ಕಾಶ್ಮೀರ ಪತ್ರಿಕೆಗಳ ಪ್ರತಿಭಟನೆಯ ‘ದಿಟ್ಟತೆ’ ಸಮಸ್ತ ಪತ್ರಿಕೋದ್ಯಮಕ್ಕೆ ಮಾದರಿಯಾಗಬೇಕಿದೆ

0

ಕಳೆದ ಭಾನುವಾರ ಕಾಶ್ಮೀರ ಮೂಲದ 13 ದಿನಪತ್ರಿಕೆಗಳು ತಮ್ಮ ಪತ್ರಿಕೆಯ ಮುಖಪುಟವನ್ನು ಖಾಲಿಯಾಗಿ ಪ್ರಕಟಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಿದವು. ‘ಗ್ರೇಟರ್ ಕಾಶ್ಮೀರ್ ಮತ್ತು ಕಾಶ್ಮೀರ್ ರೀಡರ್’ ಎನ್ನುವ ಹೆಚ್ಚು ಪ್ರಸಾರವುಳ್ಳ ಎರಡು ದಿನಪತ್ರಿಕೆಗಳಿಗೆ ಕೇಂದ್ರದ ಮೋದಿ ಸರ್ಕಾರ ಏಕಾಏಕಿ ಜಾಹಿರಾತು ನೀಡುವುದನ್ನು ನಿಲ್ಲಿಸಿರುವುದೇ ಈ ಪ್ರತಿಭಟನೆಗೆ ನೇರ ಕಾರಣವಾಗಿದೆ. ಈ ಮೂಲಕ ಮೋದಿ ಸರ್ಕಾರಕ್ಕೆ ಪರಿಣಾಮಕಾರಿ ಸಂದೇಶ ರವಾನಿಸಿದ್ದಾರೆ.
“ಗ್ರೇಟರ್ ಕಾಶ್ಮೀರ್ ಮತ್ತು ಕಾಶ್ಮೀರ್ ರೀಡರ್ ಪತ್ರಿಕೆಗಳಿಗೆ ಕೇಂದ್ರ ಸರ್ಕಾರ ಯಾವುದೇ ವಿವರಣೆ ನೀಡದೇ ಜಾಹಿರಾತು ನಿರಾಕರಣೆ ಮಾಡಿರುವುದರ ವಿರುದ್ಧ ಪ್ರತಿಭಟಿಸಿ” ಎಂದಷ್ಟೆ ಎರಡು ಸಾಲಿನ ಬರಹವನ್ನು ಈ ಪತ್ರಿಕೆಗಳು ತಮ್ಮ ಮುಖಪುಟದಲ್ಲಿ ಹಾಕಿ ಖಾಲಿ ಪ್ರಕಟಿಸಿವೆ. ಈ ಮೂಲಕ ಆ ಎರಡು ಪತ್ರಿಕೆಗಳ ಪರ ಎಲ್ಲಾ ಪತ್ರಿಕೆಗಳು ಒಟ್ಟಾಗಿ ನಿಂತಿರುವುದು ಅಪರೂಪದ, ಧೈರ್ಯದ ಮತ್ತು ಶ್ಲಾಘನೀಯ ಕೆಲಸವಾಗಿದೆ.
ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮ ಇವತ್ತು ಆ ಘನತೆಯನ್ನು ಉಳಿಸಿಕೊಂಡಿಲ್ಲ ಎಂಬುದು ಖೇದದ ಸಂಗತಿಯಾದರು ಒಪ್ಪಿಕೊಳ್ಳಲೇಬೇಕಾದ ವಾಸ್ತವವಾಗಿದೆ. ಬಹಳಷ್ಟು ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು `ವೃತ್ತಿಧರ್ಮ’ಕ್ಕೆ ಇರಬೇಕಾದ ವಸ್ತುನಿಷ್ಠತೆಯನ್ನು ಕಳೆದುಕೊಂಡು, ತಮ್ಮ ಜನಪರ ನಿಲುವಿಗೆ ತದ್ವಿರುದ್ಧ ಪ್ರಭುತ್ವ-ಪರ ಓಲೈಕೆಗೆ ಕಟ್ಟುಬಿದ್ದಿರುವ ಈ ಸಂದರ್ಭದಲ್ಲಿ ಕಾಶ್ಮೀರದ ಪತ್ರಿಕೆಗಳ ಈ ಮಹತ್ವದ ನಡೆ ಮಾದರಿಯಾಗಲೇಬೇಕು.
