Homeಮುಖಪುಟಪರ್ಯಾಯ ಮಾಧ್ಯಮಗಳನ್ನು ಕಟ್ಟಿಕೊಳ್ಳುವ ಸಮಾಲೋಚನೆ ಆರಂಭಿಸೋಣ ಬನ್ನಿ....

ಪರ್ಯಾಯ ಮಾಧ್ಯಮಗಳನ್ನು ಕಟ್ಟಿಕೊಳ್ಳುವ ಸಮಾಲೋಚನೆ ಆರಂಭಿಸೋಣ ಬನ್ನಿ….

- Advertisement -
- Advertisement -

ಇನ್ನು ಮುಂದೆ ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯುವುದನ್ನು ನಿಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಪೋಸ್ಟ್ ಹಾಕಿದ್ದಾರೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಬಲಾಢ್ಯರ ಆಡುಂಬೊಲವಾದಾಗ, ಅದನ್ನು ತಡೆಯಲು ನ್ಯಾಯಾಂಗವು ಕಾರ್ಯನಿರ್ವಹಿಸಬೇಕು. ಪತ್ರಿಕಾರಂಗವು ಮೂರೂ ಅಂಗಗಳ ಮೇಲೆ ನಿಗಾ ಇಡುವ ಜನತೆಯ ಸುಶಿಕ್ಷಿತ ಅಂಗವೆಂದು ಭಾವಿಸಲಾಗಿತ್ತು. ಪತ್ರಿಕಾರಂಗವು ಕಾರ್ಪೋರೇಟ್ ಕಂಪೆನಿಗಳ ಕೈಗೆ ಹೆಚ್ಚೆಚ್ಚು ಸಿಗುತ್ತಾ ಹೋದಂತೆ ಅದರ ಸ್ವರೂಪವು ಬದಲಾಗುತ್ತಾ ಹೋಯಿತು. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಹೆಚ್ಚಾಗುತ್ತಾ ಹೋದಂತೆ ಈ ಅಂಗವು ಇನ್ನೂ ಹೆಚ್ಚು ಕೊಳೆಯಲಾರಂಭಿಸಿತು. ಹಿಂದಿನಿಂದಲೂ ಬ್ರಾಹ್ಮಣ ಮತ್ತು ಇನ್ನಿತರ ಮೇಲ್ಜಾತಿ ಸಮುದಾಯಗಳು ಪತ್ರಿಕಾರಂಗದಲ್ಲಿ ಹೆಚ್ಚಿದ್ದರು ಮತ್ತು ಜಾತೀಯ ಭಾವನೆ ಆಗಲೂ ಇತ್ತು. ಆದರೆ, ಕೆಲವಾದರೂ ಮೌಲ್ಯಗಳನ್ನು ಉಳಿಸಿಕೊಂಡವರು ಮತ್ತು ಪ್ರಜಾತಂತ್ರದ ಮೂಲ ಆಶಯಗಳನ್ನು ಎತ್ತಿ ಹಿಡಿಯುವವರು ಮುಂಚೂಣಿಯಲ್ಲಿರುತ್ತಿದ್ದರು. 21ನೇ ಶತಮಾನಕ್ಕೆ ಕಾಲಿಡುವ ಹೊತ್ತಿಗೆ ಬಲಪಂಥೀಯರಾದ, ಜಾತಿ ಮನಸ್ಥಿತಿಯನ್ನು ಬಹಿರಂಗವಾಗಿಯೇ ಪ್ರದರ್ಶಿಸುವ, ಹಣಕ್ಕಾಗಿ ಎಲ್ಲಾ ಮೌಲ್ಯಗಳನ್ನು ತೂರುವ ಬ್ರಾಹ್ಮಣವಾದಿ ಹಿನ್ನೆಲೆಯ ಅಥವಾ ಆ ಮನಸ್ಥಿತಿಯವರು ಹೆಚ್ಚಾಗುತ್ತಾ ಹೋದರು. ಹಿಂದಿನ ಬಹುತೇಕ ಪತ್ರಕರ್ತರು ಯಾವ ಆಸ್ತಿ ಹೆಚ್ಚಳವಿಲ್ಲದೇ ತಮ್ಮ ವೃತ್ತಿ ಬದುಕನ್ನು ಮುಗಿಸುತ್ತಿದ್ದರೆ, ಈಗ ಸ್ವಂತ ಚಾನೆಲ್‍ಗಳನ್ನು ಆರಂಭಿಸುವ ಮಟ್ಟಕ್ಕೆ ಹಣ ಮಾಡುವ ಮಾರ್ಗಗಳನ್ನು ಅವರು ಹುಡುಕಿಕೊಂಡಿದ್ದಾರೆ.

ಭ್ರಷ್ಟ ಮಾರ್ಗಗಳಿಂದ ಹಣ ಸಂಪಾದಿಸಿದ ರಾಜಕಾರಣಿಗಳು ಒಂದೊಂದು ಚಾನೆಲ್‍ಅನ್ನು ತೆಗೆಯುತ್ತಾ ಹೋದರೆ, ಅಂಬಾನಿ ಥರದವರು ಇಡೀ ದೇಶದ ಎಲ್ಲಾ ಭಾಷೆಗಳ ಚಾನೆಲ್‍ಗಳನ್ನೂ ಕೊಳ್ಳಲಾರಂಭಿಸಿದರು. ಕರ್ನಾಟಕದ ನ್ಯೂಸ್ ಚಾನೆಲ್‍ಗಳನ್ನೇ ನೋಡಿದರೆ, ಸುವರ್ಣ, ಜನಶ್ರೀ ಮತ್ತು ದಿಗ್ವಿಜಯ ಚಾನೆಲ್‍ಗಳು ಬಿಜೆಪಿ ಪಕ್ಷದ ನಾಯಕರೂ ಆಗಿರುವ ಉದ್ದಿಮೆದಾರರ ಕೈಯ್ಯಲ್ಲಿವೆ. ಪಬ್ಲಿಕ್ ಟಿವಿ, ಬಿ ಟಿವಿ, ಪ್ರಜಾ ಟಿವಿಗಳ ಮಾಲೀಕರು ಪತ್ರಕರ್ತರೆಂದೇ ಹೇಳಲಾಗುತ್ತಿದೆಯಾದರೂ, ಅವಕ್ಕೆ ಯಾರು ಹಣ ಹೂಡಿದ್ದಾರೆಂಬ ಬಗ್ಗೆ ಹಲವು ವದಂತಿಗಳಿವೆ. ಅವರೆಲ್ಲರೂ ಬಹಳ ಸ್ಪಷ್ಟವಾಗಿ ಬಿಜೆಪಿಯ ಪರವಾದ ನಿಲುವನ್ನೇ ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಪ್ರಜಾಟಿವಿ ಮಾಲೀಕರು ಕಾಂಗ್ರೆಸ್‍ನಿಂದ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದವರಾಗಿದ್ದರೂ, ಅದರಲ್ಲಿನ ಕಾರ್ಯಕ್ರಮಗಳು, ಆಂಕರ್‍ಗಳ ಕೂಗಾಟ ಇವೆಲ್ಲವೂ ಬಿಜೆಪಿಯ ಪರವಾಗಿ ಇರುತ್ತವೆ. ಪಬ್ಲಿಕ್ ಟಿವಿಯ ನಿಲುವು ಮತ್ತು ಅದರ ಮಾಲೀಕ ರಂಗನಾಥ್‍ರವರು ಬಿಜೆಪಿಯ ಕಾರ್ಯಕರ್ತರನ್ನು ಮೀರಿಸುವಂತಹ ನಿಷ್ಠೆಯಿಂದ ಅದಕ್ಕೆ ಸೇವೆ ಸಲ್ಲಿಸುತ್ತಾರೆ. ಕಸ್ತೂರಿ ಜೆಡಿಎಸ್‍ನವರದ್ದು ಮತ್ತು ಸುದ್ದಿ ಟಿವಿ ಕಾಂಗ್ರೆಸ್‍ದು. ಈ ಎರಡೂ ಚಾನೆಲ್‍ಗಳು ತಮ್ಮ ತಮ್ಮ ಪಕ್ಷಗಳ ವಿರುದ್ಧದ ಮಹತ್ವದ ಸುದ್ದಿಯನ್ನೂ ಕಡೆಗಣಿಸಿ ವಕ್ತಾರಿಕೆ ಮಾಡುತ್ತವೆ. ಟಿವಿ 9 ಅತ್ಯಂತ ಹೆಚ್ಚು ಟಿಆರ್‍ಪಿ ಹೊಂದಿರುವ ಪಕ್ಕಾ ವ್ಯಾವಹಾರಿಕ ಚಾನೆಲ್ ಆಗಿದ್ದು, ಟಿವಿ ನ್ಯೂಸ್ ಚಾನೆಲ್‍ಗಳ ಗುಣಮಟ್ಟದ ಮಾನದಂಡವನ್ನೇ ಕೆಳಮಟ್ಟಕ್ಕೆ ನಿಗದಿ ಮಾಡಿರುವ ಸಾಧನೆ ಅದರದ್ದು.

