Homeಅಂಕಣಗಳುಕಣ್ಣ ಮುಂದಿನ ಕೃಷಿ ಪರಿಹಾರಕ್ಕೆ ನಾವು ಕುರುಡಾಗುತ್ತಿದ್ದೇವೆ ಯಾಕೆ?

ಕಣ್ಣ ಮುಂದಿನ ಕೃಷಿ ಪರಿಹಾರಕ್ಕೆ ನಾವು ಕುರುಡಾಗುತ್ತಿದ್ದೇವೆ ಯಾಕೆ?

- Advertisement -
- Advertisement -

ಸಾಲಸೋಲ ಮಾಡಿ ಬಂಡವಾಳ ಹಾಕಿ, ವರ್ಷವಿಡೀ ಬೆವರುಹರಿಸಿ ದುಡಿದು ಬೆಳೆದ ಕಬ್ಬನ್ನು ರೈತ ಶುಗರ್ ಫ್ಯಾಕ್ಟರಿಗಳಿಗೆ ಸಪ್ಲೈ ಮಾಡುತ್ತಾನೆ. ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬನ್ನು ಸಕ್ಕರೆ ಮಾಡಿ ಲಾಭ ಮಾಡಿಕೊಂಡ ನಂತರವೂ ರೈತನ ಕಬ್ಬಿನ ಹಣವನ್ನು ಪಾವತಿಸುವುದಿಲ್ಲ. ಯಾವುದೋ ಕಂಪನಿ ಅಥವ ಗುತ್ತಿಗೆದಾರರ ಲಾಭದ ಲೆಕ್ಕಾಚಾರದಲ್ಲಿ ಸಾವಿರಾರು ಟನ್‍ಗಳಷ್ಟು ಕಾಳುಗಳು, ಆಹಾರ ಧಾನ್ಯಗಳು ಆಮದಾಗುತ್ತವೆ. ಮೆಣಸು, ರೇಷ್ಮೆ, ಅಡಿಕೆಯಂತಹ ವಾಣಿಜ್ಯ ಬೆಳೆಗಳೂ ಆಮದಾಗುತ್ತವೆ. ಪರಿಣಾಮವಾಗಿ ಕೋಟ್ಯಂತರ ರೈತರು ಬೀದಿಗೆ ಬೀಳುವಂತಾಗುತ್ತದೆ. ಕಂಪನಿ ಮಾಲಿಕರ ಮರ್ಜಿಯಲ್ಲಿರುವ ಸರ್ಕಾರಗಳು ರೈತರಿಗೆ ನ್ಯಾಯ ಕೊಡುತ್ತಿಲ್ಲ. ದಿಕ್ಕುತೋಚದ ರೈತರು ಆತ್ಮಹತ್ಯೆಗೆ ದೂಡಲ್ಪಡುತ್ತಿದ್ದಾರೆ. ಇದು ಯಾವುದೋ ಒಂದು ಬೆಳೆಯ ಕತೆಯಲ್ಲ; ಇಡೀ ದೇಶದ ರೈತಾಪಿಯ ದಿನನಿತ್ಯದ ಗೋಳು.
ಒಂದು ಅಧ್ಯಯನದ ಪ್ರಕಾರ ಪ್ರತಿ 30 ನಿಮಿಷಕ್ಕೆ ಒಬ್ಬ ರೈತ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ನಮ್ಮ ಮಾಧ್ಯಮಗಳಲ್ಲಿ ಈ ವಿಷಯಕ್ಕೆ ಸ್ಥಳಾವಕಾಶವೇ ಇಲ್ಲ. ಒಬ್ಬ ಸ್ವಾಮಿ, ರಾಜಕಾರಣಿ, ಉದ್ಯಮಿ, ಸಿನಿಮಾ ಹೀರೋ-ಹೀರೋಯಿನ್ ಇನ್ನಿತರ ಶ್ರೀಮಂತ ವರ್ಗಕ್ಕೆ ಸೇರಿದವರು ಸತ್ತರೆ, ಕೊಲೆಯಾದರೆ, ಮದುವೆಯಾದರೆ, ಅದೆಲ್ಲಾ ಹಾಳಾಗಲಿ, ಇವರ ಹಾದರದಂತಹ ಅತ್ಯಂತ ಕ್ಷುಲ್ಲಕ ವಿಚಾರಗಳನ್ನೂ ರಾತ್ರಿಹಗಲು ಪ್ರಚಾರ ಮಾಡುವ ಮಾಧ್ಯಮಗಳಿಗೆ ಅನ್ನದಾತರು ಕಾಣುವುದೇ ಇಲ್ಲ. ಮಾಧ್ಯಮಗಳಿಗೆ ಈ ವಿಷಯ ಅರ್ಥವಾಗುವುದಿಲ್ಲವೇ ಅಥವಾ ಅವರಿಗೆ ಮಾನವೀಯತೆ ಇಲ್ಲವಾಗಿದೆಯೇ ಎಂಬ ಪ್ರಶ್ನೆ ನಮ್ಮ ಮುಂದೆ ಕಾಡುತ್ತದೆ. ಇಲ್ಲದ ಸಬೂಬು ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದೇವೆಯೇ ಹೊರತು ಗಂಭೀರವಾಗಿ ಪರಾಮರ್ಶೆ ಮಾಡುತ್ತಿಲ್ಲ. ಈ ಪ್ರವೃತ್ತಿ ಜನಸಾಮಾನ್ಯರಲ್ಲಿ ಮಾತ್ರವಲ್ಲ. ಪ್ರಗತಿಪರ ಸಂಘಟನೆಗಳಲ್ಲಿ ಹಾಗೂ ಹೋರಾಟಗಾರರಲ್ಲಿಯೂ ಕೂಡ ಗಂಭೀರ ಚಿಂತನೆಯ ಕೊರತೆ ಎದ್ದು ಕಾಣುತ್ತದೆ. ಹೋರಾಟಗಾರರಿಗೆ ಈ ಅಪವಾದ ನೋವುಂಟು ಮಾಡಿದರೆ ಬಹಳ ಒಳ್ಳೆಯದು. ಯಾಕೆಂದರೆ ಅವರು ಆಗಲಾದರೂ ಚಿಂತನೆಗೆ ತೊಡಗಿಸಿಕೊಳ್ಳುತ್ತಾರೆಂಬುದು ನನ್ನ ಆಸೆ.
