್ತು ಅದನ್ನು ಕೆಲಸಕ್ಕಿಳಿಸುವುದರಲ್ಲಿ ಅಮಿತ್‍ಷಾ ಮತ್ತು ಆರೆಸ್ಸೆಸ್ ಅಪಾಯಕಾರಿ ಪರಿಣಿತಿ ಸಾಧಿಸಿದ್ದಾರೆ. ಮಿಕ್ಕ ಪಕ್ಷಗಳಿನ್ನೂ ಚುನಾವಣೆಯ ಕುರಿತು ಆಲೋಚಿಸುವುದಕ್ಕೂ ಮುನ್ನವೇ ತನ್ನ ವೋಟ್‍ಬೇಸ್ ವಿಸ್ತರಿಸಿಕೊಳ್ಳಲು ವಿಸ್ತಾರಕ್‍ಗಳನ್ನು ಬಿಜೆಪಿ ಫೀಲ್ಡಿಗಿಳಿಸಿತ್ತು. ಸ್ಥಳೀಯ ಮುಖಂಡರು ಈ ವಿಸ್ತಾರದ ಕೆಲಸಕ್ಕೆ ಪೂರಕವಾದ ಕೆಲವು ಅನುಕೂಲಗಳನ್ನು ಮಾಡಿಕೊಡಬೇಕೆನ್ನುವುದನ್ನು ಬಿಟ್ಟರೆ, ಅದೊಂದು ಕೇಂದ್ರೀಕೃತವಾಗಿ ಆಯೋಜಿತವಾಗಿ, ವ್ಯವಸ್ಥಿತ ಉಸ್ತುವಾರಿಯಲ್ಲಿ ವಿಕೇಂದ್ರೀಕೃತವಾಗಿ ಜಾರಿಗೊಳ್ಳುವ ಪ್ರಚಾರವಾಗಿತ್ತು. 2016ರ ಕೊನೆಯ ಭಾಗದಲ್ಲೇ ಈ ಕೆಲಸ ಆರಂಭವಾಯಿತು. ನಿಮ್ಮ ಕೆಲಸಕ್ಕೆ ರಜೆ ಹಾಕಿ ಒಂದು ತಿಂಗಳು ಇದಕ್ಕೆ ಸಮಯ ಕೊಡಿ ಎಂದು ವಿವಿಧ ವೃತ್ತಿನಿರತರನ್ನು ಕೇಳಲಾಯಿತು. ಅವರ ಕೆಲಸ ಇದುವರೆಗೂ ಬಿಜೆಪಿಗೆ ನಿಷ್ಠರಾಗಿ ಓಟು ಹಾಕದವರನ್ನು ಕಮಿಟ್ ಮಾಡಿಸುವುದು. ಸ್ಥಳೀಯವಾಗಿ ಯಾವುದೇ ಅಭ್ಯರ್ಥಿಯಿದ್ದರೂ, ನೀವು ಓಟು ಹಾಕಬೇಕಾದದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಎಂದು ಮನವರಿಕೆ ಮಾಡಿಕೊಡುವುದು. ಗೆಲ್ಲಲೇಬೇಕೆಂದು ನಿರ್ಧರಿಸಿದ ಕ್ಷೇತ್ರಗಳಲ್ಲಿ ಈ ಕೆಲಸವನ್ನು ಸ್ಥಳೀಯ ಕಾರ್ಯಕರ್ತರು ಚುನಾವಣೆಯ ದಿನದವರೆಗೆ ಮುಂದುವರೆಸಿದ್ದಾರೆ.

ಬೂತ್ ಸಮಿತಿ ಎಂಬ ಪರಿಕಲ್ಪನೆಯನ್ನು ಬಿಜೆಪಿ ಸಂಪೂರ್ಣವಾಗಿ ಜಾರಿ ಮಾಡಿದ ನಂತರ ಇತರರು ಅದನ್ನು ಅರ್ಧಂಬರ್ಧ ಜಾರಿ ಮಾಡಲು ಹೋಗಿ, ಅದೂ ಸಾಧ್ಯವಾಗದೇ ಕೈ ಚೆಲ್ಲಿದ್ದಾರೆ. ಆದರೆ, ಬಿಜೆಪಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮತದಾರರ ಪಟ್ಟಿಯ ಒಂದೊಂದು ಪುಟಕ್ಕೆ ಒಬ್ಬೊಬ್ಬ ‘ಪೇಜ್ ಪ್ರಮುಖ್’ನನ್ನು ನಿಯೋಜಿಸಿತ್ತು! ಎಲ್ಲಿ ತಮಗೆ ಸ್ಥಳೀಯವಾಗಿ ಅಂತಹ ಸಂಘಟನೆಯೂ ಇಲ್ಲ, ಎಂಎಲ್‍ಎ ಹಂತಕ್ಕೆ ಹೋಗಬಹುದಾದ ಮಾಸ್ ಲೀಡರ್ ಸಹಾ ಇಲ್ಲ ಎನಿಸಿತೋ, ಅಲ್ಲಿ ಬೇರೆ ಪಕ್ಷದ ಎಂಎಲ್‍ಎ ಅಥವಾ ಎಂಎಲ್‍ಎ ಅಭ್ಯರ್ಥಿಯನ್ನು ಕೊಳ್ಳಲು ಯತ್ನಿಸಿತು. ಒಂದು ಮಾಹಿತಿಯ ಪ್ರಕಾರ, ಇಂದು ಒಂದೂ ಕ್ಷೇತ್ರವನ್ನು ಗೆಲ್ಲದ (ಅಥವಾ ಎರಡನೆಯ ಸ್ಥಾನಕ್ಕೂ ಬಂದಿರದ) ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ಗೆದ್ದಿರುವ ಐದು ಅಭ್ಯರ್ಥಿಗಳ ಪೈಕಿ ನಾಲ್ಕು ಜನರನ್ನು 2 ವರ್ಷಗಳ ಕೆಳಗೆ ಬಿಜೆಪಿಯು ಸಂಪರ್ಕಿಸಿತ್ತು. ನಿಧಾನಕ್ಕೆ ಬಿಜೆಪಿಯ ಆತ್ಮವಿಶ್ವಾಸ ಕುಸಿಯುತ್ತಾ ಬಂದ ಮತ್ತು ಕಾಂಗ್ರೆಸ್‍ನ ಆತ್ಮವಿಶ್ವಾಸ ಹೆಚ್ಚುತ್ತಾ ಬಂದ ಸಂದರ್ಭ ಆದಾಗಿತ್ತು. ಹಾಗಾಗಿ ಯಾರೊಬ್ಬರೂ ಪಕ್ಷ ಬದಲಿಸಲಿಲ್ಲ.