ಹ್ಯೂವiನ್ ಇಂಟರೆಸ್ಟ್ ಸ್ಟೋರಿಗಳೆಂದು ಕರೆಯಾಗುವ ಕೆಲವನ್ನೂ ಕಳಪೆ ದರ್ಜೆಯಲ್ಲಿ ಪ್ರಸಾರ ಮಾಡುವ ಕೆಲಸವನ್ನು ಈ ಚಾನೆಲ್‍ಗಳು ಮಾಡುತ್ತವಾದರೂ, ಜನಸಮುದಾಯಗಳ ಸಮಷ್ಟಿ ಸಮಸ್ಯೆಗಳ ಕುರಿತಾಗಿ ಎಂದೂ ದನಿಯೆತ್ತುವುದಿಲ್ಲ. ಉದಾಹರಣೆಗೆ ಯಾವುದೇ ಬಗೆಯ ಉದ್ಯೋಗಿಗಳ ಗುಂಪುಗಳು (ಐಟಿ ಉದ್ಯೋಗಿಗಳು, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು, ಗುತ್ತಿಗೆ ನೌಕರರು ಇತ್ಯಾದಿ) ಎದುರಿಸುತ್ತಿರುವ ಸಮಸ್ಯೆಯನ್ನು ಕೈಗೆತ್ತಿಕೊಂಡು ದನಿ ನೀಡುವ ಕೆಲಸ ಮಾಡುವುದೇ ಇಲ್ಲ. ಏಕೆಂದರೆ, ಸ್ವತಃ ತಮ್ಮ ಸಂಸ್ಥೆಯಲ್ಲಿ ಕೆಟ್ಟ ಉದ್ಯೋಗದಾತರಾಗಿ ಈ ಚಾನೆಲ್‍ಗಳು ಕಾರ್ಯನಿರ್ವಹಿಸುತ್ತಿರುತ್ತವೆ. ರೈತರ ಪರವಾಗಿ ಕೂಗು ಹಾಕುವುದೂ ತಮ್ಮ ವ್ಯಕ್ತಿಗತ ಹಿತಾಸಕ್ತಿಗಾಗಿ ಯಾರದ್ದೋ ವಿರುದ್ಧ ಮಾತಾಡಬೇಕಿದ್ದಾಗ ಮಾತ್ರ. ಸರ್ಕಾರವನ್ನು ಗುರಿ ಮಾಡಬೇಕೆಂದಿದ್ದಾಗ ಇದ್ದಕ್ಕಿದ್ದಂತೆ ರೈತರ ಆತ್ಮಹತ್ಯೆಗಳು ನಿತ್ಯದ ಸುದ್ದಿಗಳಾಗುತ್ತವೆ; ಇಲ್ಲವಾದರೆ, ಅದರ ಡಬಲ್ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಯಾವುದೋ ಸಿನೆಮಾ ನಟನ ಮೂರನೇ ದರ್ಜೆ ಜಗಳದ ಸುತ್ತ ಬ್ರೇಕಿಂಗ್ ಹೊಡೆಯುತ್ತಿರುತ್ತಾರೆ.

ಎಂತಹ ಡಬಲ್ ಸ್ಟಾಂಡರ್ಡ್‍ಗಳನ್ನು ಈ ಉದ್ದಿಮೆದಾರರು ಹೊಂದಿದ್ದಾರೆಂಬುದಕ್ಕೆ ಹಾಲಿ ನಡೆಯುತ್ತಿರುವ ರಾಜಕಾರಣದ ಕುರಿತು ಅವರು ಮಾಡುತ್ತಿರುವ ವರದಿಗಳನ್ನು ನೋಡಿದರೆ ಗೊತ್ತಾಗುತ್ತದೆ. ಬಹುತೇಕ ಚಾನೆಲ್‍ಗಳು ಬಿಜೆಪಿಯು ನಡೆಸುತ್ತಿರುವ ಕುದುರೆ ವ್ಯಾಪಾರವನ್ನು ಸಂಭ್ರಮಿಸುತ್ತಿದ್ದಾರೆ. ಇನ್ನೂ ಕೆಲವರು ಯಾವ ರೀತಿ ಅನೈತಿಕ ಬಹುಮತವನ್ನು ಬಿಜೆಪಿ ಪಡೆದುಕೊಳ್ಳಬಹುದು ಎಂಬ ಟಿಪ್ಸ್ ಕೊಡುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಒಂದೆಡೆ ಇಟ್ಟುಕೊಳ್ಳುವ ಪ್ರಕ್ರಿಯೆ ಆರಂಭವಾದ ಕೂಡಲೇ ರೆಸಾರ್ಟ್ ರಾಜಕಾರಣ ಶುರು ಎಂದು ಕೂಗಾಡುತ್ತಿದ್ದಾರೆ. ಸಿದ್ಧಾಂತ ಬದ್ಧತೆ, ಪಕ್ಷ ನಿಷ್ಠೆ ಇಲ್ಲದ ಶಾಸಕರನ್ನು ಕೂಡಿಟ್ಟುಕೊಳ್ಳುವ ಸ್ಥಿತಿಗೆ ಬಂದಿರುವ ರಾಜಕೀಯ ಪಕ್ಷಗಳನ್ನು ವಿಮರ್ಶೆಗೆ ಒಳಪಡಿಸಲೇಬೇಕು. ಆದರೆ, ಕೊಂಡುಕೊಳ್ಳಲು ನಿಂತಿರುವವರ ಪರವಾಗಿ, ಈ ಆಂಕರ್‍ಗಳು ಅರಚುತ್ತಿರುತ್ತಾರೆ. ಚುನಾವಣಾ ಫಲಿತಾಂಶ ಬಂದ ದಿನ ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ಸರ್ಕಾರ ಬರುವ ನಿರೀಕ್ಷೆ ಇದ್ದಷ್ಟು ಹೊತ್ತೂ ಇಂತಹ ಆಂಕರ್‍ಗಳು ದನಿಎತ್ತರಿಸಿ ಸಂಭ್ರಮದಲ್ಲಿದ್ದರು. ಯಾವಾಗ ಅತಂತ್ರದ ಸ್ಥಿತಿ ನಿರ್ಮಾಣವಾಯಿತೋ ಇವರ ದುಃಖವನ್ನು ನೋಡಲಾಗುತ್ತಿರಲಿಲ್ಲ.

