ಕಳೆದ ಅಕ್ಟೋಬರ್ನಲ್ಲಿ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಗಳನ್ನು ವರದಿ ಮಾಡುವಾಗ ತಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಮತ್ತು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಕೇರಳದ ಏಳು ಪತ್ರಕರ್ತರು ಸಲ್ಲಿಸಿದ್ದ ದೂರನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ (ನವೆಂಬರ್ 26) ತನಿಖಾ ಸಮಿತಿಗೆ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಕೇರಳ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)
ಸಲ್ಲಿಸಿದ್ದ ಅರ್ಜಿಯನ್ನು, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುಭಾಷ್ ರೆಡ್ಡಿ ನೇತೃತ್ವದ ತನಿಖಾ ಸಮಿತಿಗೆ ವರ್ಗಾಯಿಸಿದೆ. ಕಳೆದ ಜುಲೈನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ಕ್ರಮದ ಕುರಿತು ತನಿಖೆ ನಡೆಸಲು ಆಗಸ್ಟ್ನಲ್ಲಿ ಈ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು.
ಘಟನೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ತನಿಖಾ ಸಮಿತಿಯ ಮುಂದೆ ಹಾಜರುಪಡಿಸುವಂತೆ ಪತ್ರಕರ್ತರಿಗೆ ನ್ಯಾಯಾಲಯ ಸೂಚಿಸಿದೆ. ಸಮಿತಿಯು ಈ ಆರೋಪಗಳನ್ನು ಪರಿಶೀಲಿಸಿ ವಾಸ್ತವಾಂಶಗಳ ವರದಿಯನ್ನು ದಾಖಲಿಸಲಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು, ಪತ್ರಕರ್ತರು ಪ್ರತಿಭಟನಾ ಸ್ಥಳದಲ್ಲಿದ್ದರೇ, ಅವರ ಮೇಲೆ ಬಲಪ್ರಯೋಗ ಮಾಡಲಾಗಿದೆಯೇ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿದ್ದಕ್ಕಿಂತ ಹೆಚ್ಚಿನ ಬಲವನ್ನು ಪೊಲೀಸರು ಬಳಸಿದ್ದಾರೆಯೇ ಎಂಬುದನ್ನು ಸಮಿತಿಯು ಮೊದಲು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ವರದಿ ಮಾಡುವ ಪತ್ರಕರ್ತರಿಗೆ ವಿಶೇಷ ರಕ್ಷಣೆ ಇದೆಯೇ ಅಥವಾ ಸಾಮಾನ್ಯ ನಾಗರಿಕರಿಗೆ ಅನ್ವಯವಾಗುವ ನಿಯಮಗಳೇ ಅವರಿಗೂ ಅನ್ವಯವಾಗುತ್ತವೆಯೇ ಎಂಬ ವಿಸ್ತೃತ ಕಾನೂನು ಪ್ರಶ್ನೆಗಳನ್ನು ಪರಿಶೀಲಿಸುವುದಾಗಿ ಪೀಠವು ಸುಳಿವು ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ವಿ. ದಿನೇಶ್, ಏಳು ಪತ್ರಕರ್ತರ ಮೇಲಿನ ದೌರ್ಜನ್ಯದ ಆರೋಪಗಳಿಗೆ ದೆಹಲಿ ಪೊಲೀಸರು ಪ್ರತ್ಯೇಕವಾಗಿ ಉತ್ತರಿಸದೆ ಸಾಮಾನ್ಯ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದ್ದಾರೆ. “ನಾವು ಯಾವುದೇ ವಿಶೇಷ ಸವಲತ್ತುಗಳನ್ನು ಕೇಳುತ್ತಿಲ್ಲ. ನಾವು ಮಾನ್ಯತೆ ಪಡೆದ ವೃತ್ತಿಪರ ಪತ್ರಕರ್ತರಾಗಿದ್ದು, ನಮ್ಮ ವೃತ್ತಿ ಧರ್ಮವನ್ನು ನಿರ್ವಹಿಸಲು ಅವಕಾಶ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೊಲೀಸರ ಅಫಿಡವಿಟ್ನಲ್ಲಿ ಎಲ್ಲಾ ಆರೋಪಗಳಿಗೆ ಉತ್ತರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು livelaw.in ವರದಿ ಮಾಡಿದೆ.
24 ನ್ಯೂಸ್ನ ಮುಖ್ಯ ವರದಿಗಾರ ಸುಹೈಲ್ ಮುಹಮ್ಮದ್, ಕ್ಯಾಮರಾಮನ್ ವಿ.ಎಸ್. ರಾಹುಲ್, ಏಷ್ಯಾನೆಟ್ ನ್ಯೂಸ್ ವರದಿಗಾರ ಸಜಿನ್, ರಿಪೋರ್ಟರ್ ಟಿವಿಯ ಮಹಿಳಾ ಪತ್ರಕರ್ತೆಯರಾದ ರೋಶ್ನಿ ರಾಜನ್ ಮತ್ತು ಫರ್ಸಾನಾ, ಮಾತೃಭೂಮಿ ಛಾಯಾಗ್ರಾಹಕ ವಿಷ್ಣುಪ್ರಸಾದ್ ಹಾಗೂ ಮನೋರಮಾ ನ್ಯೂಸ್ನ ಹಿರಿಯ ವರದಿಗಾರ ಮಿಜಿ ಪಿ. ಜೋಸ್ ಅವರು ಪೊಲೀಸರಿಂದ ದೌರ್ಜನ್ಯ ಮತ್ತು ಬೆದರಿಕೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿ ಕೆಯುಡಬ್ಲ್ಯೂಜೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಲೈವ್ ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯ ಮೇಲೆ ಹಲ್ಲೆ ಮತ್ತು ಛಾಯಾಗ್ರಾಹಕರ ಕ್ಯಾಮರಾ ಕಸಿದುಕೊಳ್ಳಲು ಯತ್ನಿಸಿದ ಘಟನೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಸದ್ಯ ಪ್ರಕರಣದ ಅರ್ಹತೆಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿಯನ್ನು ವಿಲೇವಾರಿ ಮಾಡಿರುವ ಸುಪ್ರೀಂ ಕೋರ್ಟ್, ಹೆಚ್ಚಿನ ತನಿಖೆಗಾಗಿ ಉನ್ನತಾಧಿಕಾರ ಸಮಿತಿಗೆ ವಹಿಸಿದೆ.
Courtesy :livelaw.in


