ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೆಸರು ಅಥವಾ ಫೋಟೋ ಹೊಂದಿರುವ ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತಿವೆ ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಇದರೊಂದಿಗೆ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ರ ನಿಯಮ 4(4)ರ ಸಾಂವಿಧಾನಿಕ ಸಿಂಧುತ್ವವನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಯುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಮನು ಜೈನ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಯಾವುದೇ ಪೂರ್ವ ನೋಟಿಸ್, ಕಾರಣ ಅಥವಾ ವಿಚಾರಣೆಯ ಅವಕಾಶವಿಲ್ಲದೆ ಯುವ ಕಾಂಗ್ರೆಸ್ ಹಾಗೂ ಅದರ ಕಾರ್ಯಕರ್ತರು ಹಂಚಿಕೊಳ್ಳುವ ಪೋಸ್ಟ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಮೆಟಾ (Meta) ಸಂಸ್ಥೆಯ ಸ್ವಯಂಚಾಲಿತ ವ್ಯವಸ್ಥೆಯು ರಾಹುಲ್ ಗಾಂಧಿ ಅವರ ಹೆಸರು ಮತ್ತು ಫೋಟೋವನ್ನು ನಿರ್ಬಂಧಿತ ‘ಕೀವರ್ಡ್’ಗಳಂತೆ ಪರಿಗಣಿಸುತ್ತಿದೆ. ಇದರಿಂದಾಗಿ ಕಾನೂನುಬದ್ಧ ರಾಜಕೀಯ ಮತ್ತು ವೈಯಕ್ತಿಕ ಪೋಸ್ಟ್‌ಗಳಿಗೂ ತಡೆಯಾಗುತ್ತಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 29 ರಿಂದ ನವೆಂಬರ್ 23ರ ನಡುವೆ ಪಕ್ಷದ ಕಾರ್ಯಕರ್ತರು ರಾಹುಲ್ ಗಾಂಧಿ ಅವರೊಂದಿಗಿರುವ ಫೋಟೋಗಳು, ಅವರಿಗೆ ನೀಡಿದ ಮದುವೆ ಆಮಂತ್ರಣ ಪತ್ರಿಕೆ, ಹುಟ್ಟುಹಬ್ಬದ ಶುಭಾಶಯಗಳು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲ್ಲಿಸಿದ ಗೌರವ ನಮನ ಹಾಗೂ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದ ಪೋಸ್ಟ್‌ಗಳನ್ನು ನಿರ್ಬಂಧಿಸಲಾಗಿದೆ. (ಚಿಕಾಗೋ ವಿಶ್ವವಿದ್ಯಾಲಯದ ಸಂವಾದದ ಪೋಸ್ಟ್ ಅನ್ನು ನವೆಂಬರ್ 19ರಂದು ನಿರ್ಬಂಧಿಸಿ, ಅದೇ ದಿನ ಸಂಜೆ ಮರುಸ್ಥಾಪಿಸಲಾಗಿತ್ತು).
ಇಂತಹ ಪೋಸ್ಟ್‌ಗಳನ್ನು ಮತ್ತೆ ಹಂಚಿಕೊಂಡರೆ ಖಾತೆಯನ್ನು ನಿರ್ಬಂಧಿಸಲಾಗುವುದು ಎಂಬ ಎಚ್ಚರಿಕೆ ಸಂದೇಶಗಳು ಬರುತ್ತಿವೆ. ಪ್ರತಿ ನಿರ್ಬಂಧವನ್ನೂ ಸಮುದಾಯ ಮಾರ್ಗಸೂಚಿಗಳ (Community Standards) ಉಲ್ಲಂಘನೆ ಎಂದು ಪರಿಗಣಿಸುತ್ತಿರುವುದರಿಂದ ಹಲವು ಸಾಮಾನ್ಯ ನಾಗರಿಕರ ಖಾತೆಗಳು ಶಾಶ್ವತವಾಗಿ ಅಮಾನತುಗೊಳ್ಳುವ ಹಂತಕ್ಕೆ ತಲುಪಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ನಿಯಮ 4(4)ರ ಅಡಿಯಲ್ಲಿ ಈ ಹಿಂದೆ ತೆಗೆದುಹಾಕಲಾದ ವಿಷಯಕ್ಕೆ ಹೋಲುವ ಪೋಸ್ಟ್‌ಗಳನ್ನು ಸ್ವಯಂಚಾಲಿತವಾಗಿ ತಡೆಯುವ ಅಧಿಕಾರವನ್ನು ನೀಡಲಾಗಿದೆ. ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ವ್ಯಾಪ್ತಿಯನ್ನು ಮೀರಿದ್ದು, ಸಂವಿಧಾನದ 14, 19(1)(a), 19(1)(c) ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದೆ. ಅತ್ಯಾಚಾರ ಅಥವಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ವಿಷಯಗಳನ್ನು ತಡೆಯಲು ತಂತ್ರಜ್ಞಾನ ಬಳಸುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಅರ್ಜಿದಾರರು ಸ್ಪಷ್ಟಪಡಿಸಿದ್ದಾರೆ.
ನಿಯಮ 4(4)ರ ಅಡಿಯಲ್ಲಿ ಸ್ವಯಂಚಾಲಿತ ನಿರ್ಬಂಧ ಹೇರುವ ಭಾಗವನ್ನು ಅಸಂವಿಧಾನಿಕ ಎಂದು ಘೋಷಿಸಬೇಕು. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಅಕ್ಟೋಬರ್ 8 ಮತ್ತು 10ರಂದು ಹೊರಡಿಸಿರುವ ಸಲಹೆಗಳನ್ನು (Advisories) ರದ್ದುಗೊಳಿಸಬೇಕು. ನಿರ್ಬಂಧಿಸಲಾದ ಎಲ್ಲಾ ಪೋಸ್ಟ್‌ಗಳನ್ನು ಮರುಸ್ಥಾಪಿಸಬೇಕು ಮತ್ತು ರಾಹುಲ್ ಗಾಂಧಿ ಅವರ ಹೆಸರು ಅಥವಾ ಫೋಟೋ ಇದೆ ಎಂಬ ಒಂದೇ ಕಾರಣಕ್ಕೆ ಯಾವುದೇ ಪೋಸ್ಟ್ ಅಥವಾ ಖಾತೆಯನ್ನು ನಿರ್ಬಂಧಿಸದಂತೆ ಮೆಟಾ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.