ಇದಲ್ಲದೇ ಜಾತಿ ಹಾಗೂ ಧರ್ಮವನ್ನು ವಿಷಪೂರಿತವಾಗಿ ಬಳಸಲು ಎಂತಹದಕ್ಕೂ ಹಿಂಜರಿಯದ ರುತ್‍ಲೆಸ್ ಮನೋಭಾವ ಬಿಜೆಪಿಯದ್ದು. ಕೂತ ಕಡೆಯಲ್ಲಿ ಸುಳ್ಳನ್ನು ಸೃಷ್ಟಿಸುವ ಅವರ ಫ್ಯಾಕ್ಟರಿಗಳು ಜನರ ಮಧ್ಯೆ ಹೊಸ ಕಾಮನ್‍ಸೆನ್ಸ್‍ಅನ್ನು ರೂಪಿಸಿಬಿಟ್ಟಿವೆ. ಮೀಸಲಾತಿಯ ಕುರಿತಾಗಿ, ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುರಿಯಲಾದ ಪೋಸ್ಟ್‍ಗಳು ಮೂಡಿಸಿದ ಅಸಹನೆ ಮೇಲ್ಜಾತಿಗಳ ಮಧ್ಯೆ ವ್ಯಾಪಕವಾಗಿತ್ತು. ದಲಿತ ಮತ್ತು ಹಿಂದುಳಿದ ಮಕ್ಕಳಿಗೆ ಅಂಗನವಾಡಿಗಳಲ್ಲಿ ಹೆಚ್ಚುವರಿ ಮೊಟ್ಟೆ ಕೊಡಲಾಗುತ್ತದೆಂಬ ಸುಳ್ಳನ್ನು ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿಯಬಿಡಲಾಯಿತು. ‘ಇದ್ಯಾಕೋ ಓವರ್ರು’ ಎಂದು ಆ ರೀತಿ ಅಸಹನೆ ಇಲ್ಲದವರೂ ಹೇಳಲಾರಂಭಿಸಿದ ನಂತರ, ಸರ್ಕಾರದ ಕಡೆಯಿಂದ ‘ಅಂತಹ ಯಾವ ಆದೇಶವೂ ಸರ್ಕಾರದಿಂದ ಹೊರಟಿಲ್ಲ’ ಎಂಬ ಹೇಳಿಕೆ ಯಾರಿಗೂ ಕಾಣದಂತೆ ಬಂದು ಹೋಯಿತು.

ಡಿ.ಕೆ.ರವಿ ಸಾವಿನ ಸಂದರ್ಭದಲ್ಲಿ ಅದನ್ನೂ ಜಾತಿಗೆ ತಳುಕು ಹಾಕಿ ಪ್ರತಿಭಟನೆಗಳನ್ನು ಆಯೋಜಿಸಲಾಯಿತು. ಕೆ.ಜೆ.ಜಾರ್ಜ್ ಮತ್ತು ರೋಷನ್‍ಬೇಗ್‍ರ ವಿರುದ್ಧದ ಪ್ರತಿ ನಡೆಯೂ ಧಾರ್ಮಿಕ ಕಾರಣಗಳಿಗಾಗಿ ನಡೆಯಿತು. ಬದುಕಿದ್ದವರ ಹೆಸರನ್ನೂ ಸೇರಿಸಿ, ‘ಸತ್ತ ಹಿಂದೂ ಕಾರ್ಯಕರ್ತರ’ ಪಟ್ಟಿ ತಯಾರಿಸಲಾಯಿತು. ಇಂತಹ ನೂರಾರು ದೊಡ್ಡ ಮತ್ತು ಲಕ್ಷಾಂತರ ಸಣ್ಣಪುಟ್ಟ ಸುಳ್ಳುಗಳನ್ನು ಕಳೆದ 5 ವರ್ಷದುದ್ದಕ್ಕೂ ಹರಿಯಬಿಡಲಾಯಿತು. ಜಾತಿ ಧರ್ಮ ಒಡೆಯುವುದನ್ನೇ ಸಿದ್ಧಾಂತ ಮತ್ತು ಕಸುಬು ಆಗಿಸಿಕೊಂಡವರು; ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರು ಜಾತಿ ಧರ್ಮ ಒಡೆಯುವವರು ಎಂದು ಬಿಂಬಿಸುವಲ್ಲಿ ಯಶಸ್ವಿಯಾದದ್ದು ವಿಪರ್ಯಾಸ. ಇದನ್ನು ಸೋಷಿಯಲ್ ಮೀಡಿಯಾ ಮಾತ್ರವಲ್ಲದೇ, ಮುಖ್ಯವಾಹಿನಿ ಮಾಧ್ಯಮಗಳೂ ಸತತವಾಗಿ ಬಿತ್ತರಿಸಿದವು. ವಾಹಿನಿಯ ಆಂಕರ್‍ಗಳು ಬಿಜೆಪಿಯ ವಕ್ತಾರರಿಗಿಂತ ಹೆಚ್ಚು ಆಕ್ರಮಣಕಾರಿಯಾಗಿ ಕಾಂಗ್ರೆಸ್‍ನ ವಿರುದ್ಧ, ಅದರಲ್ಲೂ ಸಿದ್ದರಾಮಯ್ಯನವರ ವಿರುದ್ಧ ಮುಗಿಬಿದ್ದಿದ್ದರು.