ಅದೇ ದಿನ ಕಾಶ್ಮೀರ್ ಎಡಿಟರ್ಸ್ ಗಿಲ್ಡ್‍ನ ಸದಸ್ಯರು ಕಾಶ್ಮೀರದ ಪ್ರೆಸ್‍ಕ್ಲಬ್ ಎದುರು ಕುಳಿತು ಪ್ರತಿಭಟಿಸಿ, ಈ ವಿಷಯದಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ. ಕಾಶ್ಮೀರ್ ಮಾನಿಟರ್ ಪತ್ರಿಕೆಯ ಸಂಪಾದಕರಾದ ಬಶೀರ್ ಮಂಜಾರ್‍ರವರು ಈ ಪ್ರತಿಭಟನೆಯ ನೇತೃತ್ವ ವಹಿಸಿ ಕೇಂದ್ರ ಸರ್ಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ ಸರ್ಕಾರ ಆ ಎರಡು ಪತ್ರಿಕೆಗಳ ವಿಷಯದಲ್ಲಿ ಹೀಗೇಕೆ ವರ್ತಿಸಿತು ಎಂಬುದರ ಬಗ್ಗೆ ವಿವರಣೆ ನೀಡುವ ಅಗತ್ಯವಿಲ್ಲ ಅನ್ನಿಸುತ್ತದೆ. ಮೋದಿ ಸರ್ಕಾರದ ಜನವಿರೋಧಿ ನಡೆಗಳನ್ನು ಟೀಕಿಸುವವರ ವಿರುದ್ಧ ಕೇಂದ್ರ ಸರ್ಕಾರ ನೇರವಾಗಿಯೇ ಕ್ರಮ ಕೈಗೊಳ್ಳುತ್ತದೆ. ಮೋದಿಯವರ ನಡೆ ವಿರೋಧಿಸಿ ವಿಮರ್ಶಾತ್ಮಕವಾಗಿ ಲೇಖನ ಪ್ರಕಟಿಸಿದ ಏಕೈಕ ಕಾರಣಕ್ಕಾಗಿ ಫೆಬ್ರವರಿ ಮೂರನೇ ವಾರದಿಂದ ಈ ಪತ್ರಿಕೆಗಳಿಗೆ ಕೇಂದ್ರ ಸರ್ಕಾರ ಜಾಹಿರಾತು ತಡೆಹಿಡಿದಿದೆ. ಇಷ್ಟು ನಿರ್ಲಜ್ಜವಾಗಿ ವರ್ತಿಸಿದರೆ ಜನ ಗಮನಿಸುತ್ತಾರೆ ಎನ್ನುವ ಕಿಂಚಿತ್ ಕಾಳಜಿ ಸಹ ಇಲ್ಲದೇ ಹೋಗಿರುವುದು ಬಿಜೆಪಿ ಮತ್ತು ಮೋದಿಯವರ ಸಂವೇದನಾಶೂನ್ಯತೆಯನ್ನು ತೋರಿಸುತ್ತದೆ. ವಿಮರ್ಶೆಯನ್ನು ಸಹಿಸಿಕೊಳ್ಳದಿರುವುದು, ತನ್ನ ವಿರುದ್ಧ ಇರುವವರನ್ನು ತಕ್ಷಣಕ್ಕೆ ನಿರ್ನಾಮ ಮಾಡಬೇಕೆನ್ನುವುದು ಸರ್ವಾಧಿಕಾರಿಗಳ ಲಕ್ಷಣ. ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ರಫೇಲ್ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿಯೂ ಸಹ ಮೋದಿ ಸರ್ಕಾರ ಅನುಮಾನಾಸ್ಪದವಾಗಿ ನಡೆದುಕೊಂಡಿತ್ತು. ಈ ಕುರಿತು ವಿರೋಧ ಪಕ್ಷಗಳು ಹಗರಣ ನಡೆದಿದೆ ಎಂದು ದೊಡ್ಡ ದನಿಯಲ್ಲಿ ಆರೋಪಿಸಿದ್ದರು. ಸುಪ್ರೀಂಕೋರ್ಟ್ ಸಹ ರಕ್ಷಣಾ ವಿಚಾರವಾದ್ದರಿಂದ ಅರ್ಜಿ ವಜಾ ಮಾಡಿತ್ತು. ಇಂತಹ ಸಂದರ್ಭದಲ್ಲಿ ದಿ ಹಿಂದು ಪತ್ರಿಕೆ `ಭಾರತೀಯ ಸಮಾಲೋಚನಾ ತಂಡ ಮಾತುಕತೆ ನಡೆಸುತ್ತಿರುವಾಗಲೇ ಪ್ರಧಾನಮಂತ್ರಿ ಕಾರ್ಯಾಲಯ ಹಸ್ತಕ್ಷೇಪ ಮಾಡಿತ್ತು ಮತ್ತು ಆಫ್‍ಸೆಟ್ ಪಾಲುದಾರಿಕೆ ಎಚ್‍ಎಎಲ್ ಬದಲಿಗೆ ಮೋದಿ ಮಿತ್ರ ಅನಿಲ್ ಅಂಬಾನಿಗೆ ಸಿಗುವುದರಲ್ಲಿ ಮೋದಿ ಕೈವಾಡದ’ ಬಗ್ಗೆ ಸಾಕ್ಷಿ ಸಮೇತ ಸರಣಿ ಲೇಖನಗಳನ್ನು ಪ್ರಕಟಿಸಿತು.