ರೈತರ ಆತ್ಮಹತ್ಯೆಯ ವಿರುದ್ಧ ಪ್ರತಿಭಟನೆಗಳು ಎದ್ದಾಗ ಹಿಂದಿನ ಪ್ರಧಾನಮಂತ್ರಿ ವಾಜಪೇಯಿಯವರು ಸೋಂಪಾಲ್ ಎಂಬುವವರ ನೇತೃತ್ವದಲ್ಲಿ ರಾಷ್ಟ್ರೀಯ ರೈತ ಆಯೋಗವನ್ನು ನಿಯುಕ್ತಿ ಮಾಡಿದರು. ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂಬ ಕಾರಣಗಳನ್ನು ಕಂಡು ಹಿಡಿದು ಅದಕ್ಕೆ ಪರಿಹಾರಗಳನ್ನು ಶಿಫಾರಸ್ಸು ಮಾಡುವಂತೆ ಆಯೋಗಕ್ಕೆ ಜವಾಬ್ದಾರಿಗಳನ್ನು ನೀಡಲಾಯಿತು. ಮಾನ್ಯ ವಾಜಪೇಯಿಯವರ ಸರ್ಕಾರ ಅಧಿಕಾರ ಕಳೆದುಕೊಂಡು ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಡಾ.ಎಂ.ಎಸ್. ಸ್ವಾಮಿನಾಥನ್ ನೇತೃತ್ವದಲ್ಲಿ ರಾಷ್ಟ್ರೀಯ ರೈತ ಆಯೋಗವನ್ನು ಮರು ನೇಮಕ ಮಾಡಲಾಯಿತು. 2004ರಲ್ಲಿ ಕಾರ್ಯಾಚರಣೆಗಿಳಿದ ಆಯೋಗ ಸುದೀರ್ಘ ಅಧ್ಯಯನ, ಚರ್ಚೆ, ತನಿಖೆಗಳನ್ನು ನಡೆಸಿ ಆತ್ಮಹತ್ಯೆಗೆ ಒಳಗಾದ ಕುಟುಂಬಗಳನ್ನು ಸಂಪರ್ಕಿಸಿ 2006ರಲ್ಲಿ ಎರಡು ಸಾವಿರ ಪುಟಗಳ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಆದರೆ ಹಿಂದಿನ ಎರಡು ಅವಧಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವಾಗಲಿ, ಈಗ ಅಧಿಕಾರದಲ್ಲಿರುವ ಬಿಜೆಪಿಯಾಗಲಿ ಈ ರಾಷ್ಟ್ರೀಯ ರೈತ ಆಯೋಗದ ಶಿಫಾರಸ್ಸುಗಳನ್ನು ಕನಿಷ್ಟ ಚರ್ಚೆಗೂ ಮಂಡಿಸದೇ ಕಸದ ಬುಟ್ಟಿಗೆ ಎಸೆದುಬಿಟ್ಟಿವೆ. ರೈತರ ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ ಈಗಿನ ಸರ್ಕಾರ ‘ಸ್ವಾಮಿನಾಥನ್ ವರದಿಯಂತೆ ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕೊಡುತ್ತೇವೆ’ಂದು ಕಾಟಾಚಾರದ ಮಾತನಾಡುತ್ತಿದೆ. ದೇಶದ ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷಗಳಾಗಲಿ ಕಾರ್ಪೊರೇಟ್ ಕಂಪನಿಗಳನ್ನು ವಿರೋಧಿಸಿ ರೈತರ ಹಿತಕಾಯಲು ತಯಾರಿಲ್ಲ. ಸ್ವಾಮಿನಾಥನ್ ವರದಿಯ ಬಹುತೇಕ ಶಿಫಾರಸ್ಸುಗಳು ವೈಜ್ಞಾನಿಕವಾಗಿ ಭಾರತೀಯ ಕೃಷಿ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ರೈತರ, ರೈತ ಮಹಿಳೆಯರ, ಯುವ ರೈತರ ಹಾಗೂ ಪರಿಸರವನ್ನು ಕಾಪಾಡುತ್ತಲೇ ಪಂಚಾಯತಿ ಸಾರ್ವಭೌಮ ಅಧಿಕಾರವನ್ನು ನೀಡುವ ಮುಖಾಂತರ ರೈತರನ್ನು ಕೃಷಿ ವ್ಯವಸ್ಥೆಯನ್ನು ಸಬಲೀಕರಣಗೊಳಿಸಿ ಆತ್ಮಹತ್ಯೆಯನ್ನು ತಡೆಗಟ್ಟಲು ಸಮರ್ಥ ಪರಿಹಾರಗಳನ್ನು ಮುಂದಿಟ್ಟಿದೆ. ಈ ಶಿಫಾರಸ್ಸುಗಳನ್ನು ಸರ್ಕಾರ ಜಾರಿಗೆ ತಂದಿದ್ದೇ ಆದರೆ, ವ್ಯಾಪಾರಿವರ್ಗ ಹಾಗೂ ಬಂಡವಾಳಗಾರರು ಪಡೆದುಕೊಳ್ಳುತ್ತಿರುವ ಲಾಭಕ್ಕೆ ಅಡ್ಡಿಯಾಗುತ್ತದೆ. ಲಗಾಮೇಯಿಲ್ಲದ ಅವರ ಸಂಪತ್ತಿನ ಓಟಕ್ಕೆ ಕಡಿವಾಣಗಳು ಬೀಳುತ್ತವೆ. ಸರಿಯಾಗಿ ಇದೇ ಕಾರಣಕ್ಕೆ ಆಡಳಿತಾರೂಢ ಬಿಜೆಪಿ ಸರ್ಕಾರ ಈ ವರದಿಯನ್ನು ಜಾರಿಗೆ ತರಲು ಇಚ್ಛಿಸುತ್ತಿಲ್ಲ.
