ನವದೆಹಲಿ: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದೆ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರಾಜಕಾರಣಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದೇ ಇದಕ್ಕೆ ಪ್ರಮುಖ ಸಾಕ್ಷಿ ಎಂದು ಸಂಸ್ಥೆಯ ಏಷ್ಯಾ ನಿರ್ದೇಶಕಿ ಎಲೈನ್ ಪಿಯರ್ಸನ್ ಹೇಳಿದ್ದಾರೆ. ವರದಿ ಮತ್ತು ಸಂದರ್ಶನದ ಪ್ರಕಾರ, ತನಿಖೆ ಎದುರಿಸುತ್ತಿರುವ ವಿರೋಧ ಪಕ್ಷದ ನಾಯಕರು ಆಡಳಿತಾರೂಢ ಬಿಜೆಪಿಗೆ ಪಕ್ಷಾಂತರಗೊಂಡ ಬಳಿಕ ಪ್ರಕರಣಗಳ ತನಿಖೆಯಲ್ಲಿ ನಿರಾಳತೆ ಅಥವಾ ನಿಧಾನಗತಿ ಕಂಡುಬರುತ್ತಿದೆ ಎಂಬ ಆರೋಪಗಳು ಸಂಸ್ಥೆಗಳ ನಿಷ್ಪಕ್ಷಪಾತತೆಯ ಬಗೆಗಿನ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು HRW ತಿಳಿಸಿದೆ.
ದಿ ವೈರ್ನ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ HRW ಏಷ್ಯಾ ನಿರ್ದೇಶಕಿ ಎಲೈನ್ ಪಿಯರ್ಸನ್ ಈ ಅಂಕಿಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಹಿಂದಿನ ಹತ್ತು ವರ್ಷಗಳಲ್ಲಿ ರಾಜಕಾರಣಿಗಳ ವಿರುದ್ಧ 26 ಪ್ರಕರಣಗಳು ದಾಖಲಾಗಿದ್ದರೆ, 2015ರಿಂದ 2025ರ ಅವಧಿಯಲ್ಲಿ 193 ಪ್ರಕರಣಗಳು ದಾಖಲಾಗಿವೆ ಎಂದು ಸಂದರ್ಶನದಲ್ಲಿ ಉಲ್ಲೇಖಿಸಲಾಗಿದೆ.
ಕನಿಷ್ಠ 23 ಪ್ರಮುಖ ವಿರೋಧ ಪಕ್ಷದ ರಾಜಕಾರಣಿಗಳು ಬಿಜೆಪಿಗೆ ಪಕ್ಷಾಂತರಗೊಂಡ ಬಳಿಕ ತಮ್ಮ ವಿರುದ್ಧದ ತನಿಖೆಗಳಿಂದ ನಿರಾಳತೆ ಪಡೆದಿದ್ದಾರೆ ಎಂಬ ವರದಿಯಲ್ಲಿನ ಅಂಶವನ್ನೂ ಥಾಪರ್ ಪ್ರಸ್ತಾಪಿಸಿದ್ದಾರೆ. ವಿರೋಧ ಪಕ್ಷದ ನಾಯಕರ ವಿರುದ್ಧದ ಪ್ರಕರಣಗಳಲ್ಲಿ ಬಹುಪಾಲು ರಾಜಕೀಯ ಪ್ರೇರಿತವಾಗಿವೆ ಎಂಬ ಆರೋಪಗಳಿವೆ ಎಂದು ಪಿಯರ್ಸನ್ ಉಲ್ಲೇಖಿಸಿದ್ದಾರೆ.
ಭಾರತದಲ್ಲಿ ಈ ವಿದ್ಯಮಾನವನ್ನು ಜನರು ‘ವಾಷಿಂಗ್ ಮೆಷಿನ್’ ಎಂದು ಕರೆಯುತ್ತಿರುವುದನ್ನೂ ಉಲ್ಲೇಖಿಸಿದ ಪಿಯರ್ಸನ್, ವಿರೋಧ ಪಕ್ಷದ ನಾಯಕರ ವಿರುದ್ಧ ತನಿಖೆಗಳು ಆರಂಭವಾಗುತ್ತವೆ; ಅವರು ಬಿಜೆಪಿಗೆ ಸೇರಿದ ಬಳಿಕ ಪ್ರಕರಣಗಳ ವೇಗ ಕುಂಠಿತವಾಗುತ್ತದೆ ಅಥವಾ ತನಿಖೆಗಳು ನಿಂತುಹೋಗುತ್ತವೆ ಎಂಬ ಸಾರ್ವಜನಿಕ ಆರೋಪಗಳಿವೆ ಎಂದು ಹೇಳಿದ್ದಾರೆ.
ಆದರೆ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡಿರುವ ಆರೋಪ ಹಿಂದಿನ ಸರ್ಕಾರಗಳ ಮೇಲೂ ಕೇಳಿಬಂದಿದೆ ಎಂಬುದನ್ನು HRW ಒಪ್ಪಿಕೊಂಡಿದೆ. ಈಗಿನ ಆತಂಕವು ಪ್ರಕರಣಗಳ ಪ್ರಮಾಣ, ಅವು ನಡೆಯುವ ಸಮಯ ಮತ್ತು ಕಂಡುಬರುವ ಮಾದರಿಯ ಕುರಿತಾಗಿದೆ ಎಂದು ಪಿಯರ್ಸನ್ ಸ್ಪಷ್ಟಪಡಿಸಿದ್ದಾರೆ.
ಈ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಾರ್ವಜನಿಕ ಭಾವನೆ ಮೂಡಿರುವುದು ಗಂಭೀರ ಸಮಸ್ಯೆ. ಆರೋಪಗಳ ಕುರಿತು ಹೆಚ್ಚಿನ ಪರಿಶೀಲನೆ ಮತ್ತು ತನಿಖೆ ನಡೆಯಬೇಕು ಎಂದು HRW ಅಭಿಪ್ರಾಯಪಟ್ಟಿದೆ.