ದಲಿತ ಮುಖ್ಯಮಂತ್ರಿ ವಿಚಾರವನ್ನೂ ಸಹಾ ಸಿದ್ದರಾಮಯ್ಯನವರ ಕೈ ಮೇಲಾದಂತೆ ಕಂಡು ಬಂದ ಸಂದರ್ಭದಲ್ಲೆಲ್ಲಾ ಮಾಧ್ಯಮಗಳು ಮುಂದೆ ತಂದು ನಿಲ್ಲಿಸಲಾಗುತ್ತಿತ್ತು. ಚುನಾವಣೆಯ ನಂತರ ಫಲಿತಾಂಶಕ್ಕೆ ಮುಂಚೆ ಸಿದ್ದರಾಮಯ್ಯನವರನ್ನು ಸುದ್ದಿಗಾರರೊಬ್ಬರು ಮಾತಾಡಿಸಿದರು. ‘ದಲಿತ ಮುಖ್ಯಮಂತ್ರಿ ವಿಚಾರ ಬಂದರೆ ನೀವದನ್ನು ವಿರೋಧಿಸುತ್ತೀರಾ?’ ಎಂದು ಕೇಳಿದರು. ‘ಹೈಕಮ್ಯಾಂಡ್ ಆ ರೀತಿ ತೀರ್ಮಾನಿಸಿದರೆ ನನ್ನದೇನೂ ತಕರಾರಿಲ್ಲ’ ಎಂದು ಸಿದ್ದರಾಮಯ್ಯ ಉತ್ತರಿಸಿದರು. ಇದಕ್ಕಿಂತ ಭಿನ್ನವಾದ ಉತ್ತರವನ್ನು ಕೊಡಲು ಸಾಧ್ಯವೇ ಇರಲಿಲ್ಲ. ಈ ಮಾಮೂಲಿ ಸಂಭಾಷಣೆಯನ್ನೇ ಮುಂದಿಟ್ಟುಕೊಂಡು ಸತತ ಎರಡು ದಿನಗಳ ಕಾಲ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಲಾಯಿತು. ಆ ಚರ್ಚೆಯಲ್ಲೂ ಸಿದ್ದರಾಮಯ್ಯನವರನ್ನು ಹಣಿಯಲೇ ವಿವಿಧ ಬಗೆಯ ವಾದಗಳನ್ನು ಸೃಷ್ಟಿಸಲಾಗುತ್ತಿತ್ತು.

ನರೇಂದ್ರ ಮೋದಿಯ ಎಲ್ಲಾ ರ್ಯಾಲಿಗಳ ಹಿಂದೆ-ಮುಂದೆ ಪ್ಯಾಕೇಜ್ ಕಾರ್ಯಕ್ರಮಗಳನ್ನು ಮಾಡುವುದಲ್ಲದೇ, ಕಾರ್ಯಕ್ರಮಗಳ ಸಂಪೂರ್ಣ ಲೈವ್‍ಅನ್ನು ಕನ್ನಡದ ಬಹುತೇಕ ಚಾನೆಲ್‍ಗಳು ನೀಡುತ್ತಿದ್ದವು. ಚಾನೆಲ್‍ಗಳು, ಪತ್ರಿಕೆಗಳಲ್ಲಿ ಮಾತ್ರವಲ್ಲದೇ ವಿವಿಧ ಮೊಬೈಲ್ ಆಪ್‍ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅತಿಯೆನಿಸುವಷ್ಟು ಜಾಹೀರಾತನ್ನು ನೀಡಿದ್ದು ಬಿಜೆಪಿ. ಕಾಂಗ್ರೆಸ್‍ನಂತಹ ಸ್ಥಳೀಯವಾಗಿ ಅಧಿಕಾರದಲ್ಲಿರುವ ದೊಡ್ಡ ಪಕ್ಷದ ಕನಿಷ್ಠ ಮೂರು ಪಟ್ಟು ಜಾಹೀರಾತುಗಳನ್ನು ಬಿಜೆಪಿ ನೀಡಿತ್ತು. ಅದಕ್ಕೆ ತಕ್ಕಂತೆ ಯಥಾನುಶಕ್ತಿ ಸೇವೆಯನ್ನು ಮಾಧ್ಯಮಗಳೂ ಸಲ್ಲಿಸಿದವು. ಇಲ್ಲದ ನರೇಂದ್ರ ಮೋದಿ ಹವಾವನ್ನು ಸೃಷ್ಟಿಸಲು ಈ ಮಾಧ್ಯಮಗಳು ಕಡೆಯ 15 ದಿನಗಳಲ್ಲಿ ಇನ್ನಿಲ್ಲದಂತೆ ದುಡಿದವು.

ಇವೆಲ್ಲದರ ಆಚೆಗೆ ಸಾವಿರಾರು ಕೋಟಿ ರೂ.ಗಳನ್ನು ತಂದು ಸುರಿಯುವುದು ಮತ್ತು ಕಾಂಗ್ರೆಸ್‍ನವರಿಗೆ ಹಣವಿಲ್ಲದಂತೆ ಮಾಡಲು ಐಟಿ/ಇಡಿ ರೈಡ್‍ಗಳನ್ನು ನಡೆಸುವುದು ಎಗ್ಗಿಲ್ಲದೇ ನಡೆಯಿತು. ಚುನಾವಣೆಯಲ್ಲಿ ಹಣ ಕೊಟ್ಟು ಮತದಾರರನ್ನೂ, ನಾಯಕರುಗಳನ್ನೂ ಕೊಳ್ಳುವುದು ಅನೈತಿಕವಾದದ್ದು ಮತ್ತು ಅದನ್ನು ತಡೆಯಲು ಇಂತಹ ರೈಡ್‍ಗಳನ್ನು ನಡೆಸುವುದು ಸರಿಯಾದದ್ದು. ಆದರೆ, ಸೆಲೆಕ್ಟಿವ್ ಆಗಿ ಕಾಂಗ್ರೆಸ್‍ನ ಹಣದ ಥೈಲಿಗಳ ಮೇಲೆ ವಿಶೇಷ ನಿಗಾ ಇಟ್ಟು ನಡೆಸಿದ ರೈಡ್‍ಗಳ ಕಾರಣದಿಂದ ಕಡೆಯ ಸಂದರ್ಭದ ‘ಖರ್ಚಿಗೆ’ ಹಣ ಇಲ್ಲದಂತೆ ಆಗಿ ಕಾಂಗ್ರೆಸ್ ಅಭ್ಯರ್ಥಿಗಳು ಒದ್ದಾಡಿದರೆಂಬ ಸುದ್ದಿ ರಾಜ್ಯದ ಹಲವು ಭಾಗಗಳಲ್ಲಿ ಕೇಳಿ ಬಂದಿತು.

ಮೇಲೆ ಹೇಳಲಾದ ಇಷ್ಟು ಅಂಶಗಳ ಹೊರತಾಗಿಯೂ – ಅಮಿತ್ ಷಾರ ಪ್ರಚಂಡ ಅನೈತಿಕ ತಂತ್ರ, ಆರೆಸ್ಸೆಸ್ ಜೊತೆಗೆ ಹೆಣೆಯಲಾದ ಸಂಘಟನಾ ಯಂತ್ರ ಮತ್ತು ಕೃತಕವಾಗಿ ಸೃಷ್ಟಿಸಲಾದ ನರೇಂದ್ರ ಮೋದಿಯ ಹವಾ ಮತ್ತು ಮಾಧ್ಯಮ ಬಲ- ಗಳಿಸಿದ್ದು 104 ಸ್ಥಾನ ಮತ್ತು ಶೇ.36.2 ಮತಪ್ರಮಾಣ ಮಾತ್ರ. ಇಡೀ ಮಾಧ್ಯಮಗಳು, ಬಿಜೆಪಿಯ ಪರಿವಾರವು ತನ್ನ ಹಣ ಹಾಗೂ ಕಾರ್ಯಕರ್ತರ ಬಲವನ್ನು ಇಷ್ಟು ವ್ಯವಸ್ಥಿತವಾಗಿ ಕಾರ್ಯಾಚರಣೆಗೆ ಇಳಿಸಿದರೂ ರಾಜ್ಯದ ಜನ ಬಿಜೆಪಿಗೆ ಸಂಪೂರ್ಣ ಬಹುಮತ ನೀಡಲಿಲ್ಲವೆಂತಲೂ ಹೇಳಬಹುದು.