ಈ ಸತ್ಯವನ್ನು ಅರ್ಥ ಮಾಡಿಕೊಂಡು ರೈತ ಸಮುದಾಯ ‘ರೈತ ಆಯೋಗ’ದ ಶಿಫಾರಸ್ಸುಗಳನ್ನು ಈ ಕೂಡಲೇ ಜಾರಿಗೆ ತರುವಂತೆ ಎಲ್ಲಾ ಸಂಸದರನ್ನು ಕ್ಷೇತ್ರವಾರು ಒತ್ತಾಯಿಸಿ ಹೋರಾಟಕ್ಕಿಳಿಯಬೇಕಾಗಿದೆ.
ಡಾ.ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ರಾಷ್ಟ್ರಿಯ ರೈತ ಆಯೋಗದ ಶಿಫಾರಸ್ಸುಗಳಲ್ಲಿ ಏನಿದೆ?
ಹಸಿರು ಕ್ರಾಂತಿಯ ಹರಿಕಾರನೆಂದು ಖ್ಯಾತಿ ಪಡೆದಿರುವ ಡಾ. ಸ್ವಾಮಿನಾಥನ್‍ರವರು ವಿಶ್ವಮಾನ್ಯ ಕೃಷಿ ತಜ್ಞ. ಅವರೇ ಶಿಫಾರಸ್ಸು ಮಾಡಿದ್ದ ಹಸಿರು ಕ್ರಾಂತಿ ದೇಶಕ್ಕೆ ಆಹಾರ ಭದ್ರತೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದರೂ, ಪಾರಂಪರಿಕ ಭಾರತೀಯ ಕೃಷಿ ವ್ಯವಸ್ಥೆಯನ್ನು ಅಧೋಗತಿಗೆ ಇಳಿಸಿದ್ದಲ್ಲದೆ ರೈತರ ಆತ್ಮಹತ್ಯೆಗೆ ಕಾರಣವೂ ಆಗಿದೆಯೆಂಬುದೇ ಒಂದು ವಿಪರ್ಯಾಸ. ಇಂಥಾ ಸ್ವಾಮಿನಾಥನ್ ಅವರ ಈಗಿನ ಶೇ. 90 ರಷ್ಟು ಶಿಫಾರಸ್ಸುಗಳು ರೈತರ ಪರ, ಜನತೆಯ ಪರವಾಗಿದ್ದು, ಶೇ 10ರಷ್ಟು ಶಿಫಾರಸ್ಸುಗಳು ಕಾರ್ಪೊರೆಟ್ ಕಂಪನಿಗಳ ಪ್ರವೇಶಕ್ಕೆ ದಾರಿಮಾಡಿಕೊಡಬಹುದಾಗಿದೆ. ಈ ಲೇಖನದಲ್ಲಿ ಸದರಿ ವರದಿಯ ಪ್ರಮುಖ ಶಿಫಾರಸ್ಸುಗಳ ಕುರಿತು ವಿವರಿಸಲು ಪ್ರಯತ್ನಿಸಲಾಗಿದೆ.
1. ರೈತರ ಕೃಷಿ ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಲಾಭಾಂಶವನ್ನು ಸೇರಿಸಿ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಲು ಶಿಫಾರಸ್ಸು ಮಾಡಿದ್ದು, ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಖಾಸಗಿಯಾಗಿ ಯಾರೂ ಖರೀದಿ ಮಾಡದಂತೆ ಕಾನೂನಾತ್ಮಕ ರಕ್ಷಣೆಯನ್ನು ಒದಗಿಸಬೇಕು. ಖಾಸಗಿಯವರು ಕನಿಷ್ಟ ಬೆಂಬಲ ಬೆಲೆ ನೀಡಲು ಅಸಹಕಾರ ತೋರಿದಾಗ ರೈತರ ರಕ್ಷಣೆಗಾಗಿ ಸರ್ಕಾರ ತನ್ನ ಖರೀದಿ ಕೇಂದ್ರಗಳನ್ನು ವ್ಯಾಪಕವಾಗಿ ಸ್ಥಾಪನೆಮಾಡಿ, ಖರೀದಿಸಲು ಅಗತ್ಯವಾದಷ್ಟು ಬಂಡವಾಳವನ್ನು ಒದಗಿಸುವಂತಾಗಬೇಕು.
