ಅಕ್ಟೋಬರ್ 2ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಭಿಜಿತ್ ದಿಪ್ಕೆ ಮತ್ತು ಆಶುತೋಷ್ ರಂಕಾ ವಿರುದ್ಧ ಲುಕ್‌ಔಟ್ ಸುತ್ತೋಲೆಗಳನ್ನು (ಎಲ್‌ಒಸಿ) ಹೊರಡಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಸಿಜೆಪಿ ನಾಯಕ ಸೌರವ್ ದಾಸ್ ವಿರುದ್ಧ ಈಗಾಗಲೇ ಲುಕ್‌ಔಟ್ ಸುತ್ತೋಲೆ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಬೆನ್ನಲ್ಲೇ, ದಿಪ್ಕೆ ಮತ್ತು ರಂಕಾ ವಿರುದ್ಧದ ನೋಟಿಸ್‌ಗಳ ವಿಚಾರ ಬಹಿರಂಗವಾಗಿದೆ.
ಮುಂಬೈ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಸಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು.
ಈ ಸಂಬಂಧ ಅಕ್ಟೋಬರ್ 3ರಂದು ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರತಿಭಟನೆಯ ಆಯೋಜಕರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು, 400ರಿಂದ 500 ಮಂದಿ ಅಪರಿಚಿತ ಪ್ರತಿಭಟನಾಕಾರರನ್ನೂ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 189 ಮತ್ತು 223ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವು ಕ್ರಮವಾಗಿ ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕ ಸೇವಕರ ಆದೇಶವನ್ನು ಉಲ್ಲಂಘಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಾಗಿವೆ. ಇದರೊಂದಿಗೆ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳನ್ನೂ ಅನ್ವಯಿಸಲಾಗಿದೆ.
ಸೌರವ್ ದಾಸ್ ಅವರು ಲಂಡನ್‌ಗೆ ತೆರಳಲು ಮುಂದಾಗಿದ್ದಾಗ ನವೆಂಬರ್ 23ರ ಸೋಮವಾರ ರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಅವರನ್ನು ತಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಕ್ಸ್‌ಫರ್ಡ್‌ನಲ್ಲಿ ನಡೆಯಲಿದ್ದ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸಲು ತಾವು ಪ್ರಯಾಣಿಸುತ್ತಿದ್ದುದಾಗಿ ಮತ್ತು ವಿಮಾನ ನಿಲ್ದಾಣದ ವಲಸೆ ಕೌಂಟರ್‌ನಲ್ಲಿ ತಮ್ಮ ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ ಎಚ್ಚರಿಕೆ ಗುರುತು ಹಾಕಿರುವ ವಿಚಾರ ತಿಳಿದುಬಂದಿದ್ದಾಗಿ ದಾಸ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಮುಂಬೈ ಪೊಲೀಸರ ಮನವಿಯ ಮೇರೆಗೆ ದಾಸ್ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ನ್ಯಾಯಾಲಯಕ್ಕೆ ತಿಳಿಸಿದೆ. ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ದಾಸ್ ಅವರ ಪಾಸ್‌ಪೋರ್ಟ್ ದಾಖಲೆಗಳಲ್ಲಿನ ಕೆಲವು ವ್ಯತ್ಯಾಸಗಳು ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಹೇಳಿದರು. ಅವರ ಶಿಕ್ಷಣ, ವಿಳಾಸ ಮತ್ತು ಪೋಷಕರ ವಿವರಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ವ್ಯತ್ಯಾಸಗಳಿದ್ದು, ಇದು ಅವರ ಭಾರತೀಯ ಪೌರತ್ವದ ಬಗ್ಗೆಯೂ ಅನುಮಾನಗಳಿಗೆ ಕಾರಣವಾಗಬಹುದು ಎಂದು ಅವರು ವಾದಿಸಿದರು.
ದಾಸ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅಖಿಲ್ ಸಿಬಲ್, ವಿಮಾನ ನಿಲ್ದಾಣಕ್ಕೆ ತಲುಪಿದ ಬಳಿಕವಷ್ಟೇ ತಮ್ಮ ಕಕ್ಷಿದಾರರಿಗೆ ವಿವರಣೆ ಕೋರಿ ನೋಟಿಸ್ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಲುಕ್‌ಔಟ್ ಸುತ್ತೋಲೆ ಹೊರಡಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡದೆ ಅಥವಾ ಪ್ರಯಾಣ ನಿರ್ಬಂಧಿಸುವ ಆದೇಶವನ್ನು ತೋರಿಸದೆ ಅಧಿಕಾರಿಗಳು ದೇಶದಿಂದ ಹೊರಹೋಗುವುದನ್ನು ಹೇಗೆ ತಡೆಯಬಹುದು ಎಂದು ಅವರು ಪ್ರಶ್ನಿಸಿದರು.
“ನನಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ. ನನ್ನ ವಿರುದ್ಧ ಲುಕ್‌ಔಟ್ ಸುತ್ತೋಲೆ ಇದೆ ಎಂಬುದನ್ನು ಯಾರಾದರೂ ನನಗೆ ತಿಳಿಸಬೇಕಲ್ಲವೇ? ನಾಗರಿಕರನ್ನು ಹೀಗೆ ನಡೆಸಿಕೊಳ್ಳುವುದಾದರೆ ಹೇಗೆ?” ಎಂದು ಸಿಬಲ್ ನ್ಯಾಯಾಲಯದಲ್ಲಿ ವಾದಿಸಿದರು.
ಲುಕ್‌ಔಟ್ ಸುತ್ತೋಲೆಯ ಪ್ರತಿಯನ್ನು ನೀಡುವಂತೆ ಮತ್ತು ಅದನ್ನು ಯಾವಾಗ, ಯಾವ ಅಪರಾಧಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿದೆ ಎಂಬುದನ್ನು ತಿಳಿಸುವಂತೆ ಸಿಬಲ್ ಕೋರಿದರು. ಆದರೆ, ಸುತ್ತೋಲೆಯ ಪ್ರತಿಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಚೇತನ್ ಶರ್ಮಾ, ಪ್ರತ್ಯೇಕ ಕಾನೂನು ಪ್ರಕ್ರಿಯೆಯ ಮೂಲಕ ದಾಸ್ ಅವರು ಈ ನೋಟಿಸ್ ಪ್ರಶ್ನಿಸಬಹುದು ಎಂದು ಹೇಳಿದರು.


