Homeಮುಖಪುಟಕ್ಷೇತ್ರ ಮರುವಿಂಗಡಣೆ ಮಸೂದೆ: ಸಮಾಜವಾದಿ ಪಕ್ಷದ ವಿರೋಧ, ಡಿಎಂಕೆಯ ಷರತ್ತು, ವೈಎಸ್‌ಆರ್‌ಸಿಪಿಯ ಸಂಭಾವ್ಯ ಬೆಂಬಲ; ಯಾರ...

ಕ್ಷೇತ್ರ ಮರುವಿಂಗಡಣೆ ಮಸೂದೆ: ಸಮಾಜವಾದಿ ಪಕ್ಷದ ವಿರೋಧ, ಡಿಎಂಕೆಯ ಷರತ್ತು, ವೈಎಸ್‌ಆರ್‌ಸಿಪಿಯ ಸಂಭಾವ್ಯ ಬೆಂಬಲ; ಯಾರ ನಿಲುವು ಏನು?

- Advertisement -
- Advertisement -

ನವೆಂಬರ್ 30ರ ಸೋಮವಾರದಿಂದ ಮತ್ತೆ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮಂಡಿಸಲಾಗುತ್ತದೆಯೇ? ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಪ್ರಕಾರ, ಈ ಅಧಿವೇಶನವು ಸಂಸತ್ತಿನ ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿರಲಿದೆ. ನಿಗದಿತ ಕಾರ್ಯಕಲಾಪಗಳ ಆಧಾರದ ಮೇಲೆ ಡಿಸೆಂಬರ್ 3ರಂದು ಅಧಿವೇಶನ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಿರಣ್ ರಿಜಿಜು, ನವೆಂಬರ್ 30ರಂದು ಲೋಕಸಭೆಯ ಕಲಾಪವನ್ನು ಪುನರಾರಂಭಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಾಗೂ ಡಿಸೆಂಬರ್ 2ರಂದು ರಾಜ್ಯಸಭೆಯ ಕಲಾಪವನ್ನು ಪುನರಾರಂಭಿಸುವಂತೆ ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸರ್ಕಾರ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.

ಅಗತ್ಯ ಸರ್ಕಾರಿ ಕಾರ್ಯಕಲಾಪಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಈ ಅಧಿವೇಶನವನ್ನು ಕರೆಯಲಾಗಿದೆ. ಕಾರ್ಯಕಲಾಪಗಳ ಅಗತ್ಯಕ್ಕೆ ಅನುಗುಣವಾಗಿ ಉಭಯ ಸದನಗಳ ಅಧಿವೇಶನ ಡಿಸೆಂಬರ್ 3ರಂದು ಮುಕ್ತಾಯಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆ?

ನವೆಂಬರ್ 30ರ ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಶಾಸನವನ್ನು ಸರ್ಕಾರ ಮಂಡಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಆದರೆ, ಅಧಿವೇಶನದಲ್ಲಿ ಯಾವ ಮಸೂದೆಗಳು ಅಥವಾ ಪ್ರಸ್ತಾವನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂಬುದನ್ನು ಕಿರಣ್ ರಿಜಿಜು ಸ್ಪಷ್ಟಪಡಿಸಿಲ್ಲ.

ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಮಸೂದೆಯು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಆ ಮೂಲಕ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುವ ಉದ್ದೇಶವಿದೆ. ನವೀಕೃತ ಜನಗಣತಿ ದತ್ತಾಂಶಕ್ಕೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ನಡೆಸುವುದು ಹಾಗೂ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಲು ಇದು ಅಗತ್ಯ ಎಂದು ಎನ್‌ಡಿಎ ಸರ್ಕಾರ ಪ್ರತಿಪಾದಿಸುತ್ತಿದೆ.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಮತ್ತೆ ಮುಂದಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಮಹತ್ವದ ಪ್ರತಿಕ್ರಿಯೆ ನೀಡಿದೆ. ಸಂಸತ್ತಿನಲ್ಲಿ ಮಸೂದೆ ಮಂಡನೆಯಾದರೆ ಅದನ್ನು ಬೆಂಬಲಿಸಲು ಪಕ್ಷ ಸಿದ್ಧವಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ವಿವಿಧ ಪ್ರದೇಶಗಳ ನಡುವಿನ ಪ್ರಾತಿನಿಧ್ಯದ ಸಮತೋಲನವನ್ನು ನ್ಯಾಯಯುತವಾಗಿ ಕಾಯ್ದುಕೊಳ್ಳಬೇಕು ಎಂಬುದು ಪಕ್ಷದ ಷರತ್ತಾಗಿದೆ.