ಬೀಜ, ಗೊಬ್ಬರ, ಕೀಟನಾಶಕ, ರೋಗನಾಶಕ, ಉಳುಮೆ ವೆಚ್ಚ, ಶ್ರಮ ಹಾಗೂ ಭೂಮಿಯ ಬಾಡಿಗೆಯನ್ನು ಸೇರಿಸಿ ಉತ್ಪಾದನಾ ವೆಚ್ಚವನ್ನು ಸೇರಿಸಿ ಬೆಲೆ ನಿಗದಿಪಡಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ಈ ಶಿಫಾರಸ್ಸನ್ನು ಜಾರಿಗೆ ತಂದಿದ್ದೇ ಆದಲ್ಲಿ ಸುಗ್ಗಿಯ ಸಮಯದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ರೈತರ ಉತ್ಪಾದನೆಯನ್ನು ಖರೀದಿಸಿ ತಮ್ಮ ಗೋದಾಮಿನಲ್ಲಿ ತುಂಬಿಟ್ಟುಕೊಂಡು ಸುಗ್ಗಿಯ ನಂತರ ದುಬಾರಿ ಬೆಲೆಯಲ್ಲಿ ಇಡೀ ಗ್ರಾಹಕ ಸಮುದಾಯಕ್ಕೆ ಮಾರಾಟ ಮಾಡಿ ಲಾಭ ಮಾಡಿಕೊಂಡು ಬೆಳೆದು ನಿಂತಿರುವ ವ್ಯಾಪಾರಿ ಬಂಡವಾಳಗಾರರಿಗೆ ಕೊಳ್ಳೆ ಹೊಡೆಯುವ ಅವಕಾಶ ತಪ್ಪಿ ಹೋಗುತ್ತದೆ. ಹೀಗಾಗಿ ವ್ಯಾಪಾರಿಗಳ ಹಿತಕಾಯಲೋಸುಗ ಲಕ್ಷಾಂತರ ರೈತರನ್ನು ಬಲಿ ಕೊಡಲು ರಾಜಕೀಯ ಪಕ್ಷಗಳು ಮುಂದಾಗಿವೆಯೆಂಬ ಕಟುಸತ್ಯವನ್ನು ರೈತರು, ಗ್ರಾಹಕರು ಅರ್ಥಮಾಡಿಕೊಳ್ಳಬೇಕಿದೆ.
2. ಬಡ್ಡಿರಹಿತವಾಗಿ ರೈತರಿಗೆ ಅಗತ್ಯವಿದ್ದಷ್ಟು, ಅಗತ್ಯವಿರುವಾಗಲೆಲ್ಲಾ ಸಾಲ ನೀಡುವಂತಾಗಬೇಕು. ಇಲ್ಲವಾದಲ್ಲಿ ಕನಿಷ್ಟ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡುವಂತಾಗಬೇಕು. ಕೃಷಿಯೊಂದಿಗೆ ಅವರ ಕುಟುಂಬದ ಎಲ್ಲಾ ಅಗತ್ಯಗಳನ್ನು ಪೂರೈಕೆ ಮಾಡುವಂತಾಗಬೇಕು. ಅದಕ್ಕಾಗಿ ಕೃಷಿಕರಿಗಾಗಿ(ಕೃಷಿಗಾಗಿ)ಯೇ ಪ್ರತ್ಯೇಕವಾದ ಬ್ಯಾಂಕೊಂದನ್ನು ಸ್ಥಾಪಿಸಬೇಕು. ಈ ಬ್ಯಾಂಕ್‍ನಲ್ಲಿ ಇತರರಿಗೆ ಸಾಲ ನೀಡಲು ಅವಕಾಶವಿರಬಾರದು.
ಈಗಿರುವ ಸಹಕಾರಿ ಸಂಘಗಳು ರೈತರ ಆಶಯಗಳಿಗೆ ಸ್ಪಂದಿಸುತ್ತಿಲ್ಲವಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ಸುಭದ್ರಗೊಳಿಸಿ ರೈತರ ಹಿತ ಕಾಪಾಡುವಂತೆ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ಈ ಶಿಫಾರಸ್ಸು ಜಾರಿಗೆ ತಂದಿದ್ದೇ ಆದರೆ ಸಾರ್ವಜನಿಕರ ಉಳಿತಾಯದ ಹಣವನ್ನು ಲೂಟಿ ಮಾಡುತ್ತಿರುವ ಕಾರ್ಪೊರೇಟ್ ಕಂಪನಿಗಳಿಗೆ ತಡೆಯಾಗುತ್ತದೆ. ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಂದರೆ ಜನರ ಉಳಿತಾಯ ಹಣವನ್ನು ಹಾಗೂ ಜನರ ತೆರಿಗೆ ಹಣವನ್ನು ಅಪ್ರತ್ಯಕ್ಷವಾಗಿ ಬಳಕೆ ಮಾಡಲು ಅವಕಾಶ ಕೊಟ್ಟಿರುವ ಹಿನ್ನಲೆಯಲ್ಲಿ ಶೇ.70ಕ್ಕೂ ಹೆಚ್ಚಿನ ಬ್ಯಾಂಕಿನ ಉಳಿತಾಯವನ್ನು ಬಳಸಿಕೊಂಡಿರುವ ಕಾರ್ಪೊರೇಟ್ ಕಂಪನಿಗಳು 12 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಸಾಲವನ್ನು ಮರುಪಾವತಿ ಮಾಡದೇ ಪಂಗನಾಮ ಹಾಕಿವೆ. ಆದರೂ ಅವರಿಂದ ವಸೂಲಿ ಮಾಡದೇ ಅವರನ್ನು ರಕ್ಷಿಸಲಾಗುತ್ತಿದೆ. ದೇಶ ಬಿಟ್ಟು ಓಡಿ ಹೋದವರ ಕುರಿತು ಚರ್ಚೆ ಮಾಡಿ ಕಾಲಹರಣ ಮಾಡಲಾಗುತ್ತಿದೆ. ದೇಶದಲ್ಲಿರುವ ಮೋಸಗಾರ ಕಂಪನಿಗಳಿಂದ ವಸೂಲಿಗೆ ಮುಂದಾಗುತ್ತಿಲ್ಲ. ಕನಿಷ್ಟ ಸಾಲ ಮರುಪಾವತಿ ಮಾಡದವರ ಹೆಸರನ್ನು ಬಹಿರಂಗ ಪಡಿಸಲು ಸರ್ಕಾರ ತಯಾರಿಲ್ಲವಾಗಿದೆ.