ಇವೆಲ್ಲವೂ ಶುರುವಾದದ್ದು ಈಗಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ದಿನದಿಂದಲೇ ಕಾಂಗ್ರೆಸ್‍ನೊಳಗೆ ಭಿನ್ನಮತ ಹುಟ್ಟುಹಾಕುವ ಪ್ರಯತ್ನವನ್ನು, ಈ ಸರ್ಕಾರವು ಉಳಿಯುವುದಿಲ್ಲವೆಂದು ಅದೆಷ್ಟು ಸುದ್ದಿಗಳು ಬಂದವೋ? ಡಿ.ಕೆ.ರವಿ ಸಾವಿನ ಸಂದರ್ಭವೂ ಒಳಗೊಂಡಂತೆ ಕನಿಷ್ಠ ತಿಂಗಳಿಗೊಂದು ಸುಳ್ಳು ವರದಿಯನ್ನು ಮಾಡದಿದ್ದರೆ, ಅವರಿಗೆ ನಿದ್ದೆಯೇ ಬರುತ್ತಿರಲಿಲ್ಲ. ವಾಟ್ಸಾಪ್ ಫಾರ್ವರ್ಡ್‍ಗಳಿಗಿಂತ ಕೆಟ್ಟದಾಗಿ ಟಿವಿ ಬ್ರೇಕಿಂಗ್ ನ್ಯೂಸ್‍ಗಳು ಬರುತ್ತವೆ. 2017ರ ಸೆಪ್ಟೆಂಬರ್‍ನಲ್ಲಿ ಬೆಂಗಳೂರಿನ ಟಿವಿ ಚಾನೆಲ್‍ವೊಂದರ ಪತ್ರಕರ್ತರು ಪ್ರಯೋಗವೊಂದನ್ನು ಮಾಡಿದರು. As forwarded ಎಂದು ಹಾಕಿ, ಕೂತಲ್ಲೇ ಸುಳ್ಳು ಸುದ್ದಿಯೊಂದನ್ನು ಸೃಷ್ಟಿಸಿ ವಾಟ್ಸಾಪ್ ಗುಂಪಿನೊಳಗೆ ಹಾಕಿದರು. ಅದಾದ ಮುಕ್ಕಾಲು ಗಂಟೆಯ ಒಳಗೆ 2 ಟಿವಿ ಚಾನೆಲ್‍ಗಳು ಅದನ್ನು ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ಓಡಿಸುತ್ತಿದ್ದವು. ಬಿಜೆಪಿಯು ಪೂರಾ ಮಲಗಿದ್ದ ಸಂದರ್ಭದಲ್ಲೂ, ಅದನ್ನು ಮೇಲೆತ್ತುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಾ ಬಂದವು. ಈ ಸಾರಿಯ ಚುನಾವಣೆಯಲ್ಲೂ ಕಾಂಗ್ರೆಸ್ ಮುನ್ನಡೆ ಸ್ಪಷ್ಟವಾಗಿ ಕಾಣುತ್ತಿದ್ದಾಗ ಕಂಗಾಲಾಗಿದ್ದವರಿಗೆ, ಮೋದಿಯ ಸರಣಿ ರ್ಯಾಲಿಗಳು ಆಕ್ಸಿಜನ್ ಕೊಟ್ಟವು. ಆಗ, ಸಂಪೂರ್ಣವಾದ ನಿಷ್ಠೆ ಮತ್ತು ಬದ್ಧತೆಯಿಂದ ‘ಮೋದಿ ಅಲೆ’ಯನ್ನು ಸೃಷ್ಟಿಸಲು ಇನ್ನಿಲ್ಲದ ಪ್ರಯತ್ನ ಮಾಡಿದವು. ಇದು ರಾಜಕಾರಣದ ವಿಷಯವಾದರೆ, ಈ ಮಾಧ್ಯಮಗಳು ರೂಪಿಸುತ್ತಿರುವ ಅಭಿರುಚಿ, ಮೌಲ್ಯ ಸಂಹಿತೆ, ಬೌದ್ಧಿಕ ಮಟ್ಟ, ಸಾಮಾಜಿಕ ಕಳಕಳಿ ಎಲ್ಲವೂ ನಕಾರಾತ್ಮಕವಾದವು.

ಇವೆಲ್ಲವನ್ನೂ ಬಯ್ದುಕೊಂಡು ಕೂರುವ ಕೆಲಸವನ್ನು ನಿಲ್ಲಿಸಿ, ಬಯಲುಗೊಳಿಸುವ ಕೆಲಸ ಆಗಬೇಕಿದೆ. ಅದಕ್ಕಿಂತ ಮುಖ್ಯವಾಗಿ ಪರ್ಯಾಯವನ್ನು ರೂಪಿಸುವ ಕಡೆಗೆ ಕನ್ನಡದ ಜಾಣಜಾಣೆಯರು ಕಾರ್ಯಪ್ರವೃತ್ತವಾಗಬೇಕಿದೆ. ಸಹಜವಾಗಿ ಸೋಷಿಯಲ್ ಮೀಡಿಯಾವೇ ಇದಕ್ಕೆ ಪರ್ಯಾಯವೆಂದು ಹಲವರು ಭಾವಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಕ್ಕೆ ಅದರದ್ದೇ ಆದ ಸಾಧ್ಯತೆಗಳೂ ಇವೆ; ಮಿತಿಗಳೂ ಇವೆ. ಸೋಷಿಯಲ್ ಮೀಡಿಯಾವೂ ಒಳಗೊಂಡಂತೆ ಸಮಗ್ರವಾದ ಪರ್ಯಾಯವನ್ನು ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಡೆಯಬೇಕಾದ ಸಂವಾದದ ಮೊದಲ ಭಾಗವನ್ನು ನಮ್ಮ ವೆಬ್ ಎಡಿಷನ್‍ನಲ್ಲಿ ಪ್ರಕಟಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯವಾಗಿರುವ ಇಬ್ಬರು ಯುವ ಚಿಂತಕರು ಸಂವಾದವನ್ನು ಆರಂಭಿಸಿದ್ದಾರೆ. ಈ ಸದ್ಯ ಆರಂಭಿಕವಾಗಿ ಸಾಮಾಜಿಕ ಜಾಲತಾಣಗಳು ಹೇಗಿವೆ ಎಂಬುದರ ಕುರಿತು ಕೆಲವು ಮಾತುಗಳನ್ನಷ್ಟೇ ನಿಮ್ಮ ಮುಂದಿಡಲಾಗಿದೆ. ಅದಕ್ಕೆ ನಮ್ಮ ಓದುಗರೆಲ್ಲರೂ ಪ್ರತಿಕ್ರಿಯಿಸಿ ಸಂವಾದವನ್ನು ಬೆಳೆಸಬೇಕು ಮತ್ತು ಪರ್ಯಾಯವನ್ನು ಕಟ್ಟುವ ನಿಟ್ಟಿನಲ್ಲಿ ಜೊತೆಯಾಗಬೇಕೆಂದು ಕೇಳಿಕೊಳ್ಳುತ್ತೇವೆ. ಈ ಚರ್ಚೆಯು ನಮ್ಮೊಳಗಿನ ಮಾತುಕತೆಗಷ್ಟೇ ಸೀಮಿತವಾಗದೇ, ರಚನಾತ್ಮಕವಾದ ಪ್ರಕ್ರಿಯೆಗೆ ದಾರಿ ಮಾಡಿಕೊಡಬೇಕೆಂಬ ಆಶಯ ನಮ್ಮದಾಗಿದೆ.