ದಿ ಹಿಂದು ಪತ್ರಿಕೆಯ ಎನ್.ರಾಮ್‍ರವರು ಇದರ ರೂವಾರಿಯಾಗಿದ್ದರ ಅರಿತ ಕೇಂದ್ರ ಸರ್ಕಾರ ಅವರ ಮೇಲೆ ಗದಾಪ್ರಹಾರ ಮಾಡಲು ತೀರ್ಮಾನಿಸಿತು. ರಫೇಲ್ ವಿಚಾರದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್‍ರವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬಂದಾಗ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ರಕ್ಷಣಾ ಸಚಿವಾಲಯದಿಂದ ರಫೇಲ್ ಕಡತಗಳು ಕಳುವಾಗಿವೆ, ಇವೆಲ್ಲವೂ ಅಧಿಕೃತ ಗೌಪ್ಯ ದಾಖಲೆಗಳಾಗಿದ್ದು ಅರ್ಜಿದಾರರಿಗೆ ಮತ್ತು ಪತ್ರಿಕೆಯವರಿಗೆ ಸಿಕ್ಕಿದ್ದು ಹೇಗೆ? ಎಂದು ಹೇಳಿಕೆ ನೀಡುವ ಮೂಲಕ ಅದನ್ನು ಎನ್.ರಾಮ್‍ರವರ ತಲೆಗೆ ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕಿದ್ದರು. ಅವರನ್ನು ಭದ್ರತಾ ರಹಸ್ಯ ಕಾಯ್ದೆಯಡಿಯಲ್ಲಿ ಬಂಧಿಸಬೇಕೆನ್ನುವ ಮಾತುಗಳು ಕೇಳಿಬಂದಿದ್ದವು. ಅಷ್ಟರಮಟ್ಟಿಗೆ ಎನ್.ರಾಮ್‍ರವರನ್ನು ಹಣಿಯಲು ಕೇಂದ್ರ ಸರ್ಕಾರ ಮುಂದಾಗಿತ್ತು.
ನಿರ್ಭೀತ, ಸ್ವತಂತ್ರ ಪತ್ರಿಕೋದ್ಯಮ ಇಂದಿನ ತುರ್ತು ಅಗತ್ಯವಾಗಿದೆ. ಆದರೆ ಭಾರತಾದ್ಯಂತ ಹಲವು ಮಾಧ್ಯಮಗಳು ಹಣಕ್ಕಾಗಿಯೋ, ತಮ್ಮ ದ್ವೇಷ ಮನಸ್ಥಿತಿಯ ಕಾರಣಕ್ಕಾಗಿಯೋ ಅಥವಾ ಮೋದಿ ಸರ್ಕಾರದ ಭಯದ ಕಾರಣಕ್ಕಾಗಿಯೋ ಇಂದಿನ ಕೇಂದ್ರ ಸರ್ಕಾರವನ್ನು ಇನ್ನಿಲ್ಲದಂತೆ ಸಮರ್ಥಿಸಿಕೊಳ್ಳುತ್ತಿವೆ. ಬಿಜೆಪಿಯ ವಕ್ತಾರರಂತೆ ಕೆಲಸ ಮಾಡುತ್ತಿವೆ. ನೇರವಾಗಿ ಹಸಿಸುಳ್ಳುಗಳನ್ನು ಪ್ರಸಾರ ಮಾಡುತ್ತಿವೆ. ಪ್ರಜಾಪ್ರಭುತ್ವದ ಕಾವಲುನಾಯಿಗಳಾಗುವ ಬದಲು ಆಸ್ಥಾನದ ನಾಯಿಗಳಾಗಿಬಿಟ್ಟಿವೆ. ಇಂತಹ ದುರಿತ ಕಾಲದಲ್ಲಿ ಯಾವುದೋ ಎರಡು ಪತ್ರಿಕೆಗಳಿಗೆ ಜಾಹಿರಾತು ನಿಲ್ಲಿಸಿದರೆ ನಮಗೇನು, ಎಂದು ಸುಮ್ಮನಿರದೇ ಅವುಗಳ ಪರವಾಗಿ ದನಿಯೆತ್ತಿದ ಕಾಶ್ಮೀರದ ಪತ್ರಿಕೆಗಳ ಈ ಸೂಕ್ಷ್ಮತೆ, ದಿ ಹಿಂದೂ ಪತ್ರಿಕೆಯ ಎದೆಗಾರಿಕೆಯನ್ನು ಮೆಚ್ಚಲೇಬೇಕು. ಇವರಿಗೆ ವಿಶೇಷವಾಗಿ ನ್ಯಾಯಪಥ ಬಳಗ ಅಭಿನಂದನೆಗಳನ್ನು ಸಲ್ಲಿಸುತ್ತದೆ, ಜೊತೆಗೆ ಜಾಹೀರಾತು ಆಯಾಮವನ್ನೂ ಮೀರಿ ಜನಪರ ಕಾರಣಗಳಿಗೂ ಪತ್ರಿಕೆಗಳು ಇಂಥಾ ನಿಷ್ಠುರ ನಿಲುವು ತಳೆಯುವಂತಹ ವಾತಾವರಣ ಭಾರತದಲ್ಲಿ ಮತ್ತೆ ನಿರ್ಮಾಣವಾಗಲಿ ಎಂದು ಆಶಿಸುತ್ತದೆ.

LEAVE A REPLY

Please enter your comment!
Please enter your name here