ಬ್ಯಾಂಕ್‍ನ ಮೊತ್ತದಲ್ಲಿ 30%ರಷ್ಟು ಮಾತ್ರ ಕಾರ್ಪೊರೇಟ್ ಅಲ್ಲದ ಕ್ಷೇತ್ರಕ್ಕೆ, ಅಂದರೆ ಎಲ್ಲಾ ಜನಸಮುದಾಯಕ್ಕೆ ಸಾಲ ನೀಡಿದ್ದು, ಸಾಲ ಮರುಪಾವತಿ ಮಾಡದ ರೈತರ ಹೆಸರನ್ನು ಬಹಿರಂಗಪಡಿಸಿ ಅವಮಾನ ಮಾಡಲಾಗುತ್ತದೆ. ಆಸ್ತಿಯನ್ನು ಹರಾಜು ಮಾಡಲಾಗುತ್ತಿದೆ. ಹಲವು ನಿದರ್ಶನಗಳಲ್ಲಿ ರೈತರ ಆತ್ಮಹತ್ಯೆಗೆ ಸರ್ಕಾರಗಳು ನೇರ ಕಾರಣವಾಗಿವೆ.
3. ಕೃಷಿಯನ್ನು ರಕ್ಷಿಸಲು ಮಹಿಳೆಯರನ್ನು ಸಬಲೀಕರಣಗೊಳಿಸುವುದು, 80% ರಷ್ಟು ಕೃಷಿ ಇಂದು ಮಹಿಳೆಯರ ಮೇಲೆ ಅವಲಂಬಿತವಾಗಿದೆ. ಕೃಷಿ ಭೂಮಿ ಅಕ್ರಮ ಸಕ್ರಮ ಭೂಮಿ, ಸರ್ಕಾರ ಮಂಜೂರು ಮಾಡುವ ಭೂಮಿಗೂ ಒಳಗೊಂಡಂತೆ ಮಹಿಳೆಯರಿಗೆ ಜಂಟಿ ಪಟ್ಟಾ ವ್ಯವಸ್ಥೆಯನ್ನು ಜಾರಿಗೆ ತರುವಂತಾಗಬೇಕು. ಪಹಣಿಯಲ್ಲಿ ಮಹಿಳೆಯರ ಹೆಸರಿಲ್ಲದ ಕಾರಣ ಅವರಿಗೆ ಹಣಕಾಸು ಸಂಸ್ಥೆಗಳು ಸಾಲ ನೀಡಲು ನಿರಾಕರಿಸುತ್ತವೆ. ಸರ್ಕಾರದ ಸಹಾಯಧನವನ್ನು ಪಡೆಯಲಾಗುತ್ತಿಲ್ಲ. ಕೃಷಿಕ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೂ ಕೃಷಿಕಳೆಂದು ಪರಿಗಣಿಸಲಾಗುತ್ತಿಲ್ಲ. ಜಂಟಿ ಪಟ್ಟಾದೊಂದಿಗೆ ಮಹಿಳೆಯರನ್ನು ಸ್ವಸಹಾಯ ಸಂಘಗಳನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ ನೀಡಿ, ಹಣಕಾಸಿನ ಸಹಾಯವನ್ನು ಒದಗಿಸುವಂತಾಗಬೇಕು. ಪಂಚಾಯ್ತಿಯಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ವಿಶೇಷ ಕೋಶವನ್ನು ರಚಿಸಿ ಮಹಿಳಾ ಸಬಲೀಕರಣಗೊಳಿಸಲು ಮುಂದಾಗಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಇದರಿಂದಾಗಿ ದೇಸಿ ಬೀಜಗಳನ್ನು ರಕ್ಷಿಸಲು ಹಾಗೂ ಮಿಶ್ರಬೆಳೆ ಪದ್ದತಿಯನ್ನು ಅಭಿವೃದ್ಧಿ ಪಡಿಸಲು, ಜೀವವೈವಿಧ್ಯತೆ ಅಭಿವೃದ್ಧಿಯಾಗಲು ಮಹಿಳಾ ಸಬಲೀಕರಣದಿಂದ ಮಾತ್ರ ಸಾಧ್ಯ ಎಂದು ವರದಿ ಅಭಿಪ್ರಾಯಪಟ್ಟಿದೆ. ಮನೆಯ ರಕ್ಷಣೆ, ಮಕ್ಕಳ ಪೋಷಣೆಯ ಅಗತ್ಯಗಳಿಗಾಗಿ ಆಹಾರ ಸಂಗ್ರಹಣೆಯ ಜವಾಬ್ದಾರಿ ಮಹಿಳೆಯರ ಹೆಗಲಿಗೆ ವರ್ಗಾಯಿಸಲ್ಪಟ್ಟಿದೆ. ಮಹಿಳೆಯರ ಸಬಲೀಕರಣದಿಂದ ಮಾತ್ರ ಕೃಷಿ ಅಭಿವೃದ್ಧಿ, ಆಹಾರ ಧಾನ್ಯಗಳ ಉತ್ಪಾದನೆ ಸಾಧ್ಯವಾಗುತ್ತದೆಂದು ಆಯೋಗ ಎಚ್ಚರಿಕೆ ನೀಡಿದೆ.