ಸಂವಾದ – 1,
ಆರಂಭ: ರಾಜೇಂದ್ರ ಪ್ರಸಾದ್ ಮತ್ತು ನಾಗೇಗೌಡ ಕೀಲಾರ

ಚುನಾವಣೆ ಮತ್ತು ಬಹಿರಂಗ ಪ್ರಚಾರ ಅನ್ನುವುದು ಪ್ರಜಾಸತ್ತೆಯಲ್ಲಿ ಅವಧಿಗೊಮ್ಮೆ ಎದುರಾಗುವ ಪ್ರಕ್ರಿಯೆ. ಅದೊಂದು ರೀತಿ ಪ್ರಜಾಪ್ರಭುತ್ವದ ಹಬ್ಬ. ಆದರೆ ಈಚಿನ ದಿನಗಳಲ್ಲಿ ಅದು ಹಬ್ಬವಾಗಿ ಉಳಿದಿಲ್ಲ, ಬದಲಿಗೆ ಪ್ರಜಾಪ್ರಭುತ್ವವನ್ನು ‘ಜಾತಿ ಮತ್ತು ವರ್ತಕ’ ಪ್ರಭುತ್ವವನ್ನಾಗಿಸುವ ಹರಾಜಿನ ಪ್ರಕ್ರಿಯೆಯಾಗುತ್ತಿದೆ. ಇದರಲ್ಲಿ ಸುದ್ದಿ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾಗಳು ಗಮನಾರ್ಹ ಪಾತ್ರವಹಿಸುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಚುನಾವಣಾ ಪ್ರಚಾರ ಶುರುವಾಗಿದ್ದು 2014ರ ಲೋಕಸಭಾ ಚುನಾವಣೆಯಲ್ಲಿ. ಇದಕ್ಕೆ ಎರಡು-ಮೂರೂ ವರ್ಷಗಳ ಹಿಂದೆಯೇ ಬಿಜೆಪಿಯ ಬೆಂಬಲಿಗರು ಇಂತಹದೊಂದು ಪ್ರಯೋಗಕ್ಕೆ ಸಜ್ಜಾಗಿದ್ದರು. ಹಂತವಾಗಿ ಹಂತವಾಗಿ ಅದನ್ನು ಕಾರ್ಯರೂಪಕ್ಕೆ ತಂದು ಈಗ ವಾಸಿಯಾಗದ ಕೆಟ್ಟ ಹುಣ್ಣಾಗಿಸಿಬಿಟ್ಟಿದ್ದಾರೆ. ಚುನಾವಣಾ ತಂತ್ರವೊಂದು ಅದರ ದಾರಿ ತಪ್ಪಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕ್ರಿಮಿಯಾಗಿ ಬದಲಾಗಿದ್ದು ಹೇಗೆ? ಅದರ ರೂಪುರೇಷೆಗಳು ಹೇಗಿದ್ದುವು, ಇವಾಗ ಹೇಗಾದುವು.. ಇದಕ್ಕೆಲ್ಲಾ ಪ್ರೇರಣೆ ಏನು ಎಂಬ ನಿಟ್ಟಿನಲ್ಲಿ ನಡೆದ ಒಂದು ಸಂವಾದ ಇಲ್ಲಿದೆ.

ಪರ್ಯಾಯ ಮಾಧ್ಯಮದ ಸಂವಾದ ಆರಂಭಿಸುತ್ತಿರುವ ರಾಜೇಂದ್ರ ಮತ್ತು ನಾಗೇಗೌಡ ಕೀಲಾರ

ರಾಜೇಂದ್ರ: ಇದರ ಆರಂಭ ತುಂಬಾನೆ ಅನಾಸಕ್ತಿದಾಯಕವಾಗಿತ್ತು. 2012ರ ಸುಮಾರಿನಲ್ಲಿ ಒಂದಷ್ಟು ಫೇಸ್ಬುಕ್ ಗುಂಪುಗಳಲ್ಲಿ ಸಮಾನ ಮನಸ್ಕರನ್ನು ಸೇರಿಸಿ ಯುಪಿಎ ಸರಕಾರದ ಭ್ರಷ್ಟಾಚಾರ, ಮನಮೋಹನ್‍ಸಿಂಗರ ಮೌನ ಕುರಿತು ಕಿಚ್ಚು ಹತ್ತಿಸುವ ಬರಹಗಳು, ಪೋಸ್ಟರ್‍ಗಳು ಶುರುವಾದುವು. ಹಾಗೆಯೇ ‘ಗುಜರಾತ್ ಮಾಡೆಲ್’ ಅನ್ನು ಪರಿಚಯಿಸಲಾಯಿತು. ಇವೆಲ್ಲವನ್ನೂ ಹೆಚ್ಚು ಪ್ರಚುರಪಡಿಸಲು ಮೇಲ್ವರ್ಗದ ವಿದ್ಯಾವಂತ ಜನರು ನಾ ಮುಂದು ತಾ ಮುಂದು ಎಂಬಂತೆ ಮುಗಿಬಿದ್ದರು. ಮೀಸಲಾತಿ ಮತ್ತು ಅಹಿಂದ ವರ್ಗಗಳಿಗೆ ಸರಕಾರಗಳು ಕೊಡುತ್ತಿರುವ ಸವಲತ್ತುಗಳು ಇವರ ಕಣ್ಣು ಕುಕ್ಕಿದ್ದವು. ಅದೆಲ್ಲವನ್ನು ತೊಡೆದುಹಾಕಲು ಹಿಂದು ಮೂಲಭೂತವಾದವನ್ನು ಹೆಚ್ಚು ಹೆಚ್ಚು ಹರಡುವುದು ಮತ್ತು ಪ್ರಸ್ತುತ ಇರುವ ಸರಕಾರವನ್ನು ಮತ್ತೆ ಆರಿಸದಂತೆ ತಡೆದು ‘ಹಿಂದುತ್ವ ಸರಕಾರ’ವನ್ನು ಅಧಿಕಾರಕ್ಕೆ ತರುವುದು ಈ ಜನರ ಉದ್ದೇಶವಾಗಿತ್ತು. ಇದು ಎಲ್ಲ ಜನರ ನೆಮ್ಮದಿಯ ಬದುಕನ್ನು ನನಸು ಮಾಡುವ ಆಶಯವನ್ನು ಉಳ್ಳದ್ದೇನೂ ಆಗಿರಲಿಲ್ಲ. ಈ ಸಂಕಲ್ಪದ ಈಡೇರಿಕೆಗೆ ಸಿಕ್ಕಿದ್ದೇ ಸುಲಭದ ‘ಸೋಶಿಯಲ್ ಮೀಡಿಯಾ’.

ನಾಗೇಗೌಡ: ಗುಜರಾತ್ ಮಾಡೆಲ್ ನಮಗೆ ಸಿಕ್ಕಿದ್ದೇ ಈ ಸೋಶಿಯಲ್ ಮೀಡಿಯಾದಿಂದ. ಅದೇ ಸಮಯದಲ್ಲಿ ಪ್ರಪಂಚದ ಬೇರೆಬೇರೆ ದೇಶದ ಉನ್ನತ ಗುಣಮಟ್ಟದ ರಸ್ತೆ ಸಾರಿಗೆ, ರೈಲು, ಆಣೆಕಟ್ಟು, ಆಸ್ಪತ್ರೆಗಳ ಪೋಟೋ ತೆಗೆದು ಅವನ್ನು ಮಾರ್ಪಡಿಸಿ ಅವೆಲ್ಲಾ ಗುಜರಾತಿನವು ಅಂತ ಪ್ರಚಾರ ಮಾಡಲಾಯಿತು.