ಸಮಾಜವಾದಿ ಪಕ್ಷ (ಎಸ್‌ಪಿ) ಕ್ಷೇತ್ರ ಮರುವಿಂಗಡಣೆ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಸೂಚನೆ ನೀಡಿದೆ. ಸಂಸತ್ತಿನಲ್ಲಿ ಮಸೂದೆ ಮಂಡನೆಯಾದರೆ ಅದನ್ನು ವಿರೋಧಿಸುವುದಾಗಿ ಪಕ್ಷದ ನಿಲುವು ವ್ಯಕ್ತವಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, “ಕ್ಷೇತ್ರ ಮರುವಿಂಗಡಣೆಯು ಬಿಜೆಪಿಯ ರಾಜಕೀಯದಲ್ಲಿನ ಅತ್ಯಂತ ದೊಡ್ಡ ತಪ್ಪಾಗಿ ಪರಿಣಮಿಸಲಿದೆ” ಎಂದು ಹೇಳಿದ್ದಾರೆ.

ತಮಿಳುನಾಡಿನ ಹಾಲಿ ಸಂಸದೀಯ ಪ್ರಾತಿನಿಧ್ಯದ ಪಾಲಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡರೆ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸಲು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಿದ್ಧವಿದೆ. 1971ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಸ್ಥಗಿತಗೊಳಿಸಿರುವ ನಿರ್ಧಾರವನ್ನು ಮುಂದುವರಿಸಬೇಕು ಎಂಬುದು ಡಿಎಂಕೆಯ ಪ್ರಮುಖ ಬೇಡಿಕೆಯಾಗಿದೆ. ಈ ಸ್ಥಗಿತದ ಅವಧಿ 2027ಕ್ಕೆ ಮುಕ್ತಾಯಗೊಳ್ಳಲಿದೆ.

ಈ ಸ್ಥಗಿತವನ್ನು ಸಂವಿಧಾನ ತಿದ್ದುಪಡಿಯ ಮೂಲಕ ಇನ್ನೂ 25 ವರ್ಷಗಳ ಕಾಲ ವಿಸ್ತರಿಸಬೇಕು ಎಂದು ಡಿಎಂಕೆ ಬಯಸಿದೆ. ಕೇಂದ್ರ ಸರ್ಕಾರ ಈ ಮೂರು ಷರತ್ತುಗಳನ್ನು ಒಪ್ಪಿಕೊಂಡರೆ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸಲು ಪಕ್ಷ ಸಿದ್ಧವಿದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ ಎಂದು ‘ಇಂಡಿಯಾ ಟಿವಿ’ ವರದಿ ಮಾಡಿದೆ.

ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವತ್ ಅವರು ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಎನ್‌ಡಿಎ ಪರವಾಗಿ ಬೆಂಬಲ ನೀಡುವ ಯಾವುದೇ ಪಕ್ಷವು ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹ ಬಗೆದಂತೆ. ಅಂತಹ ಪಕ್ಷವು ವಿರೋಧ ಪಕ್ಷಗಳ ಮೈತ್ರಿಕೂಟದಿಂದ ಹೊರಬರಬೇಕು ಎಂದು ಎಚ್ಚರಿಸಿದ್ದಾರೆ. ಎನ್‌ಸಿಪಿ (ಶರದ್‌ಚಂದ್ರ ಪವಾರ್) ಸಂಸದೆ ಸುಪ್ರಿಯಾ ಸುಳೆ ಅವರು ಬಿಜೆಪಿ ನೇತೃತ್ವದ ಎನ್‌ಡಿಎಗೆ ಅಧಿಕೃತವಾಗಿ ಸೇರ್ಪಡೆಯಾಗದೆ ಮಸೂದೆಯನ್ನು ಬೆಂಬಲಿಸಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ರಾವತ್ ಈ ಹೇಳಿಕೆ ನೀಡಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅಥವಾ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ತಮ್ಮ ರಾಜಕೀಯ ಸಿದ್ಧಾಂತ ಮತ್ತು ಬಿಜೆಪಿಯೊಂದಿಗಿನ ದೀರ್ಘಕಾಲದ ವಿರೋಧದ ಹಿನ್ನೆಲೆಯಲ್ಲಿ ಎನ್‌ಡಿಎ ಜತೆ ಕೈಜೋಡಿಸುತ್ತಾರೆ ಎಂದು ತಾನು ಭಾವಿಸುವುದಿಲ್ಲ ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಸಂವಿಧಾನದ 131ನೇ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ಅಗತ್ಯವಾದ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಮಸೂದೆಯ ಪರವಾಗಿ 298 ಸದಸ್ಯರು ಮತ ಚಲಾಯಿಸಿದ್ದರೆ, 230 ಸದಸ್ಯರು ವಿರೋಧವಾಗಿ ಮತ ಚಲಾಯಿಸಿದ್ದರು. ಆದರೆ, ಅಂಗೀಕಾರಕ್ಕೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ದೊರೆಯದ ಕಾರಣ ಮಸೂದೆ ಸೋಲು ಕಂಡಿತ್ತು. ಇದರೊಂದಿಗೆ ಕ್ಷೇತ್ರ ಮರುವಿಂಗಡಣೆ ಮಸೂದೆ-2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ-2026 ಸೇರಿದಂತೆ ಇತರ ಎರಡು ಮಸೂದೆಗಳನ್ನು ಮಂಡನೆಯಿಂದ ಕೈಬಿಡಲಾಗಿತ್ತು.

ಈ ಬಾರಿ ಕ್ಷೇತ್ರ ಮರುವಿಂಗಡಣೆ ಮಸೂದೆ ಸೇರಿದಂತೆ ಇತರ ಮಸೂದೆಗಳನ್ನು ಅಂಗೀಕರಿಸಲು ಎನ್‌ಡಿಎ ದೃಢ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಶಿರೋಮಣಿ ಅಕಾಲಿದಳವು ಬಿಜೆಪಿಯೊಂದಿಗೆ ಕೈಜೋಡಿಸಿರುವುದು ಹಾಗೂ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷಗಳಿಂದ ಸುಮಾರು 30 ಶಾಸಕರು ಸಣ್ಣ ಮಟ್ಟದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಮತ್ತು ಶಿವಸೇನೆಗೆ ಸೇರ್ಪಡೆಯಾಗಿರುವುದು ರಾಜಕೀಯ ಲೆಕ್ಕಾಚಾರದಲ್ಲಿ ಮಹತ್ವ ಪಡೆದುಕೊಂಡಿದೆ.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಎನ್‌ಡಿಎಗೆ 163 ಮತಗಳ ಅಗತ್ಯವಿದೆ. ಆದರೆ, ಪ್ರಸ್ತುತ ಎನ್‌ಡಿಎ ಬಳಿ 155 ಮತಗಳಿವೆ. ಹೀಗಾಗಿ, ಬಿಜು ಜನತಾ ದಳ (ಬಿಜೆಡಿ) ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದಂತಹ ಪಕ್ಷಗಳ ಬೆಂಬಲ ಎನ್‌ಡಿಎಗೆ ಅಗತ್ಯವಾಗಲಿದೆ.