ಸರ್ಕಾರಗಳು ದೇಶಕ್ಕೆ ಆಹಾರ ಭದ್ರತೆಯ ಬಗ್ಗೆ ಮಾತನಾಡುತ್ತಿವೆಯೇ ಹೊರತು ಆಹಾರ ಉತ್ಪಾದಕರ ರಕ್ಷಣೆಗೆ ತಯಾರಿಲ್ಲ. ಏಕೆಂದರೆ ರೈತರು ಸಂಕಷ್ಟಕ್ಕೆ ಸಿಲುಕಿ ಭೂಮಿ ಮಾರಿಕೊಳ್ಳುವಂತಾಗಬೇಕು. ಆಗಲೇ ಕಾರ್ಪೊರೇಟ್ ಕಂಪನಿಗಳು ಸಹಜವೆಂಬಂತೆ, ಅಗ್ಗದ ಬೆಲೆಗೆ ಭೂಮಿ ಖರೀದಿಸಲು ಸಹಾಯವಾಗುತ್ತದೆ.
4. ಗ್ರಾಮೀಣ ಯುವಕರನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ವಿಶೇಷ ಅವಕಾಶಗಳನ್ನು ಒದಗಿಸಲು ಆಯೋಗ ಶಿಫಾರಸ್ಸು ಮಾಡಿದೆ. ಕೃಷಿ ಲಾಭದಾಯಕವಾಗಿಲ್ಲದ ಹಿನ್ನಲೆಯಲ್ಲಿ ಕೃಷಿಕರು ತಮ್ಮ ಮಕ್ಕಳನ್ನು ಉದ್ಯೋಗಕ್ಕಾಗಿ ನಗರಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಯುವಕರು ಸ್ವತಃ ಕೃಷಿಯತ್ತ ಆಕರ್ಷಣೆಯನ್ನು ಕಳೆದುಕೊಂಡು ಮುಂದಿನ ತಲೆಮಾರಿನ ವೇಳೆಗೆ ಕೃಷಿ ಅಪಾಯಕಾರಿ ಸ್ಥಿತಿಗೆ ತಲುಪಲಿದೆ. ಇನ್ನೊಂದೆಡೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿ ಉದ್ಯೋಗಗಳನ್ನು ಒದಗಿಸಲಾಗದೇ ಮಾನವ ಸಂಪನ್ಮೂಲ ವ್ಯರ್ಥವಾಗಲಿದೆ ಎಂಬ ಎಚ್ಚರಿಕೆಯನ್ನು ಆಯೋಗ ನೀಡಿದೆ. ಕೃಷಿ ವಿಜ್ಞಾನ ಕೇಂದ್ರಗಳನ್ನು, ಮಣ್ಣಿನ, ಸಸ್ಯ ಮತ್ತು ಪ್ರಾಣಿಗಳ ಆರೋಗ್ಯ ರಕ್ಷಣೆ ಕುರಿತ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಯುವಕರು ಗ್ರಾಮಗಳಲ್ಲಿ ಸ್ವಉದ್ಯೋಗ ಪಡೆದುಕೊಳ್ಳುವಂತೆ ಮಾಡಬೇಕೆಂದು ಆಯೋಗವು ಶಿಫಾರಸ್ಸು ಮಾಡಿದೆ.
ವಿದ್ಯಾರ್ಥಿ ಹಾಗು ಯುವಕರನ್ನು ಉದ್ಯಮಿಯನ್ನಾಗಿ ಮಾಡಲು ಸರ್ಕಾರಗಳಿಗೆ ಯಾವ ಆಸಕ್ತಿಯೂ ಇಲ್ಲ. ಕಾರ್ಪೊರೇಟ್ ಕಂಪನಿಗಳ ಯಂತ್ರಗಳನ್ನು ಮಾರಾಟ ಮಾಡಲು ಕೃಷಿ ಮೇಳಗಳನ್ನು ಆಯೋಜಿಸಿ ಕೃಷಿ ಯಂತ್ರಗಳಿಗೆ ಪರಿಕರಗಳಿಗೆ ಸಹಾಯಧನ ನೀಡುವ ಮುಖಾಂತರ ರೈತರನ್ನು ಪರವಾಲಂಬಿಗಳಾಗುವಂತೆ ಮಾಡಿ ಕಂಪನಿಗಳ ಲಾಭ ಹೆಚ್ಚಿಸುತ್ತವೆಯೇ ಹೊರತು ಗ್ರಾಮೀಣ ಯುವಕರನ್ನು ಸಶಕ್ತಗೊಳಿಸುವ ಯಾವ ಅಭಿಲಾಷೆ ಸರ್ಕಾರಕ್ಕಿಲ್ಲ. ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಆಕರ್ಷಕ ಪ್ರಚಾರದಲ್ಲಿ ಮಾತ್ರ ಈ ಸರ್ಕಾರದ ಆಸಕ್ತಿ.
5. ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡುವಂತಾಗಲು, ಪಂಚಾಯತಿ ರಾಜ್ಯ ವ್ಯವಸ್ಥೆಯನ್ನು ಸಧೃಢಗೊಳಿಸಲು ಶಿಫಾರಸ್ಸು ಮಾಡಲಾಗಿದೆ. ಗ್ರಾಮದ ಸರಹದ್ದಿನಲ್ಲಿರುವ ಕೆರೆ, ಕಟ್ಟೆ, ಕಾಲುವೆ, ಹಳ್ಳ, ತೊರೆ, ನದಿ ಹಾಗೂ ಅದಿರು ಸಂಪತ್ತನ್ನು ಒಳಗೊಂಡಂತೆ, ಎಲ್ಲಾ ನೈಸರ್ಗಿಕ ಸಂಪತ್ತಿನ ಮೇಲಿನ ಪರಮಾಧಿಕಾರವನ್ನು ಪಂಚಾಯತಿಗೆ ನೀಡುವಂತಾಗಬೇಕು. ಅವುಗಳ ರಕ್ಷಣೆ ಹಾಗೂ ಬಳಕೆಯ ಅಧಿಕಾರಗಳನ್ನು ನೀಡುವ ಮುಖಾಂತರ, ಸಾರ್ವಜನಿಕ ಸಂಪತ್ತಿನ ಮೇಲೆ ಜನತೆಗೆ ಸಾಮೂಹಿಕ ಅಧಿಕಾರವನ್ನು ನೀಡುವಂತಾಗಬೇಕು. ಗ್ರಾಮೀಣಾಭಿವೃದ್ದಿ ಹಾಗೂ ಉದ್ಯೋಗಗಳ ಸೃಷ್ಟಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ತೀರ್ಮಾನವನ್ನು ಗ್ರಾಮಸಭೆಗಳು ತೀರ್ಮಾನಿಸುವಂತಾಗಬೇಕೆಂದು ಶಿಫಾರಸ್ಸು ಮಾಡಿರುವುದು ಅತ್ಯಂತ ಕ್ರಾಂತಿಕಾರಿಯಾಗಿದೆ.
ಸರ್ಕಾರಗಳು ಈ ಶಿಫಾರಸ್ಸನ್ನು ಜಾರಿ ಮಾಡುವುದಿರಲಿ, ಚರ್ಚೆಗೂ ಕೈಗೆತ್ತಿಕೊಳ್ಳುವುದಿಲ್ಲ. ಇಂದು ದೇಶದಲ್ಲಿರುವ ಬಹುಸಂಖ್ಯಾತ ಕಾರ್ಪೊರೇಟ್ ಕಂಪನಿಗಳು ಲಕ್ಷಾಂತರ ಕೋಟಿಗಳ ಅಕ್ರಮ ಸಂಪತ್ತು ಬಾಚುತ್ತಿರುವುದೇ ಗ್ರಾಮ ವ್ಯಾಪ್ತಿಗೆ ಬರುವ ನೈಸರ್ಗಿಕ ಸಂಪನ್ಮೂಲಗಳನ್ನು ಲಂಗು ಲಗಾಮಿಲ್ಲದಂತೆ ಲೂಟಿ ಮಾಡುವ ಮುಖಾಂತರ. ಕಾರ್ಪೊರೇಟ್ ಕಂಪನಿಗಳ ಜೊತೆಗೆ ನೇರವಾಗಿ ರಾಜಕೀಯ ಪಕ್ಷಗಳು, ಮುಖಂಡರು ಶಾಮೀಲಾಗಿರುವುದರಿಂದ ಇಂಥಾ ಶಿಫಾರಸ್ಸು ಅವರಿಗೆ ಅಪಥ್ಯ.
ಬಳ್ಳಾರಿ ಹಾಗೂ ರಾಜ್ಯದ ಇತರೆಡೆ ಹಲವು ಲಕ್ಷಕೋಟಿ ಮೌಲ್ಯದ ಗಣಿ ಸಂಪತ್ತನ್ನು ಲೂಟಿ ಮಾಡುತ್ತಿರುವುದು, ಜನಾರ್ಧನರೆಡ್ಡಿಯಂತಹ ರಾಜಕಾರಣಿಗಳು ಹಾಗೂ ಇತರ ಕಂಪನಿಗಳು ಇಂತಹ ಸಾರ್ವಜನಿಕ ಸಂಪತ್ತನ್ನು ಕೊಳ್ಳೆಹೊಡೆದು ಚುನಾವಣೆಯಲ್ಲಿ ವೆಚ್ಚಮಾಡುತ್ತಿದ್ದಾರೆ. ಆ ಮುಖಾಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದ್ದು, ಸಾಮಾನ್ಯರು, ಪ್ರಾಮಾಣಿಕರು ಚುನಾವಣೆಯಿಂದ ದೂರಸರಿಯುವಂತೆ ಮಾಡಲಾಗಿದೆ. ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾರ್ಪೊರೇಟ್ ಪ್ರಭುತ್ವವನ್ನಾಗಿಸುವುದರಲ್ಲಿ ಈ ಶಕ್ತಿಗಳು ಭಾಗಶಃ ಯಶಸ್ವಿಯಾಗಿದ್ದಾರೆ.