ರಾಜೇಂದ್ರ: ಹೌದು.. ನಮಗೆಲ್ಲಾ ಆಗಷ್ಟೇ ಇಂಟರ್ ನೆಟ್ ಸುಲಭವಾಗಿ ಮೊಬೈಲ್ ಪೋನುಗಳಲ್ಲಿ ಸಿಗಲು ಶುರುವಾಗಿತ್ತು. ಅದಕ್ಕೂ ಮೊದಲು GPRS ತಂತ್ರಜ್ಞಾನದಿಂದ ತುಂಬಾ ನಿಧಾನವಾಗಿ ಸಿಗುತ್ತಿದ್ದ ಇಂಟರ್ ನೆಟ್ಟು android ಪೋನುಗಳಲ್ಲಿ ಚೂರು ವೇಗವಾಗಿ ಸುಲಭವಾಗಿ ಸಿಕ್ಕಿತು. 2ಉ ಹಗರಣವನ್ನು ಟೀಕಿಸಲು ಅದೇ ವೇಗದ ‘ನೆಟ್ಟು’ ಬಳಸಿದೆವು. ಆದರೆ ನಮಗೆ ಇಲ್ಲಿ ಮೂಲಭೂತವಾದ ಹರಡಲು ಶುರುವಾಗಿದೆ ಎಂಬುದು ತಿಳಿಯುವ ವೇಳೆಗೆ ‘ಹಿಂದುತ್ವ ರಾಜಕಾರಣ’ವನ್ನು ಹರಡಲು ಭದ್ರ ನೆಲೆಯನ್ನು ಅದಾಗಲೇ ಹಾಕಿ ಆಗಿತ್ತು. ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ಉಳಿದ ಯಾವ ಪಕ್ಷಗಳು ಇನ್ನು ಕೂಡ ಯೋಚಿಸಿರಲೇ ಇಲ್ಲ ಅನಿಸತ್ತೆ.
ಆಗಷ್ಟೇ ನೆಟ್ಟು ಬಳಸಲು ಶುರುವಾದ ಯುವಜನಕ್ಕೆ, ಅದಾಗಲೇ ಪಕ್ಕಾ ಸಿದ್ದಗೊಂಡ ಸುಳ್ಳು ಮಾಹಿತಿಗಳು ದಿಕ್ಕು ತಪ್ಪಿಸಲು ಆರಂಭಿಸಿದವು. ಇದನ್ನು ನಾವ್ಯಾರು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸೋಶಿಯಲ್ ಮೀಡಿಯಾದ ಹರವು ನಮಗೆ ಅರಿವಾಗಿರಲಿಲ್ಲ.

ನಾಗೇಗೌಡ: ನೋಡಿ ಕರ್ನಾಟಕದಲ್ಲಿ ಜನವರಿ 2016ರ ವೇಳೆಗೆ 2 ಕೋಟಿ 20 ಲಕ್ಷಕ್ಕೂ ಮಿಕ್ಕಿದ ಜನರ ಹತ್ತಿರ ಇಂಟರ್ ನೆಟ್ ಸಂಪರ್ಕವಿತ್ತು ಅನ್ನುತ್ತೆ ಸರಕಾರೀ ವರದಿ. 2018 ಮೇ, ಚುನಾವಣೆ ವೇಳೆಗೆ ಈ ಸಂಖ್ಯೆ ಹತ್ತತ್ತಿರ ಮೂರು ಕೋಟಿ ಬಳಕೆದಾರರನ್ನು ಹೊಂದಿರುವ ಸಾಧ್ಯತೆಯಂತೂ ಇದೆ. ಮತ್ತು ಬಳಸುವ ಪೋನ್‍ಗಳಲ್ಲಿ ಅಮೂಲಾಗ್ರವಾದ ಬದಲಾವಣೆಯನ್ನ ನಾವು ನೋಡಬಹುದು. ಮೊದಲು ಬರಿ ಕರೆ ಮತ್ತು ಮೆಸೇಜ್‍ಗಳಿಗೆ ಸೀಮಿತವಾಗಿದ್ದೋ, ಇವಾಗ ಬಹುತೇಕ ಮೊಬೈಲ್‍ಗಳು ವಾಟ್ಸ್ ಅಪ್ ಮತ್ತು ಫೇಸ್ಬುಕ್ ಖಾತೆಗಳನ್ನು ಹೊಂದಿವೆ. ಒಂದು ಸುಳ್ಸುದ್ದಿ, ವದಂತಿಯನ್ನು ಸುಮ್ಮನೆ ಹತ್ತು ಜನಕ್ಕೆ ಕಳಿಸಿದ್ರೆ ಸಾಕು, ಅವು ಲಕ್ಷಾಂತರ ಜನಕ್ಕೆ ಹೋಗಿ ತಲುಪಿ ಬಿಡುತ್ತವೆ. ಒಂದು ಸರಿಯಾದ ಸೋಶಿಯಲ್ ಮಿಡಿಯಾ ಟೀಮ್ ಕೆಲಸಕ್ಕೆ ಕುಳಿತರೆ ಈ ಮೂರು ಕೋಟಿ ಜನರನ್ನು ತಲುಪುವುದು ಬಹಳ ಸುಲಭ ಮತ್ತು ಈ ಬಳಕೆದಾರರೆಲ್ಲಾ ಬಹುತೇಕ ಮತ ಚಲಾವಣೆಯ ಹಕ್ಕು ಉಳ್ಳವರೇ ಆಗಿರ್ತಾರೆ. 16- 18 ವಯಸ್ಸು ಮಿರಿದವರೇ ಅತಿ ಹೆಚ್ಚು ಜನರು. ಅಲ್ಲಿಗೆ ಬಹುಪಾಲು ಮತದಾರರನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಮಯಾಸಮಯದ ಹಂಗಿಲ್ಲದೆ, ಕಾನೂನು -ಕಟ್ಟಳೆಗಳ ವ್ಯಾಪ್ತಿ ಇಲ್ಲದೆ ಪ್ರಚೋದಿಸುವ ಬರಹಗಳು, ಪೋಟೋಗಳು, ವಿಡಿಯೋಗಳ ಮೂಲಕ ತಲುಪಿದ್ದಾರೆ.

ರಾಜೇಂದ್ರ: ಇವರಿಗೆ ಬೇಕಾದ ಜನ ಕೂಡ ಯುವಜನರೇ ಆಗಿದ್ರು. ನೋಡಿ ವಿದ್ಯಾರ್ಥಿ ದೆಸೆಯಿಂದ ಶುರುವಾಗಿ ಕಾಲೇಜು ಮುಗಿವವರೆಗೂ ಹಂತಹಂತವಾಗಿ ದಶಕಗಳಿಂದ ‘ಹಿಂದುತ್ವ ರಾಜಕಾರಣ’, ಗಾಂಧೀ-ನೆಹರು ವಿರೋಧ, ಇಸ್ಲಾಂ ದ್ವೇಷಗಳನ್ನು ಯುವಜನರಲ್ಲಿ ತುಂಬುವ ಕೆಲಸವನ್ನು ಸಂಘಪರಿವಾರ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಮತ್ತೆ ಇಂತಹ ಅನರ್ಥಗಳನ್ನು ಹರಡುವ ಮೂಲಕ ಮತ್ತೊಂದು ಚುಚ್ಚುಮದ್ದನ್ನು ನೀಡಿ ಹಳೆಯ ಮೂಲಭೂತವಾದ ಮತ್ತಷ್ಟು ಉದ್ರೇಕಗೊಳ್ಳುವಂತೆ ಮಾಡ್ತಾ ಇದ್ದಾರೆ ಅಷ್ಟೇ!
ಮೂರು ಕೋಟಿಯಷ್ಟು ಜನರಿಗೆ ಹೀಗೆ ಸದಾ ಕಾಲವೂ ಸುಳ್ಸುದ್ದಿಗಳನ್ನ ತಲುಪಿಸುವುದು, ಅಭಿವೃದ್ದಿಯ ಭ್ರಮೆ ಹುಟ್ಟಿಸುವುದು ಮಾಡಿದಾಗ ಅದ್ರ ಫಲಿತಾಂಶವಾಗಿ ಗೋ ರಕ್ಷಣೆಯ ಹೆಸರಿನ ಗೂಂಡಾಗಳು, ದಲಿತರ ಮೇಲೆ ಹಲ್ಲೆ, ಬರಹಗಾರರ ಕೊಲೆ, ಇಂತಹವು ನಿತ್ಯವು ನಡೆದು ದೇಶದ ನೀತಿ-ನಿರೂಪಣೆಗಳ ಕಡೆಗೆ ನಮ್ಮ ಗಮನಕೊಡಲು ಸಾಧ್ಯವಾಗದೆ ನಿತ್ಯ ರಗಳೆಗಳಲ್ಲೇ ಕಳೆಯುವಂತಾಗುತ್ತದೆ.