ಕಾಂಗ್ರೆಸ್ ವಿರೋಧ

ಕಾಂಗ್ರೆಸ್ ಕೂಡ ಕ್ಷೇತ್ರ ಮರುವಿಂಗಡಣೆ ಮಸೂದೆ ಮತ್ತು ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, “ಕ್ಷೇತ್ರ ಮರುವಿಂಗಡಣೆಯನ್ನು ನಾವು ವಿರೋಧಿಸಿದ್ದೇವೆ. ಆದರೆ, ಈ ಕುರಿತು ಚರ್ಚೆ ನಡೆಸಲು ಕೂಡ ನೀವು ಸಿದ್ಧರಿಲ್ಲ. ಮೊದಲು ಎಲ್ಲ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿ, ಒಟ್ಟಿಗೆ ಕುಳಿತು ಚರ್ಚಿಸೋಣ. ಆದರೆ, ನೀವು ಏಕಪಕ್ಷೀಯವಾಗಿ ಮಸೂದೆಯನ್ನು ಅಂಗೀಕರಿಸಲು ಮುಂದಾಗಿದ್ದೀರಿ. ಇದರ ಜೊತೆಗೆ ಮತ್ತೊಂದು ಅಪ್ರಾಮಾಣಿಕ ನಡೆ ಎಲ್ಲರಿಗೂ ಸ್ಪಷ್ಟವಾಗಿ ಕಾಣುತ್ತಿದೆ. ಸಾಮಾನ್ಯವಾಗಿ ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ ಮೂರನೇ ವಾರದಲ್ಲಿ ಆರಂಭವಾಗುತ್ತದೆ” ಎಂದು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮಿತ್ ಶಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿರಬಹುದು’: ಮಹಿಳಾ ಮೀಸಲಾತಿ ವಿಚಾರದಲ್ಲಿ ಗೃಹ ಸಚಿವರ ವಿರುದ್ಧ ಪಿ. ಚಿದಂಬರಂ ವಾಗ್ದಾಳಿ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವನ್ನು ಟೀಕಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ...

ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಪ್ರಶ್ನಿಸಿದ ಹ್ಯೂಮನ್‌ ರೈಟ್ಸ್‌ ವಾಚ್‌: SIR ಪ್ರಕ್ರಿಯೆ ರದ್ದುಗೊಳಿಸಿ ಸ್ವತಂತ್ರ ತನಿಖೆಗೆ ಒತ್ತಾಯ

ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ಭಾರತದ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಕಾರ್ಯವೈಖರಿಯ...

ನಾಗೇಂದ್ರಗೆ ಸಿಐಡಿಯಿಂದ ಕ್ಲೀನ್‌ಚಿಟ್: ಸರ್ಕಾರವನ್ನು ಪ್ರಶ್ನಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸಿಐಡಿ ಕ್ಲೀನ್‌ಚಿಟ್ ನೀಡಿರುವುದನ್ನು ಪ್ರಶ್ನಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಭಾವಿಗಳಿಗೆ ರಾಜ್ಯ ಸರ್ಕಾರ ರಕ್ಷಣೆ...

ಹೈದರಾಬಾದ್: ಮಲದ ಗುಂಡಿಗೆ ಕುಸಿದು ಬಿದ್ದ ಓರ್ವ ನೈರ್ಮಲ್ಯ ಕಾರ್ಮಿಕರನ್ನು ರಕ್ಷಿಸಲು ಹೋದ ಮತ್ತಿಬ್ಬರು ಕಾರ್ಮಿಕರ ದುರಂತ ಅಂತ್ಯ

ಹೈದರಾಬಾದ್: ಸೆಪ್ಟಿಕ್ ಟ್ಯಾಂಕ್ (ಮಲದ ಗುಂಡಿ) ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ಮೂವರು ನೈರ್ಮಲ್ಯ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಹೈದರಾಬಾದ್‌ನ ಬಚುಪಲ್ಲಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ನವೆಂಬರ್ 24ರಂದು (ಮಂಗಳವಾರ)...

ಸೌರವ್ ದಾಸ್ ಬಳಿಕ ಅಭಿಜಿತ್ ದಿಪ್ಕೆ, ಆಶುತೋಷ್ ರಂಕಾ ವಿರುದ್ಧವೂ ಲುಕ್‌ಔಟ್ ನೋಟಿಸ್

ಅಕ್ಟೋಬರ್ 2ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಭಿಜಿತ್ ದಿಪ್ಕೆ ಮತ್ತು ಆಶುತೋಷ್ ರಂಕಾ ವಿರುದ್ಧ ಲುಕ್‌ಔಟ್ ಸುತ್ತೋಲೆಗಳನ್ನು...