ದೇಶದ ಆರ್ಥಿಕ ವ್ಯವಸ್ಥೆಯನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವಷ್ಟು ಸಶಕ್ತರಾಗಿರುವ ಕಾರ್ಪೊರೇಟ್ ಕಂಪನಿಗಳು, ರಾಜಕೀಯ ಪಕ್ಷಗಳನ್ನು ನಿಯಂತ್ರಣ ಮಾಡುತ್ತ್ತಿವೆ. ಅದರೊಟ್ಟಿಗೆ ಮಾಧ್ಯಮಗಳನ್ನು ನಿಯಂತ್ರಿಸುತ್ತಿವೆಯಾದ್ದರಿಂದ ರೈತರ ಆತ್ಮಹತ್ಯೆಯಾಗಲೀ, ರಾಷ್ಟ್ರೀಯ ರೈತ ಆಯೋಗದ ಶಿಫಾರಸ್ಸನ್ನು ಜಾರಿಗೆ ತರುವ ವಿಷಯಗಳಾಗಲೀ ಮಾಧ್ಯಮಗಳಲ್ಲಿ ಚರ್ಚೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಧೋರಣೆ ಒಂದೇ ಆಗಿದ್ದು, ಅಂತಹ ಧೋರಣೆಗಳನ್ನು ಬದಲಿಸುವುದೇ ಜನರ ಮುಂದಿರುವ ಸವಾಲು. ರೈತಾಪಿ ಸಮುದಾಯ ಹಾಗೂ ರೈತ ಸಂಘಟನೆಗಳು ಈ ವಿಷಯದ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಂಡು ರಾಜಕೀಯ ಪರ್ಯಾಯಕ್ಕಾಗಿ ಪ್ರಯತ್ನಿಸದೇ, ಪರ್ಯಾಯ ಧೋರಣೆಗಳನ್ನು ಜಾರಿಗೆ ತರುವಂತೆ ಆಡಳಿತಾರೂಢ ಪಕ್ಷ ಹಾಗೂ ವಿರೋಧ ಪಕ್ಷಗಳನ್ನು ಒತ್ತಾಯಿಸುವಂತಾಗಬೆÉೀಕಿದೆ. ಧೋರಣೆ ಬದಲಾಯಿಸಲು ರಾಷ್ಟ್ರೀಯ ರೈತ ಆಯೋಗದ ಪ್ರಮುಖ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಒತ್ತಾಯಿಸುವುದಾಗಿದೆ, ಹೋರಾಟದ ಆಯುಧವಾಗಿ, ಆಯಾ ಸಂಸತ್ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳನ್ನು ಕೇಳುವ ಮುಖಾಂತರ, ರಾಜಕೀಯ ಪಕ್ಷಗಳ ಮೇಲೆ ಒತ್ತಡ ತರಬೇಕು. ಬೀದಿ ಬದಿ ಹೋರಾಟಗಳು, ಧರಣಿಗಳು, ಬಂಧನಗಳು ಪ್ರತಿಫಲ ನೀಡುತ್ತಿಲ್ಲ. ರಾಜಕಾರಣಿಗಳು ಮತ ಪಡೆಯುವ ತಂತ್ರಗಾರಿಕೆಯನ್ನು ಬದಲಿಸಿಕೊಂಡಿದ್ದಾರೆ. ಜಾತಿ, ಧರ್ಮ, ಉಪಜಾತಿ, ಹಣ, ಹೆಂಡ, ಆಮಿಷಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ರೈತರೂ ಕೂಡ ಹೋರಾಟದ ತಂತ್ರವನ್ನು ತಕ್ಕಂತೆ ಬದಲಿಸಿಕೊಳ್ಳಬೇಕು.. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ಜನಪ್ರತಿನಿಧಿಗಳು ಸೇವಕರು. ಆದರೆ ವಾಸ್ತವದಲ್ಲಿ ಇದು ತಿರುಗುಮುರುಗಾಗಿ ಪ್ರತಿನಿಧಿಗಳೇ ಪಾಳೇಗಾರರಾಗಿದ್ದು, ಪ್ರಜೆಗಳು ಸೇವಕರಾಗಿ ಬಿಟ್ಟಿದ್ದಾರೆ. ಇಂದು ರೈತರು ತಮ್ಮ ಹಕ್ಕನ್ನು ಪಡೆದುಕೊಳ್ಳಲು ಸ್ವಾಮಿನಾಥನ್ ಶಿಫಾರಸ್ಸನ್ನು ಜಾರಿಗೆ ತರುವಂತೆ ನೇರವಾಗಿ ಸಂಸದರನ್ನು ಕೇಳುವಂತಾಗಬೇಕು.
ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತನ್ನಿ ಇಲ್ಲವೇ ರಾಜಿನಾಮೆ ಕೊಡಿ ಎಂಬ ಏಕಮೇವ ಬೇಡಿಕೆ ಮಂಡಿಸುವಂತಾಗಬೇಕು. ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಹೋರಾಟವನ್ನು ಬಳಸಿಕೊಳ್ಳದಂತೆ ಎಚ್ಚರವಹಿಸಬೇಕಾದ್ದು ಬಹಳ ಮುಖ್ಯ. ರಾಜಕಾರಣಿಗಳ ಪೊಳ್ಳು ಆಶ್ವಾಸನೆಗಳಿಗೆ ಮರುಳಾಗದಂತೆ ಎಚ್ಚರ ವಹಿಸಬೇಕು. 13 ವರ್ಷಗಳಿಂದ ಕೊಳೆಯುತ್ತಾ ಬಿದ್ದಿರುವ ಆಯೋಗದ ವರದಿಯನ್ನು ಜಾರಿಗೆ ತರುವ ಹೋರಾಟದ ಕೂಗು ಮುಗಿಲು ಮುಟ್ಟುವಂತಾಗಬೇಕು. ರೈತರ ಮತ ಕಳೆದುಕೊಂಡು, ಅಧಿಕಾರದಿಂದ ಕೆಳಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬೇಕು. ಆಗ ಮಾತ್ರವೇ ತಮ್ಮ ಪಕ್ಷಗಳ ಮೇಲೆ ಸಂಸದರು ಒತ್ತಡ ಹೇರಿ ಧೋರಣೆಗಳನ್ನ ಬದಲಾಯಿಸುವ ಅನಿವಾರ್ಯತೆ ಉಂಟಾಗುತ್ತದೆ. ಬಗ್ಗುಬಡಿಯಲಾರದಂತಹ ವಿಶಾಲ ಹೋರಾಟವನ್ನು ರೂಪಿಸಿ ಗಟ್ಟಿಯಾಗಿ ರೈತರು ನಿಂತಾಗ ಪ್ರಜಾಪ್ರಭುತ್ವದ ಆಶಯ ಉಳಿಯಲು ಸಾಧ್ಯ. ರೈತರ ನ್ಯಾಯಯುತವಾದ ಹಕ್ಕು ರೈತರಿಗೆ ದಕ್ಕಲು ಸಾಧ್ಯ.

– ಚಂದ್ರಶೇಖರ ಬಾಳೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...