ಇವೆಲ್ಲವನ್ನೂ ಸರಿಗಟ್ಟುವಂತಹ ಸಂಘಟನಾ ಶಕ್ತಿ ಇಲ್ಲದಿರುವುದು ಕಾಂಗ್ರೆಸ್‍ನ ದೊಡ್ಡ ದೌರ್ಬಲ್ಯವಾಗಿತ್ತು. ತನ್ನ ವಿರುದ್ಧ ನಡೆದ ಅಪಪ್ರಚಾರದ ಕಾರ್ಯಾಚರಣೆಯನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎಂಬುದು ಒಂದು ಕಡೆಯಾದರೆ, ತನ್ನ ಸಾಧನೆಯನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸುವಲ್ಲೂ ಕಾಂಗ್ರೆಸ್ ವಿಫಲವಾಯಿತು.

ಮೊದಲನೆಯದಾಗಿ, ಸಿದ್ದರಾಮಯ್ಯನವರು ಹಲವು ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ತಂದರೂ, ಅವು ತಳಮಟ್ಟದಲ್ಲಿ ಜನರಿಗೆ ತಲುಪಲು ಬೇಕಾದಂತಹ ಬಿಗಿ ಆಡಳಿತ ಇರಲಿಲ್ಲ. ಅಧಿಕಾರಶಾಹಿಯು ಸಹಕಾರ ನೀಡಲಿಲ್ಲವೆಂಬ ಆರೋಪ ಮಾಡಿ ಕೈ ತೊಳೆದುಕೊಳ್ಳಲಾಗುವುದಿಲ್ಲ. ಏಕೆಂದರೆ, ಸ್ವತಃ ಸಿದ್ದರಾಮಯ್ಯನವರು ತಮ್ಮ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಷ್ಟರ ಮಟ್ಟಿಗೆ ಆಡಳಿತದ ಬಿಗಿ ಕಾಪಾಡಿಕೊಳ್ಳಬಹುದಿತ್ತೋ ಅದನ್ನೂ ಮಾಡಲಿಲ್ಲ. ಹೀಗಾಗಿ ಜನಪರ ಕಾರ್ಯಕ್ರಮಗಳನ್ನು ತಂದಿದ್ದೇವೆ ಎಂದು ಹೇಳಿಕೊಂಡಾಗಲೂ ಜನರು ಅದರ ಮೇಲೆ ವಿಶ್ವಾಸವಿಡದಿರಲು ಕಾರಣವಿತ್ತು. ಎರಡನೆಯದಾಗಿ, ಬಿಜೆಪಿಯನ್ನು ಎದುರಿಸುವಲ್ಲಿ ಮತ್ತು ಸಾಧನೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಒಂದು ಟೀಮ್‍ನಂತೆ ಕಾಂಗ್ರೆಸ್ ಕೆಲಸ ಮಾಡಲೇ ಇಲ್ಲ.

ಇದೊಂದು ರೀತಿಯಲ್ಲಿ ಸಿದ್ದರಾಮಯ್ಯನವರ ವೈಯಕ್ತಿಕ ಚುನಾವಣೆಯಂತೆ ಭಾವಿಸಲಾಯಿತು. ಆ ರೀತಿ ಆಗುವಲ್ಲಿ ಸಿದ್ದರಾಮಯ್ಯನವರ ಸಮಸ್ಯೆಯೂ ಇತ್ತು, ಕಾಂಗ್ರೆಸ್‍ನ ಸಮಸ್ಯೆಯೂ ಇತ್ತು. ಜೊತೆಗೆ ಸಿದ್ದರಾಮಯ್ಯನವರ ಬ್ರಾಂಡ್‍ಅನ್ನು ಬಿಂಬಿಸಿ, ಇದನ್ನು ಸಾಧಿಸಬಹುದೆಂದು ಭಾವಿಸಲಾದ ಕಾರ್ಯಯೋಜನೆಯಲ್ಲೂ ಸಮಸ್ಯೆ ಇತ್ತು.

ನಿಸ್ಸಂದೇಹವಾಗಿ ಸಿದ್ದರಾಮಯ್ಯನವರು ಮೋದಿಗೆದುರು ನಿಲ್ಲಬಲ್ಲ ಜನನಾಯಕನಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದವರೇ. ಅವರ ಆಡಳಿತ, ಸೈದ್ಧಾಂತಿಕ ನಿಲುವು, ಜನಪರ ಕಾಳಜಿ ಇವೆಲ್ಲದರಲ್ಲಿ ಅಂತಹ ಇನ್ನೊಬ್ಬ ನಾಯಕ ಕರ್ನಾಟಕದಲ್ಲಂತೂ ಇಲ್ಲ. ವಿವಿಧ ಮಾನದಂಡಗಳನ್ನು ಇಟ್ಟುಕೊಂಡು ನೋಡಿದರೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪರಿಬ್ಬರೂ ಸಿದ್ದರಾಮಯ್ಯರಿಗೆ ಸಾಟಿಯೇ ಅಲ್ಲ ಎಂಬುದನ್ನು ಹಿಂದಿನ ಸಂಚಿಕೆಯೊಂದರಲ್ಲಿ ವಿವರಿಸಲಾಗಿದೆ. ಆದರೆ, ಕರ್ನಾಟಕದ ಸಾಮಾಜಿಕ ರಾಜಕೀಯ ವಾಸ್ತವ ಮತ್ತು ಕಾಂಗ್ರೆಸ್ ಪಕ್ಷದ ಸ್ಥಿತಿಯಲ್ಲಿ ಸಿದ್ದರಾಮಯ್ಯ ಬ್ರಾಂಡ್ ನಿರ್ಮಾಣವು ಯಾವ್ಯಾವ ರೀತಿಯಲ್ಲಿ ತಿರುಗೇಟು ಕೊಡಬಹುದೆಂಬುದರ ಕುರಿತು ಸರಿಯಾದ ಅಂದಾಜು ಮಾಡಲಿಲ್ಲವೆಂದೇ ಹೇಳಬೇಕು.