ಏಪ್ರಿಲ್‌-ಜೂನ್ ನಡುವೆ ಭಾರತದ 34.4 ಲಕ್ಷ ವಿಡಿಯೋಗಳನ್ನು ತೆಗೆದುಹಾಕಿದ ಯೂಟ್ಯೂಬ್: ವಿಶ್ವದಲ್ಲೇ ಅತಿ ಹೆಚ್ಚು

ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ಭಾರತದಿಂದ ಅಪ್‌ಲೋಡ್ ಆದ ಬರೋಬ್ಬರಿ 34.4 ಲಕ್ಷ ವೀಡಿಯೊಗಳನ್ನು ಯೂಟ್ಯೂಬ್ ತೆಗೆದುಹಾಕಿದೆ. ಇದು ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಸಂಖ್ಯೆಯಾಗಿದ್ದು, ಹಿಂದಿನ...

ಸೌರವ್ ದಾಸ್‌ಗೆ ಆಕ್ಸ್‌ಫರ್ಡ್, ಎಲ್‌ಎಸ್‌ಇ ಆಹ್ವಾನ: ಸರ್ಕಾರಕ್ಕೆ ‘ಅಸೂಯೆ’ ಎಂದ ಅಭಿಜಿತ್ ದಿಪ್ಕೆ

ಪ್ರತಿಷ್ಠಿತ ಸಂಸ್ಥೆಗಳಿಗೆ 27 ವರ್ಷದ ಯುವಕನಿಗೆ ಆಹ್ವಾನ ಬಂದಿದ್ದನ್ನು ಕಂಡು ಸರ್ಕಾರಕ್ಕೆ "ಅಸೂಯೆ" ಉಂಟಾದ ಕಾರಣ, ಸಿಜೆಪಿ (ಸಿಜೆಪಿ) ಸಹ-ಸಂಚಾಲಕ ಸೌರವ್ ದಾಸ್ ಅವರಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಆಕ್ಸ್‌ಫರ್ಡ್...

ಯುಎಪಿಎ ಪ್ರಕರಣಗಳಲ್ಲಿ ಮುಸ್ಲಿಮರನ್ನೇ ಹೆಚ್ಚು ಗುರಿಯಾಗಿಸಲಾಗುತ್ತಿದೆ: ಕರ್ನಾಟಕದ ಅಧ್ಯಯನ ಉಲ್ಲೇಖಿಸಿದ ಹ್ಯೂಮನ್‌ ರೈಟ್ಸ್‌ ವಾಚ್!

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ಭಾರತದಲ್ಲಿ ಭಯೋತ್ಪಾದನೆ ನಿಗ್ರಹ ಕಾನೂನುಗಳ ಬಳಕೆಯ...

ದೆಹಲಿ ಪ್ರತಿಭಟನೆ ವೇಳೆ ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ತನಿಖಾ ಸಮಿತಿಗೆ ಒಪ್ಪಿಸಿದ ಸುಪ್ರೀಂ ಕೋರ್ಟ್

ಕಳೆದ ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಗಳನ್ನು ವರದಿ ಮಾಡುವಾಗ ತಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಮತ್ತು ಅಕ್ರಮವಾಗಿ ಬಂಧಿಸಿದ್ದಾರೆ ಎಂದು...

ಸರ್ಕಾರಿ ಶಾಲೆಗಳ ದತ್ತು ನೀತಿ ವಿರೋಧಿ ಧರಣಿ ಸ್ಥಳಕ್ಕೆ ಶಿಕ್ಷಣ ಇಲಾಖೆ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಭೇಟಿ; ಹೋರಾಟಗಾರರ ಅಹವಾಲು ಸರ್ಕಾರಕ್ಕೆ ತಲುಪಿಸುವ ಭರವಸೆ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸಮಗ್ರವಾಗಿ ಜಾರಿಯಾಗಬೇಕು ಮತ್ತು ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ದತ್ತು ನೀಡುವ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಕರ್ನಾಟಕ...