ನಾಗೇಗೌಡ: ಫೇಸ್ಬುಕ್, 60 ರುಪಾಯಿ ತಗೊಂಡು ಪೋಸ್ಟ್‍ಗಳನ್ನ ಬೂಸ್ಟ್ ಮಾಡತ್ತೆ. ಅದು ಕನಿಷ್ಠ 2000 ಜನಕ್ಕೆ ತಲುಪುವಂತೆ ನೋಡಿಕೊಳ್ಳುತ್ತೆ. ನೀವು ಇನ್ನು ಹೆಚ್ಚು ಹಣ ಕೊಟ್ಟರೆ ಇನ್ನೂ ಹೆಚ್ಚು ಜನರಿಗೆ ತಲುಪಿಸುತ್ತದೆ. ಅದಕ್ಕೆ ಬೇಕಿರುವುದು ಹಣವಷ್ಟೇ. ಆದ್ರೆ ಆ ಪೋಸ್ಟ್‍ಅನ್ನು ಪರಿಶೀಲಿಸಿದ ನಂತರ ಸಾರ್ವಜನಿಕರಿಗೆ ಕಾಣುವಂತೆ ಮಾಡುವುದು ಒಳ್ಳೆಯದು. ಹಾಗೆ ಪರಿಶೀಲಿಸ್ತಿವಿ ಅನ್ನೋದು ಅವರ ನಿಯಮಗಳಲ್ಲಿ ಇದೆ. ಆದರೆ ಹಾಗೆ ಮಾಡುತ್ತಿಲ್ಲ.
ಇನ್ನು ಈ ಪೋಸ್ಟ್ ಅಥವಾ ಆಡಿಯೋ/ ವಿಡಿಯೋವನ್ನು ತಮಗೆ ಬೇಕಾದ ರೀತಿಯಲ್ಲಿ 2-3 ನಿಮಿಷದಲ್ಲಿ ಸಿದ್ದಗೊಳಿಸಿ ಹರಿಯಬಿಟ್ಟರೆ ಸಾಕು.. ಅದು ತನ್ನಷ್ಟೇ ಹರಡಿಕೊಳ್ಳುತ್ತಾ ಹೋಗತ್ತೆ. ಫೇಸ್ಬುಕ್‍ಗಿಂತಲೂ ವಾಟ್ಸ್ ಅಪ್ ಇದ್ರಲ್ಲಿ ಹೆಚ್ಚು ಪರಿಣಾಮಕಾರಿ. ಒಬ್ಬ ಅನಕ್ಷರಸ್ತ ಕೂಡ ಸುಲಭವಾಗಿ ವಾಟ್ಸ್‍ಅಪ್‍ನ ವಿಡಿಯೋ/ ಆಡಿಯೋ ಅಥವಾ ಪೋಟೋಗಳನ್ನು ನೋಡಿ ಪ್ರಚೋದನೆಗೊಳ್ಳಬಲ್ಲ. ಮತದಾರನಿಗೆ ‘ಅಭಿಪ್ರಾಯ’ವನ್ನು ಈ ಸೋಶಿಯಲ್ ಮಿಡಿಯಾಗಳು ರೂಪಿಸ್ತವೆ ಅಥವಾ ಹೇರುತ್ತವೆ.

ರಾಜೇಂದ್ರ: ಟ್ವಿಟ್ಟರ್‍ನಂತಹ ಸೋಶಿಯಲ್ ಮಿಡಿಯಾ, ಹೆಚ್ಚು ಸಿರಿವಂತ ವರ್ಗದ, ವಿದ್ಯಾವಂತ ಜನರ ಬಳಕೆಯಲ್ಲಿದೆ. ಅದರ ಪ್ರಭಾವ ಕರ್ನಾಟಕದ ಒಳಗೆ ಬಹಳ ಕಡಿಮೆ ಆದ್ರೆ ಫೇಸ್ಬುಕ್ ಮತ್ತು ವಾಟ್ಸ್‍ಅಪ್‍ಗಳು ನೀವು ಹೇಳಿದಂತೆ ಬಹುಜನರನ್ನು ತಲುಪುವ ಸುಲಭದ ಮಾಧ್ಯಮ. ಇಂದು ಸುದ್ದಿ ಮಾಧ್ಯಮಕ್ಕಿಂತಲೂ ಸೋಶಿಯಲ್ ಮಿಡಿಯಾ ಜನರನ್ನು ಮುಟ್ಟುವಲ್ಲಿ ಹೆಚ್ಚು ಯಶಸ್ವಿಯಾಗಿದೆ. ಆದರೆ ಅದು ಮುಟ್ಟಿಸಿದ್ದು ಹೆಚ್ಚು ಹೆಚ್ಚು ಸುಳ್ಳು ಸುದ್ದಿಗಳನ್ನೇ ಎಂಬುದು ವಿಪರ್ಯಾಸ.

ನಾಗೇಗೌಡ: ಯಾವಾಗ ಫೇಸ್ಬುಕ್, ವಾಟ್ಸ್‍ಅಪ್‍ಗಳನ್ನೇ ಗುರಿಯಾಗಿಸಿಕೊಂಡ ಹಿಂದುತ್ವ ರಾಜಕಾರಣವನ್ನು ಹಬ್ಬಿರುವ, ಸುಳ್ಸುದ್ದಿಗಳ ‘ನ್ಯೂಸ್ ಪೋರ್ಟಲ್’ಗಳು, ಪೇಜ್‍ಗಳು ಶುರುವಾದುವೋ ಇನ್ನಷ್ಟು ಅಪಪ್ರಚಾರ ಹೆಚ್ಚಾಯಿತು. ಜನರ ಸ್ವಂತ ಅಭಿಪ್ರಾಯಗಳೇ ಒಡೆದು ಹೋದುವು.

ರಾಜೇಂದ್ರ: ಈ ತರಹದ ಸುಳ್ಸುದ್ದಿಗಳು ಆರೋಗ್ಯಕರ ಸಮಾಜಕ್ಕೆ ತೀವ್ರವಾದ ಹಾನಿಯನ್ನುಂಟು ಮಾಡುತ್ತವೆ. ಆದರೆ ಇದನ್ನು ತಡೆಯುವವರು ಯಾರು? ಸರಕಾರ ಇಂತಹದಕ್ಕೆ ಕಾನೂನಿನ ಕಡಿವಾಣ ಹಾಕಬೇಕು. ಆದರೆ ಸದ್ಯಕ್ಕೆ ಅಂತಹ ಕಡಿವಾಣಗಳು ಇಲ್ಲ. ಫೇಸ್ಬುಕ್ ಮತ್ತು ವಾಟ್ಸ್‍ಅಪ್‍ಗಳಲ್ಲಿ ನಿಮಿಷ ನಿಮಿಷಕ್ಕೂ ಬೇಕಾಬಿಟ್ಟಿಯಾಗಿ ನೈತಿಕತೆಯ ಎಲ್ಲೆಯನ್ನು ಮೀರಿದ ಅಪಪ್ರಚಾರ ಈಗಲೂ ಮುಂದುವರಿಯುತ್ತಿವೆ. ಇವು ಸೆಕ್ಯೂಲರ್ ರಾಜಕಾರಣಕ್ಕೆ ನೆಗೆಟಿವ್ ಆಗಿ, ಹಿಂದುತ್ವ ರಾಜಕಾರಣಕ್ಕೆ ಪಾಸಿಟಿವ್ ಆದ ಅಭಿಪ್ರಾಯಗಳನ್ನು ಮಂಡಿಸುತ್ತಾ ಹೋದುವು. ಇದಕ್ಕೆ ಪ್ರತಿಯಾಗಿ ನಿಜಾಂಶವನ್ನು ಹೇಳುವ, ತಿಳಿಸುವ ಮಾಧ್ಯಮಗಳು ಯಾವುವೂ ಇರಲಿಲ್ಲ. ಸುದ್ದಿ ಮಾಧ್ಯಮಗಳು ಕೂಡ ಈ ಸೋಶಿಯಲ್ ಮಿಡಿಯಾದಿಂದ ಸುದ್ದಿಗಳನ್ನು ಎತ್ತಿಕೊಂಡು ಪ್ರಕಟಿಸಲು ಅನುವಾದುವು ಪರಂತು ಅವನ್ನು ವಿಶ್ಲೇಷಣೆ ಮಾಡುವ ಗೋಜಲಿಗೆ ಹೋಗಲೇ ಇಲ್ಲ. ಅಲ್ಲದೆ ಕನ್ನಡದ ಸುದ್ದಿ ಮಾಧ್ಯಮಗಳು ಒಂದೇ ಮೇಲ್ವರ್ಗದ ಜಾತಿಗೆ ಸೇರಿದ ಸಂಪಾದಕರು ಮತ್ತು ಮೂಲಭೂತವಾದಿ ಮಾಲೀಕರಿಗೆ ಸೇರಿದವುಗಳಾಗಿವೆ. ಆಮೇಲೆ ಈ ಫೇಸ್ಬುಕ್, ವಾಟ್ಸ್‍ಅಪ್‍ನ ಪೇಜ್‍ಗಳು ಮತ್ತು ಗುಂಪುಗಳ ದೆಸೆಯಿಂದ ಮೃದು ಹಿಂದುತ್ವವಾದಿಗಳು, ಅಂತರ್ಯದಲ್ಲಿ ಹಿಂದುತ್ವ ಅಡಗಿಟ್ಟು ಕೊಂಡವರು, ಕರ್ಮಠ ಮೂಲಭೂತವಾದಿಗಳು ಒಂದೆಡೆ ಸೇರಿ ಒಗ್ಗಟ್ಟಾದರೆ ಸೆಕ್ಯೂಲರ್‍ವಾದಿಗಳು ತಮ್ಮಲ್ಲಿನ ಭಿನ್ನವಾದಗಳಿಗಾಗಿ ಕಿತ್ತಾಡಿಕೊಂಡು ಚದುರಿಹೋದರು. ಇದೊಂದು ದೊಡ್ಡ ವಿಪರ್ಯಾಸ!