ಯಾವುದು ಸಿದ್ದರಾಮಯ್ಯನವರ ಸಾಮಥ್ರ್ಯವಾಗಿದೆಯೋ ಅದನ್ನೇ ಅವರ ವಿರುದ್ಧ ತಿರುಗಿಸಲು ಬೇಕಾದ ತಳಹದಿ ಈ ದೇಶದ ದುರಂತಮಯ ಸಾಮಾಜಿಕ ರಾಜಕೀಯ ರಚನೆಯಲ್ಲಿಯೇ ಇದೆ. ಅರುಣ್ ಜೋಳದ ಕೂಡ್ಲಿಗಿಯವರು ಫೇಸ್‍ಬುಕ್‍ನಲ್ಲಿ ಬರೆದಿರುವ ಈ ಮಾತುಗಳು ಒಂದು ಸೂಚನೆಯನ್ನು ಕೊಡುತ್ತವೆ.

‘ಶೋಷಿತ ಜಾತಿಯ ನಾಯಕರ ಆತ್ಮವಿಶ್ವಾಸವು ಅಹಂಕಾರದಂತೆ ಕಾಣುತ್ತದೆ; ಮೇಲುಜಾತಿ ನಾಯಕರ ಅಹಂಕಾರದ ಮಾತುಗಳು ಆತ್ಮವಿಶ್ವಾಸ ಮತ್ತು ಬಲದ ಪ್ರತೀಕದಂತೆ ಕಾಣುತ್ತದೆ’

ಹಾಗೆಯೇ ಪಿ.ಲಂಕೇಶರ ಈ ಕೆಳಗಿನ ಮಾತುಗಳು ನಮ್ಮ ಸಮಾಜದ ಕುರಿತು ಆಳವಾದ ಒಳನೋಟವನ್ನು ನೀಡುತ್ತದೆ ಮತ್ತು ಇಂದಿನ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

“ಇವತ್ತಿಗೂ ಭಾರತೀಯರಲ್ಲಿ ಉಚ್ಚ ಜಾತಿ ಮತ್ತು ದಮನ ಮಾಡಬಲ್ಲ ಗಟ್ಟಿಗನ ಬಗ್ಗೆ ಆಳದಲ್ಲಿ ಗೌರವವಿದೆ; ತನ್ನಂಥವನೇ ಇನ್ನೊಬ್ಬ ತನ್ನನ್ನು ಆಳುವುದನ್ನು ಸಹಿಸದ ಮತ್ಸರವಿದೆ. ಆದ್ದರಿಂದಲೇ ಇಲ್ಲಿ ಜನಸಾಮಾನ್ಯರಿಂದ ಹುಟ್ಟಿಕೊಂಡ ನಾಯಕನಲ್ಲಿ ಕೀಳರಿಮೆ ಮತ್ತು ಆತನನ್ನು ತೊಲಗಿಸಲು ಜನಸಾಮಾನ್ಯರಲ್ಲಿ ಕುತಂತ್ರ ಇದ್ದೇ ಇರುತ್ತದೆ.” – ಪಿ.ಲಂಕೇಶ್

“ಘೋರ ಪಾತಕದಲ್ಲಿ ಮತ್ತು ವಂಚನೆಯಲ್ಲಿ ಮುಳುಗಿ ಹೋಗುತ್ತಿರುವ ಈ ಸಮಾಜಕ್ಕೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬುದನ್ನು ತಿಳಿಯುವ ಶಕ್ತಿ ಕೂಡ ಕ್ಷೀಣಿಸುತ್ತಿದೆ. ಇಂಥ ಘೋರ ಪಾತಕದೆದುರೂ ನಾಲಿಗೆ ಚಾಚಿ ನಿಲ್ಲಬಲ್ಲವರು ಇಡೀ ಸಮಾಜಕ್ಕೆ ಅಪಾಯಕಾರಿಗಳಾಗಿರುತ್ತಾರೆ. ಕೆಲವರಾದರೂ ಲಜ್ಜೆ ಇಟ್ಟುಕೊಳ್ಳುವ ಮನಸ್ಸು ಮಾಡದಿದ್ದರೆ ಇಲ್ಲಿ ನಿತ್ಯ ನಿರ್ಲಜ್ಜರೊಂದಿಗೆ ವ್ಯವಹರಿಸಬೇಕಾಗುತ್ತದೆ.” – ಪಿ.ಲಂಕೇಶ್

ಸಿದ್ದರಾಮಯ್ಯನವರ ನಡೆ, ನುಡಿ, ದೇಸೀತನ, ಶೋಷಿತ ಸಮುದಾಯಗಳ ಪರ ತೆಗೆದುಕೊಂಡ ನಿರ್ಧಾರಗಳು ಇವೆಲ್ಲವೂ ವಿರೋಧಕ್ಕೆ ಎಡೆಮಾಡಿಕೊಡುತ್ತಿದ್ದವು. ಕಾರಣವೇನೆಂಬುದನ್ನು ಅರುಣ್ ಅವರ ಮೇಲಿನ ಮಾತು ತಿಳಿಸುತ್ತದೆ. ತಾನು ಎಲ್ಲಾ ಸಮುದಾಯಗಳ ಪರವಾಗಿಯೂ ತೀರ್ಮಾನ ತೆಗೆದುಕೊಳ್ಳುತ್ತೇನೆ, ಆದರೆ ಅಹಿಂದ ಸಮುದಾಯಗಳಿಗೆ ವಿಶೇಷ ಮಹತ್ವ ಕೊಡುವುದರಲ್ಲಿ ತಪ್ಪೇನಿಲ್ಲ ಎಂದು ಬಹಿರಂಗವಾಗಿ ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳ ದೃಷ್ಟಿಯಿಂದ ಇದರಲ್ಲಿ ತಪ್ಪೇನಿರಲಿಲ್ಲ. ವಾಸ್ತವದಲ್ಲಿ ಈ ಧೈರ್ಯಕ್ಕೆ ಅವರನ್ನು ಮೆಚ್ಚಬೇಕು. ಆದರೆ, ಇದರಲ್ಲೇ ಸಿದ್ದರಾಮಯ್ಯನವರ ಸಾಮಥ್ರ್ಯ ಮತ್ತು ಮಿತಿಗಳೆರಡೂ ಅಡಗಿದ್ದವು. ದೇಶದ ಕೆಟ್ಟ ಜಾತಿ ವ್ಯವಸ್ಥೆಯನ್ನು ನಿಭಾಯಿಸಬೇಕೆಂದರೆ, ತನ್ನ ತಂಡವನ್ನು ಗಟ್ಟಿಗೊಳಿಸಿಕೊಳ್ಳಬೇಕು ಮತ್ತು ಅವರಲ್ಲಿ ವಿವಿಧ ಸಮುದಾಯಗಳಿಗೆ ಸೇರಿದವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಸರಳ ಸಂಗತಿಗೆ ಅವರು ವಿಶೇಷ ಮಹತ್ವ ನೀಡಬೇಕಿತ್ತು.

