ಬ್ರಿಟನ್‌ಗೆ ಪ್ರಯಾಣಿಸಲು ಮುಂದಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ ಸಂಚಾಲಕ ಸೌರವ್ ದಾಸ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಅವರ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ (ಎಲ್‌ಒಸಿ) ಹೊರಡಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ (ನ.26) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸೌರವ್ ದಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರು, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ನಿಗದಿಪಡಿಸಿದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ನವೆಂಬರ್ 23ರಂದು ಮುಂಬೈ ಪೊಲೀಸರು ಸೌರವ್ ದಾಸ್ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದ್ದಾರೆ. ಅಲ್ಲದೆ, ಈ ಸಂಬಂಧ ಅವರಿಗೆ ಕಾರಣ ಕೇಳಿ ನೋಟಿಸ್ ಕೂಡ ನೀಡಲಾಗಿದ್ದು, ಅದಕ್ಕೆ ಅವರು ಇನ್ನೂ ಉತ್ತರಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಯಾಗಿ ದಾಸ್ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಯಾವುದೇ ಲುಕ್ ಔಟ್ ಸರ್ಕ್ಯುಲರ್ ಜಾರಿಯಾಗಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಅದನ್ನು ಹೊರಡಿಸಿರುವುದಕ್ಕೆ ಕಾರಣವೇನು ಮತ್ತು ಅದರ ಉದ್ದೇಶವೇನು ಎಂಬುದನ್ನೂ ತಿಳಿಸಿಲ್ಲ ಎಂದು ವಾದಿಸಿದರು.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ‘ಕಾಕ್ರೋಚ್ ಮೂವ್‌ಮೆಂಟ್’ ಕುರಿತು ಮಾತನಾಡಲು ಸೌರವ್ ದಾಸ್ ಅವರು ಬ್ರಿಟನ್‌ಗೆ ತೆರಳಬೇಕಿತ್ತು. ಆದರೆ, ನವೆಂಬರ್ 23ರ ರಾತ್ರಿ ಲಂಡನ್‌ಗೆ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರನ್ನು ವಿಮಾನ ಹತ್ತುವ ಮುನ್ನ ವಲಸೆ ತಪಾಸಣಾ ಕೌಂಟರ್‌ನಲ್ಲಿ ತಡೆಹಿಡಿಯಲಾಗಿತ್ತು ಎಂದು ದಾಸ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.