ನಾಗೇಗೌಡ: ಫೇಸ್ಬುಕ್ ಮತ್ತು ವಾಟ್ಸ್‍ಅಪ್‍ಗಳನ್ನ ಉಪಯೋಗಿಸಿಕೊಂಡು ಜಾತಿ ಪ್ರಜ್ಞೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಸಹಾಯವಾಯಿತು ಅನಿಸತ್ತೆ.

ರಾಜೇಂದ್ರ: ಈ ಸಲದ ಚುನಾವಣೆಯಲ್ಲಿ ಗೆದ್ದಿದ್ದು ಜಾತಿಗಳೇ ಪರಂತು ಪಕ್ಷಗಳಲ್ಲ. ಜಾತಿಯನ್ನು ನಿರ್ಮೂಲನೆ ಮಾಡುವುದು ಅಷ್ಟು ಸುಲಭವಾಗಿಲ್ಲ. ಅಂತಹ ಜಾತಿ ಕಾರಣವಾಗಿಯೇ ಸಿದ್ದರಾಮಯ್ಯನವರು ಸೋಲಬೇಕಾಯಿತು. ಫ್ಯೂಡಲ್ ಜಾತಿಗಳು ಕಡೇಗಾಲದಲ್ಲೂ ಅಹಮ್ಮು ಉಳಿಸಿಕೊಳ್ಳುತ್ತವೆಯೇ ಹೊರತು ಅನ್ನವನ್ನಲ್ಲ. ಜಾತೀಯ ಅಹಮ್ಮು ಸೋಶಿಯಲ್ ಮಿಡಿಯಾದಲ್ಲಿ ಅತಿ ಹೆಚ್ಚು ರೌರವವನ್ನು ಸೃಷ್ಟಿಸಿದೆ. ಒಂದೊಂದು ಜಾತೀಯ ಜನರು ಅವರದೇ ಅಡ್ಡ, ಗತ್ತು, ಸಮುದಾಯ ಎನ್ನುವ ಹತ್ತು ಹಲವು ಹೆಸರುಗಳಲ್ಲಿ ಗುಂಪುಗಳನ್ನು ಮಾಡಿಕೊಂಡಿವೆ. ಇವು ಜಾತಿಗಳ ನಡುವಿನ ಅಂತರವನ್ನು ಮತ್ತಷ್ಟು ದೊಡ್ಡದು ಮಾಡುತ್ತಾ ಸಂಬಂಧಗಳನ್ನು ಸೂಕ್ಷ್ಮಗೊಳಿಸಿವೆ.

ನಾಗೇಗೌಡ: ಸುದ್ದಿ ಮಾಧ್ಯಮಗಳು ಅವುಗಳ ethics ಅನ್ನೋದನ್ನು ಬಿಟ್ಟು ಮುಚ್ಚು ಮರೆಯಿಲ್ಲದೆ, ನಾಚಿಕೆಯಿಲ್ಲದೆ ಒಂದು ಪಕ್ಷದ ವಕ್ತಾರರಂತೆ ನಿಂತುಕೊಂಡು ಸಮರ್ಥಿಸಿಕೊಳ್ಳುವುದು ನೋಡಿದ್ರೆ ಬಹಳ ಬೇಸರವಾಗತ್ತೆ.

ರಾಜೇಂದ್ರ: ಅವುಗಳ ಬಗ್ಗೆ ಮಾತಾಡುವುದೇ ಅಸಹ್ಯವೆನಿಸತ್ತೆ. ಒಬ್ಬ ಪ್ರಧಾನಿ, ಒಂದು ವಿಧಾನಸಭೆಯ ಚುನಾವಣಾ ಪ್ರಚಾರ ಸಭೆಗಳಲ್ಲಿ ನಿಂತು ಸುಳ್ಳುಗಳನ್ನೇ ಹೇಳುವಾಗ ಒಬ್ಬರೂ ಅವುಗಳ ವಿಶ್ಲೇಷಣೆ ಮಾಡುವ ಬದಲು ಮೋದಿ ದಿಗ್ವಿಜಯ, ಮೋದಿ ದಂಡಯಾತ್ರೆ ಅಂತ ಕಾರ್ಯಕ್ರಮ ನಿರೂಪಿಸಿಕೊಂಡು ಚೀರಾಡುತ್ತಿರುತ್ತಿದ್ದವು. ಇವು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಅನ್ನುವ ಬದಲು ಪಕ್ಷವೊಂದರ ‘ವಂದಿಮಾಗಧಿಗಳ ಕೂಟ’ ಅನ್ನಬಹುದು.

ರಾಜೇಂದ್ರ: ಸೈಕೋಲಾಜಿಕಲ್ ವಾರ್ (ಮಾನಸಿಕ ಯುದ್ದ) ಬಗ್ಗೆ ಗೊತ್ತಲ್ಲವಾ? ಈ ಚುನಾವಣಾ ತಂತ್ರವು ಸದ್ಯಕ್ಕೆ ಹಾಗೆಯೆ ಆಗಿದೆ