ಡಿ.ಕೆ.ಶಿವಕುಮಾರ್‍ರಂಥವರಿಗೆ ಮಹತ್ವ ನೀಡುವುದು ಬೇಡ, ಮಲ್ಲಿಕಾರ್ಜುನ ಖರ್ಗೆಯವರ ಕುರಿತು ಸಾರ್ವಜನಿಕವಾಗಿ ನಾಲ್ಕು ಒಳ್ಳೆಯ ಮಾತುಗಳನ್ನು ಸ್ವಯಂಪ್ರೇರಿತರಾಗಿ ಅವರು ಎಂದೂ ಆಡಲಿಲ್ಲ. ತಮ್ಮನ್ನು ಬಹಿರಂಗವಾಗಿ ಸಮರ್ಥಿಸಿಕೊಂಡು ಜಗಳಕ್ಕೆ ನಿಲ್ಲಬಲ್ಲ ಯಾವೊಬ್ಬ ನಾಯಕನನ್ನೂ ಅವರು ಜೊತೆಯಲ್ಲಿಟ್ಟುಕೊಂಡಂತೆ ಕಾಣುವುದಿಲ್ಲ. ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಸಮರ್ಥಿಸಿಕೊಂಡಷ್ಟೂ ಕಾಂಗ್ರೆಸ್ ನಾಯಕರು ಸಿಎಂ ಬೆಂಬಲಕ್ಕೆ ನಿಲ್ಲಲಿಲ್ಲ. ಸಿಎಂರ ಪ್ರಧಾನ ಕಾರ್ಯದರ್ಶಿ, ಸರ್ಕಾರೀ ಅಧಿಕಾರಿ ಎಲ್.ಕೆ.ಅತೀಕ್ ಅವರು ತಮ್ಮ ಕಾರ್ಯವ್ಯಾಪ್ತಿ ಮೀರಿ ಸಿ.ಎಂ. ಪರವಾದ ಸಂದೇಶಗಳನ್ನು ರವಾನಿಸುತ್ತಿದ್ದಷ್ಟನ್ನು ಅವರಿಂದ ವಿಶೇಷ ಲಾಭ ಪಡೆದ ಕುಲಬಾಂಧವರೂ ಮಾಡಲಿಲ್ಲ. ಇವೆಲ್ಲವೂ ಕಾಂಗ್ರೆಸ್‍ನ ದೌರ್ಬಲ್ಯ ಮಾತ್ರವಾಗಿರದೇ, ಸಿದ್ದರಾಮಯ್ಯನವರ ದೌರ್ಬಲ್ಯವೂ ಆಗಿತ್ತು. ಆ ರೀತಿ ಯಾರನ್ನಾದರೂ ಜೊತೆಗೆ ಇಟ್ಟುಕೊಳ್ಳುವುದು, ತನ್ನ ತಂಡವನ್ನು ಕಟ್ಟಿಕೊಳ್ಳುವುದು, ಅವರು ಬಾಯಿ ಜೋರು ಮಾಡಿ ಎದುರಾಳಿಗಳನ್ನು ಎದುರಿಸುವುದು ಇವ್ಯಾವುವೂ ಅವರ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ಸಂಗತಿಗಳೇ ಆಗಿರಲಿಲ್ಲ.

ದೇವರಾಜ ಅರಸು

ದೇವರಾಜ ಅರಸರು ಶೋಷಿತ ಸಮುದಾಯಗಳ ಪರ ನಿರ್ಧಾರ ತೆಗೆದುಕೊಳ್ಳುವಾಗ ತೋರಿದ ಜಾಣ್ಮೆ ಸಿದ್ದರಾಮಯ್ಯನವರಲ್ಲಿ ಇರಲಿಲ್ಲ. ಉದಾಹರಣೆಗೆ ಭೂಸುಧಾರಣಾ ಕಾಯ್ದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿದ್ದು ಅರಸರಲ್ಲ. ಅವರ ಮಂತ್ರಿ ಹುಚ್ಚಮಾಸ್ತಿಗೌಡರು. ಈ ರೀತಿ ಹಲವಾರು ಲಿಂಗಾಯಿತ, ಒಕ್ಕಲಿಗ ನಾಯಕರು ಅರಸರ ಹತ್ತಿರದ ವಲಯದಲ್ಲಿ ಇದ್ದರು. ಕೆಂಪಯ್ಯನವರನ್ನು ಇಟ್ಟುಕೊಂಡು ಪೊಲೀಸ್ ಇಲಾಖೆಯನ್ನು ನಿಭಾಯಿಸಲು ಹೊರಟಿದ್ದು ಮತ್ತು ಒಕ್ಕಲಿಗ ಲಿಂಗಾಯಿತ ಅಧಿಕಾರಿಗಳನ್ನು ಮೂಲೆಗುಂಪು ಮಾಡಿದ್ದೂ ಅವರಿಗೆ ತೊಂದರೆ ತಂದುಕೊಟ್ಟಿತ್ತು.