ನಾಗೇಗೌಡ: ಹಾ! ಈ ಸಮಯದಲ್ಲಿ ಕೇಂಬ್ರಿಜ್ ಅನಾಲಿಟಿಕಾ ಕುರಿತು ಸ್ವಲ್ಪ ಹೇಳೋದಿದೆ.ಫೇಸ್ಬುಕ್ಕು ನಾವು ಖಾತೆ ತೆರೆಯುವಾಗ ನಮ್ಮೆಲ್ಲ ಖಾಸಗಿ ವಿವರಗಳನ್ನು ಪಡೆದುಕೊಂಡು ಇದನ್ನು ಯಾರಿಗೂ ಕೊಡುವುದಿಲ್ಲ ಅಂತ ವಾಗ್ದಾನ ಮಾಡಿತ್ತು. ಆದ್ರೆ ಒಬ್ಬ ಸಂಶೋಧಕನ ಮನವಿ ಮೇರೆಗೆ ಶೈಕ್ಷಣಿಕ ಸಂಶೋಧನೆಗಾಗಿ ಒಂದಷ್ಟು ದತ್ತಾಂಶಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಈ ಅವಕಾಶದಲ್ಲಿ ಆತ ಕೆಲವು ಮಂದಿಯ ದತ್ತಾಂಶದ ಬದಲು ಅಲ್ಲಿದ್ದ ಯಾವುದೊ ಒಂದು ಕೊರತೆಯನ್ನು ಕಂಡುಹಿಡಿದು ಆ ಮೂಲಕ ಮಿಲಿಯನ್‍ಗಟ್ಟಲೆ ಜನರ ವೈಯುಕ್ತಿಕ ದತ್ತಾಂಶಗಳನ್ನು ಕದ್ದು ಬಿಟ್ಟ. ಕೆಲವು ಸಮಯದ ಬಳಿಕ ಇದು ಫೇಸ್ಬುಕ್ ಕಂಪನಿಗೆ ತಿಳಿಯಿತು. ಈ ಕುರಿತು ಆ ಸಂಶೋಧಕನಲ್ಲಿ ಮಾತಾಡಿ ಸಮಸ್ತ ದತ್ತಾಂಶಗಳನ್ನೂ ಅಳಿಸಿ ಹಾಕುವಂತೆ ಮನವಿ ಮಾಡಿದರು. ಆತನೂ ಒಪ್ಪಿಕೊಂಡ. ಅಲ್ಲಿಗೆ ಸಮಸ್ಯೆ ಬಗೆಹರಿಯಿತೆಂದು ಫೇಸ್ಬುಕ್ ಕಂಪನಿ ಸುಮ್ಮನಾಯಿತು. ಆದರೆ ಅಸಲಿಗೆ ಆತ ಆ ದತ್ತಾಂಶಗಳನ್ನು ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‍ಅನ್ನು ಗೆಲ್ಲಿಸುವ ಸಲುವಾಗಿ ಕೆಲಸ ಮಾಡುತ್ತಿರುವ ಅನಲಿಟಿಕಾ ಸಂಸ್ಥೆಗೆ ಮಾರಿಬಿಟ್ಟ. ಆ ಸಂಸ್ಥೆಯು ಟ್ರಂಪ್ ಗೆಲ್ಲಿಸುವ ಸಂಬಂಧ ಈ ದತ್ತಾಂಶಗಳನ್ನು ಬಳಸಿಕೊಂಡು ಮತದಾರರನ್ನು ಪ್ರಭಾವಿಸಿತು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಫೇಸ್ಬುಕ್ ಕಂಪನಿಯು ಅದರ ಬಳಕೆದಾರರಿಗೆ ಮಾಡಿದ್ದು ವಚನದ್ರೋಹದ ಕೆಲಸ.
ಈ ತರಹದ ಕೆಲಸಗಳು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುತ್ತಿದೆ. ಅದರಲ್ಲೂ ‘ಹಿಂದುತ್ವ ರಾಜಕಾರಣದ’ ಪೇಜುಗಳು ಇಂತಹ ಸೌಲಭ್ಯಗಳನ್ನ ತುರ್ತಾಗಿ ಬಳಸಿಕೊಳ್ಳುತ್ತಿವೆ.

ರಾಜೇಂದ್ರ: ಅದಕ್ಕೆ ಉದಾಹರಣೆಯಾಗಿ ಪೋಸ್ಟ್ ಕಾರ್ಡ್, ತ್ರಿಶೂಲ, ಡಮರುಗ, ನಮೋ ಹೆಸರಿನ ಗುಂಪುಗಳು ನಾವು ಲೈಕಿಸದಿದ್ದರೂ ನಮ್ಮ ಫೇಸ್ಬುಕ್ ಟೈಮ್‍ಲೈನ್‍ನಲ್ಲಿ ಮೂಡಿಬರುತ್ತವೆ. ಬೇಡದ, ಮಾರ್ಪಡಿಸಿದ ಸುಳ್ಳು ಸುದ್ದಿಗಳನ್ನು ನಮಗೆ ಕಾಣಿಸುವಂತೆ ಮಾಡುತ್ತವೆ, ಓದಿಸುತ್ತವೆ ಕಡೆಗೆ ಅವುಗಳ ಅಭಿಪ್ರಾಯವನ್ನು ನಮ್ಮ ಅಭಿಪ್ರಾಯವಾಗಿಸಿ ಮತ್ತಷ್ಟು ಜನರಿಗೆ ಹಂಚಿಸುತ್ತವೆ. ಒಳ್ಳೆಯ, ಸಾಮರಸ್ಯದ ಸುದ್ದಿಗಳಿಗಿಂತ ಇಂತಹ ಕೆಟ್ಟ, ಕೋಮು ಕದಡುವ ಸುದ್ದಿ ಲಕ್ಷಾಂತರ ಮೊಬೈಲ್‍ಗಳನ್ನ ಕ್ಷಣ ಮಾತ್ರಗಳಲ್ಲಿ ತಲುಪುತ್ತವೆ. ಇವಾಗ ಎಲ್ಲ ಪಕ್ಷಗಳು ಸೋಶಿಯಲ್ ಮಿಡಿಯಾಗಳಿಗೆ ಬಂದಿಳಿದಿವೆ. ಅವು ಹಿಂದುತ್ವ ರಾಜಕಾರಣಕ್ಕೆ ಸಡ್ಡು ಹೊಡೆಯುವಷ್ಟು ಬಲವಾಗಿಲ್ಲ. ಅದಕ್ಕೂ ಹೆಚ್ಚಿಗೆ ಕಾಲ ಅದಾಗಲೇ ಮಿಂಚಿ ಹೋಗಿದೆ. ಜನರನ್ನು ಮಾನಸಿಕವಾಗಿ ಮಾರ್ಪಡಿಸುವ ಕೆಲಸವನ್ನು ಮೂಲಭೂತವಾದಿ ಯಶಸ್ವಿಯಾಗಿ ಮಾಡಿಬಿಟ್ಟಿದ್ದಾರೆ. ಇವಾಗ ಇ ಸೋಂಕಿನಿಂದ ಅವರನ್ನು ಹೊರತರುವುದು ಯಮಸಾಹಸ.
ಇವತ್ತು ಸೋಶಿಯಲ್ ಮಿಡಿಯಾ ನಾವು ನಿರ್ಲಕ್ಷ್ಯ ಮಾಡುವ ಮಟ್ಟದಲ್ಲಿ ಇಲ್ಲ. ಅದು ನಮ್ಮನ್ನ ತಿನ್ದುಹಾಕುವ ಮಟ್ಟಿಗೆ ದೈತ್ಯವಾಗಿ ಬೆಳೆಯುತ್ತಿದೆ. ಹಾಗಾಗಿ ಅದಕ್ಕೆ ಉದ್ರೇಕವಾಗಿ ಪ್ರತಿಕ್ರಿಯಿಸುವುದಕ್ಕಿಂತಲೂ ಹಂತಹಂತವಾಗಿ ನಿಜವನ್ನು ಬಿಡಿಸಿ ತೋರುವ ಸಾವಧಾನದ ಪ್ರಯತ್ನವಾಗಬೇಕು. ನಾವೀಗ ಕಾಲದ ಹೊಸಿಲಿನಲ್ಲಿ ನಿಂತಿದ್ದೇವೆ. ನಮ್ಮ ಹೆಜ್ಜೆಗಳು ಎಚ್ಚರವಾಗಿರಬೇಕು, ನಮ್ಮ ಜನರನ್ನು ಈ ಸೈಕೊಲಾಜಿಕಲ್ ಭ್ರಮೆಯ ರಾಜಕಾರಣಗಳಿಂದ ಬಿಡಿಸಿಕೊಳ್ಳಬೇಕು. ಇಲ್ಲದಿದ್ದರೆ ಚುನಾವಣೆ, ಚಳುವಳಿ ಯಾವು ಕೂಡ ನಮ್ಮ ಸಮಾಜವನ್ನು, ಪ್ರಜಾಪ್ರಭುತ್ವವನ್ನು ಕಾಪಾಡಲಾರವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...