ಮೌಢ್ಯ ನಿಷೇಧ ಕಾಯ್ದೆಯನ್ನು ತರಲು ಸಿದ್ದರಾಮಯ್ಯನವರು ಮೊದಲು ಹೊರಟಾಗ ಅದಕ್ಕೆ ಸಮಾಜದಲ್ಲಿ ಯಾವ ತಯಾರಿಯ ಅಗತ್ಯವಿತ್ತೋ ಅದೇನೂ ಆಗಿರಲಿಲ್ಲ. ಸಂಪೂರ್ಣವಾಗಿ ಸಂಘಪರಿವಾರದ ವಟುಗಳಂತೆ ವರ್ತಿಸುವ, ಸುಳ್ಳನ್ನು ಹೊಸೆದು ಕೂರುವ ಮಾಧ್ಯಮಗಳಿವೆ ಎಂಬುದು ಗೊತ್ತಿದ್ದೂ ಅದನ್ನು ಏಕಾಏಕಿ ತರಲು ಹೊರಟರು. ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುವ ಕಾಯ್ದೆಯ ವಿಚಾರದಲ್ಲೂ ಎಡವಟ್ಟಾಯಿತು. ಹಾಗೆ ನೋಡಿದರೆ, ಜನಸಾಮಾನ್ಯರು ಈ ಕಾಯ್ದೆಯ ಪರ ಇದ್ದರು. ಆದರೆ, ಸಿದ್ದರಾಮಯ್ಯನವರ ಸಂಪುಟವೇ ಸಿದ್ಧವಿರಲಿಲ್ಲ. ಅಂದರೆ, ನಿಜವಾದ ಅರ್ಥದಲ್ಲಿ ಆ ಸಂಪುಟದ ನಾಯಕರಾಗಿ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಅವರು ಇರಲೇ ಇಲ್ಲ. ಶೋಷಿತ ಸಮುದಾಯಗಳ ಬದುಕನ್ನೇ ಬದಲಿಸುವ ಭಾರೀ ನಿರ್ಧಾರಗಳನ್ನು ಅವರು ತೆಗೆದುಕೊಳ್ಳಲೂ ಇಲ್ಲ. ಅಂತಹ ಕೆಲವು ಪ್ರಸ್ತಾಪಗಳು ಅವರ ಕಿವಿಗೆ ತಲುಪುವುದೇ ಕಷ್ಟವಾಗಿತ್ತು. ಸಿದ್ದರಾಮಯ್ಯನವರು ತನ್ನ ಅವಧಿಯ ಕಡೆ ಕಡೆಯಲ್ಲಿ ಹೆಚ್ಚು ಚುರುಕೂ, ಆಕ್ರಮಣಶೀಲರೂ ಆಗುತ್ತಾ ಬಂದರಾದರೂ, ಅಷ್ಟು ಹೊತ್ತಿಗೆ ಆಗಬಹುದಾದ ಡ್ಯಾಮೇಜ್ ಒಂದಷ್ಟು ಆಗಿ ಹೋಗಿತ್ತು.

ಇದ್ದುದರಲ್ಲಿ ಉತ್ತಮವಾದ ಬಜೆಟ್‍ಗಳನ್ನು ನೀಡಿದ್ದ ಸಿದ್ದರಾಮಯ್ಯನವರು, ಈ ಚುನಾವಣೆಗೆ ಬೇಕಾದ ಪ್ರಣಾಳಿಕೆ ಹೇಗಿರಬೇಕು ಎಂದು ತೀರ್ಮಾನಿಸಲಾಗದೇ ಹೋದರು. ಅತ್ಯಂತ ಕಳಪೆ ಪ್ರಣಾಳಿಕೆ ಬಂತು ಎಂಬುದು ಮಾತ್ರವಾಗಿರದೇ, ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಕಾರ್ಯನಿರ್ವಹಣೆಯಲ್ಲಿ ಕಾಯ್ದುಕೊಳ್ಳಬೇಕಿದ್ದ ಬಿಗಿಯೂ ಇಲ್ಲದಂತೆ ಆಯಿತು. ಪ್ರಣಾಳಿಕೆಯ ಸಮಸ್ಯೆಯನ್ನು ವೀರಪ್ಪ ಮೊಯ್ಲಿಯ ಮೇಲೆ ವರ್ಗಾಯಿಸಿ, ಪಕ್ಷದ ಕಾರ್ಯನಿರ್ವಹಣೆಯ ಸಮಸ್ಯೆಯನ್ನು ಪರಮೇಶ್ವರ್, ದಿನೇಶ್ ಗುಂಡೂರಾವ್ ಮೇಲೆ ವರ್ಗಾಯಿಸಿ ‘ತನ್ನ ಕೆಲಸ ತಾನು ಮಾಡಿದ್ದೇನೆ, ಮಿಕ್ಕವರ ಸಹಕಾರ ಇರಲಿಲ್ಲ’ ಎಂದಷ್ಟೇ ಹೇಳಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರ ವ್ಯಕ್ತಿತ್ವದಲ್ಲಿ ಹಾಗೂ ಧೋರಣೆಯಲ್ಲಿ ಇದ್ದ ಸಮಸ್ಯೆಗಳು, ಬಿಜೆಪಿಯನ್ನು ಇನ್ನೂ ಪರಿಣಾಮಕಾರಿಯಾಗಿ ಎದುರಿಸಲು ಬೇಕಿದ್ದ ಸಮರ್ಥ ಟೀಂ ಕಟ್ಟಲಾರದಂತೆ ಮಾಡಿದವು.

ಈ ಎಲ್ಲಾ ಮಿತಿಗಳ ನಡುವೆ ಸಿದ್ದರಾಮಯ್ಯನವರು ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದಾರೆ ಮತ್ತು ಅವರನ್ನು ಅಭಿಮಾನಿಸಲು ಕಾರಣಗಳಿವೆ. ಆ ಅಭಿಮಾನದ ಜಾಗದಲ್ಲಿ ನಂಜು ಮತ್ತು ತಿರಸ್ಕಾರವೇ ಮನೆ ಮಾಡಿದ್ದರೆ ಅದಕ್ಕೆ ಎರಡು ಕಾರಣಗಳಿರಬೇಕಷ್ಟೇ. ಒಂದು, ವ್ಯಕ್ತಿಗತವಾಗಿ ಸಿದ್ದರಾಮಯ್ಯನವರ ಕ್ರಮಗಳಿಂದ ನೊಂದಿರಬೇಕು. ಇಲ್ಲವೇ ಜಾತಿಯ ಅಸಹನೆ ತಲೆಯಲ್ಲಿ ತುಂಬಿಕೊಂಡಿರಬೇಕು. ಮೈಸೂರು ಜಿಲ್ಲೆಯೂ ಸೇರಿದಂತೆ ಹಲವೆಡೆ ವ್ಯಕ್ತಿಗತವಾಗಿ ನೊಂದಿರುವವರು ಸಿಗುತ್ತಾರೆ. ಸಿದ್ದರಾಮಯ್ಯನವರು ಉದ್ದೇಶಪೂರ್ವಕವಾಗಿ ನೋಯಿಸಿರದಿದ್ದರೂ, ‘ತಮ್ಮ ವ್ಯಕ್ತಿತ್ವದ ಸಹಜ ಗುಣದ ಭಾಗವಾಗಿ’ ತೋರಿರುವ ನಿರ್ಲಕ್ಷ್ಯ ಅಥವಾ ಪ್ರಜ್ಞಾಪೂರ್ವಕವಾಗಿ ಪುರಸ್ಕರಿಸಬೇಕಾದವರನ್ನು ಪುರಸ್ಕರಿಸದೇ ಇರುವುದು, ಹಲವರಿಂದ ದೂರವಾಗಲು ಕಾರಣವಾಯಿತು. ಅದನ್ನು ಬಿಟ್ಟರೆ ಮಾಧ್ಯಮದ ವಟುಗಳಿಂದ ಹಿಡಿದು, ದೂರದ ಹಳ್ಳಿಗಳವರೆಗೆ ಹರಡಿಕೊಂಡಿರುವ ಜಾತಿಯ ಅಸಹನೆಯು ಅವರ ವಿರುದ್ಧ ಕೆಲಸ ಮಾಡಿತು.

ಇವೆಲ್ಲಕ್ಕಿಂತ ಆಶ್ಚರ್ಯಕರ ಮತ್ತು ವಿಚಿತ್ರವಾದ ಇನ್ನೊಂದು ಮೂಲದಿಂದಲೂ ಅವರಿಗೆ ವಿರೋಧ ಬರುತ್ತಿತ್ತು. ಸಿದ್ದರಾಮಯ್ಯನವರನ್ನೇ ಸಹಿಸಿಕೊಳ್ಳದ ಜಾತಿ ವ್ಯವಸ್ಥೆಯು ದಲಿತ ಮುಖ್ಯಮಂತ್ರಿಯನ್ನು ಒಪ್ಪಿಕೊಳ್ಳುತ್ತದೆಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳದೇ, ಮೇಲ್ಜಾತಿ ಮಾಧ್ಯಮಗಳು ಸೃಷ್ಟಿಸುತ್ತಿದ್ದ ದಲಿತ ಮುಖ್ಯಮಂತ್ರಿಯ ಪ್ರಚಾರಕ್ಕೆ ಬಲಿಯಾಗುತ್ತಿದ್ದದ್ದು ಎಚ್ಚೆತ್ತ ದಲಿತ ಸಮುದಾಯದ ಒಂದು ವಿಭಾಗ. ಸಿದ್ದರಾಮಯ್ಯನವರನ್ನು ಯಶಸ್ವಿಯಾಗಿ ಪ್ರತಿಷ್ಠಾಪಿಸುವುದು ಶೋಷಿತ ಸಮುದಾಯಗಳ ಸ್ಥಾನವನ್ನು ಮುಂದಕ್ಕೂ ಗಟ್ಟಿ ಮಾಡಿಕೊಳ್ಳುವ ಮಾರ್ಗಗಳಲ್ಲಿ ಒಂದು ಎಂಬುದನ್ನು ಅಂಥವರು ಅರಿಯಲಾರದೇ ಹೋದರು.

ಅಂತಿಮವಾಗಿ ಸಿದ್ದರಾಮಯ್ಯನವರು ಕಾಂಗ್ರೆಸ್ಸನ್ನು ರಾಜ್ಯ ಮಟ್ಟದಲ್ಲಿ ಮೇಲೆತ್ತಬೇಕಾಯಿತು. ಉಳಿದವರೆಲ್ಲರೂ ತಮ್ಮ ಕ್ಷೇತ್ರಗಳಿಗೆ ಸೀಮಿತರಾದರು. ರಾಹುಲ್‍ಗಾಂಧಿ ಹಿಂದೆಂದಿಗಿಂತಲೂ ಆತ್ಮವಿಶ್ವಾಸ ಮತ್ತು ಚುರುಕುತನದಿಂದ ರ್ಯಾಲಿಗಳಲ್ಲಿ ಭಾಷಣ ಮಾಡಿದರಾದರೂ, ಅದರಿಂದ ಈಗಲೇ ಅಲೆ ಸೃಷ್ಟಿಯಾಗುವುದು ಸಾಧ್ಯವಿರಲಿಲ್ಲ; ಅಲೆಯು ಸೃಷ್ಟಿಯಾಗುವುದಿಲ್ಲ, ಸೃಷ್ಟಿಸಬೇಕಾಗುತ್ತ ದಾದ್ದರಿಂದ ಅದರಲ್ಲಿ ಕಾಂಗ್ರೆಸ್‍ಗೆ ಪರಿಣಿತಿ ಇರಲಿಲ್ಲ. ಇದಲ್ಲದೇ ಕಾಂಗ್ರೆಸ್ ಪರವಾಗಿ ಸ್ವಯಂಪ್ರೇರಿತರಾಗಿ ಕೆಲಸ ಮಾಡಿದ ಪ್ರಗತಿಪರ ಸಂಘಟನೆಗಳು ಮತ್ತು ವ್ಯಕ್ತಿಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದರಾದರೂ, ಅವರ ಶಕ್ತಿಯೇ ಬಹಳ ಸೀಮಿತವಾಗಿತ್ತು.

ಇವೆಲ್ಲವೂ ಸೇರಿ ಕಾಂಗ್ರೆಸ್ 79 ಸ್ಥಾನಗಳಿಗೆ ಸೀಮಿತವಾಯಿತು. ಒಂದೆಡೆ ಸಿದ್ದರಾಮಯ್ಯನವರ ಸಾಮಥ್ರ್ಯವು ಮತ ಪ್ರಮಾಣದ ಹೆಚ್ಚಳಕ್ಕೆ ಕಾರಣವಾದರೆ, ಅವರ ಮಿತಿ ಮತ್ತು ಕಾಂಗ್ರೆಸ್‍ನ ದೌರ್ಬಲ್ಯ ಹಾಗೂ ಬಿಜೆಪಿಯ ಅಗಾಧ ಅನೈತಿಕ ಸಾಮಥ್ರ್ಯವು ಸೀಟುಗಳು ಕಡಿಮೆಯಾಗಲು ಕಾರಣವಾಯಿತು. ಇದರ ಲಾಭವನ್ನು ಜೆಡಿಎಸ್ ಸಹಾ ಪಡೆದುಕೊಂಡು, ಅತಂತ್ರ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಶೋಷಿತ ಸಮುದಾಯಗಳ ಪರ ರಾಜಕಾರಣ ನಡೆಸಬೇಕೆನ್ನುವವರಿಗೆ ಈ ಐದು ವರ್ಷಗಳು ಸಾಕಷ್ಟು ಪಾಠಗಳನ್ನು ಕೊಟ್ಟಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...